ಬೆಂಗಳೂರು; ವಿವಿಧ ರೀತಿಯ ಅಕ್ರಮಗಳು, ಅನುದಾನ ದುರುಪಯೋಗ, ಕಾಯ್ದೆ ಉಲ್ಲಂಘನೆ, ಭ್ರಷ್ಟಾಚಾರ ಸೇರಿದಂತೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ಸಾಮಾಜಿಕ ಹೋರಾಟಗಾರರಿಂದ ಸಲ್ಲಿಕೆಯಾಗುವ ದೂರುಗಳನ್ನಾಧರಿಸಿ ವಿಚಾರಣೆ ಮಾಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೀಡುತ್ತಿರುವ ನಿರ್ದೇಶನಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಸಂವಿಧಾನದ 167ನೇ ವಿಧಿಯನ್ನು ರಕ್ಷಾ ಕವಚದಂತೆ ಬಳಸಿಕೊಳ್ಳಲು ಹೊರಟಿದೆ.
ರಾಜಭವನಕ್ಕೆ ಸಲ್ಲಿಕೆಯಾಗಿರುವ ದೂರರ್ಜಿಗಳನ್ನು ವಿಚಾರಣೆ ಮಾದರಿಯಲ್ಲಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡುವ ಅಧಿಕಾರವು ಸಂವಿಧಾನದ 167ನೇ ವಿಧಿಯ ಸಾಂವಿಧಾನಿಕ ಚೌಕಟ್ಟಿನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರತಿಪಾದಿಸಲು ವಿವರಣೆಯನ್ನು ಸಿದ್ಧಪಡಿಸಿಕೊಂಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ದುರುಪಯೋಗಿಸಿರುವುದು ಮತ್ತು ಇನ್ನಿತರೆ ವಿಷಯಗಳ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ನೀಡಿದ್ದ ಮನವಿ ಕುರಿತು ವರದಿ ನೀಡಬೇಕು ಎಂದು ರಾಜ್ಯಪಾಲರು ನಿರ್ದೇಶಿಸಿದ್ದರು. ಈ ಪ್ರಕರಣವನ್ನು ಮುಂದಿಟ್ಟುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಸಂವಿಧಾನದ 167ನೇ ವಿಧಿಯನ್ನು ಮುಂದಿರಿಸಲು ತಯಾರಿ ನಡೆಸಿದೆ. ಅಲ್ಲದೇ ರಾಜ್ಯಪಾಲರು ಸಂವಿಧಾನದ 167ನೇ ವಿಧಿ ವ್ಯಾಪ್ತಿ ಮೀರುತ್ತಿದ್ದಾರೆ ಎಂದು ರಾಜ್ಯ ಸರ್ಕಾರವು ಪ್ರತಿಪಾದಿಸಲು ಸಿದ್ಧತೆ ನಡೆಸಿದೆ.
ಈ ಕುರಿತು ಕೆಲವು ದಾಖಲೆ ಮತ್ತು ಪತ್ರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಪ್ರಕರಣದ ವಿವರ
ಕಳೆದ ಒಂದು ವರ್ಷದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನವು ದುರುಪಯೋಗವಾಗಿದೆ. ಈ ಸಮುದಾಯಗಳಿಗೆ ಸರ್ಕಾರವು ಅನ್ಯಾಯ ಮಾಡಿದೆ. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ಕೋಟ್ಯಂತರ ರುಪಾಯಿಗಳನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಇದು ಸರ್ಕಾರದ ವೈಫಲ್ಯವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.
ಪರಿಶಿಷ್ಟರ ಕಲ್ಯಾಣಕ್ಕಾಗಿಯೇ ಮೀಸಲಿಟ್ಟಿದ್ದ 25,000 ಕೋಟಿ ರು.ಗಳನ್ನು ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ದುರುಪಯೋಗಪಡಿಸಿಕೊಂಡಿದೆ. ಈ ಮೂಲಕ ಎಸ್ ಸಿ ಎಸ್ ಟಿ ಸಮುದಾಯಗಳನ್ನು ವಂಚಿಸಿದೆ ಎಂದು ಆಪಾದಿಸಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ಅನುದಾನವನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಹ ದುರುಪಯೋಗಪಡಿಸಿಕೊಂಡಿದ್ದರೆ. ಮುಖ್ಯಮಂತ್ರಿಗಳೂ ಸಹ ಮುಡಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮತ್ತು ಪರಿಶಿಷ್ಟರ ಮಕ್ಕಳ ವಿದೇಶ ವ್ಯಾಸಂಗಕ್ಕೆ ನೀಡುತ್ತಿದ್ದ ಪ್ರೋತ್ಸಾಹ ಧನಕ್ಕೂ ತೊಂದರೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು.
ಈ ದೂರನ್ನಾಧರಿಸಿ ವಿಸ್ತೃತವಾದ ವರದಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 2024ರ ಸೆ.5ರಂದು ಬರೆದಿದ್ದ ಅರೆ ಸರ್ಕಾರಿ ಪತ್ರದಲ್ಲಿ ನಿರ್ದೇಶಿಸಿದ್ದರು.
ಇದನ್ನಾಧರಿಸಿ ವಿವರವಾದ ವರದಿಯನ್ನು ದಾಖಲೆಗಳೊಂದಿಗೆ ಕಡತ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು 2024ರ ಸೆ.10ರಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರಿಗೆ ನಿರ್ದೇಶಿಸಿದ್ದರು.
ರಾಜ್ಯಪಾಲರಿಂದ ಪತ್ರವನ್ನು ಸ್ವೀಕರಿಸಿದ 8 ತಿಂಗಳ ನಂತರ ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ವಿವರಣೆ ನೀಡುವ ಪ್ರಕ್ರಿಯೆ ಆರಂಭಿಸಿದೆ.
ಮುಖ್ಯ ಕಾರ್ಯದರ್ಶಿ ಅವರ ಮೂಲಕ ಸೂಕ್ತ ವಿವರಣೆಯನ್ನು ಸಲ್ಲಿಸಬೇಕು ಮತ್ತು ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ಕೂಡಲೇ ತರಬೇಕು. ವಿವರಣೆಯನ್ನು ಮಂಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಎಲ್ ಕೆ ಅತೀಕ್ ಅವರು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರಿಗೆ 2025ರ ಮೇ 12ರಂದು ಟಿಪ್ಪಣಿ ಹೊರಡಿಸಿರುವುದು ಗೊತ್ತಾಗಿದೆ.
ಈ ಟಿಪ್ಪಣಿಯಲ್ಲಿನ ಸೂಚನೆ ಪ್ರಕಾರ ಅವರು ವಿವರಣೆಯನ್ನು ಸಿದ್ಧಪಡಿಸಿರುವುದು ತಿಳಿದು ಬಂದಿದೆ.
ವಿವರಣೆಯಲ್ಲೇನಿದೆ?
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಬಲೀಕರಣ, ಉನ್ನತಿ ಮತ್ತು ಕಲ್ಯಾಣಕ್ಕೆ ತನ್ನ ಬದ್ಧತೆಯನ್ನು ದೃಢವಾಗಿ ಉಳಿಸಿಕೊಂಡಿದೆ. ರಾಜ್ಯಾದ್ಯಂತ ಎಸ್ಸಿ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ವಸತಿ, ಉದ್ಯಮಶೀಲತೆ ಮತ್ತು ಸಾಮಾಜಿಕ ಭದ್ರತೆಯ ಪ್ರವೇಶವನ್ನು ಸುಧಾರಿಸಲು ಉದ್ದೇಶಿತ ಉಪಕ್ರಮಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಮುಡಾ ಪ್ರಕರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಪ್ರಕರಣಗಳು ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಈ ಪ್ರಕರಣಗಳನ್ನು ಕಾನೂನು ಪ್ರಕ್ರಿಯೆಗಳಿಗೆ ಅನುಗುಣವಾಗಿ ಅವುಗಳನ್ನು ಪರಿಹರಿಸಲಾಗುತ್ತಿದೆ. ಪರಿಶಿಷ್ಟರಿಗೆ ಮೀಸಲಿರಿಸಿದ್ದ ನಿಧಿಯ ದುರುಪಯೋಗದ ಆರೋಪವು ಆಧಾರರಹಿತವಾಗಿದೆ ಮತ್ತು ಅದರಲ್ಲಿ ವಾಸ್ತವಿಕ ಅಂಶಗಳಿಲ್ಲ. ಬಜೆಟ್‌ನಲ್ಲಿ ಅನುಮೋದಿಸಿರುವ ಹಂಚಿಕೆಗಳಿಗೆ ಅನುಗುಣವಾಗಿ ಗಮನಾರ್ಹ ಅಭಿವೃದ್ಧಿ ಪ್ರಗತಿ ಕಂಡುಬಂದಿದೆ ಎಂದು ವಿವರಣೆ ಒದಗಿಸಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು, ದೂರಿನಲ್ಲಿ ಅಂಶಗಳನ್ನು ತಳ್ಳಿ ಹಾಕಿರುವುದು ತಿಳಿದು ಬಂದಿದೆ.
ಅಲ್ಲದೇ ‘ಸಂವಿಧಾನದ 167 ನೇ ವಿಧಿಯ ಅಡಿಯಲ್ಲಿ ಘನತೆವೆತ್ತ ರಾಜ್ಯಪಾಲರಿಗೆ ಒದಗಿಸಲಾಗಿರುವ ಸಲಹೆ ನೀಡುವ ಪ್ರದತ್ತಾಧಿಕಾರವನ್ನು ಗೌರವಪೂರ್ವಕವಾಗಿ ಒಪ್ಪಲಾಗಿದೆ. ಅಲ್ಲದೇ ತಮಗೆ ಯಾವುದೇ ನಿರ್ದಿಷ್ಟ ಮಾಹಿತಿಯ ಅಗತ್ಯವಿದ್ದರೆ, ನಾವು ಅದನ್ನು ಒದಗಿಸಲೂ ಸಿದ್ಧರಿದ್ದೇವೆ. ಆದರೆ ಕುಂದುಕೊರತೆಗಳ ಬಗ್ಗಿನ ಫಿರ್ಯಾದುಗಳನ್ನು ವಿಚಾರಣೆಯ ಮಾದರಿಯಲ್ಲಿ ಪರಿಶೀಲಿಸುವಂತೆ ನಿರ್ದೇಶನ ನೀಡುವ ಅಧಿಕಾರ 167 ನೇ ವಿಧಿಯ ಸಾಂವಿಧಾನಿಕ ಚೌಕಟ್ಟಿನ ವ್ಯಾಪ್ತಿಯಲ್ಲಿರುವುದಿಲ್ಲ,’ ಎಂದು ಪ್ರತಿಪಾದಿಸಲು ಸಿದ್ಧತೆ ನಡೆಸಿದೆ.
ಸರ್ಕಾರವು ಸಾಮಾಜಿಕ ನ್ಯಾಯದ ಸಾಂವಿಧಾನಿಕ ಗುರಿಗೆ ಬದ್ಧವಾಗಿದೆ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಹಕ್ಕುಗಳು ಮತ್ತು ಕಲ್ಯಾಣವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ವಿವರಣೆಯಲ್ಲಿ ಪ್ರಸ್ತಾವಿಸಿದೆ.
ಸಂವಿಧಾನದ 167ನೇ ವಿಧಿಯಲ್ಲೇನಿದೆ?
ರಾಜ್ಯಪಾಲನಿಗೆ ಮಾಹಿತಿ, ಇತ್ಯಾದಿಗಳನ್ನು ಒದಗಿಸುವ ವಿಚಾರದಲ್ಲಿ ಮುಖ್ಯಮಂತ್ರಿಯ ಕರ್ತವ್ಯಗಳನ್ನು ನಿರ್ದಿಷ್ಟಪಡಿಸಿದೆ.
ರಾಜ್ಯದ ವ್ಯವಹಾರಗಳ ಆಡಳಿತಕ್ಕೆ ಮತ್ತು ಕಾನೂನು ರಚನೆಯ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಮಂತ್ರಿಮಂಡಲದ ಎಲ್ಲ ತೀರ್ಮಾನಗಳನ್ನು ರಾಜ್ಯದ ರಾಜ್ಯಪಾಲನಿಗೆ ತಿಳಿಸಬೇಕು.
ರಾಜ್ಯದ ವ್ಯವಹಾರಗಳ ಆಡಳಿತಕ್ಕೆ ಮತ್ತು ಕಾನೂನು ರಚನೆಯ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲನು ಕೇಳಬಹುದಾದಂಥ ಮಾಹಿತಿಯನ್ನು ಒದಗಿಸುವುದು, ಮತ್ತು ಒಬ್ಬ ಮಂತ್ರಿಯು ತೀರ್ಮಾನ ಕೈಗೊಂಡಿರುವ, ಆದರೆ ಮಂತ್ರಿಮಂಡಲವು ಪರ್ಯಾಯಲೋಚಿಸದಿರುವ ಯಾವುದೇ ವಿಷಯವನ್ನು ಮಂತ್ರಿಮಂಡಲದ ಪರ್ಯಾಲೋಚನೆಗೆ ಒಪ್ಪಿಸಬೇಕೆಂದು ರಾಜ್ಯಪಾಲನು ಅಗತ್ಯಪಡಿಸಿದಲ್ಲಿ ಅದನ್ನು ಹಾಗೆ ಒಪ್ಪಿಸುವುದು ಎಂದು ವಿವರಿಸಿದೆ.