ಬೆಂಗಳೂರು; ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ವಾಸವಿರುವ ಮನೆಯನ್ನೂ ಸೇರಿದಂತೆ ಅದಕ್ಕೆ ಹೊಂದಿಕೊಂಡಿರುವ ಬಿಬಿಎಂಪಿ ಕಚೇರಿ, ಉದ್ಯಾನಗಳಿಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದರೂ ಸಹ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡಲು ಆದೇಶ ಹೊರಡಿಸಿದ್ದರು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಹಿಂದಿನ ಉಪ ವಿಭಾಗಾಧಿಕಾರಿ ಮಹೇಶ್ ಬಾಬು ಅವರಿಗೆ ನೀಡಿದ್ದ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. ಈ ನೋಟೀಸ್ ಸಕಾರಣ ಮತ್ತು ದಾಖಲೆಗಳೊಂದಿಗೆ ಉಪ ವಿಭಾಗಾಧಿಕಾರಿ ಎನ್ ಮಹೇಶ್ ಬಾಬು ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
‘ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ತಮ್ಮ ಕಚೇರಿಯಿಂದಲೇ ಭೂ ಪರಿವರ್ತನೆಯಾಗಿದೆ,’ ಎಂದು ದಾಖಲೆ ಸಮೇತ ತಿರುಗೇಟು ನೀಡಿರುವುದು ಇದೀಗ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ ಪರವಾನಿಗೆ ಭೂ ಮಾಪಕರು ಮತ್ತು ಖಾಸಗಿ ವ್ಯಕ್ತಿ ಬಲರಾಂ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬೆನ್ನಲ್ಲೇ ಎನ್ ಮಹೇಶ್ ಬಾಬು ಅವರು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ಇಡೀ ಪ್ರಕರಣದಲ್ಲಿ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಜಿಲ್ಲಾಧಿಕಾರಿಯೂ ಸೇರಿದಂತೆ ಉನ್ನತ ಅಧಿಕಾರಿಗಳ ವರ್ಗವು ಇದನ್ನು ಕೆಳ ಹಂತದ ಅಧಿಕಾರಿಗಳ ತಲೆಗೆ ಕಟ್ಟುವ ಒಳ ಮಾರ್ಗಗಳನ್ನು ಹುಡುಕುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದಕ್ಕೆ ಕೆಳ ಹಂತದ ಅಧಿಕಾರಿಗಳು ಸಹ ಈ ಪ್ರಕರಣದಲ್ಲಿ ಭೂ ಪರಿವರ್ತನೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ಆಗಿದೆ ಎಂದು ದಾಖಲೆಗಳನ್ನು ಎತ್ತಿ ಹಿಡಿದಿರುವುದು ಗೊತ್ತಾಗಿದೆ.
ಈ ಪ್ರಕರಣದ ಬಗ್ಗೆ ಬೆಂಗಳೂರು ಉತ್ತರ ವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕ ಎನ್ ಮಹೇಶ್ ಬಾಬು ಅವರಿಗೆ 2026ರ ಮೇ 8ರಂದು ಜಿಲ್ಲಾಧಿಕಾರಿಗಳ ಕಚೇರಿಯು ನೋಟೀಸ್ ಜಾರಿಗೊಳಿಸಿತ್ತು.
ಈ ನೋಟೀಸ್ ಪ್ರತಿ ಮತ್ತು ಮಹೇಶ್‌ಬಾಬು ಅವರು ನೀಡಿರುವ ಸಮಜಾಯಿಷಿಯ ಉತ್ತರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮಹೇಶ್‌ಬಾಬು ಅವರಿಗೆ ನೀಡಿದ್ದ ನೋಟೀಸ್‌ನಲ್ಲೇನಿತ್ತು?
ಸಹಕಾರ ನಗರ ಕ್ಲಬ್ ನ ಕಾರ್ಯದರ್ಶಿಯು ಯಲಹಂಕ ತಾಲೂಕು ಯಲಹಂಕ ಹೋಬಳಿ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 13/3 (ಹಳೇ ಸರ್ವೆ ನಂಬರ್ 13/1) ರ ಜಮೀನು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿ ಆದೇಶ (BDIS/ALN/SRN 15/86-87 ದಿನಾಂಕ 19.03.1987) ರಲ್ಲಿಯೇ ವೈ ಎನ್ ಜನಾರ್ದನ ರಾವ್ ಮತ್ತು ಪಿ ಆರ್ ಪ್ರಸಾದ್ ರಾಜು ಅವರು ಭೂ ಪರಿವರ್ತನೆ ಆದೇಶ ಪಡೆದಿದ್ದಾರೆ.
ಮತ್ತು ಆ ನಂತರದಲ್ಲಿ ಈ ಜಮೀನು ಸಂಬಂಧಪಟ್ಟ ಬಿಡಿಎ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಮಂಜೂರಾತಿ ಪಡೆದಿದ್ದಾರೆ. ನಕ್ಷೆ ಅನುಮತಿಯಂತೆ ಒಟ್ಟಾರೆ ವಿಸ್ತೀರ್ಣದಲ್ಲಿ 0-33 ಗುಂಟೆ ಸಿ ಎ ನಿವೇಶನಕ್ಕಾಗಿ ಕಾಯ್ದರಿಸಿದ್ದು ಬಿಡಿಎ ಪ್ರಾಧಿಕಾರವು ಈ ವಿಸ್ತೀರ್ಣವನ್ನು ಸಹಕಾರ ನಗರ ಕ್ಲಬ್ ಗೆ ಹಂಚಿಕೆ ಮಾಡಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಈ ಎಲ್ಲಾ ಅಂಶಗಳನ್ನು ಮರೆಮಾಚಿ ಬಲರಾಮ್ ಎಂಬುವರು ಅಕ್ರಮವಾಗಿ ಜಮೀನನ್ನು ಸರ್ವೆ ನಂಬರ್ 13/1ರಿಂದ 13/3 ಎಂಧು ಪೋಡಿ ಮಾಡಿಸಿಕೊಂಡು ತಮ್ಮ ಹೆಸರಿಗೆ ಖಾತೆ ಮಾಡಿಕೊಂಡು ಆನಂತರದಲ್ಲಿ ಹೊಸದಾಗಿ ಭೂ ಪರಿವರ್ತನೆ ಆದೇಶ ಪಡೆದುಕೊಂಡಿದ್ದಾರೆ. ಅಲ್ಲದೇ 3ನೇ ವ್ಯಕ್ತಿಯು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ (ಡಬ್ಲ್ಯೂ ಪಿ ನಂ 11325/2018) ರಿಟ್ ಅರ್ಜಿ ದಾಖಲಿಸಿದ್ದಾರೆ. ಅಲ್ಲದೇ ಈ ಸಂಬಂಧ ಯಥಾ ಸ್ಥಿತಿ ತಡೆಯಾಜ್ಞೆ ಪಡೆದಿದ್ದಾರೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಭೂ ಪರಿವರ್ತನೆ ಆದೇಶ ರದ್ದು ಮಾಡಬೇಕು ಎಂದು ಕೋರಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಮಹೇಶ್ ಬಾಬು ಅವರ ಗಮನಸೆಳೆದಿರುವುದು ತಿಳಿದು ಬಂದಿದೆ.
ಹಾಗೆಯೇ ಈ ಬಗ್ಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಈ ಸಂಬಂಧ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ವರದಿ ಸಲ್ಲಿಸಿದ್ದರು. ಸ್ಥಳ ಪರಿಶೀಲನೆ ಪ್ರಕಾರ ಈ ಜಮೀನಿನಲ್ಲಿ ಆಟದ ಮೈದಾನವಿದ್ದು ಬಿಬಿಎಂಪಿಯ ಕಚೇರಿ ಕಟ್ಟಡವಿದೆ. ಅಲ್ಲದೇ ದೂರುದಾರರು ಸಲ್ಲಿಸಿರುವ ದೂರಿನ ಜತೆಗೆ ಲಗತ್ತಿಸಿರುವ ದಾಖಲೆಗಳ ಪ್ರಕಾಋ ಈ ಜಮೀನು ಸಹಕಾರ ನಗರ ಕ್ಲಬ್‌ಗೆ 30 ವರ್ಷಗಳಿಗೆ ಲೀಸ್ ಗೆ ನೀಡಿರುವುದು ಕಂಡುಬಂದಿದೆ ಎಂದು ವರದಿ ಸಲ್ಲಿಸಿರುತ್ತಾರೆ ಎಂದು ವಿವರಿಸಿರುವುದು ಗೊತ್ತಾಗಿದೆ.

ಸುಳ್ಳು ದಾಖಲೆಗಳು ಮತ್ತು ಸುಳ್ಳು ಮಾಹಿತಿ ಆಧರಿಸಿ ಮಾಸ್ಟರ್ ಪ್ಲಾನ್ ಬೇಸ್ಡ್ ಭೂ ಪರಿವರ್ತನೆ ಆದೇಶವನ್ನು ಪಡೆದಿರುವದುಉ ಕಂಡುಬಂಧಿತ್ತು. ಹೀಗಾಗಿ 2026ರ ಏಪ್ರಿಲ್ 30ರಂದು ಭೂ ಪರಿವರ್ತನೆ ಆದೇಶವನ್ನು ಅಸಿಂಧುಗೊಳಿಸಿ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ನೀವು ಈ ಹಿಂದೆ ಬೆಂಗಳೂರು ಉತ್ತರ ಉಪ ವಿಭಾಗದ ಕಚೇರಿಯಲ್ಲಿ ಉಪವಿಭಾಗಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ತಮ್ಮ ನ್ಯಾಯಾಲಯದ ಆದೇಶ (ಸಂಖ್ಯೆ; ಆರ್‍ಎ (ಬಿಎನ್‌ಎ) 198/11-2 2015ರ ಮಾರ್ಚ್ 2)ದ ಪ್ರಕಾರ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 13/1 ಮತ್ತು ಸರ್ವೆ ನಂಬರ್ 13/2ರ ಜಮೀನಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರು ಮಾಡಿದ್ದ ಆದೇಶವನ್ನು (ಸಂಖ್ಯೆ; ಎಂ ಅರ್ 516/83-84 ಮತ್ತು ಎಂ ಆಋf 67/83-84) ನ್ನು ರದ್ದುಪಡಿಸಿದೆ. ಎಂ ಆರ್ 10/84-85ರಂತೆ ಮೇಲ್ಮನವಿದಾರರ ಹೆಸರಿಗೆ ನಿಯಮಾನುಸಾರ ಖಾತೆ ದಾಖಲಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು ಆದೇಶ ಮಾಡಿದ್ರು. ಅಲ್ಲದೇ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ಆದೇಶಿಸಿದ್ದೀರಿ ಎಂದು ಕಾರಣ ಕೇಳುವ ನೋಟೀಸ್‌ನಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಇದರ ಪ್ರಕಾರ ಸರ್ವೆ ನಂಬರ್ 13/1ರಲ್ಲಿ 1-19 ಎಕರೆ ಜಮೀನನ್ನು ಬಲರಾಮ್ ಎಂಬುವರಿಗೆ ಮತ್ತು 1-20 ಎಕರೆ ಜಮೀನನ್ನು ವೈ ಎಸ್ ಜನಾರ್ದನರಾವ್ ಹಾಗೂ ಇತರರರ ಹೆಸರಿಗೆ ಮ್ಯುಟೇಷನ್ (ಸಂಖ್ಯೆ; ಎಂಆರ್‍ಎಚ್‌ಎಸ್ /14-15) ನಂತೆ ರಾಜಸ್ವ ನಿರೀಕ್ಷರಿಂದಲೂ ಖಾತೆ ಅಂಗೀಕಾರವಾಗಿತ್ತು.

ಈ ಆದೇಶವನ್ನು ಪರಿಶೀಲಿಸಿದಾಗ ಆದೇಶದಲ್ಲಿ ಪ್ರತಿವಾದಿ 1 ತಹಶೀಲ್ದಾರ್ ಅವರಿಂದ ಜಮೀನಿನ ವಸ್ತುಸ್ಥಿತಿ ಬಗ್ಗೆ ಖಾತರಿಪಡಿಸಿಕೊಂಡ ಅಥವಾ ತಹಶೀಲ್ದಾರ್ ಅವರ ವರದಿಯನ್ನು ಪಡೆದಿರುವ ಬಗ್ಗೆ ಉಲ್ಲೇಖಿಸದೇ ಆದೇಶವನ್ನು ಹೊರಡಿಸಿರುವುದು ಕಂಡು ಬರುತ್ತದೆ. ಇದರಿಂದ ಖಾತೆಯು ಮುಂದುವರೆದಿರುತ್ತದೆ. ಇದರಿಂದಾಗಿ ಅರ್ಜಿದಾರರು ತಪ್ಪು ಮಾಹಿತಿ, ಸುಳ್ಳು ಅಫಡವಿಟ್‌ನನ್ನು ನೀಡಿ ಮಾಸ್ಟರ್ ಬೇಸ್ಡ್ ಭೂ ಪರಿವರ್ತನೆ ಆದೇಶ ಪಡೆದುಕೊಂಡಿದ್ದಾರೆ. ಆದ್ದರಿಂದ ಈ ನಿರ್ಲಕ್ಷ್ಯದ ವರ್ತನೆ ಬಗ್ಗೆ ಸರ್ಕಾರಕ್ಕೆ ಶಿಸ್ತುಕ್ರಮದ ವರದಿಯನ್ನು ಏಕೆ ಸಲ್ಲಿಸಬಾರದು ಎಂದು ನೋಟೀಸ್‌ನಲ್ಲಿ ಸೂಚಿಸಿದೆ.
ಇದಕ್ಕೆ 2026ರ ಮೇ 14ರಂದು ಮಹೇಶ್‌ಬಾಬು ಅವರು ಉತ್ತರಿಸಿದ್ದಾರೆ.
ಉತ್ತರದಲ್ಲೇನಿದೆ?
ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಯಾಗಿದ್ದ ವೇಳೆ (ಆರ್‍ಎ/ಬಿಎನ್‌ಎ/198/2011-12) ಈ ಪ್ರಕರಣದ ಕಡತದಲ್ಲಿ ಲಭ್ಯವಿದ್ದ ದಾಖಲೆಗಳ ಆಧಾರದ ಮೇಲೆ ಈ ಹಿಂದೆ ಚಾಲ್ತಿಯಲ್ಲಿದ್ದ ಎಂ ಆರ್ ನಂಬರ್ 516/83-84 ಎಂ ಆರ್ ನಂಬರ್ 67/83/84 ನ್ನು ರದ್ದುಪಡಿಸಿ ಹಾಲಿ ಚಾಲ್ತಿಯಲ್ಲಿದ್ದ ಎಂ ಆರ್ ನಂಬರ್ 10/84-85ರಂತೆ ಮೇಲ್ಮನವಿದಾರರ ಹೆಸರಿಗೆ ದಾಖಲೆಗಳನ್ನು ಪರಿಶೀಲಿಸಿ ಖಾತೆ ಮಾಡಲು ನಿಯಮಾನುಸಾರ ಕ್ರಮ ವಹಿಸಲು ತಹಶೀಲ್ದಾರ್ ಗೆ 2015ರ ಮಾರ್ಚ್ 2ರಂದು ಆದೇಶ ಮಾಡಿದ್ದೇನೆ ಎಂದು ತಮ್ಮ ಉತ್ತರದಲ್ಲಿ ಮಹೇಶ್ ಬಾಬು ಒಪ್ಪಿಕೊಂಡಿದ್ದಾರೆ.

ಆದರೆ ನಾನು ಮಾಡಿದ ಆದೇಶದ ವಿರುದ್ಧ ತಮ್ಮ ನ್ಯಾಯಾಲಯದಲ್ಲಿ ಆರ್ ಪಿ ನಂಬರ್ 441/2015-16ರಂತೆ ಪ್ರಕರಣ ದಾಖಲಾಗಿತ್ತು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿ ಶಂಕರ್ ಅವರ ಮುಂದೆಯೂ ಈ ಪ್ರಕರಣವು ಬಂದಿತ್ತು. ಆದರೆ ಇತ್ಯರ್ಥಗೊಂಡಿರಲಿಲ್ಲ. ವಿಚಾರಣೆಯನ್ನು ಕಾಯ್ದಿರಿಸಿತ್ತು.


ಹಾಲಿ ಪ್ರಕರಣವು 2016ರಿಂದ 2025-26ರವರೆಗೂ ವಿಚಾರಣೆಗೆ ಬಾಕಿ ಇತ್ತು.

ಈ ಪ್ರಕರಣವು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ವೇಳೆಯಲ್ಲಿಯೇ ಭೂ ಪರಿವರ್ತನೆ ಹಾಗೂ ಪೋಡಿಯಾಗಿರುವುದು ಕಂಡು ಬರುತ್ತದೆ. ಅಲ್ಲದೇ ತಾವು ನೋಟೀಸ್‌ನಲ್ಲಿ ತಿಳಿಸಿರುವಂತೆ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ (ಸಂಖ್ಯೆ ; ಡಬ್ಲ್ಯೂಪಿ 11325/2018) ತಡೆಯಾಜ್ಞೆ ಸಹ ಇದೆ ಎಂದು ತಿಳಿಸಿರುವುದು ಗೊತ್ತಾಗಿದೆ.

‘ನಾನು ಹೊರಡಿಸಿದ ಆದೇಶದ ವಿರುದ್ಧ ತಮ್ಮ ನ್ಯಾಯಾಲಯದಲ್ಲಿ ಪ್ರಕರಣವು ಬಾಕಿ ಇರುವಾಗಲೇ ತಮ್ಮ ಕಚೇರಿಯಿಂದಲೇ ಭೂ ಪರಿವರ್ತನೆಯಾಗಿರುವುದು ಕಂಡು ಬಂದಿದೆ. ಈ ವೇಳೆಯಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ. ಆದರೂ ನಾನು ಹೊರಡಿಸಿರುವ ಆದೇಶವ ಸುಮಾರು 11 ವರ್ಷಗಳ ಹಿಂದಿನಾಗಿದೆ. ಈ ಆದೇಶದ ವಿರುದ್ಧ ಪ್ರಕರಣಗಳು ಬಾಕಿ ಇದ್ದರೂ ಸಹ ವಹಿವಾಟುಗಳೂ ನಡೆದಿರುತ್ತದೆ. ಇದರಲ್ಲಿ ನನ್ನದು ಯಾವುದೇ ವೈಯಕ್ತಿಕವಾಗಲಿ ಹಾಗೂ ನಿರ್ಲಕ್ಷ್ಯತನ ತೋರಿರುವುದಿಲ್ಲ. ಈ ಹಿನ್ನೆಲೆಯಲ್ಲಿ ತಾವುಗಳು ನನಗೆ ನೀಡಿರುವ ನೋಟೀಸ್‌ನ್ನು ಹಿಂಪಡೆದು ಮುಕ್ತಾಯಗೊಳಿಸಬೇಕು,’ ಎಂದು ಕೋರಿರುವುದು ತಿಳಿದು ಬಂದಿದೆ.
ಈ ಪ್ರಕರಣದ ಬಗ್ಗೆ ದಿ ಫೈಲ್ ದಾಖಲೆ ಸಮೇತ ವರದಿ ಪ್ರಕಟಿಸಿತ್ತು.
ಈ ಪ್ರಕರಣವು ಹೊರಬಿದ್ದ ನಂತರ ಪರವಾನಿಗೆ ಭೂಮಾಪಕ ಮತ್ತು ಬಲರಾಂ ಎಂಬ ಖಾಸಗಿ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಈ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




