ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

ಬೆಂಗಳೂರು; ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಅರ್ಥಿಕ ಇಲಾಖೆಯು ಅಧಿಸೂಚನೆ ಹೊರಡಿಸುವ ಮುನ್ನವೇ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯು ಸಮೀಕ್ಷೆ ಕೈಗೊಂಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.

 

ಗೃಹ ಜ್ಯೋತಿ, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಅನ್ನಭಾಗ್ಯ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಈ ಐದು ಯೋಜನೆಗಳ ಅನುಷ್ಠಾನ ಮಾದರಿ, ಮಾನದಂಡ ಹಾಗೂ ಷರತ್ತು ವಿಚಾರದಲ್ಲಿ ಸ್ಪಷ್ಟತೆ, ಮಾರ್ಗಸೂಚಿ ರೂಪಿಸಲು ತಿಣುಕಾಡಿತ್ತು. ಹೀಗಾಗಿ ಐದು ಗ್ಯಾರಂಟಿಗಳ ಪೈಕಿ ಮೂರಕ್ಕೆ ಮಾತ್ರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿತ್ತು. ಉಳಿದ 2 ಗ್ಯಾರಂಟಿಗಳನ್ನು ಮುಂದೂಡಿತ್ತು.

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ. ಹೀಗಾಗಿ ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು. ಹೀಗಿದ್ದರೂ ಸಹ ಗ್ಯಾರಂಟಿಗಳು ಯಶಸ್ಸು ಕಂಡಿವೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯು ಜುಲೈನಲ್ಲಿಯೇ ಬಿಡುಗಡೆಗೊಳಿಸಿರುವ ಸಮೀಕ್ಷೆ ವರದಿಯು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

ಟೆಂಡರ್‌, ದರಪಟ್ಟಿ ಅಹ್ವಾನವಿಲ್ಲ

 

ಇನ್ನು, ಸಮೀಕ್ಷೆ ವೆಚ್ಚವು 5 ಲಕ್ಷ ರು. ಮಿತಿ ದಾಟಿರುವ ಕಾರಣ ಸರ್ಕಾರವು ಟೆಂಡರ್‌, ದರಪಟ್ಟಿ ಆಹ್ವಾನಿಸಬೇಕಿತ್ತು. ಆದರೆ ಈ ಎಲ್ಲಾ ಪ್ರಕ್ರಿಯೆಗಳನ್ನು ಬದಿಗೊತ್ತಿ ನೇರವಾಗಿ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ಸಮೀಕ್ಷೆ ಹೊಣೆಗಾರಿಕೆ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 

ಅಲ್ಲದೇ ಈ  ಪ್ರಕರಣದಲ್ಲಿ 4(ಜಿ) ವಿನಾಯಿತಿಯನ್ನೂ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದೆ.

 

ಸರ್ಕಾರದ ಕಾಮಗಾರಿಗಳ ಗುತ್ತಿಗೆ ನೀಡುವ ಪ್ರಕ್ರಿಯೆ ಪೈಪೋಟಿಯಿಂದ ಕೂಡಿರಬೇಕು ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕೆಂಬ ನಿಟ್ಟಿನಲ್ಲಿ ಕೆಟಿಟಿಪಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇದರ ಪ್ರಕಾರ ಟೆಂಡರ್ ಕರೆಯದೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ.

 

ಆದರೆ, ತುರ್ತು ಹಾಗೂ ವಿಪತ್ತಿನ ಸಂದರ್ಭದಲ್ಲಿ ಮಾತ್ರ ಈ ಕಾಯ್ದೆಯ 4ರ ಅಡಿ ಕೆಲ ವಿನಾಯಿತಿ ನೀಡಲಾಗಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅಥವಾ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದಾಗ ಟೆಂಡರ್ ಕರೆಯದೇ ಕಾಮಗಾರಿ ನಡೆಸಲು ಈ ಕಾಯ್ದೆಯ ಸೆಕ್ಷನ್ 4(ಎ) ಅನ್ವಯ ಅವಕಾಶವಿದೆ. ಅಲ್ಲದೆ, ಸರ್ಕಾರವು ಕಾಲಕಾಲಕ್ಕೆ ಪ್ರಕಟಿಸುವ ಅಧಿಸೂಚನೆಗೆ ಅನುಸಾರವಾಗಿ ನಿರ್ದಿಷ್ಟ ಕಾಮಗಾರಿಗೆ ಅಥವಾ ಖರೀದಿಗೆ ಟೆಂಡರ್ ಕರೆಯುವ ಪ್ರಕ್ರಿಯೆಯಿಂದ ವಿನಾಯಿತಿ ಪಡೆಯಲು ಈ ಕಾಯ್ದೆಯ ಸೆಕ್ಷನ್ 4 (ಜಿ) ಅಡಿ ಅವಕಾಶ ಕಲ್ಪಿಸಲಾಗಿದೆ.

 

5 ಲಕ್ಷ ರೂ. ಮೇಲ್ಪಟ್ಟ ಯಾವುದೇ ಕಾಮಗಾರಿಗೆ ಕಡ್ಡಾಯವಾಗಿ ಟೆಂಡರ್ ನಡೆಸಿ ಕಡಿಮೆ ಬಿಡ್ ಮಾಡಿ ಅರ್ಹತೆ ಪಡೆದ ಕಂಪನಿಗೆ ಕಾರ್ಯಾದೇಶ ನೀಡಬೇಕು. ಆದರಿಲ್ಲಿ ಈ ಖಾತರಿಗಳ ಕುರಿತಾಗಿ ಸಮೀಕ್ಷೆ ನಡೆಸಲು ನಾಲ್ಕು ಇಲಾಖೆಗಳು ತಲಾ 25 ಲಕ್ಷ ರು. ನೀಡಲಿದೆ. ಈ ಮೊತ್ತವು ಒಟ್ಟಾರೆಯಾಗಿ 1 ಕೋಟಿ ರು. ಆಗಲಿದೆ.

 

5 ಲಕ್ಷ ರು. ಮೇಲ್ಪಟ್ಟ ಕೆಲಸವಾಗಿರುವುದರಿಂದ ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್‍‌ ಕರೆಯಲು ಆರ್ಥಿಕ ಇಲಾಖೆಯು ಸೂಚಿಸಬೇಕಿತ್ತು. ಮೇಲಾಗಿ ಗ್ಯಾರಂಟಿ ಯೋಜನೆಗಳ ಕುರಿತಾಗಿ ನಡೆಸುವ ಸಮೀಕ್ಷೆಯು ಅತ್ಯಂತ ಅಗತ್ಯ ಮತ್ತು ತುರ್ತಿನ ಕಾಮಗಾರಿ, ಅಥವಾ ಸಂಗ್ರಹಣೆ ಅಲ್ಲದಿದ್ದರೂ ಇದೇ ಕಂಪನಿಗೇ ಆರ್ಥಿಕ ಇಲಾಖೆಯು 4 (ಜಿ) ವಿನಾಯಿತಿ ನೀಡಿದ್ದು ಸಂಶಯಗಳಿಗೆ ಕಾರಣವಾಗಿದೆ.

 

ಅಧಿಸೂಚನೆಗೂ ಮುನ್ನವೇ ಸಮೀಕ್ಷೆ ವರದಿ ಬಿಡುಗಡೆ

 

4 ಗ್ಯಾರಂಟಿಗಳನ್ನು ಪ್ರತಿ ತಿಂಗಳು ಒಂದು ಬಾರಿಯಂತೆ ಒಟ್ಟು 4 ಸಮೀಕ್ಷೆ ನಡೆಸಲು ತಲಾ 25.00 ಲಕ್ಷ ರು. ನಂತೆ ಒಟ್ಟು 1.00 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು 2023ರ ಸೆ.13ರಂದು ಕರ್ನಾಟಕ ಪಾರದರ್ಶಕತೆ ಕಾಯ್ದೆಯಡಿಯಲ್ಲಿ 4(ಜಿ) ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಿತ್ತು.

 

ಆರ್ಥಿಕ ಇಲಾಖೆಯು ಅಧಿಸೂಚನೆ ಹೊರಡಿಸುವ ಮೊದಲೇ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯು ನಿರ್ದೇಶಕ ಡಾ ಎಚ್‌ ವಿ ವಾಸು ಅವರು ಸಮೀಕ್ಷೆ ವರದಿಯನ್ನು 2023ರ ಜುಲೈ 24ರಂದೇ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ್ದರು.

 

ಇದೇ ಸಮೀಕ್ಷೆ ವರದಿಯನ್ನು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ ಭಾಗವಾಗಿರುವ ಈದಿನ.ಕಾಮ್‌ ವೆಬ್‌ಸೈಟ್‌ನಲ್ಲಿ ವಿಸ್ತೃತವಾಗಿ ಪ್ರಕಟಿಸಲಾಗಿತ್ತು. ಈ ಸಮೀಕ್ಷೆಯು ಸರ್ಕಾರದ ಪ್ರಾಯೋಜಿತ ಸಮೀಕ್ಷೆಯಲ್ಲ, ಬದಲಿಗೆ ತನ್ನದೇ ಸ್ವಂತ ಸಮೀಕ್ಷೆ ಎಂಬ ಅರ್ಥ ಬರುವಂತೆ ಬಿಂಬಿಸಿರುವುದು ಸಹ ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಜುಲೈನಲ್ಲಿ ಸಮೀಕ್ಷೆ ವರದಿಯನ್ನು ಬಿಡುಗಡೆಗೊಳಿಸಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಯು ಆ ನಂತರ ಸಮೀಕ್ಷೆ ವರದಿಯನ್ನು ಇದುವರೆಗೂ ಬಿಡುಗಡೆಗೊಳಿಸಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ‘ದಿ ಫೈಲ್‌’ಗೆ ಖಚಿತ ಮಾಹಿತಿಯಿಲ್ಲ.

 

ವರದಿಯಲ್ಲಿ 1.00 ಕೋಟಿ ಅನುದಾನದ ಮಾಹಿತಿ ಇಲ್ಲ

 

ಈಗಾಗಲೇ ಸಮೀಕ್ಷೆ ವರದಿಯನ್ನು ಬಿಡುಗಡೆಗೊಳಿಸಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌, ಈ ಸಮೀಕ್ಷೆಗೆ 1 ಕೋಟಿ ರು.ಗಳನ್ನು ಸರ್ಕಾರದಿಂದ ಪಡೆದಿದೆ ಎಂಬುದನ್ನು ಎಲ್ಲಿಯೂ ದಾಖಲಿಸಿಲ್ಲ. ಸರ್ಕಾರವು ಬಿಡುಗಡೆ ಮಾಡಿರುವ ಅನುದಾನದ ಮೊತ್ತವನ್ನು ಸಮೀಕ್ಷಾ ವರದಿಯಲ್ಲಿ ಅಥವಾ ಮಾಧ್ಯಮಗಳಿಗೆ ಬಿಡುಗಡೆಯಾಗಿದ್ದ ಹೇಳಿಕೆಯಲ್ಲಿ ಉಲ್ಲೇಖಿಸದೇ ಮರೆಮಾಚಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಆರ್ಥಿಕ ಇಲಾಖೆಯ ಅಧಿಸೂಚನೆಯನ್ನಾಧರಿಸಿ ಸಮೀಕ್ಷೆ ನಡೆಸಲು ಸಾರಿಗೆ ಇಲಾಖೆಯು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ಗೆ 2023ರ ಸೆ.20ರಂದು ಆದೇಶ ನೀಡಿತ್ತು. 25 ಲಕ್ಷ ರು.ಗಳನ್ನು ಕೆಎಸ್‌ಆರ್‍‌ಟಿಸಿ ಸಂಸ್ಥೆಗೆ ಬಿಡುಗಡೆಗೊಳಿಸಿತ್ತು.

 

ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ಶೇ.80ರಷ್ಟು ಮೊತ್ತವನ್ನು ಬಿಡುಗಡೆಗೊಳಿಸಬೇಕು ಎಂದು ಸಾರಿಗೆ ಇಲಾಖೆಯು ಆದೇಶಿಸಿತ್ತು.

 

ಕರ್ನಾಟಕ ಸರ್ಕಾರದಿಂದ ಅನುಷ್ಠಾನಗೊಳಿಸಿರುವ ನಾಲ್ಕು ಖಾತರಿಗಳ ಕುರಿತು ಎಂ2ಎಂ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನಿಂದ ಸಮೀಕ್ಷೆ ನಡೆಸಲು ಸಾರಿಗೆ ಇಲಾಖೆಯ ಪಾಲಿನ ಮೊತ್ತವಾದ 25 ಲಕ್ಷ ರು.ಗಳ ಅನುದಾನವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮಕ್ಕೆ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.ಬಿಡುಗಡೆ ಮಾಡಿರುವ ಶೇ.80ರಷ್ಟು ಮೊತ್ತವನ್ನು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಎಲ್‌ಎಲ್‌ಪಿಗೆ ಕೂಡಲೇ ಪಾವತಿಸಿ ಸರ್ಕಾರಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಉಳಿದ ಶೇ.20ರಷ್ಟು ಮೊತ್ತವನ್ನು ಸೆ.2023ರ ಒಳಗಾಗಿ ಪಾವತಿಸಿ ಸರ್ಕಾರಕ್ಕೆ ಸೂಕ್ತ ದಾಖಲೆ ಒದಗಿಸಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ ಎಸ್‌ ಅವರು 2023ರ ಸೆ.20ರಂದು ಆದೇಶದಲ್ಲಿ ಸೂಚಿಸಿದ್ದರು.

 

‘ಅನುದಾನ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ಆದರೆ ವರದಿಯನ್ನು ಸಾರಿಗೆ ಇಲಾಖೆಗೆ ಸಲ್ಲಿಸಬೇಕೇ ಅಥವಾ ಸರ್ಕಾರಕ್ಕೆ ಸಲ್ಲಿಸಬೇಕೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ  ಸಮೀಕ್ಷೆ ವರದಿ ಬಗ್ಗೆ ನಮಗೇನು ಮಾಹಿತಿಯಿಲ್ಲ,’ ಎಂದು ಗ್ಯಾರಂಟಿ ಅನುಷ್ಠಾನ ಹೊಣೆ ಹೊತ್ತಿರುವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

 

ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆಯು ಡಿಸೆಂಬರ್‍‌ ತಿಂಗಳ ಸಮೀಕ್ಷೆಗೆ ಹಣ ಬಿಡುಗಡೆ ಮಾಡುವ ಸಂಬಂಧ 2023ರ ಸೆ.26ರಂದು ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿತ್ತು.

 

ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಇಂಧನ ಇಲಾಖೆಯು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ಹಣ ಬಿಡುಗಡೆ ಮಾಡಲು 2023ರ ಅಕ್ಟೋಬರ್‍‌ 17ರಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿತ್ತು.

 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಹಣ ಬಿಡುಗಡೆ ಮಾಡುವ ಸಂಬಂಧ ಇನ್ನೂ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಇದಕ್ಕೆ ಸಂಬಂಧಿಸಿದ ಕಡತ ಇನ್ನೂ ಚಾಲ್ತಿಯಲ್ಲಿದೆ  ಎಂದು ತಿಳಿದು ಬಂದಿದೆ.

 

‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಷ್ಟೆಲ್ಲಾ ತಾಂತ್ರಿಕ ತೊಂದರೆ, ಅಡಚಣೆಗಳು ಈಗಲೂ ಇವೆ. ಹೀಗಾಗಿ ಈ ಗ್ಯಾರಂಟಿಗಳ ಅನುಷ್ಠಾನದ ಸಾಮಾಜಿಕ, ಆರ್ಥಿಕ ಪರಿಣಾಮಗಳ ಕುರಿತು ಒಂದೆರಡು ತಿಂಗಳಲ್ಲಿ ಅದರ ಫಲಿತಾಂಶವನ್ನು ಹಿಡಿದಿಡುವುದು ತಕ್ಷಣಕ್ಕೆ ಅಸಾಧ್ಯ. ಈ ಯೋಜನೆಗಳು ಅನುಷ್ಠಾನಗೊಂಡು ಕನಿಷ್ಠ 6 ತಿಂಗಳು ಅಥವಾ ಒಂದು ವರ್ಷ ಪೂರ್ಣಗೊಂಡ ನಂತರವಷ್ಟೇ ಇದರ ಸಾಫಲ್ಯತೆ ಅಥವಾ ವೈಫಲ್ಯತೆ ಬಗ್ಗೆ ಒಂದು ತೀರ್ಮಾನಕ್ಕೆ ಬರಬಹುದು. ರಾಜಕೀಯ ಕಾರಣಕ್ಕೆ ತರಾತುರಿಯಲ್ಲಿ ಈಗಲೇ ಸಮೀಕ್ಷೆ ನಡೆಸಿದರೆ ಫಲಿತಾಂಶ ಸಿಗಲಾರದು,’ ಎನ್ನುತ್ತಾರೆ ಮೌಲ್ಯಮಾಪನ ಪ್ರಾಧಿಕಾರದ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts