ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕರೆದಿರುವ 2 ಪ್ಯಾಕೇಜ್‌ಗಳ ಟೆಂಡರ್‍ಗಳಿಗೆ ಸಂಬಂಧಿಸಿದಂತೆ ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿದ ಬೆನ್ನಲ್ಲೇ ಇದೀಗ ಸರ್ಕಾರವು ಈ ಟೆಂಡರ್‍ಗಳನ್ನು ಪರಿಶೀಲನೆ ಮಾಡಲು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಸರ್ಕಾರ ರಚಿಸಿರುವ ಈ ಸಮಿತಿ ಬಗ್ಗೆ ಮತ್ತು ಸಮಿತಿಗೆ ನೀಡಿರುವ ಗಡುವಿನ ಬಗ್ಗೆಯೂ ಸಹ ಆಕ್ಷೇಪಗಳು ವ್ಯಕ್ತವಾಗಿವೆ.
ವಿಶೇಷವೆಂದರೇ ಇದೇ 2 ಪ್ಯಾಕೇಜ್‌ಗಳ ಟೆಂಡರ್‍ಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯುವ ಮುನ್ನ ಆರ್ಥಿಕ ಇಲಾಖೆಯು ಉಮಾ ಮಹದೇವನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಸೂಚಿಸಿತ್ತು.

ಈ ಸಮಿತಿಯಲ್ಲಿ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ವೆಚ್ಚ) ಎಸ್ ಎಸ್ ನಕುಲ್, ಐಐಎಂನ ವೆಂಕಟೇಶ್ ಪಂಚಪಗೇಸನ್, ಜಿಬಿಯ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಖುದ್ದು ಆರ್ಥಿಕ ಇಲಾಖೆಯೇ ಪಟ್ಟಿಯನ್ನು ಒದಗಿಸಿತ್ತು. ಅಲ್ಲದೆ ಈ ಟೆಂಡರ್‍ಗಳನ್ನು ಪರಿಶೀಲಿಸಿ 15 ದಿನದೊಳಗೆ ವರದಿಯನ್ನು ನೀಡಬೇಕು ಎಂದು ನಿರ್ದೇಶಿಸಿತ್ತು. ಆದರೆ ನಗರಾಭಿವೃದ್ದಿ ಇಲಾಖೆಯು ಆರ್ಥಿಕ ಇಲಾಖೆಯು ನೀಡಿದ್ದ ಪಟ್ಟಿಯಂತೆ ಸಮಿತಿಯನ್ನು ರಚಿಸಲೇ ಇಲ್ಲ.
ಆದರೀಗ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ಅವಧಿಯಲ್ಲೇ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೆಜ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಈ ಸಮಿತಿಯಲ್ಲಿ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್ (ಬಿ ಅಂಡ್ ಆರ್), ಎಂ ಮಹೇಶ್ವರರಾವ್ ಇದ್ದಾರೆ. ಆರ್ಥಿಕ ಇಲಾಖೆಯು ಸೂಚಿಸಿದ್ದ ಮೊದಲ ಪಟ್ಟಿಯಲ್ಲಿ ಐಐಎಂನ ವೆಂಕಟೇಶ್ ಪಂಚಪಗೇಸನ್ ಅವರನ್ನು ನಗರಾಭಿವೃದ್ಧಿ ಇಲಾಖೆಯು ಪರಿಗಣಿಸಿಯೇ ಇಲ್ಲ.

ಟೆಂಡರ್‍ಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ 7 ದಿನದೊಳಗೆ ವರದಿ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಸೂಚಿಸಿದೆ.
7 ದಿನದಲ್ಲಿ ವರದಿ ನೀಡಲು ಇದೇನು ಸಾಮಾನ್ಯ ಟೆಂಡರ್ ಅಲ್ಲ
ಬೆಂಗಳೂರು ಉತ್ತರ ಮತ್ತು ದಕ್ಷಿಣ ಪ್ಯಾಕೇಜ್‌ನ ಟೆಂಡರ್ ಪರಿಶೀಲನೆ ಮಾಡಿ 7 ದಿನಗಳಲ್ಲಿ ವರದಿ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಿದೆ. ಆದರೆ ಇದು 39 ಸಾವಿರ ಕೋಟಿಗೂ ಅತ್ಯಧಿಕ ಮೊತ್ತವನ್ನು ಹೊಂದಿರುವ ಟೆಂಡರ್ ಆಗಿದೆ. ಹೀಗಾಗಿ ಈ ಎರಡೂ ಪ್ಯಾಕೇಜ್‌ಗಳ ಟೆಂಡರ್‍ಗಳ ಕಡತವನ್ನು ಅಧ್ಯಯನ, ಇದರ ಸಾಧಕ ಬಾಧಕ, ಭವಿಷ್ಯದ ದಿನಗಳಲ್ಲಿ ಇದರಿಂದಾಗುವ ಆರ್ಥಿಕ ಪರಿಣಾಮಗಳ ಕುರಿತು ಚರ್ಚಿಸಿ ವರದಿ ನೀಡಲು ಕನಿಷ್ಟ 30 ದಿನಗಳಾದರೂ ಅವಶ್ಯಕತೆ ಇದೆ. ಆದರೂ ಸಹ ತುರ್ತಾಗಿ ಅದೂ ಕೇವಲ 7 ದಿನದಲ್ಲೇ ವರದಿ ನೀಡಬೇಕು ಎಂದು ಒತ್ತಡ ಹೇರಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕರೆಯಲಾಗಿರುವ ಟೆಂಡರ್‌ಗಳಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಸೇರಿದಂತೆ ಹಲವು ದೂರುಗಳು ಮನವಿಗಳು ಸಲ್ಲಿಕೆಯಾಗಿವೆ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಎಲ್ಲಾ ರೀತಿಯ ತ್ಯಾಜ್ಯವನ್ನು ವೈಜ್ಙಾನಿಕ ಸಂಸ್ಕರಿಸಿ ವಿಲೇವಾರಿ ಮಾಡುವ ಸಂಬAಧ ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಯನ್ನು ತುರ್ತಾಗಿ ಅನುಷ್ಠಾನಗೊಳಿಸಲು ಜಿಬಿಎಯು ನಿರ್ಧರಿಸಿತ್ತು. ಜಿಬಿಎನ ಅಧಿಕಾರಿಗಳು ಹೈದರಬಾದ್ ಮೂಲದ ರಾಮ್ಕಿ ಸಂಸ್ಥೆಗೆ ನೀಡಲು ಈ ಹಿಂದೆಯೆ ಅನೌಪಚಾರಿಕವಾಗಿ ತೀರ್ಮಾನಿಸಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು.
ಈ ಯೋಜನೆಗೆ ಸಮಗ್ರ ಯೋಜನಾ ವರದಿ ಮತ್ತು ಟಿಪ್ಪಿಂಗ್ ದರಗಳನ್ನ ರೈಟ್ಸ್ ಸಂಸ್ಥೆಯಿಂದ ತಯಾರಿಸಲಾಗಿತ್ತು. ಇದರ ಸಮಗ್ರ ಯೋಜನಾ ವರದಿ ಮತ್ತು ಟಿಪ್ಪಿಂಗ್ ದರಗಳನ್ನು ಬಿಎಸ್‌ಡಬ್ಲ್ಯೂಎಂಎಲ್ ಸಂಸ್ಥೆಯ ತಾಂತ್ರಿಕ ಸಮಿತಿ, ಉಪ ಸಮಿತಿಗಳು ಪರಿಶೀಲಿಸಿದ್ದವು. ಹಾಗೆಯೇ 13ನೇ ಮಂಡಳಿ ಸಭೆ ಮುಂದೆ ಮಂಡಿಸಿ ಅನುಮೋದನೆ ಪಡೆದಿತ್ತು.
13 ನೇ ಬಿಎಸ್‌ಡಬ್ಲ್ಯೂಎಂಎಲ್ ಸಭೆಯಲ್ಲಿ ಅನುಮೋದಿತ ಸಮಗ್ರ ಯೋಜನಾ ವರದಿ ಪ್ರಕಾರ ಟಿಪ್ಪಿಂಗ್ ಶುಲ್ಕ ಪ್ರತಿ ಟನ್‌ಗೆ 2,998 ರು ನಿಗದಿಪಡಿಸಿತ್ತು. (ಪ್ರಾಥಮಿಕ ಸಂಗ್ರಹಣೆ & ಸಾಗಾಣಿಕೆಗೆ ಅಂದಾಜು 1,600 ರು ದ್ವೀತಿಯ ಹಂತದ ಸಾಗಾಣಿಕೆಗೆ 743 ರು ಹಾಗೂ ಸಂಸ್ಕರಣೆ & ವಿಲೇವಾರಿಗೆ 655 ರು ಎಂದು ನಿಗದಿಪಡಿಸಿತ್ತು.
ಮೊದಲ ಬಾರಿ ಅನರ್ಹ- ಎರಡನೇ ಬಾರಿ ಅರ್ಹ
1ನೇ ಕರೆಯ ಟೆಂಡರ್‌ನಲ್ಲಿ ಯಾವುದೇ ಬಿಡ್‌ದಾರರು ಭಾಗವಹಿಸಿರಲಿಲ್ಲ. 2ನೇ ಕರೆಯಲ್ಲಿ ಉತ್ತರ ಪ್ಯಾಕೇಜ್‌ಗೆ 3 ಬಿಡ್‌ದಾರರಾದ ಪಿಎಲ್‌ಆರ್ ಪ್ರಾಜೆಕ್ಟ್ಸ್, ದೆಹಲಿಯ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್, ಬಿಆರ್‍ಐಜೆ ಕಂಪನಿಗಳು ಭಾಗವಹಿಸಿದ್ದವು. ಅದರೆ ಈ ಎಲ್ಲಾ ಬಿಡ್‌ದಾರರು ತಾಂತ್ರಿಕವಾಗಿ ಅನರ್ಹಗೊಂಡಿದ್ದವು. ಹೀಗಾಗಿ ಮತ್ತೊಮ್ಮೆ ಅಂದರೇ 3ನೇ ಬಾರಿ ಟೆಂಡರ್ ಆಹ್ವಾನಿಸಿತ್ತು. ವಿಶೇಷವೆಂದರೇ ಎರಡನೇ ಟೆಂಡರ್‍ನಲ್ಲಿ ತಾಂತ್ರಿಕವಾಗಿ ಅನರ್ಹಗೊಂಡಿದ್ದ ಬಿಡ್‌ದಾರರು ಮೂರನೇ ಟೆಂಡರ್‍ನಲ್ಲಿ ತಾಂತ್ರಿಕವಾಗಿ ಅರ್ಹತೆ ಗಳಿಸಿದ್ದರು.
ಆರ್ಥಿಕ ಇಲಾಖೆ ಅಧಿಕಾರವನ್ನು ಚಲಾಯಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್
ಯಾವುದೇ ಟೆಂಡರ್ ಡಾಕ್ಯುಮೆಂಟ್‌ನ ನಿಯಮಾವಳಿಗಳನ್ನು ಬದಲಾಯಿಸುವ ಅಥವಾ ಸಡಿಲಗೊಳಿಸುವುದು ಆರ್ಥಿಕ ಇಲಾಖೆಯ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಆದರೂ ಟೆಂಡರ್‌ನ 2ನೇ ಕರೆಯಲ್ಲಿ ತಾಂತ್ರಿಕವಾಗಿ ಅನರ್ಹಗೊಂಡಿದ್ದ ಬಿಡ್ಡರ್‌ಗಳನ್ನು ತಾಂತ್ರಿಕವಾಗಿ ಅರ್ಹಗೊಳಿಸುವ ಉದ್ದೇಶದಿಂದ ಬಿಎಸ್‌ಡಬ್ಲೂಎಂಎಲ್ ಸಂಸ್ಥೆಯು ಟೆಂಡರ್ ದಾಖಲೆಯ ಹಲವು ನಿಯಮಗಳನ್ನು ಸಡಿಲಗೊಳಿಸಿತ್ತು. ಇದು ಆರ್ಥಿಕ ಇಲಾಖೆಯ ಅಧಿಕಾರವನ್ನು ಬಿಎಸ್‌ಡಬ್ಲ್ಯೂಎಂಎಲ್ ಅಧಿಕಾರಿಗಳೇ ಚಲಾಯಿಸಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿತ್ತು.
ಹೀಗೆ, ತಾಂತ್ರಿಕವಾಗಿ ಅರ್ಹಗೊಂಡ ಬಿಡ್‌ದಾರರುಗಳ ಪೈಕಿ ಡೆಲ್ಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು ಸಂಪೂರ್ಣವಾಗಿ ರಾಮ್ಕಿ ಒಡೆತನದ ಸಂಸ್ಥೆಯಾಗಿತ್ತು. ಮತ್ತು ಇದೇ ಸಂಸ್ಥೆಯು ಎಲ್ 1 ಬಿಡ್‌ದಾರರಾಗಿತ್ತು. ಈ ಕಾಮಗಾರಿಗಳನ್ನು ರಾಮ್ಕಿ ಸಂಸ್ಥೆಗೆ ನೀಡಲು ಪೂರ್ವ ನಿಯೋಜಿಸಲಾಗಿರುತ್ತದೆ ಎಂದು ಈ ಹಿಂದೆ ಆಡಳಿತ ಪಕ್ಷದ (ಬಿಬಿಎಂಪಿ) ನಾಯಕರಾಗಿದ್ದ ಎನ್ ಆರ್ ರಮೇಶ್ ಅವರು 2024ರ ಜುಲೈ 16ರಂದೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಗೆ ದೂರು ನೀಡಿದ್ದರು. ಹಾಗೂ ಈ ಸಂಬಂಧ ಹಲವಾರು ದೂರುಗಳು ಸಕ್ಷಮ ಪ್ರಾಧಿಕಾರಗಳಲ್ಲಿ ಸಲ್ಲಿಕೆಯಾಗಿದ್ದವು. ಆದರೂ ಜಿಬಿಎ ಮತ್ತು ಬಿಎಸ್‌ಡಬ್ಲ್ಯೂಎಂಎಲ್‌ನ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ.
ಡಿಬಾರ್ ಆಗಿದ್ದ ರಾಮ್ಕಿ
ಈ ಹಿಂದೆ ರಾಮ್ಕಿ ಸಂಸ್ಥೆಯು ಮಾವಳ್ಳಿಪುರದಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ತೃಪ್ತಿಕರವಾಗಿ ನಿರ್ವಹಿಸದ ಕಾರಣ ಬಿಬಿಎಂಪಿಯಿಂದ ಕಪ್ಪು ಪಟ್ಟಿಗೆ ಸೇರಿಸಿತ್ತು. ಆಗ ಉಚ್ಛ ನ್ಯಾಯಾಲಯವು ರಾಮ್ಕಿ ಸಂಸ್ಥೆಗೆ ಯಾವುದೇ ಪಾವತಿಗಳನ್ನು ಮಾಡಬಾರದು ಎಂದು ಸರ್ಕಾರಕ್ಕೆ ಸೂಚಿಸಿತ್ತು. ಅಲ್ಲದೇ ರಾಮ್ಕಿ ಸಂಸ್ಥೆಯು ವಿಶ್ವ ಬ್ಯಾಂಕ್‌ನಿಂದಲೂ ಸಹ ಡಿಬಾರ್ ಆಗಿತ್ತು.
ರಾಮ್ಕಿ ನಿರ್ವಹಿಸುತ್ತಿದ್ದ ಮಾವಳ್ಳಿಪುರ ಘನತ್ಯಾಜ್ಯ ನಿರ್ವಹಣೆಯ ಕುರಿತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಸಹ ಆಕ್ಷೇಪ ಎತ್ತಿತ್ತು.
ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಪ್ರಾಯದಲ್ಲೇನಿದೆ?
2007ರಿಂದಲೂ ಬೆಂಗಳೂರಿನಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಘನ ತ್ಯಾಜ್ಯದ ಸುಮಾರು 1000 ಟನ್‌ನಷ್ಟಿದೆ. (ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯದ ಸುಮಾರು ಮೂರನೇ ಒಂದು ಭಾಗ) ಇದನ್ನು ರಾಮ್ಕಿ ನಿರ್ವಹಿಸುತ್ತಿರುವ 48 ಎಕರೆಗಳ ‘ವೈಜ್ಞಾನಿಕ ಲ್ಯಾಂಡ್‌ಫಿಲ್’ ಪ್ರದೇಶಕ್ಕೆ ಸಾಗಿಸಲಾಗುತ್ತಿದೆ. ಈ ಪ್ರದೇಶವು ಹಿಂದೆ ಗ್ರಾಮದ ಸಾಮೂಹಿಕ ಭೂಮಿ ಹಾಗೂ ಜಾನುವಾರುಗಳ ಮೇಯುವ ಪ್ರದೇಶವಾಗಿತ್ತು. ವಿವಿಧ ಅನುಮತಿ ಮತ್ತು ಷರತ್ತುಗಳ ಆಧಾರದ ಮೇಲೆ ಈ ತ್ಯಾಜ್ಯವನ್ನು ಸಂಸ್ಕರಿಸಬೇಕಾಗಿದ್ದ ರಾಮ್ಕಿ , ಆ ಷರತ್ತುಗಳು ಮತ್ತು ನಿಯಮಾವಳಿಗಳ ಯಾವುದನ್ನೂ ಸಮಗ್ರವಾಗಿ ಪಾಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿತ್ತು.
ಬದಲಿಗೆ ಅದು ಕೇವಲ ತ್ಯಾಜ್ಯವನ್ನು ಸುರಿಯಲು 40 ಅಡಿಗಿಂತಲೂ ಹೆಚ್ಚು ಆಳವಾದ ಮತ್ತು ಹಲವಾರು ಎಕರೆಗಳಷ್ಟು ವ್ಯಾಪಿಸಿರುವ ಬೃಹತ್ ಗುಂಡಿಗಳನ್ನು ತೋಡುವುದಕ್ಕೆ ಮಾತ್ರ ಮುಂದಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಸಂಸ್ಕರಿಸದ ತ್ಯಾಜ್ಯವು ಈ ಗುಂಡಿಗಳ ಮೇಲೆ ಬೃಹತ್ ಗುಡ್ಡಗಳ ರೂಪದಲ್ಲಿ ರಾಶಿಯಾಗಿ ಕೂಡಿದೆ. ರಾಮ್ಕಿ ಮಾಡುತ್ತಿರುವುದು ಯಾವುದೇ ದಾನಧರ್ಮದ ಕಾರ್ಯವಲ್ಲ. ನಗರದಿಂದ ಬರುವ ಪ್ರತಿಯೊಂದು ತ್ಯಾಜ್ಯ ಸಾಗಣೆ ಟ್ರಕ್‌ಗೆ ಸುಮಾರು 300 ರು ದರದಲ್ಲಿ ಕಂಪನಿಗೆ ಪಾವತಿ ಮಾಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಈ ಆದಾಯವು ಕೋಟ್ಯಂತರ ರೂಪಾಯಿಗಳಿಗೆ ತಲುಪುತ್ತದೆ. ಹೆಚ್ಚು ತ್ಯಾಜ್ಯ ಸ್ವೀಕರಿಸಿದಷ್ಟೂ ರಾಮ್ಕಿಗೆ ಹೆಚ್ಚು ಹಣ ದೊರೆಯುತ್ತದೆ ಎಂದು ಅಭಿಪ್ರಾಯಿಸಿತ್ತು.
ಆದರೆ, ಈ ಆದಾಯದ ಯಾವುದೇ ಭಾಗವನ್ನು ಘಟಕದ ನಿರ್ವಹಣೆ ಮತ್ತು ಪರಿಸರ ಸಂರಕ್ಷಣಾ ಕ್ರಮಗಳಿಗೆ ಹೂಡಿಕೆ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ಈ ಹಿನ್ನೆಲೆಯಲ್ಲಿ, ರಾಮ್ಕಿ ಈ ಆದಾಯವನ್ನು ತನ್ನ ಇತರೆ ಉದ್ಯಮಗಳಿಗೆ ವರ್ಗಾಯಿಸಿರಬಹುದೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವಾಗಿದೆ. ಇತ್ತೀಚೆಗೆ, ಬೆಂಗಳೂರಿನಲ್ಲಿ ರಾಮ್ಕಿ ಸಂಸ್ಥೆಯು ಒಂದು ಬೃಹತ್ ಉನ್ನತ ಮಟ್ಟದ ರಿಯಲ್ ಎಸ್ಟೇಟ್ ಯೋಜನೆಯನ್ನು ಆರಂಭಿಸಿದ್ದು, ಅದಕ್ಕಾಗಿ ದೇಶವ್ಯಾಪಿ ಪ್ರಮುಖ ದಿನಪತ್ರಿಕೆಗಳಲ್ಲಿ ಮೊದಲ ಪುಟದ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಭಾರೀ ಪ್ರಚಾರ ನಡೆಸಿದೆ ಎಂದು ಅಭಿಪ್ರಾಯದಲ್ಲಿ ವಿವರಿಸಿತ್ತು.
ನಡೆದಿದೆಯೇ ಬಹುದೊಡ್ಡ ಭ್ರಷ್ಟಾಚಾರ?
‘ಇಷ್ಠೆಲ್ಲಾ ನಕಾರಾತ್ಮಕ ಹಿನ್ನೆಲೆಯುಳ್ಳ ಹೈದರಬಾದ್ ಮೂಲದ ರಾಮ್ಕಿ ಸಂಸ್ಥೆಗೆ ಸಂಪೂರ್ಣ ಬೆಂಗಳೂರು ನಗರದ ಘನತ್ಯಾಜ್ಯ ನಿರ್ವಹಣೆಯನ್ನು ವಹಿಸಲು ಜಿಬಿಎ/ಬಿಎಸ್‌ಡಬ್ಲೂö್ಯಎಂಎಲ್ ಅಧಿಕಾರಿಗಳು ಉತ್ಸುಕರಾಗಿರುವುದನ್ನು ಗಮನಿಸಿದರೆ ಬಹುದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿರುವುದು ತಿಳಿಯುತ್ತದೆ,’ ಎನ್ನುತ್ತಾರೆ ಗುತ್ತಿಗೆದಾರರೊಬ್ಬರು.
ಆರ್ಥಿಕ ಇಲಾಖೆಯು ಸಹ ನಿಗದಿತ ಟಿಪ್ಪಿಂಗ್ ಶುಲ್ಕದ ಕುರಿತು ಹಲವಾರು ಆಕ್ಷೇಪಣೆಗಳನ್ನು ಎತ್ತಿತ್ತು. ಸಮಗ್ರ ಯೋಜನಾ ವರದಿಯನ್ನು ತಯಾರಿಸಿದ ಯೋಜನಾ ಸಮಾಲೋಚಕರ ಮೇಲಾಗಲಿ, ಟಿಪ್ಪಿಂಗ್ ಶುಲ್ಕವನ್ನು ಪರಿಶೀಲಿಸಿ ಅನುಮೋದಿಸಿದ ತಾಂತ್ರಿಕ ಸಮಿತಿ ಸದಸ್ಯರುಗಳ ಮೇಲಾಗಲಿ, ಬಿಎಸ್‌ಡಬ್ಲೂಎಂಎಲ್ ಸಂಸ್ಥೆಯ ಅಧಿಕಾರಿಗಳ ಮೇಲಾಗಲಿ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿಲ್ಲ. ಈಗಾಗಲೇ ಸದರಿ ಟೆಂಡರ್‌ಗಳನ್ನು ರಾಮ್ಕಿ ಒಡೆತನದ ಸಂಸ್ಥೆಗೆ ನೀಡಲು ಪೂರ್ವ ಸಿದ್ದತೆಗಳನ್ನು ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ರೈಟ್ಸ್ ಅಂದಾಜಿಸಿದ್ದನ್ನು ಬದಿಗೊತ್ತಿದ್ದೇಕೆ, ಬಿಸಿಜಿಗೆ ಮಣೆ ಹಾಕಿದ್ದೇಕೆ?
ಭಾರತ ಸರ್ಕಾರದ ರೈಲ್ವೇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಟ್ಸ್ ಲಿಮಿಟೆಡ್ ಸಂಸ್ಥೆಯು ಈಗಾಗಲೇ ಟಿಪ್ಪಿಂಗ್ ಶುಲ್ಕವನ್ನು ಅಂದಾಜಿಸಿತ್ತು. ಕೆಟಿಪಿಪಿ ನಿಯಮಗಳ 2000ರ ಅನ್ವಯ ಈ ಸಂಸ್ಥೆಯನ್ನು ಬಿಎಸ್‌ಡಬ್ಲೂಎಂಎಲ್ ಸಂಸ್ಥೆಗೆ ಸೇವೆಗಳನ್ನು ಒದಗಿಸಲು ಯೋಜನಾ ನಿರ್ವಹಣಾ ಸಲಹೆಗಾರರಾಗಿ ಆಯ್ಕೆ ಮಾಡಿತ್ತು. ಅಲ್ಲದೆ 2023ರ ಮೇ 19ರಂದು ಕೆಟಿಪಿಪಿ ನಿಯಮಗಳು-೨೦೦೦ ರಂತೆ ಕಾರ್ಯಾದೇಶ ನೀಡಿತ್ತು.
ರೈಟ್ಸ್ ಲಿಮಿಟೆಡ್ ಪ್ರತಿ ಟನ್‌ಗೆ 1,398 ರು ಟಿಪ್ಪಿಂಗ್ ಶುಲ್ಕವನ್ನು ಅಂದಾಜಿಸಿತ್ತು. 2,151 ರು ಗೆ ಪರಿಷ್ಕರಿಸಿತ್ತು. ಅಂದರೆ ಮೂಲ ಅಂದಾಜಿಗಿಂತ ಶೇ. 53.87ರಷ್ಟು ಹೆಚ್ಚುವರಿಯಿಂದ ಕೂಡಿತ್ತು. ಇದಲ್ಲದೆ ಬಿಎಸ್‌ಡಬ್ಲೂಎಂಎಲ್ ಮಂಡಳಿಯು ಉತ್ತರ ಪ್ಯಾಕೇಜ್‌ನ ಟಿಪ್ಪಿಂಗ್ ಶುಲ್ಕವನ್ನು 2,565 ರು ಪ್ರತಿ ಟನ್‌ಗೆ ಅಂದರೆ ಶೇ. 834.47 ಹೆಚ್ಚುವರಿ ಮತ್ತು ದಕ್ಷಿಣ ಪ್ಯಾಕೇಜ್ ಟಿಪ್ಪಿಂಗ್ ಶುಲ್ಕ 2,151 ರು ಪ್ರತಿ ಟನ್‌ಗೆ ಅನುಮೋದಿಸಿತ್ತು. ಈ ಟಿಪ್ಪಿಂಗ್ ಶುಲ್ಕಗಳನ್ನು ರೈಟ್ಸ್ ಲಿಮಿಟೆಡ್ ಅಂದಾಜು ಮಾಡಿದ ಟಿಪ್ಪಿಂಗ್ ಶುಲ್ಕಕ್ಕೆ ಹೋಲಿಸಿದಾಗ ಉತ್ತರ ಪ್ಯಾಕೇಜ್‌ನ ಟಿಪ್ಪಿಂಗ್ ಶುಲ್ಕವು 83.47ರಷ್ಟು ಮತ್ತು ದಕ್ಷಿಣ ಪ್ಯಾಕೇಜ್‌ನ ಟಿಪ್ಪಿಂಗ್ ಶುಲ್ಕವು ಶೇ. 53ರಷ್ಟು ಹೆಚ್ಚುವರಿಯಿಂದ ಕೂಡಿದೆ.
ಈಗಾಗಲೇ ರೈಟ್ಸ್ ಸಂಸ್ಥೆಯು ಸಿದ್ಧಪಡಿಸಿದ್ದ ಡಿಪಿಆರ್ (ಟಿಪ್ಪಿಂಗ್ ಶುಲ್ಕ ಪ್ರತಿ ಟನ್‌ಗೆ) ಸರಿಯಿಲ್ಲದಿದ್ದರೆ ಡಿಪಿಆರ್ ಅನ್ನು ರದ್ದುಗೊಳಿಸಿ, ಕೆಟಿಪಿಪಿ ನಿಯಮಾವಳಿಗಳಂತೆ ಹೊಸದಾಗಿ ಟೆಂಡರ್ ಕರೆದು ಯೋಜನಾ ಸಮಾಲೋಚಕರನ್ನು ನೇಮಿಸಿಕೊಂಡು ಡಿಪಿಆರ್ (ಟಿಪ್ಪಿಂಗ್ ಶುಲ್ಕ ಪ್ರತಿ ಟನ್‌ಗೆ) ತಯಾರಿಸಬೇಕಿತ್ತು. ಆದರೆ ಬಿಬಿಎಂಪಿಗೆ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿದ್ದ ಬಿಸಿಜಿ ಕನ್ಸಲ್ಟೆಂಟ್ ಅನ್ನು ರೈಟ್ಸ್ ಸಂಸ್ಥೆಯು ಸಿದ್ಧಪಡಿಸಿದ್ದ ಡಿಪಿಆರ್ (ಟಿಪ್ಪಿಂಗ್ ಶುಲ್ಕ ಪ್ರತಿ ಟನ್‌ಗೆ) ಅನ್ನು ಪರಿಶೀಲಿಸಲು ನೇರವಾಗಿ ಆಯ್ಕೆ ಮಾಡಿತ್ತು. ನಂತರ ಬಿಸಿಜಿ ಕನ್ಸಲ್ಟೆಂಟ್ ಅಭಿಪ್ರಾಯಿಸಿದಂತೆ ಟಿಪ್ಪಿಂಗ್ ಶುಲ್ಕವನ್ನು ಅಳವಡಿಸಿಕೊಳ್ಳುವ ಮೂಲಕ ಕೆಟಿಪಿಪಿ ನಿಯಮಗಳು-2000 (ಅಧ್ಯಾಯ VII A- Consultance Services) ಉಲ್ಲಂಘಿಸಿತ್ತು. ಹೀಗಾಗಿ ಸಂಪೂರ್ಣ ಟೆಂಡರ್ ಪ್ರಕಿಯೆಯೇ ಅಮಾನ್ಯವಾಗಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.
ಪಿಡಬ್ಯೂಡಿ (ಹಣಕಾಸು ಕೋಶ) 2002ರ ಡಿಸೆಂಬರ್ 3ರಂದು ಹೊರಡಿಸಿದ್ದ ಮಾರ್ಗಸೂಚಿಗಳ ಪ್ರಕಾರ ಕೇವಲ ಕಡಿಮೆ ಬೆಲೆ ಪಡೆಯುವ ಉದ್ದೇಶದಿಂದ ಮಾತುಕತೆ (Negotiations) ನಡೆಸುವುದು ಸಾಮಾನ್ಯವಾಗಿ ಸೂಕ್ತವಲ್ಲ. ಇಂತಹ ಕ್ರಮವನ್ನು ಕೇವಲ ಅಪರೂಪದ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅನುಸರಿಸಬಹುದು. ಉದಾಹರಣೆಗೆ, ಸ್ಪರ್ಧೆಯ ಕೊರತೆ (ಮೂರುಕ್ಕಿಂತ ಕಡಿಮೆ ಟೆಂಡರ್‌ಗಳು ಬಂದಿರುವುದು), ಒಂದೇ ಒಂದು ಟೆಂಡರ್ ಬಂದಿರುವುದು, ಟೆಂಡರ್‌ದಾರರ ನಡುವೆ ಸಂಚು (Collusion) ಇರುವ ಅನುಮಾನ ಇರುವುದು, ಅಥವಾ ತಾಂತ್ರಿಕವಾಗಿ ಅರ್ಹ ಮತ್ತು ಸ್ಪಂದನಶೀಲವಾಗಿರುವ ಕನಿಷ್ಠ ದರದ ಟೆಂಡರ್ (Lowest Evaluated Responsive Bid) ಅಂದಾಜು ವೆಚ್ಚಕ್ಕಿಂತ ಗಣನೀಯವಾಗಿ ಹೆಚ್ಚಾಗಿರುವುದು. ಅಂತಹ ಸಂದರ್ಭಗಳಲ್ಲಿಯೂ ಸಹ, ಮೊದಲ ಆದ್ಯತೆಯ ಕ್ರಮವೆಂದರೆ ಎಲ್ಲಾ ಟೆಂಡರ್‌ಗಳನ್ನು ತಿರಸ್ಕರಿಸಿ (Reject) ಹೊಸದಾಗಿ ಟೆಂಡರ್‌ಗಳನ್ನು ಆಹ್ವಾನಿಸಬೇಕು (Re-inviting Fresh Tenders) ಎಂದು ಹೇಳಲಾಗಿತ್ತು.


ಅಲ್ಲದೇ ಆರ್ಥಿಕ ಇಲಾಖೆಯು ಹೊರಡಿಸಿದ್ದ ಸುತ್ತೋಲೆ ಪ್ರಕಾರ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಟೆಂಡರ್ ಲಾಭಾಂಶವನ್ನು ಶೇ 5ಕ್ಕೆ ಮಿತಿಗೊಳಿಸಲು “ಟೆಂಡರ್‌ನಲ್ಲಿ ಸ್ವೀಕೃತವಾದ ದರಗಳು ಅಂದಾಜು ಮೊತ್ತಕ್ಕಿಂತ ಶೇ.10ಕ್ಕಿಂತ ಹೆಚ್ಚಾಗಿದ್ದಲ್ಲಿ, ಅದನ್ನು ಗಣನೀಯ ಹೆಚ್ಚುವರಿ (Substantially High) ಟೆಂಡರ್ ಎಂದು ಪರಿಗಣಿಸಬೇಕು. ಮತ್ತು ಅಂತಹ ಸಂದರ್ಭದಲ್ಲಿ ಎಲ್ಲಾ ಟೆಂಡರ್‌ಗಳನ್ನು ರದ್ದುಪಡಿಸಿ ಮರು ಟೆಂಡರ್ ಕರೆಯುವುದು ಪ್ರಥಮ ಆಯ್ಕೆಯಾಗಿರಬೇಕು ಎಂದು ಹೇಳಿತ್ತು.

ರಾಮ್ಕಿಗೆ ಶೇ. 19ರಷ್ಟು ಟೆಂಡರ್ ಪ್ರೀಮಿಯಂ ಏಕೆ?
ಆದರೆ ಬಿಎಸ್‌ಡಬ್ಲೂಎಂಎಲ್ ಇಲ್ಲಿಯವರೆಗೆ ಕರೆದಿರುವ ಯಾವುದೇ ಟೆಂಡರ್‌ಗಳಿಗೆ ಶೇ.5 ಕ್ಕಿಂತ ಹೆಚ್ಚುವರಿ ಟೆಂಡರ್ ಪ್ರೀಮಿಯಂ ಅನ್ನು ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ರಾಮ್ಕಿ ಸಂಸ್ಥೆಗೆ ಅನುಕೂಲ ಮಾಡಿಕೊಡುವ ಒಂದೇ ಉದ್ದೇಶದಿಂದ ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಇದೊಂದು ವಿಶೇಷ ಪ್ರಕರಣವೆಂಬಂತೆ ಬಿಂಬಿಸಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಇಷ್ಟೆಲ್ಲಾ ನ್ಯೂನತೆಗಳು ಇದ್ದರೂ ಸಹ, ಜಿಬಿಎ ಮತ್ತು ಬಿಎಸ್‌ಡಬ್ಲುಎಂಎಲ್ ಅಧಿಕಾರಿಗಳು ಈ ಟೆಂಡರ್‌ನ ಪ್ಯಾಕೇಜ್‌ಗಳಿಗೆ ಶೇ.19 ರಷ್ಟು ಟೆಂಡರ್ ಪ್ರೀಮಿಯಂಗೆ ಅನುಮೋದನೆ ಕೋರಿ ಪ್ರಸ್ತಾವನೆ ಕಳಿಸಿರುವುದು ಸಹ ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
‘ಈ ಎಲ್ಲಾ ಲೋಪಗಳು ಇದ್ದರೂ ಸಹ ಟೆಂಡರ್ ಪ್ರಕ್ರಿಯೆ ನಡೆಸಲು ಬಿಎಸ್‌ಡಬ್ಲ್ಯೂಎಂಎಲ್ ಅಧಿಕಾರಿಗಳು ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಈ ಟೆಂಡರ್ ಪ್ರಕ್ರಿಯೆಯಲ್ಲಿ ಬಹುಕೋಟಿ ಮೊತ್ತದ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಟೆಂಡರ್ ಪ್ರಕ್ರಿಯೆಗಳನ್ನು ಪರಿಶೀಲನೆ ಮಾಡಲು ನೇಮಕವಾಗಿರುವ ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೆಜ್ ನೇತೃತ್ವದ ಸಮಿತಿಯು ಕರಾರುವಕ್ಕಾಗಿ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಇದೊಂದು ಬಹುದೊಡ್ಡ ಮಟ್ಟದ ಹಗರಣವಾಗಲಿದೆ. ಮುಂದಿನ ದಿನಗಳಲ್ಲಿ ನ್ಯಾಯಾಂಗದ ಕದವನ್ನು ತಟ್ಟಬಹುದು,’ ಎನ್ನುತ್ತಾರೆ ಜಿಬಿಎನ ಹಿರಿಯ ಅಧಿಕಾರಿಯೊಬ್ಬರು.




