ಬೆಂಗಳೂರು; ಹೆಚ್‌ಎಂಟಿ ಅರಣ್ಯ ಜಮೀನಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಫ್‌ಎಸ್ ಅಧಿಕಾರಿ ಆರ್ ಗೋಕುಲ್ ಅವರು ಮಧ್ಯಂತರ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಮೂಲ ದಾಖಲೆಗಳ ಸತ್ಯಾಸತ್ಯತೆಯನ್ನು ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಸ್ಮಿತಾ ಬಿಜ್ಜೂರ್ ಅವರು ಸಹ ಖಾತ್ರಿಪಡಿಸಿಕೊಂಡಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಮಿತಾ ಬಿಜ್ಜೂರ್ ಅವರು ಸರ್ಕಾರಕ್ಕೆ ನೀಡಿದ್ದ ಸಮಜಾಯಿಷಿಯನ್ನು ಸರ್ಕಾರವು ಅಂಗೀಕರಿಸಿಲ್ಲ. ಅದೇ ರೀತಿ ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಸಂದೀಪ್ ದವೆ, ಎಪಿಸಿಸಿಎಫ್ ವಿಜಯ್ ಕುಮಾರ್ ಗೋಗಿ ಅವರೂ ಸಹ ಕರ್ತವ್ಯಲೋಪ ಎಸಗಿದ್ದಾರೆ ಎಂದು ಅರಣ್ಯ ಇಲಾಖೆಯು ಬೊಟ್ಟು ಮಾಡಿ ತೋರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಕಡತದ (FEE/107/FLL/2025 COMPUTER NUMBER 1772747) ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಸ್ಮಿತಾ ಬಿಜ್ಜೂರ್ ಅವರ ಸಮಜಾಯಿಷಿಯಲ್ಲೇನಿದೆ?
ತಮಗೆ ನೇರವಾಗಿ ಸಚಿವರ ಜೊತೆಗಾಗಲಿ, ಸಚಿವಾಲಯದೊಂದಿಗಾಗಲೀ ಸಂವಹನ ನಡೆಸುವ ಅಧಿಕಾರ ಇರುವುದಿಲ್ಲ. ಆದರೆ ತಮಗೆ ಬರುವ ಕಡತಗಳ ತಾಂತ್ರಿಕ ಅಂಶಗಳ ಬಗ್ಗೆ ಪರಿಶೀಲಿಸಿ ಎಸಿಸಿಎಸ್‌ಗೆ ಸಲ್ಲಿಸುವುದಾಗಿರುತ್ತದೆ ಎಂದು ಸ್ಮಿತಾ ಬಿಜ್ಜೂರ್ ಅವರು ಸರ್ಕಾರಕ್ಕೆ ಸಮಜಾಯಿಷಿ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಈ ಸಮಜಾಯಿಷಿಯನ್ನು ಸರ್ಕಾರವು ಅಂಗೀಕರಿಸಿಲ್ಲ.
‘ಡಿನೋಟಿಫಿಕೇಷನ್‌ಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನ ಎಚ್‌ಎಂಟಿ ವಶದಲ್ಲಿರುವ ಜಮೀನಿನ ಮೂಲ ದಾಖಲೆಗಳ ಪತ್ರ ಅಂದರೆ ದಾನಪತ್ರ, ಮಂಜೂರಾತಿ ಪತ್ರ, ಹಂಚಿಕೆ ಪತ್ರ, ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಬಿಡುಗಡೆ ಮಾಡಿರುವ ಸರ್ಕಾರಿ ಆದೇಶಗಳ ನೈಜತೆ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳದೇ ಇರುವುದೂ ಸೇವಾಲೋಪವಾಗುತ್ತದೆ. ಮತ್ತು ಅರಣ್ಯ ಸಂರಕ್ಷಣೆ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯವಾಗುತ್ತದೆ,’ ಎಂದು ಕಡತದ ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ಸಿ ರೇ ಅವರು 2025ರ ಜನವರಿ 6ರಂದು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಗೆ ನಿರ್ದೇಶಕರಿಗೆ ಪತ್ರ ಬರೆದು ಮಾಹಿತಿ ದಾಖಲೆಗಳನ್ನು ಕೋರಿದ್ದರು.
ಎಚ್ ಎಂ ಟಿ ವಶದಲ್ಲಿರುವ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ (ಸಂಖ್ಯೆ ಎಎಫ್‌ಡಿ 106 ಎಫ್‌ಜಿಎನ್ 1960, ದಿನಾಂಕ 27.03.1965) ಮತ್ತು 1961ರ ಆಗಸ್ಟ್ 5ರಂದು ಹಂಚಿಕೆ ಮಾಡಿರುವ ಕುರಿತ ಆದೇಶದ ಪ್ರತಿಯ ದೃಢೀಕೃತ ಪತ್ರ ಕೋರಿದ್ದರು.
ಪತ್ರಗಾರದ ಇಲಾಖೆಯ ಉತ್ತರವೇನು?
ಪಿ ಸಿ ರೇ ಅವರ ಕೋರಿದ್ದ ಮಾಹಿತಿ ದಾಖಲೆಗಳಿಗೆ ಸಂಬಂಧಿಸಿದಂತೆ ಪತ್ರಗಾರ ಇಲಾಖೆಯು ಉತ್ತರ ಒದಗಿಸಿತ್ತು.
‘ತಮ್ಮ ಮನವಿಯಲ್ಲಿ ಕೋರಿರುವ ಸರ್ಕಾರದ ಆದೇಶ (ಸಂಖ್ಯೆ ಎಎಫ್‌ಡಿ 106 ಎಫ್‌ಜಿಎನ್ 1960, ದಿನಾಂಕ 27.03.1965) ಮತ್ತು 1961ರ ಆಗಸ್ಟ್ 5ರಂದು ಹಂಚಿಕೆ ಮಾಡಿರುವ ಕುರಿತ ಆದೇಶದ ಮಾಹಿತಿ ಇಲಾಖೆಯ ಚಾರಿತ್ರಿಕ ದಾಖಲೆ ವಿಭಾಗದಲ್ಲಿರುವ ಗೆಜೆಟ್‌ಗಳಲ್ಲಿ ಪರಿಶೀಲನೆ ಮಾಡಲಾಗಿದೆ. ತಾವು ಕೋರಿರುವ ಮಾಹಿತಿಯು ಕಂಡು ಬಂದಿರುವುದಿಲ್ಲ,’ ಎಂದು ಮಾರುತ್ತರದಲ್ಲಿ ಸ್ಪಷ್ಟಪಡಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಐ ಎ ಸಲ್ಲಿಸುವ ಪೂರ್ವದಲ್ಲಿ ಇದೇ ರೀತಿಯಾಗಿ ಮೂಲ ದಾಖಲೆಗಳ ಸತ್ಯಾಸತ್ಯತೆ ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿ ಎಪಿಸಿಸಿಎಫ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದ ಸ್ಮಿತಾ ಬಿಜ್ಜೂರ್ ಅವರದ್ದಾಗಿರುತ್ತದೆ. ಹೀಗಾಗಿ ಇವರ ಸಮಜಾಯಿಷಿ ಅಂಗೀಕಾರಾರ್ಹವಾಗಿರುವುದಿಲ್ಲ ಎಂದು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಸ್ಮಿತಾ ಬಿಜ್ಜೂರ್ ಅವರು ‘ಎಚ್‌ಎಂಟಿಗೆ ಬಿಡುಗಡೆ ಮಾಡಿರುವ ಅರಣ್ಯ ಜಮೀನು ಈಗ ಅರಣ್ಯ ಸ್ವರೂಪ ಕಳೆದುಕೊಂಡಿದ್ದಲ್ಲಿ ಅದನ್ನು ಡಿ ನೋಟಿಫೈ ಮಾಡಲು ಅಧಿಸೂಚನೆ ತಯಾರಿಸಿ, ಅಧಿಸೂಚನೆಯನ್ನು ಹೊರಡಿಸಲು ಅನುಮತಿ ಕೋರಿ ಸರ್ವೋಚ್ಛ ನ್ಯಾಯಾಲಯಕ್ಕೆ ಐ ಎ ಸಲ್ಲಿಸುವಂತೆ ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ,’ ಎಂದೂ ಸಹ ತಿಳಿಸಿದ್ದರು.
ಹೀಗಾಗಿ ಅರಣ್ಯ ಸ್ವರೂಪ ಕಳೆದುಕೊಂಡಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಇರುತ್ತದೆ ಎಂಬುದು ಈ ಸಾಲುಗಳಿಂದ ತಿಳಿದು ಬರುತ್ತದೆ ಎಂದು ಅರಣ್ಯ ಇಲಾಖೆಯ ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಿಜಯಕುಮಾರ್ ಗೋಗಿ ಅವರ ಸಮಜಾಯಿಷಿಯಲ್ಲೇನಿದೆ?
ಎಚ್‌ಎಂಟಿ ಭೂಮಿಯನ್ನು ಒತ್ತುವರಿಯಾದ ಭೂಮಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಒತ್ತುವರಿಯಾದ ಭೂಮಿಗೆ ಅನ್ವಯಿಸಬಹುದಾದ 64 ಎ ಪ್ರಕ್ರಿಯೆಯನ್ನು ಜರುಗಿಸುವುದು ಉತ್ತಮ ಆಡಳಿತಕ್ಕೆ ಒಂದು ಅಪವಾದ ಎಂದು ಹೇಳಿದ್ದರು. ಮೇಲ್ಮನವಿ ಪ್ರಾಧಿಕಾರವೂ ಸಹ ಅಸಿಂಧು ಎಂದು ತೀರ್ಮಾನಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದರು.
ಆದರೆ ಎಚ್‌ಎಂಟಿಗೆ ನೀಡಲಾಗಿದೆ ಎನ್ನಲಾದ ಭೂಮಿಯ ಮಂಜೂರಾತಿ, ಗಿಫ್ಟ್ ಡೀಡ್ ದಾಖಲೆಗಳ ಕುರಿತಂತೆ ಯಾವುದೇ ಗೆಜೆಟ್ ಅಧಿಸೂಚನೆ ಇಲ್ಲ. ಹೀಗಾಗಿ ಇದರ ಸತ್ಯಾಸತ್ಯತೆ ಖಾತ್ರಿಪಡಿಸಿಕೊಳ್ಳದೇ ಅರಣ್ಯ ಭೂಮಿ ರಿಲೀಸ್ ಮಾಡಿರುವ ಆದೇಶದ ಮೂಲ ಪ್ರತಿಗಳೂ ಇಲ್ಲ. ಒಂದೊಮ್ಮೆ ಸರ್ಕಾರಿ ಆದೇಶವಾಗಿದೆ ಎಂದು ಭಾವಿಸಿದರೂ ಸಹ ಆ ಆ ಕಾಲಘಟ್ಟದಲ್ಲಿ ಯಾವ ಯಾವ ಷರತ್ತು ವಿಧಿಸಲಾಗುತ್ತಿತ್ತು ಎಂಬ ಬಗ್ಗೆಯೂ ಗಮನ ಹರಿಸದಿರುವುದು ಸಹ ಕರ್ತವ್ಯಲೋಪವಾಗಿದೆ ಎಂದು ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ.
‘ಈ ಹಿನ್ನೆಲೆಯಲ್ಲಿ ಮಂಜೂರಾತಿ ಕುರಿತಂತೆ ಕರ್ನಾಟಕ ರಾಜ್ಯ ಪತ್ರಗಾರ ನಿರ್ದೇಶನಾಲಯದ ನಿದೇಶಕರ ಕಚೇರಿಗೆ ಪತ್ರ ಬರೆದು ದಾಖಲೆಗಳ ನೈಜತೆ ಕುರಿತಂತೆ ಖಾತ್ರಿಪಡಿಸಿಕೊಳ್ಳದೇ ಡಿನೋಟಿಫಿಕೇಷನ್‌ಗೆ ಅರ್ಜಿ ಸಲ್ಲಿಸಿರುವುದರಲ್ಲಿ ಸಂದೀಪ್ ದವೆ, ವಿಜಯಕುಮಾರ್ ಗೋಗಿ, ಸ್ಮಿತಾ ಬಿಜ್ಜೂರ್ ಅವರ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪವಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.
ಎಚ್‌ಎಂಟಿಯು ಸಹ 1965ರ ಸರ್ಕಾರಿ ಆದೇಶವನ್ನು (ಸಂಖ್ಯೆ; RD 129/GMA-64, DATED 27.03.1965, RD 57, GCF 60, BANGALORE DATED 18.04.1962, G.O-RD 64 GIA 63, 15.07.1963) ಸಲ್ಲಿಸಿದೆ. ಈ ಆದೇಶಗಳಲ್ಲಿ ಉಲ್ಲೇಖಿಸಿರುವ ಷರತ್ತುಗಳು 1965ರ ಆದೇಶಕ್ಕೂ ಅನ್ವಯಿಸುತ್ತವೆ ಎಂದು ತಿಳಿಸಿದೆ. ಆದರೆ 1962 ಮತ್ತು 63ರ ಸರ್ಕಾರಿ ಆದೇಶಗಳೇ ಲಭ್ಯವಿಲ್ಲ. ಹೀಗಾಗಿ ಈ ಷರತ್ತಿನಲ್ಲಿ ಭೂ ಪರಭಾರೆ ಮಾಡದಂತೆ ಅಥವಾ ಕರ್ನಾಟಕ ಅರಣ್ಯ ಇಲಾಖೆಗೆ ಹಿಂತಿರುಗಿಸಲು ಷರತ್ತು ಇತ್ತೇ ಎಂಬ ಖಚಿತ ಮಾಹಿತಿಯೂ ಸರ್ಕಾರದ ಬಳಿ ಇಲ್ಲವಾಗಿದೆ.
ಇನ್ನು ಅಂದಿನ ಎಪಿಸಿಸಿಎಫ್ ಅವರು 2015ರಲ್ಲಿಯೇ 64 ಎ ಪ್ರಕ್ರಿಯೆಯನ್ನು ನಡೆಸಿದ್ದರು. ಇದರ ವಿರುದ್ಧವೂ ಮೇಲ್ಮನವಿ ಆದೇಶವಾಗಿದೆ. ಆದರೆ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುವ ಅಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿ ಆಗಿರಬೇಕೇ ಹೊರತು, ಅನ್ಯ ಸೇವೆಯ ಅಧಿಕಾರಿ ಆಗಲು ಸಾಧ್ಯವಿಲ್ಲ. ಆದರೆ ಇಲ್ಲಿ ಅನ್ಯ ಸೇವೆಯ ಅಧಿಕಾರಿ ತೀರ್ಪು ನೀಡಿದ್ದರೂ ಸಹ ಅದನ್ನು ಪ್ರಶ್ನಿಸಿಲ್ಲ.
ಈ ಯಾವ ವಿಷಯದ ಬಗ್ಗೆಯೂ ಗಮನ ಹರಿಸದೇ ಹೀಗೆ ನೀಡಿರುವ ಸಮಜಾಯಿಷಿಯು ಸಮರ್ಥನೀಯವೂ ಅಲ್ಲ ಮತ್ತು ಅದು ಅಂಗೀಕಾರಾರ್ಹವೂ ಅಲ್ಲ ಎಂದು ಸರ್ಕಾರವು ನಿರ್ಧರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.