ಬೆಂಗಳೂರು; ನಕಲಿ ಪಿಎಚ್‌ಡಿ ಪಡೆದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ರಾಜೀನಾಮೆ ನೀಡಿದ್ದ ಅಂದಾಜು 208 ಮಂದಿ ಅತಿಥಿ ಉಪನ್ಯಾಸಕರಿಗೆ ಪಾವತಿಸಿರುವ ನೂರಾರು ಕೋಟಿ ರುಪಾಯಿ ಮೊತ್ತದ ವೇತನವನ್ನು ಕಾಲೇಜು ಶಿಕ್ಷಣ ಇಲಾಖೆಯು ವಸೂಲು ಮಾಡುವ ಗೋಜಿಗೆ ಹೋಗಿಲ್ಲ. ಅಲ್ಲದೇ ಯಾರೊಬ್ಬರ ಮೇಲೂ ಪೊಲೀಸ್ ಠಾಣೆಗಳಲ್ಲಿ ದೂರು ಕೂಡ ಸಲ್ಲಿಕೆಯಾಗಿಲ್ಲ.
ಬದಲಿಗೆ ಈ ಪ್ರಕರಣಗಳನ್ನು ಇಲಾಖೆಯ ಬೋಧಕ ವರ್ಗದ ಕೆಲ ಸಿಬ್ಬಂದಿಯಿಂದಲೆ ತನಿಖೆ ಮಾಡಿಸುತ್ತಿದೆ. ಈ ಪ್ರಕರಣದ ಗಂಭೀರತೆ ಅರಿಯದ ಇಲಾಖೆಯು ವಿಶೇಷ ತನಿಖಾ ತಂಡವನ್ನೂ ರಚಿಸಿಲ್ಲ. ಹೀಗಾಗಿ ಕಾಲೇಜು ಶಿಕ್ಷಣ ಇಲಾಖೆಯು ಈ ಪ್ರಕರಣವನ್ನು ಇಲಾಖೆ ಹಂತದಲ್ಲೇ ಮುಚ್ಚಿ ಹಾಕಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅತಿಥಿ ಉಪನ್ಯಾಸಕರ ಸೇವೆಗೆ ನೇಮಕಗೊಳಿಸುವ ಮುನ್ನ ಅವರು ಪಡೆದಿದ್ದ ಪಿಎಚ್‌ಡಿ ಪ್ರಮಾಣಪತ್ರಗಳ ನೈಜತೆಯನ್ನು ಪರಿಶೀಲನೆ ಮಾಡಿರಲಿಲ್ಲ. ಹೀಗಾಗಿ ಅವರಿಗೆ ಕನಿಷ್ಠ 32,000 ರು ನಿಂದ ಗರಿಷ್ಠ 50,000 ದವರೆಗೆ ಮಾಸಿಕವಾಗಿ ವೇತನ ಪಾವತಿಸಲಾಗುತ್ತಿತ್ತು. ಪಿಎಚ್‌ಡಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಲು ಮುಂದಾಗಿದ್ದ ಹೊತ್ತಿನಲ್ಲೇ 200 ಮಂದಿ ದಿಢೀರ್ ಎಂದು ರಾಜೀನಾಮೆ ನೀಡಿದ್ದರು.
ರಾಜೀನಾಮೆ ನೀಡುವ ಅವಧಿಯವರೆಗೂ ಕಾರ್ಯನಿರ್ವಹಿಸುತ್ತಿದ್ದ ಈ 208 ಮಂದಿ ಅತಿಥಿ ಉಪನ್ಯಾಸಕರಿಗೆ ಮಾಸಿಕ ಅಂದಾಜು 10 ಕೋಟಿ ರುವರೆಗೆ ವೇತನ ಪಾವತಿಯಾಗಿದೆ ಎಂದು ಲೆಕ್ಕ ಹಾಕಿದರೂ ವಾರ್ಷಿಕವಾಗಿ 120 ಕೋಟಿ ರು ವೇತನ ಪಾವತಿಸಲಾಗಿದೆ.
ರಾಜೀನಾಮೆ ನೀಡಿರುವ ಈ 200 ಮಂದಿ ಅತಿಥಿ ಉಪನ್ಯಾಸಕರಿಗೆ 2 ರಿಂದ 3 ವರ್ಷಗಳವರೆಗೂ ಇದೇ ವೇತನ ಪಾವತಿಯಾಗಿದ್ದರೇ ಇದರ ಮೊತ್ತವೇ ನೂರಾರು ಕೋಟಿ ರುಪಾಯಿ ದಾಟುತ್ತದೆ.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾಶಂಕರ್ ಎಂಬುವರ ಮೇಲಿನ ಆರೋಪದ ಕುರಿತು 2026ರ ಫೆ.2ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲೇ ಅತಿಥಿ ಉಪನ್ಯಾಸಕರು ರಾಜೀನಾಮೆ ಕೊಟ್ಟಿದ್ದರ ಕುರಿತೂ ಚರ್ಚೆಯಾಗಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯ ನಡವಳಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕದಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರ ಪೈಕಿ ಕನಿಷ್ಠ 200 ಅತಿಥಿ ಉಪನ್ಯಾಸಕರು ರಾಜೀನಾಮೆ ನೀಡಿದ್ದ ಪ್ರಕರಣವು ಚರ್ಚೆಗೆ ಗ್ರಾಸವಾಗಿತ್ತು. ಇದೇ ಪ್ರಕರಣಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಗಂಭೀರವಾಗಿ ಚರ್ಚಿಸಿದೆ. 2026ರ ಫೆ.2ರಂದು ನಡೆದಿದ್ದ ಚರ್ಚೆಯ ವೇಳೆಯಲ್ಲಿ ರಾಜೀನಾಮೆ ಕೊಟ್ಟು ಹೋಗಿರುವ 200 ಮಂದಿ ಅತಿಥಿ ಉಪನ್ಯಾಸಕರು ಪಡೆದಿದ್ದ ವೇತನವನ್ನು ವಸೂಲುಮಾಡಬೇಕು ಎಂದು ಸಮಿತಿಯ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಸಭೆಯಲ್ಲಿ ಅಭಿಪ್ರಾಯಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.
ಸಂಬಳ ಕೊಟ್ಟಿದ್ದು ಸರಿಯೇ?
‘ಇವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು. ಇನ್ನು ಮೊನ್ನೆ ದಿನ ಯಾರ್ಯಾರು ಫೇಕ್ ಮಾರ್ಕ್ಸ್ ಕಾರ್ಡ್ ಕೊಟ್ಟಿದ್ದಾರೆಂದು ಚೆಕ್ ಮಾಡಬೇಕೆಂದು ಹೇಳಿ ಅನೌನ್ಸ್ ಮಾಡಿದ ಮೇಲೆ ಬಹಳಷ್ಟು ಜನ ಕಾಲೇಜ್‌ನ ಗೆಸ್ಟ್ ಲೆಕ್ಚರ್ಸ್ ರಾಜೀನಾಮೆ ಕೊಟ್ಟು ಹೊರಟು ಹೋಗಿದ್ದಾರೆ. ಆದರೆ ಇಲ್ಲಿಯವರೆಗೂ ಅವರಿಗೆ ಸಂಬ ಳ ಕೊಟ್ಟಿದ್ದೀರಲ್ಲ, ಇದು ಸರಿಯೇ, ಅದನ್ನು ವಸೂಲು ಮಾಡಬೇಕಲ್ಲವೇ, ಇದರ ಬಗ್ಗೆ ಮಾಹಿತಿ ಇದೆಯೇ ಎಂದು ಸಮಿತಿಯ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಪ್ರಶ್ನಿಸಿರುವುದು ನಡವಳಿಯಿಂದ ಗೊತ್ತಾಗಿದೆ.
ಇದಕ್ಕೆ ಉತ್ತರಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ‘ಸುಮಾರು 208 ಮಂದಿ ಗೆಸ್ಟ್ ಫ್ಯಾಕಲ್ಟಿ ರಿಸೈನ್ ಮಾಡಿದ್ದಾರೆ,’ ಎಂದು ಸಮಿತಿಗೆ ಮಾಹಿತಿ ಒದಗಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಸಮಿತಿ ಅಧ್ಯಕ್ಷರು ‘ ಇಷ್ಟು ಜನ ಮಕ್ಕಳಿಗೆ ಪಾಠ ಮಾಡಿದ್ದಾರೆಂದರೆ ಏನು ಅರ್ಥ?, ನೀವು ಏನು ನಡೆಸುತ್ತಿದ್ದೀರಿ ಎಂದು ಅರ್ಥವಾಗುತ್ತಿಲ್ಲ,’ ಎಂದು ಕೇಳಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಆಯುಕ್ತರ ಉತ್ತರವೇನು?
ಸಮಿತಿ ಅಧ್ಯಕ್ಷರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ‘ ಈಗ ಗೆಸ್ಟ್ ಫ್ಯಾಕಲ್ಟಿ ಕೌನ್ಸಲಿಂಗ್‌ನಲ್ಲಿ ಯಾರು ಸೆಲೆಕ್ಟ್ ಆಗಿದ್ದಾರೆ ಅವರ ಪಿಎಚ್‌ಡಿ ವೆರಿಫಿಕೇಷನ್ ಗೆ ನಾವು ಈಗ ಒಂದು ಎಸ್‌ಒಪಿ ಅನ್ನು ಕೊಟ್ಟಿದ್ದೇವೆ. ಈಗ ಏನು ಸುಮಾರು 200 ಜನ ಬಿಟ್ಟು ಹೋಗಿದ್ದಾರೆ ಅವರ ಬಗ್ಗೆ ಜೆ ಡಿ ಕಚೇರಿಯಲ್ಲಿನ ಟೀಚಿಂಗ್ ಫ್ಯಾಕಲ್ಟಿ ಒಂದಿಬ್ಬರಿಗೆ ಇದರ ಜವಾಬ್ದಾರಿ ಕೊಟ್ಟು ತನಿಖೆ ಮಾಡಿಸುತ್ತಿದ್ದೇವೆ,’ ಎಂದು ಉತ್ತರಿಸಿದ್ದರು.
ಈ ಉತ್ತರದಿಂದ ಅಸಮಾಧಾನ ವ್ಯಕ್ತಪಡಿಸಿದ್ದ ಸಮಿತಿಯ ಅಧ್ಯಕ್ಷರು ‘ ರಾಜೀನಾಮೆ ಕೊಟ್ಟ ಮೇಲೆ ಇನ್ನೇನು ತನಿಖೆ ಮಾಡಿಸುತ್ತೀರಿ, ನೀವು ಅವರ ಮೇಲೆ ಪೊಲೀಸ್ ಕಂಪ್ಲೇಟ್ ಕೊಡಬೇಕು ಅಷ್ಟೆ,’ ಎಂದು ಹೇಳಿದ್ದರು. ಆಗ ಆಯುಕ್ತರು ‘ ಮೊದಲು ಆ ಪಿಎಚ್ ಡಿ ನಕಲಿ ಎಂದು ಸಾಬೀತಾಗಬೇಕಿದೆ. ಇಲ್ಲದಿದ್ದರೇ ಅವರು ಪುನಃ ವಾಪಸ್ ಬರುವ ಚಾನ್ಸ್‌ಸ್ ಇರುತ್ತದೆ,’ ಎಂದು ಸಮಜಾಯಿಷಿ ನೀಡಿರುವುದು ತಿಳಿದು ಬಂದಿದೆ.
ಈ ವೇಳೆ ಸಮಿತಿಯ ಸದಸ್ಯ ಹಾಗೂ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರು ‘ ಅದು ಹೇಗೆ ಸಾಧ್ಯ, ನೀವು ಅವರನ್ನು ಬ್ಲಾಕ್‌ಲಿಸ್ಟ್ ಮಾಡಿ, ಲಾ ಎನ್‌ಫೋರ್ಸ್ ಮಾಡಬೇಕು. ನೀವು ಯಾರಿಗೂ ಹೆದರಬೇಕಿಲಲ. ಕಾನೂನು ಏನು ಹೇಳುತ್ತೆ ಅದನ್ನು ಮಾಡಿ, ದೇಶದಲ್ಲೇ ಕರ್ನಾಟಕ ಮುಂದುವರೆದ ರಾಜ್ಯ ಎಂದು ಗೊತ್ತಿದೆ,’ ಎಂದು ಹೇಳಿರುವುದು ಗೊತ್ತಾಗಿದೆ.
ಆಗ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ಅವರು ‘ ನೋಡಿ, ಈಗ ಯಾರ್ಯಾರು ರಾಜೀನಾಮೆ ಕೊಟ್ಟು ಹೋಗಿದ್ದಾರೆ ಅವರ ಸರ್ಟಿಫಿಕೇಟ್ ಡೂಪ್ಲಿಕೇಟ್ ಎಂದು ಪ್ರೂವ್ ಆದರೆ ಅವರಿಗೆ ಇಷ್ಟು ದಿನ ಏನು ಸಂಬಳ ಕೊಟ್ಟೀದ್ದೀರಿ ಅದನ್ನು ವಾಪಸ್ ವಸೂಲು ಮಾಡಬೇಕು,’ ಎಂದು ಸೂಚಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಆಗ ಆರ್ ವಿ ದೇಶಪಾಂಡೆ ಅವರು ‘ಅಷ್ಟೇ ಅಲ್ಲ ಅವರ ಮೇಲೆ ಪೊಲೀಸ್ ಕಂಪ್ಲೇಟ್ ಕೂಡ ಆಗಬೇಕು,’ ಎಂದು ನಿರ್ದೇಶಿಸಿದರು. ಇದಕ್ಕೆ ಇದೇ ಸಭೆಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ‘ಎಸ್‌ಐಟಿ ರಚನೆ ಆದರೂ ಪರವಾಗಿಲ್ಲ. ಈ ವಿಚಾರಕ್ಕೆ ಸಂಬಂಧಪಟ್ಟಂತೆ 8ರಿಂದ 10 ದಿನಗಳಲ್ಲಿ ಸಮಿತಿಗೆ ಮಾಹಿತಿಯನ್ನು ಕಳಿಸಿಕೊಡಿ,’ ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

ಉನ್ನತ ಶಿಕ್ಷಣ ಇಲಾಖೆಯು ಸಲ್ಲಿಸಿದ ಪಿಎಚ್‌ಡಿ ಮತ್ತು ಎಂಫಿಲ್ ಪ್ರಮಾಣಪತ್ರಗಳ ದೃಢೀಕರಣವನ್ನು ಪರಿಶೀಲನೆ ಮುಂದಾದ ನಂತರವಷ್ಟೇ ಅತಿಥಿ ಉಪನ್ಯಾಸಕರು ರಾಜೀನಾಮೆ ನೀಡಿದ್ದಾರೆ. ಇದು ಇಲಾಖೆಯ ಸಾಂಸ್ಥಿಕ ವೈಫಲ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಥವಾ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಂತಹ ಕಡ್ಡಾಯ ಅರ್ಹತೆಗಳನ್ನು ತಪ್ಪಿಸಲು ಹಲವಾರು ಅಭ್ಯರ್ಥಿಗಳು ನಕಲಿ ಪಿಎಚ್‌ಡಿ ಮತ್ತು ಎಂಫಿಲ್ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ದಾಖಲೆಗಳನ್ನು ಕಾಲೇಜು ಶಿಕ್ಷಣ ಇಲಾಖೆಯು ತನ್ನ ಹಂತದಲ್ಲಿ ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಇದರಲ್ಲಿ ಇಲಾಖೆಯ ಭ್ರಷ್ಟ ಅಧಿಕಾರಿವರ್ಗವೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಅಭ್ಯರ್ಥಿಗಳು ಕೇವಲ ವಂಚನೆ ಎಸಗಿಲ್ಲ. ಬದಲಿಗೆ ಅರ್ಹವಾಗಿದ್ದ ಹಲವರ ಅವಕಾಶಗಳನ್ನು ಕಿತ್ತುಕೊಂಡಿದ್ದಾರೆ. ನಕಲಿ ಪ್ರಮಾಣಪತ್ರಗಳನ್ನು ಹೇಗೆ ಪಡೆಯಲಾಯಿತು, ದಂಧೆಯ ವ್ಯಾಪ್ತಿ ಮತ್ತು ವಿಶ್ವವಿದ್ಯಾಲಯ ಮತ್ತು ಇಲಾಖಾ ಅಧಿಕಾರಿಗಳ ಸಂಭಾವ್ಯ ಪಾತ್ರವನ್ನು ಸ್ಥಾಪಿಸಲು ಇಲಾಖೆಯೇತರ ಅಂದರೇ ಸಿಐಡಿ ಅಥವಾ ವಿಶೇಷ ತನಿಖಾ ಸಂಸ್ಥೆಯ ಮೊರೆ ಹೊಕ್ಕಿಲ್ಲ.
2017ರಲ್ಲಿಯೂ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಕ್ಕಾಗಿ 40 ಸಹಾಯಕ ಪ್ರಾಧ್ಯಾಪಕರನ್ನು ಡಿಬಾರ್ ಮಾಡಲಾಗಿತ್ತು. ಆದರೂ ಇಲಾಖೆಯು ಎಚ್ಚೆತ್ತುಕೊಂಡಿಲ್ಲ ಎಂಬುದು ಈ ಪ್ರಕರಣವೇ ಸಾಕ್ಷಿಯಾಗಿದೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಆಗಿದ್ದ ಚರ್ಚೆಯ ವಿವರಗಳನ್ನು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಸಚಿವ ಡಾ ಎಂ ಸಿ ಸುಧಾಕರ್ ಅವರೊಂದಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.




