ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಸದನಕ್ಕೆ ಲಿಖಿತ ಉತ್ತರದ ಮೂಲಕ ತಿಳಿಸಿದ್ದಾರೆ. ಸರ್ಕಾರದ ಈ ಉತ್ತರದಿಂದ 30,01,169 ರೈತರು ಸಾಲ ಕಟ್ಟಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಸರ್ಕಾರವು ರೈತರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳೂ ಇವೆ.
ವಿಧಾನ ಪರಿಷತ್ನಲ್ಲಿ ಇಂದು ನಡೆದ ಅಧಿವೇಶನದಲ್ಲಿ ಕೆ ಎಸ್ ನವೀನ್ ಮತ್ತು ಮಧು ಜಿ ಮಾದೇಗೌಡ ಅವರು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗೆ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
2018–19ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರಿಗೆ ತಲಾ ₹1 ಲಕ್ಷದವರೆಗೆ ಸಾಲಮನ್ನಾ ಘೋಷಿಸಿತ್ತು. ಆದರೆ, ಸರ್ಕಾರದ ಘೋಷಣೆಯಾಗಿ ಹಲವು ವರ್ಷಗಳು ಕಳೆದರೂ ರಾಜ್ಯದ ಅನೇಕ ಪ್ಯಾಕ್ಸ್ಗಳಿಗೆ ಸಾಲಮನ್ನಾ ಮೊತ್ತದ ಸಂಪೂರ್ಣ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಮಧ್ಯೆ ಲಕ್ಷ್ಮಣ ಸವದಿ ಅವರು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್ಗಳಲ್ಲಿ 2026ರ ಜುಲೈ 31ರ ಅಂತ್ಯಕ್ಕೆ 30,01,169 ರೈತರು 25,180.77 ಕೋಟಿ ರು ಬೆಳೆ ಸಾಲ ಪಡೆದು ಹೊರ ಬಾಕಿ ಹೊಂದಿದ್ದಾರೆ ಎಂದು ಉತ್ತರದಲ್ಲಿ ಅಂಕಿ ಅಂಶಗಳನ್ನು ಒದಗಿಸಿರುವುದು ಗೊತ್ತಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್ಗಳಲ್ಲಿ 2026ರ ಜುಲೈ 31ರ ಅಂತ್ಯಕ್ಕೆ 30,01,169 ರೈತರು 25,180.77 ಕೋಟಿ ರು ಬೆಳೆ ಸಾಲ ಪಡೆದು ಹೊರ ಬಾಕಿ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಎಂದರೇ 4,96,354 ರೈತರು 3,783.31 ಕೊಟಿ ರು ಸಾಲ ಪಡೆದಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ರೈತರು ಅತೀ ಕಡಿಮೆ ಎಂದರೇ 10,123 ರೈತರು 145.20 ಕೋಟಿ ರು ಸಾಲ ಪಡೆದಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗ, ಡಿಸಿಸಿ ಬ್ಯಾಂಕ್ಗಳು ಹಾಗೂ ಪೀಕಾರ್ಡ್ ಬ್ಯಾಂಕ್ಗಳಲ್ಲಿ 2026ರ ಜುಲೈ 31ರ ಅಂತ್ಯಕ್ಕೆ 30,01,169 ರೈತರು 25,180.77 ಕೋಟಿ ರುಗಳ ಅಲ್ಪಾವಧಿ ಬೆಳೆ ಸಾಲ ಮತ್ತು 3,06,215 ರೈತರು 5,847.81 ಕೋಟಿ ರು ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ಪಡೆದು ಹೊರಬಾಕಿ ಹೊಂದಿದ್ದಾರೆ.

2022-23ನೇ ಸಾಲಿನಿಂದ 2026ರ ಜುಲೈ 31ರವರೆಗೆ ಕೃಷಿ ಸಾಲ ವಸೂಲಾತಿಯ ಶೇಕಡವಾರು ಪ್ರಮಾಣದ ವಿವರವನ್ನು ಒದಗಿಸಿದ್ದಾರೆ. 2023-24ನೇ ಸಾಲಿನಲ್ಲಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸುಸ್ತಿ ಕೃಷಿ ಸಾಲಗಳ ಬಡ್ಡಿ ಮನ್ನಾ ಯೋಜನೆ ಯೋಜನೆ ಜಾರಿಯಾದ ಪರಿಣಾಮವಾಗಿ ವಸೂಲಾತಿಯು ಉತ್ತಮವಾಗಿದೆ ಎಂದು ವಿವರಿಸಿದ್ದಾರೆ.
ಉಳಿದ ಅವಧಿಯಲ್ಲಿ ಸಾಲ ವಸೂಲಾತಿ ಪ್ರಮಾಣ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿದೆ. ಬಹಳ ಹಿಂದೆ ವಿತರಿಸಿದ ಸಾಲಗಳ ವಸೂಲಾತಿ ಕಡಿಮೆಯಾಗಿದೆ. 2026-27ನೇ ಸಾಲಿನಲ್ಲಿ ಜುಲೈ 2026ರವರೆಗೆ ವಸೂಲಾತಿಯಲ್ಲಿ ಚಾಲ್ತಿ ಕಂತಿನ ಸಾಲದ ಕಂತುಗಳ ವಸೂಲಾತಿ ಉತ್ತಮವಾಗಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಗಿರಿಜನ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘಗಳ ಮೂಲಕ ರೈತ ಸದಸ್ಯರು ಪ್ರತಿ ಬೆಳೆಗೆ ನಿಗದಿಯಾದ ಸ್ಕೇಲ್ ಆಫ್ ಫೈನಾನ್ಸ್ ಹಾಗೂ ಬೆಳೆ ವಿಮೆ ಪ್ರೀಮಿಯಂ ಮಿತಿಗೊಳಪಟ್ಟು 5 ಲಕ್ಷ ರು.ಗವರೆಗಿನ ಬೆಳೆ ಸಾಲ ಹಾಗೂ ಪಶು ಸಂಗೋಪನೆ ಮತ್ತು ಮೀನುಗಾರಿಕೆಗೆ ದುಡಿಯುವ ಬಂಡವಾಳ ಉದ್ದೇಶಕ್ಕಾಗಿ ಪಡೆಯುವ 2 ಲಕ್ಷವರೆಗಿನ ಸಾಲ ನೀಡಲು ಅವಕಾಶವಿದೆ.

ಈ ಎರಡೂ ಉದ್ದೇಶಗಳಿಗೆ ಸೇರಿ ಗರಿಷ್ಠ 5 ಲಕ್ಷ ವರೆಗೆ ಪಡೆಯುವ ಸಾಲವನ್ನು ಗರಿಷ್ಠ ಒಂದು ವರ್ಷದ ಅವಧಿಯೊಳಗಾಗಿ ಮರುಪಾವತಿಸಿದಲ್ಲಿ ಶೂನ್ಯ ಬಡ್ಡಿ ದರ ಅನ್ವಯವಾಗುತ್ತದೆ. 5 ಲಕ್ಷಗಳಿಗಿಂತಲೂ ಹೆಚ್ಚಿನ ಸಾಲಗಳಿಗೆ ಸಹಕಾರ ಸಂಸ್ಥೆಗಳು ವಿಧಿಸುವ ಸಾಮಾನ್ಯ ಬಡ್ಡಿ ದರ ಅನ್ವಯವಾಗಲಿದೆ.
2023-24ನೇ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ಗಳು ಹಾಗೂ ಪ್ಯಾಕ್ಸ್ಗಳಿಂದ 28,50,533 ರೈತರು 23,767,62 ಕೋಟಿ ರು ಸಾಲ ಪಡೆದಿದ್ದಾರೆ. 2024-25ನೇ ಸಾಲಿನಲ್ಲಿ 28,59,729 ರೈತರಿಗೆ 25,060.18 ಕೋಟಿ ರು ಸಾಲ ಪಡೆದಿದ್ದರು. 2025-26ರಲ್ಲಿ 28,73,596 ರೈತರು 26,062.38 ಕೋಟಿ ರು ಸಾಲ ಪಡೆದಿದ್ದಾರೆ.

ಪೀಕಾರ್ಡ್ ಮೂಲಕ 2023-24ರಲ್ಲಿ 16,382 ರೈತರು 589.09 ಕೋಟಿ ರು ಸಾಲ ಪಡೆದಿದ್ದರು. 2024-25ರಲ್ಲಿ 221,986 ರೈತರು 541.15 ಕೋಟಿ ರು ಸಾಲ ಪಡೆದಿದ್ದರು. 2025-26ರಲ್ಲಿ 19,598 ರೈತರು 506.34 ಕೋಟಿ ರು ಸಾಲ ಪಡೆದಿದ್ದಾರೆ.

ಸಹಕಾರ ಸಂಸ್ಥೆಗಳ ಮೂಲಕ ಮೂಲಕ ಡಿಸಿಸಿ ಬ್ಯಾಂಕ್ಗಳು ಹಾಗೂ ಪೀಕಾರ್ಡ್ ಪ್ಯಾಕ್ಸ್ಗಳ ಮೂಲಕ 2023-24ರಲ್ಲಿ 18,53,639 ರೈತರಿಗೆ 11,519.14 ಕೋಟಿ ರು ಸಾಲ ವಿತರಿಸಲಾಗಿದೆ. 2024-25ರಲ್ಲಿ 18,519,198 ರೈತರಿಗೆ 11,665.00 ಕೋಟಿ ರು, 2025-26ರಲ್ಲಿ 18,94.174 ರೈತರು 11,852.86 ಕೋಟಿ ರು ಸಾಲ ಪಡೆದಿದ್ದಾರೆ.

ಪೀಕಾರ್ಡ್ ಬ್ಯಾಂಕ್ ಮೂಲಕ 2,086 ರೈತರು 51.40 ಕೋಟಿ ರು ಸಾಲ ಪಡೆದಿದ್ದಾರೆ. 2024-25ರಲ್ಲಿ 2,236 ರೈತರು 29.66 ಕೋಟಿ ರು ಸಾಲ, 2025-26ರಲ್ಲಿ 2,492 ರೈತರು 27.75 ಕೋಟಿ ರು ಸಾಲ ಪಡೆದಿದ್ದಾರೆ.
ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನುಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ. ಆದರೆ ಬರ ಉಂಟಾಗುವ ಹಿನ್ನೆಲೆಯಲ್ಲಿ ಇಲಾಖೆಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಎಲ್-ನಿನೋ ಪ್ರಭಾವ ಹೆಚ್ಚಾಗುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಳೆ ಸಾಲದ ಹೊರಬಾಕಿ ಹೊಂದಿರುವ ಎಲ್ಲಾ ರೈತರು ಬೆಳೆ ವಿಮೆ ಯೋಜನೆಯ ವ್ಯಾಪ್ತಿಗೆ ಒಳಪಡುವಂತೆ ಮನವೊಲಿಸಿ ಸಹಕಾರ ಸಂಘಗಳ ನಿಬಂಧಕರಿಂದ ಮತ್ತು ಎಲ್ಲಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳಿಗೆ 2026ರ ಜೂನ್ 18 ಮತ್ತು 2026ರ ಜುಲೈ 13ರಂದು ಸೂಚನೆ ನೀಡಿದೆ.2026ರ ಆಗಸ್ಟ್ 12ರವರೆಗೆ 7,20,893 ರೈತರು ಬೆಳೆ ವಿಮೆ ಯೋಜನೆಯಡಿಯಲ್ಲಿ ನೋಂದಣಿಯಾಗಿರುತ್ತಾರೆ.

ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿಗಳ ಅನ್ವಯ ಬರ ಘೋಷಣೆಯಾಗಿ ಬೆಳೆ ಇಳುವರಿ ನಷ್ಟದ ಪ್ರಮಾಣದ ಶೇ.33ಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಸಹಕಾರ ಸಂಸ್ಥೆಗಳು ರೈತರ ಸಾಲದ ಕಂತುಗಳನ್ನು 2ರಿಂದ 5 ವರ್ಷಗಳ ಅವಧಿಗೆ ಮುಂದೂಡಲು ಅವಕಾಶ ಇದೆ ಎಂದು ಸಚಿವ ಲಕ್ಷ್ಮಣ ಸವದಿ ಅವರು ವಿವರಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

ಸಾಲಮನ್ನಾ ಹಣವನ್ನು ಸರ್ಕಾರವೇ ಘೋಷಿಸಿರುವ ಹಿನ್ನೆಲೆಯಲ್ಲಿ, ಅದರ ಮೊತ್ತವನ್ನು ಸಂಘಗಳ ಮೇಲೆ ಹೊರೆ ಯಾಗಿಸುವುದು ಸರಿಯಲ್ಲ. ಬಾಕಿ ಹಣಕ್ಕಾಗಿ ಸಂಘಗಳು ಬಡ್ಡಿ ಮತ್ತು ಇತರ ಹಣಕಾಸಿನ ಹೊರೆ ಅನುಭವಿಸು ವಂತಾಗಿರುವುದು ಸಹಕಾರ ಕ್ಷೇತ್ರದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ. ಕೆಲವು ಸಂಘಗಳಿಗೆ ಸಿಬ್ಬಂದಿ ವೇತನ ಸೇರಿದಂತೆ ದೈನಂದಿನ ಆಡಳಿತ ವೆಚ್ಚ ನಿರ್ವಹಿಸುವುದಕ್ಕೂ ಹಣಕಾಸಿನ ತೊಂದರೆ ಎದುರಾಗುತ್ತಿದೆ.
ಇದಲ್ಲದೆ, ಸರ್ಕಾರದ ವಿವಿಧ ಯೋಜನೆಗಳಡಿ ಪ್ಯಾಕ್ಸ್ಗಳಿಗೆ ಬಿಡುಗಡೆಯಾಗಬೇಕಾದ ಮಾರ್ಜಿನ್ ಹಣ ಹಾಗೂ ಇತರ ಅನುದಾನಗಳನ್ನು ಹಳೆಯ ಬಾಕಿ ಅಥವಾ ಚಾಲ್ತಿ ಖಾತೆಯ ಹೊಂದಾಣಿಕೆಗೆ ಬಳಸಲಾಗುತ್ತಿದೆ ಎಂಬ ಅಸಮಾಧಾನವೂ ಸಂಘಗಳ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇದರಿಂದ ಆರ್ಥಿಕವಾಗಿ ದುರ್ಬಲವಾಗಿರುವ ಪ್ಯಾಕ್ಸ್ಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚುತ್ತಿದೆ.
“ರೈತರ ಸಾಲಮನ್ನಾ ಸರ್ಕಾರದ ನಿರ್ಧಾರವಾಗಿದ್ದು, ಅದರ ಹಣವನ್ನು ಪ್ಯಾಕ್ಸ್ಗಳು ತಮ್ಮ ಸಂಪನ್ಮೂಲಗಳಿಂದ ಭರಿಸುವುದು ಸಾಧ್ಯವಿಲ್ಲ. ಸರ್ಕಾರ ತನ್ನ ಬದ್ಧತೆಯನ್ನು ನಿಭಾಯಿಸಿ, ಬಾಕಿ ಇರುವ ಪ್ರತಿಯೊಂದು ರೂಪಾಯಿ ಯನ್ನೂ ಕೂಡಲೇ ಬಿಡುಗಡೆ ಮಾಡಬೇಕು” ಎಂದು ಸಹಕಾರ ಭಾರತಿಯಯ ಸರ್ಕಾರದ ಮುಂದೆ ಬೇಡಿಕೆಯಿರಿಸಿದೆ.
ರಾಜ್ಯದ ಪ್ಯಾಕ್ಸ್ಗಳು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭಗಳಾಗಿದ್ದು, ಲಕ್ಷಾಂತರ ರೈತರಿಗೆ ಕೃಷಿ ಸಾಲ, ರಸಗೊಬ್ಬರ, ಬೀಜ ಹಾಗೂ ವಿವಿಧ ಸಹಕಾರ ಸೇವೆಗಳನ್ನು ಒದಗಿಸುತ್ತಿವೆ. ಇಂತಹ ಸಂಘಗಳ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾದರೆ ಅದರ ನೇರ ಪರಿಣಾಮ ರೈತರ ಮೇಲೆಯೇ ಬೀಳಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರವು ಯಾವುದೇ ವಿಳಂಬವಿಲ್ಲದೆ ರಾಜ್ಯದಾದ್ಯಂತ ಬಾಕಿ ಉಳಿದಿರುವ ಸಾಲಮನ್ನಾ ಹಣದ ಸಂಪೂರ್ಣ ಮೊತ್ತವನ್ನು ಪ್ಯಾಕ್ಸ್ಗಳಿಗೆ ಬಿಡುಗಡೆ ಮಾಡಬೇಕು. ಬಾಕಿ ಮೊತ್ತದ ಜಿಲ್ಲಾವಾರು ಹಾಗೂ ಸಂಘವಾರು ವಿವರಗಳನ್ನು ಪರಿಶೀಲಿಸಿ, ಅರ್ಹ ರೈತರ ಸಾಲಮನ್ನಾ ಹಣವನ್ನು ತಕ್ಷಣ ಪಾವತಿಸಲು ವಿಶೇಷ ಕ್ರಮ ಕೈಗೊಳ್ಳ ಬೇಕು. ಸಾಲಮನ್ನಾ ಬಾಕಿ ಹಣ ಬಿಡುಗಡೆ ಮಾಡುವ ಕುರಿತು ಸ್ಪಷ್ಟ ಕಾಲಮಿತಿ ನಿಗದಿಪಡಿಸಿ, ಪ್ಯಾಕ್ಸ್ಗಳ ಮೇಲಿರುವ ಅನಗತ್ಯ ಆರ್ಥಿಕ ಹೊರೆಯನ್ನು ನಿವಾರಿಸಬೇಕು ಎಂದು ಸಹಕಾರ ಭಾರತೀ ಸರ್ಕಾರವನ್ನು ಒತ್ತಾಯಿಸಿತ್ತು.
ಕೃಷಿ ಸಾಲ; 25,547.02 ಕೋಟಿ ರು. ಹೊರಬಾಕಿ, ರೈತರ ಸಾಲಮನ್ನಾ ಪ್ರಸ್ತಾವವಿಲ್ಲವೆಂದ ಕಾಂಗ್ರೆಸ್ ಸರ್ಕಾರ
2023ರಲ್ಲಿಯೂ ಸರ್ಕಾರವು ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವ ಮುಂದಿಲ್ಲ ಎಂದು ಹೇಳಿತ್ತು. ಈ ಕುರಿತು ದಿ ಫೈಲ್ 2023ರ ಡಿಸೆಂಬರ್ 30ರಂದು ವರದಿ ಪ್ರಕಟಿಸಿತ್ತು.
ಡಿಸಿಸಿ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಹಗರಣ: ರೈತರ ಸಾಲ ವಿತರಣೆಗಿಲ್ಲ ಹಣ!
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ಗಳಲ್ಲಿ ಬಹು ಕೋಟಿ ಹಗರಣ ನಡೆದಿತ್ತು. ಹೀಗಾಗಿ ರೈತರ ಸಾಲ ವಿತರಣೆಗೂ ಹಣವಿಲ್ಲದಂತಾಗಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಒಂದು ಲಕ್ಷ ರು. ಸಾಲಮನ್ನಾ ಯೋಜನೆಗೆ ಕೊಕ್ಕೆ; ಅನುದಾನ ಕೋರಿಕೆ ಪ್ರಸ್ತಾವನೆ ನೆನೆಗುದಿಗೆ
ಒಂದು ಲಕ್ಷ ರು ಸಾಲ ಮನ್ನಾ ಯೋಜನೆಗೂ ಕೊಕ್ಕೆ ಬಿದ್ದಿತ್ತು . ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಕೋವಿಡ್ ಪರಿಣಾಮ; ಇಪ್ಪತ್ತು ಸಾವಿರ ರೈತರಿಂದ 128.44 ಕೋಟಿ ರುಪಾಯಿ ಸುಸ್ತಿ ಬಡ್ಡಿ ಬಾಕಿ
ಕೋವಿಡ್ ಅವಧಿಯಲ್ಲಿಯೂ 20,000 ರೈತರಿಂದ 128.44 ಕೋಟಿ ರುಪಾಯಿ ಸುಸ್ತಿ ಬಡ್ಡಿ ಮನ್ನಾ ಬಾಕಿ ಇತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಪರಿಶಿಷ್ಟ ಜಾತಿ ರೈತರ ಸಾಲದ ಅಸಲು, ಬಡ್ಡಿ ಮರು ಪಾವತಿಯ ವಿವರಗಳೇ ಇಲ್ಲ; ಲೆಕ್ಕಪರಿಶೋಧನೆ ವರದಿ
ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದಲ್ಲಿ ಬೊಕ್ಕಸಕ್ಕೆ 117 ಕೋಟಿ ರು ಹೊರೆಯಾಗಲಿದೆ ಎಂದು ಇಲಾಖೆಯು ಹೇಳಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಶೂನ್ಯ ಬಡ್ಡಿ ದರದಲ್ಲಿ ಸಾಲ; ಬೊಕ್ಕಸಕ್ಕೆ 117 ಕೋಟಿ ರು., ಹೊರೆ, ಬಡ್ಡಿ ಮನ್ನಾ ಯೋಜನೆಗೆ ಬೇಕು 260 ಕೋಟಿ
ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಮೊದಲೆರಡು ವರ್ಷದಲ್ಲಿ 1 ಲಕ್ಷ ರು ಸಾಲ ಮನ್ನಾ ಯೋಜನೆಗೆ ಏದುಸಿರು ಬಿಟ್ಟಿತ್ತು.
1 ಲಕ್ಷ ರು. ಸಾಲಮನ್ನಾ ಯೋಜನೆ; ಇನ್ನೂ ಬಿಡುಗಡೆಯಾಗದ 232.00 ಕೋಟಿ ರು., ಸಂಕಷ್ಟದಲ್ಲಿ ರೈತರು
ಮುಖ್ಯಮಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಅವರ ಅವಧಿಯಲ್ಲಿಯೂ ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ನಿಲುವು ವ್ಯಕ್ತಪಡಿಸಿರುವುದು ರೈತರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.




