Monday | May 25, 2026 |

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಮತ್ತು ಕರಿಗೌಡ ವಿರುದ್ಧ ಲಂಚದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಹೂಡಿರುವ  ಮೊಕದ್ದಮೆಯು ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದರೂ ಸಹ  4,791.95 ಕೋಟಿ ರು ಮೊತ್ತದ  21 ಪ್ಯಾಕೇಜ್‌ಗಳಿಗೆ ಪರಿಶೀಲನೆಗೆ ಯಾವುದೇ ಸಮಿತಿ ರಚಿಸದೆಯೇ ಸಚಿವ ಸಂಪುಟವು  ಆಡಳಿತಾತ್ಮಕ ಅನುಮೋದನೆ ನೀಡಿದೆ.

2026ರ ಮೇ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ  ನಡೆದಿದ್ದ ಸಚಿವ ಸಂಪುಟದ ಮುಖ್ಯ ಕಾರ್ಯಸೂಚಿಯಲ್ಲಿ ಇಲ್ಲದೇ ಇದ್ದರೂ ಸಹ ಹೆಚ್ಚುವರಿ ಕಾರ್ಯಸೂಚಿಯಲ್ಲಿ  ಸೇರಿಸಲಾಗಿತ್ತು. ಮತ್ತು ಸಚಿವ ಸಂಪುಟ ಸಭೆ ಮುಕ್ತಾಯಗೊಳ್ಳುವ ಕಡೆ ಗಳಿಗೆಯಲ್ಲಿ  ಪ್ರಸ್ತಾವನ್ನು ದಿಢೀರ್ ಎಂದು ಮಂಡಿಸಿ ಅನುಮೋದನೆ ಪಡೆಯಲಾಗಿದೆ!.

ಈ ವಿಚಾರದ ಬಗ್ಗೆ ಪರಾಮರ್ಶಿಸಲು ಸಚಿವ ಸಂಪುಟದ ಯಾವೊಬ್ಬ ಸದಸ್ಯರಿಗೂ ಸಮಯಾವಕಾಶವೇ ಸಿಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ  ನಗರಾಭಿವೃದ್ಧಿ ಇಲಾಖೆಯು ಕಸದ ಭಾರೀ ದುರ್ನಾತವನ್ನೇ ಹರಡಿಸಿದಂತಾಗಿದೆ. ಅಲ್ಲದೆ ಸಚಿವ ಸಂಪುಟದ ಈ ನಿರ್ಣಯವು ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಹಾನಿಯನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ.

ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿರುವ 130 ಪುಟಗಳ ಪ್ರಸ್ತಾವನೆ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆಯಲ್ಲಿರುವ   ಸಮಿತಿ ರಚಿಸಿದಲ್ಲಿ ಸಾರ್ವಜನಿಕರಿಗೆ ಹಾಗೂ ನ್ಯಾಯಾಲಯಕ್ಕೆ ತಪ್ಪು ಸಂದೇಶ ರವಾನೆಯಾಗಿ ಸರ್ಕಾರದ ಹಿತಾಸಕ್ತಿಗೆ ಹಾಗೂ ಘನತೆಗೆ ಧಕ್ಕೆ ಉಂಟಾಗಲಿದೆ ಎಂಬ ಕಾರಣವನ್ನು ಮುಂದೊಡ್ಡಿದೆ. ಇದನ್ನೇ ಮುಂದಿರಿಸಿಕೊಂಡಿರುವ ನಗರಾಭಿವೃದ್ಧಿ ಇಲಾಖೆಯು 4,791.95 ಕೋಟಿ ರು ಮೊತ್ತದಲ್ಲಿ 21 ಪ್ಯಾಕೇಜ್‌ಗಳಿಗೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡಿದೆ. ಈ ಪ್ರಸ್ತಾವವನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅನುಮೋದಿಸಿರುವುದು ತಿಳಿದು ಬಂದಿದೆ.

ಹಾಗೆಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ ಸೇರಿದಂತೆ ಇನ್ನಿತರೆ ಸ್ವರೂಪದ ತ್ಯಾಜ್ಯಗಳ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಸಾಗಾಣಿಕೆ ನಿರ್ವಹಣೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯು ಹೆಚ್ಚಿನ ಟೆಂಡರ್‍‌ ಪ್ರಿಮಿಯಂ ವಿಧಿಸಿ ಸಚಿವ ಸಂಪುಟಕ್ಕೆ ಪ್ರಸ್ತಾವ ಮಂಡಿಸಿರುವುದನ್ನು ‘ದಿ ಫೈಲ್‌’ ಹೊರಗೆಡವುತ್ತಿದೆ.

21 ಪ್ಯಾಕೇಜುಗಳಲ್ಲಿ ಹೆಚ್ಚಿನ ಟೆಂಡರ್ ಪ್ರೀಮಿಯಂ ವಿಧಿಸಲು ಅಂದರೇ ದರವು ಟೆಂಡರ್‍‌ಗಿಟ್ಟ ಮೊತ್ತಕ್ಕಿಂತ ಶೇ. 14ಕ್ಕಿಂತ ಹೆಚ್ಚಾಗಿತ್ತು. ಇದಕ್ಕೆ ಯಾವುದೇ ಸಮರ್ಥನೀಯ ಕಾರಣಗಳಿಲ್ಲದಿದ್ದರೂ ಮತ್ತು ಇದರ ಹೊರೆಯನ್ನು ಮುಂದಿನ 7 ವರ್ಷಗಳ ಕಾಲ ಹೊರುವ ಪರಿಸ್ಥಿತಿ ಉಂಟಾಗಲಿದೆ ಎಂದು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ಅಭಿಪ್ರಾಯಿಸಿತ್ತು. ಆದರೂ  ಸಹ ನಗರಾಭಿವೃದ್ದಿ ಇಲಾಖೆಯು ಮಂಡಿಸಿದ್ದ  ಈ ಪ್ರಸ್ತಾವನೆಯನ್ನು ಸಚಿವ ಸಂಪುಟವು ಅನುಮೋದಿಸಿದೆ.

ಘನತ್ಯಾಜ್ಯ ನಿರ್ವಹಣಾ ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಕರಿಗೌಡ ವಿರುದ್ಧ ಗುತ್ತಿಗೆದಾರ ಎಸ್.ಎನ್.ಬಾಲಸುಬ್ರಮಣಿಯನ್ ಅವರು ಲಂಚದ ಆರೋಪ ಮಾಡಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತಾದ ಅರ್ಜಿಯು ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಹೀಗಿದ್ದರೂ ಸಹ ನಗರಾಭಿವೃದ್ಧಿ ಇಲಾಖೆಯು 4,791.95 ಕೋಟಿ ರು ಮೊತ್ತದ ಪ್ಯಾಕೇಜ್‌ಗಳಿಗೆ ಟೆಂಡರ್‍‌ ಕರೆಯಲು ಅನುಮೋದನೆ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಸಮಿತಿ ರಚಿಸಲಿಲ್ಲವೇಕೆ?

’33 ಪ್ಯಾಕೇಜ್‌ಗಳಲ್ಲಿ ಭಾಗವಹಿಸಿದ್ದ ಬಿಡ್‌ದಾರರೊಬ್ಬರು ಉಚ್ಛ ನ್ಯಾಯಾಲಯದಲ್ಲಿ ಅರೋಪ ಮಾಡಿ ಪ್ರಕರಣ ದಾಖಲಿಸಿರುವುದು ಆಧಾರರಹಿತವಾಗಿದೆ. ಈ ಸಂಬಂಧ ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶ ನೀಡಿಲ್ಲ. ಅಲ್ಲದೇ ಇದನ್ನು ಸೂಕ್ತ ರೀತಿಯಲ್ಲಿ ಕಾನೂನುಬದ್ಧವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯ ಮಾಡಲಾಗುವುದು. ಈ ಹಂತದಲ್ಲಿ ಈ 21 ಪ್ಯಾಕೇಜ್‌ಗಳ ಸಲುವಾಗಿ ಸಮಿತಿ ರಚಿಸಿದಲ್ಲಿ ಸಾರ್ವಜನಿಕರಿಗೆ ಹಾಗೂ ನ್ಯಾಯಾಲಯಕ್ಕೆ ತಪ್ಪು ಸಂದೇಶ ರವಾನೆಯಾಗಿ ಸರ್ಕಾರದ ಹಿತಾಸಕ್ತಿಗೆ ಹಾಗೂ ಘನತೆಗೆ ಧಕ್ಕೆ ಉಂಟಾಗುತ್ತದೆ,’ ಎಂದು ಸಚಿವ ಸಂಪುಟವನ್ನು ದಿಕ್ಕು ತಪ್ಪಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

 

4,791.95 ಕೋಟಿ ರು ಮೊತ್ತದ 21 ಪ್ಯಾಕೇಜ್‌ಗಳ ಸಮಗ್ರ ವಿವರ

ಶಿವಾಜಿನಗರ, ಹೆಬ್ಬಾಳ, ಪುಲಿಕೇಶಿ ನಗರ, ಗಾಂಧಿ ನಗರ, ಗೋವಿಂದರಾಜನಗರ, ರಾಜಾಜಿನಗರ, ಮಲ್ಲೇಶ್ವರಂ, ಮಹಾಲಕ್ಷ್ಮಿ ಬಡಾವಣೆ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ವಿಜಯನಗರ, ಪದ್ಮನಾಭನಗರ, ಜಯನಗರ, ಬಿಟಿಎಂ ಲೇಔಟ್‌, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ದಾಸರಹಳ್ಳಿ 1, ದಾಸರಹಳ್ಳಿ 2 , ಕೆ ಆರ್‍‌ ಪುರಂ-2 ಯಲಹಂಕ ವಿಭಾಗದಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ಗುಡಿಸುವಿಕೆ ತ್ಯಾಜ್ಯದ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಣೆಗೆ ಮುಂದಾಗಿತ್ತು.

 

 

ಈ ಸಂಬಂಧ 7 ವರ್ಷದ ಅವಧಿಗೆ 4,791.95 ಕೋಟಿ ರು ಮೊತ್ತವಾಗಲಿದೆ ಎಂದು ಅಂದಾಜಿಸಿತ್ತು. 33 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಟೆಂಡರ್‍‌ ಮೂಲಕ ಕೈಗೊಳ್ಳಲು 2025ರ ಮೇ 26ರಂದೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ನಂತರ ಈ ಪ್ಯಾಕೇಜ್‌ಗಳಲ್ಲಿನ Call-2 ಯೋಜನೆಯ ಟೆಂಡರ್‍‌ ಅನುಮೋದನೆ ಮತ್ತು ಅಂದಾಜು ಮೊತ್ತಕ್ಕೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಪಡೆಯಲು 2026ರ ಏಪ್ರಿಲ್‌ 21ರಂದು ಪ್ರಸ್ತಾವನೆ ಸಲ್ಲಿಸಿತ್ತು.

 

 

ಶಿವಾಜಿನಗರ ವಿಭಾಗ (ಪ್ಯಾಕೇಜ್‌ 4) ಕ್ಕೆ 7 ವರ್ಷಗಳ ಅವಧಿಗೆ 151.58 ಕೋಟಿ 63 ಲಕ್ಷ ಮೊತ್ತಕ್ಕೆ ನಿರ್ವಹಿಸಲು 2025ರ ಮೇ 26ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. 2026ರ ಮೇ 28ರಂದು ಟೆಂಡರ್‍‌ ಆಹ್ವಾನಿಸಿತ್ತು. ಈ ಟೆಂಡರ್‍‌ನ್ನು ಪ್ರಶ್ನಿಸಿದ್ದ ಬಿಡ್‌ದಾರರು ಉಚ್ಛ ನ್ಯಾಯಾಲಯದಲ್ಲಿ ರಿವ್ಯೂ ಪಿಟಿಷನ್‌ ( 239/2025) ದಾಖಲಿಸಿದ್ದರು. ಹೀಗಾಗಿ ಟೆಂಡರ್‍‌ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದ ಕಾರಣ ಯಾವುದೇ ಬಿಡ್‌ ಸಲ್ಲಿಕೆಯಾಗಿರಲಿಲ್ಲ. ನಂತರ ಈ ದಾವೆಗೆ ಸಂಬಂಧಿಸಿದಂತೆ ಉಚ್ಛನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿ ಟೆಂಡರ್ ಆಹ್ವಾನಿಸಲು 2025ರ ಜುಲೈ 30ರಂದು ತೀರ್ಪು ನೀಡಿತ್ತು.

 

 

ಇದಾದ ನಂತರ 2025ರ ಜುಲೈ 30ರಂದೇ 2ನೇ ಕರೆ ಟೆಂಡರ್‍‌ ಆಹ್ವಾನಿಸಿತ್ತು. 2025ರ ಆಗಸ್ಟ್ 30ರಂದು ಬಿಡ್‌ ಸಲ್ಲಿಸಬೇಕಿತ್ತು. ಈ ಅಧಿಸೂಚನೆಯನ್ನೂ ಉಚ್ಛ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಮೂಲಕ (27474/2025) ಪ್ರಶ್ನಿಸಲಾಗಿತ್ತು. ನ್ಯಾಯಾಲಯದ ನಿರ್ದೇಶನದ ಪ್ರಕಾರ ಇದರ ಅಂತಿಮ ದಿನಾಂಕವನ್ನು 2025ರ ನವೆಂಬರ್‍‌ 10ರವರೆಗೆ ವಿಸ್ತರಿಸಲಾಗಿತ್ತು. 2025ರ ನವೆಂಬರ್‍‌ 11ರಂದು ಟೆಂಡರ್‍‌ನ ತಾಂತ್ರಿಕ ಬಿಡ್‌ನ್ನು ತೆರೆದಿತ್ತು. ಟೆಂಡರ್‍‌ನಲ್ಲಿ ಭಾಗವಹಿಸಿದ್ದ 3 ಬಿಡ್‌ದಾರರ ಪೈಕಿ ಪಿ ಹರ್ಷವಧನ ರೆಡ್ಡಿ ಒಬ್ಬರೇ ತಾಂತ್ರಿಕವಾಗಿ ಅರ್ಹವಾಗಿದ್ದರು. ಇದಕ್ಕೆ ಬಿಡ್‌ಡಬ್ಲ್ಯೂಎಂಎಲ್‌ ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನ ಸಮಿತಿಯ 52ನೇ ನಡವಳಿ ಪ್ರಕಾರ (2025ರ ಡಿಸೆಂಬರ್ 31) ಆರ್ಥಿಕ ಬಿಡ್ ತೆರೆಯಲು ಅನುಮೋದನೆ ನೀಡಿತ್ತು.

2026ರ ಜನವರಿ 2ರಂದು ಆರ್ಥಿಕ ಬಿಡ್‌ನ್ನು ತೆರೆದಿತ್ತು. ಇದರಲ್ಲಿ ಹರ್ಷವಧನ ರೆಡ್ಡಿ ಅವರು 19,85,02,056.00 ರು ನಮೂದಿಸಿದ್ದರು. ಇದು ಶೇಕಡ +15.15ರಷ್ಟಿತ್ತು. ಈ ಮೊತ್ತವು ಟೆಂಡರ್‍‌ಗಿಟ್ಟ ಮೊತ್ತ 17,23,87,00 ರು.ಗಳಿಗೆ ಹೋಲಿಸಿದಾಗ ಶೇ. 15.15ರಷ್ಟು ಹೆಚ್ಚಾಗಿತ್ತು. ಈ ದರಗಳನ್ನು ಮರು ಪರಿಶೀಲಿಸಲು ಮರು ಸಂಧಾನ ನಡೆಸಲು ಸೂಚಿಸಿತ್ತು. ಸಂಧಾನ ನಡೆಸಿದ ನಂತರ ಎಲ್‌ 1 ಬಿಡ್‌ದಾರರು ಸಲ್ಲಿಸಿದ್ದ ದರವೂ ಟೆಂಡೆರ್‍‌ಗಿಟ್ಟ ಮೊತತಕ್ಕಿಂತ ಶೇ. 14ಕ್ಕಿಂತಲೂ ಹೆಚ್ಚಾಗಿತ್ತು ಎಂದು ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವದಿಂದ ತಿಳಿದು ಬಂದಿದೆ.

 

 

ಈ ದರಗಳನ್ನು ಪರಿಶೀಲಿಸಲು ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು. 2026ರ ಏಪ್ರಿಲ್‌ 9ರಂದು ನಡೆದ ಈ ಸಮಿತಿಯ ಸಭೆಯಲ್ಲಿ ಟೆಂಡೆರ್‍‌ನ ಕಾರ್ಯದ ವ್ಯಾಪ್ತಿ, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ, ವಾಹನಗಳ ಸ್ಪೇರ್‍‌ ಪಾರ್ಟ್ಸ್‌ ಹಾಗೂ ನಿರ್ವಹಣಾ ವೆಚ್ಚಗಳು ಸೇರಿದಂತೆ ಪ್ರಮುಖ ವೆಚ್ಚಗಳಲ್ಲಿ ಆಗಿರುವ ಏರಿಕೆಯನ್ನು ಗಮನದಲ್ಲಿರಿಸಿಕೊಂಡು ಟೆಂಡರ್‍‌ಗಿಟ್ಟ ಮೊತ್ತಕ್ಕಿಂತ ಶೇ. 14 ಹೆಚ್ಚುವರಿ ಮೊತ್ತವನ್ನು ನೀಡಬಹುದು ಎಂದು ಸಮಿತಿಯು ಅಭಿಪ್ರಾಯಿಸಿತ್ತು.

ಈ ಕಾಮಗಾರಿಗೆ ಅಂದಾಜು ಪಟ್ಟಿಯಲ್ಲಿ ಟೆಂಡರ್‍‌ಗಿಟ್ಟ ಮೊತ್ತಕ್ಕೆ ಟೆಂಡರ್ ಪ್ರೀಮಿಯಂ ಶೇ. 5ರಷ್ಟು ಹಾಗೂ ಕಂಟಿಜೆನ್ಸಿಯಲ್ಲಿ ಶೇ. 3ರಷ್ಟು ಒಟ್ಟಾರೆ ಶೇ. 8ರಷ್ಟು ಮಾತ್ರ ಅವಕಾಶ ಕಲ್ಪಿಸಿತ್ತು. ಆದರೆ 4ನೇ ತಾಂತ್ರಿಕ ಸಲಹಾ ಸಮಿತಿಯಲ್ಲಿ ಶೇ. 14ರವರೆಗೆ ಟೆಂಡರ್ ಪ್ರೀಮಿಯಂ ನೀಡಬಹುದು ಎಂದು ಶಿಫಾರಸ್ಸು ಮಾಡಿತ್ತು. ಈ  ವ್ಯತ್ಯಾಸದ ಹೆಚ್ಚುವರಿ ಮೊತ್ತಕ್ಕೆ (16,000.77 ಲಕ್ಷ) ಪರಿಷ್ಕೃತ ಮೊತ್ತಕ್ಕೆ   ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

 

 

ಇದೇ ರೀತಿ ಹೆಬ್ಬಾಳ ವಿಭಾಗ (ಪ್ಯಾಕೇಜ್‌ 5) ದಲ್ಲಿ 14, 072.55 ಲಕ್ಷ, ಪುಲಿಕೇಶಿ ನಗರ ವಿಭಾಗ (ಪ್ಯಾಕೇಜ್‌ -6) 15,506.51 ಲಕ್ಷ, ಗಾಂಧಿ ನಗರ ವಿಭಾಗ (ಪ್ಯಾಕೇಜ್‌ 7) 14,819.46 ಲಕ್ಷ, ಗೋವಿಂದರಾಜನಗರ ವಿಭಾಗ (ಪ್ಯಾಕೇಜ್‌ 8)12,423.16 ಲಕ್ಷ, ರಾಜಾಜಿನಗರ ವಿಭಾಗ (ಪ್ಯಾಕೇಜ್‌ 9) 12,481.08 ಲಕ್ಷ, ಮಲ್ಲೇಶ್ವರಂ ವಿಭಾಗ (ಪ್ಯಾಕೇಜ್‌ 10) 16,678.53 ಲಕ್ಷ, ಮಹಾಲಕ್ಷ್ಮಿ ಲೇಔಟ್‌ ವಿಭಾಗ (ಪ್ಯಾಕೇಜ್‌ 11) 11,440.22 ಲಕ್ಷ, ಚಾಮರಾಜಪೇಟೆ ವಿಭಾಗ (ಪ್ಯಾಕೇಜ್‌ 12) 13,718.32 ಲಕ್ಷ, ಚಿಕ್ಕಪೇಟೆ ವಿಭಾಗ (ಪ್ಯಾಕೇಜ್‌ 13) 18,714.80 ಲಕ್ಷ, ಬಸವನಗುಡಿ ವಿಭಾಗ (ಪ್ಯಾಕೇಜ್‌ 14) 16,011.17 ಲಕ್ಷ, ವಿಜಯನಗರ ವಿಭಾಗ ( ಪ್ಯಾಕೇಜ್‌ -15), 19,855.43 ಲಕ್ಷ, ಪದ್ಮನಾಭನಗರ ವಿಭಾಗ (ಪ್ಯಾಕೇಜ್‌ 16) 21,298.69 ಲಕ್ಷ, ಜಯನಗರ ವಿಭಾಗ (ಪ್ಯಾಕೇಜ್ 17) 11,923.89 ಲಕ್ಷ,

 

 

ಬಿಟಿಎಂ ಲೇಔಟ್‌ ವಿಭಾಗ (ಪ್ಯಾಕೇಜ್‌ 18) 16,402.38 ಲಕ್ಷ, ಬೊಮ್ಮನಹಳ್ಳಿ ವಿಭಾಗ (ಪ್ಯಾಕೇಜ್‌ 19) 24,109.34 ಲಕ್ಷ, ಬೆಂಗಳೂರು ದಕ್ಷಿಣ-2 ವಿಭಾಗ (ಪ್ಯಾಕೇಜ್‌ 21) 8,870.89 ಲಕ್ಷ, ದಾಸರಹಳ್ಳಿ -1 ವಿಭಾಗ (ಪ್ಯಾಕೇಜ್‌ 22) 8,404.03 ಲಕ್ಷ, ದಾಸರಹಳ್ಳಿ 2 ವಿಭಾಗ (ಪ್ಯಾಕೇಜ್‌ 23) 13,869.65 ಲಕ್ಷ, ಕೆಆರ್‍‌ ಪುರಂ -2 ವಿಭಾಗ (ಪ್ಯಾಕೇಜ್‌ 27) 15,691.13 ಲಕ್ಷ, ಯಲಹಂಕ ವಿಭಾಗ (ಪ್ಯಾಕೇಜ್‌ 32) 11,271.74 ಲಕ್ಷ ರುಗೆ ಪರಿಷ್ಕರಿಸಿ ಆಡಳಿತಾತ್ಮಕ ಅನುಮೋದನೆ ಕೋರಿತ್ತು.

 

 

ಇದಾದ ನಂತರ ಬಿಡ್‌ದಾರರೊಂದಿಗೆ ದರ ಸಂಧಾನ ನಡೆಸಲಾಗಿತ್ತು. ದರ ಸಂಧಾನದ ಬಳಿಕ ನಮೂದಿಸಿದ್ದ ದರವನ್ನೂ ಸಚಿವ ಸಂಪುಟಕ್ಕೆ ಮಂಡಿಸಿದೆ.

ಶಿವಾಜಿನಗರ ವಿಭಾಗ (ಪ್ಯಾಕೇಜ್‌ 4) 19,65,21,180 ರು ನಮೂದಿಸಿತ್ತು. ಈ ಟೆಂಡರ್‍‌ ಪ್ರೀಮಿಯಂ ಶೆ. 14ರಷ್ಟಿತ್ತು. ಅದೇ ರೀತಿ ಹೆಬ್ಬಾಳ ವಿಭಾಗ (ಪ್ಯಾಕೇಜ್‌ 5) ದಲ್ಲಿ 17,28,38,820, ಪುಲಿಕೇಶಿ ನಗರ ವಿಭಾಗ (ಪ್ಯಾಕೇಜ್‌ -6) 19,04,50,680, ಗಾಂಧಿ ನಗರ ವಿಭಾಗ (ಪ್ಯಾಕೇಜ್‌ 7) 18,20,12,400, ಗೋವಿಂದರಾಜನಗರ ವಿಭಾಗ (ಪ್ಯಾಕೇಜ್‌ 8) 15,25,81,020, ರಾಜಾಜಿನಗರ ವಿಭಾಗ (ಪ್ಯಾಕೇಜ್‌ 9) 15,32,92,380 ರು ಮಲ್ಲೇಶ್ವರಂ ವಿಭಾಗ (ಪ್ಯಾಕೇಜ್‌ 10) 20,48,45,460 ರು, ಮಹಾಲಕ್ಷ್ಮಿ ಲೇಔಟ್‌ ವಿಭಾಗ (ಪ್ಯಾಕೇಜ್‌ 11) 14,05,08,516 ರು ಚಾಮರಾಜಪೇಟೆ ವಿಭಾಗ (ಪ್ಯಾಕೇಜ್‌ 12) 16,84,88,139 ರು ಚಿಕ್ಕಪೇಟೆ ವಿಭಾಗ (ಪ್ಯಾಕೇಜ್‌ 13) 22,98,54,780 ರು ಬಸವನಗುಡಿ ವಿಭಾಗ (ಪ್ಯಾಕೇಜ್‌ 14) 19,66,48,860 ರು, , ವಿಜಯನಗರ ವಿಭಾಗ ( ಪ್ಯಾಕೇಜ್‌ -15), 24,38,64,000 ರು, ಪದ್ಮನಾಭನಗರ ವಿಭಾಗ (ಪ್ಯಾಕೇಜ್‌ 16) 26,15,90,100 ರು, ಜಯನಗರ ವಿಭಾಗ (ಪ್ಯಾಕೇಜ್ 17) 14,64,48,960 ರು,

 

ಬಿಟಿಎಂ ಲೇಔಟ್‌ ವಿಭಾಗ (ಪ್ಯಾಕೇಜ್‌ 18) 20,14,53,792 ರು., ಬೊಮ್ಮನಹಳ್ಳಿ ವಿಭಾಗ (ಪ್ಯಾಕೇಜ್‌ 19) 29,61,10,440 ಬೆಂಗಳೂರು ದಕ್ಷಿಣ-2 ವಿಭಾಗ (ಪ್ಯಾಕೇಜ್‌ 21) 10,89,52,080 ರು, ದಾಸರಹಳ್ಳಿ -1 ವಿಭಾಗ (ಪ್ಯಾಕೇಜ್‌ 22) 15,73,49,116 ರು, ದಾಸರಹಳ್ಳಿ 2 ವಿಭಾಗ (ಪ್ಯಾಕೇಜ್‌ 23) 17,03, 46,752 ರು, ಕೆಆರ್‍‌ ಪುರಂ -2 ವಿಭಾಗ (ಪ್ಯಾಕೇಜ್‌ 27) 19,27,18,140 ರು., ಯಲಹಂಕ ವಿಭಾಗ (ಪ್ಯಾಕೇಜ್‌ 32) 13,84,39,320 ರು ನಮೂದಿಸಲಾಗಿತ್ತು.

 

ಇದಕ್ಕೆ ನಗರಾಭಿವೃದ್ಧಿ ಇಲಾಖೆಯು ಸಮರ್ಥನೆ ಒದಗಿಸಿತ್ತು. ಹಿಂದಿನ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ 198 ವಾರ್ಡ್‌ಗಳಿಗೆ 2013ನೇ ವರ್ಷದಲ್ಲಿ 3 ವರ್ಷಗಳ ಅವಧಿಗೆ 91 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆದು 3 ವರ್ಷಗಳ ಅವಧಿಗೆ ಕಾರ್ಯಾದೇಶ ನೀಡಿತ್ತು. ಇದರ ನಂತರ ಟೆಂಡರ್‍‌ ಕರೆಯಲು 2019ರವರೆಗೆ ನಡೆಸಿದ್ದ ಎಲ್ಲಾ ಪ್ರಯತ್ನಗಳು ವಿಫಲವಾಗಿತ್ತು. 2019ರಲ್ಲಿ 198 ವಾರ್ಡ್‌ಗಳಿಗೆ 3 ವರ್ಷಗಳ ಅವಧಿಗೆ ಟೆಂಡರ್ ಕರೆದಿತ್ತು.

 

 

ಈ ಪೈಕಿ 30 ವಾರ್ಡ್‌ಗಳಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಿತ್ತು. 115 ವಾರ್ಡ್‌ಗಳಿಗೆ ಕಾರ್ಯಾದೇಶ ನೀಡಿತ್ತು. ಉಳಿದ ವಾರ್ಡ್‌ಗಳಿಗೆ ಟೆಂಡರ್‍‌ ಅಂತಿಮವಾಗಿರಲಿಲ್ಲ. ಅಲ್ಲದೇ ಈ ಹಿಂದೆ ಕರೆದಿದ್ದ ಎಲ್ಲಾ ಟೆಂಡರ್‍‌ಗಳ ಕಾರ್ಯಾವಧಿಯು ಮುಕ್ತಾಯವಾಗಿತ್ತು. ಹೀಗಾಗಿ ಕೆಟಿಪಿಪಿ ನಿಯಮಗಳಿಗೆ ವಿರುದ್ಧವಾಗಿ ಸರಬರಾಜು ಆದೇಶ ದ ಮೇಲೆ ಪ್ರಾಥಮಿಕ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಕಾರ್ಯ ನಡೆಸಲಾಗಿತ್ತು ಎಂದು ವಿವರಿಸಿರುವುದು ಗೊತ್ತಾಗಿದೆ.

2022ರ ಆಗಸ್ಟ್‌ 22ರಲ್ಲಿಯೂ 89 ಪ್ಯಾಕೇಜ್‌ಗಳಿಗೆ 5 ವರ್ಷಗಳ ಅವಧಿಗೆ ಟೆಂಡರ್‍‌ ಕರೆದಿತ್ತಾದರೂ ಯಾರೂ ಸಹ ಅರ್ಹರಾಗಿರಲಿಲ್ಲ. ನಂತರ ಟೆಂಡರ್ ಕಾರ್ಯವ್ಯಾಪ್ತಿ ಮಾರ್ಪಾಡಿಸಿಕೊಂಡಿತ್ತು. 2022ರ ಸೆ.28ರಂದು ಟೆಂಡರ್ ಕರೆಯಲಾಗಿತ್ತಾದರೂ ಉಚ್ಛ ನ್ಯಾಯಾಲಯದಲ್ಲಿ ಹಲವು ದಾವೆಗಳು ದಾಖಲಾಗಿದ್ದವು. ಈ ದಾವೆಗಳೂ ಸಹ ವಜಾಗೊಂಡಿದ್ದವಲ್ಲದೇ ತಾಂತ್ರಿಕ ಕಾರಣದಿಂದ ಬಿಡ್‌ಗಳು ತಿರಸ್ಕೃತವಾಗಿತ್ತು.

 

 

ಹೀಗಾಗಿ ಮೂರನೇ ಬಾರಿಗೆ ಅಂದರೇ 2023ರ ಜನವರಿ 21ರಂದು ಐದು ವರ್ಷಗಳ ಅವಧಿಗೆ 89 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆದಿತ್ತು. 2023ರಲ್ಲಿಯೂ ಉಚ್ಛ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದವು. ಈ ಪ್ರಕರಣಗಳು 2025ರ ಏಪ್ರಿಲ್‌ನಲ್ಲಿ ಇತ್ಯರ್ಥವಾಗಿದ್ದವು. ಟೆಂಡರ್ ಪ್ರೀಮಿಯಂ ಶೇ.44ಕ್ಕಿಂತ ಹೆಚ್ಚಿದ ಕಾರಣ ಹಾಗೂ ಸಂಘಟಿತವಾಗಿ ಬಿಡ್‌ದಾರರು ಭಾಗವಹಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಹೀಗಾಗಿ ಟೆಂಡರ್ ತಿರಸ್ಕೃತವಾಗಿದ್ದವು ಎಂದು ಇಲಾಖೆಯು ವಿವರಿಸಿರುವುದು ತಿಳಿದು ಬಂದಿದೆ.

ಈ ಎಲ್ಲ ಬೆಳವಣಿಗೆ ನಂತರ ನ್ಯಾಯಾಲಯದ ಅನುಮತಿಯೊಂದಿಗೆ ಪ್ರಾಥಮಿಕ ಸಂಗ್ರಹಣೆ ಮತ್ತು ಸಾಗಾಣಿಕೆ ಕಾರ್ಯವನ್ನು ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಟೆಂಡರ್‍‌ನಿಂದ ಬೇರ್ಪಡಿಸಲಾಗಿತ್ತು. ಪ್ರತ್ಯೇಕವಾಗಿ 33 ಪ್ಯಾಕೇಜ್‌ಗಳಲ್ಲಿ 7 ವರ್ಷಗಳ ಅವಧಿಗೆ ಅಂದಾಜು 4,791.95 ಕೋಟಿ ರು ವೆಚ್ಚದಲ್ಲಿ ಕೈಗೊಳ್ಳಲು ಮುಂದಾಗಿತ್ತು. 2025ರ ಮೇ 28ರಂದು ಟೆಂಡರ್ ಕರೆಯಲಾಗಿತ್ತು. ನ್ಯಾಯಾಲಯದ ಪ್ರಕರಣ ತಡೆಯಾಜ್ಞೆಯಿಂದಾಗಿ ಯಾವುದೇ ಬಿಡ್‌ದಾರರು ಭಾಗವಹಿಸಿರಲಿಲ್ಲ.

ಹೀಗಾಗಿ ಪುನಃ 2025ರ ಜುಲೈ 30ರಂದು ಟೆಂಡರ್ ಕರೆದಿತ್ತು. ಇದರಲ್ಲಿ 29 ಪ್ಯಾಕೇಜ್‌ಗಳ ಸಂಬಂಧ ಮೇಲ್ಮನವಿ ಸಲ್ಲಿಕೆಯಾಗಿದ್ದವು. ಈ ಪೈಕಿ 10 ಪ್ಯಾಕೇಜ್‌ಗಳಿಗೆ ಮರು ಟೆಂಡರ್‍‌ಗೆ ಆದೇಶಿಸಿತ್ತು. ಈ ಪೈಕಿ 08 ಪ್ಯಾಕೇಜ್‌ಗಳ ಸಂಬಂಧ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಅಪರ ಮುಖ್ಯ ಕಾರ್ಯದರ್ಶಿಗಳ ಆದೇಶವನ್ನು ತಳ್ಳಿಹಾಕಿ ಮರು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಬಿಎಸ್‌ಡಬ್ಲ್ಯೂಎಂಎಲ್‌ ಗೆ ಆದೇಶಿಸಿದೆ.

ಒಟ್ಟಾರೆ ಈ 21 ಪ್ಯಾಕೇಜ್‌ಗಳ ಟೆಂಡರ್ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಟೆಂಡರ್ ಪ್ರೀಮಿಯಂ ಶೆ. 14ರಷ್ಟಿರುವುದಕ್ಕೆ ಆಕ್ಷೇಪ ಎತ್ತಿದೆ.

ಆರ್ಥಿಕ ಇಲಾಖೆ ಅಭಿಪ್ರಾಯದಲ್ಲೇನಿದೆ?

20 ಪ್ಯಾಕೇಜುಗಳಲ್ಲಿ ಹೆಚ್ಚಿನ ಟೆಂಡರ್ ಪ್ರೀಮಿಯಂ ವಿಧಿಸಲು ಯಾವುದೇ ಸಮರ್ಥನೀಯ ಕಾರಣ ಕಾಣುವುದಿಲ್ಲ ಮತ್ತು ಇದರ ಭಾರವನ್ನು ಮುಂದಿನ 7 ವರ್ಷಗಳ ಕಾಲ ಹೊರುವ ಪರಿಸ್ಥಿತಿ ಉಂಟಾಗುತ್ತದೆ. ಇದು ರೂ.2500 ಕೋಟಿಗಳ ಮೂಲ ಬೆಲೆಯ ಮೇಲೆ ಸುಮಾರು ರೂ.350 ಕೋಟಿಗಳ ಹೆಚ್ಚುವರಿ ಪ್ರೀಮಿಯಂ ಆಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿರುವ ಪ್ರಕರಣದ ಹಿನ್ನೆಲೆಯನ್ನೂ ವಿವರವಾಗಿ ಪರಿಗಣಿಸಬೇಕಾಗಿದೆ ಎಂದು ಸಲಹೆ ನೀಡಿದೆ.

ಇಷ್ಟೊಂದು ದೊಡ್ಡ ಟೆಂಡರ್ ಪ್ರೀಮಿಯಂನ ಹಣಕಾಸು ಪರಿಣಾಮಗಳನ್ನೂ ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿದೆ. ಏಕೆಂದರೆ ಇದರ ಭಾರವನ್ನು ಬೆಂಗಳೂರು ನಾಗರಿಕರು ಹೊರುವಂತಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಮತ್ತು ಬಿಡ್ ಪ್ರೀಮಿಯಂಗಳು ಅತಿಯಾಗಿ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ವಿಷಯಗಳನ್ನು ಮುಖ್ಯಮಂತ್ರಿ ಅವರು ಆರ್ಥಿಕ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಚರ್ಚಿಸಿದ್ದಾರೆ. ‘ಟೆಂಡರ್ ಪರಿಶೀಲನೆಗಾಗಿ ACS ಮತ್ತು ಡೆವಲಪ್ಮೆಂಟ್ ಕಮಿಷನರ್ ಅವರ ಅಧ್ಯಕ್ಷತೆಯಲ್ಲಿ, ಬಾಹ್ಯ ತಜ್ಞರು ಮತ್ತು ಇತರೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವುದಾಗಿ ನಿರ್ಧರಿಸಲಾಗಿದೆ.’ ಎಂದು ಇಲಾಖೆಯ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

 

 

ಅಲ್ಲದೇ ಈ ಹಿಂದೆ ವಿಶ್ವ ಬ್ಯಾಂಕ್ ಸಹಾಯಧನ ಹೊಂದಿದ್ದ ಬಿಬಿಎಂಪಿಯ ದೊಡ್ಡ ಮಟ್ಟದ ಮಳೆನೀರು ಕಾಲುವೆ ಟೆಂಡರ್ ಪ್ರಕ್ರಿಯೆಯಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಶೀಲನೆಗಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದ ಉದಾಹರಣೆಯೂ ಇದೆ. ಆ ಸಮಿತಿಯು ಎತ್ತಿಹಿಡಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿತ್ತು ಮತ್ತು ಯೋಜನೆ ಯಶಸ್ವಿಯಾಗಿ ಜಾರಿಗೆ ಬಂದಿದೆ ಎಂದು ಆರ್ಥಿಕ ಇಲಾಖೆಯು ಗಮನಸೆಳೆದಿದೆ.

‘ಆದ್ದರಿಂದ, ಹಣಕಾಸು ಇಲಾಖೆ ಸೂಚಿಸುವುದೇನೆಂದರೆ, ಆರ್ಥಿಕ ಇಲಾಖೆಯ ಗಮನಕ್ಕೆ ತಂದಿರುವ ಬಾಕಿ ಉಳಿದಿರುವ ವಿಷಯಗಳು ಹಾಗೂ ಕರ್ನಾಟಕ ಹೈಕೋರ್ಟ್‌ನಲ್ಲಿ ಉದ್ಭವಿಸಿರುವ ಕೆಲವು ಪ್ರಶ್ನೆಗಳು, ಜೊತೆಗೆ ದೊಡ್ಡ ಮಟ್ಟದ ಹಣಕಾಸು ಪರಿಣಾಮಗಳನ್ನು ಪರಿಗಣಿಸಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬಾಹ್ಯ ತಜ್ಞರು ಮತ್ತು ಕೆಲವು ಅಧಿಕಾರಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಬೇಕು,’ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಆರ್ಥಿಕ ಇಲಾಖೆಯು ನೀಡಿರುವ ಈ ಅಭಿಪ್ರಾಯಕ್ಕೆ ನಗರಾಭಿವೃದ್ಧಿ ಇಲಾಖೆಯು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ. ಬದಲಿಗೆ 33 ಪ್ಯಾಕೇಜ್‌ಗಳಲ್ಲಿ ಭಾಗವಹಿಸಿದ್ದ ಬಿಡ್‌ದಾರರೊಬ್ಬರು ಉಚ್ಛ ನ್ಯಾಯಾಲಯದಲ್ಲಿ ಅರೋಪ ಮಾಡಿ ಪ್ರಕರಣ ದಾಖಲಿಸಿರುವುದು ಆಧಾರರಹಿತವಾಗಿದೆ. ಈ ಸಂಬಂಧ ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶ ನೀಡಿಲ್ಲ. ಅಲ್ಲದೇ ಇದನ್ನು ಸೂಕ್ತ ರೀತಿಯಲ್ಲಿ ಕಾನೂನುಬದ್ಧವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯ ಮಾಡಲಾಗುವುದು. ಈ ಹಂತದಲ್ಲಿ ಈ 21 ಪ್ಯಾಕೇಜ್‌ಗಳ ಸಲುವಾಗಿ ಸಮಿತಿ ರಚಿಸಿದಲ್ಲಿ ಸಾರ್ವಜನಿಕರಿಗೆ ಹಾಗೂ ನ್ಯಾಯಾಲಯಕ್ಕೆ ತಪ್ಪು ಸಂದೇಶ ರವಾನೆಯಾಗಿ ಸರ್ಕಾರದ ಹಿತಾಸಕ್ತಿಗೆ ಹಾಗೂ ಘನತೆಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದೆ.

 

 

ಅದೇ ರೀತಿ ಆರ್ಥಿಕ ಇಲಾಖೆಯು ಸುತ್ತೋಲೆ ಪ್ರಕಾರ ಉನ್ನತ ಪ್ರಾಧಿಕಾರ ಎಂದರೇ ಯಾವುದು ಎಂಬ ಬಗ್ಗೆ ಅಸ್ಪಷ್ಟತೆ ಇದೆ ಎಂದೂ ಹೇಳಿದೆ. ಹಾಗೆಯೇ ಶೇ. 14ರಷ್ಟು ಪ್ರೀಮಿಯಂ ಹೆಚ್ಚಳವನ್ನೂ ಸಮರ್ಥಿಸಿಕೊಂಡಿದೆ.

 

 

‘ಈಗಾಗಲೇ ಟೆಂಡರ್‍‌ ಅನುಮೋದನೆಗೆ ಸಲ್ಲಿಸಲಾಗಿರುವ ಪ್ಯಾಕೇಜ್‌ಗಳಿಗೆ ಶೇ.14ರಷ್ಟು ಟೆಂಡರ್ ಪ್ರೀಮಿಯಂ ಪ್ರಕಾರ ತಗಲುವ ವೆಚ್ಚಗಳು ಹಾಗೂ ಪ್ರಸ್ತುತ ಗುತ್ತಿಗೆಗಳ ವ್ಯವಸ್ಥೆಯಲ್ಲಿ ತಗಲುವ ವೆಚ್ಚಗಳು ಹೆಚ್ಚಿನ ವ್ಯತ್ಯಾಸವಿಲ್ಲ. ಅಂದಾಜು ಪಟ್ಟಿಯಲ್ಲಿನ ದರಗಳ ವಿಶ್ಲೇಷಣೆಯಲ್ಲಿ ವಿವರಿಸಿರುವಂತೆ ವ್ಯತ್ಯಾಸಗಳು ಇದೆ. ಹಾಗೂ ಟೆಂಡರ್‍‌ಗಳಿಗೆ ನ್ಯಾಯಾಲಯದ ದಾವೆಗಳು ಮತ್ತು ಇತರೆ ಸಮಸ್ಯೆಗಳಿಂದಾಗಿ ಬಹಳಷ್ಟು ವ್ಯರ್ಥವಾಗಿದೆ. ಕಸ ಸಂಗ್ರಹಣೆಯಲ್ಲಿ ಮತ್ತು ಸಾಗಾಣಿಕೆಯಲ್ಲಿ ನೂತನ ತಂತ್ರಜ್ಞಾನ ಮತ್ತು ಹೊಸ ವಾಹನಗಳನ್ನು ಬಳಸಿ ಪರಿಣಾಮಕಾರಿಯಾಗಿ ನಿರ್ವಹಣೆ ಕೈಗೊಳ್ಳಬೇಕಿದೆ. ಕಸದ ಸಮಸ್ಯೆಯನ್ನು ಬಗೆಹರಿಸುವುದು ತುರ್ತು ಅವಶ್ಯಕವಾಗಿದೆ. ಹೀಗಾಗಿ ಶೇ.14ಕ್ಕೆ ಹೆಚ್ಚಿನ ಟೆಂಡರ್‍‌ ಪ್ರೀಮಿಯಂ ಪರಿಗಣಿಸಿ ಅನುಮೋದನೆ ನೀಡಬೇಕು,’ ಎಂದು ನಗರಾಭಿವೃದ್ಧಿ ಇಲಾಖೆಯು ಕೋರಿರುವುದು ಗೊತ್ತಾಗಿದೆ.

Hot this week

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...
Please Scan to make Your Contribution

Topics

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

Related Articles

Popular Categories

error: Content is protected !!