Tuesday | May 19, 2026 |

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡಿರುವುದು  ಮತ್ತು ಕರ್ತವ್ಯ ಲೋಪ ಎಸಗಿ ಅಕ್ರಮ ನಡೆಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ 3 ವರ್ಷದ ಹಿಂದೆಯೇ ಸಲ್ಲಿಕೆಯಾಗಿದ್ದ ದೂರಿನ ಮೇರೆಗೆ ಯಾವುದೇ ಕ್ರಮ ವಹಿಸದ ಸರ್ಕಾರವು ಇದೀಗ 3 ವರ್ಷಗಳ ನಂತರ ಈ ಕುರಿತು ತನಿಖೆ ನಡೆಸಲು ಮುಂದಾಗಿದೆ.

ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ನೀಡಿದ್ದ ಅನುದಾನ ಮತ್ತು ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಎಚ್‌ ಪಿ ಪ್ರಕಾಶ್‌ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯು ಮಾಡಿದ್ದ ಶಿಫಾರಸ್ಸನ್ನು ರಾಜ್ಯ ಸರ್ಕಾರವು ತಿರಸ್ಕರಿಸಿರುವ ಬೆನ್ನಲ್ಲೇ  ಇದೇ ಮಂಡಳಿಯ ಮತ್ತೊಂದು ಅಕ್ರಮದ ಕುರಿತು ತನಿಖೆ ನಡೆಸಲು 3 ವರ್ಷದ ನಂತರ  ತನಿಖಾ ಸಮಿತಿ ರಚಿಸಿರುವುದು ಮುನ್ನೆಲೆಗೆ ಬಂದಿದೆ.

ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ಆಂಜನಪ್ಪ ಎಂಬುವರು ಮೂರು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ  ದೂರು ಸಲ್ಲಿಸಿದ್ದರು. ಮೂರು ವರ್ಷದ ಹಿಂದಿನ ದೂರನ್ನು ಪರಿಶೀಲಿಸಿರುವ ಯೋಜನೆ ಇಲಾಖೆಯು 2026ರ ಮೇ 16ರಂದು ತನಿಖಾ ಸಮಿತಿಯನ್ನು ರಚಿಸಿ ಆದೇಶಿಸಿದೆ.

ಈ ಸಂಬಂಧ ಯೋಜನೆ, ಸಾಂಖ್ಯಿಕ ಸಚಿವರಾಗಿದ್ದ ಡಿ ಸುಧಾಕರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದರು. ತನಿಖೆ ನಡೆಸಲು ಸಮಿತಿ ರಚಿಸಿ ಆದೇಶ ಹೊರಡಿಸಲು ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ದೂರಿನಲ್ಲೇನಿದೆ?

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬೀಜೋತ್ಪನ್ನ ಕಿಟ್‌ ಗಳನ್ನು ವಿತರಣೆ ಮಾಡುವಲ್ಲಿ ಅಕ್ರಮ ನಡೆದಿದೆ. ಮಧ್ಯವರ್ತಿಗಳಿಗೆ ಅನುಕೂಲ ಮಾಡಿಕೊಡಲು ಕೆಲವೇ ಕೆಲವು ತಾಲೂಕಿನ ರೈತರಿಗೆ ಮಾತ್ರ ಬೀಜೋತ್ಪನ್ನ ಕಿಟ್‌ಗಳನ್ನು  ವಿತರಿಸಲಾಗಿದೆ. ಅಲ್ಲದೇ ಬಯಲು ಸೀಮೆ ಪ್ರದೇಶಕ್ಕೆ ಒಳಪಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಲ್ಲದ ಸಾಮಾನ್ಯ ವರ್ಗದ ರೈತರಿಗೆ ಕಿಟ್‌ಗಳನ್ನು ವಿತರಿಸಿದೆ. ಸಾಮಾನ್ಯ ವರ್ಗದ ರೈತರಿಗೆ ಬೀಜೋತ್ಪನ್ನ ಕಿಟ್‌ಗಳನ್ನು ನೀಡಲು   ಎಸ್‌ಸಿಸಿಪಿ ಮತ್ತು ಟಿಎಸ್‌ಪಿ ಹಣವನ್ನು ಬಳಸುವ ಮೂಲಕ ಅಕ್ರಮ ನಡೆಸಲಾಗಿದೆ. ಮತ್ತು ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂದು ಆಂಜನಪ್ಪ ಎಂಬುವರು 2023ರ ಅಕ್ಟೋಬರ್‍‌ 11ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದ  ದೂರಿನಲ್ಲಿ ವಿವರಿಸಿದ್ದರು.

 

 

ಇದೇ ಪ್ರಕರಣದಲ್ಲಿ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಲಾಗಿತ್ತು. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಲ್ಲದೇ ಕರ್ತವ್ಯದಲ್ಲಿ ಲೋಪ ಎಸಗಲಾಗಿದೆ ಎಂದು ಆಂಜನಪ್ಪ ದೂರಿನಲ್ಲಿ ಅಧಿಕಾರಿಗಳ ಪಟ್ಟಿಯನ್ನು ದೂರಿನಲ್ಲಿ ಒದಗಿಸಿದ್ದರು. ಈ ಪಟ್ಟಿ ಪ್ರಕಾರ ಹಿಂದಿನ  ಯೋಜನೆ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಶೇಖರ್‍‌, ಮಂಡಳಿಯ ಹಿಂದಿನ ಕಾರ್ಯದರ್ಶಿ ಶ್ರೀಧರ್ ಬಿ., ಎಡಿಬಿಯ ನಿರ್ದೇಶಕ ಡಿ ಚಂದ್ರಶೇಖರಯ್ಯ ಇವರು ಭಾಗಿಯಾಗಿದ್ದಾರೆ. ಹೀಗಾಗಿ ಇವರ ವಿರುದ್ಧ ಶಿಸ್ತು  ಕ್ರಮ ಜರುಗಿಸಬೇಕು ಎಂದು ಆಂಜನಪ್ಪ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರಿನಲ್ಲಿ ಗಮನಸೆಳೆದಿದ್ದರು.

 

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿ

 

ಈ ದೂರು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿ 3 ವರ್ಷಗಳಾಗಿತ್ತು. ಮೂರು ವರ್ಷಗಳವರೆಗೂ ಈ ದೂರಿನ ಮೇಲೆ ಯಾವುದೇ ಕ್ರಮವಹಿಸಿರಲಿಲ್ಲ. ಈಗ ಈ ದೂರಿನಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲಿಸಲು ಯೋಜನೆ, ಕಾರ್ಯಕ್ರಮ, ಸಂಯೋಜನೆ, ಸಾಂಖ್ಯಿಕ ಇಲಾಖೆಯು ತನಿಖಾ ಸಮಿತಿ ರಚಿಸಿದೆ.

 

 

‘ಆಂಜನಪ್ಪ ಎಂಬುವರು ಅಧಿಕಾರಿಗಳ ವಿರುದ್ಧ ಮಾಡಿರುವ ಆರೋಪಗಳು ಗಂಭೀರ ಸ್ವರೂಪಗಳಿಂದ ಕೂಡಿದೆ. ಹೀಗಾಗಿ ಈ ಆರೋಪಗಳ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ಇಲಾಖೆ ತನಿಖಾ ನಡೆಸಲು ತೀರ್ಮಾನಿಸಲಾಗಿದೆ. ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹಿರಿಯ ನಿರ್ದೇಶಕ ಬಸವರಾಜ್ ಎಸ್‌ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಿದೆ. ಈ ತಂಡದಲ್ಲಿ ಆರ್ ವೆಂಕಟೇಶ್‌, ಎಸ್‌ ರಜನಿ ಅವರಿದ್ದಾರೆ. ದೂರು, ಆರೋಪಗಳ ಕುರಿತು ತನಿಖೆ ನಡೆಸಿ ಸ್ಪಷ್ಟ  ಅಭಿಪ್ರಾಯದೊಂದಿಗೆ ಒಂದು ತಿಂಗಳೊಳಗಾಗಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಆದೇಶದಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

ಇದೇ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ  ಅನುದಾನದದಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಕಂಪ್ಯೂಟರ್ ಖರೀದಿಸಿತ್ತು. ಆದರೆ ಈ ಪ್ರಕ್ರಿಯೆಗಳಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಹೆಚ್‌ ಪಿ ಪ್ರಕಾಶ್ ಅವರು ಕರ್ತವ್ಯಲೋಪ ಎಸಗಿದ್ದರು. ಇದನ್ನು ಲೋಕಾಯುಕ್ತ ತನಿಖಾ ತಂಡವು ತನಿಖೆ ವೇಳೆಯಲ್ಲಿ ಸಾಬೀತುಗೊಳಿಸಿತ್ತು. ಅಲ್ಲದೆ ಇವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 12(3) ರಡಿ ವರದಿ ಸಲ್ಲಿಸಿತ್ತು. ಆದರೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ವರದಿಯನ್ನೇ ತಿರಸ್ಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಏನಿದು ಬಿಆರ್‍‌ಜಿಎಫ್‌?

ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿನ ಮೂಲಸೌಕರ್ಯ ಕೊರತೆಯನ್ನು ನೀಗಿಸುವುದು ಮತ್ತು ಸ್ಥಳಿಯ ಆಡಳಿತವನ್ನು ಬಲಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಯೋಜನೆಗಳು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನಿರ್ಬಂಧಿತ ಅನುದಾನಗಳ ಮೂಲಕ ಅನುಷ್ಠಾನಗೊಳ್ಳುತ್ತವೆ. ಗ್ರಾಮೀಣ ರಸ್ತೆಗಳ ಅಭಿವೃದ್ದಿ, ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿ, ಕುಡಿಯುವ ನೀರಿನ ಯೋಜನೆ, ಆರೋಗ್ಯ ಕೇಂದ್ರಗಳ ಉನ್ನತೀಕರಣ ಮಾಡಲಿದೆ.

ಚಿತ್ರದುರ್ಗದಲ್ಲಿನ ಅಕ್ರಮವೇನು?

ಚಿತ್ರದುರ್ಗ ಜಿಲ್ಲಾ ಪಂಚಾಯ್ತಿಯಲ್ಲಿ ಐಎಎಸ್ ಅಧಿಕಾರಿ ಹೆಚ್‌ ಪಿ ಪ್ರಕಾಶ್‌ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅವಧಿಯ (2007-08 ಮತ್ತು 2009-10)ರಲ್ಲಿ ಬಿಆರ್‍‌ಜಿಎಫ್‌ ಯೋಜನೆ ಕಾಮಗಾರಿಗಳಲ್ಲಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕಂಪ್ಯೂಟರ್ ಖರೀದಿಯಲ್ಲಿ ನಿಯಮಾನುಸಾರ ಕ್ರಮವಹಿಸಿರಲಿಲ್ಲ. ಕರ್ತವ್ಯಲೋಪ ಎಸಗಿದ್ದರು. ಹೀಗಾಗಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಲೋಕಾಯುಕ್ತವು ಶಿಫಾರಸ್ಸು ಮಾಡಿತ್ತು.

 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯು ಮಾಡಿದ್ದ ಶಿಫಾರಸ್ಸಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಈ ಶಿಫಾರಸ್ಸನ್ನು ಒಪ್ಪಿರಲಿಲ್ಲ. ಆರೋಪಿತ ಅಧಿಕಾರಿ ಹೆಚ್ ಪಿ ಪ್ರಕಾಶ್‌ ಅವರು 2021ರ ಮಾರ್ಚ್‌ 31ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದರು.

ಅಖಿಲ ಭಾರತ ಸೇವೆಗಳ ನಿಯಮಾವಳಿಗಳು 1958ರ ನಿಯಮಗಳ ಪ್ರಕಾರ ಅಧಿಕಾರಿಯು ನಿವೃತ್ತಿ ಹೊಂದುವ ಪೂರ್ವದ 4 ವರ್ಷಗಳಿಗಿಂತ ಪೂರ್ವದಲ್ಲಿ ಘಟಿಸಿರುವ ಪ್ರಕರಣವಾಗಿದೆ. ಹೀಗಾಗಿ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ವಹಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು 12(3) ಅಡಿಯಲ್ಲಿ ಮಾಡಿರುವ ಶಿಫಾರಸ್ಸನ್ನು ಒಪ್ಪುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು ಅಭಿಪ್ರಾಯಿಸಿತ್ತು. ಇದೇ ನಿಲುವನ್ನು ಸಚಿವ ಸಂಪುಟ ಉಪ ಸಮಿತಿಯೂ ಸಹ ಅನಮೋದಿಸಿತ್ತು.

ಸಮರ್ಥನೆಯಲ್ಲೇನಿತ್ತು?

ಈ ಪ್ರಕರಣದಲ್ಲಿ ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಬಿಆರ್‍‌ಜಿಎಫ್‌ ಅನುದಾನದಡಿಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಜನಸಾಮಾನ್ಯರಿಗೆ ತಲುಪಿಸುವ ಸದುದ್ದೇಶವಿದೆ. ಹೆಚ್‌ ಪಿ ಪ್ರಕಾಶ್‌ ಅವರ ಮೂಲ ಉದ್ದೇಶವು ಕೇಂದ್ರ ಪುರಸ್ಕೃತ ಯೋಜನೆಯಾದ ಬಿಆರ್‍‌ಜಿಎಫ್‌ ಅನುದಾನ ವ್ಯಪಗತವಾಗಬಾರದು ಎಂಬ ಆಲೋಚನೆಯನ್ನು ಇಟ್ಟುಕೊಂಡು ಟೆಂಡರ್ ಪ್ರಕ್ರಿಯೆಯನ್ನು ಅಲ್ಪಾವಧಿಯಲ್ಲಿ ಪೂರೈಸಿದ್ದಾರೆ. ಅಲ್ಲದೇ ಸಂಧಾನ ಹಾಗೂ ಕಡಿಮೆ ದರ ನಿಗದಪಡಿಸಿದ ಟೆಂಡರ್‍‌ದಾರರಿಗೆ ಕೆಟಿಪಿಪಿ ಕಾಯ್ದೆಯಡಿ ಇರುವ ಅಧಿಕಾರದಡಿಯಲ್ಲಿಯೇ ಸಾಮಗ್ರಿಗಳನ್ನು ಖರೀದಿಸಲು 2009ರ ಮೇ 25ರಂದೇ ಸರಬರಾಜು ಆದೇಶ ನೀಡಿದ್ದರು ಎಂದು ಸಮರ್ಥಿಸಿಕೊಂಡಿತ್ತು.

 

 

ಹೀಗಾಗಿ ಈ ಪ್ರಕರಣದಲ್ಲಿ ಹೆಚ್‌ ಪಿ ಪ್ರಕಾಶ್‌ ಅವರು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಲೋಪವೆಸಗಿಲ್ಲ ಎಂದು ಸಮರ್ಥಿಸಿಕೊಂಡಿತ್ತು. ಈ ಸಮರ್ಥನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಂಕ್ ಖರ್ಗೆ ಅವರು ಅನುಮೋದಿಸಿದ್ದರು. ಹೀಗಾಗಿ ಹೆಚ್ ಪಿ ಪ್ರಕಾಶ್‌ ಅವರ ವಿರುದ್ಧದ ಉದ್ದೇಶಿತ ಶಿಸ್ತು ಕ್ರಮವನ್ನು ಕೈಬಿಡಬಹುದಾಗಿದೆ ಎಂದು ಅಭಿಪ್ರಾಯಿಸಿತ್ತು.

ಹೆಚ್ ಪಿ ಪ್ರಕಾಶ್ ಅವರ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ತನಿಖಾ ತಂಡವು ನೀಡಿರುವ ವರದಿಯಲ್ಲಿ ಕೇವಲ ಕರ್ತವ್ಯಲೋಪ ಮತ್ತು ದುವರ್ತನೆ ಬಗ್ಗೆ ಮಾತ್ರ ಪ್ರಸ್ತಾವಿಸಿದೆ. ಆರ್ಥಿಕ ನಷ್ಟದ ಬಗ್ಗೆ ಉಲ್ಲೇಖಿಸಿಲ್ಲ. ಹಾಗೆಯೆ ದೂರುದಾರರ ದೂರಿನಲ್ಲಿಯೂ ಸಹ ಆರ್ಥಿಕ ನಷ್ಟದ ಬಗ್ಗೆ ಉಲ್ಲೇಖವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಅಭಿಪ್ರಾಯಿಸಿತ್ತು.

 

 

ಈ ಎಲ್ಲಾ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೂ ಸಹ ಲೋಕಾಯುಕ್ತ ವರದಿಯಲ್ಲಿನ ಶಿಫಾರಸ್ಸನ್ನು ತಿರಸ್ಕರಿಸಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದಿಸಿದ್ದಾರೆ. ಹೀಗಾಗಿ ಸಚಿವ ಸಂಪುಟಕ್ಕೆ ಪ್ರಸ್ತಾವ ಮಂಡಿಸಿರುವುದು ತಿಳಿದು ಬಂದಿದೆ.

 

ಬಿಆರ್‍‌ಜಿಎಫ್‌ ಅನುದಾನದಲ್ಲಿ ಅಕ್ರಮ; ಲೋಕಾ ಶಿಫಾರಸ್ಸು ತಿರಸ್ಕೃತ, ಹಿರಿಯ ಐಎಎಸ್ ಅಧಿಕಾರಿ ವಿರುದ್ಧದ ಪ್ರಕರಣ ಮುಕ್ತಾಯ!

 

ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಬೇಕಾಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿಯೇ, ಭ್ರಷ್ಟ ಅಧಿಕಾರಿಗಳನ್ನು ಬೆದರಿಸಿ, ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿರುವ ಹೊತ್ತಿನಲ್ಲಿಯೇ, ಲೋಕಾಯುಕ್ತವು ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ, ವಿಚಾರಣೆ ನಡೆಸಿ  ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವುದು ಮತ್ತು ಸರ್ಕಾರವು ಸಲ್ಲಿಕೆಯಾಗಿರುವ ಎಲ್ಲ ವರದಿಗಳ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಲೋಕಾಯುಕ್ತದಲ್ಲಿ ಕಳೆದ  ಜುಲೈ ಅಂತ್ಯದ ವೇಳೆಗೆ  22,699 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. 2025ರ ಜೂನ್‌ ಅಂತ್ಯದವರೆಗೆ ಕರ್ನಾಟಕ ಲೋಕಾಯುಕ್ತವು ಒಟ್ಟು 113 ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.  ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್ 12(3) ಅಡಿಯಲ್ಲಿ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ತನಿಖೆ ನಡೆಸಿದ ನಂತರ ಆರೋಪ ಸಾಬೀತಾದಲ್ಲಿ ಅಥವಾ ದುರ್ನಡತೆಯ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡುತ್ತಾರೆ. ಈ ಶಿಫಾರಸುಗಳು ವರದಿಯ ರೂಪದಲ್ಲಿರುತ್ತವೆ.

ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್ 12(3)ರಲ್ಲಿ  ಆಪಾದನೆಯನ್ನೊಳಗೊಂಡ ಯಾವುದೇ ಕ್ರಮದ ಕುರಿತು ತನಿಖೆ ನಡೆಸಿದ ತರುವಾಯ ಅಂಥ ಆಪಾದನೆಯನ್ನು ಪೂರ್ಣವಾಗಿ ಅಥವಾ ಭಾಗಶಃ ಲೋಕಾಯುಕ್ತ ಅಥವಾ ಉಪಲೋಕಾಯುಕ್ತನಿಗೆ ಮನದಟ್ಟಾದರೆ ಅವನು ತನ್ನ ನಿರ್ಣಯವನ್ನು ಮತ್ತು ಶಿಫಾರಸ್ಸುಗಳನ್ನು ಸಂಬಂಧಪಟ್ಟ ದಸ್ತಾವೇಜು, ಸಾಮಗ್ರಿಗಳು ಮತ್ತು ಇತರ ಸಾಕ್ಷ್ಯಗಳೊಡನೆ ಸಕ್ಷಮ ಪ್ರಾಧಿಕಾರಕ್ಕೆ ಲಿಖಿತ ವರದಿಯ ಮೂಲಕ ಪ್ರಾರಂಭವಾದ  ದಿನಾಂಕದಿಂದ ಆರು ತೊಂಗಳೊಳಗೆ ತಿಳಿಸತಕ್ಕದ್ದು.  ಲೋಕಾಯುಕ್ತ ಅಥವಾ ಉಪಲೋಕಾಯುಕ್ತನು ಲಿಖಿತದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ ಸದರಿ ಅವಧಿಯನ್ನು ಆರು ತಿಂಗಳಿಗೆ ಮೀರದ ಮತ್ತಷ್ಟು ಅವಧಿಗೆ ವಿಸ್ತರಿಸಬಹುದು ಎಂದು ಹೇಳಲಾಗಿದೆ.

ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ ಸೆಕ್ಷನ್ 12(4)ರಲ್ಲಿ, ಸಕ್ಷಮ ಪ್ರಾಧಿಕಾರವು ತನಗೆ ಕಳಿಸಿದ ವರದಿಯನ್ನು ಪರೀಕ್ಷಿಸತಕ್ಕದ್ದು ಮತ್ತು ಅ ವರದಿಯು ಬಂದ ದಿನಾಂಕದಿಂದ ಮೂರು ತಿಂಗಳೊಳಗೆ ಆ ವರದಿಯನ್ನು ಆಧರಿಸಿ ಕೈಗೊಂಡ ಇಲ್ಲವೇ ಕೈಗೊಳ್ಳಲು ಉದ್ದೇಶಿಸಿದ ಕ್ರಮವನ್ನು ಲೋಕಾಯುಕ್ತ ಅಥವಾ ಉಪಲೋಕಾಯುಕ್ತನಿಗೆ ತಿಳಿಸತಕ್ಕದ್ದು ಅಥವಾ ತಿಳಿಸುವ ಏರ್ಪಾಡು ಮಾಡತಕ್ಕದ್ದು ಎಂದು ಹೇಳಲಾಗಿದೆ.

ಈ ಪ್ರಕಾರವಾಗಿ,  2025  ಜೂನ್‌ ವರೆಗೆ 113 ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರ್ಷದ  ಜನವರಿಯಲ್ಲಿ 12, ಫೆಬ್ರವರಿಯಲ್ಲಿ 17, ಮಾರ್ಚ್‌ನಲ್ಲಿ 11, ಏಪ್ರಿಲ್‌ನಲ್ಲಿ 12, ಮೇ ನಲ್ಲಿ 37 ಹಾಗೂ ಜೂನ್‌ನಲ್ಲಿ 24 ಪ್ರಕರಣಗಳು ಸಲ್ಲಿಕೆಯಾಗಿವೆ ಎಂದು ಲೋಕಾಯುಕ್ತ ಸಂಸ್ಥೆಯೇ ತನ್ನ ವೆಬ್‌ ಸೈಟ್‌ನಲ್ಲಿ ಪ್ರಕಟಿಸಿತ್ತು.

 

karnataka lokayukta submits reports to government

 

2023 ರಲ್ಲಿ 165 ಪ್ರಕರಣಗಳಿಗೆ ಸಂಬಂಧಿಸಿಂತೆ ಲೋಕಾಯುಕ್ತ ಕಾಯಿದೆ, 1984ರ ಸೆಕ್ಷನ್ 12(3) ಅಡಿಯಲ್ಲಿ ವರದಿ ಸಲ್ಲಿಸಲಾಗಿತ್ತು. 2022ರಲ್ಲಿ ಈ ಸಂಖ್ಯೆ 323 ಕ್ಕೆ ಏರಿತ್ತು. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತೀ ಹೆಚ್ಚಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.  2021-22ನೇ ಸಾಲಿನಲ್ಲಿ 314 ವರದಿಗಳು, 2022ರಲ್ಲಿ 323 ವರದಿಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ  ವರ್ಷ ಅಂದರೆ 2023 ರಲ್ಲಿ 165 ವರದಿಗಳು ಹಾಗೂ 2024ರಲ್ಲಿ 220 ವರದಿಗಳು ಸಲ್ಲಿಕೆಯಾಗಿದ್ದವು.

ವರದಿ ಸಲ್ಲಿಸಿದರೂ ಕ್ರಮವಿಲ್ಲ

ಲೋಕಾಯುಕ್ತವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಈ ವರದಿಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಇಲಾಖಾ ವಿಚಾರಣೆ ನಡೆಸಲು ಶಿಫಾರಸು ಮಾಡಿದೆ. ಈ ಹಿಂದೆ ತಿಳಿಸಿದಂತೆ, ಲೋಕಾಯುಕ್ತ ಕಾಯಿದೆ ಕಲಂ 12(4)ರ ಪ್ರಕಾರ ಸಕ್ಷಮ ಪ್ರಾಧಿಕಾರವು ಈ ವರದಿಯ ಮೇಲೆ ಏನು ಕ್ರಮ ತೆಗೆದುಕೊಂಡಿದೆ ಅಥವಾ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಈ ವರದಿಯನ್ನು ಸ್ವೀಕರಿಸಿದ ಮೂರು ತಿಂಗಳ ಒಳಗೆ ಲೋಕಾಯುಕ್ತಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕಿರುತ್ತದೆ. ಲೋಕಾಯುಕ್ತವು ಸಲ್ಲಿಸಿದ ಈ ವರದಿಗಳನ್ನು ಅಂಗೀಕರಿಸುವ ಇಲ್ಲವೇ ತಿರಸ್ಕರಿಸುವ ಅಧಿಕಾರ ಸರ್ಕಾರಕ್ಕಿರುತ್ತದೆ.

ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಸಲ್ಲಿಸುವ ಈ ವಿಚಾರಣಾ ವರದಿಗಳಲ್ಲಿ ಹೆಚ್ಚಿನವು ತಿರಸ್ಕೃತವಾಗುತ್ತಿವೆ. ಬಹುತೇಕ ವರದಿಗಳಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಲೋಕಾಯುಕ್ತಕ್ಕೆ ಬೆರಳೆಣಿಕೆಯಷ್ಟು ವರದಿಗಳಿಗೆ ಸಂಬಂಧಿಸಿದಂತೆ ಮಾತ್ರ ಅನುಪಾಲನಾ ವರದಿ ಸಲ್ಲಿಕೆಯಾಗಿದೆ.

 

karnataka lokayukta submits reports to government

 

ಸರ್ಕಾರ ವರದಿ ತಿರಸ್ಕರಿಸುವಂತಿಲ್ಲ

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮರಳಿ ತನಿಖಾ ಅಧಿಕಾರ ನೀಡುವಂತೆ ಕೋರಿದ್ದ ಅರ್ಜಿಗಳ ವಿಚಾರಣೆ ವೇಳೆ, ರಾಜ್ಯ ಹೈ ಕೋರ್ಟ್‌ ಕೂಡ, ಲೋಕಾಯುಕ್ತ ವರದಿಗಳಿಗೆ ಸಂಬಂಧಿಸಿದಂತೆ ಅನುಪಾಲನಾ ವರದಿಗಳು ಸಲ್ಲಿಕೆಯಾಗದೇ ಇರುವ ಬಗ್ಗೆ ಅಂದರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು.  ‘ಕರ್ನಾಟಕ ಲೋಕಾಯುಕ್ತ ಕಾಯ್ದೆ–1984ರ ಸೆಕ್ಷನ್‌ 12(3)ರ ಅಡಿಯಲ್ಲಿ ಸಲ್ಲಿಸುವ ವರದಿಗಳನ್ನು ಸರ್ಕಾರ ಒಪ್ಪಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಇದೇ ಕಾಯ್ದೆಯ ಸೆಕ್ಷನ್‌ 12(4)ಕ್ಕೆ ತಕ್ಷಣವೇ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಅಭಿಪ್ರಾಯ ಪಟ್ಟಿತ್ತು.

2022ರ ಆಗಸ್ಟ್‌ 11ರಂದು ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಸಲಹೆ ನೀಡಿದ್ದರೂ, ಈ ಬಗ್ಗೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 2016 ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ (WP No. 5361/2016 (S-KAT) dated 06-04-2016 Karnataka High Court ) ಕೂಡ ರಾಜ್ಯ ಹೈಕೋರ್ಟ್‌ ಇದೇ ತೆರನಾದ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ ಸೆಕ್ಷನ್ 12(3)ರ ಅಡಿಯಲ್ಲಿ ವಿಚಾರಣೆ ಆರಂಭಿಸಲು ಶಿಫಾರಸು ಮಾಡಿದಾಗ, ಆ ಶಿಫಾರಸನ್ನು ಸೂಕ್ತ ನ್ಯಾಯಾಲಯ ರದ್ದುಪಡಿಸದ ಹೊರತು ಅಥವಾ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ, ಅತ್ಯಂತ ಬಲವಾದ ಕಾರಣಗಳಿಲ್ಲದೆ ಸರ್ಕಾರ ಮುಂದಿನ ಕ್ರಮಗಳನ್ನು ಕೈಬಿಡಬಾರದು ಎಂದು ನ್ಯಾಯಮೂರ್ತಿ ಜಯಂತ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ತೀರ್ಪು ನೀಡಿದ್ದರು.

karnataka lokayukta submits reports to government

 

ಸುಪ್ರೀಂ ಕೋರ್ಟ್‌ ಮತ್ತು  ಹೈಕೋರ್ಟ್‌ ಸಲಹೆ ನೀಡಿದ್ದರೂ  ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು, ಸರ್ಕಾರ ಕ್ರಮ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿಲ್ಲ. ಇದರಿಂದಾಗಿ ನೂರಾರು ಪ್ರಕರಣಗಳು ಯಾವುದೇ  ಮುಂದುವರಿದ ಕ್ರಮಗಳಿಲ್ಲದೆ ಬಾಕಿ ಉಳಿದಿವೆ. ಭ್ರಷ್ಟಾಚಾರದ ಬಗ್ಗೆ ಬಂದ ದೂರುಗಳನ್ನು ಲೋಕಾಯುಕ್ತ ತನಿಖೆ ನಡೆಸಿ,  ವರದಿ ಸಲ್ಲಿಸಿದರೂ, ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ ಎಂಬುದು ಲೋಕಾಯುಕ್ತ ಸ್ಥಾಪನೆಯ ಉದ್ದೇಶವನ್ನೇ ಮಣ್ಣುಪಾಲು ಮಾಡಿದೆ.

 

ಇದೇ ರೀತಿಯಾಗಿ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಲೋಕಾಯುಕ್ತ ಸಂಸ್ಥೆಯು ತನಿಖೆ ನಡೆಸಿ, ನೀಡಿದ ವರದಿಗಳ ಮೇಲೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಂತೆ ವ್ಯವಸ್ಥಿತವಾಗಿ ನೋಡಿಕೊಂಡು ಬಂದಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿಯೇ ಈ ಕುರಿತು ತೀರ್ಮಾನಗಳಾಗುತ್ತಿವೆ. ಇದು ಎಲ್ಲ ಪಕ್ಷಗಳ ಸರ್ಕಾರ ಅಧಿಕಾರದಲ್ಲಿದ್ದಾಗಲೂ ನಡೆದುಕೊಂಡು ಬಂದಿದೆ.

 

ಲೋಕಾಯುಕ್ತದಲ್ಲಿ 22,699 ದೂರುಗಳ ವಿಚಾರಣೆ ಬಾಕಿ; 2009 ರಿಂದಲೂ ಪೆಂಡಿಂಗ್‌ನಲ್ಲಿವೆ ಕೇಸುಗಳು!

 

ಲೋಕಾಯುಕ್ತದಲ್ಲಿ ಕಳೆದ  ಜುಲೈ ಅಂತ್ಯದ ವೇಳೆಗೆ  22,699 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಕೇವಲ ಜುಲೈ ತಿಂಗಳೊಂದರಲ್ಲಿಯೇ 1,270 ಪ್ರಕರಣಗಳು ದಾಖಲಾಗಿದ್ದವು. ಈ ತಿಂಗಳಿನಲ್ಲಿ  ಒಟ್ಟು  845 ಪ್ರಕರಣಗಳನ್ನಷ್ಟೇ ವಿಲೇವಾರಿ ಮಾಡಲು ಲೋಕಾಯುಕ್ತಕ್ಕೆ ಸಾಧ್ಯವಾಗಿದೆ. ಹೀಗೆ ಪ್ರತಿ ತಿಂಗಳೂ ಸಲ್ಲಿಕೆಯಾಗುವ ದೂರುಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಸಾವಿರಾರು ದೂರು ಪ್ರಕರಣಗಳ ವಿಚಾರಣೆಯೇ ಇನ್ನೂ ಆರಂಭಗೊಂಡಿಲ್ಲ. ಆರಂಭಗೊಂಡಿರುವ ಪ್ರಕರಣಗಳ ವಿಚಾರಣೆ ಕೂಡ ಆಮೆ ವೇಗದಲ್ಲಿ ನಡೆಯುತ್ತಿದೆ. ಈ ಕುರಿತು ʻದಿ ಫೈಲ್‌ʼ ವಿಶೇಷ ವರದಿ ಪ್ರಕಟಿಸಿತ್ತು.

Hot this week

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...
Please Scan to make Your Contribution

Topics

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಸಿಮೆಂಟ್‌ ಕಾರ್ಖಾನೆಗಳಿಂದ 42.84 ಕೋಟಿ ಭೂ ಕಂದಾಯ ಬಾಕಿ; ವಸೂಲಿಗೆ ಹಿಂದೇಟು, ನೆನಪೋಲೆಗಳಲ್ಲೇ ಕಾಲಹರಣ

ಬೆಂಗಳೂರು; ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಸುಣ್ಣದ ಕಲ್ಲು...

ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್‌ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ...

ಕೆ ಕೆ ಗೆಸ್ಟ್‌ ಹೌಸ್‌ನಲ್ಲಿರುವ ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ, ನವೀಕರಣ, ದುರಸ್ತಿ; 33 ಲಕ್ಷ ವೆಚ್ಚಕ್ಕೆ 4 ಜಿ ವಿನಾಯಿತಿ, ದುಂದುವೆಚ್ಚ?

ಬೆಂಗಳೂರು;  ಕಾಂಗ್ರೆಸ್‌ ಸರ್ಕಾರವು ಸಹ ಆರ್ಥಿಕ ಸಂಕಷ್ಟದಲ್ಲಿ  ಮುಳುಗೇಳುತ್ತಿದ್ದರೂ ಮುಖ್ಯಮಂತ್ರಿ, ಉಪ...

Related Articles

Popular Categories

error: Content is protected !!