ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ

ಬೆಂಗಳೂರು; ಗೃಹ ಜ್ಯೋತಿ ಯೋಜನೆಯ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ನೀಡಿರುವ ಆದೇಶಕ್ಕೆ ಸಂಬಂಧಿಸಿಂತೆ  ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು  ಸಮಗ್ರ ಕಡತವನ್ನು ಒದಗಿಸದೇ  ಮುಚ್ಚಿಟ್ಟಿದೆ. ತನ್ನ ಬಳಿ ಕಾರ್ಯಾದೇಶ ಹೊರತುಪಡಿಸಿ ಬೇರಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಆರ್‌ಟಿಐ ಅಡಿಯಲ್ಲಿ ಹಿಂಬರಹ ನೀಡಿದೆ.

 

ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ನೀಡಿರುವ ಕಾರ್ಯಾದೇಶ ಮತ್ತು ಸಮಗ್ರ ಕಡತ ಕೋರಿ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು.

 

ಈ ಸಂಬಂಧ ಕೇವಲ ಕಾರ್ಯಾದೇಶವನ್ನು ಮಾತ್ರ ಒದಗಿಸಿರುವ ಬೆಸ್ಕಾಂ, ಸಮಗ್ರ ಕಡತ ಮತ್ತು ಅದರೊಳಗಿರುವ ದಾಖಲೆಗಳು, ಬೆಸ್ಕಾಂನ ನಡವಳಿಗಳು, ಬೆಸ್ಕಾಂನ ಆಂತರಿಕ ಆರ್ಥಿಕ ಸಲಹೆಗಾರರ ಅಭಿಪ್ರಾಯ, ಟಿಪ್ಪಣಿ ಹಾಳೆಗಳೂ  ಸೇರಿದಂತೆ ಹಲವು ದಾಖಲೆಗಳನ್ನು ಮುಚ್ಚಿಟ್ಟಿದೆ.

 

ಅಲ್ಲದೇ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ಹಣ ಬಿಡುಗಡೆ ಮಾಡುವ ಮುನ್ನ ಮಾಡುವ ಬೆಸ್ಕಾಂ  ನಿಗಮದ ಆಡಳಿತ ಮಂಡಳಿ ಮುಂದೆ ಸಭೆ ನಡೆದಿದೆಯೋ ಇಲ್ಲವೋ ಎಂಬುದು ಖಾತ್ರಿ ಪಟ್ಟಿಲ್ಲ. ಹಾಗೆಯೇ ನಿಗಮದ ಆಂತರಿಕ ಆರ್ಥಿಕ ಸಲಹೆಗಾರರು ಈ ಸಂಬಂಧ  ಅಭಿಪ್ರಾಯ ನೀಡಿದ್ದರೋ ಅಥವಾ ಇಲ್ಲವೋ ಎಂಬುದು ಸಹ  ತಿಳಿದು ಬಂದಿಲ್ಲ.

 

ಎಂ2ಎಂ ಮೀಡಿಯಾ ನೆಟ್‌ವರ್ಕ್‌ಗೆ ನೀಡಿರುವ ಕಾರ್ಯಾದೇಶದಲ್ಲಿಯೇ ಟರ್ಮ್ಸ್‌ ಆಫ್‌ ಕಂಡೀಷನ್ಸ್‌ಗಳ ವಿವರಗಳನ್ನಷ್ಟೇ  ಒದಗಿಸಿದೆ. ಉಳಿದಂತೆ ಕಂಪನಿಯೊಂದಿಗಿನ ಎಂಒಯು/ಒಪ್ಪಂದ/ ಟರ್ಮ್ಸ್‌ ಆಫ್‌ ರೆಫರೆನ್ಸ್‌ ಮಾಹಿತಿಯು ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಮಾಹಿತಿ ಒದಗಿಸಿದೆ.

 

ಒಂದೊಮ್ಮೆ ತನ್ನ ಕಚೇರಿಯಲ್ಲಿ ಈ ದಾಖಲೆಗಳು ಲಭ್ಯವಿಲ್ಲವೆಂದಾದ ಮೇಲೆ ದಾಖಲೆಗಳು ಲಭ್ಯ ಇರುವ ಅಥವಾ ಹೊಂದಿರುವ ಕಚೇರಿಗೆ ಆರ್‌ಟಿಐ ಅರ್ಜಿಯನ್ನು ವರ್ಗಾಯಿಸಬೇಕಿತ್ತು. ಆದರೆ ಈ ಪ್ರಕ್ರಿಯೆಯನ್ನೂ ಬೆಸ್ಕಾಂ ಮಾಡಿಲ್ಲದಿರುವುದು ಕಂಡು ಬಂದಿದೆ.

 

ಮತ್ತೊಂದು ವಿಶೇಷವೆಂದರೇ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುವವರಿಗೆ ತರಬೇತಿ ನೀಡಲು 75,000 ರು ಶುಲ್ಕವೆಂದು ನಿಗದಿಪಡಿಸಿದೆ. ಅಂದರೆ ಇಲಾಖಾ ಫಲಾನುಭವಿ ಆಧರಿತ ಯೋಜನೆಗಳ ಕುರಿತಾಗಿ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯಲ್ಲಿ ತರಬೇತಿಗೊಂಡವರು ಯಾರು ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಎಂ2ಎಂ ಮೀಡಿಯಾ ನೆಟ್‌ವರ್ಕ್‌ ತನ್ನ ಪ್ರಸ್ತಾವನೆಯಲ್ಲಿ ಮೀಡಿಯಾ ವಾಲಿಯಂಟಿಯರ್ಸ್‌ಗಳನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಿತ್ತು. ಆದರೆ ಬೆಸ್ಕಾಂನ ಕಾರ್ಯಾದೇಶದ ಟರ್ಮ್ಸ್‌ ಆಫ್‌ ಕಂಡೀಷನ್ಸ್‌ನಲ್ಲಿ ಮೀಡಿಯಾ ವಾಲಿಯಂಟಿಯರ್ಸ್‌ಗಳ ಬಗ್ಗೆ ಉಲ್ಲೇಖವಿಲ್ಲ. ಬದಲಿಗೆ ಸಿಟಿಜನ್‌ ಜರ್ನಲಿಸ್ಟ್‌ ಮತ್ತು ಸಂಯೋಜಕರ ಬಗ್ಗೆ ಹೇಳಲಾಗಿದೆ.

 

ಎಂ2ಎಂ ಕಂಪನಿಯ ಕೋಟಿ ರು. ಸಮೀಕ್ಷೆ; ‘ದಿ ಫೈಲ್‌’ ತನ್ನ ವರದಿಗೆ ಬದ್ಧ

 

ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಿಟಿಜನ್‌ ಜರ್ನಲಿಸ್ಟ್‌, ಸಂಯೋಜಕರಿಗೆ 5.00 ಲಕ್ಷ ರು. ಶುಲ್ಕ ನಿಗದಿಪಡಿಸಿದೆ. ಉಳಿದಂತೆ ಇತರೆ  ಶುಲ್ಕದ ವಿವರ ಇಲ್ಲಿ ಕೊಡಲಾಗಿದೆ.

 

 

ಪ್ರಶ್ನಾವಳಿ ತಯಾರಿಗೆ 86,900 ರು., ತರಬೇತಿ ಶುಲ್ಕ 75,000 ರು., ಪ್ರಯಾಣ ಮತ್ತು ಕನ್ವೈನ್ಸ್‌ 6.48 ಲಕ್ಷ ರು., ಆಡಳಿತಾತ್ಮಕ ವೆಚ್ಚ 1.73 ಲಕ್ಷ, ಸಾಫ್ಟ್‌ವೇರ್‍‌ ಅಭಿವೃದ್ಧಿ ಶುಲ್ಕ 2.90 ಲಕ್ಷ, ವೃತ್ತಿಪರ ಮತ್ತು ಸಮಾಲೋಚನ ಸೇವೆಗಳ ಶುಲ್ಕ 1.75 ಲಕ್ಷ , ಸಿಟಿಜನ್‌ ಜರ್ನಲಿಸ್ಟ್‌ ಮತ್ತು ಸಂಯೋಜಕರ ಶುಲ್ಕ 5 ಲಕ್ಷ , ಸಂಯೋಜಕರು ಮತ್ತು ವಾಸ್ತವ್ಯ ಶುಲ್ಕ 2.25 ಲಕ್ಷ ರು., ದತ್ತಾಂಶ ಸಂಗ್ರಹಣೆ ಶುಲ್ಕ 1.02 ಲಕ್ಷ ರು., ಇತರೆ 75,000 ಕಂಪನಿ ಲಾಭ 1.50 ಲಕ್ಷ ರು. ಮತ್ತು ಜಿಎಸ್‌ಟಿ ಸೇರಿ ಒಟ್ಟಾರೆ 29.50 ಲಕ್ಷ ರು. ವೆಚ್ಚವಾಗಲಿದೆ ಎಂಬುದು ಕಾರ್ಯಾದೇಶದಿಂದ ಗೊತ್ತಾಗಿದೆ.

 

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

ಎಂ2ಎಂ ಮೀಡಿಯಾ ನೆಟ್‌ವರ್ಕ್‌ಗೆ 20 ಲಕ್ಷ ರು. ಮುಂಗಡವಾಗಿ ಈಗಾಗಲೇ ಪಾವತಿಯಾಗಿದೆ. ಇನ್ನುಳಿದ ಶೇ.20ರಷ್ಟು ಹಣ ಮತ್ತು ಜಿಎಸ್‌ಟಿ ಸೇರಿ 9.50 ಲಕ್ಷ ರು.ಗಳನ್ನು ಸಮೀಕ್ಷೆ ಪೂರ್ಣಗೊಂಡ ನಂತರ ಪಾವತಿಸಲಿದೆ ಎಂಬುದು ಕಾರ್ಯಾದೇಶದಿಂದ ತಿಳಿದು ಬಂದಿದೆ.

 

ಅಂದಾಜು 25,000 ಮಂದಿಯನ್ನು ಮುಖತಃ ಭೇಟಿ, ಸಂದರ್ಶನ ಮಾಡಬೇಕು. ವೈಜ್ಞಾನಿಕ ರ್‍ಯಾಂಡಮ್‌ ಮಾದರಿಯಲ್ಲಿರಬೇಕು. ಸಮೀಕ್ಷೆಯು 2 ಹಂತದಲ್ಲಿ ನಡೆಯಲಿದೆ. ನವಂಬರ್‍‌ನಲ್ಲಿ 112 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿದೆ. ಡಿಸೆಂಬರ್‍‌ನಲ್ಲಿ ಬಾಕಿ 112 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿದೆ.

 

ಕಾರ್ಯಾದೇಶ ಪಡೆದ 2 ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕು. ನಿಗದಿತ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳದಿದ್ದಲ್ಲಿ ದಂಡ ವಿಧಿಸಲಾಗುವುದು. ಗುತ್ತಿಗೆ ಮೊತ್ತದ ಶೇ.10ರಷ್ಟು ದಂಡ ವಿಧಿಸಲಾಗುವುದು ಎಂದು ಷರತ್ತಿನಲ್ಲಿ ಹೇಳಿದೆ.

SUPPORT THE FILE

Latest News

Related Posts