Saturday | July 25, 2026 |

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ 15ನೇ ಹಣಕಾಸು ಆಯೋಗವು 14,922.66 ಕೋಟಿ ರು ಬಿಡುಗಡೆ ಮಾಡಿಲ್ಲ. ದೇಶದ 28 ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ ಗೆ ಅತೀ ಕಡಿಮೆ ಮೊತ್ತ ಮತ್ತು ಕರ್ನಾಟಕ್ಕೆ ಅತೀ ಹೆಚ್ಚಿನ ಮೊತ್ತವನ್ನು ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ.

ಉತ್ತರ ಪ್ರದೇಶ, ಅಸ್ಸಾಂ, ಮೇಘಾಲಯ, ಕೇರಳ, ಮಿಜೋರಾಂ, ತ್ರಿಪುರ ರಾಜ್ಯಕ್ಕೆ ಹಂಚಿಕೆಯಾಗಿದ್ದ ಸಂಪೂರ್ಣ ಮೊತ್ತವನ್ನು ಕೇಂದ್ರವು ಬಿಡುಗಡೆ ಮಾಡಿದೆ. ವಿಶೇಷವೆಂದರೇ ಹಿಂಸಾಚಾರಕ್ಕೆ ತತ್ತರಿಸಿ ಹೋಗಿರುವ ಮಣಿಪುರ ರಾಜ್ಯಕ್ಕೆ 624.50 ಕೋಟಿ ರು ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ.

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸು ಆಯೋಗವು ಹಂಚಿಕೆ ಮಾಡಿರುವ ಮತ್ತು ಬಿಡುಗಡೆ ಮಾಡಿರುವ ಅನುದಾನ, ಚ್ಛತೆ ಹಾಗೂ ಕುಡಿಯುವ ನೀರಿನ ಗುರಿಗಳನ್ನು ಈಗಾಗಲೇ ಸಂಪೂರ್ಣವಾಗಿ ಸಾಧಿಸಿರುವ ಪ್ರದೇಶಗಳಲ್ಲಿ, ಉದ್ದೇಶಿತ (Tied) ಅನುದಾನಗಳನ್ನು ಉದ್ದೇಶರಹಿತ (Untied) ಅನುದಾನಗಳಾಗಿ ಮರುಹಂಚಿಕೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (GPDP) ರಾಜ್ಯಗಳಲ್ಲಿ ಅಧಿಕಾರ ವಿಕೇಂದ್ರೀಕರಣದ ಪ್ರಗತಿಯನ್ನು ಅಳೆಯಲು ವಾರ್ಷಿಕ “ಸ್ಟೇಟ್ ಆಫ್ ಡೆವಲ್ಯೂಷನ್ ವರದಿ ಕುರಿತು ಸಂಸದ ಮಸ್ತಾನ್ ರಾವ್ ಯಾದವ್ ಬೀಧಾ ಅವರು 2026ರ ಜುಲೈ 22ರಂದು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗೆ ಕೇಂದ್ರ ಪಂಚಾಯತ್‌ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

15ನೇ ಹಣಕಾಸು ಆಯೋಗದ ಶಿಫಾರಸ್ಸು ಪ್ರಕಾರ ಕರ್ನಾಟಕಕ್ಕೆ ಅನುದಾನ ಸೂಕ್ತವಾಗಿ ಬಿಡುಗಡೆ ಆಗುತ್ತಿಲ್ಲ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ್‌ ರಾಜ್‌ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಮತ್ತು ಹಾಲಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ನಡುವೆಯೇ ಗ್ರಾಮ ಪಂಚಾಯತ್‌ಗಳಿಗೆ 15ನೇ ಹಣಕಾಸು ಆಯೋಗವು ಬಿಡುಗಡೆ ಮಾಡಿರುವ ಮತ್ತು ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವ ಮೊತ್ತದ ಕುರಿತು ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

15ನೇ ಹಣಕಾಸು ಆಯೋಗದ ವತಿಯಿಂದ ರಾಜ್ಯಗಳಿಗೆ, ಆಂಧ್ರ ಪ್ರದೇಶ ಸೇರಿದಂತೆ, ಇದುವರೆಗೆ ಬಿಡುಗಡೆ ಮಾಡಿರುವ ಒಟ್ಟು ಅನುದಾನದ ಮೊತ್ತ ಎಷ್ಟು? ರಾಜ್ಯವಾರು ವಿವರಗಳೊಂದಿಗೆ, ಇನ್ನೂ ಬಿಡುಗಡೆ ಆಗಬೇಕಿರುವ ಮೊತ್ತದ ಕುರಿತು ಪ್ರಶ್ನೆ ಕೇಳಿದ್ದರು. ಅಲ್ಲದೇ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಗುರಿಗಳನ್ನು ಈಗಾಗಲೇ ಸಂಪೂರ್ಣವಾಗಿ ಸಾಧಿಸಿರುವ ಪ್ರದೇಶಗಳಲ್ಲಿ, ಉದ್ದೇಶಿತ (Tied) ಅನುದಾನಗಳನ್ನು ಉದ್ದೇಶರಹಿತ (Untied) ಅನುದಾನಗಳಾಗಿ ಮರುಹಂಚಿಕೆ ಮಾಡಲು ಸರ್ಕಾರ ಯಾವುದೇ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆಯೇ ಇಲ್ಲವೇ ಎಂಬ ಕುರಿತು ಮಾಹಿತಿ ಕೋರಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (GPDP) ಅಪ್‌ಲೋಡ್‌ಗಳ ಸ್ಥಿತಿ ಹಾಗೂ ಇ ಗ್ರಾಮ್ ಸ್ವರಾಜ್ ಪಿಎಂಎಫ್‌ಎಸ್  ಮೂಲಕ ಸಂಪರ್ಕಿತ ನಿಧಿ ವರ್ಗಾವಣೆಯ ಸ್ಥಿತಿ ಆಂಧ್ರ ಪ್ರದೇಶದಲ್ಲಿ ರಾಷ್ಟ್ರೀಯ ಸರಾಸರಿಯೊಂದಿಗೆ ಹೋಲಿಸಿದರೆ ಹೇಗಿದೆ, ರಾಜ್ಯಗಳಲ್ಲಿ ಅಧಿಕಾರ ವಿಕೇಂದ್ರೀಕರಣದ ಪ್ರಗತಿಯನ್ನು ಅಳೆಯಲು ವಾರ್ಷಿಕ “ಸ್ಟೇಟ್ ಆಫ್ ಡೆವಲ್ಯೂಷನ್ ವರದಿ” (State of Devolution Report) ಪ್ರಕಟಿಸಲು ಸರ್ಕಾರ ಉದ್ದೇಶಿಸಿದ್ದಲ್ಲಿ ಅದರ ಕಾಲಮಿತಿ ಏನು ಎಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ಉತ್ತರಿಸಿರುವ ಪಂಚಾಯತ್ ರಾಜ್ ಸಚಿವರು ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರು ಬಿಡುಗಡೆಯಾಗದ ಅನುದಾನದ ಮೊತ್ತವು, ಸಂಬಂಧಿತ ರಾಜ್ಯ ಸರ್ಕಾರಗಳು/ಗ್ರಾಮೀಣ ಸ್ಥಳೀಯ ಸಂಸ್ಥೆಗಳು (RLBs) ನಿಗದಿಪಡಿಸಿದ ಅರ್ಹತಾ ಷರತ್ತುಗಳನ್ನು ಪೂರೈಸದೇ ಇರುವುದೇ ಕಾರಣ. ಅಲ್ಲದೇ ಹಂಚಿಕೆಯಾದ ಅವಧಿಯಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗದ ಅನುದಾನವನ್ನು ಸೂಚಿಸುತ್ತದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿರುವುದು ಗೊತ್ತಾಗಿದೆ.

 

 

ಹಣಕಾಸು ಆಯೋಗವು ಸಂವಿಧಾನಾತ್ಮಕ ಸಂಸ್ಥೆಯಾಗಿದೆ. ಅದರ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿ ಸಂಸತ್ತಿನ ಮುಂದೆ ಮಂಡಿಸಿದ ನಂತರ, ಆ ಶಿಫಾರಸುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಪಂಚಾಯತ್‌ಗಳು “ಸ್ಥಳೀಯ ಸ್ವಯಂ ಸರ್ಕಾರ”ವಾಗಿದೆ. ಅವು ರಾಜ್ಯಗಳ ವ್ಯಾಪ್ತಿಗೆ ಒಳಪಡುವ ವಿಷಯವಾಗಿದೆ. ಆದಾಗ್ಯೂ, ಪಂಚಾಯತ್ ರಾಜ್ ಸಚಿವಾಲಯವು ವಿಕೇಂದ್ರೀಕೃತ ಯೋಜನಾ ರೂಪಣೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಉತ್ತೇಜಿಸುತ್ತದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (GPDP) ಚೌಕಟ್ಟಿನ ಮೂಲಕ ಕಾರ್ಯನಿರ್ವಹಿಸುತ್ತದೆ. ಗ್ರಾಮ ಪಂಚಾಯತ್‌ಗಳು ತಮ್ಮ ಅಭಿವೃದ್ದಿ ಯೋಜನೆಗಳನ್ನು ಇ ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ಸಿದ್ಧಪಡಿಸಿ ಅಪ್‌ಲೋಡ್ ಮಾಡುತ್ತವೆ. ಈ ಪೋರ್ಟಲ್ ಪಂಚಾಯತ್ ಚಟುವಟಿಕೆಗಳ ಯೋಜನೆ, ಬಜೆಟ್ ರೂಪಣೆ, ಲೆಕ್ಕಪತ್ರ ನಿರ್ವಹಣೆ ಹಾಗೂ ಮೇಲ್ವಿಚಾರಣೆಗೆ ಸಮಗ್ರ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಪ್ರತಿವರ್ಷ ಗ್ರಾಮ ಸಭೆಗಳ ಭಾಗವಹಿಸುವಿಕೆಯೊಂದಿಗೆ ಸಿದ್ಧಪಡಿಸಲಾಗುತ್ತದೆ. ಈ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸಮನ್ವಯದ ಮೂಲಕ ಕೈಗೊಳ್ಳಬೇಕಾದ ಕಾಮಗಾರಿಗಳು ಹಾಗೂ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ.

ಆಂಧ್ರ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಇ ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳ (GPDP) ಸ್ಥಿತಿಯನ್ನು ರಾಷ್ಟ್ರೀಯ ಸರಾಸರಿಯೊಂದಿಗೆ ಹೋಲಿಕೆ ಮಾಡಲಾಗಿದೆ.

ಪಂಚಾಯತ್ ರಾಜ್ ಸಚಿವಾಲಯವು “ರಾಜ್ಯಗಳಲ್ಲಿ ಪಂಚಾಯತ್‌ಗಳಿಗೆ ಅಧಿಕಾರ ವಿಕೇಂದ್ರೀಕರಣದ ಸ್ಥಿತಿ – ಸೂಚಕ ಸಾಕ್ಷ್ಯಾಧಾರಿತ ಶ್ರೇಯಾಂಕ, 2024” (Status of Devolution to Panchayats in States – An Indicative Evidence-Based Ranking, 2024) ಎಂಬ ವರದಿಯನ್ನು ಫೆಬ್ರವರಿ 2025ರಲ್ಲಿ ಈಗಾಗಲೇ ಪ್ರಕಟಿಸಿದೆ. ಈ ವರದಿಯ ಉದ್ದೇಶವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಂಚಾಯತ್‌ಗಳಿಗೆ ಅಧಿಕಾರ ವಿಕೇಂದ್ರೀಕರಣದ ಪರಿಣಾಮಕಾರಿತ್ವವನ್ನು ಹಾಗೂ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಸ್ಥಳೀಯ ಸರ್ಕಾರಗಳ ಪಾತ್ರವನ್ನು ಮೌಲ್ಯಮಾಪನ ಮಾಡುವುದಾಗಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

ಈ ವರದಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಸೂಚ್ಯಂಕವನ್ನು ಪ್ರಸ್ತುತಪಡಿಸಿದೆ. ಸಂವಿಧಾನದ ಭಾಗ-IX ಅಡಿಯಲ್ಲಿ ಒಳಪಡುವ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆ ಅಂಕಗಳು ಹಾಗೂ ಶ್ರೇಯಾಂಕಗಳನ್ನು ನೀಡಲಾಗಿದೆ. ಸಾಂಸ್ಥಿಕ ಚೌಕಟ್ಟು (Framework) ಕಾರ್ಯಗಳು (Functions) ಹಣಕಾಸು (Finances) ಸಿಬ್ಬಂದಿ (Functionaries) ಸಾಮರ್ಥ್ಯ ವೃದ್ಧಿ (Capacity Enhancement) ಉತ್ತರದಾಯಿತ್ವ (Accountability) ಆಧರಿಸಿ ಶ್ರೇಯಾಂಕಗಳನ್ನು ನಿರ್ಧರಿಸಿದೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಅಧಿಕಾರ ವಿಕೇಂದ್ರೀಕರಣ- ಶೇ.43.9ಕ್ಕೇರಿಕೆ

ಈ ವರದಿಯ ಪ್ರಕಾರ, 2013-14 ರಿಂದ 2021-22ರ ಅವಧಿಯಲ್ಲಿ ಪಂಚಾಯತ್‌ಗಳಿಗೆ ಅಧಿಕಾರ ವಿಕೇಂದ್ರೀಕರಣದ ಮಟ್ಟವು 39.9% ರಿಂದ 43.9%ಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದೆ.

2023-24ರಲ್ಲಿ 2,62,251 ಪಂಚಾಯ್ತಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಅಪ್‌ಲೋಡ್ ಮಾಡಿವೆ. 2024-25ರಲ್ಲಿ 2,62,593 ಪಂಚಾಯ್ತಿಗಳು 2,55,638 ಗ್ರಾಮ ಪಂಚಾಯ್ತಿ ಅಭಿವೃದ್ಧಿ ಯೋಜನೆ, 2025-26ರಲ್ಲಿ 2,64,407 ಪಂಚಾಯ್ತಿಗಳು 2,55,262 ಅಭಿವೃದ್ಧಿ ಯೋಜನೆಗಳನ್ನು ಅಪ್‌ಲೋಡ್‌ ಮಾಡಿವೆ ಎಂದು ಮಾಹಿತಿ ಒದಗಿಸಿದೆ.

ಇದಲ್ಲದೆ, ಕಳೆದ ಮೂರು ವರ್ಷಗಳಲ್ಲಿ ಇ ಗ್ರಾಮ್ ಸ್ವರಾಜ್ ಪಿಎಫ್‌ಎಂಸ್‌ ಮೂಲಕ ಆನ್‌ಲೈನ್ ನಿಧಿ ವರ್ಗಾವಣೆಯ ಸ್ಥಿತಿಯನ್ನು ರಾಷ್ಟ್ರೀಯ ಮಟ್ಟದೊಂದಿಗೆ ಹೋಲಿಸಿದೆ. ಅದರ ಅಂಕಿ ಸಂಖ್ಯೆಗಳನ್ನು ಒದಗಿಸಿದೆ.

ಇದರ ಪ್ರಕಾರ 2023-24ರಲ್ಲಿ ದೇಶದ ಒಟ್ಟು 2,56,902 ಗ್ರಾಮ ಪಂಚಾಯ್ತಿಗಳ ಪೈಕಿ 2,45,041 ಆನ್‌ಲೈನ್ ವ್ಯವಸ್ಥೆ ಹೊಂದಿವೆ. ಈ ಪಂಚಾಯ್ತಿಗಳಿಗೆ 34,246.46 ಕೋಟಿ ರು ಮಂಜೂರಾಗಿದೆ. ಅದೇ ರೀತಿ 2024-25ರಲ್ಲಿ 2,56,169 ಪಂಚಾಯ್ತಿಗಳ ಪೈಕಿ 2,43,217 ಪಂಚಾಯ್ತಿಗಳು ಆನ್‌ಲೈನ್‌ ವ್ಯವಸ್ಥೆ ಹೊಂದಿವೆ. ಈ ಪಂಚಾಯ್ತಿಗಳಿಗೆ 37,651.95 ಕೋಟಿ ರು ಮಂಜೂರಾಗಿದೆ. 2025-26ರಲ್ಲಿ 2,58,725 ಪಂಚಾಯ್ತಿಗಳ ಪೈಕಿ 2,45,802 ಪಂಚಾಯ್ತಿಗಳು ಆನ್‌ಲೈನ್ ವ್ಯವಸ್ಥೆ ಹೊಂದಿವೆ. ಈ ಪಂಚಾಯ್ತಿಗಳಿಗೆ 32,762.52 ಕೋಟಿ ರು ಮಂಜೂರಾಗಿದೆ ಎಂದು ವಿವರಿಸಿದೆ.

 

 

ಕರ್ನಾಟಕಕ್ಕೆ  ಅತೀ ಹೆಚ್ಚಿನ ಮೊತ್ತ ಬಾಕಿ 

ದೇಶದ 28 ರಾಜ್ಯಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸ್ಸು ಪ್ರಕಾರ 2,36,805.00 ಕೋಟಿ ರು ಅನುದಾನವನ್ನು ಹಂಚಿಕೆ ಮಾಡಿದೆ. ಈ ಪೈಕಿ 2,21,882.34 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 14,922.66 ಕೋಟಿ ರು ಬಾಕಿ ಇದೆ. ಇದರಲ್ಲಿ ಕರ್ನಾಟಕಕ್ಕೆ 12,539 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಈ ಪೈಕಿ 2026ರ ಜುಲೈ 22ರ ಅಂತ್ಯಕ್ಕೆ 8,688.89 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 3,850.11 ಕೋಟಿ ರು ಬಾಕಿ ಇದೆ. ದೇಶದ 28 ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕಕ್ಕೇ ಅತೀ ಹೆಚ್ಚಿನ ಮೊತ್ತ ಬಾಕಿ ಇರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಅಸ್ಸಾಂಗೆ ಪೂರ್ಣ ಅನುದಾನ ಬಿಡುಗಡೆ

ಆಂಧ್ರ ಪ್ರದೇಶಕ್ಕೆ 10,231.00 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ 10,055.82 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 175.18 ಕೊಟಿ ರುಪಾಯಿ ಬಾಕಿ ಇದೆ. ಅರುಣಾಚಲ ಪ್ರದೇಶಕ್ಕೆ ಹಂಚಿಕೆಯಾಗಿದ್ದ 900 ಕೋಟಿ ರು ಪೈಕಿ 258.50 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ 641.50 ಕೋಟಿ ರು ಬಾಕಿ ಇದೆ. ಅಸ್ಸಾಂ ಹಂಚಿಕೆಯಾಗಿದ್ದ 6,253 ಕೋಟಿ ರುಗಳನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ. ಬಿಹಾರಕ್ಕೆ ಹಂಚಿಕೆಯಾಗಿರುವ 19,561 ಕೋಟಿ ರು ಪೈಕಿ 19,527.34 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ ಕೇವಲ 33.66 ಕೋಟಿಯಷ್ಟೇ ಬಾಕಿ ಇದೆ.

 

ಗುಜರಾತ್‌ ಗೆ ಅತೀ ಕಡಿಮೆ ಬಾಕಿ ಉಳಿಸಿದ ಕೇಂದ್ರ

ಛತ್ತೀಸ್‌ ಗಢ್‌ಗೆ 5,669 ಕೋಟಿ ರು ಪೈಕಿ 5,661.24 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಗೆ 7.76 ಕೋಟಿ ರು ಬಾಕಿ ಇದೆ. ಗೋವಾಕ್ಕೆ ಹಂಚಿಕೆಯಾಗಿರುವ 293 ಕೋಟಿ ರು ಪೈಕಿ 188.88 ಕೋಟಿ ರು ಬಿಡುಗಡೆ ಮಾಡಿರುವ ಕೇಂದ್ರವು 104.12 ಕೋಟಿ ರುಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ. ಗುಜರಾತ್‌ ರಾಜ್ಯಕ್ಕೆ 12,455 ಕೋಟಿ ರು ಹಂಚಿಕೆ ಪೈಕಿ 12,453.39 ಕೋಟಿ ರು ಬಿಡುಗಡೆ ಮಾಡಿರುವ ಕೇಂದ್ರವು ಬಿಡುಗಡೆಗೆ ಕೇವಲ 1.60 ಕೋಟಿಯಷ್ಟೇ ಬಾಕಿ ಉಳಿಸಿಕೊಂಡಿದೆ.

ಹರ್ಯಾಣಕ್ಕೆ 4,929.00 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ 4,856.54 ಕೋಟಿ ರು ಬಿಡುಗಡೆ ಮಾಡಿರುವ ಕೇಂದ್ರವು 72.46 ಕೋಟಿ ರು ಗಳನ್ನು ಬಿಡುಗಡೆ ಮಾಡಿಲ್ಲ. ಹಿಮಾಚಲ ಪ್ರದೇಶದಲ್ಲಿ 1,673.00 ಕೋಟಿ ರು ಹಂಚಿಕೆ ಮಾಡಿರುವ ಕೇಂದ್ರವು 1,671.40 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 1.60 ಕೋಟಿ ಮಾತ್ರ ಬಾಕಿ ಉಳಿಸಿಕೊಂಡಿದೆ. ಜಾರ್ಖಂಡ್‌ ರಾಜ್ಯಕ್ಕೆ 6,585.00 ಕೋಟಿ ರು ಹಂಚಿಕೆ ಪೈಕಿ 5,907.88 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 677.12 ಕೋಟಿ ರು ಬಾಕಿ ಇರಿಸಿಕೊಂಡಿದೆ.

ಅದೇ ರೀತಿ ಕರ್ನಾಟಕಕ್ಕೆ 12,539.00 ಕೋಟಿ ರು ಹಂಚಿಕೆ ಮಾಡಿರುವ ಕೇಂದ್ರವು 8,688.89 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 3,850.11 ಕೋಟಿ ರುಪಾಯಿ ಬಾಕಿ ಇರಿಸಿಕೊಂಡಿದೆ. ಕೇರಳಕ್ಕೆ ಹಂಚಿಕೆಯಾಗಿದ್ದ 6,344 ಕೋಟಿ ರುಪಾಯಿಯನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದೆ. ಮಧ್ಯ ಪ್ರದೇಶಕ್ಕೆ ಹಂಚಿಕೆಯಾಗಿದ್ದ 15,527 ಕೋಟಿ ರು ಪೈಕಿ 15,487 ಕೋಟಿ ರುಪಾಯಿ ಬಿಡುಗಡೆ ಮಾಡಿರುವ ಕೇಂದ್ರವು ಬಿಡುಗಡೆಗೆ ಇನ್ನೂ 39.03 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ.

 

ಮಿಜೋರಾಂ ಗೆ ಪೂರ್ತಿ ಬಿಡುಗಡೆ

ಮಹಾರಾಷ್ಟ್ರಕ್ಕೆ 22,713 ಕೋಟಿ ರು ಹಂಚಿಕೆ ಮಾಡಿರುವ ಪೈಕಿ 20,292.04 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 2,420.96 ಕೋಟಿ ರುಪಾಯಿ ಬಾಕಿ ಇರಿಸಿಕೊಂಡಿದೆ. ಮಣಿಪುರ‌ ರಾಜ್ಯಕ್ಕೆ 690.00 ಕೋಟಿ ರುಪಾಯಿ ಹಂಚಿಕೆ ಮಾಡಿರುವ ಪೈಕಿ ಕೇವಲ 65.50 ಕೋಟಿ ರುಪಾಯಿ ಬಿಡುಗಡೆ ಮಾಡಿ ಬಿಡುಗಡೆಗೆ 624.50 ಕೋಟಿ ರುಪಾಯಿ ಬಾಕಿ ಇರಿಸಿಕೊಂಡಿದೆ. ಮೇಘಾಲಯಕ್ಕೆ ಹಂಚಿಕೆಯಾಗಿರುವ 711.00 ಕೋಟಿ ರುಪಾಯಿ ಪೈಕಿ 94.50 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ 616.50 ಕೋಟಿ ರು ಬಿಡುಗಡೆಗೆ ಬಾಕಿ ಇದೆ. ಮಿಜೋರಾಂ ರಾಜ್ಯಕ್ಕೆ ಹಂಚಿಕೆಯಾಗಿದ್ದ 362 ಕೋಟಿ ರುಪಾಯಿಯನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದೆ.

ನಾಗಾಲ್ಯಾಂಡ್‌ ರಾಜ್ಯಕ್ಕೆ ಹಂಚಿಕೆಯಾಗಿರುವ 486.00 ಕೋಟಿ ರು ಪೈಕಿ 140 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 346 ಕೋಟಿ ರುಪಾಯಿ ಬಾಕಿ ಇದೆ. ಒಡಿಶಾಕ್ಕೆ 8,800 ಕೋಟಿ ರುಪಾಯಿ ಹಂಚಿಕೆಯಾಗಿತ್ತು. ಈ ಪೈಕಿ 8,796.11 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 3.89 ಕೋಟಿಯಷ್ಟೇ ಬಾಕಿ ಇರಿಸಿಕೊಂಡಿದೆ. ಪಂಜಾಬ್‌ಗೆ 5,410 ಕೋಟಿ ರು ಹಂಚಿಕೆಯಾಗಿದ್ದರ ಪೈಕಿ 5,383.67 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಗೆ 26.33 ಕೋಟಿಯಷ್ಟೇ ಬಾಕಿ ಇದೆ.

ರಾಜಸ್ಥಾನಕ್ಕೆ ಹಂಚಿಕೆಯಾಗಿರುವ 15,053.00 ಕೋಟಿ ರುಪಾಯಿ ಪೈಜಕಿ 13,391.31 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 1,661.69 ಕೋಟಿ ರುಪಾಯಿ ಬಾಕಿ ಇದೆ. ಸಿಕ್ಕೀಂ ರಾಜ್ಯಕ್ಕೆ 165.00 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ 162.78 ಕೋಟಿ ರುಪಾಯಿ ಬಿಡುಗಡೆಯಾಗಿದೆ. ಬಿಡುಗಡೆಗೆ 2.22 ಕೋಟಿ ಬಾಕಿ ಇದೆ. ತಮಿಳುನಾಡಿಗೆ 14,059.00 ಕೋಟಿ ರುಪಾಯಿ ಹಂಚಿಕೆಯಾಗಿತ್ತು. ಈ ಪೈಕಿ 11,812.93 ಕೋಟಿ ರುಪಾಯಿ ಬಿಡುಗಡೆಯಾಗಿದೆ. ಬಿಡುಗಡೆಗೆ 2,246.07 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ. ತೆಲಂಗಾಣಕ್ಕೆ 7,201.00 ಕೋಟಿ ರು ಹಂಚಿಕೆಯಾಗಿದ್ದರ ಪೈಕಿ 6,110.45 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 1,090.55 ಕೋಟಿ ರುಪಾಯಿ ಬಾಕಿ ಇದೆ.

ತ್ರಿಪುರ- ಉತ್ತರ ಪ್ರದೇಶಕ್ಕೆ ಪೂರ್ಣ ಅನುದಾನ ಬಿಡುಗಡೆ

ತ್ರಿಪುರ ರಾಜ್ಯಕ್ಕೆ ಹಂಚಿಕೆಯಾಗಿದ್ದ 746 ಕೋಟಿ ರುಪಾಯಿ, ಉತ್ತರ ಪ್ರದೇಶಕ್ಕೆ ಹಂಚಿಕೆಯಾಗಿರುವ 38,012 ಕೋಟಿ ರುಪಾಯಿಯನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದೆ. ಉತ್ತರಾಖಂಡ್‌ ರಾಜ್ಯಕ್ಕೆ 2,239 ಕೋಟಿ ರುಪಾಯಿ ಹಂಚಿಕೆಯಾಗಿರುವ ಪೈಕಿ 2,228.06 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 10.94 ಕೋಟಿ ಬಾಕಿ ಇದೆ. ಪಶ್ಚಿಮ ಬಂಗಾಳಕ್ಕೆ  ಹಂಚಿಕೆಯಾಗಿದ್ದ 17,199 ಕೋಟಿ ರುಪಾಯಿ ಪೈಕಿ 16,930.14 ಕೋಟಿ ರುಪಾಯಿ ಬಿಡುಗಡೆ ಮಾಡಿರುವ ಕೇಂದ್ರವು 268.86 ಕೋಟಿ ರುಪಾಯಿಯನ್ನು ಬಾಕಿ ಇರಿಸಿಕೊಂಡಿದೆ.

Hot this week

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

ಮುದ್ರಾ ಯೋಜನೆ ಸಾಲದ ಖಾತೆ ತೆರೆಯುವಲ್ಲಿ ಹಿಂದುಳಿದ 8 ಜಿಲ್ಲೆ; ಸಾಲ ನೀಡುವಲ್ಲಿ ಖಾಸಗಿ ಬ್ಯಾಂಕ್‌ಗಳದ್ದೇ ಮೇಲುಗೈ

ಬೆಂಗಳೂರು; ಮುದ್ರಾ ಸಾಲ ಸಹಿತ ವಿವಿಧ ಸ್ವಯಂ ಉದ್ಯಮ ಯೋಜನೆಗಳಡಿ ಕರ್ನಾಟಕ...

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...
Please Scan to make Your Contribution

Topics

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

Related Articles

Popular Categories

error: Content is protected !!