Tuesday | September 8, 2026 |

ಈಕ್ವಿಟಿ ಪಾಲ್ಗೊಳ್ಳುವಿಕೆ ಪರಿಕಲ್ಪನೆಯೇ ಅಸ್ಪಷ್ಟ, ಆಡಳಿತಾತ್ಮಕ ಶಿಸ್ತಿಗೆ ಧಕ್ಕೆ, ನೈಜತೆ ಪರಿಶೀಲನೆಯೇ ಅಸಾಧ್ಯ; ಆರ್ಥಿಕ ಇಲಾಖೆ ಅವಲೋಕನವನ್ನೇ ಕಸದ ಬುಟ್ಟಿಗೆ ಎಸೆಯಲಾಯಿತೇ?

ಬೆಂಗಳೂರು; ಕಸ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯು ಕರೆದಿದ್ದ ಟೆಂಡರ್‍‌ ಪ್ರಕ್ರಿಯೆ ಕುರಿತು ಆರ್ಥಿಕ ಇಲಾಖೆಯು ವಿವಿಧ ಆಯಾಮಗಳಿಂದ ವಿಶ್ಲೇಷಿಸಿದೆ. ಮುಖ್ಯವಾಗಿ ಬಿಎಸ್‌ಡಬ್ಲ್ಯೂಎಂಎಲ್‌ ಹೇಳಿರುವ ಈಕ್ವಿಟಿ ಪಾಲ್ಗೊಳ್ಳುವಿಕೆ ಎಂಬುದೇ ಅತ್ಯಂತ ಅಸ್ಪಷ್ಟ ಪರಿಕಲ್ಪನೆಯಾಗಿದೆ. ಹೀಗಾಗಿ ಅದರ ನೈಜತೆಯನ್ನು ಪರಿಶೀಲಿಸುವುದು ಬಹುತೇಕ ಅಸಾಧ್ಯವಾಗಿದೆ ಎಂದು ಹೇಳಿದೆ.

ಇದೇ ಟೆಂಡರ್ ಪ್ರಕ್ರಿಯೆ ಕುರಿತು ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಝ್ ನೇತೃತ್ವದ ಸಮಿತಿಯು ಹಲವು ಲೋಪಗಳನ್ನು ಬಯಲಿಗೆಳೆದಿತ್ತು. ಬಿಎಸ್‌ಡಬ್ಲ್ಯುಎಂಎಲ್‌ ಈ ಕುರಿತು ತನ್ನ ಸಮರ್ಥನೆಯನ್ನೂ ಒದಗಿಸಿತ್ತು. ಇದಾದ ನಂತರ ಆರ್ಥಿಕ ಇಲಾಖೆಯು ಸಹ ಈ ಪ್ರಕ್ರಿಯೆಗಳ ಕುರಿತು ಅವಲೋಕಿಸಿದೆ. ಈ ಅವಲೋಕನದ ವೇಳೆ ನೀಡಿರುವ ಅಭಿಪ್ರಾಯಗಳನ್ನು ಯಥಾ ಪ್ರಕಾರ ಬಿಎಸ್‌ಡಬ್ಲ್ಯೂಎಂಲ್‌ ತಳ್ಳಿ ಹಾಕಿದೆ.

ಆರ್ಥಿಕ ಇಲಾಖೆಯು ನೀಡಿರುವ ಅವಲೋಕನ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಆರ್ಥಿಕ ಇಲಾಖೆಯು ನೀಡಿರುವ ಅವಲೋಕನಗಳ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈಕ್ವಿಟಿ ಪಾಲ್ಗೊಳ್ಳುವಿಕೆಯೇ ಅಸ್ಪಷ್ಟ ಪರಿಕಲ್ಪನೆ

ಈಕ್ವಿಟಿ ಪಾಲ್ಗೊಳ್ಳುವಿಕೆ (Equity participation) ಎಂಬುದು ಅತ್ಯಂತ ಅಸ್ಪಷ್ಟ ಪರಿಕಲ್ಪನೆಯಾಗಿದೆ. ಅದರ ನೈಜತೆಯನ್ನು ಪರಿಶೀಲಿಸುವುದು ಬಹುತೇಕ ಅಸಾಧ್ಯವಾಗಿದೆ. ಯಾವುದೇ ಪ್ರಮಾಣಿತ ಅಥವಾ ಸಾಮಾನ್ಯವಾಗಿ ಅನುಸರಿಸಲಾಗುವ ಟೆಂಡರ್‌ ಪದ್ಧತಿಗಳಲ್ಲಿ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಈಕ್ವಿಟಿ ಪಾಲ್ಗೊಳ್ಳುವಿಕೆಯನ್ನು, ನಿರ್ದಿಷ್ಟ ಷೇರುದಾರಿಕೆಯನ್ನು ಹೊಂದಿರುವ ಕಾನೂನುಬದ್ಧ ಸಂಸ್ಥೆಯ ಅಧಿಕೃತ ಸ್ಥಾಪನೆಯನ್ನು ಸಾಬೀತುಪಡಿಸುವ ಕಾನೂನು ದಾಖಲೆ ಇದ್ದಲ್ಲಿ ಮಾತ್ರ ಪರಿಶೀಲಿಸಬಹುದು. ಬಿಎಸ್‌ಡಬ್ಲ್ಯೂಎಂಎಲ್‌ ಸ್ವೀಕರಿಸಿರುವಂತೆ ಕೇವಲ ಅಫಿಡವಿಟ್‌ (ಪ್ರಮಾಣಪತ್ರ/ಪ್ರಮಾಣ ಪತ್ರದ ಶಪಥಪತ್ರ) ಮೂಲಕ ಅದನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆಯು ಅವಲೋಕಿಸಿದೆ.

 

‘ಒಕ್ಕೂಟದ (Consortium) ಒಬ್ಬ ಸದಸ್ಯನಾದರೂ ನಿಗದಿಪಡಿಸಿರುವ ಷರತ್ತುಗಳನ್ನು ಪೂರೈಸಿದರೆ, ಆ ಒಕ್ಕೂಟವು ಟೆಂಡರ್‌ಗೆ ಅರ್ಹವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಒಕ್ಕೂಟದ ಐದು ಸದಸ್ಯರಲ್ಲಿ ಕೇವಲ ಒಬ್ಬ ಸದಸ್ಯನೇ ತಾಂತ್ರಿಕವಾಗಿ ಅರ್ಹನಾಗಿದ್ದಾನೆ ಎಂದು ಪರಿಗಣಿಸಿದರೆ ಮತ್ತು ಈ ಏಕೈಕ ತಾಂತ್ರಿಕವಾಗಿ ಅರ್ಹ ಸದಸ್ಯನು ಒಕ್ಕೂಟದಿಂದ ಹೊರಬಂದರೆ, ಉಳಿದ ಸದಸ್ಯರಿಗೆ ಸರ್ಕಾರವು ಅವರಿಗೆ ವಹಿಸಿರುವ ಕೆಲಸವನ್ನು ಮುಂದುವರಿಸಲು ಸಾಧ್ಯವಾಗದೇ ಇರಬಹುದು,’ ಎಂದು ಎಚ್ಚರಿಸಿದೆ.

ಇದಲ್ಲದೆ ಅರ್ಹ ಒಕ್ಕೂಟವನ್ನು ನಿರ್ಧರಿಸಲು ಈಕ್ವಿಟಿ ಪಾಲ್ಗೊಳ್ಳುವಿಕೆಯೇ ಏಕೈಕ ಮಾನದಂಡವಾಗಿದ್ದರೆ, ಟೆಂಡರ್‌ನಲ್ಲಿ ಕಡ್ಡಾಯಗೊಳಿಸಿರುವ ಸೇವೆಗಳನ್ನು ಒದಗಿಸಲು ಸಾಮರ್ಥ್ಯವಿಲ್ಲದ ಪಾಲುದಾರರು ಕೇವಲ ವಹಿವಾಟು (Turnover) ಷರತ್ತನ್ನು ಪೂರೈಸುವ ಉದ್ದೇಶದಿಂದ ಒಕ್ಕೂಟವನ್ನು ಸೇರಿಕೊಳ್ಳಬಹುದು. ಆದರೆ, ಅವರಿಗೆ ಕಾಮಗಾರಿಗಳನ್ನು ನಿರ್ವಹಿಸಲು ಅಥವಾ ಸೇವೆಗಳನ್ನು ಒದಗಿಸಲು ಯಾವುದೇ ತಾಂತ್ರಿಕ ಪರಿಣತಿ ಇರುವುದಿಲ್ಲ ಎಂದು ಹೇಳಿದೆ.

ಬಿಎಸ್‌ಡಬ್ಲ್ಯೂಎಂಎಲ್  ಮಂಡಳಿಯು ಈ ಮಾರ್ಪಾಡುಗಳಿಗೆ ಅನುಮೋದನೆ ನೀಡಿರಬಹುದಾದರೂ, ಅದರ ಹಿಂದಿನ ಕಾರಣ ಮತ್ತು ಸಮರ್ಥನೆಗಳು ಮಂಡಳಿಯ ಸಭೆಯ ನಡಾವಳಿಗಳಲ್ಲಿ (Board Minutes) ಸ್ಪಷ್ಟವಾಗಿ ದಾಖಲಾಗಿಲ್ಲ. ಇದಲ್ಲದೆ, ನಗರಾಭಿವೃದ್ಧಿ ಇಲಾಖೆಯ (UDD) 2025ರ ಮೇ 26ರಂದು ಹೊರಡಿಸಿರುವ  ಸರ್ಕಾರಿ ಆದೇಶದಲ್ಲಿ (Government Order) ಪೂರ್ವಾನುಮೋದನೆಗಾಗಿ ಸರ್ಕಾರದಿಂದ ನಿರ್ದಿಷ್ಟ ಅನುಮೋದನೆ ಪಡೆಯಬೇಕೆಂದು ಸ್ಪಷ್ಟವಾಗಿ ಸೂಚಿಸಿತ್ತು. ಆದರೆ  ಸರ್ಕಾರದಿಂದ ಅಂತಹ ನಿರ್ದಿಷ್ಟ ಅನುಮೋದನೆಯನ್ನು ಪಡೆದಿಲ್ಲ ಎಂದು ಹೇಳಿದೆ.

ಆಡಳಿತಾತ್ಮಕ ಶಿಸ್ತಿಗೆ ಧಕ್ಕೆ

‘2025ರ ಮೇ 26ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಆದೇಶದ ಪ್ರಕಾರ   ಯಾವುದೇ ಬದಲಾವಣೆಗೆ ಸರ್ಕಾರದ ಪೂರ್ವಾನುಮೋದನೆ ಅಗತ್ಯವಿದ್ದರೂ ಅದನ್ನು ಪಡೆದಿಲ್ಲ.  ಇದು ಆಡಳಿತಾತ್ಮಕ ಶಿಸ್ತಿಗೆ ಧಕ್ಕೆಯಾಗಿದೆ. ಗುತ್ತಿಗೆ ಅನುಷ್ಠಾನದ ಹಂತದಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು,’ ಎಂದು ಎಚ್ಚರಿಸಿದೆ.

ಆದರೆ ಬಿಎಸ್‌ಡಬ್ಲ್ಯೂಎಂಎಲ್‌, ಆರ್ಥಿಕ ಇಲಾಖೆಯು ಮಾಡಿರುವ ಅವಲೋಕನವನ್ನು ಒಪ್ಪಿಕೊಂಡಿಲ್ಲ.

ಈ ದೊಡ್ಡ ಪ್ಯಾಕೇಜ್‌ಗಳಿಗೆ ಅಗತ್ಯವಿರುವ ಎಲ್ಲಾ ಅರ್ಹತಾ ಮಾನದಂಡಗಳನ್ನು ಒಂದೇ ಸಂಸ್ಥೆಯು ಸ್ವತಂತ್ರವಾಗಿ ಪೂರೈಸುವುದು ಅನೇಕ ಸಂದರ್ಭಗಳಲ್ಲಿ ಕಾರ್ಯಸಾಧ್ಯವಾಗುವುದಿಲ್ಲ. ಆದ್ದರಿಂದ, ಗರಿಷ್ಠ ಐದು ಸದಸ್ಯರಿಗೆ ಅವಕಾಶ ನೀಡುವ ಒಕ್ಕೂಟ (Consortium) ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಇದರ ಉದ್ದೇಶ ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಸಮರ್ಥವಾಗಿರುವ ಸ್ಥಳೀಯ ಆಪರೇಟರ್‌ಗಳು ತಮ್ಮ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಟೆಂಡರ್‌ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಲು ಅನುವು ಮಾಡಿಕೊಡುವುದಾಗಿತ್ತು ಎಂದು ಹೇಳಿದೆ.

ಗರಿಷ್ಠ ಐದು ಸದಸ್ಯರನ್ನು ಒಳಗೊಂಡ ಒಕ್ಕೂಟಕ್ಕೆ ಅವಕಾಶ ನೀಡುವ ಉದ್ದೇಶವು ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಸ್ಪರ್ಧೆಯನ್ನು ಹೆಚ್ಚಿಸುವುದು, ನ್ಯಾಯಸಮ್ಮತ ಬೆಲೆ ನಿರ್ಧಾರವನ್ನು ಖಚಿತಪಡಿಸುವುದು ಮತ್ತು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಸಮರ್ಥ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಲು ಅನುಕೂಲ ಮಾಡಿಕೊಡುವುದಾಗಿತ್ತು. ಈ ಮಾರ್ಪಾಡು ಯಾವುದೇ ನಿರ್ದಿಷ್ಟ ಬಿಡ್ಡರ್‌ಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾಡಲಾಗಿಲ್ಲ; ಬದಲಾಗಿ, ಎಲ್ಲಾ ನಿರೀಕ್ಷಿತ ಬಿಡ್ಡರ್‌ಗಳಿಗೆ ಸಮಾನವಾಗಿ ಅನ್ವಯಿಸುವಂತೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಮೇಲಿನ ಮಾರ್ಪಾಡುಗಳ ಕುರಿತು ವಿವರವಾಗಿ ಚರ್ಚಿಸಿ, ಪ್ಯಾಕೇಜ್‌ಗಳ ಗಾತ್ರ, ಕಾರ್ಯಾಚರಣೆಯ ಅಗತ್ಯತೆಗಳು ಹಾಗೂ ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ಉತ್ತೇಜನ ನೀಡುವ ಅಗತ್ಯವನ್ನು ಪರಿಗಣಿಸಿದ ನಂತರ 2025ರ ಮೇ 9ರಂದು ನಡೆದಿದ್ದ  ಬಿಎಸ್‌ಡಬ್ಲ್ಯೂಎಂಎಲ್‌ನ ನಿರ್ದೇಶಕರ ಮಂಡಳಿಯ 21ನೇ ಸಭೆಯಲ್ಲಿಯೂ ಅನುಮೋದನೆ ನೀಡಲಾಗಿದೆ.

ಆದ್ದರಿಂದ, ಗರಿಷ್ಠ ಐದು ಒಕ್ಕೂಟದ ಸದಸ್ಯರಿಗೆ ಅವಕಾಶ ನೀಡುವ ನಿರ್ಧಾರವು ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆಗೆ ಅನುಕೂಲ ಕಲ್ಪಿಸುವ ಮತ್ತು ಯಾವುದೇ ವೈಯಕ್ತಿಕ ಬಿಡ್ಡರ್‌ಗೆ ಅನ್ಯಾಯವಾದ ಪ್ರಯೋಜನ ನೀಡದೆ ಪರಿಣಾಮಕಾರಿ ಸ್ಪರ್ಧೆಯನ್ನು ಖಚಿತಪಡಿಸುವ ಉದ್ದೇಶದಿಂದ ಕೈಗೊಂಡಿದೆ. ಇದು ಆಡಳಿತಾತ್ಮಕವಾಗಿ ಉತ್ತಮ ನಿರ್ಧಾರವಾಗಿದೆ ಎಂದ ಸಮಜಾಯಷಿ ನೀಡಿರುವುದು ಗೊತ್ತಾಗಿದೆ.

ಇದಲ್ಲದೆ, ಟೆಂಡರ್‌ ದಾಖಲೆಯಲ್ಲಿ ಅಳವಡಿಸಲಾಗಿರುವ ಒಕ್ಕೂಟದ ನಿಬಂಧನೆಗಳು ವಿಶಿಷ್ಟವಾದವುಗಳಲ್ಲ ಎಂದು ಹೇಳಿರುವ ಆರ್ಥಿಕ ಇಲಾಖೆಗೆ,  ಸಾರ್ವಜನಿಕ ಉದ್ಯಮವಾಗಿರುವ  ಈಸ್ಟರ್ನ್‌ ಕೋಲ್‌ ಫೀಲ್ಡ್ಸ್ ಲಿಮಿಟೆಡ್ ಅಳವಡಿಸಿಕೊಂಡಿರುವ ಟೆಂಡರ್ ದಾಖಲೆಯನ್ನು  ಬಿಎಸ್‌ಡಬ್ಲ್ಯೂಎಂಎಲ್‌ ಮುಂದೊಡ್ಡಿದೆ. ಜಂಟಿ ಉದ್ಯಮ ಅಥವಾ ಒಕ್ಕೂಟ ಸಂದರ್ಭದಲ್ಲಿ ವೈಯಕ್ತಿಕ ಒಕ್ಕೂಟ ಸದಸ್ಯರ  ಸದಸ್ಯರ ಕಾರ್ಯಾನುಭವ, ಆರ್ಥಿಕ ಸಾಮರ್ಥ್ಯ ಮತ್ತು ಉಪಕರಣಗಳು/ವಾಹನ ಪಡೆಯ ಸಾಮರ್ಥ್ಯವನ್ನು ಅರ್ಹತೆ ನಿರ್ಧರಿಸುವ ಉದ್ದೇಶಕ್ಕಾಗಿ ಒಟ್ಟಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

‘ಪ್ರಸ್ತುತ ಟೆಂಡರ್‌ನಲ್ಲಿ ಅಳವಡಿಸಲಾಗಿರುವ ಒಕ್ಕೂಟದ ನಿಬಂಧನೆಗಳನ್ನೂ ಇದೇ ರೀತಿಯ ತತ್ವಗಳ ಆಧಾರದ ಮೇಲೆ ರೂಪಿಸಲಾಗಿದೆ.  ತಾಂತ್ರಿಕ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ ಸಮರ್ಥ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಮಾಡಲಾಗಿದೆ. ಆದ್ದರಿಂದ, ಪ್ರಸ್ತುತ ಟೆಂಡರ್‌ನಲ್ಲಿ ಅಳವಡಿಸಲಾಗಿರುವ ಒಕ್ಕೂಟದ ನಿಬಂಧನೆಗಳು ಯೋಜನೆಯ ಕಾರ್ಯಾಚರಣಾ ಅಗತ್ಯತೆಗಳಿಗೆ ಅನುಗುಣವಾಗಿದೆಯಲ್ಲದೇ  ಪರಿಣಾಮಕಾರಿಯಾಗಿದೆ,’ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

ಪರಿಷ್ಕೃತ ಟೆಂಡರ್‌ನಲ್ಲಿ 243 ವಾರ್ಡ್‌ ಮಟ್ಟದ ಕಾರ್ಯಾಚರಣೆಗಳನ್ನು 33 ಸಮಗ್ರ ಪ್ಯಾಕೇಜ್‌ಗಳಾಗಿ ಪುನರ್‌ಸಂಘಟಿಸಲಾಗಿದೆ. ಪ್ರತಿಯೊಂದು ಪ್ಯಾಕೇಜ್‌ಗೂ ವಾಹನಗಳು, ಮಾನವ ಸಂಪನ್ಮೂಲ, ಕಾರ್ಯಾಚರಣಾ ಮೂಲಸೌಕರ್ಯ ಮತ್ತು ಕಾರ್ಯನಿರ್ವಹಣಾ ಬಂಡವಾಳದ ಗಣನೀಯ ನಿಯೋಜನೆ ಅಗತ್ಯವಿದೆ. ಪ್ಯಾಕೇಜ್‌ಗಳ ಗಾತ್ರ ಹೆಚ್ಚಿದೆ. ಹೀಗಾಗಿ  ಸಾಕಷ್ಟು ಕಾರ್ಯಾಚರಣಾ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಬೇಕು. ಇದರ  ಜೊತೆಗೆ ಹೆಚ್ಚಿನ ಸ್ಪರ್ಧೆಯನ್ನು ಉತ್ತೇಜಿಸುವಂತಹ ಖರೀದಿ/ಟೆಂಡರ್‌ ವ್ಯವಸ್ಥೆಯ ಚೌಕಟ್ಟು ರೂಪಿಸುವುದು  ಅಗತ್ಯವಾಯಿತು ಎಂದು ಸಮಜಾಯಿಷಿ ನೀಡಿದೆ.

ಅರ್ಹ ಸ್ಥಳೀಯ ಮತ್ತು ಮಧ್ಯಮ ಗಾತ್ರದ ಸೇವಾ ಪೂರೈಕೆದಾರರು ತಮ್ಮ ಆರ್ಥಿಕ ಮತ್ತು ಕಾರ್ಯಾಚರಣಾ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ದೊಡ್ಡ ಪ್ಯಾಕೇಜ್‌ಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಲು ಅನುವು ಮಾಡಿಕೊಡುವುದೇ ಇದರ ಉದ್ದೇಶವಾಗಿದೆ.  ಹೀಗಾಗಿ ಬಿಎಸ್‌ಡಬ್ಲ್ಯೂಎಂಎಲ್‌ನ  ನಿರ್ದೇಶಕರ ಮಂಡಳಿಯು ಸೂಕ್ತವಾಗಿ ಚರ್ಚಿಸಿದೆ. ಸಭೆಯಲ್ಲಿ ಚರ್ಚೆ  ನಂತರ ಒಕ್ಕೂಟದ ಭಾಗವಹಿಸುವಿಕೆಗೆ ಅವಕಾಶ ನೀಡುವ ನಿಬಂಧನೆಯನ್ನು ಪರಿಚಯಿಸಲಾಗಿದೆ ಎಂದು ಹೇಳಿದೆ.

‘ಇದರ ಉದ್ದೇಶ ಸ್ಪರ್ಧೆಯನ್ನು ವಿಸ್ತರಿಸುವುದು, ಸೀಮಿತ ಸಂಖ್ಯೆಯ ಸಂಸ್ಥೆಗಳ ಕೈಯಲ್ಲಿ ಒಪ್ಪಂದಗಳು ಕೇಂದ್ರೀಕೃತವಾಗುವುದನ್ನು ತಡೆಯುವುದು ಮತ್ತು ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲ ಮಾಡಿಕೊಡುವುದಾಗಿತ್ತು. ಇದು  ಈಕ್ವಿಟಿ ಪಾಲ್ಗೊಳ್ಳುವಿಕೆಯು ತಾಂತ್ರಿಕ ಅರ್ಹತೆಗೆ ಪರ್ಯಾಯವಲ್ಲ. ಈಕ್ವಿಟಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಅಗತ್ಯವನ್ನು ತಾಂತ್ರಿಕ ಅರ್ಹತೆಗೆ ಪರ್ಯಾಯವಾಗಿ ನಿಗದಿಪಡಿಸಲಾಗಿಲ್ಲ ಎಂದು ವಿವರಿಸಿರುವುದು ಗೊತ್ತಾಗಿದೆ.

Hot this week

ಲೀಡ್‌ ಮೆಂಬರ್‍‌ನದ್ದು ಶೂನ್ಯ ವಹಿವಾಟು; ಆದರೂ ಟೆಂಡರ್ ಪ್ಯಾಕೇಜ್‌ನ 7 ಮತ್ತು 9ರಲ್ಲಿ ಎಲ್ 1 ಆಗಿದ್ಹೇಗೆ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ...

ಪ್ರಜಾಸೇವೆ ಅಭಿಯಾನ ಚಾಲನೆ ಕಾರ್ಯಕ್ರಮಕ್ಕೆ 2.86 ಕೋಟಿ ವೆಚ್ಚ ; ಬರದಿಂದ ತತ್ತರಿಸಿದ್ದರೂ ದುಂದುವೆಚ್ಚಗಳಿಗೆ ಬಿದ್ದಿಲ್ಲ ಕಡಿವಾಣ

ಬೆಂಗಳೂರು;  ಬರದಿಂದ ತತ್ತರಿಸಿ ಹೋಗಿರುವ ರಾಜ್ಯದ 101 ತಾಲೂಕುಗಳಿಗೆ ನಷ್ಟದ ಪರಿಹಾರ...

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಬುಕ್ ಬ್ರಹ್ಮ ಸಾಹಿತ್ಯ ಉತ್ಸವಕ್ಕೆ 5 ಲಕ್ಷ ರು ಅನುದಾನ; ನೋಂದಣಿಯಾಗಿ 3 ವ‍ರ್ಷ ಪೂರೈಸದ ಬುಕ್‌ ಬ್ರಹ್ಮ ಫೌಂಡೇಷನ್‌ಗೆ ಒಂದು ಬಾರಿ ವಿನಾಯಿತಿ

ಬೆಂಗಳೂರು;  ಅನುದಾನ ಪಡೆಯುವ ಸಂಘ, ಸಂಸ್ಥೆಗಳು ನೋಂದಣಿಯಾಗಿ  3 ವರ್ಷಗಳನ್ನು ಪೂರೈಸಿರಬೇಕು...
Please Scan to make Your Contribution

Topics

ಲೀಡ್‌ ಮೆಂಬರ್‍‌ನದ್ದು ಶೂನ್ಯ ವಹಿವಾಟು; ಆದರೂ ಟೆಂಡರ್ ಪ್ಯಾಕೇಜ್‌ನ 7 ಮತ್ತು 9ರಲ್ಲಿ ಎಲ್ 1 ಆಗಿದ್ಹೇಗೆ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ...

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

Related Articles

Popular Categories

error: Content is protected !!