ವಿದ್ಯಾರ್ಥಿ ವೇತನಕ್ಕೆ ಅನುದಾನ ಕೊರತೆ; 48,019 ಅರ್ಜಿಗಳಿಗೆ ಇನ್ನೂ ದೊರೆಯದ ಅನುಮೋದನೆ

ಬೆಂಗಳೂರು; ಹಿಂದುಳಿದ ವರ್ಗಗಳು, ಪರಿಶಿಷ್ಟ ವರ್ಗಗಳು ಮತ್ತು  ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ಪೂರ್ವ ರಾಜ್ಯ  ವಿದ್ಯಾರ್ಥಿ ವೇತನ ಪಾವತಿಸಲು ಅನುದಾನ ಕೊರತೆ ಎದುರಾಗಿದೆ. ಹೀಗಾಗಿ 2024-25ನೇ ಸಾಲಿಗೆ ಸಂಬಂಧಿಸಿದಂತೆ ಈ ಮೂರು ಇಲಾಖೆಗಳ ವ್ಯಾಪ್ತಿಯಲ್ಲಿ 48,019 ಅರ್ಜಿಗಳಿಗೆ ಇನ್ನೂ ಅನುಮೋದನೆ ದೊರೆತಿಲ್ಲ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2025ರ ಮೇ 30 ಮತ್ತು 31ರಂದು ನಡೆದಿದ್ದ   ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಒದಗಿಸಿರುವ ಅಂಕಿ ಅಂಶಗಳ ವಿವರಣೆಯಲ್ಲಿ ಈ ಮಾಹಿತಿ ಇದೆ.

 

ಇದಕ್ಕೆ ಸಂಬಂಧಿಸಿದಂತೆ ಇಲಾಖೆಯು ಸಲ್ಲಿಸಿರುವ ಸಮಗ್ರ ವಿವರ ಮತ್ತು ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮೆಟ್ರಿಕ್‌ ಪೂರ್ವ ರಾಜ್ಯ ವಿದ್ಯಾರ್ಥಿ ವೇತನಕ್ಕೆ ಒಟ್ಟಾರೆ 6,39,601 ಅರ್ಜಿಗಳನ್ನು ಇಲಾಖೆಯು ಸ್ವೀಕರಿಸಿತ್ತು. ಈ ಪೈಕಿ 6,01,527 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಅನುದಾನದ ಕೊರತೆ ಇರುವ ಕಾರಣಕ್ಕೆ ಇನ್ನೂ 37,393 ಅರ್ಜಿಗಳಿಗೆ ಅನುಮೋದನೆ ದೊರೆತಿಲ್ಲ. ಅಂದಾಜು 6.10 ಕೋಟಿ ರು ಮೊತ್ತದ ವಿದ್ಯಾರ್ಥಿ ವೇತನ ಪಾವತಿಸಲು ಬಾಕಿ ಇದೆ   ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

ಮೆಟ್ರಿಕ್‌ ನಂತರದ ಶುಲ್ಕ ಮರುಪಾವತಿ ಯೋಜನೆಯಡಿ ಒಟ್ಟು 2,202,438 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 1,05,128 (2023-24ನೇ ಸಾಲಿನ ಬಾಕಿ ಇರುವ 47,705) ವಿದ್ಯಾರ್ಥಿಗಳಿಗೆ 116.9 ಕೋಟಿ ರು ವಿದ್ಯಾರ್ಥಿ ವೇತನ ನೀಡಲಾಗಿದೆ. 2024-25ನೇ ಸಾಲಿನಲ್ಲಿ ಇನ್ನೂ ಬಾಕಿ ಉಳಿದ ಅಂದಾಜು1,21,956 ವಿದ್ಯಾರ್ಥಿಗಳಿಗೆ ಅಂದಾಜು 89.61 ಕೋಟಿ ರು  ವಿದ್ಯಾರ್ಥಿ ವೇತನ ಮೊತ್ತವನ್ನು ಪಾವತಿಸಬೇಕಾಗಿದೆ ಎಂದು ಗೊತ್ತಾಗಿದೆ.

 

 

ಅಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ವಿದ್ಯಾರ್ಥಿ ವೇತನ ಯೋಜನೆಗಳಡಿಯಲ್ಲಿ 2024-25ನೇ ಸಾಲಿನಲ್ಲಿ ಬಾಕಿ ಇರುವ 1,60,055 ವಿದ್ಯಾರ್ಥಿಗಳಿಗೆ ಅಂದಾಜು 99.06 ಕೋಟಿ ರು ವಿದ್ಯಾರ್ಥಿ ವೇತನ ಪಾವತಿಸಬೇಕಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸಹಮತಿಗಾಗಿ ಪ್ರಸ್ತಾವನೆ ಸಲ್ಲಿಸಿರುವುದು ತಿಳಿದು ಬಂದಿದೆ.

 

ದಾವಣಗೆರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಎಂದರೇ 5,501  ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಎಂದರೇ ಅರ್ಜಿಗಳು ಅನುಮೋದನೆಗೆ ಬಾಕಿ ಇವೆ. ಅದೇ ರೀತಿ ಎರಡನೇ ಸ್ಥಾನದಲ್ಲಿರುವ  ಕೊಡಗು ಜಿಲ್ಲೆಯಲ್ಲಿ  3,827, ಮೂರನೇ ಸ್ಥಾನದಲ್ಲಿರುವ   ಬೆಳಗಾವಿ ಜಿಲ್ಲೆಯಲ್ಲಿ 3,752 ಅರ್ಜಿಗಳಿಗೆ ಅನುಮೋದನೆ ದೊರೆತಿಲ್ಲ.  ಚಾಮರಾಜ ನಗರ ಜಿಲ್ಲೆಯಲ್ಲಿ 2,048, ಗದಗ್‌ನಲ್ಲಿ 1,664, ಹಾವೇರಿಯಲ್ಲಿ 1,450, ರಾಯಚೂರು ಜಿಲ್ಲೆಯಲ್ಲಿ 1,220, ರಾಮನಗರ ಜಿಲ್ಲೆಯಲ್ಲಿ 1,974, ತುಮಕೂರು ಜಿಲ್ಲೆಯಲ್ಲಿ 1,216, ಉತ್ತರ ಕನ್ನಡದಲ್ಲಿ 1,126, ವಿಜಯಪುರದಲ್ಲಿ 1,902 ಅರ್ಜಿಗಳಿಗೆ ಅನುಮೋದನೆ ದೊರೆಯದಿರುವುದು ಗೊತ್ತಾಗಿದೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾಸಿರಿ ಮತ್ತು ಶುಲ್ಕ ಮರು ಪಾವತಿ ಯೋಜನೆಗಳಡಿಯಲ್ಲಿ 2,05,335 ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಪೈಕಿ 1,89,811 ಅರ್ಜಿಗಳನ್ನು ಅನುಮೋದಿಸಿದೆ. ಹಾಗೂ 7,775 ಅರ್ಜಿಗಳನ್ನು ತಿರಸ್ಕರಿಸಿದೆ. ಇಲಾಖೆಯಿಂದ ಅನುಮೋದಿತ ಅರ್ಜಿಗಳಲ್ಲಿ 1,86,120 ಸಂಖ್ಯೆಯ ಅರ್ಜಿಗಳನ್ನು ಮಂಜೂರು ಮಾಡಿದೆ. ಇದರಲ್ಲಿ 1,44,171 ಅರ್ಜಿಗಳನ್ನು ಡಿಬಿಟಿ ಶಾಖೆಗೆ ಕಳಿಸಿದೆ.

 

ಮಂಜೂರಾತಿಗೆ 1,691 ಅರ್ಜಿಗಳು ಹಾಗೂ ಡಿಬಿಟಿಗೆ ಕಳಿಸಲು 41,949 ಅರ್ಜಿಗಳು ಬಾಕಿ ಇವೆ. ಡಿಬಿಟಿ ಮೂಲಕ 64,4641 ಅರ್ಜಿಗಳಿಗೆ 97.67 ಕೋಟಿ ರು ಪಾವತಿಯಾಗಿದೆ. ಉಳಿದ 79,554 ಅರ್ಜಿಗಳಿಗೆ ಪಾವತಿಯಾಗಿರುವ ಮಾಹಿತಿ ಬರಬೇಕಿದೆ ಎಂದು ಇಲಾಖೆಯು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

ಹಾಗೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 1,00,672 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 90,671 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. ಇನ್ನೂ   9,854 ಅರ್ಜಿಗಳಿಗೆ ಅನುಮೋದನೆ ದೊರೆತಿಲ್ಲ. ಉಡುಪಿ ಜಿಲ್ಲೆಯಲ್ಲಿ 1,638, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,209 ಅರ್ಜಿಗಳು ಅನುಮೋದನೆಗೆ ಬಾಕಿ ಇರಿಸಿಕೊಂಡಿದೆ.

 

 

ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಶುಲ್ಕ ಮರು ಪಾವತಿ, ಪಿಎಂ ಯಶಸ್ವಿ, ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿ ವೇತನ ಯೋಜನೆಗಳಡಿಯಲ್ಲಿ 6,74,761 ಅರ್ಜಿಗಳನ್ನು ಸ್ವೀಕರಿಸಿತ್ತು. ಈ ಪೈಕಿ 6,52,577 ಅರ್ಜಿಗಳನ್ನು ಅನುಮೋದಿಸಿದೆ. 6,249 ಅರ್ಜಿಗಳನ್ನು ತಿರಸ್ಕರಿಸಿದೆ.

 

 

 

 

ಅನುಮೋದಿತ ಅರ್ಜಿಗಳಲ್ಲಿ 5,61,419 ಅರ್ಜಿಗಳನ್ನು ಮಂಜೂರು ಮಾಡಿದೆ. ಇನ್ನುಳಿದ 5,20,567 ಅರ್ಜಿಗಳನ್ನು ಡಿಬಿಟಿಗೆ ಕಳಿಸಲಾಗಿದೆ. ಮಂಜೂರಾತಿಗೆ 91,158 ಅರ್ಜಿಗಳು ಹಾಗೂ ಡಿಬಿಟಿಗೆ ಕಳಿಸಲು 40,857 ಅರ್ಜಿಗಳು ಬಾಕಿ ಇವೆ. 4,67,952 ಅರ್ಜಿಗಳಿಗೆ 372.06 ಕೋಟಿ ರು ಪಾವತಿಯಾಗಿದೆ. ಉಳಿದ 51,833 ಅರ್ಜಿಗಳಿಗೆ ಪಾವತಿಯಾಗಿರುವ ಬಗ್ಗೆ ಮಾಹಿತಿ ಬರಬೇಕಿದೆ ಎಂದು ಇಲಾಖೆಯು ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

 

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 3,99,965 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 3,98,863 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. ಇನ್ನೂ 677 ಅರ್ಜಿಗಳಿಗೆ ಅನುಮೋದನೆ ನೀಡುವುದು ಬಾಕಿ ಇದೆ. ಈ ಇಲಾಖೆಯಲ್ಲಿ 3,681 ಅರ್ಜಿಗಳು ತಿರಸ್ಕೃತವಾಗಿವೆ. 98,260 ಅರ್ಜಿಗಳನ್ನು ಡಿಬಿಟಿಗೆ ಕಳಿಸಿದೆ. ಮಂಜೂರಾತಿಗೆ 854 ಅರ್ಜಿಗಳು ಹಾಗೂ ಡಿಬಿಟಿಗೆ ಕಳಿಸಲು 27,380 ಅರ್ಜಿಗಳು ಬಾಕಿ ಇವೆ. ಡಿಬಿಟಿ ಮೂಲಕ 108.07 ಕೋಟಿ ರುಗಳನ್ನು ಪಾವತಿಯಾಗಿದೆ. ಉಳಿದ 35,852 ಅರ್ಜಿಗಳಿಗೆ ಪಾವತಿಯಾಗಿರುವ ಕುರಿತಾದ ಮಾಹಿತಿಯು ಬರಬೇಕಿದೆ ಎಂದು ಇಲಾಖೆಯು ತಿಳಿಸಿದೆ.

 

 

ಪೂರಕವಾಗಿ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿರುವ ವಿದ್ಯಾಸಿರಿ ಯೋಜನೆಗೆ ಹಂಚಿಕೆಯಾಗಿದ್ದ ಒಟ್ಟು 24.99 ಕೋಟಿ ರು.ನಲ್ಲಿ 2025ರ ಫೆ.12ರ ಅಂತ್ಯಕ್ಕೆ 8.62 ಕೋಟಿಯಷ್ಟೇ ಬಿಡುಗಡೆಯಾಗಿತ್ತು. ವಿಶೇಷವೆಂದರೇ 2024-25ನೇ ಸಾಲಿನ ಆಯವ್ಯಯದಲ್ಲಿ ವಿದ್ಯಾಸಿರಿಗೆ ಹಂಚಿಕೆಯಾಗಿದ್ದ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು    ಡಿಸೆಂಬರ್‍‌ 2ರವರೆಗೆ  ಖರ್ಚು ಮಾಡದೇ ಹಾಗೇ ಇಟ್ಟಿತ್ತು.

 

 

ಅಲ್ಪಸಂಖ್ಯಾತರ ‘ವಿದ್ಯಾಸಿರಿ’ಯ ಪ್ರಗತಿಯಲ್ಲಿ ಹಿನ್ನಡೆ; 24.99 ಕೋಟಿಯಲ್ಲಿ 8.62 ಕೋಟಿ ಖರ್ಚು, 16.36 ಕೋಟಿ ಬಾಕಿ

 

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ  ನೀಡುವ ಉದ್ದೇಶದ  ವಿದ್ಯಾಸಿರಿ ಯೋಜನೆಗೆ 24,99,00,000 ರು ಹಂಚಿಕೆಯಾಗಿತ್ತು. ಈ ಪೈಕಿ 2024ರ ಡಿಸೆಂಬರ್‍‌ 2ರ ಅಂತ್ಯಕ್ಕೆ 18,74,25,000 ರು ಅನುದಾನ ಸ್ವೀಕೃತವಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನದ ಪೈಕಿ ನಯಾ ಪೈಸೆಯನ್ನೂ ಇಲಾಖೆಯು ಖರ್ಚು ಮಾಡಿರಲಿಲ್ಲ. ಬದಲಿಗೆ ತನ್ನ ಬಳಿಯೇ ಇಟ್ಟುಕೊಂಡಿತ್ತು.

 

 

ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ 7.85 ಲಕ್ಷ ವಿದ್ಯಾರ್ಥಿಗಳಿಗೆ 290 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದರು.

 

2024-25ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒಟ್ಟಾರೆ 3,059.84 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಡಿಸೆಂಬರ್‍‌ ಅಂತ್ಯಕ್ಕೆ ಒಟ್ಟಾರೆ 1,505.72 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ 1,276.29 ಕೋಟಿ ರು ವೆಚ್ಚವಾಗಿತ್ತು. ಒಟ್ಟು ಅನುದಾನದಲ್ಲಿ ಶೇ.41.71ರಷ್ಟೇ ವೆಚ್ಚವಾಗಿತ್ತು ಎಂಬುದು ಕೆಡಿಪಿ ಸಭೆಗೆ ಮಂಡಿಸಿದ್ದ ಅಂಕಿ ಅಂಶದಿಂದ ತಿಳಿದು ಬಂದಿದೆ.

 

 

 

2023ರ ನವೆಂಬರ್‌ 18ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಇಲಾಖಾ ಮುಖ್ಯಸ್ಥರು ಆಯವ್ಯಯ ವಾಸ್ತವಿಕ ಬಿಡುಗಡೆ, ವೆಚ್ಚದ ವಿವರಗಳನ್ನು ಮುಂದಿರಿಸಿದ್ದರು.

ಡಿಸೆಂಬರ್ ಅಂತ್ಯಕ್ಕೆ ಶೇ.57.34ರಷ್ಟು ಮಾತ್ರ ವೆಚ್ಚ, ಕಳೆದ ಸಾಲಿಗೆ ಹೋಲಿಸಿದರೆ ಕೇವಲ ಶೇ.2.3ರಷ್ಟೇ ಪ್ರಗತಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನದ ಪೈಕಿ ಬಿಡಿಗಾಸನ್ನೂ ಒದಗಿಸಿಲ್ಲ. ಇಲಾಖಾವಾರು ಫಲಾನುಭವಿ ಆಧರಿತ ಕಾರ್ಯಕ್ರಮಗಳಲ್ಲೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅತ್ಯಂತ ಕನಿಷ್ಠ ಪ್ರಮಾಣದ ಅನುದಾನ ಬಿಡುಗಡೆಯಾಗಿತ್ತು.

 

ಆಯವ್ಯಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒಟ್ಟಾರೆ 2,101.20 ಕೋಟಿ ರು. ಅನುದಾನ ಒದಗಿಸಿದೆ. ಈ ಪೈಕಿ ಅಕ್ಟೋಬರ್‌ ಅಂತ್ಯಕ್ಕೆ 421.06 ಕೋಟಿಯಷ್ಟೇ ಬಿಡುಗಡೆಯಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ.20ರಷ್ಟು ಮಾತ್ರ ಬಿಡುಗಡೆಯಾದಂತಾಗಿದೆ. ಇದರಲ್ಲಿ 303.58 ಕೋಟಿ ರು. ಖರ್ಚಾಗಿತ್ತು.

 

ಕೇಂದ್ರ ಪುರಸ್ಕೃತ ಯೋಜನೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯ ಸರ್ಕಾರವು 83.00 ಕೋಟಿ ರು.ಗಳನ್ನು ಆಯವ್ಯಯದಲ್ಲಿ  ಅನುದಾನ ಒದಗಿಸಿಕೊಂಡಿದೆ. ಕೇಂದ್ರ ಸರ್ಕಾರವು 100 ಕೋಟಿ ರು. ಒದಗಿಸಿದೆ. ಒಟ್ಟಾರೆ 183 ಕೋಟಿ ರು. ಅನುದಾನವಿದ್ದರೂ ಅಕ್ಟೋಬರ್‌ ಅಂತ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಿಡಿಗಾಸೂ ಬಿಡುಗಡೆ ಮಾಡಿರಲಿಲ್ಲ.

ಅಲ್ಪಸಂಖ್ಯಾತರಿಗೆ ಅನುದಾನ; 2,101.20 ಕೋಟಿ ರು.ನಲ್ಲಿ ಬಿಡುಗಡೆ ಮಾಡಿದ್ದು ಕೇವಲ 421.60 ಕೋಟಿ

ಅದೇ ರೀತಿ ಇದೇ ಇಲಾಖೆಗೆ ಸಂಬಂಧಿಸಿದ ಪ್ರಧಾನ ಮಂತ್ರಿ ಜನವಿಕಾಸ ಕಾರ್ಯಕ್ರಮಕ್ಕೂ ರಾಜ್ಯದಿಂದ 83 ಕೋಟಿ ರು., ಕೇಂದ್ರದಿಂದಲೂ 100 ಕೋಟಿ ರು. ಅನುದಾನ ಒದಗಿಸಿತ್ತು. ಅಕ್ಟೋಬರ್‌ ಅಂತ್ಯಕ್ಕೆ ನಯಾಪೈಸೆಯನ್ನೂ ನೀಡಿರಲಿಲ್ಲ.

 

ಇಲಾಖಾವಾರು ಫಲಾನುಭವಿ ಆಧರಿತ ಯೋಜನೆಗಳಲ್ಲಿಯೂ ಇದೇ ಸ್ಥಿತಿ ಇದೆ. ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿಗಾಗಿ ಆಯವ್ಯಯದಲ್ಲಿ 160 ಕೋಟಿ ರು. ಅನುದಾನ ಒದಗಿಸಿದೆ. ಅಕ್ಟೋಬರ್‌ ಅಂತ್ಯಕ್ಕೆ ಕೇವಲ 2.29 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ಇದರಲ್ಲಿ 0.10 ಕೋಟಿ ರು. ಮಾತ್ರ ವೆಚ್ಚವಾಗಿತ್ತು.

ಹಿಂದುಳಿದ ವರ್ಗದ 39,332 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ದೊರೆಯದ ಪ್ರವೇಶಾತಿ

ಇದೇ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗೆಂದು 110 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಒದಗಿಸಿಕೊಂಡಿದೆಯಾದರೂ ಅಕ್ಟೋಬರ್‌ ಅಂತ್ಯಕ್ಕೆ ಕೇವಲ 1.00 ಕೋಟಿ ರು ಮಾತ್ರ ಬಿಡುಗಡೆ ಮಾಡಿತ್ತು.

ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ವರ್ಷದಿಂದಲೂ ಬಾಕಿ;ಬಡಮಕ್ಕಳ ಶಿಷ್ಯ ವೇತನಕ್ಕೂ ಹಣವಿಲ್ಲವೇ?

ಅಲ್ಪಸಂಖ್ಯಾತರ ಸಮುದಾಯದ ಎಂ ಫಿಲ್‌, ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಸಹಾಯ ಧನ ಒದಗಿಸಲು 6.0 ಕೋಟಿ ರು. ಆಯವ್ಯಯದಲ್ಲಿ ಒದಗಿಸಿಕೊಂಡಿತ್ತು. ಅಕ್ಟೋಬರ್‌ ಅಂತ್ಯಕ್ಕೆ 2.33 ಕೋಟಿ ರ. ಮಾತ್ರ ವೆಚ್ಚವಾಗಿತ್ತು. ಶುಲ್ಕ ಮರು ಪಾವತಿಗೆ ಸಂಬಂಧಿಸಿದಂತೆ 25 00 ಕೋಟಿ ರು. ಆಯವ್ಯಯದಲ್ಲಿ ಒದಗಿಸಿಕೊಂಡಿತ್ತು. ಆದರೂ ಅಕ್ಟೋಬರ್‌ ಅಂತ್ಯಕ್ಕೆ ಒಂದೇ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. 18,000 ವಿದ್ಯಾರ್ಥಿಗಳಿಗೆ  ಶುಲ್ಕ ಮರುಪಾವತಿ ಮಾಡಲು ವಾರ್ಷಿಕ ಗುರಿ ನೀಡಲಾಗಿತ್ತು.  6 ತಿಂಗಳವರೆಗೂ  ಬಿಡಿಗಾಸನ್ನೂ ನೀಡಿರಲಿಲ್ಲ. ಹೀಗಾಗಿ ಇಷ್ಟೂ ಸಂಖ್ಯೆಯ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯಾಗಿರಲಿಲ್ಲ.

ಕೆಡಿಪಿ ಪ್ರಕಾರ ಶೇ.35.41ರಷ್ಟೇ ಪ್ರಗತಿ, ಸಿಎಂ ಪ್ರಕಾರ ಶೇ.46ರಷ್ಟು ವೆಚ್ಚ; ವಾಸ್ತವ ಮರೆಮಾಚಲಾಗಿದೆಯೇ?

ಇನ್ನು ಮೌಲಾನಾ ಆಜಾದ್‌ ಶಾಲೆ ಕಾಲೇಜು ನಿರ್ವಹಣೆ ಮತ್ತು ನೂತನ ಹಾಸ್ಟೆಲ್‌ಗಳಿಗೆಂದು 68.29 ಕೋಟಿ ರು. ಒದಗಿಸಿದೆ. ಇದರಲ್ಲಿ 43.55 ಕೋಟಿ ರು.ಬಿಡುಗಡೆ ಮಾಡಿತ್ತು. ಇದರಲ್ಲಿ 35.38 ಕೋಟಿ ರು. ವೆಚ್ಚವಾಗಿತ್ತು. ವಿದ್ಯಾರ್ಥಿನಿಲಯಗಳು ಮತ್ತು ವಸತಿ ಶಾಲೆಗಳ ನಿರ್ವಹಣೆಗೆ 347.89 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿತ್ತು. ಇದರಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 181.42 ಕೋಟಿ ರು. ಮಾತ್ರ ಬಿಡುಗಡೆ ಮಾಡಿತ್ತು. ಈ ಪೈಕಿ 123.12 ಕೋಟಿ ರು ವೆಚ್ಚ ಮಾಡಿತ್ತು.

7 ಇಲಾಖೆಗಳಲ್ಲಿ ವೆಚ್ಚವಾಗದ 29,884 ಕೋಟಿ; ಚುರುಕಾಗದೇ ತೆವಳುತ್ತಿದೆಯೇ ಆಡಳಿತ ಯಂತ್ರ?

ಶ್ರಮ ಶಕ್ತಿ ಸಾಲ ಯೋಜನೆ (ವೈಯಕ್ತಿಕ) ಯಡಿ 1,000 ವ್ಯಕ್ತಿಗಳಿಗೆ ಆರ್ಥಿಕ ನೆರವು ನೀಡಲು 5.00 ಕೋಟಿ ರು. ನೀಡಿದೆ. ಆದರೆ ಬಿಡಿಗಾಸೂ ನೀಡಿಲ್ಲ. ಆದರೆ 11.01 ಕೋಟಿ ವೆಚ್ಚವಾಗಿದೆ ಎಂದು ತೋರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts