Saturday | June 27, 2026 |

ಮದ್ಯ ಸರಬರಾಜಿನ ದಾಖಲೆಗಳಿಲ್ಲ, ರೆಸ್ಟೋರೆಂಟ್‌ ಸೌಲಭ್ಯವಿಲ್ಲ, ನವೀಕರಣವಿಲ್ಲ, ಎನ್‌ಒಸಿಯೂ ಇಲ್ಲ; ಇ ಡಿ ದಾಳಿ ಬೆನ್ನಲ್ಲೇ ಬೆಳಗಾವಿಯಲ್ಲಿನ ಉಲ್ಲಂಘನೆಗಳ ಪಟ್ಟಿ ಬಹಿರಂಗ

ಬೆಂಗಳೂರು; ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ಕಾರ್ಯಾಚರಿಸುತ್ತಿರುವ ಮದ್ಯದಂಗಡಿಗಳು, ಬಾರ್‍‌ ರೆಸ್ಟೋರೆಂಟ್‌, ಸೋಷಿಯಲ್‌ ಕ್ಲಬ್‌ಗಳಲ್ಲಿ ಹಲವು ನ್ಯೂನತೆಗಳನ್ನು, ನಿಯಮ ಉಲ್ಲಂಘನೆಗಳ ಪ್ರಕರಣಗಳನ್ನು  ಖುದ್ದು ಆರ್ಥಿಕ ಇಲಾಖೆಯೇ ಬಹಿರಂಗಪಡಿಸಿದೆ.

ಬೆಳಗಾವಿ ಉತ್ತರ ಜಿಲ್ಲೆಯ ಚಿಕ್ಕೋಡಿ, ಆಥಣಿ ಮತ್ತಿತರ ಕಡೆಗಳಲ್ಲಿ ಸಿಎಲ್ 4 ಮತ್ತು ಸಿಎಲ್ 7 ಪರವಾನಿಗೆ ಪಡೆದು  ಮದ್ಯ ವಹಿವಾಟು ನಡೆಸುತ್ತಿರುವ ಹಲವು ಕ್ಲಬ್‌,  ರಿಕ್ರಿಯೇಷನ್‌ ಅಕಾಡೆಮಿ, ಸೋಷಿಯಲ್ ಕ್ಲಬ್‌, ಬಾರ್‍‌ ರೆಸ್ಟೋರೆಂಟ್‌ಗಳಲ್ಲಿ  ಅಬಕಾರಿ ನಿಯಮಗಳು ನಿಯಮಬದ್ಧವಾಗಿ ಪಾಲನೆಯಾಗುತ್ತಿಲ್ಲ. ಅಲ್ಲದೇ  ಹಲವು ಕ್ಲಬ್‌ಗಳು ಸದಸ್ಯರನ್ನು ಹೊಂದಿದ್ದರೂ ಸಹ ಆ ಎಲ್ಲಾ ಸದಸ್ಯತ್ವಗಳಿಗೆ ದೃಢೀಕರಣವೇ ಇಲ್ಲ. ಇನ್ನು ಬಹುತೇಕ ಕ್ಲಬ್‌ಗಳಿಗೆ ಮೂಲ ಸೌಕರ್ಯಗಳೇ ಇಲ್ಲ.  ಹಾಗೆಯೇ  ಮದ್ಯ ಸರಬರಾಜು ಮಾಡಿದ್ದರೂ ಅದರ ದಾಖಲೆಗಳನ್ನೇ ಇಟ್ಟಿಲ್ಲ.

ಬೆಳಗಾವಿ ಉತ್ತರ ಜಿಲ್ಲೆಯ ಚಿಕ್ಕೋಡಿ, ಆಥಣಿ ಮತ್ತಿತತರ ಕಡೆಗಳಲ್ಲಿನ ಈ ಎಲ್ಲಾ ಕ್ಲಬ್‌, ಬಾರ್ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಹಲವು ನ್ಯೂನತೆಗಳು ಕಂಡು ಬಂದಿವೆ ಎಂದು ಖುದ್ದು ಆರ್ಥಿಕ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿದೆ.

ಅಬಕಾರಿ ಇಲಾಖೆಯ ಬೆಳಗಾವಿ ಜಿಲ್ಲೆಯ ಜಂಟಿ ಆಯುಕ್ತ ಡಾ ವೈ ಮಂಜುನಾಥ್‌ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದ್ದ ಮಂಜುನಾಥ್‌ ಅವರ ಅಪ್ತರಿಗೆ ಸೇರಿದೆ ಎನ್ನಲಾಗಿರುವ 13.35 ಕೋಟಿ ರು ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿರುವ ಬೆನ್ನಲ್ಲೇ  ಆರ್ಥಿಕ ಇಲಾಖೆಯು ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ  ಸಿಎಲ್‌ 4 ಮತ್ತು ಸಿ ಎಲ್‌ 7 ಪರವಾನಿಗೆಗಳ ಕುರಿತು ವಸ್ತು ಸ್ಥಿತಿ ಮಾಹಿತಿಯನ್ನು ಒದಗಿಸಿರುವುದು ಮುನ್ನೆಲೆಗೆ ಬಂದಿದೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ  2026ರ ಜೂನ್‌ 26ರಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ  ಮದ್ಯ ಮಾರಾಟ ಹಾಗೂ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕೈಗೊಳ್ಳಬೇಕಿರುವ ಸುಧಾರಣಾ ಕ್ರಮಗಳ ಬಗ್ಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಈ ವೇಳೆ ಅಬಕಾರಿ ನಿಯಮಗಳ ಉಲ್ಲಂಘನೆ ಆಗಿರುವ ಕುರಿತೂ ಚರ್ಚೆಯಾಗಿದೆ. ಈ ಬೆಳವಣಿಗೆ ನಡುವೆಯೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್ಥಿಕ ಇಲಾಖೆಯ ನೀಡಿರುವ ಮಾಹಿತಿಗಳು ಸಹ ಚರ್ಚೆಗೆ ಗ್ರಾಸವಾಗಿವೆ.

ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು 2026ರ ಜೂನ್‌ 23ರಂದು ನಡೆದಿದ್ದ ಸಭೆಗೆ ಆರ್ಥಿಕ ಇಲಾಖೆಯು ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ  ಸಿಎಲ್‌ 4 ಮತ್ತು ಸಿ ಎಲ್‌ 7 ಪರವಾನಿಗೆಗಳು ನಿಯಮಾನುಸಾರ ನಡೆಯುತ್ತಿಲ್ಲ ಎಂದು ಮಾಹಿತಿ ಒದಗಿಸಿದೆ. ಈ ಮಾಹಿತಿ ಆಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚೆ ನಡೆಸಿದೆ.

ಆರ್ಥಿಕ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ 2026ರ ಜೂನ್‌ 20ರಂದು  ಒದಗಿಸಿರುವ ಸಮಗ್ರ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

 

2025-26ನೇ ಸಾಲಿನಲ್ಲಿ ಬೆಳಗಾವಿ ಉತ್ತರ ಜಿಲ್ಲೆಯ ಗೋಕಾಕ್‌ನಲ್ಲಿ ಸಿಎಲ್‌ 4 ಹೆಸರಿನಲ್ಲಿ ಒಂದು ಪರವಾನಿಗೆ ಇದೆ. ಸಿಎಲ್‌ 7 ರಲ್ಲಿ 7 ಪರವಾನಿಗೆ ಸೇರಿ ಒಟ್ಟು 8 ಪರವಾನಿಗೆ ಇದೆ. ಚಿಕ್ಕೋಡಿಯಲ್ಲಿ ಸಿಎಲ್‌ 4 ಹೆಸರಿನಲ್ಲಿ 2, ಸಿಎಲ್‌ 7 ಹೆಸರಿನಲ್ಲಿ 16 ಸೇರಿ ಒಟ್ಟಾರೆ 18 ಪರವಾನಿಗೆ ಇದೆ. ಹುಕ್ಕೇರಿಇಯಲ್ಲಿ ಸಿಎಲ್‌ 4 ಹೆಸರಿನಲ್ಲಿ  1, ಸಿಎಲ್‌ 7 ಹೆಸರಿನಲ್ಲಿ 9, ಒಟ್ಟು  10 ಪರವಾನಿಗೆ ಇದೆ. ಅಥಣಿಯಲ್ಲಿ ಸಿಎಲ್‌ 4 ಹೆಸರಿನಲ್ಲಿ 11, ಸಿಎಲ್‌ 7 ಹೆಸರಿನಲ್ಲಿ 24 ಸೇರಿ ಒಟ್ಟಾರೆ 35 ಪರವಾನಿಗೆಗೆಗಳು ಇವೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

 

ಸಿಎಲ್‌ 4ರಲ್ಲಿ ಲೋಪಗಳದ್ದೇ ಸ್ವರ್ಗಸೀಮೆ

ಚಿಕ್ಕೋಡಿ ವಲಯದಲ್ಲಿನ ಪ್ರೆಸಿಡೆಂಟ್‌ ಸಾಯಿ ಸಿಂಘನಿ ಲಾಂಜ್ ಕ್ಲಬ್‌ ಸಿ ಎಲ್ 4 ಪರವಾನಿಗೆ ಹೊಂದಿದೆ. ಆದರೆ ಈ ಕ್ಲಬ್‌ನ ಹೊರಾಂಗಣ ವಾಲಿಬಾಲ್‌ ಮತ್ತು ಕಬ್ಬಡಿ ಕ್ರೀಡಾಂಗಣ ವ್ಯವಸ್ಥಿತವಾಗಿಲ್ಲ. ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಿಗೆಯು ಪ್ರಸಕ್ತ ವರ್ಷಕ್ಕೆ ನವೀಕರಣವಾಗಿಲ್ಲ. ಸನ್ನದಿನ ಸದಸ್ಯರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದಾಖಲೆಯನ್ನು ನಿರ್ವಹಿಸಿಲ್ಲ ಎಂದು ಆರ್ಥಿಕ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿದೆ.

ಅದೇ ರೀತಿ ಅಥಣಿಯ ರಾಯಭಾಗದಲ್ಲಿ ಸಿಎಲ್ 4 ಪರವಾನಿಗೆ ಹೊಂದಿರುವ ನಾಗನೂರು ಸೋಷಿಯಲ್‌ ಕ್ಲಬ್‌ನಲ್ಲಿಯೂ ಹಲವು ನ್ಯೂನತೆಗಳನ್ನು ಆರ್ಥಿಕ ಇಲಾಖೆಯು ಪತ್ತೆ ಹಚ್ಚಿದೆ. ಈ ಕ್ಲಬ್‌ನಲ್ಲಿ ಅಡುಗೆ ವ್ಯವಸ್ಥೆಯೇ ಇಲ್ಲ. ಸನ್ನದಿನ ಸದಸ್ಯರಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದೆಯಾದರೂ ಮದ್ಯ ಕುರಿತು ಸರಿಯಾದ ಮಾಹಿತಿಯನ್ನೇ ನಿರ್ವಹಿಸಿಲ್ಲ ಎಂದು ಮಾಹಿತಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಇದೇ ರಾಯಭಾಗದಲ್ಲಿರುವ ಹಾರೋಗೇರಿ ಸಿಟಿ ಕ್ಲಬ್‌ನಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಗಿ ಸಲ್ಲಿಸಿಲ್ಲ. ಸನ್ನದಿನ ಸದಸ್ಯರಿಗೆ ಮದ್ಯದ ಸರಬಾಜು ಮಾಡಿರುವ ದಾಖಲೆ ನಿರ್ವಹಿಸಿದೆ. ಆದರೆ ಮದ್ಯದ ಕುರಿತು ಸರಿಯಾದ ಮಾಹಿತಿಯನ್ನು ನಿರ್ವಹಿಸಿಲ್ಲ. ಹಾರೋಗೇರಿ ರಿಕ್ರಿಯೇಷನ್ ಅಕಾಡೆಮಿಯು ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಿಗೆ ಸಲ್ಲಿಸಿಲ್ಲ. ಸನ್ನದಿನ ಸದಸ್ಯರಿಗೆ ಮದ್ಯ ಸರಬರಾಜು ಮಾಡಿರುವ ಕುರಿತು ದಾಖಲೆ ನಿರ್ವಹಿಸಿಲ್ಲ ಎಂದು ಮಾಹಿತಿಯನ್ನು ಸಮಿತಿಗೆ ನೀಡಿದೆ.

 

 

ಸೋಷಿಯಲ್ ರಿಕ್ರೀಯೇಷನ್ ಕ್ಲಬ್‌ನಲ್ಲಿಯೂ ಹಲವು ನ್ಯೂನತೆಗಳನ್ನು ಆರ್ಥಿಕ ಇಲಾಖೆಯು  ಪತ್ತೆ ಹಚ್ಚಿದೆ. ಈ ಕ್ಲಬ್‌ನಲ್ಲಿ ವಾಲೀಬಾಲ್, ಕಬಡ್ಡಿ, ಚೆಸ್‌, ಕೇರಂಬೋರ್ಡ್ ಹಾಗೂ ಟೇಬಲ್‌ ಟೆನ್ನಿಸ್ ವ್ಯವಸ್ಥೆ ಸರಿಯಿಲ್ಲ. ಲೈಬ್ರೇರಿಯಲ್ಲಿ ಕೇವಲ 16 ಪುಸ್ತಕಗಳು ಮಾತ್ರ ಇವೆ. ಪ್ರತ್ಯೇಕ ಶೌಚಾಲಗಳೇ ಇಲ್ಲ. ಕ್ಲಬ್‌ನಲ್ಲಿ ಬಾರ್‍‌ ಕೌಂಟರ್, ಅಡುಗೆ ಮನೆ ಸೇರಿ ಇತರೆ ವ್ಯವಸ್ಥೆಗಳು ಸುವ್ಯವಸ್ಥಿತವಾಗಿ ಇಟ್ಟಿಲ್ಲ. ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಿಗೆಯು ಪ್ರಸಕ್ತ ವರ್ಷದ ನವೀಕರಣವಾಗಿಲ್ಲ. ಸನ್ನದಿನ ಸದಸ್ಯರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದಾಖಲೆಯನ್ನೂ ನಿರ್ವಹಿಸಿಲ್ಲ ಎಂದು ವಿವರಿಸಿದೆ.

 

 

ರಾಯಲ್‌ ಕ್ಲಬ್‌ನಲ್ಲಿಯೂ ಸಹ ಲೈಬ್ರೇರಿಯಲ್ಲಿ ಯಾವುದೇ ಪುಸ್ತಕಗಳಿಲ್ಲ. ಅಡುಗೆ ಮನೆಯನ್ನು ಸುವ್ಯವಸ್ಥಿತವಾಗಿಟ್ಟಿಲ್ಲ. ಸನ್ನದಿನ ಸದಸ್ಯರಿಗೆ ಮದ್ಯ ಸರಬರಾಜು ಮಾಡಿರುವ ಕುರಿತು ದಾಖಲೆಗಳನ್ನು ನಿರ್ವಹಿಸಿಲ್ಲ. ಮತ್ತೊಂದು ಬಹುದೊಡ್ಡ ನ್ಯೂನತೆ ಎಂದರೇ ಈ ಕ್ಲಬ್‌ನಲ್ಲ ಅಗ್ನಿಶಾಮಕ ಸೌಲಭ್ಯಗಳೇ ಇಲ್ಲ ಎಂದು ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಸನ್‌ ಲೈಟ್‌ ಸೋಷಿಯಲ್ ಕ್ಲಬ್‌ನಲ್ಲಿ ಅಡುಗೆ ಮನೆ ಇದ್ದರೂ ಸಹ ಅಡುಗೆ ಮಾಡಿದ ಯಾವುದೇ ಕುರುಹು ಇಲ್ಲ. ಊಟವನ್ನೂ ವಿತರಣೆ ಮಾಡಿಲ್ಲ. ಹೊರಾಂಗಣದಲ್ಲಿ ಯಾವುದೇ ಕ್ರೀಡಾ ಸೌಲಭ್ಯವಿಲ್ಲ. ದಿ ರಿಲಾಯನ್ಸ್ ಸೋಷಿಯಲ್  ಕ್ಲಬ್‌ನಲ್ಲಿ ಒಟ್ಟು 130 ಸದಸ್ಯರಿದ್ದಾರೆ. ಆದರೆ ಈ ಸದಸ್ಯತ್ವದ ಬಗ್ಗೆ ಯಾವುದೇ ದೃಢೀಕರಣವೇ ಇಲ್ಲ. ಹೊರಾಂಗಣ ಆಟಗಳ ವ್ಯವಸ್ಥೆಯಿಲ್ಲ. ಸನ್ನದಿನ ಸದಸ್ಯರಿಗೆ ಊಟದ ವ್ಯವಸ್ಥೆಯಿಲ್ಲ. ಮತ್ತು ಸದಸ್ಯರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ.

ಫ್ರೀಡಂ ಸೋಷಿಯಲ್‌ ಕ್ಲಬ್‌ನಲ್ಲಿಯೂ ಸಹ ಹಲವು ನ್ಯೂನತೆಗಳನ್ನ ಇಲಾಖೆಯು ಪತ್ತೆ ಹಚ್ಚಿದೆ. ಈ ಕ್ಲಬ್‌ನಲ್ಲಿ 123 ಸದಸ್ಯರಿದ್ದರೂ ಸಹ ಈ ಸದಸ್ಯತ್ವದ ಬಗ್ಗೆ ದೃಢೀಕರಣವೇ ಇಲ್ಲ. ಹೊರಾಂಗಣ ಆಟಗಳ ವ್ಯವಸ್ಥೆಯಿಲ್ಲ. ಸನ್ನದಿನ ಸದಸ್ಯರಿಗೆ ಊಟದ ವ್ಯವಸ್ಥೆಯಿಲ್ಲ. ಮತ್ತು ಸದಸ್ಯರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ. ರಾಜ ಸೋಷಿಯಲ್ ಕ್ಲಬ್‌ನಲ್ಲಿಯೂ ಸಹ 116 ಸದಸ್ಯರಿದ್ದಾರೆ. ಆದರೆ ಈ ಸದಸ್ಯತ್ವದ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಕಬಡ್ಡಿ, ಚೆಸ್ ಹಾಗೂ ಕೇರಂ ಆಟಗಳ ವ್ಯವಸ್ಥೆಯಿಲ್ಲ. ಲೈಬ್ರೇರಿಯಲ್ಲಿ ಕೇವಲ 8 ಪುಸ್ತಕಗಳು ಇವೆ. ಇಲ್ಲಿನ ಸದಸ್ಯರಿಗೆ ಊಟದ ವ್ಯವಸ್ಥೆಯೂ ಇಲ್ಲ. ಸನ್ನದಿನ ಸದಸ್ಯರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದಾಖಲೆ ನಿರ್ವಹಿಸಿಲ್ಲ ಎಂದು ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಇನ್ನು ಸಂಗಮ ಸೋಷಿಯಲ್ ಕ್ಲಬ್‌ನಲ್ಲಿಯೂ ಸಹ 135 ಸದಸ್ಯರನ್ನು ಹೊಂದಿದ್ದರೂ ಸಹ ಈ ಸದಸ್ಯರಿಗೆ ದೃಢೀಕರಣವೇ ಇಲ್ಲ. ಹೊರಾಂಗಣ ಆಟದ ವ್ಯವಸ್ಥೆಯಿಲ್ಲ. ಲೈಬ್ರೇರಿಯಲ್ಲಿಯೂ ಕೇವಲ 6 ಪುಸ್ತಕಗಳಿವೆ. ಸದಸ್ಯರಿಗೆ ಊಟದ ವ್ಯವಸ್ಥೆ ಇಲ್ಲ. ಪರವಾನಗಿಯು ಪ್ರಸಕ್ತ ವರ್ಷದ ನವೀಕರಣವಾಗಿಲ್ಲ. ಸನ್ನದಿನ ಸದಸ್ಯರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದಾಖಲೆಯೂ ಇಲ್ಲವಾಗಿದೆ.

ಸಿಎಲ್ 7 ರಲ್ಲಿಯೂ ಲೋಪಗಳದ್ದೇ ದರ್ಬಾರು

ಚಿಕ್ಕೋಡಿಯ ಹುಲಿಗೆಮ್ಮ ರೆಸಿಡೆನ್ಸಿಯು ಸಿಎಲ್ 7 ಪರವಾನಿಗೆ ಹೊಂದಿದೆ. ಇದು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ನಿಯಮಗಳ ಉಲ್ಲಂಘನೆ ಪ್ರಕಾರ ಸನ್ನದು 2009ರಲ್ಲಿಯೇ ಮಂಜೂರಾಗಿದೆ. ಹೀಗಾಗಿ ನಿರಾಕ್ಷೇಪಣ ಪತ್ರವನ್ನು ಪಡೆದಿಲ್ಲ.

 

ನಿಪ್ಪಾಣಿಯ ಮುರುಗೋಡದಲ್ಲಿರುವ  ಹೋಟೆಲ್ ಸೂರ್ಯ ಮತ್ತು ಶಿವ ಸಾಗರ್  ಸಿಎಲ್‌ 7 ಪರವಾನಿಗೆ ಹೊಂದಿದೆ. ಇಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ.

ಸವಿತಾ ಎಸ್‌ ಕಾಂಬಳೆ ಅಂಜುರ್ಲಿ ಇನ್ ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಿಗೆಯು ಪ್ರಸಕ್ತ ವರ್ಷದ ನವೀಕರಣವಾಗಿಲ್ಲ.  ಇಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ. ಬಾಬಾಪುರ ಹುಕ್ಕೇರಿಯಲ್ಲಿನ  ದಿಲೀಪ ಸದಾಶಿವ ಕುರಂದವಾಡೆ, ಅರ್ಜುನ ಅಶೋಕ್ ಕರಜಗಿ ಸಂಕೇಶ್ವರ, ಸುರೇಶ ಗುರಪ್ಪ ತಳವಾರ ಹೆಸರಿನ ಸನ್ನದುದಾರರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ನಿಯಮಗಳ ಉಲ್ಲಂಘನೆಯ ಕುರಿತಾಗಿ ಯಾವುದೇ ನಿರಾಕ್ಷೇಪಣೆ ಪತ್ರಗಳನ್ನು ಒದಗಿಸಿಲ್ಲ.

 

 

ಸಂಕೇಶ್ವರದಲ್ಲಿರುವ ಬ್ಲೂ ಸ್ಟಾರ್ ಲಾಡ್ಜ್ ಬಾರ್ ಅಂಡ್‌ ರೆಸ್ಟೋರೆಂಟ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೇ ಇಲ್ಲ. ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಇಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ ಎಂದು ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಸಂಕೇಶ್ವರದ ಸಾಯಿ ಬಾರ್ ಅಂಡ್‌ ರೆಸ್ಟೋರೆಂಟ್‌ನಲ್ಲಿಯೂ ಸಹ ಹಲವು ಲೋಪಗಳು ಕಂಡು ಬಂದಿವೆ. ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಒದಗಿಸಿರುವ ಮಾಹಿತಿ ಪ್ರಕಾರ ಈ ಬಾರ್‍‌ ಅಂಡ್‌ ರೆಸ್ಟೋರೆಂಟ್‌ನಲ್ಲಿಯೂ ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯ ವ್ಯವಸ್ಥೆಗಳಿಲ್ಲ. ಊಟದ ವ್ಯವಸ್ಥೆ ಸರಿಯಾಗಿಲ್ಲ,. ಇಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ.

 

 

ಗೋಕಾಕ್‌ನ ಹೋಟೆಲ್‌ ಶ್ರೇಯಸ್‌ ಬೋರ್ಡಿಂಗ್‌ ಅಂಡ್‌ ಲಾಡ್ಜಿಂಗ್‌ನಲ್ಲಿಯೂ ಸಹ ಪಾರ್ಕಿಂಗ್‌ ಅಸಮಪರ್ಕವಾಗಿದೆ. ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಗಿಯು ಪ್ರಸಕ್ತ ವರ್ಷದ ನವೀಕರಣವಾಗಿಲ್ಲ. ಇಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ . ಪಾರ್ಕಿಂಗ್ ಸ್ಥಳವನ್ನು ನೀಲಿ ನಕಾಶೆಯಲ್ಲಿ ನಮೂದಿಸಿಲ್ಲ.

ವಿಶಾಲ್‌ ವೀರಣ್ಣ ಪೀರಡಿ, ಐಶ್ವರ್ಯ ಬೋರ್ಡಿಂಗ್‌ ಅಂಡ್‌ ಲಾಡ್ಜಿಂಗ್‌, ಮಹದೇವ ಮಲ್ಲನಗೌಡ ಪಾಟೀಲ, ಮಹಾಲಕ್ಷ್ನಿ ಪ್ಯಾಲೇಸ್ ಲಾಡ್ಜಿಂಗ್‌ನಲ್ಲಿ  ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ.

 

ವಿನಾಯಕ ಮುತ್ತಪ್ಪ  ಮುಡಸಿ ಹೆಸರಿನಲ್ಲಿರುವ ಪರವಾನಿಗೆಯಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ. ಎಸ್‌ ವಿ ಎಂಟರ್ ಪ್ರೈಸೆಸ್‌ನಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಿಗೆ ಪಡೆದಿಲ್ಲ. ಇಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಚೂಡಾಮಣಿ ಕಲ್ಲಪ್ಪ ಹಳಿಂಗಳಿ ಹೆಸರಿನ ಸನ್ನದಿನಲ್ಲಿ ಅಡುಗೆಮನೆಯೇ ಕಾರ್ಯನಿರ್ವಹಿಸುತ್ತಿಲ್ಲ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿಲ್ಲ. ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಿಗೆಯು ಪ್ರಸಕ್ತ ವರ್ಷದ ನವೀಕರಣವಾಗಿಲ್ಲ. ಇಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ . ಅಲ್ಲದೇ ಸನ್ನದಿನಲ್ಲಿ ನೀಲಿ ನಕಾಶೆಯನ್ನು ಸಲ್ಲಿಸಿಲ್ಲ.

 

 

ಹಾಗೆಯೇ ಶಿವರಾಜ ಮಾರುತಿ ಬಸಗೊಂಡೆ ಹೆಸರಿನಲ್ಲಿ ಪರವಾನಿಗೆಯೂ ಸಹ 17 ರೂಂಗಳನ್ನು ಹೊಂದಿದೆ. ಆದರೆ ಅದರ ನೀಲಿ ನಕಾಶೆಯನ್ನು ಹಾಜರುಪಡಿಸಿಲ್ಲ. ರೆಸ್ಟೋರೆಂಟ್‌ ವ್ಯವಸ್ಥೆಯಿಲ್ಲ, ಪ್ರತ್ಯೇಕ ಶೌಚಾಲಯವಿಲ್ಲ, ಅಗ್ನಿ ಶಾಮಕ ಸೌಲಭ್ಯವಿಲ್ಲ. ಅನುಮೋದಿತ ನೀಲಿ ನಕಾಶೆಯನ್ನು ಹಾಜರುಪಡಿಸಿಲ್ಲ. ಇಲ್ಲಿ ತಂಗುವ ಗ್ರಾಹಕರು ಮತ್ತು ಅವರ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಿರುವ ಬಗ್ಗೆ ದಾಖಲೆ ನಿರ್ವಹಿಸಿದ್ದಾದರೂ ಸಹ ಸರಿಯಾಗಿ ಕ್ರಮಬದ್ಧವಾಗಿ ನಿರ್ವಹಿಸಿಲ್ಲ  ಎಂದು ಆರ್ಥಿಕ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಗೋಪಾಲ್‌ ಎ ತೇರದಾಳ, ಚಂದ್ರಶೇಖರ್ ಚಿನ್ನಪ್ಪ ಹೆಗಡೆ, ಇfರಮಾನ್‌ ಅಬ್ದುಲ್ ಸತ್ತಾರ್ ಮುಲ್ಲಾ, ಹೋಟೆಲ್ ಅಂಬಿಕಾ ಬಾರ್‍‌ ಅಂಡ್‌ ರೆಸ್ಟೋರೆಂಟ್, ಸುಧೀರಕುಮಾರ ಚಂದ್ರಶೇಖರ ಸಾಲಿಯಾನ, ಅರುಣ್ ಡಿ ಐ ಹೊಳೆ, ಗೀತಾ ಎಂಟರ್ ಪ್ರೈಸೆಸ್‌, ರವಿಬಾಬು ಠಕ್ಕಣ್ನನವರ್‍‌, ಕಲ್ಪನ ವಿನೋದ ಘಾಟಗೆ, ಸಿದ್ದಪ್ಪ ಶಂಕರ್ ಕೊರವಿ, ಎಸ್‌ ಸಿ ಠಕ್ಕಣ್ಣ, ಎಸ್‌ ಎಸ್‌ ಎಂಟರ್ ಪ್ರೈಸೆಸ್‌, ಸುನೀಲ್ ನಾನಾಸಾಹೇಬ ಸೌಂದಲಗಿ, ಕಾಂತಪ್ಪ ರಾಮಪ್ಪ ಬಾಡಗಿ, ಲಕ್ಷ್ಮೀಬಾಯಿ ಮಹಾದೇವ ಕೋಚೇರ, ಮಾಧುರಿ ಅಜತ್ ಚೌಗಲೆ ಹೊಂದಿರುವ ಸಿಎಲ್ 7 ಸನ್ನದಿನಲ್ಲಿ ಯೂ ಲೋಪಗಳು ಇವೆ.

 

 

ಮಂಜುನಾಥ್ ರಾಮಚಂದ್ರ ಕಲಾಲ್, ಮಂಜುನಾಥ್ ರಾಮಚಂದ್ರ ಕಲಾಲ್ ಮೋಟೇಕರ್,  ಪ್ರಥಮೇಶ್‌ ಆರ್ಕೇಡ್, ನಿಜಗುಣಿ ಮಲ್ಲಪ್ಪ ಮಗುದುಮ, ಆರ್‍‌ ವಿ ಕೆ ರೆಸಿಡೆನ್ಸಿ, ರವಿಕುಮಾರ್ ಚಂದ್ರಶೇಖರ ಸಾಲಿಯಾನ, ರೇಣುಕಾ ರೆಸಿಡೆನ್ಸಿ, ವಿಠಲ್ ಬಾಳಸಾಹೇಬ ಗಾಯಕವಾಡ್, ಸಿದ್ದಗೌಡ ಅಲಗೌಡ ಕಾಗೆ, ಶಿವಲೀಲಾ ಎಸ್ ಬುಟಾಳಿ, ಸಾಗರ್ ಕಲ್ಮೇಶ್‌ ಕಾಂಬಳೆ,

 

 

ಹೋಟೆಲ್ ತನಿಷ್ಕ ಬೋಡಿಂಘ್‌ ಲಾಡ್ಜಿಂಗ್‌, ತೀರ್ಥ ಪ್ಲಾಜಾ, ಸದಾಶಿವ ಕೇದರಿ ಬುಟಾಳೆ, ಗಂಗಾಧರ ಸಾಬೋಜಿ ಕಲಾಲ್, ಲಕ್ಷ್ಮಣ ರಾಮಪ್ಪ ಮುಗಹಳಕೋಡ, ಗೋಲ್ಡ್‌ ಪಿಂಚ್‌ ಲಾಡ್ಜಿಂಗ್‌ ಬೋರ್ಡಿಂಗ್‌, ನಂದಿ ಪ್ಯಾರಾಡೈಸ್, ಮಹಂತೇಶ ಮಲಕಪ್ಪ ರೂಡಗಿ, ಹೋಟೆಲ್ ಶ್ರೇಯಸ್ ಇನ್, ಸಚಿನ್ ತುಕಾರಾಮ ಪೂಜಾರಿ, ಹೋಟೆಲ್ ಬ್ಲೂ ಸ್ಟಾರ್ ಹೊಂದಿರುವ ಸಿಎಲ್ ಸನ್ನದಿನಲ್ಲಿಯೂ ನ್ಯೂನತೆಗಳು ಇವೆ ಎಂದು ಇಲಾಖೆಯು ಮಾಹಿತಿ ಒದಗಿಸಿದೆ.

 

ಈ ಮೇಲಿನ ಸನ್ನದುಗಳಲ್ಲಿ  ಕಾರ್ಯಾಚರಿಸುತ್ತಿರುವ ಹಲವು ರೆಸ್ಟೋರೆಂಟ್‌ಗಳ ವ್ಯವಸ್ಥೆ ಇಲ್ಲ. ಅಗ್ನಿಶಾಮಕ ಸೌಲಭ್ಯಗಳಿಲ್ಲ, ಕೊಠಡಿಗಳಿದ್ದರೂ ಸೌಕರ್ಯಗಳಿಲ್ಲ. ಸಕ್ಷಮ ಪ್ರಾಧಿಕಾರಗಳಿಂದ ಉದ್ದಿಮೆ ಪರವಾನಿಗೆಯನ್ನೂ ಪಡೆದುಕೊಂಡಿಲ್ಲ. ಮದ್ಯ ಸರಬರಾಜು ಮಾಡಿದ್ದರೂ ಸಹ ಅದರ ದಾಖಲೆಗಳನ್ನು ನಿರ್ವಹಿಸಿಲ್ಲ ಎಂದು ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಮಗ್ರ ವಿವರಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

Hot this week

ಕೆಟಿಪಿಪಿ ಉಲ್ಲಂಘನೆ, ಅಧಿಕಾರ ದುರ್ಬಳಕೆ, 60 ಲಕ್ಷ ರು ದುರುಪಯೋಗ ಆರೋಪ; ಚೀಫ್‌ ಇಂಜಿನಿಯರ್ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು; ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ...

ಗೃಹಲಕ್ಷ್ಮಿ; ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ, ಬ್ಯಾಂಕ್‌ನ ತಾಂತ್ರಿಕ ದೋಷವೇ ಕಾರಣ, ಸಿಎಜಿ ಆಕ್ಷೇಪಣೆ ತಳ್ಳಿ ಹಾಕಿದ ಸರ್ಕಾರ

ಬೆಂಗಳೂರು; ಗೃಹಲಕ್ಷ್ಮಿ ಯೋಜನೆಯಡಿ ಧನಸಹಾಯ ಪಾವತಿ ಪ್ರಕ್ರಿಯೆಯು ಎಬಿಪಿಎಸ್‌ ಆಗಿರುವುದರಿಂದ ಫಲಾನುಭವಿಗಳಿಗೆ...
Please Scan to make Your Contribution

Topics

ಕೆಟಿಪಿಪಿ ಉಲ್ಲಂಘನೆ, ಅಧಿಕಾರ ದುರ್ಬಳಕೆ, 60 ಲಕ್ಷ ರು ದುರುಪಯೋಗ ಆರೋಪ; ಚೀಫ್‌ ಇಂಜಿನಿಯರ್ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು; ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ...

ಮೆಟ್ರೋ ರೈಲು 3ನೇ ಹಂತಕ್ಕೆ 7.02 ಎಕರೆ ಭೂಮಿ; 203.76 ಕೋಟಿ ರುಪಾಯಿ ಭೂ ಪರಿಹಾರ ಕೇಳಿದ ರಕ್ಷಣಾ ಇಲಾಖೆ, ಸರ್ಕಾರದ ನಿಲುವೇನು?

ಬೆಂಗಳೂರು: ಮೆಟ್ರೋ ರೈಲು ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕಾಗಿ ಅಗತ್ಯವಿರುವ 7.02...

Related Articles

Popular Categories

error: Content is protected !!