ಬೆಂಗಳೂರು; ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡಲು ಸಚಿವ ಸಂಪುಟಕ್ಕೆ ಪ್ರಸ್ತಾವ ಮಂಡನೆಯಾದ ಬೆನ್ನಲ್ಲೇ ಕೆಎಎಸ್‌ನ 25 ಅಧಿಕಾರಿಗಳು ಬಂಡೆದ್ದಿದ್ದಾರೆ. ಅಲ್ಲದೇ ಅನರ್ಹಗೊಂಡಿರುವ 7 ಅಧಿಕಾರಿಗಳು ಪ್ರಸ್ತುತ ಐಎಎಸ್ ವೃಂದದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮುಂದೆ ದೂರಿತ್ತಿದ್ದಾರೆ.
ಕೆಎಎಸ್ ವೃಂದದಲ್ಲಿನ 4 ಅಧಿಕಾರಿಗಳಿಗೆ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಲ್ಲಿಸಿದ್ದ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಜಾತಿ ಅಧಿಕಾರಿಯೊಬ್ಬರಿಗೆ ಮನ್ನಣೆ ನೀಡಲಾಗಿತ್ತು. ಈ ಬಗ್ಗೆ ದಿ ಫೈಲ್ ದಾಖಲೆ ಸಹಿತ ಪ್ರಕಟಿಸಿದ್ದ ವರದಿ ಸಂಬಂಧ ಸಚಿವ ಸಂಪುಟದಲ್ಲಿಯೂ ಚರ್ಚೆಯಾಗಿತ್ತು. ಅಲ್ಲದೇ ಈ ವಿಷಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬರುತ್ತಿದ್ದಂತೆ ಸಚಿವ ಸಂಪುಟವು ಸಹ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕಿತು. ಈ ಪ್ರಕರಣದ ಕುರಿತು ಕಾನೂನು ಇಲಾಖೆಯಿಂದ ಮತ್ತೊಮ್ಮೆ ಅಭಿಪ್ರಾಯ ಪಡೆಯಲು ಸೂಚಿಸಲಾಗಿದೆ.
ಈ ಬೆಳವಣಿಗೆ ನಡುವೆಯೇ ಈ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೇರವಾಗಿ ಅಖಾಡಕ್ಕಿಳಿದಿರುವುದು ಚರ್ಚೆಗೆ ಗ್ರಾಸವಾಗಿದೆ. ಸಚಿವ ಸಂಪುಟದ ಮುಂದೆ ಈ ವಿಷಯದ ಪ್ರಸ್ತಾಪ ಆಗುವ ಮುನ್ನವೇ ಉಪ ಮುಖ್ಯಮಮತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ 2026ರ ಮೇ 20ರಂದು 3 ಪುಟಗಳ ಟಿಪ್ಪಣಿ ಬರೆದಿದ್ದಾರೆ. ಈ ಟಿಪ್ಪಣಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮುಖ್ಯ ಟಿಪ್ಪಣಿಯಲ್ಲೇನಿದೆ?
ಅಖಿಲ ಭಾರತ ಸೇವೆಗಳು (ಬಡ್ತಿ ಮೂಲಕ ನೇಮಕಾತಿ) 1955ರ ನಿಯಮ 5(2)ರ ಅನ್ವಯ ರಾಜ್ಯ ನಾಗರಿಕ ಸೇವೆಯಲ್ಲಿ ಕಡ್ಡಾಯ ಕನಿಷ್ಟ 8 ವರ್ಷಗಳ ನಿಯಮಿತ ಸೇವೆಯನ್ನು ಸಲ್ಲಿಸಿರುವ ಕೆಎಎಸ್ ವೃಂದದ ಅಧಿಕಾರಿಗಳಿಗೆ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡುವ ಪ್ರಕ್ರಿಯೆಗಳಲ್ಲಿ ಹಲವು ಗೊಂದಲಗಳು ಉಂಟಾಗಿವೆ. ಈ ಸಂಬಂಧ ಸರ್ವೋಚ್ಛ ನ್ಯಾಯಾಲಯ, ಕರ್ನಾಟಕ ಉಚ್ಛ ನ್ಯಾಯಾಲಯ, ಕೇಂದ್ರ ಆಡಳಿತ ನ್ಯಾಯ ಮಂಡಳಿಯು ವಿವಿಧ ಪ್ರಕರಣಗಳಲ್ಲಿ ನೀಡಿರುವ ಆದೇಶಗಳು, ತೀರ್ಪುಗಳು ಮತ್ತು ಹಾಲಿ ಇತ್ಯರ್ಥಕ್ಕೆ ಬಾಕಿ ಇರುವ, ವಿಚಾರಣೆಯಲ್ಲಿರುವ ಹಲವು ಪ್ರಕರಣಗಳನ್ನು 2008 ಮತ್ತು 2010ನೇ ಕೆಎಎಸ್ ತಂಡದ 25 ಅಧಿಕಾರಿಗಳು ನನಗೆ ವಿವರಿಸಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಗಮನಸೆಳೆದಿರುವುದು ಗೊತ್ತಾಗಿದೆ.
ಟಿಪ್ಪಣಿಯಲ್ಲಿನ ತಿಳಿಸಿರುವ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಖಿಲ ಭಾರತ ಸೇವೆಗಳು (ಬಡ್ತಿ ಮೂಲಕ ನೇಮಕಾತಿ) 1955ರ ನಿಯಮ 5(2)ರ ಡಿ ನೀಡಲಾಗುವ ಮುಂಬಡ್ತಿ ಸಂಬಂಧಿತ ವಿಷಯ ಕುರಿತಾದ ಪರಿಪೂರ್ಣವಾದ ಪ್ರಸ್ತಾವನೆಯನ್ನು ಸ್ಪಷ್ಟ ಅಭಿಪ್ರಾಯಗಳೊಂದಿಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ಪರಿಣಾಮಕಾರಿ ಆಡಳಿತ ಹಿತದೃಷ್ಟಿಯಿಂದ ಸೂಕ್ತ ಕ್ರಮ ವಹಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೂಚಿಸಿರುವುದು ತಿಳಿದು ಬಂದಿದೆ.

ಈ ಮುಖ್ಯ ಟಿಪ್ಪಣಿಯೊಂದಿಗೆ 2 ಪುಟಗಳ ಸಂಕ್ಷಿಪ್ತ ಟಿಪ್ಪಣಿಯನ್ನೂ ಸಹ ಮುಖ್ಯ ಕಾರ್ಯದರ್ಶಿಗೆ ನೀಡಿದ್ದಾರೆ.
ಸಂಕ್ಷಿಪ್ತ ಟಿಪ್ಪಣಿಯಲ್ಲೇನಿದೆ?
ಕರ್ನಾಟಕ ಲೋಕಸೇವಾ ಆಯೋಗವು ನೀಡಿದ ಅಂತಿಮ ಆಯ್ಕೆಪಟ್ಟಿಯಲ್ಲಿಲ್ಲದ ಹಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಗುಂಪು- ಬಿ ವೃಂದದ ಶಾಖಾಧಿಕಾರಿ ಹುದ್ದೆಗೆ ನೇಮಕಗೊಂಡು ನಂತರ ಸರ್ಕಾರದ ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಪರ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿದ್ದಾರೆ. ಇಂತಹ ಎರಡು ಪ್ರಕರಣಗಳಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ಆದೇಶದ ಬೆಳಕಿನಲ್ಲಿ ಗುಂಪು-ಎ ಕೆಎಎಎಸ್ ಕಿರಿಯ ಶ್ರೇಣಿ ಹುದ್ದೆಗೆ ನೇಮಕ ಮಾಡಿ 2006ನೇ ಸಾಲಿನಿಂದ ಪೂರ್ವಾನ್ವಯವಾಗುವಂತೆ ಜೇಷ್ಠತೆಯನ್ನು ಹಾಗೂ ಕಾಲ್ಪನಿಕ ಮುಂಬಡ್ತಿ ನೀಡಿದೆ.
ಇವರುಗಳಿಗೆ ಪ್ರಸ್ತುತ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡುವ ಕೋರಿಕೆಗಳು ಸಹ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪರಿಶೀಲನೆಯಲ್ಲಿದೆ. ಇಲಾಖೆಯ ಇಂತಹ ಕ್ರಮಗಳನ್ನು ಪ್ರಶ್ನಿಸಿ ಬಾಧಿತ ಕೆಎಎಸ್ ಅಧಿಕಾರಿಗಳು ಸಲ್ಲಿಸಿರುವ ಪ್ರಕರಣಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಸ್ತುತ ವಿಚಾರಣೆಯಲ್ಲಿವೆ ಎಂದು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿರುವುದು ಸಂಕ್ಷಿಪ್ತ ಟಿಪ್ಪಣಿಯಿಂದ ಗೊತ್ತಾಗಿದೆ.

7 ಮಂದಿ ಅನರ್ಹರು ಐಎಎಸ್ ವೃಂದದಲ್ಲಿ ಮುಂದುವರಿಕೆ
1998 ಹಾಗೂ 199ನೇ ತಂಡದ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಎಸ್‌ಎಲ್‌ಪಿ (ಸಿ) ಸಂಖ್ಯೆ 29245/2016ರಲ್ಲಿ 2018ರ ಏಪ್ರಿಲ್ 11ರಲ್ಲಿ ನೀಡಿದ ತೀರ್ಪು, ರಿವ್ಯೂ ಪಿಟಿಷನ್ (ಸಿ) (ಸಂಖ್ಯೆ 606/2019)ಕ್ಕೆ ಸಂಬಂಧಿಸಿದಂತೆ 2019ರ ಏಪ್ರಿಲ್ 27ರಂದು ನೀಡಿದ ಆದೇಶದ ಪ್ರಕಾರ 1998 ಹಾಗೂ 199ನೇ ಸಾಲಿನ ಕೆಎಎಸ್ ಕಿರಿಯ ಶ್ರೇಣಿ ಹುದ್ದೆಗಳಿಗೆ ಆಯ್ಕೆಯು ಅಂತಿಮಗೊಂಡಿದೆ. ಈ ಅಂಶವನ್ನು ಉಲ್ಲೇಖಿಸಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು (ಅರ್ಜಿ ಸಂಖ್ಯೆ 741-747/2021) 2022ರ ಏಪ್ರಿಲ್ 22ರಂದು ಸ್ಪಷ್ಟ ನಿರ್ದೇಶನ ನೀಡಿತ್ತು. ಈ ನಿರ್ದೇಶನ ನೀಡಿದ ನಂತರವೂ ಸಹ ಅನರ್ಹ 7 ಅಧಿಕಾರಿಗಳು ಪ್ರಸ್ತುತ ಐಎಎಸ್ ವೃಂದದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಂಕ್ಷಿಪ್ತ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಗ್ರೂಪ್ ಎ ಕೆಎಎಸ್ ಕಿರಿಯ ಶ್ರೇಣಿ ಹುದ್ದೆಗೆ ಪೂರ್ವಾನ್ವಯವಾಗಿ ನೇಮಕಗೊಂಡಿರುವ ನಿಯಮಗಳ ಪ್ರಕಾರ ಕಡ್ಡಾಯವಾಗಿ ಕನಿಷ್ಠ 8 ವರ್ಷಗಳ ನಿಯಮಿತ ಸೇವೆ ಸಲ್ಲಿಸಬೇಕೆಂಬ ಅಂಶವನ್ನು ಬದಿಗಿರಿಸಲಾಗಿದೆ. ಕಾನೂನಾತ್ಮಕವಾಗಿ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಬಳಸಿಕೊಳ್ಳದೇ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡುವ ಕುರಿತಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ ಎಂದು ಮುಖ್ಯ ಕಾರ್ಯದರ್ಶಿ ಅವರ ಗಮನವನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೆಳೆದಿರುವುದು ಗೊತ್ತಾಗಿದೆ.
ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗೆ ನೇರ ನೇಮಕಾತಿಗೊಂಡು ಸುಮಾರು ಸತತ 14 ಕ್ಕಿಂತ ಹೆಚ್ಚು ವರ್ಷಗಳ ಸೇವೆಯನ್ನು ಸಲ್ಲಿಸಿದ್ದರೂ ಸಹ ಐಎಎಸ್ ವೃಂದಕ್ಕೆ ಮುಂಬಡ್ತಿ ಹೊಂದಲು ವಿಳಂಬವಾಗುತ್ತಿದೆ. ಹೀಗಾಗಿ ರಾಜ್ಯ ನಾಗರಿಕ ಸೇವೆಯಲ್ಲಿ ಕಡ್ಡಾಯ ಕನಿಷ್ಟ 8 ವರ್ಷಗಳ ನಿಯಮಿತ ಸೇವೆಯನ್ನು ಸಲ್ಲಿಸಿರುವ ಕೆಎಎಸ್ ವೃಂದದ ಅಧಿಕಾರಿಗಳಿಗೆ ಐಎಎಸ್ ಹುದ್ದೆಗೆ ಪದನ್ನೋತಿ ನೀಡಲು ಉಂಟಾಗಿರುವ ಗೊಂದಲಗಳನ್ನು ಕಾನೂನಾತ್ಮಕ ಅಂಶಗಳ ಪ್ರಕಾರ ಇತ್ಯರ್ಥಪಡಿಸಲು ತ್ವರಿತ ಕ್ರಮಗಳು ಆಗಬೇಕಿದೆ ಎಂದು ಟಿಪ್ಪಣಿಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.
ಒಂದು ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಯು ಮುಂಬಡ್ತಿಯನ್ನು ಹೊಂದಲು ನೇಮಕಗೊಂಡ ಹುದ್ದೆಯಲ್ಲಿ ನಿಯಮಾನುಸಾರ ನಿಗದಿಪಡಿಸಿರುವ ಕನಿಷ್ಟ ಅವಧಿಯ ಸೇವೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಪೂರ್ವಾನ್ವಯ ದಿನಾಂಕದಿಂದ ಅನ್ವಯವಾಗುವಂತೆ ನೇಮಕ ಮಾಡಲಾದ ಅಭ್ಯರ್ಥಿಗಳು ನೇಮಕಗೊಂಡ ಹುದ್ದೆಯಲ್ಲಿನ ಕನಿಷ್ಟ ಅವಧಿಯ ಸೇವೆಯನ್ನು ಸಲ್ಲಿಸದೇ ಇದ್ದರೂ ಸಹ ಪರಿಭಾವಿತ ನೇಮಕವೆಂದು ಪರಿಗಣಿಸಲಾಗಿದೆ. ಅಲ್ಲದೇ ಕಾಲ್ಪನಿಕ ಜೇಷ್ಠತೆಯನ್ನು ಮತ್ತು ಮುಂಬಡ್ತಿ ನೀಡಲು ಪ್ರಸ್ತಾಪಿಸಲಾಗಿದೆ. ಇದರಿಂದ ರಾಜ್ಯದ ಆಡಳಿತ ವ್ಯವಸ್ಥೆ ಮೇಲೆ ದುಷ್ಪರಿಣಾಮಗಳು ಉಂಟಾಗಬಹುದು. ಹೀಗಾಗಿ ಕಾನೂನಾತ್ಮಕ ಮತ್ತು ಸುಸ್ಪಷ್ಟವಾದ ಆಡಳಿತಾತ್ಮಕವಾಗಿ ನಿಲುವುಗಳನ್ನು ತಾಳಬೇಕಾಗುತ್ತದೆ ಎಂದು ಎಚ್ಚರಿಸಿರುವುದು ಗೊತ್ತಾಗಿದೆ.
ಅಭ್ಯಥಿಗಳು ಅಪೇಕ್ಷಿಸಿರುವುದೇನು?
ಅಖಿಲ ಭಾರತ ಸೇವೆಗಳು ನಿಯಮಗಳ ಪ್ರಕಾರ (1955 5(2)) ಅನ್ವಯ ರಾಜ್ಯ ನಾಗರಿಕ ಸೇವೆಯಲ್ಲಿ ಕಡ್ಡಾಯ ಕನಿಷ್ಟ ಎಂಟು ವರ್ಷಗಳ ನಿಯಮಿತ ಸೇವೆ ಸಲ್ಲಿಸಿರುವ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡುವ ಪ್ರಸ್ತಾವನೆಗಳನ್ನು ಸಚಿವ ಸಂಪುಟಕ್ಕೆ ಮಂಡಿಸುವಾಗ ಇದರಿಂದ ಬಾಧಿತರಾದ 2008ಮತ್ತು 2010ನೇ ಸಾಲಿನ ಹಲವು ಕೆಎಎಸ್ ಅಭ್ಯರ್ಥಿಗಳು ಕಾನೂನಾತ್ಮಕ ಅಂಶಗಳನ್ನು ಅಪೇಕ್ಷಿಸಿದ್ದಾರೆ ಎಂದು ಡಿ ಕೆ ಶಿವಕುಮಾರ್ ಅವರು ತಮ್ಮ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಅಖಿಲ ಭಾರತ ಸೇವೆಗಳು ನಿಯಮಗಳ ಪ್ರಕಾರ (1955 5(2)) ಅನ್ವಯ ರಾಜ್ಯ ನಾಗರಿಕ ಸೇವೆಯಲ್ಲಿ ಕಡ್ಡಾಯ ಕನಿಷ್ಟ ಎಂಟು ವರ್ಷಗಳ ನಿಯಮಿತ ಸೇವೆ ಸಲ್ಲಿಸದೇ ಇದ್ದರೂ ಸಹ ಕಾಲ್ಪನಿಕ ಜೇಷ್ಠತೆ ಆಧಾರದಲ್ಲಿ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡಲು ಕಾನೂನಾತ್ಮಕ ಅವಕಾಶಗಳು ಹಾಗೂ ಕಾನೂನಾತ್ಮಕವಾಗಿ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಲಾಗಿದೆಯೇ ಎಂದು ಟಿಪ್ಪಣಿಯಲ್ಲಿ ಪ್ರಶ್ನಿಸಿರುವುದು ಗೊತ್ತಾಗಿದೆ.

ಅದೇ ರೀತಿ ಇದೇ 5 (2)ರ ಅನಿಯಮ ಅನ್ವಯ ರಾಜ್ಯ ನಾಗರಿಕ ಸೇವೆಯಲ್ಲಿ ಕಡ್ಢಾಯ ಕನಿಷ್ಟ 8 ವರ್ಷಗಳ ನಿಯಮಿತ ಸೇವೆಯನ್ನು ಸಲ್ಲಿಸಬೇಕು ಎಂಬ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ವ್ಯತಿರಿಕ್ತ ನಿಲುವುಗಳನ್ನು ತಳೆದಿದೆಯೇ, ಈ ಸಂಬಂಧ ಸರ್ಕಾರದ ಸ್ಪಷ್ಟ ನಿಲುವುಗಳೇನು ಎಂದು ಸಹ ಕೇಳಿರುವುದು ತಿಳಿದು ಬಂದಿದೆ.
ಹಾಗೆಯೇ ‘ಕೆಎಎಸ್ ವೃಂದದ ಅಧಿಕಾರಿಗಳಿಗೆ ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡಲು ಬಾಕಿ ಇರುವ ಪ್ರಸ್ತಾವಗಳು ಹಾಗೂ ಈ ಸಂಬಂಧ ಪ್ರಸ್ತಾವಿಸಿರುವ ಪರಿಹಾರಾತ್ಮಕ ಹಾಗೂ ಕಾನೂನಾತ್ಮಕ ಮಾರ್ಗೋಪಾಯಗಳೇನು, ನೇಮಕಗೊಂಡ ಹುದ್ದೆಯಲ್ಲಿ ಕನಿಷ್ಟ ಅವಧಿಯ ಸೇವೆಯನ್ನು ಸಲ್ಲಿಸದೇ ಇದ್ದರೂ ಸಹ ಪರಿಭಾವಿತ ನೇಮಕವೆಂದು ಪರಿಗಣಿಸಿ ಕಾಲ್ಪನಿಕ ಜೇಷ್ಟತೆಯನ್ನು ನಿಗದಿಪಡಿಸಿರುವ ದಿನಾಂಕವನ್ನು ಪರಿಗಣಿಸಿ ಮುಂಬಡ್ತಿ ನೀಡುವ ಸಾಧ್ಯತೆಗಳ ಸಂಬಂಧ ಎಲ್ಲಾ ಇಲಾಖೆಗಳಲ್ಲಿ ಏಕರೂಪದ ವ್ಯವಸ್ಥೆ ಜಾರಿಗೊಳಿಸಲು ಇರುವ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಕ್ರಮಗಳ ಬಗ್ಗೆ ಪರಿಶೀಲಿಸಬೇಕು,’ ಎಂದು ಸೂಚಿಸಿರುವುದು ಗೊತ್ತಾಗಿದೆ.
ಅಕ್ರಮ ಫಲಾನುಭವಿಗಳು ಸ್ಥಾನಪಲ್ಲಟಗೊಂಡಿದ್ದರೂ ಸಹ ಅವರು ಐಎಎಸ್ ವೃಂದದಲ್ಲಿ ಮುಂದುವರದಿದ್ದಾರೆ ಎಂದು ದಿ ಫೈಲ್ ದಾಖಲೆ ಸಮೇತ 2026ರ ಮೇ 21ರಂದೇ ವರದಿ ಪ್ರಕಟಿಸಿತ್ತು.




