Thursday | October 1, 2026 |

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು ಎಂಬ ನಿರ್ಬಂಧದ ಅವಧಿ ಇನ್ನೂ ಪೂರ್ಣಗೊಳ್ಳದಿದ್ದರೂ ಸಹ ರಾಜ್ಯ ಕಾಂಗ್ರೆಸ್‌ ಸರ್ಕಾರವು ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ನ ಕೋರಿಕೆಯಂತೆ  ಚಾಮುಂಡೇಶ್ವರಿ ಶುಗರ್ಸ್‌ ಲಿಮಿಟೆಡ್‌ನ ಸಮೂಹ ಕಂಪನಿಯಾದ ಹೇಮಗಿರಿ ಶುಗರ್ಸ್‌ ರಿನ್ಯೂವಬಲ್ಸ್‌ ಪ್ರೈವೈಟ್‌ ಲಿಮಿಟೆಡ್‌ನ  100 ಎಕರೆ ಜಮೀನು ಮಾರಾಟ ಮಾಡಲು  ನಿಯಮ ಸಡಿಲಿಸಲು ಹೊರಟಿರುವುದು ಇದೀಗ ಬಹಿರಂಗವಾಗಿದೆ.

ಅಲ್ಲದೇ ಈ ಕಂಪನಿಗಾಗಿಯೇ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ಷರತ್ತುಗಳು/ನಿಬಂಧನೆಗಳನ್ನು ಸಡಿಲಿಸಲು ಮುಂದಾಗಿದೆ.

ಈ ವಿಷಯವು 2026ರ ಮೇ 21ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೇ ಮಂಡನೆಯಾಗಿತ್ತು. ಆದರೆ ಜಮೀನಿನ ಪರಭಾರೆ ನಿರ್ಬಂಧದ ಅವಧಿ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ಮುಂದೂಡಲಾಗಿತ್ತು.

ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಪುನಃ 2026ರ ಜುಲೈ 9ರಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಮಕವಳ್ಳಿ ಗ್ರಾಮದ ಸರ್ವೆ ನಂ. 119, ಹೊಸ ಸರ್ವೆ ನಂ. 151ರಲ್ಲಿ ಕೋರಮಂಡಲ್ ಶುಗರ್ಸ್ ಲಿಮಿಟೆಡ್‌ಗೆ ಮಂಜೂರು ಮಾಡಲಾಗಿರುವ 100 ಎಕರೆ ಜಮೀನನ್ನು, ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ನ ಸಮೂಹ ಕಂಪನಿಯಾದ ಮೆ/ಸ್ ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲು ಅನುಮತಿ ನೀಡುವಂತೆ ಕೋರಿದ್ದರು.

ಮತ್ತೊಮ್ಮೆ ಇದೇ ವಿಷಯವು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸೂಚನೆಯಂತೆ ಸಚಿವ ಸಂಪುಟಕ್ಕೆ ಮಂಡನೆಯಾಗಿದೆ. ಅಲ್ಲದೇ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರೂ ಸಹ 2026ರ ಸೆ.9ರಂದು ತಮ್ಮ ಟಿಪ್ಪಣಿಯಲ್ಲಿ, ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವಂತೆ ನಿರ್ದೇಶಿಸಿದ್ದರು. ಈ ಸಂಬಂಧ ಕಂದಾಯ ಇಲಾಖೆಯು ಸಚಿವ ಸಂಪುಟ ಸಭೆಗೆ ಕಡತ ಮಂಡಿಸಿದೆ. ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಕರಣವೂ ಸಹ ಚರ್ಚೆಗೆ ಬರಲಿದೆ ಎಂದು ತಿಳಿದು ಬಂದಿದೆ.

ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ (RD 44 LGY 2025) ರಹಸ್ಯ ಹಾಳೆಗಳು ದಿ ಫೈಲ್‌ಗೆ ಲಭ್ಯವಾಗಿದೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22(i) ರ ಪ್ರಕಾರ, ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ, ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಜಮೀನು ಮಂಜೂರು ಮಾಡಲಾದ ಸಂಸ್ಥೆಯು ಆ ಜಮೀನನ್ನು ಮಾರಾಟ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ. ಈ ನಿರ್ಬಂಧದ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಕಂದಾಯ ಇಲಾಖೆಯು ತನ್ನ ಹಂತದಲ್ಲೇ ಈ ಪ್ರಸ್ತಾವವನ್ನು ತಿರಸ್ಕರಿಸಲು ಅವಕಾಶವಿತ್ತು.

ಆದರೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ ಜಿ ಪರಮೇಶ್ವರ್ ಅವರ ಸೂಚನೆ ಮೇರೆಗೆ ಕಂದಾಯ ಇಲಾಖೆಯು ಈ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿರುವುದು ರಹಸ್ಯ ಹಾಳೆಗಳಿಂದ ತಿಳಿದು ಬಂದಿದೆ.

ಕಂದಾಯ ಇಲಾಖೆಯ ಪ್ರಸ್ತಾವದಲ್ಲೇನಿದೆ?

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿರುವ 100 ಎಕರೆ ಜಮೀನನ್ನು (ಸರ್ವೆ ನಂ. 119, ಹೊಸ ಸರ್ವೆ ನಂ. 151) ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ನ ಸಮೂಹ ಕಂಪನಿಯಾದ  ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲು ಅನುಮತಿ ನೀಡುವಂತೆ ಕೋರಮಂಡಲ್ ಶುಗರ್ಸ್ ಲಿಮಿಟೆಡ್ ಸಲ್ಲಿಸಿರುವ ಮನವಿ ಸಲ್ಲಿಸಿದೆ.

ಈ ಜಮೀನನ್ನು ಮೂಲತಃ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ (ICL) ಸಂಸ್ಥೆಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿತ್ತು. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಮಕವಳ್ಳಿ ಗ್ರಾಮದಲ್ಲಿರುವ ಸರ್ವೆ ನಂ. 119 (ಹೊಸ ಸರ್ವೆ ನಂ. 151)ರ 100 ಎಕರೆ ಜಮೀನನ್ನು ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಉದ್ದೇಶಕ್ಕಾಗಿ  ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ (ICL) ಸಂಸ್ಥೆಗೆ ಮಂಜೂರು ಮಾಡಲಾಗಿತ್ತು.

 

 

ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಉದ್ದೇಶಕ್ಕಾಗಿ 1997ರ ಆಗಸ್ಟ್‌ 26ರಂದು (ಸರ್ಕಾರಿ ಆದೇಶ ಸಂಖ್ಯೆ RD 26 LGY 1997ರ) ಈ ಜಮೀನನ್ನು ಮಂಜೂರು ಮಾಡಲಾಗಿತ್ತು. ಕೊರಮಂಡಲ್ ಶುಗರ್ಸ್ ಲಿಮಿಟೆಡ್ ಸಂಸ್ಥೆಯು ಈ ಜಮೀನನ್ನು ಮಾರಾಟ ಮಾಡುವ ಸಂಬಂಧ 2025ರ ಮೇ 5ರಂದು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಮೇಲ್ಕಂಡ ಮಂಜೂರಾದ ಜಮೀನನ್ನು ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ನ ಸಮೂಹ ಕಂಪನಿಯಾದ ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲು ಸರ್ಕಾರದ ಅನುಮತಿ ನೀಡುವಂತೆ ಕೋರಿರುವುದು ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

ಈ ಮನವಿ ಸಂಬಂಧ 2025ರ ಆಗಸ್ಟ್‌ 22ರಂದು ಮಂಡ್ಯ ಜಿಲ್ಲಾಧಿಕಾರಿಯೂ ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಸಂಸ್ಥೆಗೆ ಕೆ.ಆರ್. ಪೇಟೆ ತಾಲ್ಲೂಕಿನ ಮಕವಳ್ಳಿ ಗ್ರಾಮದ ಸರ್ವೆ ನಂ. 119ರಲ್ಲಿ 100 ಎಕರೆ ಜಮೀನನ್ನು ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿತ್ತು. ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4) ರ ಅಡಿಯಲ್ಲಿ ಈ ಜಮೀನನ್ನು ‘ಗೋಮಾಳ’ (ಜಾನುವಾರುಗಳ ಮೇಯಿಸುವ ಜಮೀನು) ವರ್ಗೀಕರಣದಿಂದ ತೆಗೆದು ಮಂಜೂರು ಮಾಡಲಾಗಿತ್ತು. ಸರ್ಕಾರವು (26.08.1997 ಮತ್ತು 27.09.1997) ಹೊರಡಿಸಿದ್ದ ಆದೇಶಗಳ ಮೂಲಕ ಎಕರೆಗೆ ₹28,920 ದರ ನಿಗದಿಪಡಿಸಿತ್ತು. ಪರಿವರ್ತನಾ ಶುಲ್ಕ ಹಾಗೂ ಅನ್ವಯವಾಗುವ ಇತರೆ ಶುಲ್ಕಗಳನ್ನು ವಿಧಿಸುವ ಮೂಲಕ ಈ ಮಂಜೂರಾತಿಯನ್ನು ಅನುಮೋದಿಸಿತ್ತು ಎಂದು ಮಂಡ್ಯ ಜಿಲ್ಲಾಧಿಕಾರಿಯು ಪ್ರಸ್ತಾವನೆಯಲ್ಲಿ ವಿವರಿಸಿದ್ದರು.

 

 

ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಸಂಸ್ಥೆಯು ಅವರಿಗೆ ಮಂಜೂರು ಮಾಡಲಾದ 100 ಎಕರೆ ಜಮೀನಿಗೆ ಸಂಬಂಧಿಸಿದಂತೆ ಮಾರುಕಟ್ಟೆ ಮೌಲ್ಯ, ಜಮೀನು ಪರಿವರ್ತನಾ ಶುಲ್ಕ ಮತ್ತು ಪೋಡಿ (ಸರ್ವೆ) ಶುಲ್ಕಗಳನ್ನು ಒಳಗೊಂಡಂತೆ ಒಟ್ಟು ₹50,72,055 ಮೊತ್ತವನ್ನು 1997ರಲ್ಲೇ (17.10.1997) ಸರ್ಕಾರದ ಖಾತೆಗೆ ಪಾವತಿಸಿತ್ತು. ಜಮೀನಿನ ಮೂಲ ಮಂಜೂರಾತಿದಾರರಾದ ಮೆ/ಸ್ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಸಂಸ್ಥೆಯು ಭಾರತೀಯ ಕಂಪನಿಗಳ ಕಾಯ್ದೆ 1913ರ ಸೆಕ್ಷನ್ 7ರ ಅಡಿಯಲ್ಲಿ 1946ರ ಫೆ.21ರಂದು ನೋಂದಾಯಿತವಾಗಿತ್ತು.

ಐಸಿಎಲ್ ಶುಗರ್ಸ್ ಲಿಮಿಟೆಡ್ ಸಂಸ್ಥೆಯು ಸಹ 1996ರಲ್ಲೇ (22.05.1996ರಂದು) ಭಾರತೀಯ ಕಂಪನಿಗಳ ಕಾಯ್ದೆ 1956ರ ಅಡಿಯಲ್ಲಿ ನೋಂದಾಯಿತವಾಗಿತ್ತು. ನಂತರ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು 1985ರಲ್ಲಿ ಹೊರಡಿಸಿದ್ದ (24.06.1985ರ ಅಧಿಸೂಚನೆ ಸಂಖ್ಯೆ G.S.R 507(E) ಹಾಗೂ 22.02.2007ರ SRN A10330207) ಅಧಿಸೂಚನೆ ಅನ್ವಯ ಐಸಿಎಲ್‌ ಶುಗರ್ಸ್ ಲಿಮಿಟೆಡ್ ಎಂಬ ಹೆಸರನ್ನು ಕೊರಮಂಡಲ್ ಶುಗರ್ಸ್ ಲಿಮಿಟೆಡ್ ಎಂದು ಬದಲಾಯಿಸಲಾಗಿತ್ತು.

ಕೃಷ್ಣರಾಜಪೇಟೆ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳು ಸಲ್ಲಿಸಿರುವ ವರದಿಯ ಪ್ರಕಾರ, ಸದರಿ ಕಂಪನಿಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಜಮೀನು ಮಂಜೂರಾತಿಗೆ ವಿಧಿಸಲಾಗಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ. ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಉದ್ದೇಶಕ್ಕಾಗಿ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ಗೆ ಸದರಿ ಜಮೀನನ್ನು ಮಂಜೂರು ಮಾಡಲಾಗಿತ್ತು.
ಇದೀಗ ಈ ಕಂಪನಿಯು ಈ ಜಮೀನನ್ನು ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ನ ಸಮೂಹ ಕಂಪನಿಯಾದ ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದೆ. ಖರೀದಿಸುವ ಕಂಪನಿಯೂ ಸಹ ಸಕ್ಕರೆ ಕಾರ್ಖಾನೆಯನ್ನು ನಡೆಸಲಿದೆ ಎಂದು ತಿಳಿಸಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳು ತಮ್ಮ ಪ್ರಸ್ತಾವನೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22(1)(i) ವು ಸ್ಪಷ್ಟವಾಗಿ, ಕೈಗಾರಿಕಾ ಸಂಸ್ಥೆಗೆ ಜಮೀನು ಮಂಜೂರು ಮಾಡಲಾಗಿದ್ದಲ್ಲಿ, ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಜಮೀನು ಮಂಜೂರಾದ ದಿನಾಂಕದಿಂದ 30 ವರ್ಷಗಳ ಅವಧಿಯೊಳಗೆ ಆ ಜಮೀನನ್ನು ಮಾರಾಟ, ಗುತ್ತಿಗೆ, ಅಡಮಾನ, ವರ್ಗಾವಣೆ, ದಾನ ಅಥವಾ ಯಾವುದೇ ರೀತಿಯಲ್ಲಿ ಪರಭಾರೆ ಮಾಡಬಾರದು ಎಂದು ನಿರ್ಬಂಧ ವಿಧಿಸಿದೆ.

ಕಂಪನಿಯು ಜಮೀನು ಮಂಜೂರಾತಿಯ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂಬುದು ಗಮನಕ್ಕೆ ಬಂದಿದೆ. ಸದರಿ ಜಮೀನನ್ನು ಕಂಪನಿಗೆ 28 ವರ್ಷಗಳ ಹಿಂದೆ ಮಂಜೂರು ಮಾಡಲಾಗಿತ್ತು. ಮಂಜೂರಾತಿಯ ಷರತ್ತುಗಳ ಪ್ರಕಾರ, ಜಮೀನನ್ನು ಪರಭಾರೆ ಮಾಡಲು ಅನುಮತಿ ಇರುವುದಿಲ್ಲ. ಕಂಪನಿಯು ಈ ಜಮೀನನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ಮಾರಾಟ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

 

 

ಕೋರಮಂಡಲ್ ಶುಗರ್ಸ್ ಲಿಮಿಟೆಡ್ ಸಂಸ್ಥೆಯು ಕೆ.ಆರ್. ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿರುವ ಸರ್ವೆ ನಂ. 119 (ಹೊಸ ಸರ್ವೆ ನಂ. 151)ರ 100 ಎಕರೆ ಜಮೀನನ್ನು ಮಾರಾಟ ಮಾಡಲು ಅನುಮತಿ ಕೋರುತ್ತಿದೆ. ಈ ಜಮೀನನ್ನು ಈ ಹಿಂದೆ (26.08.1997ರ ಸರ್ಕಾರಿ ಆದೇಶ ಸಂಖ್ಯೆ RD 26 LGY 97ರ) ಅನ್ವಯ ಅವರಿಗೆ ಮಂಜೂರು ಮಾಡಲಾಗಿತ್ತು.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22(1)(i) ರ ವ್ಯಾಪ್ತಿಗೆ ಬರುತ್ತದೆ. ಅದರಂತೆ, ಕೈಗಾರಿಕಾ ಸಂಸ್ಥೆಗಳಿಗೆ ಮಂಜೂರು ಮಾಡಲಾದ ಜಮೀನನ್ನು ಮಂಜೂರಾದ ದಿನಾಂಕದಿಂದ 30 ವರ್ಷಗಳ ಅವಧಿಯೊಳಗೆ ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಈ ಪ್ರಸ್ತಾವನೆಯನ್ನು ಸಲ್ಲಿಸಿರುವುದು ತಿಳಿದು ಬಂದಿದೆ.

 

 

ಈ ಪ್ರಸ್ತಾವನೆಯನ್ನು ಪರಿಗಣನೆಗಾಗಿ ಸಚಿವ ಸಂಪುಟದ ಸಭೆಯ ಮುಂದೆ ಮಂಡಿಸಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.

ಕರ್ನಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22(i) ರ ಪ್ರಕಾರ, ಜಮೀನು ಮಂಜೂರು ಮಾಡಲಾಗಿರುವ ಯಾವುದೇ ಸಂಸ್ಥೆಯು, ಜಮೀನು ಮಂಜೂರಾದ ದಿನಾಂಕದಿಂದ 30 ವರ್ಷಗಳ ಅವಧಿಯೊಳಗೆ, ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಸದರಿ ಜಮೀನನ್ನು ಮಾರಾಟ, ಗುತ್ತಿಗೆ, ಅಡಮಾನ, ವರ್ಗಾವಣೆ, ದಾನ ಅಥವಾ ಯಾವುದೇ ರೀತಿಯಲ್ಲಿ ಪರಭಾರೆ ಮಾಡಬಾರದು ಎಂದು ನಿಗದಿಪಡಿಸಲಾಗಿದೆ.

 

 

‘ಪ್ರಸ್ತಾವಿತ ಜಮೀನು ಮಂಜೂರುಗೊಂಡು 29 ವರ್ಷಗಳು ಕಳೆದಿರುವುದರಿಂದ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರ ಅಡಿಯಲ್ಲಿ ಒದಗಿಸಿರುವಂತೆ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ಷರತ್ತುಗಳು/ನಿಬಂಧನೆಗಳನ್ನು ಸಡಿಲಿಸಿ, ಸದರಿ ಜಮೀನಿನ ಮಾರಾಟಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಲುವಾಗಿ ಈ ವಿಷಯವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಕಂದಾಯ ಇಲಾಖೆ ನಿರ್ಧರಿಸಿದೆ.

ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಮಕವಳ್ಳಿ ಗ್ರಾಮದ ಸರ್ವೆ ನಂ. 119, ಹೊಸ ಸರ್ವೆ ನಂ. 151ರಲ್ಲಿ ಕೊರಮಂಡಲ್ ಶುಗರ್ಸ್ ಲಿಮಿಟೆಡ್‌ಗೆ 100 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಈ ಜಮೀನನ್ನು ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ನ ಸಮೂಹ ಕಂಪನಿಯಾದ ಮೆ/ಸ್ ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ.

ಕಾನೂನು ಇಲಾಖೆಯ ಅಭಿಪ್ರಾಯದಲ್ಲೇನಿದೆ?

ಈ ಸಂಬಂಧ ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಇಲಾಖೆಯು ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಅಲ್ಲದೇ ಹಲವು ನಿಯಮಗಳನ್ನು ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಕೈಗಾರಿಕಾ ಸಂಸ್ಥೆಗಳಿಗೆ ಜಮೀನು ಮಂಜೂರು ಮಾಡುವ ಸಂಬಂಧ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ನಿಯಮ 22ದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಿಯಮ 22(1)ರ ಪ್ರಕಾರ ಕೈಗಾರಿಕೆಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯಡಿ ನೋಂದಾಯಿತವಾಗಿರುವ ಕೈಗಾರಿಕಾ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ಜಮೀನನ್ನು ಮಂಜೂರು ಮಾಡಬಹುದು.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ನಿಯಮ 22ರ ಪ್ರಕಾರ ಕೈಗಾರಿಕೆಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1951 (ಕೇಂದ್ರ ಕಾಯ್ದೆ) ರ ಅಡಿಯಲ್ಲಿ ನೋಂದಾಯಿತ ಕೈಗಾರಿಕಾ ಘಟಕಗಳಿಗೆ ಹಾಗೂ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದಲ್ಲಿ ನೋಂದಾಯಿತ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳಿಗೆ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಜಮೀನು ಮಂಜೂರು ಮಾಡಬಹುದು.

ಜಮೀನು ಮಂಜೂರಾದ ದಿನಾಂಕದಿಂದ 30 ವರ್ಷಗಳ ಅವಧಿಯೊಳಗೆ, ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಮಂಜೂರಾತಿದಾರನು ಅಂತಹ ಜಮೀನನ್ನು ಮಾರಾಟ, ಗುತ್ತಿಗೆ, ಅಡಮಾನ, ವರ್ಗಾವಣೆ, ದಾನ ಅಥವಾ ಯಾವುದೇ ರೀತಿಯಲ್ಲಿ ಪರಭಾರೆ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

 

 

30 ವರ್ಷಗಳ ಅವಧಿಯ ನಂತರ ಮಂಜೂರಾತಿದಾರನು ಅಂತಹ ಜಮೀನನ್ನು ಮಾರಾಟ, ಗುತ್ತಿಗೆ, ಅಡಮಾನ, ವರ್ಗಾವಣೆ, ದಾನ ಅಥವಾ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ಉದ್ದೇಶಿಸಿದರೆ, ಕೈಗಾರಿಕಾ ಸಂಸ್ಥೆಯು ಮೊದಲು ರಾಜ್ಯ ಸರ್ಕಾರಕ್ಕೆ ಆ ಜಮೀನನ್ನು ಖರೀದಿಸುವ ಪ್ರಸ್ತಾವನೆ ನೀಡಬೇಕು. ರಾಜ್ಯ ಸರ್ಕಾರವು ಆ ಜಮೀನನ್ನು ಪಡೆಯಲು ಆಸಕ್ತಿ ತೋರಿಸದಿದ್ದಲ್ಲಿ, ಕೈಗಾರಿಕಾ ಸಂಸ್ಥೆಯು ಆ ಜಮೀನನ್ನು ಯಾವುದೇ ವ್ಯಕ್ತಿಗೆ ಮಾರಾಟ ಅಥವಾ ಇತರೆ ರೀತಿಯಲ್ಲಿ ಪರಭಾರೆ ಮಾಡಬಹುದು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಹೇಳಿದೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22(1)(i)ರ ಅನ್ವಯ, ಭೂ ಮಂಜೂರಾತಿ ಪಡೆದ ಸಂಸ್ಥೆಯು ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಮಂಜೂರಾತಿ ದಿನಾಂಕದಿಂದ 30 ವರ್ಷಗಳ ಅವಧಿಯೊಳಗೆ ಅಂತಹ ಜಮೀನನ್ನು ಮಾರಾಟ ಮಾಡುವಂತಿಲ್ಲ. ಅದೇ ರೀತಿ, ಭೂ ಮಂಜೂರಾತಿ ಪಡೆದ ಸಂಸ್ಥೆಯು 30 ವರ್ಷಗಳೊಳಗಾಗಿ ಮಂಜೂರಾದ ಜಮೀನನ್ನು ಮಾರಾಟ, ಗುತ್ತಿಗೆ, ಅಡಮಾನ, ವರ್ಗಾವಣೆ ಅಥವಾ ದಾನ ಮಾಡುವುದಕ್ಕೆ ಸರ್ಕಾರದ ಪೂರ್ವಾನುಮತಿ ಅಗತ್ಯವಿದೆ ಎಂದು ಹೇಳಿದೆ.

 

 

ಆದ್ದರಿಂದ, ಆಡಳಿತಾತ್ಮಕವಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಲ್ಲಿ…ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಹಣಕಾಸು ಇಲಾಖೆಯ ಅಭಿಪ್ರಾಯದಂತೆ ಮುಂದಿನ ಕ್ರಮ ಕೈಗೊಳ್ಳಲು ಅಭಿಪ್ರಾಯಪಟ್ಟಿದೆ.

‘ಹಣಕಾಸು ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳು ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿವೆ. ಪ್ರಸ್ತಾವಿತ ಜಮೀನನ್ನು ಸರ್ಕಾರದ ಪೂರ್ವಾನುಮತಿಯೊಂದಿಗೆ ಮಾರಾಟ ಮಾಡಲು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಹುದು,’ ಎಂದು ಕಾನೂನು ಇಲಾಖೆಯು ಅಭಿಪ್ರಾಯಪಟ್ಟಿದೆ.

ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯೂ ಸಹ ಸಹಮತಿ ವ್ಯಕ್ತಪಡಿಸಿದೆ.

ಅದರಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರ ಅಡಿಯಲ್ಲಿ ಸರ್ಕಾರಕ್ಕೆ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಿ, ಕೆಳಕಂಡ ಜಮೀನನ್ನು ಮಾರಾಟ ಮಾಡಲು ಮೆ/ಸ್ ಕೊರಮಂಡಲ್ ಶುಗರ್ಸ್ ಲಿಮಿಟೆಡ್‌ಗೆ ಅನುಮತಿ ನೀಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಕಂದಾಯ ಇಲಾಖೆಯು ಈ ವಿಷಯವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಿದೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22(i)**ರ ಪ್ರಕಾರ, ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ, ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಜಮೀನು ಮಂಜೂರು ಮಾಡಲಾದ ಸಂಸ್ಥೆಯು ಆ ಜಮೀನನ್ನು ಮಾರಾಟ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ. ಈ ನಿರ್ಬಂಧದ ಅವಧಿ ಇನ್ನೂ ಪೂರ್ಣಗೊಂಡಿಲ್ಲದಿರುವುದರಿಂದ, ಪ್ರಸ್ತಾವನೆಯನ್ನು ತಿರಸ್ಕರಿಸಲು ಅನುಮೋದನೆ ನೀಡುವುದು ಎಂದು ಕೋರಿದೆ.

 

 

ಅಥವಾ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರ ಅಡಿಯಲ್ಲಿ ಒದಗಿಸಿರುವಂತೆ, ಆ ನಿಯಮಗಳಲ್ಲಿನ ಷರತ್ತುಗಳು/ನಿಬಂಧನೆಗಳನ್ನು ಸಡಿಲಿಸಿ, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಮಕವಳ್ಳಿ ಗ್ರಾಮದ ಸರ್ವೆ ನಂ. 119 (ಹೊಸ ಸರ್ವೆ ನಂ. 151)ರಲ್ಲಿ ಇರುವ 100 ಎಕರೆ ಜಮೀನನ್ನು,  ಕೋರಮಂಡಲ್ ಶುಗರ್ಸ್ ಲಿಮಿಟೆಡ್ ಸಂಸ್ಥೆಯು ಶ್ರೀ ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ನ ಸಮೂಹ ಕಂಪನಿಯಾದ  ಹೇಮಗಿರಿ ಶುಗರ್ಸ್ & ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲು ಅನುಮತಿ ನೀಡುವುದು.

ಅಥವಾ ಸಚಿವ ಸಂಪುಟವು ಸೂಕ್ತವೆಂದು ಪರಿಗಣಿಸುವ ಯಾವುದೇ ಇತರೆ ನಿರ್ಧಾರವನ್ನು ಕೈಗೊಳ್ಳುವುದು ಎಂದು ಕಂದಾಯ ಇಲಾಖೆಯು ಸಚಿವ ಸಂಪುಟದ ಅನುಮೋದನೆ ಕೋರಿರುವುದು ತಿಳಿದು ಬಂದಿದೆ.

Hot this week

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...

ಗೃಹಲಕ್ಷ್ಮಿ; 2,660.26 ಕೋಟಿ ಬಿಡುಗಡೆಗೆ ಸಹಮತಿಸಿದ್ದ ಆರ್ಥಿಕ ಇಲಾಖೆಯಲ್ಲಿ ಕಡತವೇ ಲಭ್ಯವಿಲ್ಲ, ಮುಚ್ಚಿಡಲಾಗಿದೆಯೇ, ನಾಪತ್ತೆ ಮಾಡಲಾಗಿದೆಯೇ?

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ...
Please Scan to make Your Contribution

Topics

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...

ಗೃಹಲಕ್ಷ್ಮಿ; 2,660.26 ಕೋಟಿ ಬಿಡುಗಡೆಗೆ ಸಹಮತಿಸಿದ್ದ ಆರ್ಥಿಕ ಇಲಾಖೆಯಲ್ಲಿ ಕಡತವೇ ಲಭ್ಯವಿಲ್ಲ, ಮುಚ್ಚಿಡಲಾಗಿದೆಯೇ, ನಾಪತ್ತೆ ಮಾಡಲಾಗಿದೆಯೇ?

ಬೆಂಗಳೂರು;  2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ...

Related Articles

Popular Categories

error: Content is protected !!