ಬೆಂಗಳೂರು; ‘100 ಕೆ ಜಿ ಗಿಂತ ಕಡಿಮೆ ತ್ಯಾಜ್ಯ ಉತ್ಪಾದಕರನ್ನು ಕೂಡ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಪರಿಗಣಿಸಲಾಗಿತ್ತು. ಇದರ ಪ್ರಕಾರ ಘನತ್ಯಾಜ್ಯ ಒಳಗೊಂಡಂತೆ ಅಂದಾಜು ಮಾಡಲಾಗಿದೆ. ಹೀಗಾಗಿ ಅಂದಾಜು ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ,’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಂಜುಂ ಪರ್ವೆಜ್ ನೇತೃತ್ವದ ಸಮಿತಿ ಮುಂದೆ ಪ್ರತಿಪಾದಿಸಿದೆ.
ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಕರೆದಿರುವ ಟೆಂಡರ್ ಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ರಚಿಸಿರುವ ಈ ಸಮಿತಿಯು ವರದಿ ನೀಡಲು 15 ದಿನಗಳ ಕಾಲಾವಧಿ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಈ ಸಮಿತಿಯು 2026ರ ಜೂನ್ 12 ಮತ್ತು ಜೂನ್ 18ರಂದು ಸಭೆ ನಡೆಸಿತ್ತು. ಈ ಸಭೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಬಿಎಸ್ಡಬ್ಲ್ಯೂಎಂಎಲ್ನ ಅಧಿಕಾರಿಗಳು, ಟೆಂಡರ್ ಪ್ರಕ್ರಿಯೆ ಮತ್ತು ವಿಧಿಸಿರುವ ಷರತ್ತುಗಳು ಮತ್ತು ನಮೂದಿಸಿರುವ ಟೆಂಡರ್ ಮೊತ್ತದ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಇದೆಲ್ಲವನ್ನೂ ಪರಿಶೀಲನೆ ಮಾಡಿರುವ ಅಂಜುಂ ಪರ್ವೆಜ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯ ಕೆಲವು ಮುಖ್ಯಾಂಶಗಳು ಮತ್ತು ವರದಿಯ ಕೆಲವು ಪುಟಗಳೂ ಸಹ ‘ದಿ ಫೈಲ್’ಗೆ ಲಭ್ಯವಾಗಿವೆ.
ಜಿಬಿಎ ನೀಡಿರುವ ಮಾಹಿತಿಯಲ್ಲೇನಿದೆ?
ಐದು ಮಹಾನಗರಪಾಲಿಕೆಗಳು ಸೇರಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 714 ಚದರ ಕಿಲೋ ಮೀಟರ್ ಇದೆ. ಪ್ರಾಧಿಕಾರದಿಂದ ನೀಡಿರುವ ಮಾಹಿತಿ ಪ್ರಕಾರ 2025-26ನೇ ಸಾಲಿನ ಪ್ರಕಾರ ಪ್ರತಿ ದಿನ 5,600 ಮೆಟ್ರಿಕ್ ಟನ್ ಘನ ತ್ಯಾಜ್ಯವು ಉತ್ಪಾದನೆಯಾಗುತ್ತಿದೆ. 5,200 ಆಟೋ ಟಿಪ್ಪರ್ ಮತ್ತು 615 ಕಾಂಪಾಕ್ಟರ್ಗಳನ್ನು ಬಳಸಿ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ 6,000 ಮೆಟ್ರಿಕ್ ಟನ್ ಘನತ್ಯಾಜ್ಯವು ಉತ್ಪಾದನೆಯಾಗಬಹುದು ಎಂದು ನಿರೀಕ್ಷಿಸಿದೆ. ಅದಕ್ಕೆ ಅನುಸರಣೆಯಾಗಿ ಸಂಗ್ರಹಣೆ ಮತ್ತು ಸಾಗಾಣಿಕೆ ಅಂದಾಜುಗಳನ್ನು ತಯಾರಿಸಲಾಗಿದೆ ಎಂಬ ಮಾಹಿತಿ ನೀಡಿರುವುದು ವರದಿಯಿಂದ ತಿಳಿದು ಬಂದಿದೆ.

4,021 ಬ್ಲಾಕ್ಗಳಿಗೆ ತಕ್ಕಂತೆ ವಾಹನಗಳು
ಬಳಕೆ ಮಾಡಬೇಕಾದ ವಾಹನಗಳ ಸಂಖ್ಯೆಯನ್ನು ಅಂದಾಜು ಮಾಡಿ ನಿಗದಿಪಡಿಸುವಲ್ಲಿ ಯಾವ್ಯಾವ ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಮಾಹಿತಿ ಒದಗಿಸಿದೆ. ಇದರ ಪ್ರಕಾರ 2017ನೇ ಸಾಲಿನಲ್ಲಿ ಆಯಾ ವಾರ್ಡ್ ಮತ್ತು ಉಪ ವಿಭಾಗ ವ್ಯಾಪ್ತಿಯಲ್ಲಿ ಫೀಲ್ಡ್ ಡೇಟಾವನ್ನು ಸಂಗ್ರಹಿಸಲಾಗಿದೆ. ಅಂದರೇ ಆಯಾ ವ್ಯಾಪ್ತಿಯ ಮನೆಗಳಿಂದ, ವಾಣಿಜ್ಯ ಸಂಕೀರ್ಣಗಳನ್ನು ಮತ್ತು ಜನಸಂಖ್ಯೆ ಅಂಕಿ ಅಂಶಗಳನ್ನು ಸಂಗ್ರಹಿಸಿದೆ. ಇದರ ಪ್ರಕಾರ 700-800 ಮನೆಗಳು, ವಾಣಿಜ್ಯ ಸಂಕೀರ್ಣಗಳನ್ನು ಒಳಗೊಂಡಿದೆ. ಇದನ್ನೆಲ್ಲಾ ಒಂದು ಬ್ಲಾಕ್ ಎಂದು ಪರಿಗಣಿಸಿದ ಬ್ಲಾಕ್ ಮ್ಯಾಪಿಂಗ್, ಡೇಟಾ ಶೀಟ್ ಮತ್ತು ಮೈಕ್ರೋ ಪ್ಲಾನಿಂಗ್ ಸಹ ಮಾಡಿ ಅವಶ್ಯಕವಿರುವ ವಾಹನಗಳನ್ನು ಅಂದಾಜು ಮಾಡಿದೆ. ಪ್ರತಿ ಬ್ಲಾಕ್ಗೆ ಒಂದರಂತೆ ಒಂದು ಮೂರು ಚಕ್ರದ ವಾಹನವನ್ನು ನಿಗದಿಪಡಿಸಿದೆ. ಒಟ್ಟಾರೆ 4,021 ಬ್ಲಾಕ್ಗಳಿದ್ದು ಅದರಂತೆ ವಾಹನಗಳು ಬಳಕೆಯಲ್ಲಿವೆ ಎಂದು ಎರಡೂ ಪ್ರಾಧಿಕಾರಗಳ ಅಧಿಕಾರಿಗಳು ಸಮಿತಿಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

2022ರಲ್ಲಿ 243 ವಾರ್ಡ್- 4,266 ಬ್ಲಾಕ್
ಅಲ್ಲದೇ 2022ರಲ್ಲಿ 243 ವಾರ್ಡ್ಗಳು ರಚನೆಯಾದ ನಂತರ 4,266 ಬ್ಲಾಕ್ಗಳಾಗಿವೆ ಈ ವಾಹನಗಳ ಅಂಕಿ ಅಂಶಗಳನ್ನು ಪ್ರತಿ ವರ್ಷ ಶೇ. 3ರಂತೆ ಅಂದಾಜು ಮಾಡಲಾಗಿದೆ. ಇದರ ಪ್ರಕಾರ 750ರಿಂದ 1,000 ಸಂಖ್ಯೆಯ ಮನೆಗಳಿಗೆ 1 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಒಂದು ಮೂರು ಚಕ್ರದ ಆಟೋ ಟಿಪ್ಪರ್, 1,000ದಿಂದ 1,500 ಸಂಖ್ಯೆಯ ಮನೆಗಳಿಗೆ 2 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಒಂದು ನಾಲ್ಕು ಚಕ್ರದ ಆಟೋ ಟಿಪ್ಪರ್, 500ರಿಂದ 1,000 ಸಂಖ್ಯೆಯ ವಾಣಿಜ್ಯ ಮಳಿಗೆಗಳಿಗೆ 5 ಕ್ಯೂಬಿಕ್ ಮೀಟರ್ ಸಾಮರ್ಥ್ಯದ 1 ನಾಲ್ಕು ಚಕ್ರದ ಆಟೋ ಟಿಪ್ಪರ್ (ವಿಭಜಿಸಿದ ಕಂಟೈನರ್ ಉಳ್ಳ) ಎಂದು ಅಂದಾಜಿಸಲಾಗಿದೆ.

ಹಾಗೆಯೇ ಸಣ್ಣಪ್ರಮಾಣದ ಕಟ್ಟಡ ಭಗ್ನಾವಶೇಷ, ರಸ್ತೆಯಲ್ಲಿನ ಧೂಳು ಮತ್ತು ಅನುಪಯುಕ್ತ ಬೃಹತ್ ತ್ಯಾಜ್ಯ ತೆರವುಗೊಳಿಸಲು ವಿಭಾಗವಾರು ಅವಶ್ಯಕತೆ ಅನುಸಾರ 5 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ನಾಲ್ಕು ಚಕ್ರದ ಆಟೋ ಟಿಪ್ಪರ್ (ತೆರೆದ) ಹಾಗೆಯೇ ಆಯಾ ವ್ಯಾಪ್ತಿಯ ಮನೆ, ವಾಣಿಜ್ಯ ಘಟಕಗಳ ಸಂಖ್ಯೆಗಳ ಅನುಸಾರ ವಾಹನಗಳ ಅವಶ್ಯಕತೆಯನ್ನು ಲೆಕ್ಕ ಹಾಕಿರುವುದು ವರದಿಯಿಂದ ತಿಳಿದು ಬಂದಿದೆ.
ಬ್ಲಾಕ್ ಮ್ಯಾಪಿಂಗ್, ಡೇಟಾ ಶೀಟ್ ಮತ್ತು ಮೈಕ್ರೋ ಪ್ಲಾನಿಮಗ್ ಸಹ ಮಾಡಿ ಅವಶ್ಯಕವಿರುವ ವಾಹನಗಳನ್ನು ಅಂದಾಜು ಮಾಡಲಾಗಿದೆ ಎಂದು ಸಂಬಂಧಪಟ್ಟ ಸಹಾಯಕ ಪ್ರಧಾನ ವ್ಯವಸ್ಥಾಪಕರು ವರದಿ ನೀಡಿದ್ದಾರೆ. ಅದರ ಅನುಸಾರ 2022ರಲ್ಲಿ ಒಟ್ಟಾರೆ 4,266 ಬ್ಲಾಕ್ಗಳನ್ನ ಸೇರಿಸಿ 89 ಪ್ಯಾಕೇಜ್ಗಳಿಗೆ ಅಂದರೇ ಪ್ರತಿ ಪ್ಯಾಕೇಜ್ಗೆ 2ರಿಂದ 4 ವಾರ್ಡ್ಗಳು ಇರುವಂತೆ ಟೆಂಡರ್ ಆಹ್ವಾನಿಸಲಾಗಿತ್ತು ಎಂದು ಮಾಹಿತಿ ನೀಡಿರುವುದು ಗೊತ್ತಾಗಿದೆ.

ಆಟೋ ಟಿಪ್ಪರ್ಗಳನ್ನು ಮಾದರಿಯನ್ನು ಪರಿಗಣಿಸಲು ರಸ್ತೆ ಅಗಲವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ರಸ್ತೆ ಅಗಲ 9 ಮೀಟರ್ಗಿಂತ ಕಡಿಮೆ ಇರುವ ಹಾಗೂ ಕಿಕ್ಕಿರಿದಾದ ಪ್ರದೇಶಗಳಲ್ಲಿ ಮೂರು ಚಕ್ರದ ವಾಹನಗಳನ್ನು ಪರಿಗಣಿಸಲಾಗಿದೆ. ಉಳಿದಂತೆ ರಸ್ತೆ ಅಗಲ ಹೆಚ್ಚಿಗೆ ಇರುವ ಪ್ರದೇಶಗಳಲ್ಲಿ ನಾಲ್ಕು ಚಕ್ರದ ವಾಹನಗಳನ್ನು ಪರಿಗಣಿಸಲಾಗಿದೆ ಎಂದು ಜಿಬಿಎ ಅಧಿಕಾರಿಗಳು ವರದಿ ಮಾಡಿರುವುದು ತಿಳಿದು ಬಂದಿದೆ.
2025ರಲ್ಲಿ 21 ನೇ ಮಂಡಳಿ ಸಭೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಪ್ಯಾಕೇಜ್ಗಳನ್ನು ಮಾಡಲು ನಿರ್ಧರಿಸಲಾಗಿದೆ. ಹೆಚ್ಚು ವಿಸ್ತೀರ್ಣವುಳ್ಳ 6 ಕ್ಷೇತ್ರವುಳ್ಳ ಎರಡು ಪ್ಯಾಕೇಜ್ಗಳು, ಉಳಿದ ಕ್ಷೇತ್ರಗಳಲ್ಲಿ ಒಂದು ಪ್ಯಾಕೇಜ್ನಂತೆ ಒಟ್ಟು 33 ಪ್ಯಾಕೇಜ್ಗಳನ್ನು ಮಾಡಲು ನಿರ್ಧರಿಸಿತ್ತು. ನಂತರ ಮತ್ತೊಮ್ಮೆ 2025ರಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಿಂದ ಅವಶ್ಯಕ ವಾಹನಗಳ ಸಂಖ್ಯೆಗಳ ಮಾಹಿತಿಯನ್ನು ಪಡೆಯಲಾಗಿದೆ. 2025ನೇ ಸಾಲಿನಲ್ಲಿ ಸ್ಥಳೀಯ ಪರಿಸ್ಥಿತಿಗಳನ್ನಾಧರಿಸಿ ಬ್ಲಾಕ್ಗಳ ಸಂಖ್ಯೆಯನ್ನು ಪರಿಷ್ಕರಿಸಲಾಗಿದೆ. ಅದರ ಪ್ರಕಾರ 4,560 ಬ್ಲಾಕ್ಗಳಿವೆ.
ಈ ಸಂದರ್ಭದಲ್ಲಿ 2011ನೇ ಇಸವಿಯಲ್ಲಿನ ಜನಗಣತಿ ಅಂಕಿ ಅಂಶಗಳ ಮಾಹಿತಿಗಳನ್ನು ಪಡೆದುಕೊಂಡು ಕಳೆದ ದಶಕದಲ್ಲಿನ ಜನಸಂಖ್ಯಾ ಬೆಳವಣಿಗೆ ದರ ಶೇ. 44ರಷ್ಟಿದೆ. ಅದೇ ದರವನ್ನು ಆಧರಿಸಿ ಕೆಲವು ಪ್ರದೇಶಗಳಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರು ಸರಾಸರಿ ವಾರ್ಷಿಕ 4.1ರಿಂದ 4.4ರ ಬೆಳವಣಿಗೆ ದರಗಳಂತೆ ಹಾಗೂ 2017ರಲ್ಲಿನ ಮಾರ್ಷಲ್ಗಳು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರಿಂದ ಮನೆಗಳ ಸಂಖ್ಯೆಯನ್ನು ಭೌತಿಕವಾಗಿ ಸರ್ವೆ ಮಾಡಿಸಿ ಪಡೆಯಲಾಗಿದೆ. ಇದರ ಪ್ರಕಾರ ಸರಾಸರಿ ವಾರ್ಷಿಕ ಶೇ.3ರಿಂದ ಶೇ.5ರಂತೆ ಪ್ರದೇಶವಾರು ಮಾಹಿತಿಯನ್ನು ಉನ್ನತೀಕರಿಸಲಾಗಿದೆ. ಇದರ ಪ್ರಕಾರ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಸಮಿತಿಗೆ ವಿವರಿಸಿರುವುದು ತಿಳಿದು ಬಂದಿದೆ.
2017, 2022 ಮತ್ತು 2025ರಲ್ಲಿನ ಅಂದಾಜುಗಳ ಅನುಸಾರ ಎಷ್ಟು ವಾಹನಗಳು ಬೇಕಿವೆ ಎಂದು ಪಟ್ಟಿ ನೀಡಿದೆ. ಈ ಪಟ್ಟಿಯನ್ನು ಅಂಜುಂ ಪರ್ವೆಜ್ ನೇತೃತ್ವದ ಸಮಿತಿಯು ಪರಿಶೀಲನೆ ಮಾಡಿದೆ.
ಪ್ರಮುಖ ಅಂಶಗಳೇನು?
ಈ ಹಿಂದೆ 2017ರಲ್ಲಿ 10 ಕೆ ಜಿ ಮೇಲ್ಪಟ್ಟ ತ್ಯಾಜ್ಯ ಉತ್ಪಾದಕರನ್ನು ಬಲ್ಕ್ ವೇಸ್ಟ್ ಜನರೇಟರ್ಸ್ ಎಂದು ಪರಿಗಣಿಸಲಾಗುತ್ತಿತ್ತು. 2017ರಲ್ಲಿ ಸಿ ಮತ್ತು ಡಿ ( ಕನ್ಸ್ಟ್ರಕ್ಷನ್ಸ್ ಮತ್ತು ಡೆಮಾಲಿಷನ್) ತ್ಯಾಜ್ಯ ಸಂಗ್ರಹಣೆ ಮತ್ತು ದೊಡ್ಡ ವಾಣಿಜ್ಯ ಸಂಸ್ಥೆಗಳಿಂದ ತ್ಯಾಜ್ಯ ಸಂಗ್ರಹನೆ ಮಾಡುವ ಅಂಶವು ಒಳಗೊಂಡಿಲ್ಲ. ಪ್ರಸ್ತುತ 100 ಕೆ ಜಿ ಮೇಲ್ಪಟ್ಟು ಉತ್ಪಾದಕರನ್ನು ಮಾತ್ರ ಬಲ್ಕ್ ವೇಸ್ಟ್ ಜನರೇಟರ್ಸ್ ಎಂದು ಪರಿಗಣಿಸಲಾಗುತ್ತಿದೆ. ಆದ್ದರಿಂದ 2022 ಮತ್ತು 2025ರಲ್ಲಿ 100 ಕೆ ಜಿ ಗಿಂತ ಕಡಿಮೆ ತ್ಯಾಜ್ಯ ಉತ್ಪಾದಕರನ್ನು ಕೂಡ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಪರಿಗಣಿಸಲಾಗಿದೆ. ಸದ್ಯ ಘನತ್ಯಾಜ್ಯ ಒಳಗೊಂಡಂತೆ ಅಂದಾಜು ಮಾಡಲಾಗಿ ಅಂದಾಜು ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳ ಕಂಡು ಬಂದಿದೆ. ಇದನ್ನು ಹೊರತುಪಡಿಸಿದಲ್ಲಿ ಘನತ್ಯಾಜ್ಯ ಪ್ರಮಾಣದಲ್ಲಿ ಸುಮಾರು ಶೇ. 60ರಷ್ಟು ಹೆಚ್ಚಳ ಉಂಟಾಗುತ್ತಿತ್ತು ಎಂದು ವಿವರಿಸಿದೆ.

11,816 ಘನ ಮೀಟರ್ ತ್ಯಾಜ್ಯ ಸಂಗ್ರಹ ಅಂದಾಜು
ಪ್ರಸ್ತುತ ಒಂದು CUM ಸಾಮರ್ಥ್ಯದ ಮೂರು ಚಕ್ರದ 5,200 ತೆರೆದ ಆಟೋ ಟಿಪ್ಪರ್ಗಳನ್ನು 2 ಟ್ರಿಪ್ಗಳಿಗೆ ಬಳಕೆ ಮಾಡಲು ಪರಿಗಣಿಸಿ 10,400 ಘನ ಮೀಟರ್ (5,200 X 1X2) ಎಂದು ಅಂದಾಜಿಸಲಾಗಿದೆ. ಹಾಲಿ ಟೆಂಡರ್ನಲ್ಲಿ ಬೇರೆ ಬೇರೆ ವಿಧದ ವಾಹನಗಳನ್ನು ಬಳಕೆ ಮಾಡಲು ಉದ್ದೇಶಿಸಿದೆ. ಇದರ ಪ್ರಕಾರ 3 ಚಕ್ರದ ವಾಹನ (ಕಂಟೈನರ್ ಉಳ್ಳ ) ಗಳಿಂದ 3,980 ಘನ ಮೀಟರ್ ತ್ಯಾಜ್ಯ ಸಂಗ್ರಹವಾಗಬಹುದು. 4 ಚಕ್ರದ ವಾಹನಗಳಿಂದ 4,466 ಘನ ಮೀಟರ್ ತ್ಯಾಜ್ಯ, 4 ಚಕ್ರದ ವಾಹನಗಳ (ವಿಭಜಿಸಿದ ಕಂಟೈನರ್) ಗಳಿಂದ 3,370 ಘನ ಮೀಟರ್ ತ್ಯಾಜ್ಯ ಸೇರಿದಂತೆ ಒಟ್ಟಾರೆ 11,816 ಘನ ಮೀಟರ್ ತ್ಯಾಜ್ಯ ಸಂಗ್ರಹವಾಗಬಹುದು ಎಂದು ಅಂದಾಜಿಸಿದೆ.

ಶೇ. 47ರಷ್ಟು ಹೆಚ್ಚಳ
ಪ್ರಸಕ್ತ ಉಪಯೋಗಿಸಲಾಗುತ್ತಿರುವ ಒಂದು CUM ಸಾಮರ್ಥ್ಯದ ಆಟೋ ಟಿಪ್ಪರ್ಗಳು ಪ್ರತಿ ದಿನ 2 ಟ್ರಿಪ್ ಮಾಡಿದಲ್ಲಿ 4,201 ವಾಹನಗಳಿಂದ ಒಟ್ಟಾರೆ 8,042 CUM ಘನತ್ಯಾಜ್ಯ ಮಾಡಿದರೇ, ಪ್ರಸ್ತಾಪಿಸಲಾದ ಒಂದು CUM ಸಾಮರ್ಥ್ಯದ 1,990 ಆಟೋ ಟಿಪ್ಪರ್ಗಳು ಒಂದು ಟ್ರಿಪ್ನಲ್ಲಿ ಒಟ್ಟಾರೆ 8,446 CUM ಘನತ್ಯಾಜ್ಯವನ್ನು ಸಾಗಾಣಿಕೆ ಮಾಡುತ್ತವೆ. ಇದರಂತೆ ಶೇ.5ರಷ್ಟು ಹೆಚ್ಚಳವಾಗುತ್ತದೆ. 337 ಸಂಖ್ಯೆಯ ವಾಣಿಜ್ಯ ಘನತ್ಯಾಜ್ಯ ಸಂಗ್ರಹಣೆ ಮಾಡಲು ಪ್ರಸ್ತಾಪಿಸಿದ 4 ಚಕ್ರದ ವಾಹನಗಳ 5 CUM ಎಂದು ಪರಿಗಣಿಸಿದರೇ 11,816 CUM ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಯಾಗುತ್ತಿದೆ. ಶೇ. 47ರಷ್ಟು ಹೆಚ್ಚಳವಾಗುತ್ತದೆ.

ಪ್ರಸ್ತುತ ಬಳಕೆಯಲ್ಲಿರುವ ಆಟೋ ಟಿಪ್ಪರ್ಗಳು ತೆರೆದ ವಾಹನಗಳಾಗಿವೆ. 1 CUM ಸಾಮರ್ಥ್ಯ ಮಾತ್ರ ಹೊಂದಿದೆ. ಹೆಚ್ಚುವರಿ ತ್ಯಾಜ್ಯವು ವಾಹನಗಳಲ್ಲಿ ಸಾಗಾಣಿಕೆ ಸಂದರ್ಭದಲ್ಲಿ ಕೆಲವೊಮ್ಮೆ ರಸ್ತೆಗಳಲ್ಲಿ ಚೆಲ್ಲಾಡುತ್ತಿದೆ. ಇದರಿಂದ ರಸ್ತೆಗಳ ಮತ್ತು ನಗರದ ನೈರ್ಮಲ್ಯ ಹಾಳಾಗುತ್ತಿದೆ. ಹಾಲಿ 6,000 ಮೆಟ್ರಿಕ್ ಟನ್ ಘನತ್ಯಾಜ್ಯ ಸಂಗ್ರಹಣೆ ಗುರಿ ಹೊಂದಿದೆ. ಪ್ರಸ್ತಾಪಿತ ವಾಹನಗಳ ಸದ್ಬಳಕೆಯಿಂದ ಸಮರ್ಪಕ ಘನತ್ಯಾಜ್ಯ ನಿರ್ವಹಣೆಯಿಂದ ಕಪ್ಪು ಚುಕ್ಕೆಗಳನ್ನು ಹೋಗಲಾಡಿಸಿ ನಗರದ ನೈರ್ಮಲ್ಯವನ್ನು ಸುಧಾರಿಸಬಹುದು ಎಂದು ಪ್ರತಿಪಾದಿಸಿರುವುದು ಗೊತ್ತಾಗಿದೆ.

ಅದೇ ರೀತಿ ಪ್ರಸ್ತುತ 5,200 ಆಟೋ ಟಿಪ್ಪರ್ ಮತ್ತು 615 ಕಾಂಪ್ಯಾಕ್ಟರ್ಗಳನ್ನು ಬಳಸಿ ಪ್ರತಿದಿನ 5,600 ಟನ್ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಲಾಗುತ್ತಿದೆ. ಮಾಸಿಕ 48.41 ಕೋಟಿ ರು ವೆಚ್ಚವಾಗುತ್ತಿದೆ. ಪ್ರಸಕ್ತ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಪ್ರತಿ ದಿನ 6,000 ಮೆಟ್ರಿಕ್ ಟನ್ ಘನತ್ಯಾಜ್ಯ ನಿರ್ವಹಣೆ ಕೈಗೊಳ್ಳಬಹುದು ಎಂದು ವಿವರಿಸಿರುವುದು ತಿಳಿದು ಬಂದಿದೆ.
ಘನ ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಈ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ದೂರುಗಳು ಸಲ್ಲಿಕೆಯಾಗಿದ್ದರೂ ಸಹ ಟಿಪ್ಪಿಂಗ್ ಶುಲ್ಕ ನಿಗದಿಪಡಿಸಿದ್ದ ನಗರಾಭಿವೃದ್ಧಿ ಇಲಾಖೆಯು 39,437 ಕೋಟಿ ರು ಮೊತ್ತದ ಅಂದಾಜು ಪ್ರಸ್ತಾವನೆಗೆ ಅನುಮೋದನೆ ಪಡೆಯಲು ಸಚಿವ ಸಂಪುಟಕ್ಕೆ ಕಡತ ಮಂಡಿಸಿತ್ತು.
ಈ ಬಗ್ಗೆ ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿದ ನಂತರ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ತುಟಿ ಬಿಚ್ಚಿರಲಿಲ್ಲ.
ಈ ಪ್ರಕರಣದ ಬಗ್ಗೆ ರಾಜ್ಯಪಾಲರು ಸ್ವತಂತ್ರ ತನಿಖೆಗೆ ಮುಂದಾಗಬೇಕು ಎಂದು ಆರ್ ಅಶೋಕ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಈ ಬೆಳವಣಿಗೆ ಮಧ್ಯೆಯೇ ರಾಜ್ಯ ಸರ್ಕಾರವು ಟೆಂಡರ್ ಪ್ರಕ್ರಿಯೆಗಳ ಬಗ್ಗೆ ಪರಿಶೀಲನೆ ಮಾಡಲು ಅಂಜುಂ ಪರ್ವೇಜ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.
ಈ ಸಮಿತಿಯು ಗಡುವು ನೀಡಿದ್ದಂತೆ ವರದಿ ನೀಡಿರಲಿಲ್ಲ. 15 ದಿನಗಳ ಕಾಲಾವಕಾಶ ಕೋರಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.




