Thursday | May 21, 2026 |

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಿರುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿತ ಅಧಿಕಾರಿಗಳ ವಿರುದ್ಧ ಇದುವರೆಗೂ ಎಫ್‌ಐಆರ್ ದಾಖಲಾಗಿಲ್ಲ. ಅಧಿಕಾರಿಗಳ ವಿರುದ್ಧ  ಕ್ರಮವಹಿಸಲು ಮೀನಮೇಷ ಎಣಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಆಧರಿಸಿ ಕೂಡಲೇ ಕ್ರಮ ಜರುಗಿಸಬೇಕು ಮತ್ತು ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲೂಕು ಹಾರೋಹಳ್ಳಿ ಗ್ರಾಮದ ಸರ್ವೆ ನಂಬರ್‍‌ 478ರಲ್ಲಿ 2 ಎಕರೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿತ್ತು. ನಕಲಿ ಮಂಜೂರು ದಾಖಲೆಗಳ ಅಧರಿಸಿ ಖಾತೆ, ಪೋಡಿ, ಭೂ ಪರಿವರ್ತನೆ ಮಾಡಿ ಅಕ್ರಮ ಎಸಗಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು 2026ರ ಮಾರ್ಚ್‌ 18ರಂದೇ ಸೂಚಿಸಿತ್ತು. ಈ ಸೂಚನೆ ಹೊರಬಿದ್ದು ತಿಂಗಳಾದರೂ ಸಹ ಯಾವುದೇ ಕ್ರಮವಹಿಸಿಲ್ಲ.

ಇದೀಗ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಅದಿತ್ಯ ಬಿಸ್ವಾಸ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ 2026ರ ಏಪ್ರಿಲ್‌ 2ರಂದು ಪತ್ರ ಬರೆದಿದ್ದಾರೆ.

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

 

 

ಈ ಪತ್ರ ತಲುಪಿದ ದಿನದಂದೇ ಕಂದಾಯ ಇಲಾಖೆಯು ಆರೋಪಿತ ಅಧಿಕಾರಿಗಳಿಗೆ ದೋಷಾರೋಪಣೆ ಪಟ್ಟಿ (ಅನುಬಂಧ 1-4) ಜಾರಿಗೊಳಿಸಿತ್ತು.

 

 

ರಾಮನಗರ ಉಪ ವಿಭಾಗಾಧಿಕಾರಿ  ಬಿನೋಯ್ ಪಿ ಕೆ , ತಹಶೀಲ್ದಾರ್  ಎಂ ವಿಜಯಣ್ಣ, ಹರ್ಷವರ್ಧನ, ಹಕ್ಕು ದಾಖಲೆಯ ಶಿರಸ್ತೆದಾರ್ ನವೀನ್ ಕುಮಾರ್, ಪ್ರವೀಣ್ ಕುಮಾರ್, ಮೋಹನ್ ಕುಮಾರ್, ಅಶೋಕ್ ಲಮಾಣಿ, ಅವಿನಾಶ್‌ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು 2026ರ ಮಾರ್ಚ್‌ 18ರಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರು ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ್ದರು.

 

 

ಕೈಗಾರಿಕೆ ಉದ್ದೇಶಕ್ಕೆ ಈಗಾಗಲೇ ಭೂ ಸ್ವಾಧೀನವಾಗಿದ್ದ ಈ ಜಮೀನು ಆರ್ಥಿಕ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹಂಚಿಕೆಯಾಗಿತ್ತು. ಈ ಸರ್ಕಾರಿ ಜಮೀನಿಗೆ ಖಾತೆ, ಪೋಡಿ ಮಾಡುವ ಸಂದರ್ಭದಲ್ಲೇ ಉಪ ವಿಭಾಗಾಧಿಕಾರಿ ಸೇರಿ ಒಟ್ಟಾರೆ 15 ಮಂದಿ ಅಧಿಕಾರಿ, ನೌಕರರು ಭೂ ಮಾಫಿಯಾದೊಂದಿಗೆ ಶಾಮೀಲಾಗಿರುವುದು ತನಿಖೆಯಿಂದ ದೃಢಪಟ್ಟಿತ್ತು.

ಎರಡು ಎಕರೆ ವಿಸ್ತೀರ್ಣ ಹೊಂದಿರುವ ಈ ಜಮೀನು 87,120 ಚದರ ಅಡಿ ಹೊಂದಿದೆ. ಚದರಡಿಗೆ ಸರ್ಕಾರಿ ಮಾರ್ಗಸೂಚಿ ಮೌಲ್ಯ 6,000 ರು ಇದೆ. ಮಾರುಕಟ್ಟೆಯಲ್ಲಿ 13,000 ರು ನಿಂದ 15,000 ರು ಇದೆ. ಸರ್ಕಾರಿ ಮಾರ್ಗಸೂಚಿ ಮೌಲ್ಯದ ಪ್ರಕಾರ 52.27 ಕೋಟಿ ರು ಇದ್ದರೇ ಮಾರುಕಟ್ಟೆ ಮೌಲ್ಯದ ಪ್ರಕಾರ 108.9 ಕೋಟಿ ರು ಗೂ ಹೆಚ್ಚು ಬೆಲೆ ಬಾಳಲಿದೆ.  ಅಂದಾಜು 108 ಕೋಟಿ ರು ಮೌಲ್ಯವಿರುವ ಸರ್ಕಾರಿ ಜಮೀನು ಕಬಳಿಕೆಯಾಗಿದ್ದರೂ ಸಹ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರೂ ಯಾವುದೇ ಕ್ರಮವಹಿಸಿರಲಿಲ್ಲ.

 

 

 

ಪ್ರಕರಣದ ವಿವರ

ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಯಾಗಿರುವುದನ್ನು ವಿಧಿ ವಿಜ್ಞಾನ ಪ್ರಯೋಗಾಲಯವು ಸಹ ದೃಢಪಡಿಸಿತ್ತು. ಈ ವರದಿ ಆಧರಿಸಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರೂ ಪ್ರಾಥಮಿಕ ತನಿಖೆ ನಡೆಸಿದ್ದರು. ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಈ ಎರಡೂ ಹಂತಗಳಲ್ಲಿ ನಡೆದ ತನಿಖೆಯಲ್ಲಿಯೂ ಸಾಬೀತಾಗಿತ್ತು.   ಸದ್ಯ ಈ ಜಮೀನು ಭೂ ದಾಖಲೆಗಳ ಪ್ರಕಾರ ರಾಯಸಂದ್ರ ರವಿಕುಮಾರ್ ಎಂಬುವರ ಹೆಸರಿನಲ್ಲಿದೆ.

 

 

 

 

ಈ ರಾಯಸಂದ್ರ ರವಿಕುಮಾರ್ ಎಂಬಾತ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅತ್ಯಂತ ನಿಕಟವರ್ತಿ ಎಂದು ತಿಳಿದು ಬಂದಿದೆ.

 

ಕೆಎಸ್‌ಎಫ್‌ಸಿಗೆ ಹಂಚಿಕೆಯಾಗಿದ್ದ ಜಮೀನಿದು

ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ತಾಲೂಕು ಹಾರೋಹಳ್ಳಿ ಗ್ರಾಮದ ಸರ್ವೆ ನಂಬರ್ 478ರಲ್ಲಿ 2 ಎಕರೆ ಸರ್ಕಾರಿ ಜಮೀನಿದೆ. ಈ ಜಮೀನು ಈಗಾಗಲೇ ಭೂ ಸ್ವಾಧೀನವಾಗಿದೆ. ಅಲ್ಲದೇ ಈ ಜಮೀನನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹಂಚಿಕೆಯಾಗಿದೆ. ಈ ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳ ಆಧಾರದಲ್ಲಿ ಖಾಸಗಿ ವ್ಯಕ್ತಿಯಾದ ಸಣ್ಣಪ್ಪ ಎಂಬುವರ ಹೆಸರಿಗೆ ಖಾತೆ, ಪೋಡಿ ಮತ್ತು ಭೂ ಪರಿವರ್ತನೆ ಮಾಡಲಾಗಿದೆ. ಈ ಕುರಿತು ಪ್ರಾದೇಶಿಕ ಆಯುಕ್ತರ ಕಚೇರಿಯು ಮೂಲ ಕಡತ ಮತ್ತು ದಾಖಲೆಗಳನ್ನು ವಶಕ್ಕೆ ಪಡೆದಿತ್ತು.

16 ವರ್ಷಗಳ ಹಿಂದೆಯೇ ಸ್ವಾಧೀನ

ಕಂದಾಯ ದಾಖಲೆಗಳ ಪ್ರಕಾರ ಹಾರೋಹಳ್ಳಿ ಗ್ರಾಮದ ಸರ್ವೆ ನಂಬರ್ 478ರಲ್ಲಿ ಸರ್ಕಾರಿ ಖರಾಬು ಜಮೀನಿದೆ. ಒಟ್ಟು ಜಮೀನಿನ ಪೈಕಿ 23 ಎಕರೆಯು ಕೈಗಾರಿಕೆ ಪ್ರದೇಶಾಭಿವೃದ್ಧಿಗಾಗಿ ಭೂ ಸ್ವಾಧೀನಪಡಿಸಿಕೊಳ್ಳಲು 2006ರ ಜುಲೈ 22ರಂದೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಇದು ಕರ್ನಾಟಕ ರಾಜ್ಯ ಪತ್ರದಲ್ಲಿಯೂ ಪ್ರಕಟವಾಗಿತ್ತು. ನಂತರ 12 ಎಕರೆ 38 ಗುಂಟೆ ವಿಸ್ತೀರ್ಣದ ಜಮೀನಿಗೆ 2010ರ ಜೂನ್‌ 15ರಂದೇ ಅಂತಿಮ ಅಧಿಸೂಚನೆ ಹೊರಡಿಸಿತ್ತು.

 

 

ವಿಶೇಷವೆಂದರೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಅಂದರೇ 2015ರ ಅಕ್ಟೋಬರ್‍‌ 31`ರಂದೇ ಈ 12 ಎಕರೆ 38 ಗುಂಟೆ ವಿಸ್ತೀರ್ಣದ ಈ ಜಮೀನನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಉಚಿತವಾಗಿ ಮಂಜೂರು ಮಾಡಿತ್ತು. ಈ ಜಮೀನು 2016ರ ಜನವರಿ 18ರಂದು ಕೆಐಎಡಿಬಿಗೆ ಹಸ್ತಾಂತರಿಸಲಾಗಿತ್ತು. ಈ ಜಮೀನಿನ ಭಾಗಶಃ ವಿಸ್ತೀರ್ಣ ಸೇರಿದಂತೆ ಒಟ್ಟು 10 ಎಕರೆ ಜಮೀನು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹಂಚಿಕೆ ಮಾಡಲಾಗಿತ್ತು.

ಕೆಎಸ್‌ಎಫ್‌ಸಿಗೆ ಹಂಚಿಕೆ ಮಾಡಿರುವ ಈ ಜಮೀನು ಒತ್ತುವರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಮೀನಿಗೆ ಭದ್ರತೆ ಒದಗಿಸಲು ಅಗತ್ಯ ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಜಮೀನಿನ ಗಡಿ ಗುರುತಿಸಿ ನಕ್ಷೆ ತಯಾರಿಸಿಕೊಡಬೇಕು ಎಂದು 2018ರ ಮೇ 31ರಂದೇ ಅಂದಿನ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮಂಡಳಿಯು ಕೋರಿತ್ತು.

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಭೂ ಸ್ವಾಧೀನಗೊಂಡಿರುವ 12 ಎಕರೆ 38 ಗುಂಟೆ ವಿಸ್ತೀರ್ಣದ ಜಮೀನಿನ ಖಾತೆಯನ್ನು ಮಂಡಳಿ ಹೆಸರಿಗೆ ವರ್ಗಾಯಿಸಲು 2022ರ ಜುಲೈ 16, 2024ರ ಜನವರಿ 12 ಮತ್ತು 2024ರ ಮಾರ್ಚ್‌ 21ರಂದು ಹಲವು ಪತ್ರಗಳ ಮೂಲಕ ಕನಕಪುರ, ಹಾರೋಹಳ್ಳಿ ತಹಶೀಲ್ದಾರ್‍‌ಗೆ ಕೋರಿತ್ತು.

ಈ ಬೆಳವಣಿಗೆ ಮಧ್ಯೆಯೇ 10 ಎಕರೆ ವಿಸ್ತೀರ್ಣದೊಳಗೇ ಇದ್ದ ಜಮೀನಿನ ಪೈಕಿ 2 ಎಕರೆಗೆ ಮ್ಯುಟೇಷನ್‌ ಸೃಜಿಸಿ ಖಾತೆ, ಪೋಡಿ ಸೇರಿದಂತೆ ಭೂ ಪರಿವರ್ತನೆ ಮಾಡಲಾಗಿತ್ತು. ಜೆಎಂಸಿ ಪರಿಶೀಲನೆ ಪ್ರಕಾರ ಸಣ್ಣಪ್ಪ ಎಂಬುವವರಿಗೆ ಖಾತೆ ಮಾಡಲಾಗಿತ್ತು. ಪ್ರಶ್ನಿತ ಈ ಎರಡು ಎಕರೆ ವಿಸ್ತೀರ್ಣದ ಜಮೀನು ಸಹ ಈಗಾಗಲೇ ಕೆಐಡಿಬಿಗೆ ಭೂ ಸ್ವಾಧೀನಗೊಂಡಿದ್ದ 12 ಎಕರೆ 38 ಗುಂಟೆ ವಿಸ್ತೀರ್ಣದಲ್ಲಿಯೇ ಒಳಗೊಂಡಿತ್ತು ಎಂದು ವಿಶೇಷ ಭೂ ಸ್ವಾಧೀನಾಧಿಕಾರಿಯೂ ಸಹ 2025ರ ನವೆಂಬರ್‍‌ 26ರಂದೆ ವರದಿ ಸಲ್ಲಿಸಿದ್ದರು.

ಮತ್ತೊಂದು ವಿಶೇಷವೆಂದರೇ ಇದಕ್ಕೂ ಪೂರ್ವದಲ್ಲಿ ಅಂದರೇ ಖಾತೆ ಮಾಡಲು ಕ್ರಮ ಜರುಗಿಸುವ ಮುನ್ನವೇ ಈ ಜಮೀನನ್ನು ಸಣ್ಣಪ್ಪ ಎಂಬುವರಿಗೆ ಖಾತೆ ಮಾಡಲಾಗಿತ್ತು. ಸಣ್ಣಪ್ಪ ಎಂಬುವರಿಗೆ ಖಾತೆ ಆಗಿರುವ ಈ ಎರಡು ಎಕರೆ ಜಮೀನು ಹಾರೋಹಳ್ಳಿ ಕೈಗಾರಿಕೆ ಪ್ರದೇಶಕ್ಕೆ ಭೂ ಸ್ವಾಧೀನವಾಗಿದೆ ಮತ್ತು ಇದು ಕೈಗಾರಿಕೆ ಪ್ರದೇಶದ ಒಳಗಡೆ ಇದೆ ಎಂದು ಕೆಐಎಡಿಬಿಯೂ ಸಹ 2024ರ ಜನವರಿ 18ರಂದು ವರದಿ ಸಲ್ಲಿಸಿತ್ತು.

 

 

ಒತ್ತುವರಿ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹಂಚಿಕೆಯಾಗಿದ್ದ ಜಮೀನಿಗೆ ಭದ್ರತೆ ಒದಗಿಸಬೇಕು ಎಂದು 2018ರಲ್ಲಿಯೇ ಮಂಡಳಿಯು ಕೋರಿದ್ದರೂ ಸಹ ಈ ಜಮೀನಿಗೆ ಭದ್ರತೆ ಒದಗಿಸಿರಲಿಲ್ಲ. ಹೀಗಾಗಿ ಈ ಜಮೀನು ಒತ್ತುವರಿಯಾಗಿತ್ತು. ಒತ್ತುವರಿಯಾಗಿದ್ದ ಜಮೀನಿನಲ್ಲಿ ದೇವಸ್ಥಾನವನ್ನೂ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಈ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ದೇವಸ್ಥಾನವನ್ನು ತೆರವುಗೊಳಿಸಬೇಕು ಎಂದು ಅಭಿವೃದ್ಧಿ ಅಧಿಕಾರಿಗಳು, ರಾಮನಗರದ ಅಂದಿನ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‍‌ರನ್ನು ಕೋರಿತ್ತು.

 

 

ದರಖಾಸ್ತು ಮೂಲಕ ಮಂಜೂರಾಗಿದೆಯೇ?

ಹಾರೋಹಳ್ಳಿ ಗ್ರಾಮದ ಸರ್ವೆ ನಂಬರ್‍‌ 478ರಲ್ಲಿನ 2 ಎಕರೆ ವಿಸ್ತೀರ್ಣದ ಈ ಜಮೀನು ದರಖಾಸ್ತು ಮೂಲಕ 1968ರಲ್ಲೇ ಮಂಜೂರಾಗಿದೆ ಮತ್ತು ಸಾಗುವಳಿ ಚೀಟಿ ನೀಡಲಾಗಿದೆ ಎಂಬ ದಾಖಲೆ ಸೃಷ್ಟಿಸಲಾಗಿತ್ತು. ಆದರೆ ಖಾತೆ ಆಗಿರಲಿಲ್ಲ. ಹೀಗಾಗಿ ಈ ಸಾಗುವಳಿ ಚೀಟಿ ಪ್ರಕಾರ ಖಾತೆ ಮಾಡಿಕೊಡಬೇಕು ಎಂದು ಸಣ್ಣಪ್ಪ ಎಂಬುವರು ಹಾರೋಹಳ್ಳಿ ತಾಲೂಕು ತಹಶೀಲ್ದಾರ್‍‌ಗೆ 2023ರ ನವೆಂಬರ್‍‌ 3ರಂದು ಮನವಿ ಸಲ್ಲಿಸಿದ್ದರು.

ಈ ಮನವಿ ಆಧರಿಸಿ ಜಮೀನಿನ ದಾಖಲೆಗಳ ನೈಜತೆ ಕುರಿತು ವಿಶೇಷ ಭೂ ಸ್ವಾಧೀನಾಧಿಕಾರಿ 2024ರ ಜನವರಿ 18ರಂದು ತಹಶೀಲ್ದಾರ್‍‌ಗೆ ವರದಿ ಸಲ್ಲಿಸಿದ್ದರು. ಈ ವರದಿ ಪ್ರಕಾರ ಸರ್ವೆ ನಂಬರ್‍‌ 478ರಲ್ಲಿನ ಜಮೀನು, ಹಾರೋಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿರುವ ವ್ಯಾಪ್ತಿಯೊಳಗಿತ್ತು. ಇದೇ ಅಂಶವನ್ನು 2025ರ ನವೆಂಬರ್‍‌ 26ರಂದು ಸಲ್ಲಿಸಿದ್ದ ವರದಿಯಲ್ಲಿಯೂ ದೃಢಪಡಿಸಲಾಗಿತ್ತು. ಆದರೂ ಸಹ ಸಣ್ಣಪ್ಪ ಎಂಬುವರ ಹೆಸರಿಗೆ ಈ ಜಮೀನನ್ನು ಖಾತೆ ಮಾಡಿಕೊಡಲಾಗಿತ್ತು.

ಸಣ್ಣಪ್ಪನೊಂದಿಗೆ ಮೊದಲೇ ಜಿಪಿಎ ಮಾಡಿಕೊಂಡಿದ್ದ ರವಿ

ಸಣ್ಣಪ್ಪ ಎಂಬುವರ ಹೆಸರಿಗೆ ಈ ಜಮೀನು ಖಾತೆಯಾಗುತ್ತಿದ್ದಂತೆ ಈ ಜಮೀನಿಗೆ ಪೋಡಿ ದುರಸ್ತಿ ಮಾಡಿಕೊಡಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿಕಟವರ್ತಿ ಎಂದು ಹೇಳಲಾದ ಎಂ ಆರ್ ರವಿ ಎಂಬುವರು ಕೋರಿಕೆ ಸಲ್ಲಿಸಿದ್ದರು. ಮತ್ತೊಂದು ವಿಶೇಷವೆಂದರೇ ಈ ಕೋರಿಕೆ ಸಲ್ಲಿಸುವ ಮುನ್ನವೇ ಎಂ ಅರ್ ರವಿ ಎಂಬುವರು ಸಣ್ಣಪ್ಪ ಎಂಬುವರೊಂದಿಗೆ ಜಿಪಿಎ ಕೂಡ ಮಾಡಿಕೊಂಡಿದ್ದರು.

ತಹಶೀಲ್ದಾರ್ ಅವರ ಆದೇಶದ ಮೇರೆಗೆ ಹಾರೋಹಳ್ಳಿ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಈ ಜಮೀನಿಗೆ ಪೋಡಿ ದುರಸ್ತಿ ಮಾಡಿದ್ದರು. ಇಲ್ಲಿಯೂ ಸಹ ಹಲವು ಲೋಪಗಳು ನಡೆದಿವೆ.

ಪೋಡಿ ದುರಸ್ತಿ ಹೆಸರಿನಲ್ಲಿ ದಾಖಲೆಗಳ ಸೃಷ್ಟಿ

ಪೋಡಿ ದುರಸ್ತಿ ಮಾಡುವ ಮುನ್ನ ಜಮೀನಿಗೆ ಸಂಬಂಧಿಸಿದ ದಾಖಲೆಗಳ ನೈಜತೆಯನ್ನು ಪರಿಶೀಲಿಸಬೇಕಿತ್ತು. ಆದರೆ ನೈಜತೆಯನ್ನು ಪರಿಶೀಲಿಸದೆಯೇ ಪೋಡಿ ದುರಸ್ತಿ ಮಾಡಿದ್ದರು. ಈ ಸಂಬಂಧ 2025ರ ಮೇ 21ರಂದು ಪತ್ರವನ್ನು ಬರೆದಿದ್ದರು. ‘1968ನೇ ಸಾಲಿನಲ್ಲಿ ಮಂಜೂರಾಗಿರುವ ಜಮೀನಿಗೆ 2024ನೇ ಸಾಲಿನಲ್ಲಿ ಖಾತೆಯಾಗಿ ಪಹಣಿಯಾಗಿದೆ. ಈ ಮಗ್ಗೆ ಮತ್ತೊಮ್ಮೆ ಮಂಜೂರಾತಿ ಬಗ್ಗೆ ನೈಜತೆ ಪರಿಶೀಲಿಸಿ ದುರಸ್ಥಿಪಡಿಸುವ ಸಂಬಂಧ ದೃಢೀಕೃತ ಸಾಗುವಳಿ ಚೀಟಿ ವಿತರಣೆ ವಹಿಯ ನಕಲು ಮತ್ತು ಮೂಲ ಮಂಜೂರಿದಾರರ ಹೆಸರಿರುವ ಸಾಗುವಳಿ ಚೀಟಿಯಲ್ಲಿ ನಮೂದಿಸಿರುವ ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನವನ್ನು ಮುಂದಿರಿಸಿ ದುರಸ್ತಿಪಡಿಸುವ ಬಗ್ಗೆ ಸ್ಪಷ್ಟ ಆದೇಶ ಮಾಡಿಕೊಡಲು ಮತ್ತೊಮ್ಮೆ ಎಚ್ಚರಿಸಿದ್ದರೂ ಕೂಡ ಪೋಡಿ ದುರಸ್ತಿ ಮಾಡಲು ಮಂಜೂರಿ ನೈಜತೆಯನ್ನು ಉದ್ದೇಶಪೂರ್ವಕವಾಗಿ ಮತ್ತೊಮ್ಮೆ ದೃಢೀಕರಿಸಿರುತ್ತಾರೆ,’ ಎಂದು ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನ ಪತ್ರದಲ್ಲಿನ ಅಂಶಗಳನ್ನೇ ಮರೆಮಾಚಲಾಗಿತ್ತೇ?

ಮೂಲ ಮಂಜೂರಾತಿಯ ದಾಖಲೆಗಳ ನೈಜತೆಯನ್ನು ಪರಿಶೀಲಿಸದೆಯೇ ಪೋಡಿ ದುರಸ್ತಿ ಹಾರೋಹಳ್ಳಿ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಜಿಲ್ಲಾಧಿಕಾರಿಗಳ ಆದೇಶವನ್ನೇ ತಿರುಚಿದ್ದರು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಎಡಿಎಲ್‌ಆರ್‍‌ ಅವರು ಕಡತದಲ್ಲಿ ಇರಿಸಿದ್ದ ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನ ಪತ್ರವು (1968ರ ಆಗಸ್ಟ್‌ 6) ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4)ರಡಿ 2 ಎಕರೆ ವಿಸ್ತೀರ್ಣವನ್ನು ಒಟ್ಟಾರೆ ಗೋಮಾಳ ವಿಸ್ತೀರ್ಣದಿಂದ ತಗ್ಗಿಸಿಕೊಳ್ಳಲು ಹೊರಡಿಸಿರುವ ಆದೇಶವಾಗಿತ್ತು. ‘ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳನ್ನು ಉಲ್ಲೇಖಿಸಿ ಜಮೀನನ್ನು ಮಂಜೂರು ಮಾಡಿ ಹೊರಡಿಸಿರುವ ಭೂ ಮಂಜೂರಿ ಆದೇಶವಾಗಿರುವುದಿಲ್ಲ.

ಭೂ ಮಂಜೂರಿ ದಾಖಲೆಗಳಾಗಿರಲಿಲ್ಲ

ಅಲ್ಲದೇ ಏಕವ್ಯಕ್ತಿ ಕೋರಿಕೆ ಅಡಿ ಪೋಡಿ ದುರಸ್ತಿ ಕೈಗೊಳ್ಳುವ ಸಮಯದಲ್ಲಿ ಪ್ರಶ್ನಿತ ಕಡತದಲ್ಲಿನ ದಾಖಲೆಗಳನ್ನು ಪರಿಶೀಲಿಸಿ ಅವುಗಳು ಭೂ ಮಂಜೂರಿ ದಾಖಲೆಗಳೇ, ನೈಜತೆಯಿಂದ ಕೂಡಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮೇಲು ಸಹಿ ಮಾಡಬೇಕಿತ್ತು. ಕಡತದಲ್ಲಿನ ದಾಖಲೆಗಳು ಭೂ ಮಂಜೂರಿ ದಾಖಲೆಗಳಾಗಿರಲಿಲ್ಲ. ಮತ್ತು ಅವುಗಳು ನೈಜತೆಯಿಂದ ಕೂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆಯೇ ಪೋಡಿ ದುರಸ್ತಿ ಮಾಡಲು ಮಂಜೂರಿ ನೈಜತೆಯನ್ನು ದೃಢೀಕರಿಸಿದ್ದರು. ಈ ಮೂಲಕ ನಮೂನೆ 01ರಿಂದ 05ನ್ನು ಮೇಲು ಸಹಿ ಮಾಡಿದ್ದಾರೆ,’ ಎಂದು ಪ್ರಾದೇಶಿಕ ಆಯುಕ್ತರು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

2024ರ ಆದೇಶ ಗಾಳಿಗೆ ತೂರಿದ್ದೇಕೆ?

ಅದೇ ರೀತಿ ಭೂ ಮಂಜೂರಾಗಿರುವ ದಾಖಲೆಗಳನ್ನು ಸ್ಕ್ಯಾನ್ ಆಡಿ ಅಪ್ಲೋಡ್‌ ಮಾಡಿದ ಮಾತ್ರಕ್ಕೆ ಆ ದಾಖಲೆಗಳು ಭೂ ಮಂಜೂರಾತಿ ದಾಖಲೆಗಳು ಮತ್ತು ನೈಜತೆಯಿಂದ ಕೂಡಿವೆ ಎಂದು ಭಾವಿಸಬಾರದು. ದಾಖಲೆಗಳ ನೈಜತೆ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕು. ಮತ್ತು ಕಚೇರಿಯಲ್ಲಿ ಲಭ್ಯವಿರುವ ದರಖಾಸ್ತು ವಹಿ, ಸಾಗುವಳಿ ಚೀಟಿ ವಿತರಣೆ ವಹಿ, ಐ ಎಲ್‌ ಮತ್ತು ಆರ್‍‌ ಆರ್‍‌ ವಹಿಗಳೊಂದಿಗೆ ಹೋಲಿಕೆ ಮಾಡಬೇಕು. ಈ ಮೂಲಕ ಮಂಜೂರಾತಿಯಾಗಿರುವ ದಾಖಲೆಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು 2024ರ ನವೆಂಬರ್‍‌ 25ರಂದೇ ಆದೇಶ ಹೊರಡಿಸಿತ್ತು. ಆದರೂ ಈ ಆದೇಶದಂತೆ ಕ್ರಮ ವಹಿಸಿಲ್ಲ. ಅಷ್ಟೇ ಅಲ್ಲ ಕಡೇ ಪಕ್ಷ ಈ ಕಡತವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಶೀಲನೆಗೆ ಕಳಿಸಲೂ ಕ್ರಮ ಕೈಗೊಂಡಿಲ್ಲ.

ದಾಖಲೆಗಳೇ ಅನುಮಾನಸ್ಪದ- ಉಪ ವಿಭಾಗಾಧಿಕಾರಿ ಪಾತ್ರವೇನು?

ಮೂಲ ಮಂಜೂರಾತಿ ಕಡತ ಲಭ್ಯವಿದ್ದ ಪ್ರಕರಣಗಳಲ್ಲಿ ತುರ್ತು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಏಕ ವ್ಯಕ್ತಿ ಕೋರಿಕೆ ಮೇರೆಗೆ ಪೋಡಿ ಮಾಡಲು ಪರಿಗಣಿಸಬೇಕು. ಆದರೆ ಈ ಪ್ರಕರಣದಲ್ಲಿ ಮೂಲ ಮಂಜೂರಾತಿಯ ಕಡತವೇ ಇರಲಿಲ್ಲ. ಹಾಗೆಯೇ ಲಭ್ಯವಿದ್ದ ಪ್ರಶ್ನಿತ ಕಡತದಲ್ಲಿ ಭೂ ಮಂಜೂರಿ ಆದೇಶಗಳೂ ಇರಲಿಲ್ಲ. ಇನ್ನಿತರೆ ದಾಖಲೆಗಳು ಅನುಮಾನಸ್ಪದವಾಗಿದ್ದವು. ಅಲ್ಲದೇ ಯಾವುದೇ ಸಮಕಾಲೀನ ದಾಖಲೆಗಳೊಂದಿಗೆ ಹೋಲಿಕೆ ಮಾಡಿಕೊಂಡಿಲ್ಲ. ಹಾಗೆಯೇ ಯಾವುದೇ ತುರ್ತು ಮತ್ತು ಅನಿವಾರ್ಯ ಸಂದರ್ಭವಿಲ್ಲದಿದ್ದರೂ ಸಹ ರಾಮನಗರ ಉಪ ವಿಭಾಗದ ಉಪ ವಿಭಾಗಾಧಿಕಾರಿಯು ಪೋಡಿ ದುರಸ್ತಿ ಮಾಡಲು ಮಂಜೂರಾತಿಯ ನೈಜತೆಯನ್ನು ದೃಢೀಕರಿಸಿದ್ದರು.

ಷರತ್ತುಗಳನ್ನು ಪರಿಶೀಲಿಸಿಲ್ಲ

ಇನ್ನು ಪಹಣಿ ಕಾಲಂ 11ರಲ್ಲಿ 15 ವರ್ಷಗಳ ಕಾಲ ಯಾವುದೇ ಪರಭಾರೆ ಮಾಡತಕ್ಕದ್ದಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ ಈ ಷರತ್ತಿನ ನಿಬಂಧನೆಯನ್ನು ತೆರವುಗೊಳಿಸಲು ಉಪ ವಿಭಾಗಾಧಿಕಾರಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಈ ಷರತ್ತುಗಳನ್ನು ವಿಧಿಸಿ ತಾಂತ್ರಿಕ ಅನುಮೋದನೆ ನೀಡಿದ್ದರೂ ಸಹ ಷರತ್ತುಗಳನ್ವಯ ಪರಿಶೀಲಿಸಿರಲಿಲ್ಲ. ಈ ಮೂಲಕ ಆ ಜಮೀನು ಮತ್ತೊಬ್ಬರಿಗೆ ಪರಭಾರೆಯಾಗಲು ಉಪ ವಿಭಾಗಾಧಿಕಾರಿ ಕಾರಣರಾಗಿದ್ದರು.

 

 

ಹಾಗೆಯೇ ಈ ಪ್ರಕರಣದಲ್ಲಿ ಒಳಗೊಂಡಿರುವ ಜಮೀನು ಸರ್ಕಾರಿ ಜಮೀನಾಗಿದೆ. ಈಗಾಗಲೇ ಖಾತೆಯಾಗಿ ಪೋಡಿಯಾಗಿದೆ. ಇದು ಗೊತ್ತಿದ್ದರೂ ಸಹ ಮತ್ತೊಮ್ಮೆ ದಾಖಲೆಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲೇ ಇಲ್ಲ. ಆದರೂ ನಿಬಂಧನೆಯನ್ನು ತೆರವುಗೊಳಿಸಲು ತಹಶೀಲ್ದಾರ್‍‌ ಕಚೇರಿಯು ಉಪ ವಿಭಾಗಾಧಿಕಾರಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು.

ರಜಾ ದಿನ ಭಾನುವಾರದಂದೇ ಹಣ ಪಾವತಿ

ಇಡೀ ಪ್ರಕರಣದಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನಂದರೇ ಈ ಜಮೀನಿಗೆ ಸಂಬಂಧಿಸಿದಂತೆ 1968ರ ಅಕ್ಟೋಬರ್‍‌ 6ರಂದು ಕಿಮ್ಮತ್ತು ಪಾವತಿಸಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿತ್ತು. ಕಿಮ್ಮತ್ತು ಪಾವತಿಸಿದ್ದ ದಿನ ಭಾನುವಾರವಾಗಿತ್ತು. ಕಿಮ್ಮತ್ತು ಪಾವತಿಸಿದ್ದರು ಎಂದು ಹೇಳಲಾಗಿದ್ದ ದಾಖಲೆಗಳು ಮುದ್ರಣಗೊಂಡಿದ್ದ ಅವಧಿ, ದಾಖಲೆಯಲ್ಲಿ ಉಪಯೋಗಿಸಿದ್ದ ಶಾಹಿ, ಸೀಲು, ಹೆಬ್ಬೆರಳಿನ ಮುದ್ರೆ, ಸಾಗುವಳಿ ಚೀಟಿ, ಅಧಿಕೃತ ಜ್ಞಾಪನ ದಾಖಲೆಗಳ ಬರಹಗಳು, ವಿವರಗಳು ಒಂದೊಕ್ಕೊಂದು ತಾಳೆ ಇರಲಿಲ್ಲ.

ಆ ನಂತರ  ಈ ಜಮೀನಿಗೆ ಹೊಸ ಸರ್ವೆ ನಂಬರ್‍‌ (887) ನೀಡಲಾಗಿತ್ತು.  ಸಣ್ಣಪ್ಪ ಎಂಬುವರು ಎಂ ಆರ್ ರವಿ ಎಂಬುವರಿಗೆ 2025ರ ಸೆ.10ರಂದು ನೋಂದಣಿ ಕ್ರಮ ಪತ್ರದ ಮೂಲಕ  ಮಾರಾಟ ಮಾಡಿದ್ದರು. 2025ರ ಸೆ.18ರಂದು ರವಿ ಹೆಸರಿಗೆ ಖಾತೆ ಆಗಿತ್ತು.

 

 

 

‘ಈ ದಾಖಲೆಗಳನ್ನು ಇತರೆ ಸಮಕಾಲೀನ ಭೂ ಮಂಜೂರಿ ಕಡತದ ದಾಖಲೆಗಳೊಂದಿಗೆ ಈ ಪ್ರಾಧಿಕಾರದಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಶೀಲನೆಗೆ ಒಳಪಡಿಸಿದ್ದು ಸದರಿ ದಾಖಲೆಗಳು ಸೃಷ್ಟಿಯಾಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿಯಿಂದ ದೃಢಪಟ್ಟಿರುತ್ತದೆ,’ ಎಂದು ಪ್ರಾದೇಶಿಕ ಆಯುಕ್ತ ಆಮ್ಲಾನ್‌ ಅದಿತ್ಯ ಬಿಸ್ವಾಸ್‌ ಅವರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

 

ಬೆಂಗಳೂರು ದಕ್ಷಿಣ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕ ಹನುಮೇಗೌಡ, ತಪಾಸಕ ರಿಹಾನ್ ಷರೀಫ್, ಸರ್ವೆಯರ್ ರಕ್ಷಿತ್ ಪಿ, ತಾಂತ್ರಿಕ ಅಧೀಕ್ಷಕ ನಂದೀಶ್‌ , ಚೆಕ್ಕಿಂಗ್ ಭೂ ಮಾಪಕ ನಂದೀಶ್‌ ಕುಮಾರ್ ಜಿ ಎಸ್, ಪ್ರಭಾಕರ್ ಎಸ್‌ ಡಿ, ರಘುನಾಥ್ ಕೆ ಬಿ ಅವರು ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಪಟ್ಟಿ ನೀಡಿದೆ. ಇವರಿಗೆ ಕಾರಣ ಕೇಳಿ ನೋಟೀಸ್‌ ಜಾರಿಗೊಳಿಸಿ ಲಿಖಿತ ಸಮಜಾಯಿಷಿ ನೀಡಲು ನಿರ್ದೇಶಿಸಿತ್ತು.

Hot this week

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...
Please Scan to make Your Contribution

Topics

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

Related Articles

Popular Categories

error: Content is protected !!