Wednesday | May 20, 2026 |

‘ಸಾಬ್ರು ನನ್ ಮಕ್ಳು ಸರಿ ಇಲ್ಲ, ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ, ಸೆಲೆಕ್ಟ್‌ ಆಗಿರೋದು 2 ಬಿ ರಿಸರ್ವೇ‍ಷನ್‌ನಿಂದಾಗಿಯೇ ಹೊರತು ನಿನ್ನ ಟ್ಯಾಲೆಂಟ್‌ನಿಂದಲ್ಲ,’; ಧಾರ್ಮಿಕ, ಜಾತಿ ಆಧಾರಿತ ತಾರತಮ್ಯ ಆರೋಪ

ಬೆಂಗಳೂರು; ‘ಸಾಬ್ರು ನನ್ ಮಕ್ಳು ಸರಿ ಇಲ್ಲ. ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ. ಯಶವಂತಪುರದ ಸಾಬ್ರುಗಳು ಕೊಳಕ್ ನನ್ ಮಕ್ಳು. ನೀನು ಕೆಎಸ್‌ಸಿಎಸ್‌ಟಿಗೆ ಸೆಲೆಕ್ಟ್‌ ಆಗಿರೋದು 2 ಬಿ ರಿಸರ್ವೇ‍ಷನ್‌ನಿಂದಾಗಿಯೇ ಹೊರತು ನಿನ್ನ ಟ್ಯಾಲೆಂಟ್‌ನಿಂದಲ್ಲ,’

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮೇಲಾಧಿಕಾರಿಗಳು,  ಪ್ರಾಜೆಕ್ಟ್‌ ಇಂಜಿನಿಯರ್‍‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಡಾ ಸೈಯದ್ ಸಮೀರ್‍‌ ಎಂಬುವರಿಗೆ  ಧಾರ್ಮಿಕ ಹಾಗೂ ಜಾತಿ ಆಧಾರಿತ ತಾರತಮ್ಯ ಎಸಗಿದ್ದಾರೆ  ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಪ್ರಾಜೆಕ್ಟ್‌ ಇಂಜಿನಿಯರ್‍‌ಗೆ ಆಗಿರುವ ಧಾರ್ಮಿಕ ಹಾಗೂ ಜಾತಿ ಆಧರಿತ ತಾರತಮ್ಯ , ಅನುಭವಿಸಿರುವ ಕಿರುಕುಳದ ಬಗ್ಗೆ ಖುದ್ದು ಡಾ ಸೈಯದ್ ಸಮೀರ್‍‌ ಅವರು 2025ರ ಮೇ 12ರಂದೇ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಲಿಖಿತ ದೂರು ನೀಡಿದ್ದರು.

ಆದರೆ ಈ ದೂರನ್ನಾಧರಿಸಿ ಆರೋಪಿತ ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗಿಲ್ಲ. ಬದಲಿಗೆ ಧಾರ್ಮಿಕ ಹಾಗೂ ಜಾತಿ ಆಧರಿತ ತಾರತಮ್ಯ,ಕ್ಕೆ  ಒಳಗಾಗಿರುವ ಡಾ ಸೈಯದ್‌ ಸಮೀರ್‍‌ ಅವರನ್ನೇ ಹುದ್ದೆಯಿಂದಲೇ ಅಮಾನತುಗೊಳಿಸಲಾಗಿತ್ತು. ನಂತರ  ನೈಸರ್ಗಿಕ ನ್ಯಾಯ ತತ್ವ ಪಾಲಿಸದೆಯೇ ಡಾ ಸೈಯದ್‌ ಸಮೀರ್‍‌ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ.

ಈ ಪ್ರಕರಣದ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸಬೇಕು ಎಂದು ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ ನಂತರವೂ ಸೈಯದ್ ಸಮೀರ್‍‌ ಅವರಿಗೆ ನ್ಯಾಯ ದೊರೆತಿಲ್ಲ. ಮಂಡಳಿಯು  ವಜಾಗೊಳಿಸಿದ್ದ ಆದೇಶವನ್ನು  ಪ್ರಶ್ನಿಸಿ ಸೈಯದ್ ಸಮೀರ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಡಳಿಯ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರು  ತಿರಸ್ಕರಿಸಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಿನ ಜಾತಿ ತಾರತಮ್ಯ ಮತ್ತು ಕಿರುಕುಳವನ್ನು ತಡೆಯಲು ಕರ್ನಾಟಕ ಸರ್ಕಾರವು ‘ಕರ್ನಾಟಕ ರೋಹಿತ್ ವೇಮುಲಾ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ ಜಾರಿಗೆ ಬಂದ ನಂತರ ನಡೆದಿರುವ ಈ ಪ್ರಕರಣವು ಮುನ್ನೆಲೆಗೆ ಬಂದಿದೆ.

 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಸಮಗ್ರ ದಾಖಲೆಗಳು ಲಭ್ಯವಾಗಿವೆ.

ಮತ್ತೊಂದು ವಿಶೇಷವೆಂದರೇ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ  ಮಂಡಳಿಯಲ್ಲಿ ಪ್ರಾಜೆಕ್ಟ್‌ ಇಂಜಿನಿಯರ್‍‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಡಾ ಸೈಯದ್ ಸಮೀರ್‍‌ ಅವರು ಮಂಡಳಿಯಲ್ಲಿ ನಡೆಯುತ್ತಿದ್ದ ನೇಮಕಾತಿಗಳಲ್ಲಿನ ನಿಯಮ ಉಲ್ಲಂಘನೆ, ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಅದೇ ರೀತಿ  ಕನ್ನಡ ಭಾಷೆ ಕಾಯ್ದೆ 2023ರ ಸ್ಪಷ್ಟ ಉಲ್ಲಂಘನೆ ಆಗಿರುವ ಪ್ರಕರಣಗಳನ್ನು ಹೊರಗೆಡವಿದ್ದರು.

ಹೀಗಾಗಿ ಮಂಡಳಿಯಲ್ಲಿನ ಪಟ್ಟಭದ್ರ ಹಿತಾಸಕ್ತಿಗಳ ಗುಂಪಿನ ಅಧಿಕಾರಿವರ್ಗವು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಪ್ರಾಜೆಕ್ಟ್‌ ಇಂಜಿನಿಯರ್ ಡಾ ಸೈಯದ್‌ ಸಮೀರ್‍‌ ಅವರ ವಿರುದ್ಧ ಧಾರ್ಮಿಕ ಮತ್ತು ಜಾತಿ ಆಧರಿತ ತಾರತಮ್ಯ ಮತ್ತು ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯದರ್ಶಿ ಪ್ರೊ ಅಶೋಕ್‌ ಎಂ ರಾಯಚೂರು, ಮಂಡಳಿಯ ಮಾಜಿ ಪ್ರಭಾರಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಹೇಮಂತ್‌ ಕುಮಾರ್‍‌, ಡಾ ಯು ಟಿ ವಿಜಯ್‌ ಮತ್ತಿತರ ಅಧಿಕಾರಿಗಳ ವಿರುದ್ಧ ಡಾ ಸೈಯದ್ ಸಮೀರ್‍‌ ಎಂಬುವರು ಹಲವು ದೂರುಗಳನ್ನು ಸಲ್ಲಿಸಿರುವುದು ದಾಖಲೆಗಳಿಂದ ಗೊತ್ತಾಗಿದೆ.

ಧಾರ್ಮಿಕ, ಜಾತಿ ಆಧರಿತ ತಾರತಮ್ಯ ಎಸಗಲಾಗಿದೆಯೇ?

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅಧಿಕಾರಿಗಳು ಧಾರ್ಮಿಕ ಮತ್ತು ಜಾತಿ ಆಧರಿತ ತಾರತಮ್ಯ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು 2025ರ ಏಪ್ರಿಲ್‌ 24ರಂದೇ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದರು.

 

 

ಈ ದೂರನ್ನಾಧರಿಸಿ ಆಯೋಗಕ್ಕೆ 15 ದಿನದೊಳಗೆ ವರದಿ ಸಲ್ಲಿಸಬೇಕು ಎಂದು ಆಯೋಗದ ಅಧ್ಯಕ್ಷರ ನಿರ್ದೇಶನದ ಮೇರೆಗೆ ಕಾರ್ಯದರ್ಶಿಯು 2025ರ ಮೇ 12ರಂದು ಮಂಡಳಿಗೆ ಸೂಚಿಸಿದ್ದರು.

 

 

‘ಅಂದಿನ ಕಾರ್ಯದರ್ಶಿಗಳಾದ ಹೇಮಂತ್‌ ಕುಮಾರ್‍‌ ಅವರು ನನ್ನ ಸಮ್ಮುಖದಲ್ಲಿ ‘ಸಾಬ್ರು ನನ್ ಮಕ್ಳು ಸರಿ ಇಲ್ಲ. ಕೇವಲ ಗುಜರಿ ವ್ಯಾಪಾರಕ್ಕೆ ಅಷ್ಟೇ ಸೀಮಿತ. ಯಶವಂತಪುರದ ಸಾಬ್ರುಗಳು ಕೊಳಕ್ ನನ್ ಮಕ್ಳು.. ನೀನು ಕೆಎಸ್‌ಸಿಎಸ್‌ಟಿಗೆ ಸೆಲೆಕ್ಟ್‌ ಆಗಿರೋದು ನಿಮ್ಮ 2 ಬಿ ರಿಸರ್ವೆಷನ್‌ನಿಂದಾಗಿಯೇ ಹೊರತು ನಿನ್ನ ಟ್ಯಾಲೆಂಟ್‌ (ಪ್ರತಿಭೆ)ನಿಂದಲ್ಲ,’ ಎಂದು ಹಲವು ಬಾರಿ ನಿಂದಿಸಿರುತ್ತಾರೆ,’ ಎಂದು ಆಯೋಗಕ್ಕೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಅದೇ ರೀತಿ ‘ಯಾದಗಿರಿ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಕೇಳಿದಾಗಲೂ ಇವರು ಹಲವು ಬಾರಿ ಅಸಡ್ಡೆ ಉತ್ತರವನ್ನು ನೀಡಿದ್ದಾರೆ. ವೈಯಕ್ತಿಕವಾಗಿ ಹಲವು ಬಾರಿ ನನ್ನನ್ನು ಬೇರೆ ಬೇರೆ ವಿಚಾರವಾಗಿ ನಿಂದಿಸಿದ್ದಾರೆ. ಈ ಬಗ್ಗೆ ನಾನು  2022ರಲ್ಲಿಯೇ  ಮಂಡಳಿಯ ಕಾರ್ಯದರ್ಶಿಯಾಗಿದ್ದ  ಅಶೋಕ್ ಎಂ ರಾಯಚೂರು ಅವರಿಗೆ ನನಗೆ ಆಗುತ್ತಿರುವ ತಾರತಮ್ಯವನ್ನು ಗಮನಕ್ಕೆ ತಂದಿದ್ದೇನೆ ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆಯನ್ನಾಗಲೀ ಅಥವಾ ಕ್ರಮವನ್ನಾಗಲೀ ಕೈಗೊಂಡಿಲ್ಲ,’ ಎಂದು ದೂರಿನಲ್ಲಿ ಅಳಲು ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

 

 

‘ಈ ಬೆಳವಣಿಗೆಗಳಿಂದಾಗಿ ನಾನು ಮಾನಸಿಕವಾಗಿ ನೊಂದು ಕಳೆದ ಒಂದೂವರೆ ವರ್ಷಗಳಿಂದಲೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಆಗಾಗ ನನ್ನ ಆರೋಗ್ಯದಲ್ಲಿ ವ್ಯತ್ಯಯಗಳಾಗುತ್ತಿವೆ. ಇಂತಹ ಬಿಗುವಿನ ಕೆಲಸದ ವಾತಾವರಣದಲ್ಲಿ ಉತ್ಕೃಷ್ಟವಾಗಿ ದಕ್ಷತೆಯಿಂದ ಕೆಲಸ ನಿರ್ವಹಿಸಲು ಕ್ಲಿಷ್ಟಕರವಾಗಿದೆ,’ ಎಂದು ತಮ್ಮ ಅಳಲನ್ನು ತೋಡಿಕೊಂಡಿರುವುದು ಗೊತ್ತಾಗಿದೆ.

ಈ ಸಂಬಂಧ ವಿಧಾನ ಪರಿಷತ್‌ ಸದಸ್ಯ ನಸೀರ್‍‌ ಅಹ್ಮದ್‌ ಅವರು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಕ್ರಮಕ್ಕೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು ಎಂದು 2026ರ ಜನವರಿ 23ರಂದೇ  ಸೂಚಿಸಿದ್ದರು.

 

 

ಸಿಎಂ ಟಿಪ್ಪಣಿಯಲ್ಲೇನಿತ್ತು?

ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರಾಜೆಕ್ಟ್‌ ಇಂಜಿನಿಯರ್ ಡಾ ಸೈಯದ್‌ ಸಮೀರ್‍‌ ಅವರು 2021ರ ಜನವರಿ 21ರಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2023ರ ಮಾರ್ಚ್‌ 10ಕ್ಕೆ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾರೆ. ಆದರೂ ಅವರನ್ನು ಸೇವೆಯಿಂದ ತೆಗೆದು ಹಾಕುವ ದಂಡನೆಗೊಳಾಗಿರುತ್ತಾರೆ. ಇವರು ಸಂಸ್ಥೆಯ ಉನ್ನತಾಧಿಕಾರಿಗಳಿಂದ ತಾರತಮ್ಯ ಅನುಭವಿಸುತ್ತಿದ್ದು ನ್ಯಾಯ ಒದಗಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯರು ಕೋರಿದ್ದಾರೆ. ಈ ಸಂಬಂಧ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಜನವರಿ 23ರಂದೇ ಸೂಚಿಸಿದ್ದರು. ಆದರೆ ಈ ಸಂಬಂಧ ಇಲಾಖೆಯು ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.

 

 

 

ಈ ಬಗ್ಗೆ ಡಾ ಸೈಯದ್ ಸಮೀರ್‍‌ ಅವರು ಮಂಡಳಿಯ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರಿಗೆ 2026ರ ಫೆ.10,

 

 

2026ರ ಮಾರ್ಚ್‌ 29 ರಂದು  ರಂದು ಈ ಮೈಲ್ ಮೂಲಕ ಮನವಿ ಸಲ್ಲಿಸಿದ್ದರು.

 

 

 

ತಮ್ಮನ್ನು ಸೇವೆಯಿಂದ ವಜಾಗೊಳಿಸಿರುವ ಪ್ರಕ್ರಿಯೆಯಲ್ಲಿ ನೈಸರ್ಗಿಕ ನ್ಯಾಯ ಅನುಸರಿಸಿಲ್ಲ ಎಂದು ಮನವಿಯಲ್ಲಿ ವಿವರಿಸಿದ್ದರು. ಈ ಸಂಬಂಧ ಮಂಡಳಿಯ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಐಐಎಸ್‌ಸಿಯ ನಿರ್ದೇಶಕರೂ ಅಗಿರುವ ಗೋವಿಂದ ರಂಗರಾಜನ್ ಅವರು ಡಾ ಸೈಯದ್‌ ಸಮೀರ್ ಅವರ ಮೇಲ್ಮನವಿಯನ್ನು ತಿರಸ್ಕರಿಸಿದ್ದರು.

ಮೇಲ್ಮನವಿ  ತಿರಸ್ಕರಿಸಿದ್ದೇಕೆ?

ಮೇಲ್ಮನವಿದಾರರು ಮೂಲತಃ ಮೇಲ್ಮನವಿಯನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು ಹಾಗೂ ವೈಯಕ್ತಿಕ ವಿಚಾರಣೆಗೆ ಶೀಘ್ರ ದಿನಾಂಕ ನಿಗದಿಪಡಿಸಬೇಕು ಎಂದು ವಿನಂತಿಸಿದ್ದಾರೆ. ಈ ಮೇಲ್ಮನವಿಯನ್ನು KSCST ಸೇವಾ ನಿಯಮಗಳ ನಿಯಮ 20.07 ಅಡಿಯಲ್ಲಿ ಸಲ್ಲಿಸಲಾಗಿದೆ. ಆ ನಿಯಮದಲ್ಲಿ ಮೇಲ್ಮನವಿ ಪ್ರಾಧಿಕಾರದಿಂದ ವೈಯಕ್ತಿಕ ವಿಚಾರಣೆ ನಡೆಸುವ ಬಗ್ಗೆ ಯಾವುದೇ ಅವಕಾಶವಿಲ್ಲ.

ಹಾಗೆಯೇ, ಆ ನಿಯಮವು ಕಾನೂನುಬದ್ಧ ಮೇಲ್ಮನವಿಯ ವಿಲೇವಾರಿ ಪ್ರಕ್ರಿಯೆಯನ್ನು ನಿರ್ದಿಷ್ಟಪಡಿಸದಿರುವುದರಿಂದ ಕರ್ನಾಟಕ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ಅನ್ವಯವಾಗುತ್ತವೆ. ಅದರಂತೆ, ಮೇಲ್ಮನವಿಯನ್ನು ಪರಿಗಣಿಸುವ ಮತ್ತು ವಿಲೇವಾರಿ ಮಾಡುವ ಪ್ರಕ್ರಿಯೆ ನಿಯಮ 25ರಲ್ಲಿ ನೀಡಲಾಗಿದೆ.

‘ನಾನು ಆ ನಿಯಮವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇನೆ ಮತ್ತು ಅದರಲ್ಲಿ ಮೇಲ್ಮನವಿ ಪ್ರಾಧಿಕಾರವು ಶಿಕ್ಷೆಯನ್ನು ಹೆಚ್ಚಿಸಲು ಉದ್ದೇಶಿಸಿದ ಸಂದರ್ಭವನ್ನು ಹೊರತುಪಡಿಸಿ ವೈಯಕ್ತಿಕ ವಿಚಾರಣೆ ನೀಡುವ ಅಗತ್ಯವಿಲ್ಲವೆಂದು ಕಂಡುಬಂದಿದೆ. ಅಂಥ ಸಂದರ್ಭದಲ್ಲಿ, ನಿಯಮ 25ರ ಉಪನಿಯಮ 2ರ ಅವಕಾಶದಂತೆ  ಮೇಲ್ಮನವಿದಾರರಿಗೆ ಪ್ರಸ್ತಾಪಿತ ಹೆಚ್ಚುವರಿ ಶಿಕ್ಷೆಯ ವಿರುದ್ಧ ಪ್ರತಿನಿಧಿಸುವ ಅವಕಾಶ ನೀಡಬಹುದು. ಪ್ರಸ್ತುತ ಪ್ರಕರಣದಲ್ಲಿ ಶಿಕ್ಷೆಯನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ. ಆದ್ದರಿಂದ, ಬಾಕಿ ಇರುವ ಮೇಲ್ಮನವಿಯ ಸಂಬಂಧ ವೈಯಕ್ತಿಕ ವಿಚಾರಣೆಯನ್ನು ಕೋರಿ ಮೇಲ್ಮನವಿದಾರರು ಸಲ್ಲಿಸಿರುವ ವಿನಂತಿಯನ್ನು ಈ ಮೂಲಕ ತಿರಸ್ಕರಿಸಲಾಗುತ್ತದೆ,’ ಎಂದು ಗೋವಿಂದ ರಂಗರಾಜನ್ ಅವರು 2026ರ ಏಪ್ರಿಲ್‌ 8ರಂದು ಮಂಡಳಿಯ ಕಾರ್ಯದರ್ಶಿಗೆ ತಿಳಿಸಿದ್ದರು.

ಈ ಸಂಬಂಧ ಅಶೋಕ್ ರಾಯಚೂರ್ ಅವರು 2026ರ ಏಪ್ರಿಲ್‌ 10ರಂದು ಡಾ ಸೈಯದ್‌ ಸಮೀರ್‍‌ ಅವರಿಗೆ ಗೋವಿಂದ ರಾಜನ್‌ ಅವರು ತಿರಸ್ಕರಿಸಿದ್ದ ಆದೇಶದ ಕುರಿತು 2026ರ ಏಪ್ರಿಲ್‌ 10ರಂದು ಮಾಹಿತಿ ನೀಡಿದ್ದರು.

ಪ್ರೊ. ಗೋವಿಂದ ರಂಗರಾಜನ್ ಅವರು ತಿರಸ್ಕರಿಸಿ ಹೊರಡಿಸಿದ್ದ  ಆದೇಶವು ಪೂರ್ವಗ್ರಹಪೀಡಿತವಾಗಿದೆ. ನೈಸರ್ಗಿಕ ನ್ಯಾಯ ತತ್ವ ಉಲ್ಲಂಘನೆಯಾಗಿದೆ ಎಂದು  ಡಾ ಸೈಯದ್ ಸಮೀರ್ ಅವರು 2026ರ ಏಪ್ರಿಲ್‌ 16ರಂದು ಆಕ್ಷೇಪಿಸಿದ್ದರು.

ಆದರೆ ಇದುವರೆಗೂ ಈ ಸಂಬಂಧ ಮಂಡಳಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.

Hot this week

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...
Please Scan to make Your Contribution

Topics

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಸಿಮೆಂಟ್‌ ಕಾರ್ಖಾನೆಗಳಿಂದ 42.84 ಕೋಟಿ ಭೂ ಕಂದಾಯ ಬಾಕಿ; ವಸೂಲಿಗೆ ಹಿಂದೇಟು, ನೆನಪೋಲೆಗಳಲ್ಲೇ ಕಾಲಹರಣ

ಬೆಂಗಳೂರು; ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ಗ್ರಾಮದಲ್ಲಿ ಸುಣ್ಣದ ಕಲ್ಲು...

Related Articles

Popular Categories

error: Content is protected !!