ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ ಅಕ್ರಮ, ಅವ್ಯವಹಾರಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.
ವಿಧಾನ ಮಂಡಲದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ನರೇಗಾ ಯೋಜನೆಯಡಿಯಲ್ಲಿನ ಮಾನವ ಸಂಪನ್ಮೂಲ ಬಳಕೆಯ ಹಿಂದಿನ ಅಕ್ರಮ, ಅವ್ಯವಹಾರಗಳನ್ನು ತೆರೆದಿಟ್ಟಿದೆ.

ಸರಕು ಸೇವೆಗಳ ಮೌಲ್ಯವು ಒಂದು ಲಕ್ಷ ರೂಪಾಯಿಗಿಂತಲೂ ಮೀರಿದಾಗ ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4 (ಇ) ನಿಗದಿಪಡಿಸಿದೆ. ಈ ಸಂಬಂಧ ರಾಜ್ಯದ 29 ಜಿಲ್ಲೆಗಳಲ್ಲಿ 2,920 ಸಿಬ್ಬಂದಿಗಳ ಸೇವೆಗಳನ್ನು ಹೊರಗುತ್ತಿಗೆ ನೀಡಲು ಮಾನವ ಸಂಪನ್ಮೂಲ ಸಂಸ್ಥೆಗಳಿಂದ 2012ರಲ್ಲೇ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್ ಮೌಲ್ಯಮಾಪನ ನಂತರ 29 ಜಿಲ್ಲೆಗಳಲ್ಲಿ 14 ಏಜೆನ್ಸಿಗಳನ್ನು ನೇಮಿಸಿತ್ತು. 2013ರಲ್ಲಿ ಕಾರ್ಯಾದೇಶ ಪತ್ರ ನೀಡಲಾಗಿತ್ತು. ಇದರ ಪ್ರಕಾರ ಈ ಒಪ್ಪಂದವು 2016ರ ಜುಲೈ 31ರವರೆಗಿತ್ತು.
ಆ ನಂತರ ಈ ಇವೇ ಸಂಸ್ಥೆಗಳಿಗೆ 2018ರ ಜೂನ್ 30ರವರೆಗೆ ಕಾಲಾವಕಾಶ ವಿಸ್ತರಿಸಲು ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಅಲ್ಲದೇ ತಕ್ಷಣವೇ ಟೆಂಡರ್ ಕರೆಯಲು ಸೂಚಿಸಿತ್ತು. ಆದರೆ ಈ ನಿಟ್ಟಿನಲ್ಲಿ 2018ರ ಮೇ, 2019ರ ಜೂನ್ ಮತ್ತು 2021ರ ಡಿಸೆಂಬರ್‍ನಲ್ಲಿ ಜಾರಿಗೊಳಿಸಿದ್ದ ಟೆಂಡರ್ ಅಧಿಸೂಚನೆಗಳನ್ನು ರದ್ದುಗೊಳಿಸಿತ್ತು. ಇದಕ್ಕೆ ಆಡಳಿತಾತ್ಮಕ ಕಾರಣಗಳನ್ನು ಮುಂದೊಡ್ಡಲಾಗಿತ್ತು ಎಂಬುದನ್ನು ಸಿಎಜಿ ವರದಿಯು ಬಯಲು ಮಾಡಿದೆ.

ಪರೀಕ್ಷಾ ತನಿಖೆ ನಡೆಸಿದ್ದ 5 ಜಿಲ್ಲೆಗಳಲ್ಲಿ ಮಾನವ ಸಂಪನ್ಮೂಲ ಸೇವೆಗಳನ್ನು ಈ ಏಜೆನ್ಸಿಗಳು ಮುಂದುವರೆಸಿದ್ದವು. 2019-20ರಿಂದ 2023-24ರವರೆಗೆ ಒಟ್ಟು 86.27 ಕೊಟಿ ರುಪಾಯಿ ಪಾವತಿಸಿತ್ತು. ಇದು ಅಕ್ರಮ ಮತ್ತು ಅನಧಿಕೃತವಾಗಿತ್ತು ಎಂದು ಸಿಎಜಿ ವರದಿಯು ವಿಶ್ಲೇಷಿಸಿದೆ.
86.67 ಕೋಟಿ ರು ಅಕ್ರಮ, ಅನಧಿಕೃತ ಹೇಗೆ?
ಆರ್‍ಎಫ್‌ಪಿ ಪ್ರಕಾರ ಒಪ್ಪಂದಗಳ ಅವಧಿಯನ್ನು 2016ರ ಜುಲೈ 31ರವರೆಗೆ ಮಾತ್ರ ವಿಸ್ತರಿಸಬಹುದು. ನಂತರ ಕೆಟಿಪಿಪಿ ಕಾಯ್ದೆ ನಿಬಂಧನೆಗಳ ಪ್ರಕಾರ ಹೊಸ ಟೆಂಡರ್ ಕರೆಯಬೇಕು. ಆದರೆ ಇಲಾಖೆಯು ಹೊಸ ಟೆಂಡರ್ ಕರೆಯಲಿಲ್ಲ. ಹೀಗಾಗಿ ಸ್ಪರ್ಧಾತ್ಮಕ ದರಗಳನ್ನು ಪಡೆಯುವ ಅವಕಾಶವನ್ನೂ ಇಲಾಖೆಯು ಕಳೆದುಕೊಂಡಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಹಾಗೆಯೇ ಕರ್ನಾಟಕ ಸರ್ಕಾರದ (ವ್ಯವಹಾರ ವಹಿವಾಟು) ನಿಯಮಗಳು 1977ರ ಪ್ರಕಾರ ಸರಕು ಮತ್ತು ಸೇವೆಗಳ ಖರೀದಿಯ ಪರಿಷ್ಕೃತ ಮೊತ್ತವು 10 ಕೋಟಿ ರು ಮೀರಿದಲ್ಲಿ ಸಚಿವ ಸಂಪುಟದ ಅನುಮೋದನೆ ಕಡ್ಡಾಯವಾಗಿದೆ. ಇದಲ್ಲದೇ ಯಾವುದೇ ಪ್ರಾಧಿಕಾರವು ತನ್ನದೇ ಮಂಜೂರಾತಿ ಅಧಿಕಾರವನ್ನು ಮೀರಿ ವೆಚ್ಚ ಮಾಡುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ವೆಚ್ಚವನ್ನು ಮಂಜೂರು ಮಾಡಬಾರದು ಎಂದು ಕರ್ನಾಟಕ ಹಣಕಾಸು ಸಂಹಿತೆ 1958ರ ಕಂಡಿಕೆ 15(4)ರಲ್ಲಿ ಸ್ಪಷ್ವವಾಗಿ ಹೇಳಲಾಗಿದೆ.

ಪಾಲನೆಯಾಗದ ಸಚಿವ ಸಂಪುಟದ ಸೂಚನೆ
ಆದರೂ ಈ ಮಾನವ ಸಂಪನ್ಮೂಲ ಸೇವೆಗಳ ಏಜೆನ್ಸಿಗಳ ಮುಂದುವರಿಕೆಗೆ 2018ರ ಜೂನ್ 3ರ ನಂತರದ ಅವಧಿಗೆ ಸಚಿವ ಸಂಪುಟದಿಂದ ಯಾವುದೇ ಸಮಯ ವಿಸ್ತರಣೆ ಅನುಮೋದನೆಯೇ ಇರಲಿಲ್ಲ. ಅಲ್ಲದೇ ಹೊಸ ಟೆಂಡರ್‍ಗಳ ಮೂಲಕ ಏಜೆನ್ಸಿಗಳನ್ನು ನೇಮಕ ಮಾಡುವ ಸಚಿವ ಸಂಪುಟದ ಸೂಚನೆಗಳನ್ನೂ ಪಾಲಿಸಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಒಪ್ಪಂದವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಮತ್ತೊಂದು ಜಿಲ್ಲೆಯಲ್ಲಿ ಕೆಲಸ ಮಾಡುವ ಯಾವುದೇ ಮಾನವ ಸಂಪನ್ಮೂಲದ ಏಜೆನ್ಸಿಗೆ ಆ ಒಪ್ಪಂದವನ್ನು ನಿಯೋಜಿಸಲು ಆರ್‍ಎಫ್‌ಪಿ ಅವಕಾಶ ಕಲ್ಪಿಸಿದೆ. ಈ ನಿಯೋಜನೆಯು ರದ್ದುಗೊಂಡ ಒಪ್ಪಂದಕ್ಕೆ ಅನ್ವಯವಾಗುವ ಅದೇ ನಿಯಮಗಳು ಮತ್ತು ಷರತ್ತುಗಳ ಮೇಲೆಯೇ ಇರಬೇಕು. ಮತ್ತು ಗರಿಷ್ಠ 6 ತಿಂಗಳ ಅವಧಿಗೆ ಮಾತ್ರ ಮುಂದುವರೆಯಬೇಕು. ಈ ಅವಧಿಯಲ್ಲಿಯೇ ಇಲಾಖೆಯು ಹೊಸ ಟೆಂಡರ್ ಆಹ್ವಾನಿಸಬೇಕಾಗಿತ್ತು.

ಆದರೆ ಕೊಪ್ಪಳ ಜಿಲ್ಲೆ ಹೊರತುಪಡಿಸಿ 2017ರ ನವೆಂಬರ್‍ರಿಂದ 2022ರ ಜನವರಿವರೆಗೆ ಗುತ್ತಿಗೆಗಳನ್ನು ಇತರೆ ಏಜೆನ್ಸಿಗಳಿಗೆ ಮರು ನಿಯೋಜಿಸಿತ್ತು. ನಿಗದಿತ 6 ತಿಂಗಳ ಅವಧಿಯ ಬದಲಿಗೆ ಮರು ನಿಯೋಜಿಸಿದ ಒಪ್ಪಂದಗಳು 2024ರ ಅಕ್ಟೋಬರ್‍ವರೆಗೂ ಮುಂದುವರೆದಿದ್ದವು. ಇದರಿಂದ ಆರ್‍ಎಫ್‌ಪಿಯ ಷರತ್ತು ಉಲ್ಲಂಘಿಸಿದಂತಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ವಿವರಿಸಿದೆ.
‘ಈ ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಸಂಸ್ಥೆಗಳಿಗೆ ಪಾವತಿಸಿದ 86.67 ಕೋಟಿ ರು ಮೊತ್ತವು ಅಕ್ರಮವಾಗಿತ್ತು. ಏಕೆಂದರೇ ಅವರ ಸೇವೆಗಳ ವಿಸ್ತರಣೆಯು ಸಚಿವ ಸಂಪುಟದ ನಿರ್ಧಾರಕ್ಕೆ ವಿರುದ್ಧವಾಗಿತ್ತು. ಮತ್ತು ಕೆಟಿಪಿಪಿ ಕಾಯ್ದೆಯ ನಿಬಂಧನೆಗಳನ್ನೂ ಉಲ್ಲಂಘಿಸಿದಂತಾಗಿತ್ತು,’ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ. ವರದಿಯಲ್ಲಿನ ಅವಲೋಕನಗಳನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದೆ.
ಸ್ಪರ್ಧಾತ್ಮಕ ದರ ಪಡೆಯುವಲ್ಲಿ ವಿಫಲ
ಅದೇ ರೀತಿ ಇತರೆ ಜಿಲ್ಲೆಗಳಲ್ಲಿ ಸೇವೆಗಳನ್ನು ಒದಗಿಸುವ ಏಜೆನ್ಸಿಗಳಿಗೆ ಗುತ್ತಿಗೆಯನ್ನು ಮರು ನಿಯೋಜಿಸುವ ಸಂದರ್ಭದಲ್ಲಿ ಐದಕ್ಕಿಮತ ಹೆಚ್ಚು ಜಿಲ್ಲೆಗಳನ್ನು ಒಂದೇ ಮಾನವ ಸಂಪನ್ಮೂಲ ಏಜೆನ್ಸಿಗೆ ನಿರ್ಬಂಧಿಸುವ ಆರ್‍ಎಫ್‌ಪಿ ಷರತ್ತು ಅನ್ವಯಿಸುವುದಿಲ್ಲ ಎಂದು ಹೇಳಿದೆ. ಇಪಿಎಫ್ ಮತ್ತು ಇಎಸ್‌ಐ ದೇಣಿಗೆಯನ್ನು ಸಂಬಂಧಪಟ್ಟ ಖಾತೆ ಲೆಕ್ಕ ಶೀರ್ಷಿಕೆಗೆ ಪಾವತಿ ಮಾಡದ ಬಗ್ಗೆ ಟಿಡಿಎಸ್ ಮ್ಯಾನೇಜ್‌ಮೆಂಟ್ ಕನ್ಸ್‌ಲ್ಟೆಂಟ್ ಪ್ರೈವೈಟ್ ಲಿಮಿಟೆಡ್ ವಿರುದ್ಧ ತುಮಕೂರು ಜಿಲ್ಲಾ ಪಂಚಾಯ್ತಿಗೆ ದೂರು ಸಲ್ಲಿಕೆಯಾಗಿತ್ತು. ಈ ದೂರನ್ನೂ ಸಹ ಸಿಎಜಿಯು ಗಮನಿಸಿದೆ.
ಈ ಜಿಲ್ಲೆಯಲ್ಲಿ 2018ರ ಮೇ 3ರಂದು ಗುತ್ತಿಗೆ ರದ್ದುಗೊಳಿಸಲು ಮತ್ತು ಕಾಮಗಾರಿಯನ್ನು ಮರು ನಿಯೋಜಿಸಲು ಇಲಾಖೆಯು ಏಜೆನ್ಸಿ ವಿರುದ್ಧ ಕ್ರಮವನ್ನು ಆರಂಭಿಸಿತು. ಈಗಾಗಲೇ ನೆರೆಯ ಜಿಲ್ಲೆಗಳಲ್ಲಿ ಸೇವೆಗಳನ್ನು ಒದಗಿಸುತ್ತಿರುವ 6 ಮಾನವ ಸಂಪನ್ಮೂಲ ಏಜೆನ್ಸಿಗಳಿಂದ ಟೆಂಡರ್ ಅಹ್ವಾನಿಸಿತ್ತು. ಇದರ ಪ್ರಕಾರ ಇನ್ವೆನ್ಸಿಸ್ ಟೆಕ್ನಾಲಜೀಸ್ ಪ್ರೈವೈಟ್ ಲಿಮಿಟೆಡ್ ನ ಪ್ರಸ್ತಾವನೆಯನ್ನು ಇಲಾಖೆಯು ಒಪ್ಪಿಕೊಂಡಿತ್ತು. ಮತ್ತು ಗುತ್ತಿಗೆ ಒಪ್ಪಂದವನ್ನು ಶೆ. 6.5ರಷ್ಟು ಸ್ವೀಕೃತ ಸೇವಾ ಶುಲ್ಕದೊಂದಿಗೆ ಕಾರ್ಯಗತಗೊಳಿಸಿತ್ತು.
ಮತ್ತೊಂದು ಏಜೆನ್ಸಿ ಬಿಕೆಆರ್ ಸೆಕ್ಯೂರಿಟಿ ಏಜೆನ್ಸಿಸ್, ಈಗಾಗಲೇ 5 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದು ಶೇ.1.5ರಷ್ಟು ಸೇವಾ ಶುಲ್ಕದ ಪ್ರಸ್ತಾವನೆ ನೀಡಿತ್ತು. ಆದರೆ ಒಂದೇ ಏಜೆನ್ಸಿಗೆ 5ಕ್ಕಿಂತ ಹೆಚ್ಚು ಜಿಲ್ಲೆಗಳಿಗೆ ಹಂಚಿಕೆ ಮಾಡುವುದನ್ನು ಆರ್‍ಎಫ್‌ಪಿಯಲ್ಲಿ ನಿಷೇಧಿಸಿತ್ತು. ಹೀಗಾಗಿ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಮರು ನಿಯೋಜನೆ ಸಂದರ್ಭದಲ್ಲಿಯೂ ಒಂದೇ ಮಾನವ ಸಂಪನ್ಮೂಲ ಏಜೆನ್ಸಿಗೆ 5ಕ್ಕಿಂತ ಹೆಚ್ಚು ಜಿಲ್ಲೆಗಳನ್ನು ಹಂಚಿಕೆ ಮಾಡಲು ಆರ್‍ಎಫ್‌ಪಿ ಷರತ್ತು ಅನ್ವಯಿಸುವುದಿಲ್ಲ . ಅಂತಹ ಸಂದರ್ಭಗಳಲ್ಲಿ 5 ಟೆಂಡರ್‍ಗಳ ಮಿತಿ ಅನ್ವಯಿಸುವುದಿಲ್ಲ ಎಂಬ ಲೆಕ್ಕ ಪರಿಶೋಧನಾ ವಾದವನ್ನು ಬೆಂಬಲಿಸುವ ಮೂಲಕ ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯು 2022ರ ಜನವರಿಯಲ್ಲಿ ಮಾನವ ಸಂಪನ್ಮೂಲ ಒಪ್ಪಂದವನ್ನು ಬಿಕೆಆರ್ ಸೆಕ್ಯೂರಿಟಿ ಏಜೆನ್ಸಿಗೇ ಮರು ನಿಯೋಜಿಸಿತ್ತು ಎಂದು ಸಿಎಜಿಯು ಪತ್ತೆ ಹಚ್ಚಿದೆ.

ಅದೇ ರೀತಿ ಮಂಡ್ಯ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ ಡೆಕ್ಸರಿಟಿ ಪ್ರಾಜೆಕ್ಟ್ ಪ್ರೈವೈಟ್ ಲಿಮಿಟೆಡ್ ಒಪ್ಪಂದವನ್ನು ರದ್ದುಗೊಳಿಸಿತ್ತು. ಮತ್ತು ಶೇ. 7ರಷ್ಟು ಸೇವಾ ಶುಲ್ಕ ವಿಧಿಸಿದ್ದ ಇನ್ವೆನ್ಸಿಸ್ ಟೆಕ್ನಾಲಜೀಸ್ ಪ್ರೈವೈಟ್ ಲಿಮಿಟೆಡ್‌ಗೆ ವಹಿಸಿತ್ತು. ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಅವರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೆಲಸ ಮಾಡುವ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳೇ ಇರಲಿಲ್ಲ. ಹೀಗಾಗಿ ಮೈಸೂರು ಜಿಲ್ಲೆಯಲ್ಲಿ ಶೇ.ನಾಲ್ಕರಷ್ಟು ಸೇವಾ ಶುಲ್ಕದಲ್ಲಿ ಸೇವೆ ಒದಗಿಸುತ್ತಿದ್ದ ಮೇಘಾ ಸರ್ವಿಸಸ್ ಬ್ಯೂರ್ ಮಾನವ ಸಂಪನ್ಮೂಲ ಸೇವೆಗಳನ್ನು ಇಲಾಖೆಯು ಪಡೆಯಲು ಸಾಧ್ಯವಾಗಲಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿದೆ.
ಹೀಗೆ ಬಿಕೆಆರ್ ಸೆಕ್ಯೂರಿಟಿ ಏಜೆನ್ಸಿಯು ಅತ್ಯಂತ ಕಡಿಮೆ ಟೆಂಡರ್‍ನ್ನು (ಶೇ.1.5) ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಒ ತಪ್ಪಾಗಿ ತಿರಸ್ಕರಿಸಿದ್ದರು. ಮತ್ತು ಹತ್ತಿರದ ಮೈಸೂರು ಜಿಲ್ಲೆಯ ಮೇಘಾ ಸರ್ವಿಸ್ ಬ್ಯೂರೋದಿಂದ ಅತ್ಯಂತ ಸ್ಪರ್ಧಾತ್ಮಕ ದರ ಪಡೆಯಲು ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ವಿಫಲವಾಗಿದ್ದರು. 2022-23ರ ಅವಧಿಯಲ್ಲಿ 121.53 ಲಕ್ಷ, 35.19 ಲಕ್ಷ ರು ವೆಚ್ಚವನ್ನು ತಪ್ಪಿಸಬಹುದಾಗಿತ್ತು. ಆದರೆ ಈ ಜಿಲ್ಲಾ ಪಂಚಾಯ್ತಿಗಳ ಸಿಇಒ ಗಳ ಕ್ರಮದಿಂದಾಗಿ ಈ ವೆಚ್ಚವನ್ನು ಭರಿಸಬೇಕಾಯಿತು ಎಂದು ಸಿಎಜಿ ವರದಿಯಿಂದ ಗೊತ್ತಾಗಿದೆ.







