Wednesday | July 8, 2026 |

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ 83 ಎಕರೆ 28 ಗುಂಟೆ ವಿಸ್ತೀರ್ಣದ ಜಮೀನನ್ನು ಈಶಾ ಎಜುಕೇಷನ್ ಮತ್ತು ಈಶಾ ಯೋಗ ಸೆಂಟರ್ ಹೆಸರಿನಲ್ಲಿ  ಭೂ ಪರಿವರ್ತನೆ ಮಾಡಿರುವ ಪ್ರಕ್ರಿಯೆಯಲ್ಲಿ ನಿಯಮಗಳು ಉಲ್ಲಂಘನೆ ಕುರಿತು ದಿ ಫೈಲ್ ವರದಿ ಪ್ರಕಟಗೊಂಡ ಬೆನ್ನಲ್ಲೇ ಈ ಸಂಬಂಧ ವರದಿ ನೀಡಬೇಕು ಎಂದು  ಕಂದಾಯ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.

ಈ ಪ್ರಕರಣದಲ್ಲಿ   ಕಂದಾಯ ಆಯುಕ್ತಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದಿನ ತಹಶೀಲ್ದಾರ್‍‌ಗಳಾದ ನಾಗ ಪ್ರಶಾಂತ ಮತ್ತು ಗಣಪತಿ ಶಾಸ್ತ್ರಿ ಅವರ ವಿರುದ್ಧವೂ ಆಪಾದನೆ ಕೇಳಿ ಬಂದಿದ್ದವು.  ಈ ಸಂಬಂಧ ಚಿಕ್ಕಬಳ್ಳಾಪುರದ ಮುನಿರಾಜು ಮತ್ತು ಗ್ರಾಮಸ್ಥರ ಹೆಸರಿನಲ್ಲಿ ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದಾಖಲೆ ಸಮೇತ 2026ರ ಜೂನ್‌ 15ರಂದು ಲಿಖಿತ ದೂರು ಸಲ್ಲಿಕೆಯಾಗಿತ್ತು. ಈ ದೂರನ್ನಾಧರಿಸಿ ದಿ ಫೈಲ್‌ 2026ರ ಜೂನ್‌ 18ರಂದು ವರದಿ ಪ್ರಕಟಿಸಿತ್ತು.  ವರದಿ ಪ್ರಕಟಗೊಂಡ 17 ದಿನಗಳ ನಂತರ ಕಂದಾಯ ಇಲಾಖೆಯು ಈ ಬಗ್ಗೆ ಕ್ರಮವಹಿಸಲು ಮುಂದಾಗಿದೆ.

 ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರದಲ್ಲೇನಿದೆ?

ಚಿಕ್ಕಬಳ್ಳಾಪುರ ತಾಲೂಕು ಕಸಬಾ ಹೋಬಳಿ ಅವಲಗುರ್ಕಿ ಗ್ರಾಮದ ಸರ್ವೆ ನಂಬರ್ 196, 197 ಮತ್ತು ಇತರೆ ಸರ್ವೆ ನಂಬರ್‍‌ಗಳ ಜಮೀನುಗಳಲ್ಲಿ ಭೂ ಪರಿವರ್ತನೆ ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿ ಈಶಾ ಎಜುಕೇಷನ್‌, ಈಶಾ ಯೋಗ ಸೆಂಟರ್ ಗೆ ಅಕ್ರಮವಾಗಿ ಲಾಭ ಮಾಡಿಕೊಟ್ಟು ಸರ್ಕಾರಕ್ಕೆ ವಂಚನೆ ಹಾಗೂ ದ್ರೋಹ ಎಸಗಿರುವ ಕುರಿತು ಉಲ್ಲೇಖಿಸಿರುವ ಅಂಶಗಳು ಅತ್ಯಂತ ಗಂಭೀರವಾಗಿವೆ.

 

 

ಆದ್ದರಿಂದ ಈ ಸಂಬಂಧ ಕೂಡಲೇ ನಿಯಮಾನುಸಾರ ಪರಿಶೀಲಿಸಿ ಅಗತ್ಯ ದಾಖಲೆಗಳು ಮತ್ತು ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿಯನ್ನು ಕೂಡಲೇ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ದೂರಿನಲ್ಲೇನಿತ್ತು?

ನಾಗ ಪ್ರಶಾಂತ ಮತ್ತು ಗಣಪತಿ ಶಾಸ್ತ್ರಿ ಎಂಬುವರು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆ ವೇಳೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯ ಆವಲಗುರ್ಕಿ ಗ್ರಾಮದ ಸರ್ವೆ ನಂಬರ್‍‌ 196, 197, 198, 199, 177, 202, 287, 203, 204, 284,176 ಮತ್ತು 220ರಲ್ಲಿ ಒಟ್ಟು 83 ಎಕರೆ 28 ಗುಂಟೆ ಜಮೀನು ಭೂ ಪರಿವರ್ತನೆಯಾಗಿದೆ. ಈ ಪ್ರಕ್ರಿಯೆಯಲ್ಲಿ ನಿಯಮಗಳು ಉಲ್ಲಂಘನೆಯಾಗಿವೆ. ಇದರಿಂದ ಈಶಾ ಎಜುಕೇಷನ್‌ ಮತ್ತು ಈಶಾ ಯೋಗ ಸೆಂಟರ್‍‌ಗೆ ಅಕ್ರಮವಾಗಿ ಲಾಭವಾಗಿದೆ ಮತ್ತು ಇದರಿಂದಾಗಿ ಸರ್ಕಾರಕ್ಕೆ ವಂಚನೆ ಮತ್ತು ದ್ರೋಹವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು.

 

 

‘ಭೂ ಪರಿವರ್ತನೆ ಮಾಡುವಾಗ ನಿಯಮಗಳನ್ನು  ಉಲ್ಲಂಘಿಸಿ ಈಶಾ ಎಜುಕೇಷನ್ ಮತ್ತು ಈಶಾ ಯೋಗ ಸೆಂಟರ್‍‌ಗೆ ಅನುಕೂಲವಾಗಲು ಹಾಗು ಹಣದ ಆಮಿಷಕ್ಕೆ ಒಳಪಟ್ಟು ಅನುಕೂಲ ಮಾಡಿಕೊಟ್ಟಿದ್ದಾರೆ,’ ಎಂದು ಆರೋಪಿಸಿದ್ದರು.

ನಾಗಪ್ರಶಾಂತ ಅವರು ಚಿಕ್ಕಬಳ್ಳಾಪುರದಲ್ಲಿ 2020ರ ಮಾರ್ಚ್‌ 2ರಿಂದ 2020ರ ಸೆ.13 ಮತ್ತು 2020ರ ಸೆ.23ರಿಂದ 2021ರ ಫೆ.18ರವರೆಗೆ ತಹಶೀಲ್ದಾರ್‍‌ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ತಮಿಳುನಾಡಿನ ಕೊಯಮತ್ತೂರಿನ  ಈಶಾ ಎಜುಕೇಷನ್ ಮತ್ತು ಈಶಾ ಯೋಗ ಸೆಂಟರ್ ಗೆ ಸೇರಿದ ಚಿಕ್ಕಬಳ್ಳಾಪುರ ತಾಲೂಕು ಕಸಬಾ ಹೋಬಳಿ ಆವಲಗುರ್ಕಿ ಗ್ರಾಮದ ಸರ್ವೆ ನಂಬರ್‍‌ 196, 197, 198, 199, 177, 202, 287, 203, 204, 284,176 ಮತ್ತು 220ರಲ್ಲಿ ಒಟ್ಟು 83 ಎಕರೆ 28 ಗುಂಟೆ ಜಮೀನನ್ನು ವಿವಿಧ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಿದ್ದರು ಎಂದು ದೂರಿನಲ್ಲಿ ದೂರುದಾರರು ಉಲ್ಲೇಖಿಸಿದ್ದರು.

ಈ ಜಮೀನುಗಳು ಹಳ್ಳ, ಬಂಡಿದಾರಿ ಮತ್ತಿತರೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಬೇಕಾಗಿದ್ದ ಬಿ ಖರಾಬು ಎಂದು ವರ್ಗೀಕರಣವಾಗಿತ್ತು. ಆದರೂ ಸಹ ಭೂ ಪರಿವರ್ತನೆ ಸಂದರ್ಭದಲ್ಲಿ ಸತ್ಯಾಂಶವನ್ನು ಮರೆ ಮಾಚಲಾಗಿದೆ. ಈ ಎಲ್ಲಾ ಸರ್ವೇ ನಂಬರ್‍‌ಗಳಲ್ಲಿರುವ ಎಲ್ಲಾ ಜಮೀನುಗಳನ್ನು ಅರ್ಜಿದಾರರಿಗೆ ನಿಯಮಬಾಹಿರವಾಗಿ ಭೂ ಪರಿವರ್ತನೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಆಪಾದಿಸಿದ್ದರು.

‘ಅದಕ್ಕೂ ಮುಖ್ಯವಾಗಿ ವಿವಿಧ ಸರ್ವೆ ನಂಬರ್‍‌ಗಳ ಜಮೀನಿನಲ್ಲಿ ಇರುವ ಬಿ ಖರಾಬು ಹಳ್ಳವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದು ಮಾತ್ರವಲ್ಲದೇ ಅದರ ಮೇಲೆ ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೂ ಸಹ ಈ ಅಂಶಗಳನ್ನು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಾಗ ಉದ್ದೇಶಪೂರ್ವಕವಾಗಿಯೇ ಮರೆ ಮಾಚಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ವಿವಿಧ ಸರ್ವೆ ನಂಬರ್‍‌ಗಳ ಜಮೀನಿನಲ್ಲಿ ಇರುವ ಬಿ ಖರಾಬು ಹಳ್ಳವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದು ಮಾತ್ರವಲ್ಲದೇ ಅದರ ಮೇಲೆ ನಿರ್ಮಾಣವಾಗಿರುವ ಅನಧಿಕೃತವಾಗಿ ಕಟ್ಟಡವನ್ನು ತೆರವುಗೊಳಿಸುವ ಜವಾಬ್ದಾರಿಯು ತಹಶೀಲ್ದಾರ್‍‌ಗೆ ಸೇರಿದೆ. ಆದರೂ ಸಹ ಈ ಪ್ರಕರಣದಲ್ಲಿ ಅತ್ಯಂತ ನಿರ್ಲಕ್ಷ್ಯ ವಹಿಸಲಾಗಿದೆ. ಹೀಗಾಗಿ ತಹಶೀಲ್ದಾರ್‍‌ ಹುದ್ದೆಗೆ ಯೋಗ್ಯವಲ್ಲದ ರೀತಿಯಲ್ಲಿ ದುರ್ವರ್ತನೆ ತೋರಿದ್ದಾರೆ. ಸರ್ಕಾರಿ ಸ್ವತ್ತು ಮತ್ತು ನೀರಿನ ಮೂಲದ ಹಳ್ಳ, ಕಾಲುವೆಗಳನ್ನು ಸಂರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಹಾಗೆಯೇ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಸಹ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದರು.

ಇದೇ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 2021ರ ಏಪ್ರಿಲ್‌ 27ರಿಂದ 2023ರ ಜುಲೈ 28ವರೆಗೆ ಗಣಪತಿ ಶಾಸ್ತ್ರಿ ಎಂಬುವರು ತಹಶೀಲ್ದಾರ್‍‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿಯೂ ಗಣಪತಿ ಶಾಸ್ತ್ರಿ ಎಂಬುವರು ಖರಾಬು ಜಮೀನನ್ನು ಸಕ್ರಮಗೊಳಿಸಿ ಭೂ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಖರಾಬು ನಿರ್ಧರಣಾ ಸಮಿತಿಗೂ ಸಹ ಪೂರ್ಣ ಮಾಹಿತಿ ನೀಡಿಲ್ಲ. ಅಲ್ಲದೇ ಸತ್ಯಾಂಶವನ್ನು ಮರೆಮಾಚಿದ್ದಾರೆ. ಈ ಮೂಲಕ ಈಶಾ ಫೌಂಡೇಷನ್‌ಗೆ ನಿಯಮಬಾಹಿರವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ. ಹಣದ ಆಮಿಷಕ್ಕೆ ಒಳಗಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರುದಾರರು ವಿವರಿಸಿದ್ದರು.

ಈಶಾ ಫೌಂಡೇಷನ್ ಹೆಸರಿಗೆ ಭೂ ಪರಿವರ್ತನೆ ಆಗಿರುವ ಜಮೀನುಗಳ ಮಧ್ಯದಲ್ಲಿ ಬಿ ಖರಾಬು ಜಮೀನಿದೆ. ಪ್ರಮುಖವಾಗಿ ನೀರು ಹರಿಯುವ ಹಳ್ಳ ಇದೆ ಎಂದು ಸರ್ವೆ ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ಆದರೂ ಸಹ ಈ ಜಮೀನುಗಳನ್ನು ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಒತ್ತುವರಿ ಆಗಿರುವುದು ಮತ್ತು ಅವುಗಳ ಮೇಲೆಯೇ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವುದು ಗೋಚರಿಸಿದ್ದರು ಕೂಡ ಈ ಅಧಿಕಾರಿಯು ಜಾಣಕುರುಡರಾಗಿದ್ದರು. ಮತ್ತು ಜಿಲ್ಲಾಧಿಕಾರಿ ನೇತೃತ್ವದ ಖರಾಬು ನಿರ್ಧರಣೆ ಸಮಿತಿಯ ಗಮನಕ್ಕೆ ಉದ್ದೇಶಪೂರ್ವಕವಾಗಿ ತಂದಿಲ್ಲ. ಹೀಗಾಗಿ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸುವಲ್ಲಿ ಇವರೂ ವಿಫಲರಾಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

 

 

‘ನಾಗ ಪ್ರಶಾಂತ ಮತ್ತು ಗಣಪತಿ ಶಾಸ್ತ್ರಿ ಈ ಇಬ್ಬರೂ ಅಧಿಕಾರಿಗಳು ಹಣದ ಆಸೆಗಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಲಾದ ಜಮೀನನ್ನು ಹಾಗೂ ನೀರಿನ ಮೂಲವನ್ನು ಖಾಸಗಿಯವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲು ನೇರವಾಗಿ ಅನುಕೂಲ ಮಾಡಿಕೊಟ್ಟು ಸರ್ಕಾರಕ್ಕೆ ದ್ರೋಹ ಬಗೆದು ಲೋಪವೆಸಗಿರುತ್ತಾರೆ. ಹೀಗಾಗಿ ಈ ಲೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಮತ್ತು ಈ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು. ಈ ಪ್ರಕ್ರಿಯೆ ಮುಗಿಯವವರೆಗೂ ಇವರಿಗೆ ಯಾವುದೇ ಮುಂಬಡ್ತಿಯನ್ನು ನೀಡಬಾರದು,’ ಎಂದು ದೂರುದಾರರು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರನ್ನು ಕೋರಿದ್ದರು.

ಚಿಕ್ಕಬಳ್ಳಾಪುರ ತಾಲೂಕು ಕಸಬಾ ಹೋಬಳಿ ಆವಲಗುರ್ಕಿ ಗ್ರಾಮದ ಸರ್ವೆ ನಂಬರ್ 196, 197, 198, 199, 286, 177, 202, 287, 203, 204, 284, 176 ಮತ್ತು 220ರಲ್ಲಿ ಒಟ್ಟು 83 ಎಕರೆ 28 ಗುಂಟೆ ಜಮೀನನ್ನು ವಾಣಿಜ್ಯ (ಶೈಕ್ಷಣಿಕ) ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 954 ಅಡಿ ಪರಿಭಾವಿತ ಭೂಪರಿವರ್ತನೆ ಮಾಡಿಕೊಡಬೇಕು ಎಂದು ಈಶಾ ಎಜುಕೇಷನ್ ಮತ್ತು ಈಶಾ ಯೋಗ ಸೆಂಟರ್‍‌ನ ಜನರಲ್ ಸೆಕ್ರೆಟರಿ ಸಿ ಪ್ರಭಾಕರ್ ಅವರು ಮನವಿ ಸಲ್ಲಿಸಿದ್ದರು.

 

 

 

ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 109ರ ಅನ್ವಯ ಜಮೀನನ್ನು ಖರೀದಿಸಲು ಸರ್ಕಾರವು 2019ರ ಮಾರ್ಚ್‌ 6ರಂದು ಅನುಮತಿ ನೀಡಿತ್ತು. ಹಾಗೆಯೇ ಈ ಅರ್ಜಿಯನ್ನು  ಪರಿಶೀಲಿಸಿದ್ದ ತಹಶೀಲ್ದಾರ್ ಅವರು 2020ರ ಆಗಸ್ಟ್‌ 4ರಂದು ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪರಿಶೀಲಿಸಿದ್ದ   ಜಿಲ್ಲಾಧಿಕಾರಿಯವರು   2020ರ ಆಗಸ್ಟ್‌ 18ರಂದು ಈಶಾ ಫೌಂಡೇಷನ್‌ನ ಜನರಲ್ ಸೆಕ್ರೆಟರಿ ಸಿ ಪ್ರಭಾಕರ್ ಅವರಿಗೆ ತಿಳಿವಳಿಕೆ (ಅನುಬಂಧ 3) ಪತ್ರವನ್ನು ಹೊರಡಿಸಿದ್ದರು. ಈ ಪತ್ರದ ಪ್ರಕಾರ ಸರ್ವೇ ನಂಬರ್‍‌ 196ರಿಂದ 220ರಲ್ಲಿನ ಒಟ್ಠಾರೆ 83 ಎಕರೆ 28 ಗುಂಟೆ ಜಮೀನಿಗೆ ಭೂ ಪರಿವರ್ತನಾ ಶುಲ್ಕವೆಂದು ಒಟ್ಟು 36,45,972 ರು ನಿಗದಿಪಡಿಸಿದ್ದರು.

 

 

ಹಾಗೆಯೇ ಸರ್ವೆ ನಂಬರ್‍‌ 102ರಲ್ಲಿನ 12 ಎಕರೆ 11 ಗುಂಟೆ, ಸರ್ವೆ ನಂಬರ್‍‌ 203ರಲ್ಲಿನ 2 ಎಕೆ 16 ಗುಂಟೆ, ಸರ್ವೇ ನಂಬರ್‍‌ 204ರಲ್ಲಿ 15 ಎಕರೆ 34 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಖಾತೆದಾರರಾದ ಸಿ ಪ್ರಭಾಕರ್ ಅವರು  ಆಲಿನೇಷನ್ ನಕ್ಷೆ ಸಂಖ್ಯೆಯನ್ನು ಲಗತ್ತಿಸಿರಲಿಲ್ಲ ಎಂಬುದನ್ನು ಜಿಲ್ಲಾಧಿಕಾರಿಯವರು ಪರಿಶೀಲನೆ ವೇಳೆ ಪತ್ತೆ ಹಚ್ಚಿದ್ದರು.

 

 

ಇದಾದ ನಂತರ ಜಿಲ್ಲಾಧಿಕಾರಿಯವರು ಭೂ ಪರಿವರ್ತನೆಗೆ ಸಂಬಂಧಿಸಿದಂತೆ  ಆಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು.

 

 

ಈ ಬೆಳವಣಿಗೆ ಮಧ್ಯೆಯೇ 2021ರ ಜೂನ್ 25ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಭೂ ಪರಿವರ್ತನೆ ಪ್ರಕರಣಗಳು ಎ ಖರಾಬು ಜಮೀನುಗಳು ಪರಿಶೀಲನೆಗೆ ನಿರ್ಧರಣೆ ಸಮಿತಿಯು ಸಭೆ ನಡೆಸಿತ್ತು. ಸರ್ವೆ ನಂಬರ್‍‌ 199, 204,220ರಲ್ಲಿ ಒಟ್ಟು 2 ಎಕರೆ 20 ಗುಂಟೆ ಜಮೀನು ಎ ಖರಾಬು ಜಮೀನಿತ್ತು. ಈ ಜಮೀನು ಸರ್ಕಾರಕ್ಕೆ ಸೇರಿದ ಜಮೀನೇ ಅಥವಾ ಹಿಡುವಳಿದಾರರಿಗೆ ಸೇರಿದ ಜಮೀನೆ ಎಂಬ ಬಗ್ಗೆ ಅಪರ ಜಿಲ್ಲಾಧಿಕಾರಿಯವರಿಂದ ಸಲ್ಲಿಕೆಯಾಗಿದ್ದ ಕಡತವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆಯು ಪರಿಶೀಲನೆ ನಡೆಸಿತ್ತು.

 

 

ಇದರ ಪ್ರಕಾರ ಆಕಾರ್ ಬಂದ್‌ ಹಾಗೂ ಮೂಲ ಸರ್ವೇ ದಾಖಲೆಗಳ ಅನ್ವಯ ಸರ್ವೆ ನಂಬರ್‍‌ 199ರಲ್ಲಿ ಒಟ್ಟು 14 ಎಕರೆ 34 ಗುಂಟೆ ಜಮೀನಿದೆ.

 

 

ಈ ಪೈಕಿ 00-09 ಎಕರೆ ಎ ಖರಾಬು, ಬಿ ಖರಾಬು 00-23 ಎಕರೆ ಒಟ್ಟು 00-31 ಒಟ್ಟು ಖರಾಬು ಇದೆ. ಸರ್ವೆ ನಂಬರ್‍‌ 204ರಲ್ಲಿ ಒಟ್ಟಾರೆ 16 ಎಕರೆ 07 ಗುಂಟೆ ಇದೆ. ಈ ಪೈಕಿ ಎ ಖರಾಬು 00-13 ಎಕರೆ , ಬಿ ಖರಾಬು 00-00, ಒಟ್ಟು 00-13 ಎಕರೆ ಇದೆ. ಸರ್ವೆ ನಂಬರ್ 220ರಲ್ಲಿ ಒಟ್ಟು 20 ಎಕರೆ 34 ಗುಂಟೆ ಇದೆ. ಈ ಪೈಕಿ ಎ ಖರಾಬು 01-39 ಎಕರೆ, ಬಿ ಖರಾಬು 01-23 ಎಕೆರೆ ಒಟ್ಟು 03-22 ಎಕರೆ ಖರಾಬು ಜಮೀನಿತ್ತು.

 

 

ಸರ್ವೇ ನಂಬರ್‍‌ 199ರಲ್ಲಿ ಆಕಾರ್‍‌ ಬಂದ್‌ ನಂತೆ ಮತ್ತು ಎರಡನೇ ರೀ ಕ್ಲಾಸಿಫಿಕೇಷನ್‌ ನಂತೆ ಹಳ್ಳ, ಕಾಲು ದಾರಿ ಇರುವ ಕುರಿತು ವಿವರವನ್ನು ಸಲ್ಲಿಸಿತ್ತು. ಹಳ್ಳದ ಬಗ್ಗೆ 00-11, 00-07 ಕಾಲು ದಾರಿ ಬಗ್ಗೆ 00-05 ಒಟ್ಟು 00-23 ಅಳತೆಗೆ ಸಿಕ್ಕದ ಕೊರಕಲು 00-08 ಎಕರೆ ಇದೆ ಎಂದು ನಮೂದಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

 

ಈ ಬಗ್ಗೆ ಭೂ ದಾಖಲೆಗಳ ಉಪ ನಿರ್ದೇಶಕರು ಸಭೆಯಲ್ಲಿ ಹೆಚ್ಚಿನ ವಿವರ ನೀಡಿದ್ದರು. ‘ಆಕಾರ್ ಬಂದ್ ಹಾಗೂ ಮೂಲ ಸರ್ವೇ ದಾಖಲೆಗಳ ಅನ್ವಯ ಸರ್ವೆ ನಂಬರ್‍‌ 199ರಲ್ಲಿ (ಪೂರಾ ನಂ) 00-31 ಗುಂಟೆ ಖರಾಬಿದೆ. 2ನೇ ರೀ ಕ್ಲಾಸಿಫಿಕೇಷನ್‌ ದಾಖಲೆ ಪ್ರಕಾರ ಹಳ್ಳ, ಕಾಲುದಾರಿ ಮತ್ತು ಅಳತೆಗೆ ಸಿಕ್ಕದ ಕೊರಕಲು ಬಗ್ಗೆ ದಾಖಲಾಗಿದೆ. ಒಟ್ಟು 00-23 ಗುಂಟೆ ಖರಾಬು ಇದೆ. ಬಿ ಖರಾಬಿನಲ್ಲಿ ಅಳತೆಗೆ ಸಿಕ್ಕದ ಕೊರಕಲು 00-09 ಖರಾಬಿದೆ. ಆಕಾರ್ ಬಂದ್‌ನಲ್ಲಿ  ಎ ಖರಾಬು ದಾಖಲಾಗಿದೆ,’ ಎಂದು ದೂರುದಾರರು ವಿವರಿಸಿದ್ದರು

 

 

ಅದೇ ರೀತಿ ಸರ್ವೆ ನಂಬರ್‍‌ 220ರಲ್ಲಿ ಹಳ್ಳದ ಬಗ್ಗೆ 00-35, 00-20, 00-08 ಒಟ್ಟು 1.23 ಅಳತೆಗೆ ಸಿಕ್ಕದ ಕೊರಕಲು ಇದೆ ಎಂದು ವಿವರಿಸಿದೆ. ಭೂ ಪರಿವರ್ತನೆಗೆ ಸಂಬಂಧಿಸಿದಂತೆ ಸರ್ಕಾರವು (ಆದೇಶ ಸಂಖ್ಯೆ; ಆರ್‍‌ ಡಿ 05 ಎಲ್‌ಜಿಪಿ 2018 ಬೆಂಗಳೂರು ದಿನಾಂಕ 16-05-2018) ಪಟ್ಟಿ 1 ರ ಪ್ರಕಾರ ಬಳಕೆಯಲ್ಲಿರುವ ಖರಾಬುಗಳನ್ನು ಎ ಖರಾಬು ಹಾಗೂ ಖಾಸಗಿ ಖರಾಬು ಎಂದು ಪರಿಗಣಿಸಲು ಮತ್ತು ಪಟ್ಟಿ 2 ರ ಪ್ರಕಾರ ಬಳಕೆಯಲ್ಲಿರುವ ಖರಾಬುಗಳನ್ನು ಸಾರ್ವಜನಿಕ ಬಳಕೆಯಲ್ಲಿರುವ ಬಿ ಖರಾಬು ಹಾಗೂ ಸರ್ಕಾರಿ ಜಮೀನುಗಳು ಎಂದು ಪರಿಗಣಿಸಲು ನಿರ್ದೇಶಿಸಿದ್ದನ್ನು ದೂರುದಾರರು ಸರ್ಕಾರದ ಗಮನಸೆಳೆದಿದ್ದರು.

 

 

 

ಅದೇ ರೀತಿ ಭೂ ಪರಿವರ್ತನೆಗೆ ಪ್ರಸ್ತಾಪಿಸಿರುವ ಸರ್ವೆ ನಂಬರ್‍‌ಗಳು ಮೂಲತಃ ಸರ್ಕಾರದಿಂದ ಮಂಜೂರಾಗಿ ಈ ಹಿಂದೆಯೇ ಪಕ್ಕಾ ಪೋಡಿಯಾಗಿ ಹಿಸ್ಸಾ ಪೋಡಿಯಾಗಿ ದುರಸ್ತಾದ ಸರ್ವೆ ನಂಬರ್‍‌ಗಳೇ ಎಂಬ ಬಗ್ಗೆ ಸರ್ವೆ ಇಲಾಖೆಯಲ್ಲಿ ನಿರ್ವಹಿಸುತ್ತಿರುವ ಭೂ ದಾಖಲೆಗಳಿಂದ ಗೊತ್ತಾಗಿದೆ.

 

 

ಇದರ ಪ್ರಕಾರ ಸರ್ವೆ ನಂಬ್‌ 199, 204, 220 ಮೂಲತಃ ಖಾಸಗಿ ಹಿಡುವಳಿ ನಂಬರ್‍‌ಗಳಾಗಿವೆ. ಸರ್ಕಾರಿ ಜಮೀನಿನಲ್ಲಿ ಮಂಜೂರಾಗಿ ದುರಸ್ತಾಗಿರುವ ನಂಬರ್‍‌ ಗಳಾಗಿರುವುದಿಲ್ಲ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಭೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

 

 

ಸರ್ವೆ ನಂಬರ್‍‌ 199ರಲ್ಲಿ 00-08 ಎಕರೆ ಎ ಖರಾಬು ಅಳತೆಗೆ ಸಿಕ್ಕದ ಕೊರಕಲು ಬಗ್ಗೆ ದಾಖಲಾಗಿದೆ. ಈ ಮಾಹಿತಿಯನ್ನು ಪರಿಶೀಲಿಸಿದಾಗ ಈ ಕೊರಕಲು ಹಳ್ಳದ ಖರಾಬು ಮೂಲಕ ಸರ್ವೇ ನಂಬರ್‍‌ 199ರಿಂದ ಸರ್ವೆ ನಂಬರ್‍‌ 200ಕ್ಕೆ ಸೇರುತ್ತದೆ. ಆದ್ದರಿಂದ ಈ ಖರಾಬನ್ನು ಸರ್ಕಾರದ ನಡವಳಿ ಪಟ್ಟಿ 2 ರ ಪ್ರಕಾರ 1ಕ್ಕಿಂತ ಹೆಚ್ಚು ಸರ್ವೆ ನಂಬರ್‍‌ಗಳಲ್ಲಿ ಹಾದು ಹೋಗಿರುವುದರಿಂದ ಈ ಖರಾಬನ್ನು ಸರ್ಕಾರಿ ಜಮೀನು ಎಂದೇ ಪರಿಗಣಿಸಬೇಕು ಎಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ಹಾಗೆಯೇ ಸರ್ವೇ ನಂಬರ್‍‌ 204ರಲ್ಲಿ ದಾಖಲಾಗಿರುವ 00-13 ಎಕರೆ ಖರಾಬು, ರೀ ಸರ್ವೆ ಟಿಪ್ಪಣಿಯಂತೆ ಕೊರಕಲು ಬಗ್ಗೆ ದಾಖಲಾಗಿದೆ. ಈ ಸ್ಥಳದಲ್ಲಿ ಭೌತಿಕವಾಗಿ ಸರ್ವೆ ನಂಬರ್‍‌ 204ರ ಮಧ್ಯಭಾಗದಲ್ಲಿ ಹಳ್ಳ ಇದೆ. ಮತ್ತು ಈ ಹಳ್ಳವು ಸರ್ವೆ ನಂಬರ್‍‌ 205, 204ರ ಮುಖಾಂತರ ಸರ್ವೆ ನಂಬರ್‍‌ 200ಕ್ಕೆ ಹಾಲಿ ಭೂ ಮಾಪಕರು ತಯಾರಿಸಿರುವ ನಕ್ಷೆಯಂತೆ ಸಂಪರ್ಕ ಹೊಂದುತ್ತಿದೆ. ಆದ್ದರಿಂದ ಈ ಖರಾಬನ್ನು ಸರ್ಕಾರಿ ನಡವಳಿಕೆ ಪಟ್ಟಿ 2ರ ಪ್ರಕಾರ 1ಕ್ಕಿಂತ ಹೆಚ್ಚು ಸರ್ವೆ ನಂಬರ್‍‌ಗಳಲ್ಲಿ ಹಾದು ಹೋಗಿರುವುದರಿಂದ ಈ ಖರಾಬನ್ನು ಸರ್ಕಾರಿ ಜಮೀನು ಎಂದು ಪರಿಗಣಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ.

ಅದಷ್ಟೇ ಅಲ್ಲ ಸರ್ವೆ ನಂಬರ್‍‌ 220ರಲ್ಲಿ ದಾಖಲಾಗಿರುವ 1 ಎಕರೆ 30 ಗುಂಟೆ ಎ ಖರಾಬು ಜಮೀನಿಗೆ ರೀ ಸರ್ವೆ ಟಿಪ್ಪಣಿ ಮತ್ತು 2ನೇ ರೀ ಕ್ಲಾಸ್‌ ದಾಖಲೆಯಂತೆ ಖರಾಬು ಚಿನ್ಹೆ  ನಮೂದಿಸಿಲ್ಲ. ಬದಲಿಗೆ ಈ ಸರ್ವೇ ನಂಬರ್‍‌ನಲ್ಲಿರುವ ಬಿ ಖರಾಬು ಜಮೀನಿನ ವಿಸ್ತೀರ್ಣವಾದ 1 ಎಕರೆ 23 ಗುಂಟೆ ಬಗ್ಗೆ ಮಾತ್ರ ದೊಡ್ಡ ಹಳ್ಳ ಹಾದು ಹೋಗಿದೆ ಎಂದು ಚಿನ್ಹೆ ತೋರಿಸಿದೆ. ಗ್ರಾಮ ನಕಾಶೆ ಪ್ರಕಾರ ಸರ್ವೆ ನಂಬರ್‍‌ 175ರ ಎತ್ತರದ ಪ್ರದೇಶದಲ್ಲಿರುವ ಗುಡ್ಡದಂತೆ ಇರುವ ಸರ್ಕಾರಕ್ಕೆ ಸೇರಿದ ಜಮೀನು ಇರುವುದು ಕಂಡುಬಂದಿದೆ. ಈ ಗುಡ್ಡದ ಮೇಲೆ ಬಿದ್ದ ಮಳೆ ನೀರು ಸರ್ವೆ ನಂಬರ್‍‌ 220ಕ್ಕೆ ಹರಿದು ಈ ಸರ್ವೆ ನಂಬರ್‍‌ 220ರಲ್ಲಿ ನಕಾಶೆಯಲ್ಲಿ ಚಿಹ್ನೆ ಸಹಿತ ತೋರಿಸಿರುವ ದೊಡ್ಡಹಳ್ಳಕ್ಕೆ ಹರಿದು ಬರುವುದು ಗ್ರಾಮ ನಕಾಶೆಯಿಂದ ಕಂಡು ಬಂದಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ವಿವರಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ಇದೇ ಸರ್ವೇ ನಂಬರ್‍‌ 220ರಲ್ಲಿ ಇರುವ ಅಳತೆಗೆ ಸಿಕ್ಕದ ಕೊರಕಲಿಗೆಂದು ಆಕಾರ್ ಬಂದಿನಲ್ಲಿ ನಮೂದಿಸಿರುವ ಎ ಖರಾಬು 1 ಎಕರೆ 39 ಗುಂಟೆ ಜಮೀನಿನ ಪೈಕಿ 00-19 ಗುಂಟೆ ಜಮೀನನ್ನು ಮುಚ್ಚಿದರೆ ಸರ್ವೆ ನಂಬರ್‍‌ 220ರಲ್ಲಿರುವ ದೊಡ್ಡ ಹಳ್ಳಕ್ಕೆ ನೀರಿನ ಹರಿವಿನ ಸಂಪರ್ಕವೇ ಇಲ್ಲದಂತಾಗುತ್ತದೆ. ಹೀಗಾಗಿ ಸರ್ವೇ ನಂಬರ್‍‌ 220ರಲ್ಲಿ ಸರ್ವೇ ದಾಖಲೆಗಳ ಪ್ರಕಾಋ ಅಳತೆಗೆ ಸಿಕ್ಕದ ಕೊರಕಲು ಬಗೆಗಿನ ಎ ಖರಾಬು ಜಮೀನಿನ ಪೈಕಿ 00-19 ಎಕರೆ ಜಮೀನನ್ನು ತಾಂತ್ರಿಕ ದೃಷ್ಟಿ ಮತ್ತು ಸದ್ಭಾವನೆಯಿಂದ ಈ ಖರಾಬನ್ನು ಸರ್ಕಾರಿ ನಡವಳಿಕೆ ಪಟ್ಟಿ 2ರ ಪ್ರಕಾರ 1ಕ್ಕಿಂತ ಹೆಚ್ಚು ಸರ್ವೆ ನಂಬರ್‍‌ಗಳಲ್ಲಿ ಹಾದು ಹೋಗಿರುವುದರಿಂದ ಈ ಖರಾಬನ್ನು ಸರ್ಕಾರಿ ಜಮೀನೆಂದು ಪರಿಗಣಿಸಬೇಕು ಎಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ಭೂ ದಾಖಲೆಗಳ ಸಹಾಯಕ ನಿರ್ದೇಶಕರು ನೀಡಿದ್ದ ಈ ವಿವರಣೆ ಕುರಿತು ಚರ್ಚಿಸಿದ್ದ ಸಭೆಯು  ಬಿ ಖರಾಬು ಜಮೀನನ್ನು ಆಕಾರ್‍‌ ಬಂದ್‌ ನಂತೆ ಇರುವ ಬಿ ಖರಾಬಿನಲ್ಲಿಯೇ ಮುಂದುವರೆಸಲು ಒಮ್ಮತದಿಂದ ತೀರ್ಮಾನಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಒಟ್ಟು 91 ಎಕರೆ 17 ಗುಂಟೆ ವಿಸ್ತೀರ್ಣದ ಜಮೀನಿಗೆ ವಾಣಿಜ್ಯ (ಶೈಕ್ಷಣಿಕ) ಉದ್ದೇಶಕ್ಕೆ ಏಕ ನಿವೇಶನ ವಿನ್ಯಾಸ ನಕ್ಷೆಗೆ ಸಿ ಪ್ರಭಾಕರ್ ಅವರು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ  ಅನುಮೋದನೆ ಕೋರಿದ್ದರು.

 

 

ಈ ಅರ್ಜಿಯನ್ನು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರೂ ಸಹ ಪರಿಶೀಲಿಸಿದ್ದರು.

ಸಿ ಪ್ರಭಾಕರ್ ಅವರು ಏಕ ನಿವೇಶನ ವಿನ್ಯಾಸ ನಕ್ಷೆಗೆ ಅನುಮೋದನೆ ಕೋರಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶದ ಸ್ಥೂಲಾಭಿವೃದ್ಧಿ ಯೋಜನೆಗೆ ಸರ್ಕಾರವು ಅಂತಿಮ ಅನುಮೋದನೆ ನೀಡಿತ್ತು. ಹೀಗಾಗಿ ವಲಯ ನಿಯಾಮವಳಿಗಳು ಚಾಲ್ತಿಯಲ್ಲಿದ್ದವು. ಅಲ್ಲದೇ ಚಿಕ್ಕಬಳ್ಳಾಪುರ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ-1) ಸರ್ಕಾರವು ತಾತ್ಕಾಲಿಕ ಅನುಮೋದನೆ ನೀಡಿತ್ತು. ಅಂತಿಮ ಮಹಾಯೋಜನೆಯ ಕಾರ್ಯವು ಪ್ರಗತಿಯಲ್ಲಿತ್ತು.

 

 

ಭೂ ಕಂದಾಯ ಕಾಯ್ದೆ 1964ರ ಕಲಂ 95(3)ರಡಿಯಲ್ಲಿ ಕಲಂ 95(4)ರಡಿಯಲ್ಲಿ ನೀಡಲಾಗುವ ಭೂ ಪರಿವರ್ತನೆ ಅನುಮತಿಯು ವ್ಯವಸಾಯದ ಭೂಮಿಯನ್ನು ವ್ಯವಸಾಯೇತರ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಸಲುವಾಗಿ ನೀಡಲಾಗುತ್ತದೆ. ಇದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ ಅನುಗುಣವಾಗಿರಬೇಕು. ಹೀಗಾಗಿ ಪ್ರಾಧಿಕಾರದ ವ್ಯಾಪ್ತಿಯೊಳಗೆ ಭೂಪರಿವರ್ತನೆಗೆ ಪ್ರಾಧಿಕಾರದ ನಿರಾಕ್ಷೇಪಣ ಪತ್ರ ಪಡೆಯಬೇಕು.

 

ಈ ಅರ್ಜಿ ಸಲ್ಲಿಕೆಯಾಗಿದ್ದ ಸಂದರ್ಭದಲ್ಲಿ ಪ್ರಾಧಿಕಾರದ ಮಹಾ ಯೋಜನೆ ತಯಾರಿಕೆ ಪ್ರಕ್ರಿಯೆ ನಡೆಯುತ್ತಿದ್ದರಿಂದ ಪ್ರಾಧಿಕಾರದ ಅಭಿಪ್ರಾಯವನ್ನು ಪರಿಗಣಿಸದೇ ಭೂ ಪರಿವರ್ತಿಸಲಾಗಿರುವ ಜಮೀನುಗಳ ಅಭಿವೃದ್ಧಿಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಪ್ರಾಧಿಕಾರವು ತಿಳಿಸಿತ್ತು.

 

 

ಈಶಾ ಎಜುಕೇಷನ್ ಮತ್ತು ಈಶಾ ಯೋಗ ಸೆಂಟರ್ ಭೂ ಪರಿವರ್ತನೆ ಮಾಡಿಸಿಕೊಂಡಿದ್ದ ಜಮೀನುಗಳು ಚಿಕ್ಕಬಳ್ಳಾಪುರ ವಿಸ್ತರಿಸಿದ ಸ್ಥಳೀಯ ಯೋಜನಾ ಪ್ರದೇಶದೊಳಗಿತ್ತು. ಸರ್ಕಾರದಿಂದ ಮಹಾಯೋಜನೆಗೆ ಅಂತಿಮ ಅನುಮೋದನೆಯಾದ ನಂತರ ಅರ್ಜಿದಾರರ ಪ್ರಸ್ತಾವವನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರ್ಜಿದಾರರಿಗೆ ಪ್ರಾಧಿಕಾರವು ಹಿಂಬರಹ ನೀಡಿತ್ತು.

ಈ ಕುರಿತು ಈಶಾ ಎಜುಕೇಷನ್‌ ಫೌಂಡೇಷನ್‌, ತಹಶೀಲ್ದಾರ್‍‌ಗಳಾದ ಗಣಪತಿ ಶಾಸ್ತ್ರಿ ಅವರಿಗೆ ಸ್ಪಷ್ಟೀಕರಣ ಮತ್ತು ಪ್ರತಿಕ್ರಿಯೆ ಕೋರಿ ದಿ ಫೈಲ್‌ ಇ ಮೇಲ್ ಮಾಡಿದೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ, ಸ್ಪಷ್ಟೀಕರಣ ನೀಡಿಲ್ಲ. ಪ್ರತಿಕ್ರಿಯೆ ಮತ್ತು ಸ್ಪಷ್ಟೀಕರಣ ನೀಡಿದ ನಂತರ ಇದೇ ವರದಿಯನ್ನು ನವೀಕರಿಸಲಾಗುವುದು.

 

ಈಶಾ ಫೌಂಡೇಷನ್, ಯೋಗ ಕೇಂದ್ರಕ್ಕೆ ಜಮೀನು ಭೂ ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆ ಆರೋಪ; ತಹಶೀಲ್ದಾರ್‍‌ಗಳಿಂದಲೇ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆಯಾಗಿದೆಯೇ?

 

ಈ ಕುರಿತು ದಿ ಫೈಲ್‌ 2026ರ ಜೂನ್‌ 18ರಂದು ವರದಿ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...
Please Scan to make Your Contribution

Topics

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

Related Articles

Popular Categories

error: Content is protected !!