ಬೆಂಗಳೂರು; 2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ ಲಭ್ಯವಿದ್ದ 2,660.26 ಕೋಟಿ ರು ಬಿಡುಗಡೆ ಮಾಡಲು ಸಹಮತಿ ನೀಡಿದ್ದ ಆರ್ಥಿಕ ಇಲಾಖೆ ಬಳಿ ಇದರ ಕಡತವೇ ಲಭ್ಯವಿಲ್ಲ ಎಂದು ಆರ್ಟಿಐ ದಾಖಲೆ ಆಧರಿಸಿ ದಿ ಫೈಲ್ ಪ್ರಕಟಿಸಿದ್ದ ವರದಿಯನ್ನು ಮುಂದಿರಿಸಿ ತೀವ್ರ ತರಾಟೆಗೆ ತೆಗೆದುಕೊಂಡಿರುವ ಜಾತ್ಯತೀತ ಜನತಾದಳವು ಖಜಾನೆ ಖಾಲಿ ಮಾಡಿದ್ದಷ್ಟೇ ಅಲ್ಲದೇ, ‘ಕಡತ’ಗಳನ್ನೇ ಕದ್ದರಾ ಎಂದು ಪ್ರಶ್ನಿಸಿದೆ.
ಗೃಹಲಕ್ಷ್ಮಿ ಯೋಜನೆಯಡಿ 5,000 ಕೋಟಿ ರು ಅನುದಾನದಲ್ಲಿ ಭಾರೀ ಪ್ರಮಾಣದ ಅಕ್ರಮಗಳಾಗಿವೆ ಎಂಬ ಗುರುತರ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ 2,660.25 ಕೋಟಿ ರು ಮೊತ್ತವನ್ನು ಬಿಡುಗಡೆ ಮಾಡಲು ಸಹಮತಿಸಿದ್ದ ಆರ್ಥಿಕ ಇಲಾಖೆ ಬಳಿ ಕಡತವೇ ಇಲ್ಲದಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿತ್ತು.
ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್ ₹2,660 ಕೋಟಿಗಿಂತಲೂ ಅಧಿಕ ಮೊತ್ತದ ಅನುದಾನದ ಕಡತ ಬೆಂಕಿಯಲ್ಲಿ ಬೆಂದು ಹೋಯ್ತೋ ? ನೀರಿನಲ್ಲಿ ಕೊಚ್ಚಿ ಹೋಯ್ತೋ ಅಥವಾ ಕಾಂಗ್ರೆಸ್ಸಿನವರ ಮನೆಯ ಕಪಾಟು ಸೇರಿದೆಯೋ ಎಂದು ಪ್ರಶ್ನಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಡವಳಿಯಲ್ಲೇ ದಾಖಲಾಗಿರುವ ಆಇ 186 ವೆಚ್ಚ-10/2025 ನಂಬರ್ನ ಕಡತ ಈಗ ಸಚಿವರ ಆಡಳಿತ ಇರುವ ಆರ್ಥಿಕ ಇಲಾಖೆಯಲ್ಲೇ ಇಲ್ಲವಂತೆ ! ಎಂದು ಲೇವಡಿ ಮಾಡಿದೆ.
ಜೆಡಿಎಸ್ ಟ್ವೀಟ್ನಲ್ಲೇನಿದೆ?
ಖಜಾನೆ ಖಾಲಿ ಮಾಡಿದ್ದಷ್ಟೇ ಅಲ್ಲದೇ, ‘ಕಡತ’ಗಳನ್ನೇ ಕದ್ದರಾ ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಡವಳಿಯಲ್ಲೇ ದಾಖಲಾಗಿರುವ ಆಇ 186 ವೆಚ್ಚ-10/2025 ನಂಬರ್ನ ಕಡತ ಈಗ ಸಚಿವರ ಆಡಳಿತ ಇರುವ ಆರ್ಥಿಕ ಇಲಾಖೆಯಲ್ಲೇ ಇಲ್ಲವಂತೆ !

₹2,660 ಕೋಟಿಗಿಂತಲೂ ಅಧಿಕ ಮೊತ್ತದ ಅನುದಾನದ ಕಡತ ಬೆಂಕಿಯಲ್ಲಿ ಬೆಂದು ಹೋಯ್ತೋ ? ನೀರಿನಲ್ಲಿ ಕೊಚ್ಚಿ ಹೋಯ್ತೋ ಅಥವಾ ಕಾಂಗ್ರೆಸ್ಸಿನವರ ಮನೆಯ ಕಪಾಟು ಸೇರಿದೆಯೋ ? 25-03-2025 ರಂದು ಆಡಳಿತ ಇಲಾಖೆಗೆ ಪತ್ರ ಬರೆದು ತರಾತುರಿಯಲ್ಲಿ ಮಾರ್ಚ್ 31 ರೊಳಗೆ ಬಿಲ್ ಸಲ್ಲಿಕೆಗೆ ಡೆಡ್ಲೈನ್ ಕೊಟ್ಟು ವರ್ಗಾವಣೆ ಮಾಡಿದ ಸಾವಿರಾರು ಕೋಟಿ ಹಣ ಎಲ್ಲಿಗೆ ಹೋಯಿತು ಎಂದು ಜೆಡಿಎಸ್ ಪ್ರಶ್ನಿಸಿದೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಗೃಹಲಕ್ಷ್ಮಿಯರ 2 ತಿಂಗಳ ಕಂತಿನ ಹಣ ₹5000 ಕೋಟಿ ಗುಳುಂ ಮಾಡಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಈಗ ತನಿಖೆಗೆ ಹೆದರಿ ಕಡತವನ್ನೇ ಅಡಗಿಸಿಟ್ಟು ಸಾಕ್ಷಿನಾಶ ಮಾಡಿರುವ ಅನುಮಾನ ದಟ್ಟವಾಗಿದ್ದು, ಈ ಗೃಹಲಕ್ಷ್ಮಿ ಹಗರಣದ ತನಿಖೆಯಾಗಬೇಕು ಎಂದು ಆಗ್ರಹಿಸಿದೆ.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಒಂದಷ್ಟು ತೊಂದರೆಗಳು ಆಗಿರುವುದು ನಿಜ ಎಂದು ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಒಪ್ಪಿಕೊಂಡಿದ್ದಾರೆ. ಗ್ಯಾರಂಟಿಗಳಿಂದ ಸರ್ಕಾರವು ಒದ್ದಾಡುತ್ತಿದೆ ಎಂದು ಸಚಿವ ಬಾಲಕೃಷ್ಣ ಅವರು ಬಹಿರಂಗವಾಗಿ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಆರ್ಥಿಕ ಇಲಾಖೆಯು ನೀಡಿರುವ ಈ ಹಿಂಬರಹವು ಚರ್ಚೆಗೆ ಗ್ರಾಸವಾಗಿತ್ತು.
2024-25ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆಯಡಿ ಅನುದಾನ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಯು ಹೊರಡಿಸಿದ್ದ ಅಧಿಕೃತ ಟಿಪ್ಪಣಿ ಕುರಿತು ದಿ ಫೈಲ್ ಆರ್ಟಿಐ ಅಡಿ ಸಮಗ್ರ ಕಡತ ಕೋರಿತ್ತು. ಈ ಸಂಬಂಧ ಅಧಿಕೃತ ಟಿಪ್ಪಣಿಯನ್ನು ಮಾತ್ರ ಒದಗಿಸಿರುವ ಆರ್ಥಿಕ ಇಲಾಖೆಯು ಇದಕ್ಕೆ ಸಂಬಂಧಿಸಿದ ಯಾವುದೇ ಕಡತವು ಲಭ್ಯವಿಲ್ಲ ಎಂದು ತಿಳಿಸಿತ್ತು.

ಅಧಿಕೃತ ಟಿಪ್ಪಣಿಯಲ್ಲೇನಿದೆ?
ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ವಲಯದ ಲೆಕ್ಕ ಶೀರ್ಷಿಕೆ ( 2235-02-103-0-73) ಅಡಿಯಲ್ಲಿ ಲಭ್ಯವಿರುವ ಅನುದಾನ 2,660.26 ಕೋಟಿ ರು.ಗಳನ್ನು ಹಾಗೂ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ ( 2235-00-101-0-64) ಯಲ್ಲಿ ಲಭ್ಯವಿರುವ ಬಾಕಿ ಅನುದಾನವನ್ನೂ ಸಹ ಒಳಗೊಂಡಂತೆ ಬಿಡುಡೆ ಮಾಡಲು ಅರ್ಥಿಕ ಇಲಾಖೆಯು ಸಹಮತಿ ನೀಡಿದೆ. ಈ ಅನುದಾನವನ್ನು ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸಲು ತಿಳಿಸಿದೆ. ಈ ಸಂಬಂಧ ಬಿಲ್ಗಳನ್ನು 2025ರ ಮಾರ್ಚ್ 31ರ ಮಧ್ಯಾಹ್ನ 2-30ರೊಳಗೆ ಖಜಾನೆಗೆ ಬಿಲ್ಗಳನ್ನು ಸಲ್ಲಿಸಬೇಕು ಎಂದು ಆಡಳಿತ ಇಲಾಖೆಗೆ 2025ರ ಮಾರ್ಚ್ 30ರಂಂದು ತಿಳಿಸಿತ್ತು.

ಈ ಹಣ ಬಿಡುಗಡೆ ಕೋರಿಕೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಿತ್ತು. ಈ ಕಡತದಲ್ಲಿನ ಪ್ರಸ್ತಾವನೆ ಕುರಿತು ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ಹಿಡಿದು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಂತದವರೆಗೂ ಸಮಾಲೋಚಿಸಲಾಗುತ್ತದೆ. ಈ ರೀತಿ ಸಮಾಲೋಚಿಸಿಸುವ ಮುನ್ನ ಆರ್ಥಿಕ ಇಲಾಖೆಯು ತನ್ನ ಹಂತದಲ್ಲೇ ಹೊಸದಾಗಿ ಕಡತವನ್ನು ಸೃಜಿಸುತ್ತದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ಹಿಡಿದು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಂತದಲ್ಲಿ ಚರ್ಚಿಸಲಾಗುತ್ತದೆ. ಈ ಚರ್ಚೆ, ಸಮಾಲೋಚನೆಯಿಂದ ಹೊರಬೀಳುವ ತೀರ್ಮಾನವನ್ನು ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಇದಕ್ಕೆ ಅನುಮೋದನೆ ನೀಡುತ್ತಾರೆ.
ಈ ಅನುಮೋದನೆ ನೀಡಿದ ನಂತರ ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ತನ್ನ ನಿಲುವು, ಅಭಿಪ್ರಾಯ, ಸ್ಪಷ್ಟೀಕರಣ ಬಯಸುತ್ತದೆ. ಇದಾದ ನಂತರ ಒಂದು ತೀರ್ಮಾನಕ್ಕೆ ಬಂದ ನಂತರ ಕಡೆಯಲ್ಲಿ ಅಧಿಕೃತ ಟಿಪ್ಪಣಿಯನ್ನು ಹೊರಡಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳೂ ಕಡತದೊಳಗೆ ಅಡಕವಾಗಿರುತ್ತದೆ.
ಆದರೆ 2,660.26 ಕೋಟಿ ರು ಹಣ ಬಿಡುಗಡೆ ಬಿಡುಗಡೆ ಮಾಡಲು ಸಹಮತಿಸಿರುವ ಆರ್ಥಿಕ ಇಲಾಖೆಯು ತನ್ನ ಬಳಿಯೇ ಕಡತವು ಇಲ್ಲವೆಂದು ಅಧಿಕೃತವಾಗಿ ಹೇಳುತ್ತಿರುವುದು, ಹಣ ಬಿಡುಗಡೆಯಲ್ಲಿ ಭಾರೀ ಪ್ರಮಾಣದ ಅಕ್ರಮಗಳಾಗಿವೆ ಎಂದು ಕೇಳಿ ಬರುತ್ತಿರುವ ಗುರುತರವಾದ ಆರೋಪಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.
ಈ ಅಧಿಕೃತ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯು ಆಇ 186 ವೆಚ್ಚ-10/2025 ದಿನಾಂಕ 30-03-2025 ಎಂದು ಕಡತದ ಸಂಖ್ಯೆಯನ್ನು ನಮೂದಿಸಿದೆ. ಇದೇ ಅಧಿಕೃತ ಟಿಪ್ಪಣಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಅನಧಿಕೃತ ಟಿಪ್ಪಣಿ ಎಂದು ತನ್ನ ನಡವಳಿಯ 17ನೇ ಕ್ರಮಾಂಕದಲ್ಲಿ ಉಲ್ಲೇಖಿಸಿದೆ. ಹೀಗಿದ್ದರೂ ಆರ್ಥಿಕ ಇಲಾಖೆಯು ತನ್ನ ಬಳಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಡತವು ಲಭ್ಯವಿಲ್ಲ ಎಂದು ಹೇಳಿತ್ತು.
ಮತ್ತೊಂದು ವಿಶೇಷವೆಂದರೇ ಆರ್ಥಿಕ ಇಲಾಖೆಯು 2025ರ ಮಾರ್ಚ್ 25ರಂದು ಇಲಾಖೆಗೆ ಪತ್ರ ಬರೆದಿತ್ತು. ಈ ಪತ್ರದಲ್ಲಿಯೂ ಆಇ 186 ವೆಚ್ಚ-10/2024 ಮತ್ತು WCD/SS/BUD/8/2024 ಎಂದು ನಮೂದಿಸಿದೆ. 2025ರ ಮಾರ್ಚ್ 25 ಪತ್ರ ಮತ್ತು ಮತ್ತು ಮಾರ್ಚ್ 31ರಂದು ಅಧಿಕೃತ ಟಿಪ್ಪಣಿಯಲ್ಲಿ ಒಂದೇ ಕಡತ ಸಂಖ್ಯೆ ಅಂದರೇ ಆಇ 186 ವೆಚ್ಚ-10/ ಎಂದು ಹೇಳಿದೆ. ಒಂದೇ ತಿಂಗಳ 5 ದಿನದ ಅಂತರದಲ್ಲಿ ಇಸವಿಯನ್ನು ಬದಲಾಯಿಸಿರುವ ಇಲಾಖೆಯು ಕಡತ ಸಂಖ್ಯೆಯಲ್ಲಿ ಬದಲಿಸಿಲ್ಲ. ಆಇ 186 ವೆಚ್ಚ-10/ ಸಂಖ್ಯೆಯನ್ನೇ ಮುಂದುವರೆಸಿತ್ತು.
2025 ಮಾರ್ಚ್ 25ರ ಪತ್ರದಲ್ಲೇನಿದೆ?
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತಾಲೂಕು ವಲಯದಡಿ ಅನುದಾನ ಬಿಡುಗಡೆಗೊಳಿಸಲು ಅನುವಾಗುವಂತೆ ರಾಜ್ಯ ವಲಯದ ಲೆಕ್ಕ ಶೀರ್ಷಿಕೆ 2235-02-103-0-73 ರಡಿ 2024-25ನೇ ಸಾಲಿನಲ್ಲಿ ಲಭ್ಯವಿರುವ ಅನುದಾನದಲ್ಲಿ ರು 253907.32 ಲಕ್ಷಗಳನ್ನು ತಾಲೂಕು ವಲಯದ ಲೆಕ್ಕ ಶೀರ್ಷಿಕೆ 2235-02-197-1-02-300 (2235-00-101-0-64) ಪುನರ್ವಿನಿಯೋಗದ ಮೂಲಕ ಒದಗಿಸಲಾಗಿದ್ದು ಸರ್ಕಾರಿ ಆದೇಶ (ಸಂಖ್ಯೆ ಆಇ 790 ಬಿಆರ್ಎಸ್ 2024, ದಿನಾಂಕ 25-03-2025) ನ್ನು ಲಗತ್ತಿಸಿ ಕಳಿಸಿದೆ ಎಂದು ಹೇಳಿತ್ತು.

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಒಟ್ಟು 253907.32 ಲಕ್ಷ ಗಳನ್ನು ಲೆಕ್ಕ ಶೀರ್ಷಿಕೆ 2235-02-197-1-02-300 (2235-00-101-0-64) ರಡಿ ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆಯು ಸಹಮತಿಸಿದ್ದು ಈ ಸಂಬಂಧ ಬಿಲ್ಗಳನ್ನು 2025ರ ಮಾರ್ಚ್ 30ರೊಳಗೆ ಖಜಾನೆಗೆ ಸಲ್ಲಿಸಬೇಕು ಎಂದು ಆಡಳಿತ ಇಲಾಖೆಗೆ ತಿಳಿಸಿದೆ ಎಂದು ಸೂಚಿಸಿತ್ತು.
ಇದಾದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಡವಳಿ ಹೊರಡಿಸಿತ್ತು.
ಮಹಿಳಾ, ಮಕ್ಕಳ ಅಭಿವೃದ್ದಿ ಇಲಾಖೆಯ ನಡವಳಿಯಲ್ಲೇನಿದೆ?
2024-25ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಹೊರಡಿಸಿರುವ ನಡವಳಿಗಳಲ್ಲಿ ಅಧಿಕೃತ ಮತ್ತು ಅನಧಿಕೃತ ಟಿಪ್ಪಣಿ ಸೇರಿದಂತೆ ಒಟ್ಟು 17 ಆದೇಶಗಳನ್ನು ಉಲ್ಲೇಖಿಸಿದೆ. ಕ್ರಮ ಸಂಖ್ಯೆ 1ರಿಂದ 10ವರೆಗಿನ ಆದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ವಲಯದ ಯೋಜನೆ ಕಾರ್ಯಕ್ರಮಗಳ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಏಪ್ರಿಲ್ 2024ರಿಂದ ಅಕ್ಟೋಬರ್ 2024ರವರೆಗಿನ ಧನ ಸಹಾಯ ಪಾವತಿಸಲು ಲೆಕ್ಕ ಶೀರ್ಷಿಕೆ (2235-02-103-0-73 (100), (422) ಹಾಗೂ (423) ರಡಿ ಒಟ್ಟು 2142693.80 ಲಕ್ಷ ಗಳನ್ನು ಬಿಡುಗಡೆಗೊಳಿಸಲು ಆದೇಶಿಸಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿತ್ತು.

ಗೃಹ ಲಕ್ಷ್ಮಿ ಯೋಜನೆಯನ್ನು ಇದುವರೆವಿಗೂ ರಾಜ್ಯವಲಯದಡಿ ಅನುಷ್ಠಾನಗೊಳಿಸುತ್ತಿದ್ದು ಜನವರಿ 2025ರಿಂದ ಈ ಯೋಜನೆಯನ್ನು ಜಿಲ್ಲಾ ಮತ್ತು ತಾಲೂಕು ವಲಯದಡಿ ಸೃಜಿಸಲಾಗಿರುವ ಹೊಸ ಲೆಕ್ಕ ಶೀರ್ಷಿಕೆಯಡಿ ಅನುಷ್ಠಾನಗೊಳಿಸುವಂತೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಅನುಸರಿಸಬೇಕಾದ ಅನುದಾನ ಬಿಡುಗಡೆ ವಿಧಾನದ ಬಗ್ಗೆ ತಿಳಿಸಿತ್ತು.

ಕ್ರಮ ಸಂಖ್ಯೆ 17ರಲ್ಲಿನ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಲೆಕ್ಕಶೀರ್ಷಿಕೆ ಅಡಿಯಲ್ಲಿ ಲಭ್ಯವಿರುವ ಅನುದಾನ 2,660.26 ಕೋಟಿ ರು.ಗಳನ್ನು ಹಾಗೂ ಜಿಲ್ಲಾ ವಲಯದ ಲೆಕ್ಕಶೀರ್ಷಿಕೆಯಲ್ಲಿ ಲಭ್ಯವಿರುವ ಬಾಕಿ ಅನುದಾನವನ್ನೂ ಸಹ ಒಳಗೊಂಡಂತೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ ಎಂದು ವಿವರಿಸಿತ್ತು.
ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಾಗಿದ್ದವರ ಪೈಕಿ ಮೃತರಿಗೂ ಹಣ ಪಾವತಿ ಕುರಿತಂತೆ ಅಕೌಂಟೆಂಟ್ ಜನರಲ್ ಅವರು ಸರ್ಕಾರಕ್ಕೆ ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹೇಶ್ ಬಾಬು ಅವರು ನಾಲಗೆ ಹರಿಬಿಟ್ಟಿದ್ದರು.
ಮೃತರಿಗೂ ಗೃಹಲಕ್ಷ್ಮಿ ಹಣ ಪಾವತಿ ಕುರಿತು ಸರ್ಕಾರವು ಬಿಡುಗಡೆಗೊಳಿಸಿದ್ದ ಅಂಕಿ ಅಂಶಗಳಿಗೂ ಎಸ್ಎಲ್ಬಿಸಿ ಬಿಡುಗಡೆ ಮಾಡಿದ್ದ ಅಂಕಿ ಸಂಖ್ಯೆಗಳ ಮಧ್ಯೆ ವ್ಯತ್ಯಾಸವಿತ್ತು.
ಅದೇ ರೀತಿ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ, ಇದಕ್ಕೆ ಬ್ಯಾಂಕ್ನ ತಾಂತ್ರಿಕ ದೋಷವೇ ಕಾರಣ ಎಂದು ಸರ್ಕಾರವು ಹೇಳಿಕೆ ನೀಡಿತ್ತು. ಈ ಕುರಿತು ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.




