Thursday | May 21, 2026 |

ಧರ್ಮಸ್ಥಳ ಪ್ರಕರಣಗಳ ತನಿಖೆ; ಎಸ್‌ಐಟಿ ವರದಿ ಪ್ರತಿ ಒದಗಿಸದ ಸರ್ಕಾರ, ಗೃಹ ಇಲಾಖೆ ಶಾಖೆಯಲ್ಲಿ ಸಭೆ ನಡವಳಿಯೂ ಲಭ್ಯವಿಲ್ಲ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ, ನಾಪತ್ತೆ, ಅಸಹಜ ಸಾವುಗಳ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ)ವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಗೃಹ ಇಲಾಖೆಯು ಆರ್‍‌ಟಿಐ ಅಡಿಯಲ್ಲಿ ಕೋರಿದ್ದ ಅರ್ಜಿಗೆ ಹಿಂಬರಹ ನೀಡಿದೆ.

ಧರ್ಮಸ್ಥಳ ಪೊಲೀಸ್ ಠಾಣೆ ಮೊ. ಸಂ. 39/2025 ಕಲಂ 211(ಎ) ಬಿ.ಎನ್.ಎಸ್. ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗಾಗಿ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ದಿಂದ ಇಲ್ಲಿಯವರೆಗಿನ ತನಿಖಾ ವರದಿ ಮತ್ತು ಪ್ರಗತಿ ವಿವರಗಳನ್ನು ಆಯೋಗಕ್ಕೆ ಒದಗಿಸುವಂತೆ ಸೂಚಿಸಲು ಕೋರಿದ್ದರು.

ತನಿಖಾ ವರದಿ ಮತ್ತು ಅದರ ಪ್ರಗತಿ ವಿವರಗಳನ್ನು ಇದುವರೆಗೂ ರಾಜ್ಯ ಮಹಿಳಾ ಆಯೋಗಕ್ಕೆ ಮುಖ್ಯ ಕಾರ್ಯದರ್ಶಿಗಳ ಕಚೇರಿಯು ಒದಗಿಸಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರನ್ನು ಪ್ರತಿಕ್ರಿಯೆಗಾಗಿ ದಿ ಫೈಲ್‌ ಸಂಪರ್ಕಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಈ ಬೆಳವಣಿಗೆ ಬೆನ್ನಲ್ಲೇ ದಿ ಫೈಲ್‌ ಕೋರಿದ್ದ ಆರ್‍‌ಟಿಐ ಅರ್ಜಿಗೆ ಇಲಾಖೆಯು ನೀಡಿರುವ ಹಿಂಬರಹವು ಮುನ್ನೆಲೆಗೆ ಬಂದಿದೆ.
ಧರ್ಮಸ್ಥಳ ಪ್ರಕರಣಗಳಿಗೆ (ಅಪರಾಧ ಸಂಖ್ಯೆ 39/2025) ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ವರದಿಯನ್ನು ‘ದಿ ಫೈಲ್‌’, ಆರ್‍‌ಟಿಐ ಅಡಿಯಲ್ಲಿ ಕೋರಿತ್ತು. ಈ ಅರ್ಜಿಯನ್ನು ಸ್ವೀಕರಿಸಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಯು ಗೃಹ ಇಲಾಖೆಗೆ ವರ್ಗಾಯಿಸಿತ್ತು.

ಈ ಅರ್ಜಿಗೆ ಗೃಹ ಇಲಾಖೆಯು 2026ರ ಏಪ್ರಿಲ್‌ 29ರಂದು ಹಿಂಬರಹ ನೀಡಿದೆ.

ಧರ್ಮಸ್ಥಳದ ಪ್ರಕರಣಗಳು (ಅಪರಾಧ ಸಂಖ್ಯೆ 39/2025) ತನಿಖಾ ಹಂತದಲ್ಲಿರುವುದರಿಂದ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 8(1)(ಹೆಚ್‌) ಅನ್ವಯ ಪ್ರಸ್ತುತ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದೆ.

 

 

ಅದೇ ರೀತಿ ವಿಶೇಷ ತನಿಖಾ ತಂಡವು ನೀಡಿದ್ದ ವರದಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆ ನಡವಳಿಗಳ ಪ್ರತಿಯನ್ನು ದಿ ಫೈಲ್‌ ಕೋರಿತ್ತು. ಆದರೆ ಮುಖ್ಯ ಕಾರ್ಯದರ್ಶಿಗಳ ಕಚೇರಿಯು ಅರ್ಜಿಯಲ್ಲಿನ ಈ ಕೋರಿಕೆಯನ್ನೂ ಗೃಹ ಇಲಾಖೆಗೆ ವರ್ಗಾಯಿಸಿತ್ತು. ಈ ಅರ್ಜಿಗೆ ಮಾಹಿತಿ ನೀಡುವ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದರು ಎಂದು ಗೊತ್ತಾಗಿದೆ.

ಇದಕ್ಕೆ ಗೃಹ ಇಲಾಖೆಯು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಗಳ ನಡವಳಿಗಳು ಈ ಶಾಖೆಯಲ್ಲಿ ಲಭ್ಯವಿಲ್ಲ ಎಂದು ಹಿಂಬರಹದಲ್ಲಿ ತಿಳಿಸಿದೆ. ಹೀಗಾಗಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆಯೇ, ಸಭೆ ನಡೆದಿದ್ದರೇ ಸಭೆಗಳ ನಡವಳಿಗಳು ಯಾವ ಶಾಖೆಯಲ್ಲಿ ಲಭ್ಯವಿವೆ ಅಥವಾ ಸಭೆಯೇ ನಡೆದಿಲ್ಲವೇ ಎಂಬುದರ ಕುರಿತು ಯಾವ ಮಾಹಿತಿಯನ್ನು ಸರ್ಕಾರವು ನೀಡಿಲ್ಲ.

ಸುಳ್ಳ ಮೂಲದ ಅಶ್ವಿನ್‌ ಕುಮಾರ್‍‌ ಎಂಬುವರು ಕೋರಿದ್ದ ಆರ್‍‌ಟಿಐ ಅರ್ಜಿಗೆ ಧರ್ಮಸ್ಥಳ ಪೊಲೀಸ್‌ ಠಾಣೆಯ ಉಪ ನಿರೀಕ್ಷಕರು ಮಾಹಿತಿ ಒದಗಿಸಿದ್ದರು.

 

 

ಧರ್ಮಸ್ಥಳ ಪೊಲೀಸ್‌ ಠಾಣೆಯು 2016ರಲ್ಲಿ ಆರಂಭವಾಗಿತ್ತು. ಈ ಠಾಣೆ ವ್ಯಾಪ್ತಿಯಲ್ಲಿ 2016ರಿಂದ 2026ರ ಫೆಬ್ರುವರಿವರೆಗೆ ಒಟ್ಟಾರೆ 681 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅಪರಿಚಿತ ಮೃತ ದೇಹ ಯುಡಿಆರ್‍‌ ಪ್ರಕರಣಗಳು 123ರಷ್ಟಿದ್ದವು. ಅಲ್ಲದೇ ಈ ಯುಡಿಆರ್‍‌ ಪ್ರಕರಣಗಳ ಪೈಕಿ 84 ಪ್ರಕರಣಗಳನ್ನು ಮಾತ್ರ ಮಂಗಳೂರಿನ ಕೆ ಎಸ್‌ ಹೆಗ್ಡೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಿತ್ತು ಎಂದು ಮಾಹಿತಿ ನೀಡಿದೆ.

 

 

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗುವ ಅಸ್ವಾಭಾವಿಕ ಮರಣ ಪ್ರಕರಣಗಳ ವರ್ಷವಾರು ರಿಜಿಸ್ಟರ್‍‌ನ್ನು ತೆರೆದಿದೆ ಎಂದು ಹೇಳಿರುವ ಡಿವೈಎಸ್ಪಿ ಅವರು ಅನಾಥ ಶವಗಳನ್ನು ಫ್ರೀಜರ್‍‌ನಲ್ಲಿ ಇರಿಸಿದ ಬಗ್ಗೆ ಠಾಣೆಯಲ್ಲಿ ಯಾವುದೇ ಪಾವತಿ ಬಿಲ್‌ಗಳು ಲಭ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಅದೇ ರೀತಿ ಅನಾಥ ಮೃತ ದೇಹಗಳ ಮರಣೋತ್ತರ ಪರೀಕ್ಷಾ ವೇಳೆ ತೆಗೆಯುವ ಫೋಟೋ ಮತ್ತು ವಿಡಿಯೋಗಳು ಠಾಣೆ ಕಡತದಲ್ಲಿ ಲಭ್ಯವಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

ಧರ್ಮಸ್ಥಳದಲ್ಲಿ ಮಹಿಳೆಯರ ಅಸಹಜ ಸಾವುಗಳು ಹಾಗೂ ನಾಪತ್ತೆ ಪ್ರಕರಣಗಳ ಸಮಗ್ರ ಮತ್ತು ನಿಷ್ಪಕ್ಷ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರಚಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸರಕಾರವನ್ನು ಕೋರಿತ್ತು.

ಧರ್ಮಸ್ಥಳ ಪ್ರಕರಣಗಳ ಕುರಿತು ಕೈಗೊಂಡಿರುವ ಸಮಗ್ರ ತನಿಖೆಯ ವರದಿ/ಪ್ರಗತಿ ವಿವರಗಳನ್ನು ಕೂಡಲೇ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಲು ಎಸ್ಐಟಿ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಜ.12ರಂದು ಪತ್ರ ಬರೆದಿದ್ದರು.

ಧರ್ಮಸ್ಥಳ ಪೊಲೀಸ್ ಠಾಣೆ ಮೊ. ಸಂ. 39/2025 ಕಲಂ 211(ಎ) ಬಿ.ಎನ್.ಎಸ್. ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗಾಗಿ ರಚಿಸಿರುವ ವಿಶೇಷ ತನಿಖಾ ತಂಡ(SIT)ದಿಂದ ಇಲ್ಲಿಯವರೆಗಿನ ತನಿಖಾ ವರದಿ ಮತ್ತು ಪ್ರಗತಿ ವಿವರಗಳನ್ನು ಆಯೋಗಕ್ಕೆ ಒದಗಿಸುವಂತೆ ಸೂಚಿಸಲು ಕೋರಿದ್ದರು.

ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲೆ ನಡೆದಿರುವ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳ ಸಮಗ್ರ ತನಿಖೆಯಾಗಬೇಕು ಎಂಬುದೇ ಆಯೋಗದ ಮುಖ್ಯ ಆಶಯವಾಗಿತ್ತು. ಆಯೋಗದ ಮನವಿಗೆ ಸ್ಪಂದಿಸಿ ಸರಕಾರವು ವಿಶೇಷ ತನಿಖಾ ತಂಡ(SIT)ವನ್ನು ರಚಿಸಿ ಆದೇಶಿಸಿತ್ತು.

ಈ ತಂಡವು ಉಲ್ಲೇಖಿತ ಕ್ರಿಮಿನಲ್ ಮೊಕದ್ದಮೆಯೊಂದಿಗೆ, “ಇದರ ಸಂಬಂಧ ಕರ್ನಾಟಕ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗುವ ಇತರ ಎಲ್ಲ ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಲು ಸೂಚಿಸಿದೆ. ಆದಾಗ್ಯೂ, ಇಲ್ಲಿಯವರೆಗೆ ಎಸ್ಐಟಿ ತನಿಖೆಯು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ವ್ಯಕ್ತಿಯ ಹೇಳಿಕೆಯ ಮಿತಿಯೊಳಗೆ ಉತ್ಪನನಕ್ಕೆ ಮತ್ತು ಆತನ ಹೇಳಿಕೆಗೆ ಮಾತ್ರವೇ ಸೀಮಿತಗೊಂಡಿರುವಂತೆ ಕಂಡುಬರುತ್ತಿದೆ.

ಆಯೋಗದ ಕೋರಿಕೆಗೆ ಅನುಗುಣವಾಗಿ, ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳು ಮತ್ತು ಅಸಹಜ ಸಾವುಗಳ ಕುರಿತು ಎಸ್ಐಟಿ ಸಮಗ್ರ ತನಿಖೆ ಕೈಗೊಂಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಆಯೋಗದಲ್ಲಿ ಸ್ವೀಕೃತವಾಗಿಲ್ಲ ಎಂದು ಉಲ್ಲೇಖಿಸಿದ್ದರು.

ಈ ಬಗ್ಗೆ ಎಸ್ಐಟಿ ಮುಖ್ಯಸ್ಥರಿಗೆ ಆಯೋಗವು ಪತ್ರ ಬರೆದಿತ್ತು. ಆದರೆ ಯಾವುದೇ ಯಾವುದೇ ಉತ್ತರ ನೀಡಿರಲಿಲ್ಲ. ಆಯೋಗಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿದೆ. ಮಹಿಳಾ ಆಯೋಗದ ಕಾಯ್ದೆಯ ಪ್ರಕಾರ ವರದಿ ತರಿಸಿಕೊಳ್ಳುವ ಅಧಿಕಾರ ಹೊಂದಿರುತ್ತದೆ. ಆದ್ದರಿಂದ, ತಾವು ಈ ವಿಷಯದಲ್ಲಿ ತಕ್ಷಣ ಮಧ್ಯ ಪ್ರವೇಶಿಸಿ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ, ನಾಪತ್ತೆ, ಅಸಹಜ ಸಾವುಗಳ ಪ್ರಕರಣಗಳ ಕುರಿತು ಎಸ್ಐಟಿ ಇದುವರೆಗೆ ಕೈಗೊಂಡಿರುವ ಸಮಗ್ರ ತನಿಖೆಯ ವರದಿ/ಪ್ರಗತಿ ವಿವರಗಳನ್ನು ಕೂಡಲೇ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆ ಎಸ್ಐಟಿ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿದ್ದರು.

‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆಯು ನ್ಯಾಯಾಲಯದ ಮುಂದೆ ವ್ಯಕ್ತಿ ನೀಡಿದ ಹೇಳಿಕೆಯ ಮಿತಿಯೊಳಗೆ ಉತ್ಪನನ ಮತ್ತು ಆತನ ಹೇಳಿಕೆಗೆ ಮಾತ್ರವೇ ಸೀಮಿತಗೊಂಡಿರುವಂತೆ ಕಂಡುಬರುತ್ತಿದೆ. ಆಯೋಗದ ಕೋರಿಕೆಗೆ ಅನುಗುಣವಾಗಿ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳು ಮತ್ತು ಅಸಹಜ ಸಾವುಗಳ ಕುರಿತು ಎಸ್ಐಟಿ ಸಮಗ್ರ ತನಿಖೆ ಕೈಗೊಂಡಿರುವ ಯಾವುದೇ ಅಧಿಕೃತ ಮಾಹಿತಿ ಆಯೋಗಕ್ಕೆ ಲಭ್ಯವಾಗಿಲ್ಲ,’ ಎಂದು ರಾಜ್ಯ ಮಹಿಳಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

Hot this week

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...
Please Scan to make Your Contribution

Topics

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

Related Articles

Popular Categories

error: Content is protected !!