Saturday | July 11, 2026 |

ಔಷಧ ಸೇರಿದಂತೆ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಬಹು ವಿಧದ ಅಕ್ರಮ ಆರೋಪ; ಡಿಎಚ್‌ಒ ಕಚೇರಿಗಳಲ್ಲೇ ಅಕ್ರಮ, ಅವ್ಯವಹಾರ, ನಿಯಮ ಉಲ್ಲಂಘನೆ, ನಡೆಯಲಿದೆಯೇ ತನಿಖೆ?

ಬೆಂಗಳೂರು;  ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಿಗೆ ಔಷಧ, ಪೀಠೋಪಕರಣ, ಯಂತ್ರೋಪಕರಣ, ವೈದ್ಯಕೀಯ ಸಾಮಗ್ರಿಗಳ ಖರೀದಿ ಸಂದರ್ಭದಲ್ಲಿ ರಾಜ್ಯದ ಬಹುತೇಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು  ಕೆಟಿಪಿಪಿ ಕಾಯ್ದೆಯನ್ನು ನೇರವಾಗಿ ಉಲ್ಲಂಘಿಸಿರುವ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿವೆ. ಅಲ್ಲದೇ ಪೂರ್ವ ನಿರ್ಧರಿತ ಒಪ್ಪಂದ ಮಾಡಿಕೊಂಡಂತಿರುವ ಡಿಎಚ್‌ಒಗಳು ಕಚೇರಿ ಆದೇಶಗಳ ಹೆಸರಿನಲ್ಲಿ  ನಿರ್ದಿಷ್ಟ ಸರಬರಾಜುದಾರಿಗೆ ಲಕ್ಷಾಂತರ ರುಪಾಯಿ ಮೊತ್ತದ ಗುತ್ತಿಗೆ ನೀಡುತ್ತಿರುವುದು ಸಹ ಬಹಿರಂಗವಾಗಿದೆ.

ಟೆಂಡರ್ ಪ್ರಕ್ರಿಯೆಯನ್ನು ತಪ್ಪಿಸಲು ಡಿಎಚ್‌ಒಗಳೂ ಸಹ ಒಳ ಮಾರ್ಗಗಳನ್ನು ಬಳಸುತ್ತಿದ್ದಾರೆ. ಇ-ಟೆಂಡರ್ ಇಲ್ಲದೇ ಸರಣಿ ಖರೀದಿಗಳನ್ನು ಸರಾಗವಾಗಿ ಮಾಡಲಾಗಿದೆ. ಅಲ್ಲದೇ ಖರೀದಿ ಮೊತ್ತವನ್ನು 99,000 ರುಗೆ ಇಳಿಸಿ ನೇರವಾಗಿ ಖರೀದಿದಾರರಿಂದಲೇ ಖರೀದಿಸಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ದಿನೇಶ್‌ ಗುಂಡೂರಾವ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಅವಧಿ ಮತ್ತು ಇದೇ ಅವಧಿಯಲ್ಲಿ ಹರ್ಷಗುಪ್ತ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲೇ ಬಹು ಕೋಟಿ ಮೊತ್ತದಲ್ಲಿ ಖರೀದಿ ನಡೆದಿದೆ. ಆದರೆ ಬಹುತೇಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗಳು ಕೆಟಿಪಿಪಿ ಕಾಯ್ದೆ ಪಾಲಿಸದೇ ನೇರವಾಗಿ ಉಲ್ಲಂಘಿಸಿರುವ ಪ್ರಕರಣಗಳು ಕಂಡು ಬಂದಿವೆ.

ಎಚ್‌ ಕೆ ಪಾಟೀಲ್‌ ಅವರು ಸಚಿವರಾಗಿದ್ದ ಅವಧಿಯಲ್ಲೇ ಅವರ ತವರು ಜಿಲ್ಲೆಯಲ್ಲಿಯೇ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ. ಈ ಸಂಬಂಧ ರಾಜಶೇಖರ ಎಂಬುವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ದಾಖಲೆಗಳ ಸಮೇತ 2026ರ ಜುಲೈ 10ರಂದು ಲಿಖಿತ ದೂರು ಸಲ್ಲಿಸಿದ್ದಾರೆ. ಈ ದಾಖಲೆಗಳೊಂದಿಗೇ ಒಟ್ಟು 205 ಕಚೇರಿ ಆದೇಶಗಳನ್ನು ಸಹ ಒದಗಿಸಿದ್ದಾರೆ.

ಈ ದೂರಿನ ಪ್ರತಿ ಮತ್ತು ಕಚೇರಿ ಆದೇಶಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ (DHO) ಕಚೇರಿ ಹಾಗೂ ಅದರ ಅಧೀನದಲ್ಲಿರುವ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು (CHC), ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಮತ್ತು ವಿವಿಧ ಜಿಲ್ಲಾ ಮಟ್ಟದ ನಿಯಂತ್ರಣಾಧಿಕಾರಿಗಳ ಕಚೇರಿಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (KTPP Act, 1999) ಮತ್ತು ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿವೆ ಎಂದು ರಾಜಶೇಖರ್ ಎಂಬುವರು ದೂರಿನಲ್ಲಿ ವಿವರಿಸಿದ್ದಾರೆ.

ಅದೇ ರೀತಿ ಮುಕ್ತ ಇ-ಟೆಂಡರ್ ಕರೆಯದೇ ಸರಣಿ ಖರೀದಿಗಳನ್ನು ನಡೆಸಿ ಸಾರ್ವಜನಿಕ ಹಣದ ದುರುಪಯೋಗ ಮಾಡಿರುವ ಕುರಿತು ಉನ್ನತ ಮಟ್ಟದ ತನಿಖೆ, ವಿಜಿಲೆನ್ಸ್ ಆಡಿಟ್ ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿರುವುದು ದೂರಿನಿಂದ ಕಂಡುಬಂದಿದೆ.

 

 

ವಿಶೇಷವೆಂದರೇ ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಅದರ ಅಧೀನದಲ್ಲಿರುವ ವಿವಿಧ ಕಚೇರಿಗಳಲ್ಲಿ ಒಂದೇ ರೀತಿಯ ಖರೀದಿ ಮಾದರಿಯನ್ನು ಅನುಸರಿಸಿವೆ. ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕತೆಯನ್ನು ಉಲ್ಲಂಘಿಸಿವೆ.

ಈ ಆದೇಶಗಳಲ್ಲಿ ಅನೇಕ ಖರೀದಿಗಳ ಸಂದರ್ಭದಲ್ಲಿ ಮುಕ್ತ ಇ-ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಒಂದೇ ಅಥವಾ ಕೆಲವು ಖಾಸಗಿ ಸಂಸ್ಥೆಗಳಿಗೆ ನೇರವಾಗಿ ಆದೇಶ ನೀಡಿರುವುದು ದಾಖಲೆಗಳಿಂದ ಕಂಡುಬಂದಿದೆ. ವಿವಿಧ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಒಂದೇ ಮಾದರಿಯ ಖರೀದಿ ವಿಧಾನ ಅನುಸರಿಸಿರುವುದು ಒಂದೇ ಸಂಸ್ಥೆಗಳಿಗೆ ಪುನರಾವರ್ತಿತ ಆದೇಶಗಳನ್ನು ನೀಡಿರುವುದು ಹಾಗೂ ಖರೀದಿಗಳ ವಿಭಜಿತ ಸ್ವರೂಪ ಮತ್ತು ನಡೆಸಿದ್ದ ಸಂಪೂರ್ಣ ಪ್ರಕ್ರಿಯೆಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿವೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (KTPP Act, 1999) ಹಾಗೂ ಅದರ ನಿಯಮಗಳ ಉದ್ದೇಶಕ್ಕೆ ವಿರುದ್ಧವಾಗಿ ಸ್ಪರ್ಧಾತ್ಮಕ ಖರೀದಿ ಪ್ರಕ್ರಿಯೆ ಅನುಸರಿಸಿಲ್ಲ. ಅನೇಕ ಖರೀದಿಗಳಲ್ಲಿ ಮುಕ್ತ ಇ-ಟೆಂಡರ್ ಕರೆಯಲಾಗಿದೆ ಎಂಬ ದಾಖಲೆಗಳು ಆದೇಶಗಳಲ್ಲಿ ಉಲ್ಲೇಖಿಸಿಲ್ಲ.

ಒಂದೇ ಸಂಸ್ಥೆಗಳಿಗೆ ವಿವಿಧ ಕಚೇರಿಗಳಿಂದ ಪುನರಾವರ್ತಿತವಾಗಿ ಖರೀದಿ ಆದೇಶಗಳನ್ನು ನೀಡಿರುವುದು. ಖರೀದಿ ಮೌಲ್ಯಗಳನ್ನು ವಿಭಜಿಸಿ ಟೆಂಡರ್ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಅಧಿಕಾರ ವಹಿವಾಟು (Delegation of Financial/Administrative Powers) ನಿಯಮಗಳ ವ್ಯಾಪ್ತಿಯೊಳಗೆ ಅನುಮೋದನೆ ನೀಡಲಾಗಿದೆಯೇ ಎಂಬುದನ್ನು ಮೇಲ್ಮಟ್ಟದಲ್ಲಿ ಪರಿಶೀಲನೆ ನಡೆದಿಲ್ಲ ಎಂಬುದು ಮಂಜೂರಾತಿ ಆದೇಶಗಳಿಂದ ಕಂಡು ಬರುತ್ತದೆ.

 

 

‘ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿ ನಡೆದಿದೆಯೇ ಎಂಬುದನ್ನು ತಾಂತ್ರಿಕ ಹಾಗೂ ಹಣಕಾಸು ಆಡಿಟ್ ಮೂಲಕ ಪರಿಶೀಲಿಸುವ ಅಗತ್ಯ. ಇಲಾಖೆಯ ವಿವಿಧ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಒಂದೇ ರೀತಿಯ ಖರೀದಿ ವಿಧಾನ ಅನುಸರಿಸಿರುವುದರಿಂದ ವ್ಯವಸ್ಥಿತ ಮಟ್ಟದ ತನಿಖೆ ಅಗತ್ಯವಾಗಿದೆ,’ ಎಂದು ದೂರಿನಲ್ಲಿ ಗಮನಸೆಳೆದಿರುವುದು ಗೊತ್ತಾಗಿದೆ.

ಜಂಟಿ ತನಿಖೆ ನಡೆಸಬೇಕೆ?

ಈ ಪ್ರಕರಣವು ಒಂದೇ ಕಚೇರಿಗೆ ಸೀಮಿತವಾಗಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾ ಮಟ್ಟದ ನಿಯಂತ್ರಣಾಧಿಕಾರಿಗಳ ಕಚೇರಿಗಳವರೆಗೆ ವ್ಯಾಪಿಸಿವೆ. ಹೀಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ಜಂಟಿ ತನಿಖಾ ಸಮಿತಿಯಿಂದ ಪರಿಶೀಲಿಸಬೇಕು ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಣಕಾಸು ಇಲಾಖೆ, ವಿಜಿಲೆನ್ಸ್, ಲೆಕ್ಕಪರಿಶೋಧನಾ ತಜ್ಞರು ಹಾಗೂ ಅಗತ್ಯವಿದ್ದಲ್ಲಿ ಲೋಕಾಯುಕ್ತ ಅಧಿಕಾರಿಗಳನ್ನು ಒಳಗೊಂಡ Joint Inquiry Committee ರಚಿಸಿ, ಪ್ರತಿಯೊಂದು ಖರೀದಿ ಆದೇಶವನ್ನು ಕೆಟಿಪಿಪಿ ಕಾಯ್ದೆ, ಸಂಬಂಧಿತ ನಿಯಮಗಳು, ಹಣಕಾಸು ಸಂಹಿತೆ ಹಾಗೂ ಸರ್ಕಾರದ ಅಧಿಕಾರ ವಹಿವಾಟಿನ ಆದೇಶಗಳ ಬೆಳಕಿನಲ್ಲಿ ಪರಿಶೀಲಿಸಲು ಆದೇಶಿಸಬೇಕು,’ ಎಂದು ದೂರಿನಲ್ಲಿ ಒತ್ತಾಯಿಸಿರುವುದು ಗೊತ್ತಾಗಿದೆ.

 

 

ಹಾಗೆಯೇ ಈ ಪ್ರಕರಣದಲ್ಲಿನ ಎಲ್ಲಾ ಮೂಲ ಕಡತಗಳು, ದರಪಟ್ಟಿಗಳು, ಕೊಟೇಶನ್‌ಗಳು, ಬಿಲ್‌ಗಳು, ಪಾವತಿ ದಾಖಲೆಗಳು, ಸ್ಟಾಕ್ ನೋಂದಣಿಗಳು, ಸರಕು ಸ್ವೀಕೃತಿ ದಾಖಲೆಗಳು, ಇ-ಪ್ರೊಕ್ಯೂರ್‌ಮೆಂಟ್ ದಾಖಲೆಗಳು ಹಾಗೂ ಸಂಬಂಧಿತ ಕಡತಗಳನ್ನು ತಕ್ಷಣ ವಶಪಡಿಸಿಕೊಂಡು ಸ್ವತಂತ್ರ ತಾಂತ್ರಿಕ ಮತ್ತು ಹಣಕಾಸು ಆಡಿಟ್ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದೆ.

ತನಿಖೆಯಲ್ಲಿ ಯಾವುದೇ ಅಕ್ರಮ, ಅಧಿಕಾರ ದುರುಪಯೋಗ, ದಾಖಲೆ ತಿರುಚುವಿಕೆ, ಟೆಂಡರ್ ನಿಯಮ ಉಲ್ಲಂಘನೆ ಅಥವಾ ಸಾರ್ವಜನಿಕ ಹಣಕ್ಕೆ ನಷ್ಟ ಉಂಟುಮಾಡಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇತರ ಹೊಣೆಗಾರರ ವಿರುದ್ಧ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಇಲಾಖಾ ಹಾಗೂ ಕ್ರಿಮಿನಲ್ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿರುವುದು ಗೊತ್ತಾಗಿದೆ.

ಈ ದೂರಿನಲ್ಲಿ ಉಲ್ಲೇಖಿಸಿರುವ ಎಲ್ಲಾ 205 ಖರೀದಿ ಆದೇಶಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಸಂಬಂಧಿತ ಎಲ್ಲಾ ಮೂಲ ದಾಖಲೆಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಬೇಕು. ಸ್ವತಂತ್ರ ವಿಶೇಷ ವಿಜಿಲೆನ್ಸ್ ಹಾಗೂ ಹಣಕಾಸು ಆಡಿಟ್ ನಡೆಸಬೇಕು. ಅಧಿಕಾರ ವಹಿವಾಟಿನ (Delegation of Powers) ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಲೋಕಾಯುಕ್ತ ಅಥವಾ ಇತರೆ ಸ್ವತಂತ್ರ ತನಿಖಾ ಸಂಸ್ಥೆಗೆ ಪ್ರಕರಣವನ್ನು ಒಪ್ಪಿಸಬೇಕು. ಸಾರ್ವಜನಿಕ ಹಣಕ್ಕೆ ಉಂಟಾಗಿರುವ ನಷ್ಟವನ್ನು ಲೆಕ್ಕಹಾಕಿ ಸಂಬಂಧಪಟ್ಟವರಿಂದ ವಸೂಲಿ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಆಗ್ರಹಿಸಿದ್ದಾರೆ.

ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಹಾಗೂ ಅನ್ವಯಿಸುವ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕ್ರಮ ಜರುಗಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಿತ ದಾಖಲೆಗಳಲ್ಲಿ ಯಾವುದೇ ಬದಲಾವಣೆ ಆಗದಂತೆ ಸಂರಕ್ಷಣಾ ಆದೇಶ ನೀಡಬೇಕು. ತನಿಖೆಯ ಪ್ರಗತಿ ಹಾಗೂ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.

 

 

ಪ್ರಕರಣಗಳ ಸಂಕ್ಷಿಪ್ರ ವಿವರ

ಮುಂಡರಗಿಯ ತಾಲೂಕು ಆಸ್ಪತ್ರೆಗೆ 2024-25ನೇ ಸಾಲಿನಲ್ಲಿ ಅಗತ್ಯ ಔ‍ಷಧ ಖರೀದಿಗೆ 2025ರ ಮಾರ್ಚ್‌ 3ರಂದು 99,992 ರು ಮಂಜೂರಾತಿ ನೀಡಲಾಗಿತ್ತು. ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣ ಅಧಿಕಾರಿ ವ್ಯಾಪ್ತಿಯಲ್ಲಿ ಅಧೀನ ಆರೋಗ್ಯ ಸಂಸ್ಥೆಗಳಿಗೆ ಡಿಸ್ಪೋಸೇಬಲ್ ಬ್ಲಡ್‌ ಲ್ಯಾನ್‌ ಸೆಟ್‌ ಖರೀದಿಸಲು 99,960.00 ರು 2025ರ ಮಾರ್ಚ್‌ 6ರಂದು ಮಂಜೂರಾತಿ ನೀಡಲಾಗಿದೆ. ಅದೇ ರೀತಿ ಡಿಸ್ಪೋಸೇಬಲ್ ಮೈಕ್ರೋ ಗ್ಲಾಸ್‌ ಸ್ಲೈಡ್ಸ್‌ ಖರೀದಿಗೆ 99,710 ರು., ನರಗುಂದದ ತಾಲೂಕು ಆಸ್ಪತ್ರೆಯಲ್ಲಿ ಜನರೇಟರ್ ದುರಸ್ತಿಗೆ 97, 561 ರು. ಗಳನ್ನು 2025ರ ಮಾರ್ಚ್‌ 5ರಂದು ಮಂಜೂರಾತಿ ನೀಡಿದೆ.

 

 

ಗಜೇಂದ್ರಗಡ ಆಸ್ಪತ್ರೆಗೆ ಔಷಧ ಖರೀದಿಗೆ 99,259 ರು., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಗೆ ಆಲ್‌ ಇನ್ ಒನ್ ಕಂಪ್ಯೂಟರ್ ಮತ್ತು ಪ್ರಿಂಟರ್ ಖರೀದಿಗೆಎ 98,616 ರು., ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ಹೊಸದಾಗಿ ಏರ್ ಕಂಡೀಷನರ್‍‌ ಮಷೀನ್‌ ಖರೀದಿಗೆ 82,500 ರು., ಲಕ್ಷ್ಮೇಶ್ವರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಔಷಧ ಖರೀದಿಗೆ 55,315 ರು., ಇದೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಔಷಧ ಖರೀದಿಗೆ 42,992 ರು. ಮೊತ್ತ ಮಂಜೂರಾತಿ ನೀಡಲಾಗಿದೆ.

ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೀಠೋಪಕರಣ ಖರೀದಿಗೆ 98,000 ರು., ಇದೇ ಆರೋಗ್ಯ ಕೇಂದ್ರಕ್ಕೆ ಕಂಪ್ಯೂಟರ್ ಖರೀದಿಗೆ 58,500 ರು., ಮುಳುಗುಂದದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವಶ್ಯಕ ಸಾಮಗ್ರಿ ಖರೀದಿಗೆ 97,500 ರು., ನಿಡಗುಂದಿ ಆಸ್ಪತ್ರೆಯ ಅವಶ್ಯಕ ಸಾಮಗ್ರಿ ಖರೀದಿಗೆ 97,000 ರು., ಹಿರೇವಡ್ಡಟ್ಟಿ ಆಸ್ಪತ್ರೆಗೆ ಪೀಠೋಪಕರಣ ಖರೀದಿಗೆ 96,000 ರು.,

 

 

ಮುಂಡರಗಿಯ ಆರೋಗ್ಯ ಸಂಸ್ಥೆಗಳಿಗೆ ಔ‍ಷಧ ಖರೀದಿಗೆ 99, 977 ರು., ಇದೇ ತಾಲೂಕು ಆಸ್ಪತ್ರೆಗೆ ಬೇಬಿ ವಾರ್ಮರ್‍‌ ಖರೀದಿಗೆ 65,800 ರು., ಗದಗ್‌ ಜಿಲ್ಲಾ ಲಸಿಕಾ ಉಗ್ರಾಣ ಕೇಂದ್ರಕ್ಕೆ ಪ್ಲಾಸ್ಟಿಕ್ ಚೇರ್ ಖರೀದಿಗೆ 45,016 ರು., ಇದೇ ಲಸಿಕಾ ಉಗ್ರಾಣ ಕೇಂದ್ರಕ್ಕೆ ಸಿಸಿ ಕ್ಯಾಮರಾ, ಹಾರ್ಡ್ ಡಿಸ್ಕ್‌ ಇತರೆ ಸಾಮಗ್ರಿ ಖರೀದಿಗೆ 83,665 ರು ಮೊತ್ತಕ್ಕೆ ಆಡಳಿತಾತ್ಮಕ ಮಂಜುರಾತಿ ನೀಡಿದೆ.

 

 

ಗದಗ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿರುವ ವಿವಿಧ ವಿಭಾಗಗಳ ಕಂಪ್ಯೂಟರ್‍‌ಗಳ ಸುರಕ್ಷತೆಗಾಗಿ ಆಂಟಿ ವೈರಸ್‌ ಅಳವಡಿಸಲು ಸಣ್ಣ ಪುಟ್ಟ ದುರಸ್ತಿಗೆ 42,952 ರು, ಜಿಲ್ಲಾ ಕಚೇರಿಯ ಟಪಾಲು ವಿಭಾಗಕ್ಕೆ ಇ-ಅಫೀಸ್‌ ಪ್ರಾರಂಭಿಸಲು ಸ್ಕ್ಯಾನರ್‍‌ ಖರೀದಿಗೆ 57,000 ರು., ಮುಂಡರಗಿಯ ತಾಲೂಕಿನ ಆರೋಗ್ಯ ಸಂಸ್ಥೆಗಳಿಗೆ ರಿಂಗರ್ ಲ್ಯಾಸೆಟ್ ಮತ್ತು ಸೋಡಿಯಂ ಕ್ಲೋರೈಡ್ ಇಂಜಕ್ಷನ್‌ ಖರೀದಿಗೆ 74,176 ರು., ಗಣಕ ಯಂತ್ರ ಮತ್ತು ಪ್ರಿಂಟರ್‍‌ಗಳನ್ನು ಅಳವಡಿಸಲು 2,88,750 ರು., ಮುಂಡರಗಿಯ ಆಸ್ಪತ್ರೆಗೆ ಔಷಧ ಖರೀದಿಸಲು 89,268 ರು ಮಂಜೂರಾಗಿದೆ.

 

 

ಪ್ರಧಾನ ಮಂತ್ರಿ ಭಾರತೀಯ ಜನೌಷಧ ಮೂಲಕ ಕುಟುಂಬ ಕಲ್ಯಾಣ ಕಾರ್ಯುಕ್ರಮದಡಿಯಲ್ಲಿ ರೋಣ ತಾಲೂಕು ಆಸ್ಪತ್ರೆಗೆ ಔ‍ಷಧ ಖರೀದಿಲು 99,984 ರು., ಹಿರೇಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೀಠೋಪಕರಣ ಖರೀದಿಗೆ 98,058 ರು.,

 

 

ಬೆಟಗೇರಿ ಆಸ್ಪತ್ರೆಗೆ ಔಷಧ ಖರೀದಿಸಲು 64,964 ರು., ಯಾವಗಲ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಸಾಮಗ್ರಿ ಖರೀದಿಗೆ 99,206 ರು.,

 

 

ಜಿಲ್ಲಾ ಲಸಿಕಾ ಉಗ್ರಾಣಕ್ಕೆ ಅಲ್ಯೂಮಿನಿಯಂ ಬಾಗಿಲು ಅಳವಡಿಸಲು 13,361 ರು., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗೆ ಹೊಸ ಕಂಪ್ಯೂಟರ್‍‌ ಖರೀದಿಗೆ 99,894 ರು ಮೊತ್ತಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ.

 

 

 

 

 

ಅದೇ ರೀತಿ ಗದಗ್‌ ಜಿಲ್ಲೆಯ ವಿವಿಧ ತಾಲೂಕುಗಳ ಆರೋಗ್ಯ ಕೇಂದ್ರ, ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ, ತಾಲೂಕು ಆರೋಗ್ಯ ಕುಟುಂಬ ಕಲ್ಯಾಣ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 2024, 2025ರಲ್ಲಿ ಒಟ್ಟಾರೆ 2 ಕೋಟಿಗೂ ಅಧಿಕ ಮೊತ್ತದಲ್ಲಿ ಖರೀದಿಸಿದೆ. ಒಟ್ಟಾರೆ 205 ಕಚೇರಿ ಆದೇಶಗಳನ್ನೂ ಹೊರಡಿಸಿರುವುದು ತಿಳಿದು ಬಂದಿದೆ.

Hot this week

ಕಸದ ವಾಹನಗಳ ಇಂಧನಕ್ಕೆ ಸಾವಿರಾರು ಲೀಟರ್‌ ಪೆಟ್ರೋಲ್, ಡೀಸೆಲ್ ಬಳಕೆ; ನಗರಾಭಿವೃದ್ಧಿ ಸಚಿವರ ತವರಲ್ಲೇ ಇ ವಿ ವಾಹನಗಳ ಬಳಕೆಗೆ ಉದಾಸೀನತೆ

ಮೈಸೂರು; ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಒಟ್ಟು ವಾಹನಗಳ...

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...
Please Scan to make Your Contribution

Topics

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

Related Articles

Popular Categories

error: Content is protected !!