ಬೆಂಗಳೂರು: ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 5.64 ಕೋಟಿಗೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಹೀಗಾಗಿ
ನ್ಯಾಯಾಲಯದ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇವುಗಳಲ್ಲಿ ಲಕ್ಷಾಂತರ ಪ್ರಕರಣಗಳು ಐದು ವರ್ಷಕ್ಕಿಂತಲೂ ಹೆಚ್ಚು ಕಾಲ
ಮತ್ತು ಸಾವಿರಾರು ಪ್ರಕರಣಗಳು 20 ರಿಂದ 30 ವರ್ಷಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಕಾಯುತ್ತಿವೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ನೀಡಿದ ಲಿಖಿತ ಉತ್ತರದಲ್ಲಿ ಈ ಅಂಕಿ- ಅಂಶಗಳು ಬಹಿರಂಗಗೊಂಡಿವೆ.
ರಾಜ್ಯಸಭೆಯ ಸದಸ್ಯ ದಿಲೀಪ್ ಕುಮಾರ್ ರಾಯ್ ಕೇಳಿದ ಪ್ರಶ್ನೆಗೆ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ
ಹೊಣೆ) ಅರ್ಜುನ್ ರಾಮ್ ಮೇಘವಾಲ್ ಉತ್ತರ ನೀಡಿದ್ದು, 2026ರ ಜುಲೈ 16ರ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲ
(NJDG) ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ಪ್ರಕಟಿಸಿದೆ.
ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ,ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿ ಒಟ್ಟು 64,72,536 ಪ್ರಕರಣಗಳು
ಬಾಕಿಯಿವೆ. ದೇಶದ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 4,98,45,538 ಪ್ರಕರಣಗಳು ಬಾಕಿಯಿವೆ. ಇದರಿಂದ ದೇಶದಾದ್ಯಂತ ಒಟ್ಟು
5,63,18,074 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿರುವುದು ಉತ್ತರದಿಂದ ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್‌ನಲ್ಲೂ ಹೆಚ್ಚುತ್ತಿರುವ ಬಾಕಿ
ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟು 96,024 ಪ್ರಕರಣಗಳು ಬಾಕಿಯಿದ್ದು,30 ವರ್ಷಕ್ಕಿಂತ ಹಳೆಯದಾದ 26 ಪ್ರಕರಣಗಳು, 20
ವರ್ಷಕ್ಕಿಂತ ಹೆಚ್ಚುಅವಧಿಯ – 558 ಪ್ರಕರಣಗಳು ಬಾಕಿ ಇವೆ ಎಂಬುದು ನ್ಯಾಯಾಂಗ ವ್ಯವಸ್ಥೆಯ ವಿಳಂಬ ದ್ರೋಹಕ್ಕೆ ಹಿಡಿದ
ಕೈಗನ್ನಡಿಯಾಗಿದೆ. ಕಳೆದ 10 ವರ್ಷಕ್ಕಿಂತ ಹೆಚ್ಚು ಹಳೆಯದಾದ 10,094 ಪ್ರಕರಣಗಳು, 5 ವರ್ಷಕ್ಕಿಂತ ಹೆಚ್ಚಿನ 24,611, ಕಳೆದ ಒಂದು ವರ್ಷದಿಂದ 49,248 ಪ್ರಕರಣಗಳು ವಿಚಾರಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದು ಗೊತ್ತಾಗಿದೆ.

ಕರ್ನಾಟಕ ಹೈಕೋರ್ಟಿನಲ್ಲಿ ಬಾಕಿ ಎಷ್ಟಿದೆ?
ಕರ್ನಾಟಕ ಹೈಕೋರ್ಟ್‌ನಲ್ಲಿ ಒಟ್ಟು 3,37,159 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಅವುಗಳಲ್ಲಿ 2,49,161 ಪ್ರಕರಣಗಳು ಒಂದು ವರ್ಷಗಳಿಂದಲೂ ಬಾಕಿ ಇವೆ. 30 ವರ್ಷಗಳಿಂದಲೂ 44 ಪ್ರಕರಣಗಳು, 20 ವರ್ಷಗಳಿಂದ 569 ಪ್ರಕರಣಗಳು ಬಾಕಿಯಿವೆ. ಕಳೆದ 10 ವರ್ಷಗಳಿಂದ 22,221 ಪ್ರಕರಣ ಮತ್ತು ಕಳೆದ 5 ವರ್ಷಗಳಿಂದ 78,333 ಪ್ರಕರಣಗಳು ಬಾಕಿ ಇರುವುದು ತಿಳಿದು ಬಂದಿದೆ.
ಜಿಲ್ಲಾ ನ್ಯಾಯಾಲಯಗಳಲ್ಲಿ 23 ಲಕ್ಷ ಪ್ರಕರಣಗಳು
ದೇಶದ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 4,98,45,538 ಪ್ರಕರಣಗಳು ಬಾಕಿಯಿವೆ. ಇವುಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಬಿಹಾರ, ಪಶ್ಚಿಮಬಂಗಾಲ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಇವೆ. ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಒಂದು ಕೋಟಿ ಪ್ರಕರಣಗಳು ವಿಚಾರಣೆಗ ಬಾಕಿ ಇವೆ. ಮಹಾರಾಷ್ಟ್ರದಲ್ಲಿ 61 ಲಕ್ಷ, ಪಶ್ಚಿಮಬಂಗಾಲದಲ್ಲಿ 41 ಲಕ್ಷ, ಬಿಹಾರದಲ್ಲಿ 37 ಲಕ್ಷ, ರಾಜಸ್ತಾನ 27 ಲಕ್ಷ ಮತ್ತು ತಮಿಳುನಾಡು ರಾಜ್ಯದಲ್ಲಿ 18 ಲಕ್ಷ ಪ್ರಕರಣಗಳು ಬಾಕಿ ಇವೆ.

ಕರ್ನಾಟಕದ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 23,21,907 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳಲ್ಲಿ, 10 ವರ್ಷಕ್ಕಿಂತ ಹೆಚ್ಚಿನ ಅವಧಿಯ 99,539 ಪ್ರಕರಣಗಳು, 5 ವರ್ಷಕ್ಕಿಂತ ಹೆಚ್ಚು ಅವಧಿಯ 4,30,706 ಪ್ರಕರಣಗಳು, ಕಳೆದ ಒಂದು ವರ್ಷಗಳಿಂದ 15,72,808 ಪ್ರಕರಣಗಳು ಧೂಳು ತಿನ್ನುತ್ತಿವೆ. ನ್ಯಾಯಾಲಯಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ 206 ಪ್ರಕರಣ, 20 ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಾಕಿಯಾದ 3,848 ಪ್ರಕರಣಗಳು ನಮ್ಮ ರಾಜ್ಯದಲ್ಲಿವೆ.
ಹೆಚ್ಚು ಬಾಕಿ ಪ್ರಕರಣಗಳಿರುವ ರಾಜ್ಯಗಳು
ಉತ್ತರ ಪ್ರದೇಶ – 1,19,46,397, ಮಹಾರಾಷ್ಟ್ರ – 61,80,192, ಪಶ್ಚಿಮ ಬಂಗಾಳ – 41,04,641, ಬಿಹಾರ – 37,62,813, ರಾಜಸ್ಥಾನ – 27,45,299, ಕರ್ನಾಟಕದ ಜಿಲ್ಲಾ ಅಧೀನ ನ್ಯಾಯಾಲಯಗಳಲ್ಲಿ 23,21,907 ಪ್ರಕರಣಗಳು ಬಾಕಿ ಇವೆ.
ದೇಶದ ಹೈಕೋರ್ಟ್ಗಳಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಅತೀ ಹೆಚ್ಚು ಅಂದರೆ 12,28,353 ಪ್ರಕರಣಗಳು ಬಾಕಿ ಇವೆ. ಹೈಕೋರ್ಟ್‌ಗಳಲ್ಲಿ ಅತಿ ಹೆಚ್ಚು ಬಾಕಿ ಇವೆ. ರಾಜಸ್ಥಾನ ಹೈಕೋರ್ಟ್ ನಲ್ಲಿ6,96,348 ಮತ್ತು ಬಾಂಬೆ ಹೈಕೋರ್ಟ್ ನಲ್ಲಿ 6,57,813 ಪ್ರಕಣಗಳು, ಕರ್ನಾಟಕ ಹೈಕೋರ್ಟ್ ನಲ್ಲಿ 3 ಲಕ್ಷ ಪ್ರಕರಣಗಳು ಬಾಕಿ ಇವೆ.
ದೇಶದ ಹೈಕೋರ್ಟ್‌ಗಳಲ್ಲಿ ಬಾಕಿ ಪ್ರಕರಣಗಳು
ಅಲಹಾಬಾದ್ ಹೈಕೋರ್ಟ್ – 12,28,353, ರಾಜಸ್ಥಾನ ಹೈಕೋರ್ಟ್ – 6,96,348, ಬಾಂಬೆ ಹೈಕೋರ್ಟ್ – 6,57,813, ಮದ್ರಾಸ್ ಹೈಕೋರ್ಟ್ – 5,67,814, ಮಧ್ಯಪ್ರದೇಶ ಹೈಕೋರ್ಟ್ – 4,90,363 ಕರ್ನಾಟಕ ಹೈಕೋರ್ಟ್ – 3,37,159 ಬಾಕಿ ಇವೆ.
ಬಾಕಿ ಪ್ರಕರಣ ವಿಲೇವಾರಿ ಕ್ರಮಗಳು
ಪ್ರಕರಣಗಳ ಇತ್ಯರ್ಥ ನ್ಯಾಯಾಂಗದ ವ್ಯಾಪ್ತಿಗೆ ಸೇರಿದ್ದರೂ, ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಲವು
ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. 7,210 ಕೋಟಿ ರೂಪಾಯಿ ವೆಚ್ಚದ ಇ-ಕೋರ್ಟ್ ಹಂತ–III ಯೋಜನೆ (2023–2027) ಜಾರಿಯಲ್ಲಿದೆ. ದೇಶದ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 775 ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು, ಅವುಗಳಲ್ಲಿ 398 ವಿಶೇಷ POCSO ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ 3,87,481 ಪ್ರಕರಣಗಳನ್ನು ಇತ್ಯರ್ಥಪಡಿಸಿವೆ.
ಎಲ್ಲಾ 25 ಹೈಕೋರ್ಟ್‌ಗಳಲ್ಲಿ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಐದು ವರ್ಷಕ್ಕಿಂತ ಹಳೆಯ ಪ್ರಕರಣಗಳ ನಿವಾರಣೆಗೆ ಬಾಕಿ
ಪ್ರಕರಣಗಳ ವಿಲೇವಾರಿಗೆ ಸಮಿತಿಗಳನ್ನು ರಚಿಸಲಾಗಿದೆ. ಹೊಸ ಕ್ರಿಮಿನಲ್ ಕಾನೂನುಗಳು–2023, ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ಸ್ ತಿದ್ದುಪಡಿ ಕಾಯ್ದೆ, ವಾಣಿಜ್ಯ ನ್ಯಾಯಾಲಯಗಳ ತಿದ್ದುಪಡಿ ಕಾಯ್ದೆ ಮತ್ತು ಸ್ಪೆಸಿಫಿಕ್ ರಿಲೀಫ್ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ.
ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆ ಹಾಗೂ ಲೋಕ ಅದಾಲತ್‌ಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ ಎಂದು ತಿಳಿಸಲಾಗಿದೆ.
ದೇಶದ ನ್ಯಾಯಾಂಗದಲ್ಲಿ ಬಾಕಿ ಪ್ರಕರಣಗಳ ಪ್ರಮಾಣ ಇನ್ನೂ ಗಂಭೀರ ಸವಾಲಾಗಿಯೇ ಉಳಿದಿದೆ. ವಿಶೇಷವಾಗಿ ಜಿಲ್ಲಾ
ನ್ಯಾಯಾಲಯಗಳಲ್ಲೇ ಸುಮಾರು ಐದು ಕೋಟಿ ಪ್ರಕರಣಗಳು ಬಾಕಿ ಇರುವುದರಿಂದ ಸಾಮಾನ್ಯ ನಾಗರಿಕರಿಗೆ ತ್ವರಿತ ನ್ಯಾಯ
ದೊರಕುವುದು ಕಷ್ಟಕರವಾಗಿದೆ. ತಂತ್ರಜ್ಞಾನ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು ಹಾಗೂ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳ
ಮೂಲಕ ಪ್ರಕರಣಗಳ ಇತ್ಯರ್ಥದ ವೇಗ ಹೆಚ್ಚಿಸುವುದು ಮುಂದಿನ ದಿನಗಳಲ್ಲಿ ಅತ್ಯಂತ ಮಹತ್ವದ ಅಗತ್ಯವಾಗಿದೆ ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವುದು ಕೂಡ ಕಳವಳಕಾರಿ ಅಂಶವಾಗಿದೆ. ದೇಶದ ನಾನಾ ಹೈಕೋರ್ಟ್‌ಗಳಲ್ಲಿ 341 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಕರ್ನಾಟಕ ಹೈಕೋರ್ಟ್ನಲ್ಲಿ 14 ಹುದ್ದೆಗಳು
ಭರ್ತಿಯಾಗದೆ ಉಳಿದಿವೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ವಿಳಂಬದ ಬಗ್ಗೆ ರಾಜ್ಯಸಭೆಯಲ್ಲಿ ಕೇಳಲಾದ ಪ್ರತ್ಯೇತ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ದೇಶದ ವಿವಿಧ ಹೈಕೋರ್ಟ್ಗಳಲ್ಲಿ ನ್ಯಾಯಮೂರ್ತಿಗಳ ಕೊರತೆ ಮುಂದುವರಿದಿದ್ದು, 2026ರ ಜುಲೈ 1ರ ವೇಳೆಗೆ ಒಟ್ಟು 341 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಉಳಿದಿವೆ.
ಮಂಜೂರಾದ 1,122 ಹುದ್ದೆಗಳ ಪೈಕಿ ಕೇವಲ 781 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಸುಮಾರು ಮೂರನೇ
ಒಂದು ಭಾಗದ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ಇದರಿಂದ ನ್ಯಾಯಾಂಗದ ಮೇಲಿನ ಒತ್ತಡ ಹೆಚ್ಚುವ ಜೊತೆಗೆ ಪ್ರಕರಣಗಳ ತ್ವರಿತ
ವಿಲೇವಾರಿಗೂ ಅಡ್ಡಿಯಾಗುತ್ತಿದೆ. ಈ ಮಾಹಿತಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಲಿಖಿತ ಉತ್ತರದಲ್ಲಿ ಬಹಿರಂಗಗೊಂಡಿದೆ.
ಕರ್ನಾಟಕದಲ್ಲಿ 14 ನ್ಯಾಯಮೂರ್ತಿಗಳ ಕೊರತೆ
ಸಚಿವರು ನೀಡಿದ ಮಾಹಿತಿಯ ಪ್ರಕಾರ, ಕರ್ನಾಟಕ ಹೈಕೋರ್ಟ್ಗೆ 62 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾಗಿವೆ. ಆದರೆ ಪ್ರಸ್ತುತ
ಕೇವಲ 48 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದು, 14 ಹುದ್ದೆಗಳು ಖಾಲಿ ಇವೆ. ದೇಶದ ಹೈಕೋರ್ಟ್ಗಳಲ್ಲಿ ಅಲಹಾಬಾದ್ ಹೈಕೋರ್ಟ್ನಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳಿದ್ದು, 160 ಹುದ್ದೆಗಳು, ಮಂಜೂರಾಗಿದೆ. ಈ ಪೈಕಿ 52 ಹುದ್ದೆಗಳು ಖಾಲಿ ಇವೆ
ಪ್ರಮುಖ ಹೈಕೋರ್ಟ್‌ಗಳ ಖಾಲಿ ಹುದ್ದೆಗಳು
ಅಲಹಾಬಾದ್ – 52, ಕಲ್ಕತ್ತಾ – 31, ಪಂಜಾಬ್ ಮತ್ತು ಹರಿಯಾಣ – 30, ಮದ್ರಾಸ್ – 24, ಬಾಂಬೆ – 19, ಗುಜರಾತ್ – 18, ದೆಹಲಿ – 16
ಮಧ್ಯಪ್ರದೇಶ – 16 ಒಡಿಶಾ – 15, ತೆಲಂಗಾಣ – 15, ಕರ್ನಾಟಕ ಹೈಕೋರ್ಟ್ನಲ್ಲಿ 14 ಹುದ್ದೆಗಳು ಖಾಲಿ ಇವೆ.

ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಕೇಂದ್ರ ಸರ್ಕಾರದ ಉತ್ತರದ ಪ್ರಕಾರ, ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಸಂವಿಧಾನದ 217 ಮತ್ತು 224ನೇ ವಿಧಿಗಳ
ಅಡಿಯಲ್ಲಿ ನಡೆಯುತ್ತದೆ. 1998ರ ಮೆಮೊರಾಂಡಂ ಆಫ್ ಪ್ರೊಸೀಜರ್ (MoP) ಅನುಸಾರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಆಯಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು
ತಮ್ಮ ಹಿರಿಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ ಸಿದ್ಧಪಡಿಸುತ್ತಾರೆ. ಬಳಿಕ ರಾಜ್ಯ ಸರ್ಕಾರದ ಅಭಿಪ್ರಾಯ, ಕೇಂದ್ರ
ಸರ್ಕಾರದ ಪರಿಶೀಲನೆ ಹಾಗೂ ಅಂತಿಮವಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸಿನ ನಂತರವೇ ನೇಮಕಾತಿ ನಡೆಯುತ್ತದೆ.
ಶಿಫಾರಸುಗಳಲ್ಲಿ ವಿಳಂಬ
ಖಾಲಿ ಹುದ್ದೆ ಉಂಟಾಗುವ ಕನಿಷ್ಠ ಆರು ತಿಂಗಳ ಮುಂಚಿತವಾಗಿಯೇ ಹೈಕೋರ್ಟ್ಗಳು ನೇಮಕಾತಿಗೆ ಶಿಫಾರಸು ಸಲ್ಲಿಸಬೇಕು ಎಂದು
ನಿಯಮ ಹೇಳುತ್ತದೆ. ಆದರೆ ಈ ಕಾಲಮಿತಿಯನ್ನು ಬಹುತೇಕ ಸಂದರ್ಭಗಳಲ್ಲಿ ಪಾಲಿಸಲಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರವು
ಉತ್ತರದಲ್ಲಿ ಈ ಮಹತ್ವದ ಅಂಶವನ್ನು ಉಲ್ಲೇಖಿಸಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗುತ್ತಿದೆ ಎಂದೂ
ತಿಳಿಸಿದೆ.
ನ್ಯಾಯಮೂರ್ತಿಗಳ ನೇಮಕಾತಿ ಕೇವಲ ಕೇಂದ್ರ ಸರ್ಕಾರದ ನಿರ್ಧಾರವಲ್ಲ. ಇದು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ
ನಿರಂತರ, ಸಮಗ್ರ ಹಾಗೂ ಸಹಯೋಗದ ಪ್ರಕ್ರಿಯೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಹೈಕೋರ್ಟ್ ಕೊಲಿಜಿಯಂ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂ ಸೇರಿದಂತೆ ಹಲವು ಸಾಂವಿಧಾನಿಕ ಸಂಸ್ಥೆಗಳ ಹಂತ ಹಂತದ ಅನುಮೋದನೆಯ ಬಳಿಕವೇ ನ್ಯಾಯಮೂರ್ತಿಗಳ ನೇಮಕಾತಿ ಸಾಧ್ಯವಾಗುತ್ತದೆ ಎಂದು ಉತ್ತರದಲ್ಲಿ ವಿವರಿಸಲಾಗಿದೆ.
ನಿವೃತ್ತ ಅಥವಾ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕ?
ನಿವೃತ್ತ ಅಥವಾ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಅಥವಾ
ನ್ಯಾಯಮೂರ್ತಿಗಳಾಗಿ ನೇಮಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಕಾನೂನು ಸಚಿವರು, ಪ್ರಸ್ತುತ ಜಾರಿಯಲ್ಲಿರುವ ಸಂವಿಧಾನ ಮತ್ತು Memorandum of Procedure ಪ್ರಕಾರವೇ ನೇಮಕಾತಿಗಳು ನಡೆಯುತ್ತಿವೆ
ಎಂದು ತಿಳಿಸಿದ್ದು, ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದವರನ್ನೇ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ
ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿರುವುದು ಗೊತ್ತಾಗಿದೆ.




