ಬೆಂಗಳೂರು; ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ 2025-26ನೇ ಮುಂಗಾರು ಹಂಗಾಮಿನ ಮಳೆ ಆಶ್ರಿತ ಮೆಕ್ಕೆ ಜೋಳ, ಕೆಂಪು ಮೆಣಿಸಿನಕಾಯಿ ಸೇರಿದಂತೆ ಇನ್ನಿತರೆ ಬೆಳೆಗಳಿಗೆ ಸಂಬಂಧಿಸಿದಂತೆ ರೈತರ ಖಾತೆಗಳಿಗೆ ಇದುವರೆಗೂ ಬೆಳೆ ವಿಮೆಯೇ ಜಮೆಯಾಗಿಲ್ಲ.
ಈ ಕುರಿತು ರಾಜ್ಯದಾದ್ಯಂತ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ದೂರು ದಾಖಲಾಗಿವೆ. ಈ ದೂರುಗಳಿಗೆ ಸಂಬಂಧಿಸಿದಂತೆ ಕೃಷಿ ಆಯುಕ್ತಾಲಯದ ಆಯುಕ್ತರಿಗೆ ಪತ್ರ ಬರೆದು ಕೈ ತೊಳೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಹಲವು ಗ್ರಾಮಗಳಲ್ಲಿನ ರೈತರ ಖಾತೆಗಳಿಗೆ ಬೆಳೆ ವಿಮೆ ಜಮೆಯಾಗಿಲ್ಲ ಎಂದು ರೈತರು 2026ರ ಸೆ.1ರಂದೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 22 ದಿನಗಳ ನಂತರ ಕೃಷಿ ಆಯುಕ್ತಾಲಯದ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಗದಗ್ ಜಿಲ್ಲೆಯ ಮುಂಡರಗಿಯ ಹಳ್ಳಿಕೇರಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪೂರದ ಗ್ರಾಮದ ರೈತರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ಮಳೆ ಆಶ್ರಿತ ಮೆಕ್ಕೆಜೋಳ (ಶೇ.59ರಷ್ಟು) ಕೆಂಪು ಮೆಣಿಸಿನ ಕಾಯಿ (ಶೇ.53) ಬೆಳೆದ ರೈತರು ಬೆಳೆ ವಿಮೆಯನ್ನ ಕ್ಲೈಮು ಮಾಡಿದ್ದರು. ಬೆಳೆಗಳ ವಿಮಾ ಕಂಪನಿಯಿಂದ ವಿಮೆಯ ಹಣ ಬಂದಿದೆ. ಆದರೂ ಹಳ್ಳಿಕೇರಿ ಗ್ರಾಮ ಪಂಚಾಯ್ತಿ ರೈತರ ಖಾತೆಗಳಿಗೆ ಬೆಳೆ ವಿಮೆ ಇನ್ನೂ ಜಮೆಯಾಗಿಲ್ಲ ಎಂದು ರೈತರು 2026ರ ಸೆ.1ರಂದೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು.

ಬೆಳೆ ವಿಮೆ ಕಂಪನಿಗಳಿಂದ ಹಣ ಬಂದಿದ್ದರೂ ಸಹ ರೈತರ ಖಾತೆಗಳಿಗೆ ಹಣವೇಕೆ ಜಮೆಯಾಗಿಲ್ಲ ಎಂದು ಪ್ರಶ್ನಿಸಿರುವ ರೈತರು ಇದಕ್ಕೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಹೀಗಾಗಿ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ರೈತರು ಕೋರಿರುವುದು ತಿಳಿದು ಬಂದಿದೆ.
‘2025-26ನೇ ಸಾಲಿನ ಹಿಂಗಾರು ಹಂಗಾಮಿನ ವಿಮೆಯು ಕೂಡಾ ನಮ್ಮ ಹಳ್ಳಿಕೇರಿ ಖುಷ್ಕಿ ಬೇಸಾಯಕ್ಕೆ ಸೇರಿದೆ. ನೀರಾವರಿ ಪ್ರದೇಶದಲ್ಲಿ ಕಡಲೆ ಬೆಳೆಯು ಶೇ. 61ರಷ್ಟು ನಷ್ಟವಾಗಿದೆ. ಇದೇ ಪ್ರಮಾಣದಲ್ಲಿ ವಿಮೆ ಹಣಕ್ಕಾಗಿ ಕ್ಲೈಮ್ ಮಾಡಲಾಗಿದೆ. ಈಗಾಗಲೇ ತೀವ್ರ ಬರಗಾಲದಿಂದ ತತ್ತರಿಸಿರುವ ನಮಗೆ ವಿಮಾ ಕಂಪನಿಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ,’ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿರುವುದು ಗೊತ್ತಾಗಿದೆ.
2026ರ ಸೆ.1ರಂದು ರೈತರು ಸಹಿ ಮಾಡಿದ್ದ ಪತ್ರವು ಮುಖ್ಯಮಂತ್ರಿ ಕಚೇರಿಯು ಸೆ. 18ರಂದು ನೋಂದಾಯಿಸಿಕೊಂಡಿದೆ. ಈ ಪತ್ರವನ್ನು ಮುಖ್ಯಮಂತ್ರಿಗಳ ಕಚೇರಿಯು ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಕ್ತ ಕ್ರಮಕ್ಕಾಗಿ ವರ್ಗಾಯಿಸಿತ್ತು. ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2026ರ ಸೆ.23ರಂದು ಕೃಷಿ ಆಯುಕ್ತಾಲಯದ ಆಯುಕ್ತರಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಸೂಚಿಸಿರುವುದು ತಿಳಿದು ಬಂದಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನನಲ್ಲಿ ಕಲ್ಬುರ್ಗಿ ಜಿಲ್ಲೆಯ ಅಳಂದ ತಾಲೂಕಿನಲ್ಲಿಯೂ 77,866 ಪ್ರಕರಣಗಳು ನೋಂದಣಿಯಾಗಿದ್ದವು. ಈ ತಾಲೂಕಿನ ಕೃಷಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 8 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ರೈತರಿಗೆ ಅತ್ಯಂತ ಕಡಿಮೆ ಬೆಳೆ ವಿಮೆ ಪರಿಹಾರ ಪಾವತಿಯಾಗಿತ್ತು ಎಂದು ಖುದ್ದು ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಅವರು 2026ರ ಆಗಸ್ಟ್ 21ರಂದು ವಿಧಾನಸಭೆಗೆ ಚುಕ್ಕೆ ಗುರುತಿಲ್ಲದ ಪ್ರಶ್ನೆಯಲ್ಲಿ ಗಮನ ಸೆಳೆದಿದ್ದರು.
ಇದಕ್ಕೆ ಉತ್ತರಿಸಿದ್ದ ಸಚಿವ ಪಿ ಎಂ ನರೇಂದ್ರಸ್ವಾಮಿ ಅವರು ಈ ತಾಲೂಕಿನಲ್ಲಿ ಮಧ್ಯಂತರ ಬೆಳೆ ವಿಮೆ ಪರಿಹಾರ ಅಡಿಯಲ್ಲಿ 60.5 ಕೋಟಿ, ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ ಅಡಿಯಲ್ಲಿ 0.88 ಕೋಟಿ ರು, ಬೆಲೆ ಕಟಾವು ಪ್ರಯೋಗದ ಅಂತಿಮ ಇಳುವರಿ ಆಧಾರದ ಮೇಲೆ 121.07 ಕೊಟಿ ಸೇರಿ ಒಟ್ಟಾರೆಯಾಗಿ 182.60 ಕೋಟಿ ರು ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಸದನಕ್ಕೆ ವಿವರಿಸಿದ್ದರು.

ಮಧ್ಯಂತರ ಬೆಳೆ ವಿಮೆ ಪರಿಹಾರದಡಿ ಹಾಗೂ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ ಯೋಜನೆಯ ಮಾರ್ಗಸೂಚಿಗಳ ಅನ್ವಯ ಇತ್ಯರ್ಥಪಡಿಸಲಾದ ಬೆಳೆ ವಿಮೆ ಪರಿಹಾರ ಮೊತ್ತವು ಬೆಳೆ ಕಟಾವು ಪ್ರಯೋಗದ ಅಂತಿಮ ಇಳುವರಿ ಆಧಾರದ ಮೇಲೆ ಮಂಜೂರಾದ ಪರಿಹಾರ ಮೊತ್ತಕ್ಕಿಂತ ಹೆಚ್ಚಾಗಿರುವುದರಿಂದ ಪಾವತಿಸಲು ವ್ಯತ್ಯಾಸದ ಮೊತ್ತವಿರುವುದಿಲ್ಲ ಎಂದು ಸಚಿವ ನರೇಂದ್ರಸ್ವಾಮಿ ಅವರು ಉತ್ತರದಲ್ಲಿ ವಿವರಿಸಿದ್ದರು.
ಅಲ್ಲದೇ ಮಧ್ಯಂತರ ಬೆಳೆ ವಿಮೆ ಪರಿಹಾರದಡಿ ಪಾವತಿಸಲಾದ ಮೊತ್ತಕ್ಕಿಂತ ಸಿಸಿಇ ಆಧಾರದ ಮೇಲೆ ಲೆಕ್ಕಹಾಕಲಾದ ಬೆಳೆ ವಿಮೆ ಪರಿಹಾರದ ಮೊತ್ತವು ಕಡಿಮೆಯಿದ್ದಲ್ಲಿ ಹೆಚ್ಚುವರಿಯಾಗಿ ಪಾವತಿಸಲಾದ ಪರಿಹಾರ ಮೊತ್ತವನ್ನು ರೈತರಿಂದ ಹಿಂಪಡೆಯಲಾಗುವುದಿಲ್ಲ ಎಂದು ಹೇಳಿದ್ದರು. ಹಾಗೆಯೇ ರಾಜ್ಯದಲ್ಲಿಲ ಕಲ್ಬುರ್ಗಿ ಜಿಲ್ಲೆಗೆ ಅತೀ ಹೆಚ್ಚು ಬೆಳೆ ವಿಮೆ ಪರಿಹಾರ ಮಂಜರಾಗಿದೆ. ಹಾಗೂ ಕಲ್ಬುರ್ಗಿ ಜಿಲ್ಲೆಯ ಅಳಂದ ತಾಲೂಕಿನ ಅತೀ ಹೆಚ್ಚು ಪರಿಹಾರ ಮಂಜೂರಾಗಿದೆ. ತಾಲೂಕು ಕೃಷಿ ಅಧಿಕಾರಿಗಳ ಯಾವುದೇ ನಿರ್ಲಕ್ಷ್ಯ ಇಲ್ಲ ಎಂದು ಅಧಿಕಾರಿಗಳನ್ನು ಸಚಿವ ನರೇಂದ್ರಸ್ವಾಮಿ ಅವರು ಸಮರ್ಥಿಸಿಕೊಂಡಿದ್ದರು.
ಅದೇ ರೀತಿ ಅಳಂದ ತಾಲೂಕಿನ ಖಜೂರಿ ಗ್ರಾಮ ಪಂಚಾಯ್ತಿ ವಿಮಾ ಘಟಕದಲ್ಲಿ ಬೆಳೆ ಕಟಾವು ಪ್ರಯೋಗಗಳಿಂದ ಬಂದಂತಹ ಅಂತಿಮ ಇಳುವರಿ ಅಧಾರದ ಮೇಲೆ ಶೇ.1.5640ರಷ್ಟು ಇಳುವರಿ ಕೊರತೆ ಇದೆ. ಈ ಗ್ರಾಮ ಪಂಚಾಯ್ತಿಯಲ್ಲಿ ಮಾರ್ಗಸೂಚಿ ಅನ್ವಯ ಮಧ್ಯಂತರ ಬೆಳೆ ವಿಮೆ ಪರಿಹಾರದಡಿ ಇತ್ಯರ್ಥಪಡಿಸಲಾದ 94.60 ಲಕ್ಷ ಮೊತ್ತವು ಬೆಳೆ ಕಟಾವು ಪ್ರಯೋಗದ ಅಂತಿಮ ಇಳುವರಿ ಆಧಾರದ ಮೇಲೆ ಮಂಜೂರಾದ 10.38 ಲಕ್ಷ ರು. ಮೊತ್ತಕ್ಕಿಂತ ಹೆಚ್ಚಾಗಿರುವ ಕಾರಣ ಸಿಸಿಇ ಆಧಾರದ ಮೇಲೆ ಪಾವತಿಸಲು ವ್ಯತ್ಯಾಸದ ಮೊತ್ತವಿರುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ರಾಜ್ಯದ ಎಲ್ಲಾ ರೈತರ ತಾಕುಗಳ ಬೆಳೆ ಮಾಹಿತಿ ದಾಖಲಿಸುವ ಸಲುವಾಗಿ ಆದ್ಯತೆ ಮೇರೆಗೆ ಪ್ರಥಮವಾಗಿ ಸ್ವತಃ ರೈತರೇ ಬೆಳೆ ಸಮೀಕ್ಷೆ ರೈತರ ಆಪ್ನಲ್ಲಿ ಬೆಳೆ ಮಾಹಿತಿ ನಮೂದಿಸಲು ಅವಕಾಶ ಕಲ್ಪಿಸಿದೆ. ಸಕಾಲದಲ್ಲಿ ರೈತರು ಬೆಳೆ ಸಮೀಕ್ಷೆ ಮಾಡದೇ ಇದ್ದಲ್ಲಿ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
ದಟ್ಟ ಅರಣ್ಯ ಹಾಗೂ ಅಭಯಾರಣ್ಯ ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳುತ್ತಿಲ್ಲ. ಅಭಯಾರಣ್ಯ ಪ್ರದೇಶಗಳ ಅಂಚಿನ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ತೊಂದರೆಯಾಗಿರುವ ಕುರಿತು ಈವರೆಗೆ ವರದಿಯಾಗಿಲ್ಲ. ಅಂತಹ ಸನ್ನಿವೇಶವಿದ್ದರೂ ರೈತರು ಸ್ವತಃ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು ಎಂದು ಸರ್ಕಾರವೇ ಹೇಳಿತ್ತು.
ಆಧಾರ್ ಜೋಡಣೆಯಲ್ಲಿನ ಲೋಪವೂ ಸೇರಿದಂತೆ ಇನ್ನಿತರೆ ತಾಂತ್ರಿಕ ದೋಷಗಳಿಂದಾಗಿ ಕಳೆದ 3 ವರ್ಷದಿಂದಲೂ ರಾಜ್ಯದ 10,053 ರೈತರಿಗೆ 9.68 ಕೋಟಿ ರು. ಮೊತ್ತದ ಬೆಳೆ ವಿಮೆ ಪರಿಹಾರದ ಮೊತ್ತವೇ ಜಮೆಯಾಗಿಲ್ಲ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಹಿಂದಿನ ಸಾಲುಗಳಲ್ಲಿ ಬಾಕಿ ಇರುವ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವೈಫಲ್ಯಗಳದ್ದೇ ಮೇಲುಗೈಯಾಗಿತ್ತು.
ಬಾಕಿ ಇರುವ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಸಂಬಂಧ ಕೃಷಿ ಇಲಾಖೆಯು ಆಯುಕ್ತರು ಮತ್ತು ಕಂದಾಯ ಇಲಾಖೆ ಆಯುಕ್ತರು, ಬ್ಯಾಂಕ್, ವಿಮೆ ಕಂಪನಿಗಳ ನಡುವಿನ ಸಮನ್ವಯತೆಯಲ್ಲಿ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಬೆಳೆ ವಿಮೆ ಪರಿಹಾರ ಮೊತ್ತ ಪಾವತಿ ಸಂಬಂಧ ಕೃಷಿ ಇಲಾಖೆ ಆಯುಕ್ತ ವೈ ಎಸ್ ಪಾಟೀಲ್ ಅವರು 2023ರ ಸೆ.22ರಂದು ಕಂದಾಯ ಇಲಾಖೆ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದರು.
10,053 ರೈತರಿಗೆ ಪಾವತಿಯಾಗಿಲ್ಲ ಬೆಳೆ ವಿಮೆ ಪರಿಹಾರ; ಮೂರು ವರ್ಷದಿಂದ 9.68 ಕೋಟಿ ರು.ಬಾಕಿ
ಕಂದಾಯ ಇಲಾಖೆಯಡಿ ಬರುವ ಗ್ರಾಮ್ ಒನ್ ಸೆಂಟರ್, ಬಾಪೂಜಿ ಸೇವಾ ಕೇಂದ್ರಗಳು ಇತ್ಯಾದಿಗಳ ಸೇವೆಗಳನ್ನು ಬಳಸಿಕೊಂಡು ಬಾಕಿ ಇರುವ ಪ್ರತಿ ರೈತರಿಗೆ ವಿಮೆ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಬೇಕಿದ್ದ ಕಂದಾಯ ಇಲಾಖೆಯ ಬೇಜವಾಬ್ದಾರಿ ಇರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
‘ಎಲ್ಲಾ ಜಿಲ್ಲೆಗಳ ಬ್ಯಾಂಕ್ ಹಾಗೂ ವಿಮಾ ಸಂಸ್ಥೆಗಳೊಂದಿಗೆ ಸತತವಾಗಿ ಪ್ರಯತ್ನಿಸಿ, ಬಾಕಿ ಮೊತ್ತ ಪಾವತಿಸಲು ಕ್ರಮವಹಿಸಲಾಗಿದೆ. ಆದಾಗ್ಯೂ 2019-20ರಿಂದ 2022ರ ಮುಂಗಾರು ಹಂಗಾಮಿನವರೆಗೆ 10.053 ರೈತರಿಗೆ 9.68 ಕೋಟಿ ರು. ಮೊತ್ತದ ಬೆಳೆವಿಮೆ ಪರಿಹಾರ ಪಾವತಿಸಲು ಬಾಕಿ ಇದೆ,’ ಎಂದು ಕೃಷಿ ಇಲಾಖೆ ಆಯುಕ್ತ ವೈ ಎಸ್ ಪಾಟೀಲ್ ಅವರು ಬರೆದಿರುವ ಪತ್ರದಲ್ಲಿ ವಿವರಿಸಲಾಗಿತ್ತು.

2019-20ನೇ ಸಾಲಿನಿಂದ ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸಂರಕ್ಷಣೆ ಪೋರ್ಟಲ್ ತಂತ್ರಾಂಶ ಅನುಷ್ಠಾನಗೊಳಿಸಲಾಗಿತ್ತು. ರೈತರ ಖಾತೆಗೆ ಆಧಾರ್ ಆಧಾರಿತ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣವೂ ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ 2019-20ನೇ ಸಾಲಿನಿಂದ ರಾಜ್ಯದಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತವು ರೈತರ ಬ್ಯಾಂಕ್ ಖಾತೆಗೆ ಜಮೆಯಾಗದೇ ಬಾಕಿ ಇದೆ ಎಂದ ಪತ್ರದಲ್ಲಿ ವಿವರಿಸಿದ್ದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ಇಳುವರಿ ಹಾಗೂ ಕ್ಷೇತ್ರ ಆಧಾರಿತ ಯೋಜನೆಯಾಗಿದೆ. ಅರ್ಜಿ ಸಲ್ಲಿಸುವುದರಿಂದ ಬೆಳೆ ಕಟಾವು ಪ್ರಯೋಗ ಹಾಗೂ ವಿಮಾ ಪರಿಹಾರ ಮೊತ್ತವನ್ನು ಅರ್ಹ ರೈತರ ಖಾತೆಗೆ ಜಮೆಯಾಗುವವರೆಗೆ ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ಸಂರಕ್ಷಣೆ ಪೋರ್ಟಲ್ ಮೂಲಕ ಮಾಡಲಾಗುತ್ತಿದೆ ಎಂದು ಸರ್ಕಾರವು ಹೆಮ್ಮೆಯಿಂದ ಬೀಗಿತ್ತು.
ಬೆಳೆ ವಿಮೆ ವಂಚನೆಗಳು ನಿರಂತರವಾಗಿ ವರದಿಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇದೆ. ರಾಜ್ಯ ಕೆಲವು ಜಿಲ್ಲೆಗಳ ರೈತರು ಇಳುವರಿ ಮೌಲ್ಯಮಾಪನವನ್ನು ನಿರ್ವಹಿಸುವ ಅಧಿಕಾರಿಗಳಿಗೆ ವಿಮೆ ಮೊತ್ತವನ್ನು ಪಾವತಿಸುತ್ತಾರೆ.
ಕೃಷಿ ವೆಚ್ಚವನ್ನು ಪೂರೈಸಲು ಮತ್ತು ದುಡಿಯುವ ಬಂಡವಾಳಕ್ಕಾಗಿ ರೈತರು ಸಾಲವನ್ನು ಪಡೆಯುತ್ತಾರೆ. ಅಲ್ಲದೇ ಬರ, ಪ್ರವಾಹ ಅಥವಾ ಇತ್ತೀಚೆಗೆ ಕಂಡುಬಂದಂತೆ ಅಕಾಲಿಕ ಮಳೆ ಬೆಳೆ ಹಾನಿಯಿಂದಾಗಿ ನಷ್ಟಕ್ಕೀಡಾಗುವ ರೈತರೂ ಸಾಲಕ್ಕೆ ಮೊರೆ ಹೋಗುತ್ತಾರೆ.
‘ರೈತ ಸಾಲ ಮರುಪಾವತಿಸಲು ಸಾಧ್ಯವಿಲ್ಲ, ಇದರ ಪರಿಣಾಮವಾಗಿ ವಿಮಾ ಕಂತುಗಳನ್ನು ಪಾವತಿಸಲಾಗುವುದಿಲ್ಲ. ಹೀಗಾಗಿ ವಿಮೆ ವ್ಯರ್ಥವಾಗುತ್ತದೆ. ರೈತ ಹಿಂದಿನ ಸಾಲವನ್ನು ತೀರಿಸಲು ಲೇವಾದೇವಿಗಾರನಿಂದ ಸಾಲವನ್ನು ತೆಗೆದುಕೊಳ್ಳುತ್ತಾನೆ. ಸಾಲಗಾರನು ಡೀಫಾಲ್ಟ್ ಸಂದರ್ಭದಲ್ಲಿ ಬೆದರಿಕೆ ತಾಳಲಾರದೇ ಅನೇಕ ಬಾರಿ ಅವಮಾನದಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ,’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಯೊಬ್ಬರು.




