ಬೆಳೆಸಾಲ, ಅವಧಿ ಕೃಷಿ ಸಾಲದ ಮೇಲಿನ ಬಡ್ಡಿ ಸಹಾಯ ಧನ; ಸಹಕಾರ ಸಂಘ, ಬ್ಯಾಂಕ್‌ಗಳಲ್ಲಿ ಬಂಡವಾಳದ ಸಮಸ್ಯೆ

ಬೆಂಗಳೂರು; ಬೆಳೆ ಸಾಲಕ್ಕಾಗಿ ಮತ್ತು ಅವಧಿ ಕೃಷಿ ಸಾಲದ ಮೇಲಿನ ಬಡ್ಡಿ ಸಹಾಯ ಧನ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿರುವ ಕಾಂಗ್ರೆಸ್‌ ಸರ್ಕಾರಕ್ಕೀಗ ಹೊಸತೊಂದು ಸಮಸ್ಯೆ ಎದುರಾಗಿದೆ. ಈ ಯೋಜನೆಯನ್ನು ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳ ಮೂಲಕ ಅನುಷ್ಠಾನಗೊಳಿಸಬೇಕಿದೆಯಾದರೂ ಈ ಎರಡೂ ಸಂಸ್ಥೆಗಳಲ್ಲೀಗ ಬಂಡವಾಳದ ಸಮಸ್ಯೆ ಎದುರಾಗಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಲದೇ  ಪ್ರಸಕ್ತ ಆರ್ಥಿಕ ವರ್ಷ ಪೂರ್ಣಗೊಳ್ಳಲು ಮೂರ್ನಾಲ್ಕು ತಿಂಗಳಷ್ಟೇ ಇದ್ದರೂ ಕೃಷಿ ಸಾಲ ವಿತರಣೆಯಲ್ಲಿ ಇನ್ನೂ 11,327.3 ಕೋಟಿ ರು. ಸಾಲ ವಿತರಿಸಲು ಬಾಕಿ ಉಳಿಸಿಕೊಂಡಿದೆ.

 

ಬೆಳೆ ಸಾಲಕ್ಕಾಗಿ ಮತ್ತು ಅವಧಿ ಕೃಷಿ ಸಾಲದ ಮೇಲಿನ ಬಡ್ಡಿ ಸಹಾಯ ಧನ ಯೋಜನೆಯನ್ನು 2023-24ನೇ ಸಾಲಿನಲ್ಲಿ ಘೋಷಿಸಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರದ ಕೊನೆ ಅವಧಿ ಮತ್ತು 2023ರ ಜುಲೈನಲ್ಲಿ ಪರಿಷ್ಕೃತ ಆಯವ್ಯಯ ಮಂಡನೆಯಾಗಿ 7 ತಿಂಗಳು ಪೂರ್ಣಗೊಂಡ ನಂತರ ಈ ಯೋಜನೆಗೀಗ ಬಂಡವಾಳ ಸಮಸ್ಯೆ ಎದುರಾಗಿದೆ. ಈ ಕುರಿತು ಸಹಕಾರ ಸಂಘಗಳ ನಿಬಂಧಕರು ಸರ್ಕಾರಕ್ಕೆ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

‘ಬೆಳೆಸಾಲ ಮತ್ತು ಅವಧಿ ಕೃಷಿ ಸಾಲದ ಮೇಲಿನ ಬಡ್ಡಿ ಸಹಾಯ ಧನ ಯೋಜನೆ ಜಾರಿಗೊಳಿಸಲು ಸಹಕಾರ ಸಂಘ ಮತ್ತು ಬ್ಯಾಂಕ್‌ಗಳಲ್ಲಿ ಬಂಡವಾಳದ ಸಮಸ್ಯೆ ಇದೆ. ಹೀಗಾಗಿ ನಬಾರ್ಡ್‌ ಪುನರ್ಧನವನ್ನು ಹೆಚ್ಚಿಸಬೇಕು ಎಂದು ಶಿಫಾರಸ್ಸು ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಬೆಳೆ ಸಾಲಕ್ಕಾಗಿ ಮತ್ತು ಅವಧಿ ಕೃಷಿ ಸಾಲದ ಮೇಲಿನ ಬಡ್ಡಿ ಸಹಾಯ ಧನಕ್ಕಾಗಿ ಪ್ರತ್ಯೇಕ ಅನುದಾನ ಹಾಗೂ ಗುರಿ ನಿಗದಿಪಡಿಸಲಾಗಿದೆ. ಅಂದಾಜು 35.00 ಲಕ್ಷ ರೈತರಿಗೆ 1, 199.52 ಕೋಟಿ ರು. ನಿಗದಿಪಡಿಸಲಾಗಿದೆ. ಈ ಪೈಕಿ 5.8 ಕೋಟಿ ರು. ಮಾತ್ರ ರಾಜ್ಯ ಸರ್ಕಾರವು ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.

 

ಹಾಗೆಯೆ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷ ರು.ಗಳಿಗೆ ಹಾಗೂ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲದ ಮಿತಿಯನ್ನು 10 ಲಕ್ಷ ರು.ಗಳಿಗೆ ಹೆಚ್ಚಿಸಿದೆ. ಆದರೆ ಇದು 2023-24ನೇ ಸಾಲಿನಲ್ಲಿ ವಸೂಲಿಗೆ ಬರುವುದರಿಂದ ಈ ವರ್ಷದಲ್ಲಿ ಅನುದಾನದ ಅವಶ್ಯಕತೆ ಇದೆ ಎಂದು ಸಹಕಾರ ಸಂಘಗಳ ನಿಬಂಧಕರು ಸರ್ಕಾರಕ್ಕೆ ಪತ್ರದಲ್ಲಿ ವಿವರಿಸಿದ್ದಾರೆ ಎಂದು ಗೊತ್ತಾಗಿದೆ.

 

ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಠಾನಕ್ಕೆ ಅವಶ್ಯವಿರುವ ಮೊತ್ತವನ್ನು ಆವರ್ತ ನಿಧಿ ಖಾತೆಯಿಂದ ಭರಿಸಲಾಗುವುದು ಎಂದು ಸರ್ಕಾರವು ಹೇಳಿತ್ತು. ಆದರೆ ಹಣ ಬಿಡುಡೆ ಮಾಡಿಲ್ಲ. ಇನ್ನು, ಗ್ರಾಮೀಣಾ ಮಾರುಕಟ್ಟೆಗಳ ಅಭಿವೃದ್ಧಿ (ನಬಾರ್ಡ್‌ ಕಾಮಗಾರಿಗಳು) ಆರ್‍‌ಐಡಿಎಫ್‌ 28 ಮತ್ತು 29 ರ ಅಡಿ 389.13 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಆದರೆ ಅನುದಾನವು ಪ್ರಸಕ್ತ ಸಾಲಿನಲ್ಲಿ ನಿಗದಿಯಾಗಿಲ್ಲ ಎಂದು ತಿಳಿದು ಬಂದಿದೆ.

 

2023-24ನೇ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರು. ಗಳಷ್ಟು ಸಾಲ ವಿತರಣೆ ಗುರಿ ಹೊಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಧಿಕಾರ ಹಿಡಿದು 7 ತಿಂಗಳು ಪೂರ್ಣಗೊಳಿಸಿದ್ದರೂ ಇನ್ನೂ 11,327.3 ಕೋಟಿ ರು. ಸಾಲ ವಿತರಿಸಲು ಬಾಕಿ ಉಳಿಸಿಕೊಂಡಿದೆ.

 

2023-24ನೇ ಸಾಲಿನಲ್ಲಿ 34.40 ಲಕ್ಷ ರೈತರಿಗೆ 23,300 ಕೋಟಿ ರು.ಗಳ ಅಲ್ಪಾವಧಿ ಕೃಷಿ ಸಾಲ ಮತ್ತು 0.64 ಲಕ್ಷ ರೈತರಿಗೆ 1,700 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ಒಟ್ಟು 35 ಲಕ್ಷ ರೈತರಿಗೆ 25,000 ಕೋಟಿ ರು. ಕೃಷಿ ಸಾಲ ವಿತರಿಸಲು ಗುರಿಗೆ ಅನುಮೋದನೆ ನೀಡಲು ಕೋರಿರುವ ಬೆನ್ನಲ್ಲೇ ಇನ್ನೂ 11,327.3 ಕೋಟಿ ರು. ಸಾಲ ವಿತರಿಸಲು ಬಾಕಿ ಇರುವ ವಿಚಾರವು ಮುನ್ನೆಲೆಗೆ ಬಂದಿದೆ.

 

ಈ ಕುರಿತು ಸಹಕಾರ ಸಂಘಗಳ  ನಿಬಂಧಕರು ಸಹಕಾರ ಇಲಾಖೆಗೆ ಅಂಕಿ ಅಂಶಗಳ ಮಾಹಿತಿಯನ್ನು ಒದಗಿಸಿದೆ. ಇದರ ಪ್ರಕಾರ ನವೆಂಬರ್‍‌ 2023ರ ಅಂತ್ಯಕ್ಕೆ 17,24,370 ರೈತಿರಗೆ 13,672.74 ಕೋಟಿ ರು.ಗಳ ಸಾಲ ವಿತರಣೆ ಮಾಡಲಾಗಿದೆ. ಹಾಗೂ 15,775 ರೈತರಿಗೆ 461. ಕೋಟಿ ರು. ಮೊತ್ತದ ಮಧ್ಯಮಾವಧಿ ಮತ್ತು ದೀರ್ಘವಾಧಿ ಸಾಲ ವಿತರಿಸಿದೆ.

 

ಸಹಕಾರ ಸಂಘಗಳಿಗೆ ಬಡ್ಡಿ ಸಹಾಯ ಧನ ನೀಡುವ ಸಂಬಂಧ 1,199.52 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದುವರೆಗೂ 16.32 ಲಕ್ಷ  ರೈತರಿಗೆ ಸಂಬಂಧಿಸಿದ 583.02 ಕೋಟಿ ರು.ಗಳನ್ನು ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

 

ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ ಸಂಬಂಧ 99 ಕೋಟಿ ರು. ಬಡ್ಡಿ ಸಹಾಯ ಧನವನ್ನು ಒದಿಸಿದೆ. ಇದರಲ್ಲಿ 49.50 ಕೋಟಿ ರು.ಗಳನ್ನ ಸರ್ಕಾರವು ಡಿಸಿಸಿ ಬ್ಯಾಂಕ್‌ಗಳಿಗೆ ಈಗಾಗಲೇ ಬಿಡುಗಡೆ ಮಾಡಿದೆ. 12,732 ಸ್ವ ಸಹಾಯ ಗುಂಪುಗಳಿಗೆ 516.06 ಕೋಟಿ ರು. ಸಾಲವನ್ನು ವಿತರಿಸಲಾಗಿದೆ ಎಂದು ತಿಳಿದು ಬಂದಿದೆ.

 

ತಮ್ಮ ಸ್ವಂತ ಬಂಡವಾಳದಲ್ಲಿ ವಿತರಿಸಿದ ಕೃಷಿ ಸಾಲಗಳಿಗೆ ಸರ್ಕಾರ ನಿಗದಿಪಡಿಸುವ ಬಡ್ಡಿ ಸಹಾಯ ಧನ ಕಡಿಮೆಯಾಗುತ್ತಿದೆ. ಇದರಿಂದ ಕೃಷಿ ಸಾಲದಿಂದ ಆದಾಯ ಕಡಿಮೆ ಆಗುತ್ತಿದೆ. ಕೃಷಿಯೇತರ ಸಾಲದಿಂದ ಮಾತ್ರ ಬ್ಯಾಂಕ್‌ಗಳನ್ನು ನಡೆಸಲು ಸಾಧ್ಯವಾಗುತ್ತಿದೆ ಎಂದು ಬಹುತೇಕ ಡಿಸಿಸಿ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟವನ್ನು ಸರ್ಕಾರದ ಮುಂದೆ ತೆರೆದಿಟ್ಟಿದ್ದವು.

 

ಅಲ್ಲದೇ 2022-23ನೇ ಸಾಲಿಗೆ ಡಿಸಿಸಿ ಬ್ಯಾಂಕ್, ಪ್ಯಾಕ್ಸ್‌ಗಳ ಮೂಲಕ ವಿತರಿಸಿದ ಮಧ್ಯಮಾವಧಿ,ದೀರ್ಘಾವಧಿ ಕೃಷಿ ಸಾಲಗಳಿಗೆ ಶೆ.7.90ರ ಬಡ್ಡಿ ಸಹಾಯ ಧನ ನಿಗದಿಪಡಿಸಿದಂತೆ 2023-24ನೇ ಸಾಲಿಗೆ ವಿತರಿಸಿದ ಸಾಲಗಳಿಗೂ ಸಹ  ನಿಗದಿಪಡಿಸಬೇಕು ಎಂಬ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಿತ್ತು.

 

2023-24ನೇ ಸಾಲಿಗೆ ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳು ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ 5 ಲಕ್ಷ ರು.ಗಳವರೆಗೆ ಅಲ್ಪಾವಧಿ ಕೃಷಿ ಸಾಲ ಮತ್ತು 2 ಲಕ್ಷ ರು.ಗಳವರೆಗೆ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ದುಡಿಯುವ ಬಂಡವಾಳಸಾಲ ವಿತರಿಸುವುದು ಸೇರಿದಂತೆ 15 ಲಕ್ಷ ರು.ವರೆಗೆ ಶೇ.3ರ ಬಡ್ಡಿ ದರ ಅನ್ವಯವಾಗುವಂತೆ ಸಾಲ ವಿತರಿಸಲು ಸಹಕಾರ ಸಂಘಗಳ ನಿಬಂಧಕರು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಡಿಸಿಸಿ ಬ್ಯಾಂಕ್‌ಗಳ ಆರ್ಥಿಕ ಸಂಕಷ್ಟಗಳನ್ನು ವಿವರಿಸಿತ್ತು.

 

ಬಡ್ಡಿ ಸಹಾಯಧನ ಕಡಿಮೆ; ಕೃಷಿ ಸಾಲ ವಿತರಣೆಗೆ ಸಿಗದ ಪೂರಕ ಸ್ಪಂದನೆ, ಸರ್ಕಾರಕ್ಕೆ ಹೊಸ ತಲೆನೋವು

 

 

‘ಬಡ್ಡಿ ಸಹಾಯ ಧನ ಕಡಿಮೆಯಾಗುತ್ತಿರುವುದರಿಂದ ಹೆಚ್ಚು ಕೃಷಿ ಸಾಲವನ್ನು ವಿತರಿಸಲು ಪೂರಕವಾಗಿ ಸ್ಪಂದಿಸುತ್ತಿಲ್ಲ. ಇದಕ್ಕೆ ಪೂರಕವಾಗಿ ಆರ್ಥಿಕ ಇಲಾಖೆಯು 2022-23ನೇ ಸಾಲಿಗೆ ಬಡ್ಡಿ ಸಹಾಯ ಧನ ನಿಗದಿಪಡಿಸುವಾಗ ಡಿಸಿಸಿ ಬ್ಯಾಂಕ್‌ಗಳ ವ್ಯವಹಾರ ವೆಚ್ಚವನ್ನು ಶೇ.1.75ರಿಂದ ಶೇ.1.50ಕ್ಕೆ ಕಡಿಮೆ ಮಾಡಿ ಬ್ಯಾಂಕ್‌ಗಳು ವೆಚ್ಚವನ್ನು ಕಡಿಮೆ ಮಾಡಲು ಸೂಚಿಸಿವೆ,’ ಎಂದು ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್‌ ರಾಜೇಂದ್ರ ಅವರು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮುಂದಿರಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿತ್ತು.

 

ಡಿಸಿಸಿ ಬ್ಯಾಂಕ್‌ಗಳ ವಾಸ್ತವ ವೆಚ್ಚದ ಅಧಾರದ ಮೇಲೆ ಡಿಸಿಸಿ ಬ್ಯಾಂಕ್‌ಗಳ ಆಡಳಿತ ವೆಚ್ಚ ಸುಮಾರ ಶೇ. 2ಕ್ಕಿಂತ ಹೆಚ್ಚಿದೆ. ವ್ಯವಹಾರ ವೆಚ್ಚ ಅಂದರೆ ವೇತನ ಮತ್ತು ದೈನಂದಿನ ವೆಚ್ಚ ಶೇ.1.76ರಷ್ಟಿದೆ. ದೇಶದ ಇತರೆ ಬ್ಯಾಂಕ್‌ಗಳಗಳನ್ನು ಪರಿಶೀಲಿಸಿದಾಗ 2023ರ ಅಂತ್ಯಕ್ಕೆ ಎಸ್‌ಬಿಐ ಶೇ.1.77, ಇಂಡಿಯನ್‌ ಬ್ಯಾಂಕ್‌ ಶೆ.1.70, ಸಿಂಡಿಕೇಟ್‌ ಬ್ಯಾಂಕ್‌ ಶೆ.1.94ರಷ್ಟಿದೆ. ಡಿಸಿಸಿ ಬ್ಯಾಂಕ್‌ಗಳದ್ದು ಇದಕ್ಕಿಂತಲೂ ಕಡಿಮೆ ಇದೆ ಎಂದು ಉಲ್ಲೇಖಿಸಿತ್ತು.

 

 

ಸಹಕಾರಿ ಕೃಷಿ ಸಾಲ ವಿತರಣೆಯಲ್ಲಿ ಮೂರು ಹಂತದ ವ್ಯವಸ್ಥೆ ಇದೆ. ಪ್ಯಾಕ್ಸ್‌ಗಳ ಮೇಲೆ ಶೇ.2ರಷ್ಟು ಆಡಳಿತ ವೆಚ್ಚ ರಾಜ್ಯಕ್ಕೆ ಹೆಚ್ಚಿನ ಹೊರೆಯಾದರೂ ಸಹ ಸಹಕಾರ ಕ್ಷೇತ್ರದಲ್ಲಿ ತಲಾ ಸಾಲ ವಿತರಣೆ ರು. 0.74 ಲಕ್ಷ ರಗಳಿದ್ದು, ವಾಣಿಜ್ಯ ಬ್ಯಾಂಕ್‌ಗಳ ತಲಾ ಕೃಷಿ ಸಾಲ ವಿತರಣೆ 2.00 ಲಕ್ಷ ರುಗಳಿಗಿಂತ ಹೆಚ್ಚಾಗಿದೆ. ರೈತರ ಮನೆ ಬಾಗಿಲಿಗೆ ಸಾಲ ಮತ್ತು ಇತರೆ ಸೇವೆಗಳನ್ನು ಒದಗಿಸುತ್ತಿವೆ. ಆದ್ದರಿಂದ ಡಿಸಿಸಿ ಬ್ಯಾಂಕ್‌ಗಳ ವ್ಯವಹಾರ ವೆಚ್ಚವನ್ನು ಶೇ.0.25ರಷ್ಟು ಕಡಿತ ಮಾಡದೇ ಈ ಮೊದಲು ಇದ್ದಂತೆ ಶೇ.1.75ಕ್ಕೆ ಪರಿಗಣಿಸಲು ಕೋರಿದ್ದವು.

 

2022-23ನೇ ಸಾಲಿನಲ್ಲಿ ವಿತರಿಸಿದ ಸಾಲಗಳು 2023-24ರಲ್ಲಿ ವಸೂಲಾಗಲಿವೆ. ಸುಮಾರು ಶೇ.50ರಷ್ಟು ಮೊತ್ತ ಮಾರ್ಚ್‌ 2023ಕ್ಕೆ ಇದ್ದ ಠೇವಣಿಗಳ ಬಡ್ಡಿ ದರಕ್ಕೆ ಮತ್ತು ಶೇ. 50ರಷ್ಟು ಮೊತ್ತ 2023-24ರಲ್ಲಿ ಠೇವಣಿಗಳ ದರಕ್ಕೆ ಬದಲಾಗಲಿದೆ. 21 ಡಿಸಿಸಿ ಬ್ಯಾಂಕ್‌ಗಳ ಪೈಕಿ ಮೈಸೂರು ಡಿಸಿಸಿ ಬ್ಯಾಂಕ್‌ ಮಾತ್ರ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳ ಬಡ್ಡಿ ದರವನ್ನು ಕಡಿಮೆ ಮಾಡಿದೆ. ಉಳಿದ ಎಲ್ಲಾ ಬ್ಯಾಂಕ್‌ಗಳು ಸಹ ಶೇ. 0.25ರಿಂದ ಶೇ.1.50ರವರೆಗೆ ಹೆಚ್ಚಿಗೆ ಮಾಡಿದ್ದವು.

 

ಸರಾಸರಿ ಹೆಚ್ಚಿಗೆ ಆಗುವ ಬಡ್ಡಿ ದರವನ್ನು ಶೇ.0.50ಕ್ಕೆ ಪರಿಗಣಿಸಿದಲ್ಲಿ 2023-24ರ ಅವಧಿಗೆ ಇದರ ಶೇ.50ರಷ್ಟು ಸೇ.0.25ನ್ನು ಹೆಚಚಿನ ಬಡ್ಡಿಯನ್ನು 2022-23ನೇ ಸಾಲಿನ ಸರಾಸರಿ ಬಡ್ಡಿಗೆ ಸೇರಿಸಿದೆ ಎಂದು ವಿವರಿಸಿದ್ದರು.

the fil favicon

SUPPORT THE FILE

Latest News

Related Posts