ಬೆಂಗಳೂರು; ಡಿ ಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ತವರು ಕ್ಷೇತ್ರ ಹಾರೋಹಳ್ಳಿಯಲ್ಲಿನ ಸರ್ಕಾರಿ ಭೂಮಿ ಕಬಳಿಸಿದ್ದ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಅಧಿಕಾರಿ, ನೌಕರರುಗಳು ಉದ್ದೇಶಪೂರ್ವಕವಾಗಿ ಕರ್ತವ್ಯಲೋಪ ಎಸಗಿಲ್ಲ. ದೈನಂದಿನ ಕೆಲಸಗಳ ಜೊತೆಗೆ ಆಕಸ್ಮಿಕವಾಗಿ ಲೋಪವಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಇಡೀ ಹಗರಣವನ್ನು ಮುಚ್ಚಿ ಹಾಕಲು ಹೊರಟಿರುವುದು ಇದೀಗ ಬಹಿರಂಗವಾಗಿದೆ.
ಮತ್ತೊಂದು ವಿಶೇಷವೆಂದರೇ ಈ ಪ್ರಕರಣದಲ್ಲಿ 10,52,22,000 ರು ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ಖುದ್ದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರೇ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಯು ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಆರ್ಥಿಕ ನಷ್ಟವುಂಟಾಗಿಲ್ಲ ಎಂದು ಅದೇ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸರ್ಕಾರವೇ ಸೂಚನೆ ನೀಡಿತ್ತಾದರೂ ಯಾವುದೇ ಎಫ್‌ಐಆರ್ ದಾಖಲಿಸದೆಯೇ ಆರೋಪಿತ ಅಧಿಕಾರಿಗಳ ಬೆನ್ನಿಗೆ ಖುದ್ದು ಜಿಲ್ಲಾಧಿಕಾರಿಯೇ ನಿಂತಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ತಮ್ಮದೇ ತನಿಖಾ ವರದಿಗೆ ವಿರುದ್ಧವಾಗಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರೂ ಸಹ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಮೌನ ವಹಿಸಿದ್ದಾರೆ. ಪ್ರಾದೇಶಿಕ ಆಯುಕ್ತರ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಹಾರೋಹಳ್ಳಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸಿದ್ದ ಪ್ರಕರಣದದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕಂದಾಯ ಇಲಾಖೆಯು 5 ತಿಂಗಳ ಬಳಿಕ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಯಾವೊಬ್ಬ ಸರ್ಕಾರಿ ಅಧಿಕಾರಿಯು ಉದ್ದೇಶಪೂರ್ವಕವಾಗಿ ಕರ್ತವ್ಯಲೋಪವೆಸಗಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಹಂತದಲ್ಲೇ ಕ್ಲೀನ್ ಚಿಟ್ ಕೊಟ್ಟಿರುವುದು ಭೂ ಕಬಳಿಕೆದಾರರಿಗೆ ಮತ್ತು ಇದಕ್ಕೆ ಸಹಕರಿಸಿದ ಅಧಿಕಾರಿ ವರ್ಗಕ್ಕೆ ಮತ್ತಷ್ಟು ಬಲ ತುಂಬಿದಂತಿದೆ.
ಈ ಪ್ರಕರಣ ಕುರಿತು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಯು ಪ್ರಾದೇಶಿಕ ಆಯುಕ್ತರಿಗೆ 2026ರ ಜೂನ್ 30ರಂದು ಮೂರು ಪುಟಗಳ ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಜಿಲ್ಲಾಧಿಕಾರಿ ಪತ್ರದಲ್ಲೇನಿದೆ?
ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಗ್ರಾಮದ ಸರ್ವೆ ನಂಬರ್ 478ರಲ್ಲಿ 2 ಎಕರೆ ಸರ್ಕಾರಿ ಜಮೀನನ್ನು ನಕಲಿ ಮಂಜೂರಿ ದಾಖಲೆಗಳ ಆಧಾರದಲ್ಲಿ ಖಾತೆ, ಪೋಡಿ ಮತ್ತು ಭೂ ಪರಿವರ್ತನೆ ಮಾಡಿ ಅಕ್ರಮ ಎಸಗಲಾಗಿತ್ತು. ಅಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವ ಬಗ್ಗೆ ಮತ್ತೊಮ್ಮೆ ಖಚಿತಪಡಿಸಿಕೊಂಡು ಅಂತಹ ಖಾಸಗಿ ವ್ಯಕ್ತಿಗಳ ವಿರುದ್ಧ ಕೆಎಲ್‌ಆರ್ ಕಾಯ್ದೆ 1964ರ ಅಡಿಯಲ್ಲಿ ಅನ್ವಯವಾಗುವ ಬಿಎನ್‌ಎಸ್ 2023ರಡಿಯಲ್ಲಿ ಅನ್ವಯವಾಗುವ ನಿಯಮಗಳ ಪ್ರಕಾರ ಎಫ್ಐಆರ್ ಕೂಡಲೇ ದಾಖಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು 2026ರ ಮಾರ್ಚ್ 18ರಂದು ಸೂಚಿಸಿದ್ದರು ಎಂದು ಜಿಲ್ಲಾಧಿಕಾರಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

ಅಲ್ಲದೆ ಈ ಪ್ರಸ್ತಾಪಿತ ಜಮೀನಿಗೆ ಸಂಬಂಧಿಸಿದಂತೆ ಸಂಶಯಾಸ್ಪದ ಕಡತದ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಶೀಲನೆಗೆ ಒಳಪಡಿಸಲಾಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯು 2026ರ ಫೆ.5ರಂದು ಸ್ವೀಕೃತವಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಅನುಸಾರ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದರು.
ಈ ಪತ್ರದಲ್ಲಿನ ನಿರ್ದೇಶನದಂತೆ ಕೂಡಲೇ ಕ್ರಮ ಕೈಗೊಳ್ಳಲಾಗಿದೆ. ಮತ್ತು ಕ್ರಮ ಕೈಗೊಂಡ ಕುರಿತು ಅನುಪಾಲನೆ ವರದಿ ಸಲ್ಲಿಸಬೇಕು ಎಂದು ರಾಮನಗರ ಉಪ ವಿಭಾಗದ ಉಪ ವಿಭಾಗಾಧಿಕಾರಿಗೆ ಕಳಿಸಲಾಗಿತ್ತು. ಇದರ ಪ್ರಕಾರ ಪ್ರಶ್ನಿತ ಜಮೀನಿನ ಖಾತೆಯನ್ನು ರದ್ದುಪಡಿಸಲಾಗಿದೆ. ಸರ್ಕಾರದ ಹೆಸರಿಗೆ ಪಹಣಿ ನಮೂದಿಸಲಾಗಿದೆ. ಹಾಗೆಯೇ ಪ್ರಶ್ನಿತ ಈ ಸರ್ವೇ ನಂಬರ್ 478ರಲ್ಲಿನ 2 ಎಕರೆ ಜಮೀನಿನ ಸಂಬಂಧ ಈ ಹಿಂದೆಯೇ ಮ್ಯಾನ್ಯುಯಲ್ ಆಗಿ ಏಕ ವ್ಯಕ್ತಿ ಪ್ರಕರಣದಲ್ಲಿ ಅಂದಿನ ತಹಶೀಲ್ದಾರ್ ಅವರು ನಮೂನೆ 1ರಿಂದ 5ರಲ್ಲಿ ಮಾಹಿತಿ ಭರ್ತಿ ಮಾಡಿದ್ದರು. ಇದಾದ ನಂತರ ಉಪ ವಿಭಾಗಾಧಿಕಾರಿಗಳು ಮತ್ತು ಭೂ ದಾಖಲೆಗಳ ಉಪ ನಿರ್ದೇಶಕರು ಮೇಲು ಸಹಿ ಮಾಡಿದ್ದರು. ಆ ನಂತರ ಈ ಮಾಹಿತಿಯನ್ನು ತಂತ್ರಾಂಶದಲ್ಲಿ ಸೃಜಿಸಲಾಗಿದೆ ಎಂದು ಜಿಲ್ಲಾಧಿಕಾರಿಯು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಪೋಡಿ ದುರಸ್ತಿ ಅಭಿಯಾನಂದತೆ ಹಲವು ಸರ್ವೆ ನಂಬರ್‍ಗಳ ಅನುಬಂಧ 1ರ ಜೊತೆಗೆ ಹಾರೋಹಳ್ಳಿ ತಾಲೂಕು ತಹಶೀಲ್ದಾರ್ ಅವರು ಕನಕಪುರ ತಾಲೂಕು ತಹಶೀಲ್ದಾರ್ ಅವರ ಕಚೇರಿಯಿಂದ ವರ್ಗಾವಣೆಗೊಂಡಿದ್ದರು. ಅವರ ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ಲಭ್ಯವಿರುವ ಕಡತಗಳನ್ನು ಪರಿಶೀಲಿಸಲಾಗಿದೆ. ಈ ಕಡತಗಳ ಪೈಕಿ ಹಾರೋಹಳ್ಳಿ ಗ್ರಾಮದ ಸರ್ವೆ ನಂಬರ್ 478ರ ಮಂಜೂರಾತಿ ಕಡತವು ಲಭ್ಯವಿದೆ. ಇದನ್ನು ಯಥಾವತ್ತಾಗಿ ಭೂ ಮಂಜೂರಿ ಪ್ರಕರಣಗಳ ಪೋಡಿ ದುರಸ್ತಿಯ ಕಡತಗಳನ್ನು ದೈನಂದಿನ ಕೆಲಸಗಳ ಜೊತೆಗೆ ಅನುಮೋದನೆ ನೀಡಲಾಗಿದೆ. ಈ ಕಡತಗಳ ಜೊತೆಗೆ ಸರ್ವೆ ನಂಬರ್ 478ಕ್ಕೂ ಅನುಮೋದನೆ ನೀಡಿ ಲಭ್ಯ ದಾಖಲಾತಿಗಳ ಆಧಾರದ ಮೇಲೆ ಪೋಡಿ ದುರಸ್ತಿ ಕಾರ್ಯ ಪೂರ್ಣಗೊಂಡಿದೆ.
ಈ ವಿಚಾರ ಸಂಬಂಧ ದೂರರ್ಜಿ ಬಂದ ನಂತರ ತಮ್ಮ ನಿರ್ದೇಶನದಂತೆ ಸಂಬಂಧಪಟ್ಟ ಮಂಜೂರಾತಿ ಕಡತವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಕೂಡಲೇ ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿ ಮಂಜೂರಾತಿಯನ್ನು ರದ್ದುಪಡಿಸಿದ್ದಾರೆ. ಪಹಣಿಯಲ್ಲಿ ಸರ್ಕಾರ ಎಂದು ನಮೂದಿಸಲಾಗಿದೆ. ಸದ್ಯ ಈ ಜಮೀನನ್ನು ಭೌತಿಕವಾಗಿ ತಹಶೀಲ್ದಾರ್ ಅವರು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ನಂತರ ಕೆಐಎಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಅವರು ಅಧಿಸೂಚನೆಯಂತೆ ಪಹಣಿ ಇಂಡೀಕರಿಸಿಕೊಂಡು ಕೆಎಸ್‌ಎಫ್‌ಸಿಗೆ ಹಂಚಿಎಕ ಮಾಡಿರುವಂತೆ ಜಮೀನು ಹಸ್ತಾಂತರಿಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಯು ಪತ್ರದಲ್ಲಿ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತಂದಿರುವುದು ಗೊತ್ತಾಗಿದೆ.
‘ಮೇಲ್ಕಂಡ ಅಂಶಗಳಂತೆ ಸದರಿ ಪ್ರಕರಣದಲ್ಲಿ ಯಾವ ಅಧಿಕಾರಿ, ನೌಕರರು ಸಹ ಉದ್ದೇಶಪೂರ್ವಕವಾಗಿ ಕರ್ತವ್ಯ ಲೋಪ ಎಸಗಿಲ್ಲ. ದೈನಂದಿನ ಕೆಲಸಗಳ ಜೊತೆಗೆ ಆಕಸ್ಮಿಕವಾಗಿ ಲೋಪವಾಗಿದೆ. ತಮ್ಮ ನಿರ್ದೇಶನದಂತೆ ಈಗಾಗಲೇ ಪ್ರಶ್ನಿತ ಜಮೀನನ್ನು ಸರ್ಕಾರದ ವಶಕಕೆ ಪಡೆದಿದೆ. ಸರ್ಕಾರಕ್ಕೆ ಯಾವುದೇ ಯಾವುದೇ ರೀತಿಯಲ್ಲೂ ಆರ್ಥಿಕ ನಷ್ಟ ಉಂಟಾಗದೇ ಇರುವುದರಿಂದ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲಾ ಅಧಿಕಾರಿ, ನೌಕರರ ಮೇಲಿನ ಆರೋಪಗಳನ್ನು ಮುಕ್ತಗೊಳಿಸಿ ಪ್ರಕರಣವನ್ನು ಕೈಬಿಡಬೇಕು,’ ಎಂದು ಜಿಲ್ಲಾಧಿಕಾರಿಯು ಕೋರಿರುವುದು ತಿಳಿದು ಬಂದಿದೆ.

ವಿಶೇಷವೆಂದರೇ ಪ್ರಾದೇಶಿಕ ಆಯುಕ್ತರು ಈ ಪ್ರಕರಣದಲ್ಲಿ ಸರ್ಕಾರಕ್ಕೆ ವರದಿ ನೀಡಿದ್ದರು.

ಈ ಪ್ರಕರಣದಲ್ಲಿ 10,52,22,000 ರು ಮೊತ್ತವು ನಷ್ಟವುಂಟಾಗಿದೆ ಎಂದು ಪರಿಗಣಿಸಿದ್ದರು.

ಆದರೀಗ ಜಿಲ್ಲಾಧಿಕಾರಿಯು ಈ ಪ್ರಕರಣದಲ್ಲಿ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ ಎಂದು ವರದಿ ನೀಡಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ. ಈ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ಸ್ಪಷ್ಟನೆ/ಪ್ರತಿಕ್ರಿಯೆ ಕೋರಿ ದಿ ಫೈಲ್ ಇ-ಮೈಲ್ ಮಾಡಿದೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಕ್ರಿಯೆ ನೀಡಿದ ನಂತರ ಇದೇ ವರದಿಯನ್ನು ನವೀಕರಿಸಲಾಗುತ್ತದೆ.
ಈ ಪ್ರಕರಣದಲ್ಲಿ ಕಂದಾಯ ಇಲಾಖೆಯು 5 ತಿಂಗಳ ಬಳಿಕ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಿತ್ತು.
ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ತಾಲೂಕು ಹಾರೋಹಳ್ಳಿ ಗ್ರಾಮದ ಸರ್ವೆ ನಂಬರ್ 478ರಲ್ಲಿ 2 ಎಕರೆ ಸಕಾfರಿ ಜಮೀನಿಗೆ ನಕಲಿ ದಾಖಲೆಗಳ ಆಧಾರದಲ್ಲಿ ಖಾಸಗಿ ವ್ಯಕ್ತಿಯ ಹೆಸರಿಗೆ ಖಾತೆ, ಪೋಡಿ ಮತ್ತು ಭೂ ಪರಿವರ್ತನೆ ಮಾಡಿ ಅಕ್ರಮ ಎಸಗಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿ, ನೌಕರರ ವಿರುದ್ಧ ಭಾರತೀಯ ನ್ಯಾಯಸಂಹಿತೆಯಡಿ ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 192 (ಎ) ಮತ್ತು ಅನ್ವಯಿಸುವ ಇತರೆ ಕಾನೂನಿನ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ನಿರ್ದೇಶಿಸಿದ್ದರು.
ಹಾರೋಹಳ್ಳಿ ಭೂ ಹಗರಣ; ದಿ ಫೈಲ್ ವರದಿ ಬೆನ್ನಲ್ಲೇ 108 ಕೋಟಿ ಮೌಲ್ಯದ ಜಮೀನು ಸರ್ಕಾರದ ಹೆಸರಿಗೆ ದಾಖಲು
ಈ ಕುರಿತು ದಿ ಫೈಲ್ 2026ರ ಏಪ್ರಿಲ್ 19ರಂದು ವರದಿ ಪ್ರಕಟಿಸಿತ್ತು.
ಡಿಸಿಎಂ ತವರು ಕ್ಷೇತ್ರದಲ್ಲೇ ಭೂ ಅಕ್ರಮ; 108 ಕೋಟಿ ಮೌಲ್ಯದ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ
ಈ ಪ್ರಕರಣದ ಕುರಿತು ದಿ ಫೈಲ್ ಮಾರ್ಚ್ 2ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ
ಈ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿರಲಿಲ್ಲ. ಈ ಕುರಿತು ದಿ ಫೈಲ್ 2026ರ ಏಪ್ರಿಲ್ 10ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




