Wednesday | July 8, 2026 |

ಭತ್ತ,ರಾಗಿ, ಬಿಳಿಜೋಳ ಖರೀದಿ; ಅನುದಾನ ಕೊರತೆ, ಆವರ್ತ ನಿಧಿಗೆ ‘ಕೈ’ ಹಾಕಿದ ಸರ್ಕಾರ, ಕೃಷಿ ಮಾರಾಟ ಮಂಡಳಿಗೆ ಮತ್ತಷ್ಟು ಆರ್ಥಿಕ ಮುಗ್ಗಟ್ಟು, ಮುಗ್ಗರಿಸಲಿದೆಯೇ ಎಂಎಸ್‌ಪಿ?

ಬೆಂಗಳೂರು; ಭತ್ತ, ರಾಗಿ, ಬಿಳಿಜೋಳ ಸೇರಿದಂತೆ ಇನ್ನಿತರೆ ಆಹಾರ ಧಾನ್ಯಗಳ ಖರೀದಿಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ  ರೈತರಿಗೆ ಡಿಬಿಟಿ ಮೂಲಕ ಹಣ ಪಾವತಿಸಲು ಸರ್ಕಾರಕ್ಕೀಗ ಅನುದಾನ ಕೊರತೆ ಎದುರಾಗಿದೆ. ಅಲ್ಲದೇ ಅನುದಾನ ಒದಗಿಸಲು  ಈಗಾಗಲೇ ಹಣಕಾಸಿನ ಕೊರತೆಯಿಂದ ತೀವ್ರವಾಗಿ ಬಳಲುತ್ತಿರುವ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಆವರ್ತ ನಿಧಿಗೆ ಕೈ ಹಾಕಿದೆ.

ಹೀಗಾಗಿ 2026-27ನೇ ಸಾಲಿನ ಮುಂಗಾರು ಹಂಗಾಮಿನಡಿಯಲ್ಲಿ ಕನಿಷ್ಟ ಬೆಂಬಲ ಯೋಜನೆಯು ಮುಗ್ಗುರಿಸಿ ಬೀಳಲಿದೆ. ಇದರ ನೇರ ಪರಿಣಾಮವು ರೈತರ ಮೇಲೆ ಬೀಳಲಿದೆ!

ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಆವರ್ತ ನಿಧಿಯಿಂದ ಹಣ ಬಿಡುಗಡ ಮಾಡಿದರೇ ಈಗಾಗಲೇ  ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಿಗೆ ಹಣಕಾಸಿನ ಕೊರತೆ ಆಗುತ್ತದೆ ಎಂದು ಖುದ್ದು ಮಂಡಳಿ ಹೇಳಿತ್ತು. ಆದರೂ ಸರ್ಕಾರವು ಮಂಡಳಿಯ ಅಭಿಪ್ರಾಯವನ್ನು ಒಪ್ಪದೆಯೇ ಅವರ್ತ ನಿಧಿಯಿಂದಲೇ 600 ಕೋಟಿ ರುಪಾಯಿ ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿದೆ. ಹೀಗಾಗಿ ಮಂಡಳಿಯ ಆವರ್ತ  ನಿಧಿಯೇ ಬರಿದಾಗಲಿದೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು 2026-27ನೇ ಸಾಲಿನ ಮುಂಗಾರು ಹಂಗಾಮಿಗೆ  ಹೆಸರುಕಾಳು, ಸೋಯಾಬಿನ್, ತೊಗರಿ, ಕಡಲೆಕಾಳು ಮತ್ತು ಶೇಂಗಾ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಡಳಿಗೆ 2,692 ಕೋಟಿ ರು ಅಗತ್ಯವಿದೆ. ಆದರೆ ಆವರ್ತ ನಿಧಿಯಲ್ಲಿ ಕೇವಲ 819.58  ಕೋಟಿ ರು ಮಾತ್ರ ಇದೆ. ಆದರೂ ಸಹ ಮಂಡಳಿಯಲ್ಲಿನ ಆವರ್ತ ನಿಧಿಗೆ ಕೈ ಹಾಕಿರುವ ಸಹಕಾರ ಇಲಾಖೆಯು 600 ಕೋಟಿ ರು ಬಿಡುಗಡೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.

2025-26ನೇ ಸಾಲಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿಯಲ್ಲಿ ರಾಜ್ಯದ ರೈತರಿಂದ ಭತ್ತ, ರಾಗಿ, ಬಿಳಿಜೋಳ ಆಹಾರ ಧಾನ್ಯಗಳ ಖರೀದಿಗೆ ಸಂಬಂಧಿಸಿಂತೆ ರೈತರಿಗೆ ಡಿಬಿಟಿ ಮೂಲಕ ಹಣ ಪಾವತಿಸಲು ಸಹಕಾರ ಇಲಾಖೆಯು ಕೃಷಿ ಮಾರಾಟ ಮಂಡಳಿಗೆ ನಿರ್ದೇಶನ ನೀಡಿದೆ. 2026ರ ಜುಲೈ 4ರಂದು ಸಹಕಾರ ಇಲಾಖೆಯು ಹೊರಡಿಸಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಶೇಷವೆಂದರೇ ಆವರ್ತ ನಿಧಿಯಲ್ಲಿ ಕಡಿಮೆ ಮೊತ್ತವಿದ್ದರೂ ಸಹ ಇದೇ ಆವರ್ತ ನಿಧಿಯಿಂದಲೇ ರೈತರಿಗೆ ಪಾವತಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಚಿವರಾಗಿರುವ  ಆರ್ಥಿಕ ಇಲಾಖೆಯೂ ಸಹ ಸಹಮತಿ ವ್ಯಕ್ತಪಡಿಸಿದೆ.

ಮಂಡಳಿಯಲ್ಲಿ ಹಣದ ಕೊರತೆ ಗಮನಿಸದ ಸರ್ಕಾರ

2026-27ನೇ ಸಾಲಿಗೆ ಮುಂಗಾರು ಹಂಗಾಮಿಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ಬೆಂಬಲ ಬೆಲೆ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಹೀಗಾಗಿ ಮಂಡಳಿಗೆ 2,692 ಕೋಟಿ ರು ಅಗತ್ಯವಿದೆ. ಆದರೆ ಪ್ರಸ್ತುತ ಮಂಡಳಿಯಲ್ಲಿ ಕೇವಲ 819.58 ಕೊಟಿ ರು ಇದೆ. ಮಂಡಳಿಯೇ ಖುದ್ದು ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳಿತ್ತು. ಆದರೂ ಸಹ ಮಂಡಳಿಯಿಂದಲೇ 600 ಕೋಟಿ ರು ಬಿಡುಗಡೆ ಮಾಡಬೇಕು ಎಂದು ಸಹಕಾರ ಇಲಾಖೆಯು ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಅಲ್ಲದೇ ಮಂಡಳಿಯೇ 2,692 ಕೋಟಿ ರು ಅಗತ್ಯವಿದೆ ಎಂದು ಹೇಳಿದೆ. ಅಲ್ಲದೇ ಸದ್ಯ ಕೇವಲ 819.58 ಕೋಟಿ ರು ಮಾತ್ರ ಇದೆ ಎಂದು ಮನವರಿಕೆ  ಮಾಡಿತ್ತು. ಇದರ ಪ್ರಕಾರ ಮಂಡಳಿಗೆ ಮೂಲದಲ್ಲೇ 1,872.42 ಕೋಟಿ ರು ಕೊರತೆ ಎದುರಾಗಿದೆ. ಇದರ  ಮಧ್ಯೆಯೇ ಅಲ್ಪಸ್ವಲ್ಪ ಇದ್ದ 819.58 ಕೋಟಿ ರುಪಾಯಿನಲ್ಲೇ 600 ಕೋಟಿ ರು ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿರುವ ಪರಿಣಾಮ ಮಂಡಳಿಯಲ್ಲೀಗ  ಕೇವಲ 219.58 ಕೋಟಿ ರು ಉಳಿದಂತಾಗಿದೆ.

2025-26ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಬಿಳಿ ಜೋಳ ಆಹಾರ ಧಾನ್ಯಗಳ ಖರೀದಿಗೆ ಸಂಬಂಧಿಸಿದಂತೆ ರೈತರಿಗೆ ಡಿಬಿಟಿ ಮೂಲಕ ಹಣ ಪಾವತಿಸಬೇಕು. ಹೀಗಾಗಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಆವರ್ತ ನಿದಿಯಿಂದ ನೋಡಲ್‌ ಏಜೆನ್ಸಿಯಾದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ 2026ರ ಮಾರ್ಚ್‌ 16, ಮೇ 11 ಮತ್ತು ಜೂನ್‌ 15ರಂದು  ಒಟ್ಟಾರೆ 1,887.69 ಕೋಟಿ ರು ಬಿಡುಗಡೆ ಮಾಡಿತ್ತು.

 

 

ಆದರೂ  ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ಇಲಾಖೆಯು ಹಣಕಾಸಿನ ಮುಗ್ಗಟ್ಟು ಎದುರಿಸಿತ್ತು. ಡಿಬಿಟಿ ಮೂಲಕ 990 ಕೋಟಿ ರು ಮೊತ್ತವನ್ನು ಆವರ್ತ ನಿಧಿಯಿಂದ ಒದಗಿಸಬೇಕು ಎಂದು ಇಲಾಖೆಯು ಕೋರಿತ್ತು. ಹೀಗಾಗಿ 2025-26ನೇ ಸಾಲಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ, ಬಿಳಿ ಜೋಳ ಆಹಾರ ಧಾನ್ಯಗಳ ಖರೀದಿಗೆ ಸಂಬಂಧಿಸಿದಂತೆ 990 ಕೋಟಿ ರು ಮೊತ್ತವನ್ನು ರೈತರಿಗೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅಭಿಪ್ರಾಯ ಕೋರಿತ್ತು.

 

 

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು 990 ಕೋಟಿ ರು ಬಾಕಿ ಮೊತ್ತವನ್ನು ಆವರ್ತ ನಿಧಿಯಿಂದ ಪಾವತಿಸಲು ತನ್ನ ಅಭ್ಯಂತರವಿಲ್ಲ ಎಂದು ಅಭಿಪ್ರಾಯಿಸಿತ್ತು.

2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಯೋಜನೆಯಡಿ ಭತ್ತ  ಮಾರಾಟಕ್ಕೆ 2025ರ ಮಾರ್ಚ್‌ 8ರ ಅಂತ್ಯಕ್ಕೆ  3,408 ರೈತರು ನೋಂದಣಿ ಮಾಡಿಕೊಂಡಿದ್ದರು. ಆದರೆ ಕೇವಲ 12 ಮಂದಿ ರೈತರು ಮಾತ್ರ ಆಹಾರ ಧಾನ್ಯ ನೀಡಿದ್ದರು. ಹಾಗೆಯೇ 2,41,157 ರೈತರು ರಾಗಿ ನೀಡಲು ನೋಂದಣಿ ಮಾಡಿದ್ದರು. ಈ ಪೈಕಿ 2,199  ರೈತರು ಮಾತ್ರ ಆಹಾರ ಧಾನ್ಯ ನೀಡಿದ್ದರು. ಹಾಗೆಯೇ 17,.995 ಮಂದಿ ರೈತರು ಬಿಳಿ ಜೋಳ ನೀಡುವುದಾಗಿ ನೋಂದಣಿ ಮಾಡಿದ್ದರು. ಈ ಪೈಕಿ ಕೇವಲ 25 ಮಂದಿ ಮಾತ್ರ ಆಹಾರ ಧಾನ್ಯ ನೀಡಿದ್ದರು.

 

 

2025ರ ಮಾರ್ಚ್‌ 8ರ ಅಂತ್ಯಕ್ಕೆ 136 ಕೇಂದ್ರಗಳಿಂದ 337.00 ಕ್ವಿಂಟಾಲ್‌ಗಳಷ್ಟು ಭತ್ತವನ್ನು ಖರೀದಿಸಲಾಗಿತ್ತು.

 

 

137 ಕೇಂದ್ರಗಳಲ್ಲಿ 34,198.00 ಕ್ವಿಂಟಾಲ್‌ ರಾಗಿ, 93 ಕೇಂದ್ರಗಳಲ್ಲಿ 1,827.00 ಕ್ವಿಂಟಾಲ್‌ ಬಿಳಿ ಜೋಳ ಖರೀದಿಸಿತ್ತು.

 

ಆದರೆ ಈ ಅವಧಿಯಲ್ಲಿ ಯಾವುದೇ ರೈತರಿಗೆ ಹಣ ಪಾವತಿಯಾಗಿರಲಿಲ್ಲ.

 

 

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನಗರದ ಎಪಿಎಂಸಿ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಉಪ ಪ್ರಾಂಗಣಗಳಲ್ಲಿ ರೈತರಿಂದ ಖರೀದಿಸಿದ ರಾಗಿ ದಾಸ್ತಾನಿಗೆ ಹಣ ಪಾವತಿ ಆಗಿಲ್ಲ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ.  ಫಲಾನುಭವಿಗಳು ಪಾಸ್ ಪುಸ್ತಕ ಹಿಡಿದು ಬ್ಯಾಂಕ್‌ಗಳಿಗೆ ಎಡತಾಕುತ್ತಿದ್ದಾರೆ.  ಪೂರ್ವ ಮುಂಗಾರು ಮಳೆಯಿಂದ ರೈತರು ಜಮೀನು ಹದಗೊಳಿಸುವ ಕಾಯಕದಲ್ಲಿ ತೊಡಗಿರುವ ಹೊತ್ತಿನಲ್ಲೇ   ರಸಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಫೆಬ್ರವರಿ ಕೊನೆಯ ವಾರದಲ್ಲಿ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ.  ಮಾರ್ಚ್ ಮಾಸಾಂತ್ಯದವರೆಗೆ ಮಾತ್ರವೇ ರೈತರ ಖಾತೆಗೆ ಹಣ ಜಮೆಯಾಗಿದೆ. ಇನ್ನುಳಿದ ಒಂದೂವರೆ ತಿಂಗಳಿನಿಂದ ಹಣ ಬಾರದಿರುವುದರಿಂದ ರೈತರನ್ನು ಕಂಗಾಲಾಗಿಸಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಪ್ರತಿ ಕ್ವಿಂಟಾಲ್‌ಗೆ 4886 ರೂ.ನಂತೆ ಅರಸೀಕೆರೆ ತಾಲೂಕಿನ ಗಂಡಸಿಯಲ್ಲಿ 13,693, ಜಾವಗಲ್ 95,300, ಜೆ.ಸಿ.ಪುರ 81,836, ಬಾಣಾವರ 65,102 ಹಾಗೂ ನಗರದ ಎಪಿಎಂಸಿ ಖರೀದಿ ಕೇಂದ್ರದಲ್ಲಿ ಒಟ್ಟು 4,66,931 ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಈಗಾಗಲೇ ಖರೀದಿ ಮಾಡಿತ್ತು.   ಈ ಪೈಕಿ ಬೆರಳೆಣಿಕೆ ರೈತರಿಗೆ ಮಾತ್ರವೇ ಹಣ ಪಾವತಿಯಾಗಿತ್ತು. ಸರ್ಕಾರದಿಂದ ಬರುವ ಲಾಭದ ಹಣ ಪಡೆದು ಮದುವೆ, ನಾಮಕರಣ, ಸೇರಿದಂತೆ ಶುಭ ಸಮಾರಂಭಗಳನ್ನು ಹಮ್ಮಿಕೊಂಡಿದ್ದವರಲ್ಲಿ ಆತಂಕ ಮನೆ ಮಾಡಿದೆ.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ ಅನ್ನದಾತರಿಗೆ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಹಣ ಹಿಂಪಡೆಯುವುದು ಸವಾಲಾಗಿದೆ. ಕೆಲ ಬ್ಯಾಂಕ್‌ಗಳು ಒಂದು ಲಕ್ಷ ಮಿತಿ ಹೇರಿದ್ದರೆ, ಕೆಲವೆಡೆ 50 ಸಾವಿರ ರೂ.ಗೆ ಸೀಮಿತಗೊಳಿಸಲಾಗುತ್ತಿದೆ ಎನ್ನುವ ದೂರುಗಳಿವೆ. ಹೇಗಾದರೂ ಸರಿ ತಮ್ಮ ಪಾಲಿನ ಹಣ ವಾಪಸ್ ಪಡೆಯಬೇಂಬ ಹಂಬಲದಿಂದ ಪ್ರತಿನಿತ್ಯ ಬ್ಯಾಂಕ್, ಅಂಚೆ ಕಚೇರಿಗೆ ಅನ್ನದಾತರು ಈಗಲೂ ಅಲೆಯುತ್ತಲೇ ಇದ್ದಾರೆ.

ಈ ಹಿಂದಿನ ವರ್ಷಗಳಲ್ಲೂ  ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆವರ್ತ ನಿಧಿಯಡಿ ಕೇವಲ 189 ಕೋಟಿ ಮಾತ್ರ ಇದೆ. ವಿವಿಧ ಸಂಗ್ರಹಣಾ ಸಂಸ್ಥೆಗಳಿಂದ ಆವರ್ತ ನಿಧಿಗೆ 2,500 ಕೋಟಿ ಬಾಕಿ ಉಳಿಸಿಕೊಂಡಿತ್ತು.  ರೈತರ ಉತ್ಪನ್ನಗಳನ್ನು ಖರೀದಿ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಕೃಷಿ ಬೆಲೆ ಆಯೋಗವು ಹಿಂದಿನ  ಸರ್ಕಾರದ ಗಮನಕ್ಕೆ ತಂದಿತ್ತು.

ಕೃಷಿ ಮಾರಾಟ ಇಲಾಖೆಯೂ ಸೇರಿದಂತೆ ಸಹಕಾರ ಇಲಾಖೆಯಡಿ ಬರುವ ವಿವಿಧ ಸ್ವ ಸಹಾಯ ಸಂಘಗಳು, ಸಹಕಾರ ಬ್ಯಾಂಕ್‌ಗಳು, ಬೆಂಬಲ ಬೆಲೆ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಸಂಬಂಧಿಸಿದಂತೆ 2021ರ ಅಕ್ಟೋಬರ್‌ 21ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಆವರ್ತ ನಿಧಿಗೆ 2,500 ಕೋಟಿ ರು. ಬಾಕಿ ಬರಬೇಕಿದೆ ಎಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ತಿಳಿಸಿದ್ದರು.

 

 

‘ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆವರ್ತ ನಿಧಿಯಡಿ ಪ್ರಸ್ತುತ 189 ಕೋಟಿಗಳಿದ್ದು, ವಿವಿಧ ಸಂಗ್ರಹಣಾ ಸಂಸ್ಥೆಗಳಿಂದ ಆವರ್ತ ನಿಧಿಗೆ ಬರಬೇಕಾಗಿರುವ ಬಾಕಿ 2,500 ಕೋಟಿಗಳಿರುತ್ತವೆ,’ ಎಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಕರಿಗೌಡ ಅವರು ಸಭೆಗೆ ಮಾಹಿತಿ ಒದಗಿಸಿದ್ದರು.

 

 

ಕೃಷಿಗೆ ಹಾನಿ ಉಂಟಾದಾಗ ಕೃಷಿಕರಿಗೆ ಪ್ರಯೋಜನವಾಗಲು ಆವರ್ತ ನಿಧಿ ಪ್ರಾರಂಭಿಸಲಾಗಿತ್ತು. ಆವರ್ತ ನಿಧಿ ಮೊತ್ತವನ್ನು ಹೆಚ್ಚಿಸುವುದು ಸೇರಿದಂತೆ ಮುಂತಾದ ಅಂಶಗಳನ್ನು ಸಮಗ್ರ ಖರೀದಿ‌ ನೀತಿಯಲ್ಲಿ ಅಳವಡಿಸಿಕೊಳ್ಳಲು ಕೃಷಿ ಬೆಲೆ ಆಯೋಗವು ಇತ್ತೀಚೆಗಷ್ಟೇ ಶಿಫಾರಸು ‌ಮಾಡಿತ್ತು.

ರೈತರ ಉತ್ಪನ್ನ ಖರೀದಿಗಾಗಿಯೇ ಇಟ್ಟಿದ್ದ ಆವರ್ತ ನಿಧಿ ಎಲ್ಲಿ ಹೋಯಿತು? ಅದನ್ನು ಯಾತಕ್ಕೆ ಬಳಕೆ ಮಾಡಲಾಯಿತು ಎಂದು ಇತ್ತೀಚೆಗಷ್ಟೇ ರೈತ ಸಂಘದ ಮುಖಂಡರು ಪ್ರಶ್ನೆ ಮಾಡಿದ್ದರು. ರೈತರು ಬೆಳೆದಿರುವ ಉತ್ಪನ್ನ ಖರೀದಿ ಮಾಡದಿದ್ದರೆ ಹೇಗೆ? ಈಗಾಗಲೇ ರೈತರು ತಮ್ಮ ಉತ್ಪನ್ನಗಳನ್ನು ಅಗ್ಗದ ದರಕ್ಕೆ ಮಾರಿದ್ದಾರೆ. ಬೆಂಬಲ ಬೆಲೆ ಕೇಂದ್ರ ತೆರೆಯದಿದ್ದರೂ ಪರವಾಗಿಲ್ಲ, ರೈತರ ಖಾತೆಗೆ ನೇರವಾಗಿ ಹಣವನ್ನಾದರೂ ಜಮಾ ಮಾಡಿ ಎಂದು ಒತ್ತಾಯಿಸಿದ್ದರು.

ಸೂರ್ಯಕಾಂತಿ ಹಾಗೂ ಶೇಂಗಾ ಎಣ್ಣೆಕಾಳುಗಳ ಬೆಲೆ ಕುಸಿತಕ್ಕೊಳಾಗಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಬೇಕು ಎಂದು 2021ರ ಸೆಪ್ಟಂಬರ್‌ 18ರಂದು ಕರ್ನಾಟಕ ಕೃಷಿ ಬೆಲೆ ಆಯೋಗವು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು.  ಇನ್ನು, ಕಾಯಕ ಯೋಜನೆಯನ್ನು ಸ್ವಸಹಾಯ ಗುಂಪುಗಳ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ. ಬಡವರ ಬಂಧು ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅಂತ್ಯಗೊಳಿಸಲಾಗಿದೆ. ಹೀಗಾಗಿ ಹಳೇ ಬಿಲ್ಲುಗಳಿಗೆ ಮಾತ್ರ ಅನುದಾನವನ್ನು ಬಡವರ ಬಂಧು ಯೋಜನೆಯಡಿ ಬಿಡುಗಡೆ ಮಾಡಿತ್ತು.

ಅದೇ ರೀತಿ ಸಹಕಾರಿ ಸಂಸ್ಥೆಗಳಲ್ಲಿ ವಿವಿಧ ವರ್ಗದ ಜನರಿಗೆ ಸದಸ್ಯರನ್ನಾಗಿ ನೋಂದಾಯಿಸಲು ಒಟ್ಟು 100 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಡಿಸಿಸಿ ಬ್ಯಾಂಕ್‌ಗಳಲ್ಲಿ ಷೇರು ಬಂಡವಾಳ ಹೂಡಿಕೆ ಯೋಜನೆಯಡಿ 210 ಲಕ್ಷ ರು. ಬಿಡುಗಡೆಯಾಗಿದೆ. ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ತಲಾ 10 ಲಕ್ಷ ರು. ಬಿಡುಗಡೆ ಮಾಡಲು ಇಲಾಖೆ ಕ್ರಮ ವಹಿಸಿತ್ತು.  ಈರುಳ್ಳಿ, ಟೊಮ್ಯಾಟೋ, ಆಲೂಗಡ್ಡೆ ಇತ್ಯಾದಿ ಉತ್ಪನ್ನಗಳನ್ನು ಗೋದಾಮಿನಲ್ಲಿ ಶೇಖರಣೆ ಮಾಡುವ ಬದಲು ಶಾಲಾ ಮಕ್ಕಳ ಉಪಯೋಗಕ್ಕಾಗಿ ಬಳಸಿಕೊಳ್ಳುವ ಸಂಬಂಧ ಪರಿಶೀಲಿಸಿ ಯೋಜನೆ ರೂಪಿಸಲು ಕೃಷಿ ಮಾರಾಟ ಇಲಾಖೆಗೆ ಸಭೆಯಲ್ಲಿ ಸೂಚಿಸಿತ್ತು.

8.09 ಲಕ್ಷ ಗೋಣಿಚೀಲ ಖರೀದಿಗೆ ಸಂಬಂಧಿಸಿದಂತೆ ನಿಗಮಕ್ಕೆ 5.46 ಕೋಟಿ ರು ಪಾವತಿಯಾಗಿರಲಿಲ್ಲ.

 

8.09 ಲಕ್ಷ ಗೋಣಿಚೀಲ ಖರೀದಿ; ಆಹಾರ ಸರಬರಾಜು ನಿಗಮಕ್ಕೆ ಇನ್ನೂ ಮರುಪಾವತಿಯಾಗದ 5.46 ಕೋಟಿ

 

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಸಂಸ್ಥೆ ಮತ್ತು ಉದ್ದಿಮೆದಾರರಿಂದಲೇ 3,108.89 ಕೋಟಿ ರುಪಾಯಿ ಬಾಕಿ ಇತ್ತು.

ಬೆಂಬಲ ಬೆಲೆ ಯೋಜನೆ; ಖರೀದಿ ಸಂಸ್ಥೆ, ಉದ್ದಿಮೆದಾರರಿಂದ 3,108.89 ಕೋಟಿ ರು ಬಾಕಿ

 

ಹಿಂಗಾರು ಹಂಗಾಮಿನ ಬಿಳಿಜೋಳ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಬೊಕ್ಕಸಕ್ಕೆ 250 ಕೋಟಿ ಹೊರೆ ಬೀಳಲಿದೆ ಎಂದು ಮಂಡಳಿಯು ಆತಂಕ ವ್ಯಕ್ತಪಡಿಸಿತ್ತು.

ಹಿಂಗಾರು ಹಂಗಾಮಿನ ಬಿಳಿ ಜೋಳ ಖರೀದಿ; ರಾಜ್ಯ ಬೊಕ್ಕಸಕ್ಕೆ 250 ಕೋಟಿ ಹೊರೆ ಬೀಳಲಿದೆಯೇ?

 

ಕನಿಷ್ಟ ಬೆಂಬಲ ಬೆಲೆ ಯೋಜನೆಗೆ ಸಂಬಂಧಿಸಿದಂತೆ ದಿ ಫೈಲ್‌ ದಾಖಲೆ ಸಹಿತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

Hot this week

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...
Please Scan to make Your Contribution

Topics

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

Related Articles

Popular Categories

error: Content is protected !!