ಬೆಂಗಳೂರು; ಹೆಚ್‌ಎಂಟಿಯು ಅನಧಿಕೃತವಾಗಿ ಅರಣ್ಯ ಜಮೀನನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿರುವುದು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಹಸ್ತಾಂತರಿಸಿರುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿತ ಅಧಿಕಾರಿ ಐಎಫ್‌ಎಸ್ ಆರ್ ಗೋಕುಲ್ ಅವರನ್ನು ರಾಜ್ಯ ಸರ್ಕಾರವು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿ ನೋಟಿಫಿಕೇಷನ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಸರಣಿ ವರದಿಗಳನ್ನು ದಾಖಲೆ ಸಹಿತ ಪ್ರಕಟಿಸಿತ್ತು. ಈ ಪ್ರಕರಣದಲ್ಲಿ ಐಎಫ್‌ಎಸ್ ಅಧಿಕಾರಿ ಆರ್ ಗೋಕುಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಆರ್ ಗೋಕುಲ್ ಅವರು ಸರ್ಕಾರದ ವಿರುದ್ಧವೇ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆಪಾದಿಸಿದ್ದರು. ಅಲ್ಲದೇ ತಮ್ಮ ರಕ್ಷಣೆ ನೀಡಬೇಕು ಎಂದು ಸಿಬಿಐಗೂ ಪತ್ರವನ್ನು ಬರೆದಿದ್ದರು. ಅದರೆ ಇದಾವುದಕ್ಕೂ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದಿರಲಿಲ್ಲ. ಅಮಾನತುಗೊಳಿಸಿ ಹೊರಡಿಸಿರುವ ಆದೇಶದಲ್ಲಿ ಈ ಎಲ್ಲ ವಿವರಗಳೂ ಇವೆ.
ಬೇಲಿಕೇರಿ ಕಬ್ಬಿಣದ ಅದಿರು ಕಳವು ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ನ್ಯಾಯಾಲಯವು ಸಜೆ ವಿಧಿಸಿತ್ತು. ಕೆಲವೇ ಕೆಲವು ದಿನಗಳ ಅಂತರದಲ್ಲಿ ಇದೇ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಯಾಗಿರುವ ಐಎಫ್‌ಎಸ್ ಅಧಿಕಾರಿ ಗೋಕುಲ್ ಅವರಿಗೆ, ಹೆಚ್‌ಎಂಟಿಯು ಅರಣ್ಯ ಜಮೀನನ್ನು ಅನಧಿಕೃತವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿರುವ ಪ್ರಕರಣದಲ್ಲಿ ನೋಟೀಸ್ ನೀಡಿತ್ತು. ಈ ಪ್ರಕರಣದಲ್ಲಿ ಸರ್ಕಾರವು ತಮ್ಮನ್ನು ಬಲಿಪಶು ಮಾಡಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.
ಹೆಚ್‌ಎಂಟಿ ಪ್ರಕರಣ; ಸರ್ಕಾರದ ವಿರುದ್ಧವೇ ಆರೋಪ, ರಕ್ಷಣೆ ಕೋರಿ ಸಿಬಿಐಗೆ ಐಎಫ್‌ಎಸ್ ಗೋಕುಲ್ ಪತ್ರ
ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡುವ ಮೂಲಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸರ್ಕಾರವನ್ನು ಗೋಕುಲ್ ಅವರು ಬೆದರಿಸುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿವರ್ಗವು ಇದಕ್ಕೆ ತಿರುಗೇಟು ನೀಡಿತ್ತು.
ಹೆಚ್‌ಎಂಟಿ ವಿವಾದ; ಅರಣ್ಯ, ಪರಿಸರಕ್ಕೆ ಘೋರ ಅನ್ಯಾಯ, ಸೇವಾ ಲೋಪ, ಬೇಲಿಯೇ ಎದ್ದು ಹೊಲ ಮೇಯ್ದಿತ್ತೇ?
ಹೆಚ್‌ಎಂಟಿಯು ಅನಧಿಕೃತವಾಗಿ ಅರಣ್ಯ ಜಮೀನನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿರುವುದು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಹಸ್ತಾಂತರಿಸಿರುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿತ ಅಧಿಕಾರಿ ಐಎಫ್‌ಎಸ್ ಆರ್ ಗೋಕುಲ್ ಅವರು ‘ ಈ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ,’ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದಿದ್ದಾರೆ ಎನ್ನಲಾಗಿರುವ ಪತ್ರವು ಅಧಿಕಾರಿವರ್ಗದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಎಚ್‌ಎಂಟಿ ಅರಣ್ಯ ಜಮೀನು ಪ್ರಕರಣ; ಮಧ್ಯಂತರ ಅರ್ಜಿಗೆ ಘಟನೋತ್ತರ ಅನುಮೋದನೆ ಪಡೆಯದ ಗೋಕುಲ್
ಹೆಚ್ಎಂಟಿ ವಶದಲ್ಲಿರುವ ಅರಣ್ಯ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯ ನಿರ್ವಹಣಾಧಿಕಾರಿಯಾಗಿ ನೇಮಕಗೊಂಡ ನಂತರ ಡಿನೋಟಿಫಿಕೇಷನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಅರಣ್ಯ ಸಚಿವಾಲಯವು ನೋಟೀಸ್ ಜಾರಿಗೊಳಿಸಿತ್ತು.
ಈ ನೋಟೀಸ್‌ಗೆ ಉತ್ತರ, ಸಮಜಾಯಿಷಿ ನೀಡಿರುವ ಗೋಕುಲ್ ಅವರು ‘Concerns and Victimization,‘ ಎಂದು ಮುಖ್ಯಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ. ಈ ಮೂಲಕ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ಅಧಿಕಾರಿಗಳು ವಿವರಿಸಿದ್ದರು.
ನೋಟೀಸ್ ನೀಡಿರುವ ಸಂದರ್ಭವನ್ನು ಬೇಲಿಕೇರಿ ಬಂದರಿನಲ್ಲಿ ಕಬ್ಬಿಣ ಅದಿರು ಕಳವು ಪ್ರಕರಣ, ಆಡಳಿತ ಪಕ್ಷದ ಶಾಸಕರಿಗೆ ನ್ಯಾಯಾಲಯವು ಸಜೆ ವಿಧಿಸಿರುವ ತೀರ್ಪಿನ ಸಂದರ್ಭಕ್ಕೂ ತಳಕು ಹಾಕಿದ್ದರು.
ಎಚ್‌ಎಂಟಿ; ಅರಣ್ಯ ಪ್ರದೇಶ ವರ್ಗಾವಣೆ ಮಾಡಲು ಕೇಂದ್ರ ಸಚಿವ ಸಂಪುಟವು ಸಕ್ಷಮ ಪ್ರಾಧಿಕಾರವಲ್ಲ
ಬಲಿಪಶುವೇ?
ಗೋಕುಲ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿರುವ ತಮ್ಮ ಪತ್ರದಲ್ಲಿ ‘Concerns and Victimization,’ ಎಂದು ಉಲ್ಲೇಖಿಸಿ, ಬೇಲಿಕೇರಿ ಕಬ್ಬಿಣದ ಅದಿರು ಕಳವು ಪ್ರಕರಣದಲ್ಲಿ ತಾವು ಪ್ರಾಸಿಕ್ಯೂಷನ್ ಸಾಕ್ಷಿಯಾಗಿದ್ದು, ಹಾಲಿ ಆಡಳಿತ ಪಕ್ಷದ ಒಬ್ಬರು ಶಾಸಕರಿಗೆ 2024ರ ಅಕ್ಟೋಬರ್ 24ರಂದು ಸಜೆ ಆಗಿರುತ್ತದೆ. ಅದಾದ ಕೆಲವೇ ದಿನಗಳಲ್ಲಿ ಅಂದರೆ 2024ರ ನವೆಂಬರ್ 11ರಂದು ತಾವು ನೋಟೀಸ್ ನೀಡಿರುವುದಾಗಿ ಉಲ್ಲೇಖಿಸಿ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿರುತ್ತಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ಹೇಳಲಾಗಿದೆ.
ಬೆದರಿಕೆ ತಂತ್ರವೋ?
ಗೋಕುಲ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿನ ಅಂಶಗಳನ್ನು ಅರಣ್ಯ ಇಲಾಖೆಯು ತಳ್ಳಿ ಹಾಕಿದೆ. ನೋಟೀಸ್ ನೀಡಿರುವುದಕ್ಕೂ ಹಿಂದಿನ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಾಬೀತುಪಡಿಸುವ ಅಂಶಗಳನ್ನು ಟಿಪ್ಪಣಿ ಹಾಳೆಯಲ್ಲಿ ಚರ್ಚಿಸಿರುವುದು ಗೊತ್ತಾಗಿದೆ.
ಅರಣ್ಯ ಸಚಿವರ ಕಾರ್ಯಾಲಯದ ಟಿಪ್ಪಣಿ (2024ರ ಸೆ. 24, ಟಿಪ್ಪಣಿ ಸಂಖ್ಯೆ ಅಜೀಪ/984/2024-25 e-8604601/2024 )ಯನ್ನು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕಳಿಸಿತ್ತು. ಇದರಲ್ಲಿ ಸಚಿವರ ಮತ್ತು ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೇ ಸಾವಿರಾರು ಕೋಟಿ ರುಪಾಯಿ ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಐ ಎ ಹಾಕಿರುವ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಿ 7 ದಿನಗಳ ಒಳಗಾಗಿ ಉತ್ತರ ಪಡೆದು ಮುಂದಿನ ಕ್ರಮ ಜರುಗಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿರುತ್ತದೆ ಎಂದು ವಿವರಣೆ ನೀಡಿರುವುದು ತಿಳಿದು ಬಂದಿದೆ.
‘ಅಂದರೇ ಆಡಳಿತ ಪಕ್ಷದ ಹಾಲಿ ಶಾಸಕರ ವಿರುದ್ಧವಾಗಿ ನ್ಯಾಯಾಲಯ ತೀರ್ಪು ಪ್ರಕಟಿಸುವ ಒಂದು ತಿಂಗಳುಗಳ ಮೊದಲೇ ಈ ಸೂಚನೆ ಅರಣ್ಯ ಸಚಿವಾಲಯದಿಂದ ಬಂದಿದ್ದು, ಆರ್ ಗೋಕುಲ್ ಅವರು ತಮ್ಮ ಕರ್ತವ್ಯ ಲೋಪ ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧವೇ ಗಂಭೀರ ಸ್ವರೂಪದದ ಮತ್ತು ಆಧಾರ ರಹಿತ ಆರೋಪ ಮಾಡುವಂತಹ ಉದ್ಧಟತನ ಪ್ರದರ್ಶಿಸಿರುತ್ತಾರೆ,’ ಎಂದು ವಿವರಿಸಿದ್ದರು.
ಹೆಚ್‌ಎಂಟಿ ಪ್ರಕರಣ; ಆದೇಶಗಳ ನೈಜತೆ ಪರಿಶೀಲಿಸಿಲ್ಲ, ಖಾತ್ರಿಪಡಿಸಿಕೊಳ್ಳಲೂ ಇಲ್ಲ, ಸಮಜಾಯಿಷಿ ಒಪ್ಪದ ಸರ್ಕಾರ
ಅಲ್ಲದೇ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಸರ್ಕಾರದ ವಿರುದ್ಧವೇ ಆರೋಪ ಮಾಡಿ ರಕ್ಷಣೆ ಕೋರಿ ಸಿಬಿಐಗೆ ಪತ್ರ ಬರೆದಿದ್ದಾರೆ. ಇದು ಕೂಡ ಅಶಿಸ್ತಿನ ಪರಮಾವಧಿಯಾಗಿದೆ. ನಿಯಮಬಾಹಿರವಾಗಿದೆ ಮತ್ತು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅನುಸರಿಸುತ್ತಿರುವ ಬೆದರಿಕೆ ತಂತ್ರವೆಂದೇ ಪರಿಗಣಿಸಬೇಕಾಗುತ್ತದೆ ಎಂದೂ ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿರುವುದನ್ನು ಸ್ಮರಿಸಬಹುದು.