ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ದಿ ಫೈಲ್ ದಾಖಲೆ ಸಹಿತವಾಗಿ ಸರಣಿ ವರದಿಗಳನ್ನು ಪ್ರಕಟಿಸುತ್ತಿದ್ದಂತೆ ಇದೀಗ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಈ ಹಗರಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ಅಲ್ಲದೇ 36 ಸಾವಿರ ಕೋಟಿ ಹಗರಣದಲ್ಲಿ 10,000 ಕೋಟಿ ಕಿಕ್ ಬ್ಯಾಕ್ ತೆಗೆದುಕೊಳ್ಳಲಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಈ ಹಗರಣದ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದೂ ಹೇಳಿಕೆ ನೀಡಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿಯೇ ನಡೆದಿದೆ ಎನ್ನಲಾಗಿರುವ ಲೋಪ, ಅಕ್ರಮಗಳ ಕುರಿತು ದಿ ಫೈಲ್ ದಾಖಲೆಗಳ ಸಮೇತ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಇದೇ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿಯ ಶಾಸಕ ಧೀರಜ್ ಮುನಿರಾಜು ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಆದರೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕಸ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ಮತ್ತು ಜನಸಾಮಾನ್ಯರ ಮೇಲೆ ತೆರಿಗೆ ವಿಧಿಸಲಾಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಂಡಿದ್ದರು. ಈ ಹಗರಣದ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕಸದ ಹೆಸರಲ್ಲಿ ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಅಬ್ಬರಿಸಿದ್ದಾರೆ.
’36 ಸಾವಿರ ಕೋಟಿ ಲೂಟಿ ಮಾಡಿರೋ ದಾಖಲೆ ಬಿಡುಗಡೆ ಮಾಡ್ತಿದ್ದೇವೆ. ದೇಶದಲ್ಲಿ ಕಸದಲ್ಲೇ ಇಷ್ಟು ದೊಡ್ಡ ಹಗರಣ ನಡೆದಿರುವ ರಾಜ್ಯ ಸರ್ಕಾರ ನಮ್ಮದು. ದೆಹಲಿ ಕಂಪನಿಗೆ ಟೆಂಡರ್ ನೀಡಲಾಗಿದೆ. ಹೈಕಮಾಂಡ್ ಕಪ್ಪದ ಟೆಂಡರ್ ಇದು. 28 ಎಂಎಲ್ ಎ 5 ಎಂಪಿಗಳ ವ್ಯಾಪ್ತಿಗೆ ಬರೋ ಕಸದ ಹಗರಣ ಇದು,’ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ.
10,000 ಕೋಟಿ ಕಿಕ್ ಬ್ಯಾಕ್ ಆರೋಪ
’36 ಸಾವಿರ ಕೋಟಿ ಹಗರಣದಲ್ಲಿ 10 ಕೋಟಿ ಕಿಕ್ ಬ್ಯಾಕ್ ತೆಗೆದುಕೊಳ್ಳಲಾಗಿದೆ. ಬುದ್ದಿ ಇರೋರು ಅವರ ಸರ್ಕಾರದ ಅವಧಿಗೆ ಟೆಂಡರ್ ಕೊಡುತ್ತಿದ್ದರು. ಆದರೆ ಕಾಂಗ್ರೆಸ್ ನವರು ಮುಂದಿನ 30 ವರ್ಷಕ್ಕೆ ಟೆಂಡರ್ ಕೊಟ್ಟಿದ್ದಾರೆ. ಇದನ್ನು ಮತ್ತೆ 35 ವರ್ಷಕ್ಕೆ ವಿಸ್ತರಿಸುವ ಅವಕಾಶ ಟೆಂಡರ್ ನಲ್ಲಿದೆ,’ ಎಂದು ಆರೋಪಿಸಿದ್ದಾರೆ.
ಇದು ಪಾಲಿಕೆಗೆ ಆರ್ಥಿಕವಾಗಿ ಹೊರೆಯಾಗಲಿದೆ. ಇಷ್ಟು ದೊಡ್ಡ ಮೊತ್ತದ ಟೆಂಡರ್ ಬಗ್ಗೆ ಸರ್ಕಾರ ಹಾಗೂ ಕಾರ್ಪೊರೇಷನ್‌ಗೆ ಎಚ್ಚರಿಕೆ ನೀಡಿದೆ. 2026ರ ಮೇ 6 ರಂದು ಆರ್ಥಿಕ ಇಲಾಖೆ ಅಧಿಕಾರಿ ರಿತೇಷ್ ಕುಮಾರ್ ಅವರು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಶೇ. 430ರಷ್ಟು ಮೊತ್ತ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ. ಪತ್ರ ಬರೆದು ಎಚ್ಚರಿಸಿದ್ದಾರೆ. ಇದನ್ನ ಕೈ ಬಿಡಬೇಕು ಎಂದು ಎಚ್ಚರಿಸಿದ್ದಾರೆ. ರಾಮ್ಕಿ ಸಂಸ್ಥೆಗೆ ಟೆಂಡರ್ ಬೇಡವೆಂದು ಹೇಳಿದ್ದಾರೆ. ರಾಮ್ಕಿ ಸಂಸ್ಥೆ ವರ್ಲ್ಡ್ ಬ್ಯಾಂಕ್ ನಲ್ಲಿ ಸಾಲ ಪಡೆದು ಡಿಬಾರ್ ಆಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ರೈಟ್ಸ್ ಕಂಪನಿ ಸರ್ಕಾರಕ್ಕೆ ನಿಯಮಿತವಾಗಿ ಸಲಹೆ ಮಾಡುವ ಕಂಪನಿಯಾಗಿದೆ. ಈ ಕಂಪನಿ ಗೌರ್ನಮೆಂಟ್ ಅಂಡರ್ ಟೇಕಿಂಗ್ ಕಂಪನಿ. ಇದರ ವರದಿಯನ್ನ ಸರ್ಕಾರ ಕಸದ ಬುಟ್ಟಿಗೆ ಹಾಕಿದೆ. ಅದರ ಬದಲು ಹೊಸದಾಗಿ ಸಮಾಲೋಚಕ ಕಂಪನಿ ತೆರೆದಿದೆ. ಅದರ ಅಂದಾಜು ಪಟ್ಟಿಯನ್ನು ಹಾಕಲು ಸರ್ಕಾರ ಮುಂದಾಗಿದೆ.
ಸಂಸ್ಕರಣೆ ಮತ್ತು ವಿಲೇವಾರಿ ಜವಾಬ್ದಾರಿಯನನ್ನು ಮಾತ್ರ ರಾಮ್ ಕೀ ಕಂಪನಿ ನಿರ್ವಹಿಸುತ್ತದೆ. ಇವರಿಗೆ ಸರ್ಕಾರ ಭೂಮಿ ಖರೀದಿ ಮಾಡಿ ಬೆಂಗಳೂರು ಹೊರ ವಲಯದಲ್ಲಿ ಜಾಗ ಕೊಡುತ್ತೆ. ಖಾಸಗಿಯವರಿಗೆ ಸರ್ಕಾರ ಮಾಡಿಕೊಡುವ ಲಾಭ ಇದು. ಇದೇ ಹಗರಣದ ಹಿಂದಿನ ಲೆಕ್ಕಾಚಾರ ಎಂದು ಸುದ್ದಿಗೋಷ್ಠಿಯಲ್ಲಿ ಬಯಲು ಮಾಡಿದ್ದಾರೆ.
‘ಕೈ ಬೀಸಿಕೊಂಡು ಬಂದು ಕೋಟಿ ಎತ್ಕೊಂಡು ಹೋಗೋದು ಈ ಸ್ಕೀಂ ನ ಪ್ಲಾನ್. ಹಿಂದೆ ನೈಸ್ ಕಂಪನಿ ನೋಡಿದ್ದೆವು. ಅದೇ ರೀತಿಯ ಕಥೆ ಇದು. ಭೂಮಿ ನಮ್ಮದು, ನಮ್ಮ ಭೂಮಿ ಮೇಲೆ 1,500 ಕೋಟಿ ಬ್ಯಾಂಕ್ ಸಾಲ ಪಡೆಯೋದು ಅವರು. ಅವರು ಕೈ ಬೀಸಿಕೊಂಡು ಬಂದು ಹೋಗೋದು,’ ಎಂದು ಆರೋಪಿಸಿದ್ದಾರೆ.
ಕಸಕ್ಕೆ ರು 265 ಗೆ ಒಂದು ಟನ್ ಕಸ ಮಾರಲಾಗುತ್ತಿತ್ತು. ಇವರು 2,400₹ ರೂ ಗೆ ಮಾರಾಟ ಮಾಡ್ತಿದ್ದಾರೆ. 600 ಪಟ್ಟು ಹೆಚ್ವಿಗೆ ಮಾರಾಟ ಮಾಡ್ತಿದ್ದಾರೆ. ಎಂಎಸ್‌ಜಿಪಿಗೆ ವಾರ್ಷಿಕವಾಗಿ. ಸಂಸ್ಕರಣಾ ವೆಚ್ಚ 6,171 ₹ ಆಗಲಿದೆ ಈಗ ರಾಮ್ಕಿ ಕಂಪನಿಗೆ 39,437 ಕೋಟಿ ಕೊಡಲಾಗುತ್ತಿದೆ. ಅಂದರೇ 36 ಸಾವಿರ ಕೋಟಿ ಹೆಚ್ಚುವರಿ ಕೊಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಕೇವಲ ಸಂಸ್ಕರಣೆ ಮತ್ತು ಸಾಗಾಣಿಕೆಗೆ ಮಾತ್ರ. ಈ ಟೆಂಡರ್‌ನಲ್ಲಿ ಗೋಲ್ಮಾಲ್ ನಡೆದಿದೆ. ರೈಟ್ಸ್ ಕಂಪನಿ ತೆಗೆದು, ರಾಮ್ಕಿ ಸಂಸ್ಥೆಗೆ ನೀಡಿರುವುದರಲ್ಲಿಯೂ ಗೋಲ್ಮಾಲ್ ಆಗಿದೆ. ಉತ್ತರ ಮತ್ತು ದಕ್ಷಿಣಕ್ಕೆ ಪ್ಯಾಕೇಜ್‌ಗೆ ಶೇ. 19.43 ಹೆಚ್ಚುವರಿ ಹಣ ಕೊಟ್ಟಿದ್ದಾರೆ. ಟೆಂಡರ್ ಕರೆದು ಅರ್ಜಿ ಹಾಕಿದವರನ್ನು ವಜಾ ಮಾಡಲಾಗಿದೆ. ಮೂರನೇ ಬಾರಿಗೆ ಎಲ್ 1 ಮಾಡಿ ರಾಮ್ಕಿಗೆ ಕಂಪನಿಗೆ ಕೊಟ್ಟಿದ್ದಾರೆ. ಶೇ. 13.41ರಷ್ಟು ಹೆಚ್ಚುವರಿ ನೀಡಿ ಟೆಂಡರ್ ಕೊಟ್ಟಿದ್ದಾರೆ. ತುಷಾರ್ ಗಿರಿನಾಥ್, ಮಹೇಶ್ವರ್ ರಾವ್, ಕರೀಗೌಡ, ಪ್ರಹ್ಲಾದ್, ನಜೀಮ್ ಅಹ್ಮದ್ ಸೇರಿದಂತೆ ಬರೀ ಅಧಿಕಾರಿಗಳೇ ಸೇರಿ ಟೆಂಡರ್ ನೀಡಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.
‘ಭುವನೇಶ್ವರ್ ಪಾಲಿಕೆ ಕೂಡ ರಾಮ್ಕಿ ಸಂಸ್ಥೆಯನ್ನ ಬ್ಲಾಕ್ ಲೀಸ್ಟ್‌ಗೆ ಹಾಕಿದೆ. ಕಟಕ್ ಮಿನ್ಸಿಪಲ್ ಕಾರ್ಪೊರೇಷನ್ ಕೂಡ ಬ್ಲಾಕ್ ಲೀಸ್ಟ್‌ಗೆ ಸೇರಿಸಿದೆ. ಬೆಂಗಳೂರು ಮಹಾನಗರ ಪಾಲಿಕೆ ಕೂಡ 2016ರಲ್ಲಿ ರಾಮ್ಕಿ ಸಂಸ್ಥೆಯನ್ನು ಬ್ಲಾಕ್ ಲೀಸ್ಟ್‌ಗೆ ಹಾಕಿದೆ. ಇದ್ಯಾವುದೂ ಬೋಗಸ್ ಅಲ್ಲ, ದಾಖಲೆಗಳಿವೆ,’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತೀ ವರ್ಷ 5 ವರ್ಷಕ್ಕೊಮ್ಮೆ ದರ ಹೆಚ್ಚಿಸುವ ಕೆಲಸ ಈ ಕಂಪನಿ ಮಾಡಲಿದೆ. 30ವರ್ಷಕ್ಕೆ 430% ದರ ಹೆಚ್ಚಳವಾಗಲಿದೆ. ಟೆಂಡರ್ ಪ್ರಕಾರ 2,151ರೂ ಇದೆ, 30ವರ್ಷಕ್ಕೆ 9,297ರೂ ಆಗಲಿದೆ. ಹಣಕಾಸು ಇಲಾಖೆ ಟೆಂಡರ್ ಲೋಪ ಹಾಗೂ ಫೈನಾನ್ಸ್ ಕಂಪನಿ ಬಗ್ಗೆ ಸಚಿವ ಸಂಪುಟವನ್ನು ಎಚ್ಚರಿಸಿದೆ. ಎರಡು ಟೆಂಡರ್ ಒಂದೇ ಕಂಪನಿಗೆ ಯಾಕೆ ಕೊಡಲಾಗಿದೆ, ಶೇ. 5ರಷ್ಟು ದರ ಹೆಚ್ಚಳ ಬಗ್ಗೆಯೂ ಪ್ರಶ್ನೆ ಮಾಡಿದೆ. ಅಂತ ಪ್ರಶ್ನೆ ಮಾಡಿದೆ ಎಂದು ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಮುಂದಿರಿಸಿದರು.
2026ರ ಮೇ 22ರಂದು ಸಿದ್ದರಾಮಯ್ಯ ಅವರ ಕೊನೆಯ ಕ್ಯಾಬಿನೆಟ್ ಗೆ ಈ ವಿಚಾರ ಬಂದಿತ್ತು. ಸಿದ್ದರಾಮಯ್ಯ ಅವರಿಗೆ ಆಗಿನ್ನು ಸಿಎಂ ಸ್ಥಾನಕ್ಕೆ ಕುತ್ತು ಬಂದಿರಲ್ಲ. 335ನೇ ನಂಬರಿನ ಲೀಸ್ಟ್ ಆಗಿ ರಾಮ್ಕೋ ಕಂಪನಿಗೆ ಟೆಂಡರ್ ಕೊಡುವ ಬಗ್ಗೆ ಹೆಚ್ಚುವರಿ ಅಜೆಂಡಾ ಅಗಿ ತಂದು ಪಾಸ್ ಮಾಡಿದ್ದಾರೆ. ಇದನ್ನ ಪಾಸ್ ಮಾಡುವಂತೆ ಸಿದ್ದರಾಮಯ್ಯಗೆ ದೆಹಲಿ ಇಂದ ಹೈಕಮಾಂಡ್ ಕರೆ ಮಾಡಿ ಪಾಸ್ ಮಾಡುವಂತೆ ಸೂಚಿಸಿದೆ. ಮಂತ್ರಿಗಳಿಗೆ ಗರ ಬಡಿದಂತಾಗಿದೆ. ಇಷ್ಟು ಕೋಟಿ ಟೆಂಡರ್ ಹೇಗೆ ಅಂತ ಕೇಳಿದ್ದಕ್ಕೆ, ಹೈಕಮಾಂಡ್ ಕಡೆ ಬೆರಳು ಮಾಡಿದ್ದಾರೆ ಎಂದು ಅಶೋಕ್ ಅವರು ಆರೋಪಿಸಿದರು.
ಸಚಿವ ಸಂಪುಟದ ಅನುಮೋದನೆ ಆದ ಮೇಲೆ, ಅಪರ ಕಾರ್ಯದರ್ಶಿ ಉಮಾ ಮಹಾದೇವನ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. 15 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. ಆರ್ಥಿಕ ಇಲಾಖೆಯೂ ಸಹ ಬ್ಲಾಕ್ ಲೀಸ್ಟ್ ಕಂಪನಿ ಎಂದು ವರದಿ ಕೊಟ್ಟಿದೆ. ಉಮಾ ಮಹದೇವನ್ ಕಮಿಟಿಗೆ ನೂತನ ಸಿಎಂ ಡಿಕೆಶಿ ಎಳ್ಳು ನೀರು ಬಿಟ್ಟಿದ್ದಾರೆ. ಜೂನ್ 4ರಂದು ಉಮಾ ಮಹದೇವ್ ಕಮಿಟಿ ಕೈ ಬಿಟ್ಟು. ಹೊಸದಾಗಿ ಅಂಜುಮ್ ಫರ್ವೇಜ್, ಪಿ.ಸಿ ಜಾಫರ್ ನೇತೃತ್ವದ ಕಮಿಟಿ ಮಾಡಿದ್ದಾರೆ. ಕೇವಲ 7 ದಿನದಲ್ಲಿ ವರದಿ ಕೊಡಲು ಕಮಿಟಿ ಮಾಡ್ತಾರೆ. ಇಂದಿಗೆ ಈ ಅವಧಿ ಮುಗಿಯುತ್ತಿದೆ ಎಂದು ಹೇಳಿದರು.
‘ಕಸದ ಹೆಸರಲ್ಲಿ ದುಡ್ಡು ಮಾಡೋದು ಹೇಗೆ, ಕೆಜಿಎಫ್ ಸಿನಿಮಾ ತರ. ಗಾರ್ಬೇಜ್‌ನಿಂದ ಗೋಲ್ಡ್ ಮಾಡೋದು ಹೇಗೆ ಅಂತ. ಕಾಂಗ್ರೆಸ್ ಸರ್ಕಾರ ಕಸದಿಂದ ಕಾಸು ತೆಗೆಯುತ್ತಿದೆ. ಅಕ್ರಮದ ಗಬ್ಬು ವಾಸನೆ ಬೆಂಗಳೂರಿಗೆ ಬರ್ತಿದೆ. ಇದರಲ್ಲಿ 10 ಸಾವಿರ ಕೋಟಿ ಕಿಕ್ ಬ್ಯಾಕ್ ಬರಲಿದೆ,’ ಎಂದು ಅಶೋಕ್ ನೇರವಾಗಿ ಆರೋಪಿಸಿದರು.
ಈಗಿರುವ ಕಂಪನಿ ಎಂಎಸ್‌ಜಿಪಿ ಟನ್‌ಗೆ 40₹ ಜಾಸ್ತಿ ಕೊಡಿ ನಾನು ನಡೆಸಿಕೊಂಡು ಹೋಗ್ತೇನೆ ಅಂತ ಹೇಳಿದೆ. ಆದ್ರೆ ಇಲ್ಲಿ ಡೆಲ್ಲಿ ಡೀಲ್ ನಡೆದಿದೆ. ಹಾಗಾಗಿ ಹಳಬರಿಗೆ ಟೆಂಡರ್ ಕೊಡ್ತಿಲ್ಲ. ಗಬ್ಬು ನಾಥವನ್ನ ತಿನ್ನಲು ಹೊರಟಿದ್ದಾರೆ. ಇದೊಂದು 36 ಸಾವಿರ ಕೋಟಿ ಹಗರಣ. ಸಿದ್ದರಾಮಯ್ಯ ಮೌನ ಮುರಿಯಬೇಕು. ಸಿದ್ದರಾಮಯ್ಯ ಯಾಕೆ ಸಹಿ ಹಾಕಿದೆ ಅಂತ ಹೇಳಬೇಕು. ಅಕ್ಕಿಗೆ ಹಣ ಕೊಟ್ಟು ತಂದಂತೆ, ಕಸ ಹಾಕೋದಕ್ಕೂ ಹಣ ಕೊಡಬೇಕು. ಕಪ್ಪು ಪಟ್ಟಿ ಇದ್ದವರಿಗೆ ಸಿದ್ದರಾಮಯ್ಯ ಯಾಕೆ ಟೆಂಡರ್ ಕೊಟ್ಟರು ಎಂದು ಅಶೋಕ್ ಅವರು ಪ್ರಶ್ನಿಸಿದರು.
ರಾಜ್ಯಪಾಲರಿಗೆ ದೂರು ಕೊಡಲಾಗುವುದು. ದೂರು ಕೊಟ್ಟು ಸುಮ್ಮನಾಗಲ್ಲ. ಮಧ್ಯಾಹ್ನ 3 ಗಂಟೆಗೆ ಲೋಕಾಯುಕ್ತ, ಉಪ ಲೋಕಯುಕ್ತರಿಗೆ ದೂರು ಕೊಡಲಾಗುವುದು. ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಅಶೋಕ್ ಅವರು ಆಗ್ರಹಿಸಿದರು.
ಸ್ವಚ್ಚ ಅಭಿಯಾನದಲ್ಲಿ ಹೆಸರು ಮಾಡಿದ್ದ ರಾಜ್ಯ ನಮ್ಮ ಸರ್ಕಾರದ ಅವಧಿಯಲ್ಲಿತ್ತು. 1,344 ಕೋಟಿ ಕಸ ನಿರ್ವಹಣೆ ವೆಚ್ಚ, 514 ಸಂಗ್ರಹಣೆ ಸಾಗಾಣಿಕೆ, 380 ಸಂಸ್ಕರಣೆಗೆ ಖರ್ಚು ಮಾಡಲಾಗಿತ್ತು. 11 ಸಾವಿರ ಪೌರಕಾರ್ಮಿಕರು ಇದನ್ನ ಮಾಡ್ತಿದ್ದರು. ವರ್ಷಕ್ಕೆ 440. ಕೋಟಿ ಸಂಬಳ ಕೊಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಬಂದ ಬಳಿಕ ಇದರಲ್ಲಿ ಬದಲಾವಣೆ ಆಗಿದೆ. ಅಲ್ಲದೇ ಹೊಸ ಪ್ರಸ್ತಾವನೆ ಮೂಲಕ ಲೂಟಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು ಜನರ ಮೇಲೆ ತೆರಿಗೆ ಭಾರ ಹಾಕಲು ರೆಡಿ ಆಗ್ತಿರೋ ಹಗರಣ ಇದು. ಜನಪ್ರತಿನಿಧಿಗಳಿಲ್ಲದ ಜಿಬಿಎ ನಲ್ಲಿ ನಡೆಯುತ್ತಿರೋ ಹಗರಣ ಇದು. ಬಲಾಢ್ಯ ಕಂಪನಿಗಳಿಗೆ ಇದರ ಟೆಂಡರ್ ಕೊಡಲಾಗ್ತಿದೆ. ಹಿಂದೆ ಇವೆಲ್ಲ ಕರ್ನಾಟಕದ ಜನಕ್ಕೆ ಸಿಕ್ತಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಹಗರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಟೆಂಡರ್ ಪರಿಶೀಲಿಸಲು ರಚಿಸಿದ್ದ ಸಮಿತಿಗೆ ಕೇವಲ 7 ದಿನ ಗಡುವು ಕೊಟ್ಟಿತ್ತು.
ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರು ಸಹ ಪತ್ರ ಬರೆದಿದ್ದರು. ಆದರೆ ಅಶೋಕ್ ಅವರು ತುಟಿ ಬಿಚ್ಚಿರಲಿಲ್ಲ.
ಸಮಗ್ರ ಘನ ತ್ಯಾಜ್ಯ ವಿಲೇವಾರಿ ಕುರಿತು ‘ದಿ ಫೈಲ್’ ಕಳೆದ ಹಲವು ದಿನಗಳಿಂದಲೂ ದಾಖಲೆ ಸಹಿತ ಸರಣಿ ವರದಿಗಳನ್ನು ಪ್ರಕಟಿಸಿರುವುದನ್ನು ಸ್ಮರಿಸಬಹುದು.




