ಬೆಂಗಳೂರು; ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಣ ದುರುಪಯೋಗವಾಗಿದೆ ಎನ್ನಲಾಗಿದ್ದ 2,574.14 ಕೋಟಿ ರು ಮೊತ್ತವನ್ನು ಸಮನ್ವಯಗೊಳಿಸುವ ಹೆಸರಿನಲ್ಲಿ ಹಣ ದುರುಪಯೋಗವಾಗಿರುವ ಮೊತ್ತವನ್ನೇ ಲೆಕ್ಕ ಪರಿಶೋಧಕರು ಗಣನೀಯವಾಗಿ ಕಡಿಮೆ ಮಾಡಿರುವುದನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಸನ್ನದು ಮತ್ತು ಶಾಸನಬದ್ಧ ಲೆಕ್ಕ ಪರಿಶೋಧಕರು, ಮೂಲ ಲೆಕ್ಕ ಪರಿಶೋಧನೆ, ಮರು ಲೆಕ್ಕ ಪರಿಶೋಧನೆ, ಪರಿಷ್ಕೃತ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಸಮನ್ವಯಗೊಳಿಸುವ ಹೆಸರಿನಲ್ಲಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ (2014-15 ರಿಂದ 2018-19) ಅವಧಿಯಲ್ಲಿಯೇ 2,574.14 ಕೋಟಿ ರು ಹಣ ದುರುಪಯೋಗವಾಗಿತ್ತು. ಆದರೀಗ ಈ ಮೊತ್ತವನ್ನು ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಶಾಸನಬದ್ಧ ಲೆಕ್ಕ ಪರಿಶೋಧಕರು ಅಂತಿಮ ಹಂತದಲ್ಲಿ ಅತ್ಯಂತ ಕನಿಷ್ಠ ಎಂದರೇ ಕೇವಲ 339.23 ಕೋಟಿ ರುಗೆ ಇಳಿಸಿದ್ದಾರೆ. ಇದರಿಂದಾಗಿ ದುರುಪಯೋಗ ಮೊತ್ತವನ್ನು 2,234.91 ಕೋಟಿಯಷ್ಟು ಕಡಿಮೆ ಮಾಡಿದಂತಾಗಿದೆ.
ಮೂಲ ಲೆಕ್ಕ ಪರಿಶೋಧನೆಯಲ್ಲಿ ಪತ್ತೆ ಹಚ್ಚಿದ್ದ ಹಣ ದುರುಪಯೋಗ, ನಷ್ಟ ಮತ್ತು ಜವಾಬ್ದಾರಿಗಳ ಬಗ್ಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಮರು ಲೆಕ್ಕ ಪರಿಶೋಧನೆ ಆಗಿತ್ತು. ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದನ್ನು ಪರಿಷ್ಕರಿಸಿ ಮರು ಲೆಕ್ಕ ಪರಿಶೋಧನಾ ವರದಿ ಸಿದ್ಧಪಡಿಸಲಾಗಿತ್ತು. ಮೂಲ, ಮರು ಮತ್ತು ಪರಿಷ್ಕೃತ ಮರು ಲೆಕ್ಕ ಪರಿಶೋಧನೆ ನಡೆಸಿದ ಪರಿಣಾಮ ಹಣ ದುರುಪಯೋಗದ ಮೊತ್ತ 339. 23 ಕೋಟಿ ರುಗಿಳಿಸಿದೆ.
ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಲೆಕ್ಕ ಸಮನ್ವಯಗೊಳಿಸುವ ಕಾರ್ಯವು ಬಹುತೇಕ ಪೂರ್ಣಗೊಂಡಿದೆ. ಮೂಲ ಲೆಕ್ಕ ಪರಿಶೋಧನೆ ವರದಿಯನ್ನು ಮರು ಲೆಕ್ಕ ಪರಿಶೋಧನೆ ಮಾಡಿದಾಗ ಹಣ ದುರುಪಯೋಗವಾಗಿರುವ ಮೊತ್ತವನ್ನು 1,514 ಕೋಟಿ ರುಪಾಯಿ ಇಳಿಸಲಾಗಿತ್ತು. ಇದರಿಂದ ಒಟ್ಟಾರೆ ದುರುಪಯೋಗವಾಗಿದ್ದ ಮೊತ್ತದಲ್ಲಿ 1,059 ಕೋಟಿಯಷ್ಟು ಕಡಿಮೆ ಮಾಡಿತ್ತು.

ಇದಾದ ನಂತರ ಮರು ಲೆಕ್ಕ ಪರಿಶೋಧನೆ ವರದಿಯನ್ನೇ 2024-25ರಲ್ಲಿ ಪರಿಷ್ಕೃತಗೊಳಿಸಿದ್ದ ಸನ್ನದು ಲೆಕ್ಕ ಪರಿಶೋಧಕರ ತಂಡವು ಹಣ ದುರುಪಯೋಗದ ಮೊತ್ತವನ್ನು 339.23 ಕೋಟಿ ರು ಗೆ ಇಳಿಸಿದೆ. ಇದರ ಪ್ರಕಾರ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 2014-15ರಿಂದ 2018-19ರವರೆಗೆ ಆಗಿದ್ದ ದುರುಪಯೋಗ ಮೊತ್ತವನ್ನು 2,234.91 ಕೋಟಿಯಷ್ಟು ಕಡಿಮೆ ಮಾಡಿದಂತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಯಾವ ರೀತಿಯಲ್ಲಿ ಕ್ರಮವಿಡಬೇಕು ಎಂದು ಸಹಕಾರ ಇಲಾಖೆಯು ಸರ್ಕಾರದ ಮಾರ್ಗದರ್ಶನ ಕೋರಿದೆ.

ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶೆಟ್ಟಣನವರ ಎಸ್ ಬಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಸದ್ಯ ಈ ಕಡತವು ಸಹಕಾರ ಇಲಾಖೆಯಲ್ಲಿ ಚಲನವಲನದಲ್ಲಿದೆ.

2014-15, 2015-16, 2016-17, 2017-18 ಹಾಗೂ 2018-19ನೇ ಸಾಲಿನ ಲೆಕ್ಕ ಪತ್ರಗಳ ಮರು ಲೆಕ್ಕ ಪರಿಶೋಧನೆ ನಡೆಸಲು ರಾಮನಗರ ಜಿಲ್ಲೆಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರು ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸತೀಶ್ ವಿ ನಾಯಕ್, ಉಮೇಶ್ ಕುಮಾರ್, ಕೆ ರವಿ, ಸಿ ಡಿ ಚಂದ್ರಶೇಖರಯ್ಯ, ಎಂ ಆರ್ ಆಶಾ ಅವರು ಈ ತಂಡದಲ್ಲಿದ್ದರು. ಈ ತಂಡವು 2022ರ ಏಪ್ರಿಲ್ 30ರಂದೇ ವರದಿ ಸಲ್ಲಿಸಿತ್ತು.

2,574.14 ಕೋಟಿ ದುರುಪಯೋಗ
ಮರು ಲೆಕ್ಕ ಪರಿಶೋಧನಾ ವರದಿ ಪ್ರಕಾರ 2014-15ರಿಂದ 2018-19ರವರೆಗೆ ಒಟ್ಟಾರೆ 2,574.14 ಕೋಟಿ ರು ಹಣ ದುರುಪಯೋಗವಾಗಿತ್ತು.


2014-15ರಲ್ಲಿ 807,05,38,359.82 ರು., 2015-16ರಲ್ಲಿ 483,39,08 , 020.00 ರು., 2016-17ರಲ್ಲಿ 333,66,10,807.00 ರು., 2017-18ರಲ್ಲಿ 380,72,61,829.72 ರು., 2018-19ರಲ್ಲಿ 569, 31,43,281.00 ರು ಸೇರಿದಂತೆ 2574, 14,62,297.54 ರು ದುರುಪಯೋಗವಾಗಿತ್ತು.


ಹೆಚ್ ಎಂ ಮಾದೇಗೌಡ ಅವರ ನೇತೃತ್ವದ ತಂಡವು ನಡೆಸಿದ್ದ ಮರು ಲೆಕ್ಕ ಪರಿಶೋಧನಾ ವರದಿಯ ವಿವರಗಳನ್ನು ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತಾಧಿಕಾರಿಗೆ ಕಳಿಸಿತ್ತು. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 63 (13)ರ ಪ್ರಕಾರ ಬ್ಯಾಂಕ್‌ನ ಮುಂದಿನ ಅವಧಿಯ ಲೆಕ್ಕ ಪುಸ್ತಕಗಳಲ್ಲಿ ಹಾಗೂ ಆರ್ಥಿಕ ತಃಖ್ತೆಗಳಲ್ಲಿ ಅಳವಡಿಸಬೇಕು ಎಂದು ಸೂಚಿಸಿತ್ತು.
ಮರು ಲೆಕ್ಕ ಪರಿಶೋಧನಾ ವರದಿಯಲ್ಲಿನ ಅವಲೋಕನ ಮತ್ತು ಹಣ ದುರುಪಯೋಗವಾಗಿರುವ ಅಂಕಿ ಅಂಶಗಳನ್ನು ಪರಿಶೀಲಿಸಿದ್ದ ಬ್ಯಾಂಕ್‌ನ ಆಡಳಿತಾಧಿಕಾರಿಯು 2022ರ ಜುಲೈ 12ರಂದೇ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2022ರ ಜುಲೈ 15ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಬ್ಯಾಂಕ್‌ನಲ್ಲಿ ನಡೆದಿರುವ ಹಣ ದುರುಪಯೋಗ ಮತ್ತು ಗಂಭೀರ ಸ್ವರೂಪದ ನ್ಯೂನತೆಗಳ ಬಗ್ಗೆ ಚರ್ಚೆಯಾಗಿತ್ತು.

3,057.52 ಕೋಟಿ ನಷ್ಟ ಪ್ರಶ್ನಿಸಿದ್ದ ಆಡಳಿತಾಧಿಕಾರಿ
ಮರು ಲೆಕ್ಕ ಪರಿಶೋಧನಾ ವರದಿಯಲ್ಲಿ ಹಣ ದುರುಪಯೋಗವಾಗಿರುವ ಮೊತ್ತ ಮತ್ತು ಬ್ಯಾಂಕ್‌ಗೆ ಆಗಿರುವ ನಷ್ಟದ ಪ್ರಮಾಣವನ್ನು ವಿವರಿಸಿತ್ತು. ಇದರ ಪ್ರಕಾರ 3,057.52 ಕೋಟಿ ನಷ್ಟವಾಗಿತ್ತು. ಇದನ್ನು ಬ್ಯಾಂಕ್‌ನ ಆಡಳಿತಾಧಿಕಾರಿ ಪ್ರಶ್ನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮರು ಲೆಕ್ಕ ಪರಿಶೋಧನೆಯಲ್ಲಿ ಹಣದುರುಪಯೋಗವಾಗಿರುವ 2,574.14 ಕೋಟಿ ರು ಗಳ ಅವಕಾಶ ಕಲ್ಪಿಸಲು ಸೂಚಿಸಲಾಗಿತ್ತು. ಆದರೆ ಬ್ಯಾಂಕ್‌ನವರು 2019-10ನೇ ಸಾಲಿನಲ್ಲಿ ಅಗತ್ಯವಿರುವ ಅವಕಾಶವನ್ನು ಕಲ್ಪಿಸಲಾಗಿತ್ತು ಎಂದು ವರದಿ ಮಾಡಿದ್ದರು.
ಇದರ ಪ್ರಕಾರ 2019ರ ಮಾರ್ಚ್ 31ರ ಮರು ಪರಿಶೀಲನೆಯಂತೆ ಮಾಡಬೇಕಿದ್ದ ಅವಕಾಶ ಮತ್ತು 2019-20ನೇ ಸಾಲಿನಲ್ಲಿ ಮಾಡಿದ್ದ ಅವಕಾಶಗಳನ್ನು ಮರು ಪರಿಶೀಲಿಸಲಾಗಿತ್ತು. ಹೀಗಾಗಿ ಈ ಎಲ್ಲಾ ಲೆಕ್ಕಪತ್ರಗಳನ್ನು ಸಮನ್ವಯಗೊಳಿಸಲು ಬ್ಯಾಂಕ್‌ನ ಆಡಳಿತಾಧಿಕಾರಿ ನೇತೃತ್ವದಲ್ಲಿಯೇ ಮತ್ತೊಂದು ತಂಡವನ್ನು ರಚಿಸಿತ್ತು. ಈ ತಂಡದಲ್ಲಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಜಂಟಿ ನಿರ್ದೇಶಕರಾದ ಸಾಧನಾ ದ ಗಾಂವಕರ್ ಮತ್ತಿತರರು ಇದ್ದರು. ಈ ತಂಡವು ಮರು ಲೆಕ್ಕ ಪರಿಶೋಧನೆ ಅಂಶಗಳು ಮತ್ತು ಶಾಸನ ಬದ್ಧ ಲೆಕ್ಕ ಪರಿಶೋಧನೆಯ ಅಂಕಿ ಅಂಶಗಳಲ್ಲಿನ ವ್ಯತ್ಯಾಸಗಳನ್ನು ಸಮನ್ವಯಗೊಳಿಸಿತ್ತು.
ವ್ಯತ್ಯಾಸದ ಮೊತ್ತವೆಷ್ಟು?
ಲೆಕ್ಕವನ್ನು ಸಮನ್ವಯಗೊಳಿಸಿದ್ದ ಈ ತಂಡವು ಒಟ್ಟು ದುರುಪಯೋಗವಾಗಿರುವ ಮೊತ್ತವನ್ನು ಕಡಿಮೆಗೊಳಿಸಿತ್ತು. ಮರು ಲೆಕ್ಕ ಪರಿಶೋಧನೆ ಪ್ರಕಾರ 2019ರ ಮಾರ್ಚ್ 31ರ ಅಂತ್ಯಕ್ಕೆ 25,74,14,62,297.54 ರು ಹಣ ದುರುಪಯೋಗವಾಗಿತ್ತು. ಇದೇ ಅವಧಿಗೆ ಲೆಕ್ಕವನ್ನು ಸಮನ್ವಯಗೊಳಿಸಿದ್ದ ಪ್ರಕಾರ 15,14,60,28,709.61 ರು ಹಣ ದುರುಪಯೋಗವಾಗಿತ್ತು. ಆದರೆ ವಸೂಲಾತಿ ಆಗಿರಲಿಲ್ಲ.

ಅದೇ ರೀತಿ ಮರು ಲೆಕ್ಕ ಪರಿಶೋಧನೆ ವರದಿ ಪ್ರಕಾರ ಹಣ ದುರುಪಯೋಗ ಅವಕಾಶದಂತೆ 25,74,14,62,297.54 ರು ಆಗಿದ್ದರೇ ಲೆಕ್ಕ ಸಮನ್ವಯದ ಪ್ರಕಾರ 8,11,00,51,279.61 ರು ಇತ್ತು. ಸಾಲಗಳು ಮತ್ತು ಮುಂಗಡಗಳ ವಿಭಾಗದಲ್ಲಿ ಮರು ಲೆಕ್ಕ ಪರಿಶೋಧನೆ ಪ್ರಕಾರ 2,18,30,48,826.62 ರು ಇದ್ದರೇ ಲೆಕ್ಕ ಸಮನ್ವಯದ ಪ್ರಕಾರ 2,32,88,30,362.62 ರು ಇತ್ತು.

ಮರು ಲೆಕ್ಕ ಪರಿಶೋಧನೆ ಪ್ರಕಾರ ಖರ್ಚುಗಳಿಗೆ ಸಂಬಂಧಿಸಿದಂತೆ 51,09,15,95,089.10 ರು ಆಕ್ಷೇಪಣೆಯಲ್ಲಿಡಲಾಗಿತ್ತು. ಲೆಕ್ಕ ಸಮನ್ವಯದ ಪ್ರಕಾರ 61,54,12,47,141.03 ರು ಇತ್ತು. ಮರು ಲೆಕ್ಕ ಪರಿಶೋಧನೆಯಂತೆ 30,57,52,81,357.83 ರು ನಿವ್ವಳ ನಷ್ಟವಾಗಿತ್ತು. ಲೆಕ್ಕ ಸಮನ್ವಯದ ಪ್ರಕಾರ 12,94,38,70,339.90 ರು ನಿವ್ವಳ ನಷ್ಟವಾಗಿತ್ತು.

1,514.60 ಕೋಟಿಗಿಳಿಸಿದ ತಂಡ
ಇದರ ಪ್ರಕಾರ ಬ್ಯಾಂಕ್‌ನಲ್ಲಿ ಆಗಿರುವ ಹಣ ದುರುಪಯೋಗದ ಮೊತ್ತ 2,574.14 ಕೋಟಿ ರು.ಗಳಿಂದ 1,514.60 ಕೋಟಿ ರು ಗೆ ಕಡಿಮೆಯಾಗಿದೆ. ಆದರೆ ಈ ರೀತಿ ಹಣ ದುರುಪಯೋಗದ ಮೊತ್ತವನ್ನು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯವರು ಕಡಿಮೆ ಮಾಡಲು ಸಹಕಾರ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಅವಕಾಶವೇ ಇಲ್ಲ. ಅಲ್ಲದೇ ಹಣ ದುರುಪಯೋಗದ ಮೊತ್ತ ಬಡ್ಡಿ ಸಮೇತ ಸಂಬಂಧಪಟ್ಟವರಿಂದ ಸಂಪೂರ್ಣವಾಗಿ ಜಮೆಯಾಗದ ಹೊರತು ಈ ರೀತಿ ಹಣ ದುರುಪಯೋಗದ ಮೊತ್ತವನ್ನು ಕಡಿಮೆ ಮಾಡುವುದು ಗಂಭೀರವಾದ ಹಾಗೂ ತಪ್ಪಾದ ಕ್ರಮವಾಗಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅಲ್ಲದೇ ಇದರ ಜತೆಗೆ ಇನ್ನಿತರೆ ಹಲವು ಲೋಪದೋಷಗಳೂ ಕಂಡುಬಂದಿವೆ. ಈ ಕುರಿತು 2025ರ ಮೇ 8ರಂದು ಸಭೆ ನಡೆದಿತ್ತು. ಮರು ಲೆಕ್ಕ ಪರಿಶೋಧನಾ ವರದಿಯ ಅಂಕಿ ಅಂಶಗಳು, ಸಮನ್ವಯಗೊಳಿಸಿದ ನಂತರ ಅಂಕಿ ಅಂಶಗಳ ಮಾಹಿತಿಯಂತೆ ಯಾವ ಕಾರಣಕ್ಕಾಗಿ ಸಮನ್ವಯಗೊಳಿಸಲಾಗಿದೆ, ಸಮನ್ವಯಗೊಳಿಸಿದ ಅಂಕಿ ಸಂಖ್ಯೆಗಳ ಮಾಹಿತಿ, ಈ ಮೊತ್ತದ ಜವಾಬ್ದಾರಿ ನಿಗದಿ ಮತ್ತು ನಿಖರವಾದ ಹಣ ದುರುಪಯೋಗ, ನಿಖರವಾದ ನಷ್ಟ ಮಾಹಿತಿ ಕುರಿತು ಚರ್ಚಿಸಿತ್ತು.
2014-15ರಿಂದ 2018-19ನೇ ಸಾಲಿನವರೆಗೆ ಮರು ಲೆಕ್ಕ ಪರಿಶೋಧನೆಯಂತೆ ಹಣದುರುಪಯೋಗದ ಮೊತ್ತ 2,574 ಕೋಟಿ , ಸಮನ್ವಯಗೊಳಿಸಿದ ನಂತರ 1,514 ಕೋಟಿ ರು ಆಗಿದೆ. ವ್ಯತ್ಯಾಸದ ಮೊತ್ತ 1,059 ಕೋಟಿ ಮತ್ತು ಆರ್ಥಿಕ ತಃಖ್ತೆಯಲ್ಲಿ ಅವಕಾಶಗಳಡಿಯಲ್ಲಿ ಮೊತ್ತವನ್ನು ಕಡಿಮೆ ಮಾಡಿರುವ ಕುರಿತು ವಿಸ್ತೃತವಾದ ವರದಿಯನ್ನು 2025ರ ಅಕ್ಟೋಬರ್ 8ರಂದು ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು.
ಅಜಗಜಾಂತರ ವ್ಯತ್ಯಾಸ
2024-25ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಹಣ ದುರುಪಯೋಗ ಎಂದು ನಮೂದಿಸಿರುವ ಮೊತ್ತದಲ್ಲೇ ಅಜಗಜಾಂತರ ವ್ಯತ್ಯಾಸ ಕಂಡು ಬಂದಿತ್ತು. ಈ ಕುರಿತು ಹೆಚ್ಚುವರಿ ಮಾಹಿತಿಯನ್ನೊಳಗೊಂಡ ವರದಿ ಸಲ್ಲಿಕೆಯಾಗಿತ್ತು.
ಹಣದುರುಪಯೋಗ ಮೊತ್ತ ಕಡಿಮೆಗೆ ಸಕಾರಣಗಳೇ ಇಲ್ಲ
ಈ ವರದಿ ಪ್ರಕಾರ 2014-15ರಿಂದ 2018-19ನೇ ಸಾಲಿನ ಮರು ಲೆಕ್ಕ ಪರಿಶೋಧನೆ ಮತ್ತು ಮರು ಲೆಕ್ಕ ಪರಿಶೋಧನೆ ಫಲಿತಾಂಶಗಳನ್ನು ತದ ನಂತರದ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಅಳವಡಿಸಬೇಕಿತ್ತು. ಆದರೆ ಈ ಫಲಿತಾಂಶಘಳನ್ನು ಆರ್ಥಿಕ ತಃಖ್ತೆಯಲ್ಲಿ ಅಳವಡಿಸುವಾಗ ಯಥಾವತ್ತಾಗಿ ಅಳವಡಿಸದೇ ಕಾಲಕ್ರಮಣ ಸಕಾರಣವಿಲ್ಲದೇ ದುರುಪಯೋಗದ ಮೊತ್ತವನ್ನು ಕಡಿಮೆಗೊಳಿಸಲಾಗಿದೆ ಎಂದು ಜಂಟಿ ನಿರ್ದೇಶಕರು ವರದಿಯಲ್ಲಿ ವಿವರಿಸಿದ್ದರು.
ಹಣ ದುರುಪಯೋಗವನ್ನೇ ತೋರಿಸದ ಲೆಕ್ಕ ಪರಿಶೋಧಕರು
2020-21ರಿಂದ 2024-25ರವರೆಗೆ ಒಟ್ಟು 5 ಮಂದಿ ಸನ್ನದು ಲೆಕ್ಕ ಪರಿಶೋಧಕರು ಲೆಕ್ಕ ಪರಿಶೋಧನೆ ನಡೆಸಿದ್ದರು. ಈ ಪೈಕಿ 2020-21ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸಿದ್ದ ಗುರು ಮತ್ತು ಜನ ತಂಡವು 2022ರ ಅಕ್ಟೋಬರ್ 31ರಂದು ಲೆಕ್ಕ ಪರಿಶೋಧನೆ ಪೂರ್ಣಗೊಳಿಸಿದ್ದರು.

ಇವರ ವರದಿ ಪ್ರಕಾರ 2014-15ರಿಂದ 2018-19ರವರೆಗಿನ ಮರು ಲೆಕ್ಕ ಪರಿಶೋಧನಾ ವರದಿಯಂತೆ 2,574.14 ಕೋಟಿ ರು ಹಣ ದುರುಪಯೋಗವನ್ನು ತೋರಿಸಿಲ್ಲ.

ಪರಿಷ್ಕೃತ ಮರು ಲೆಕ್ಕ ಪರಿಶೋಧನಾ ವರದಿಯಲ್ಲಿಯೂ ನಷ್ಟದ ಮೊತ್ತ ಇಳಿಕೆ
ಅದರೆ 2019ರ ಮಾರ್ಚ್ 31ರ ಅಂತ್ಯಕ್ಕೆ 2,574.14 ಕೋಟಿ ರು ದುರುಪಯೋಗವಾಗಿದೆ ಎಂದು ತೋರಿಸಲಾಗಿತ್ತು. ಈ ಬಗ್ಗೆ ಸರ್ಕಾರ ಹಾಗೂ ನಿರ್ದೇಶಕರಿಂದ ಬ್ಯಾಂಕ್ 2022ರ ಜುಲೈ 12ರಂದು ಸ್ಪಷ್ಟೀಕರಣ ಕೋರಿತ್ತು. ಆ ನಂತರ ಪರಿಷ್ಕೃತ ಮರು ಲೆಕ್ಕ ಪರಿಶೋಧನಾ ವರದಿಯನ್ನು ಪರಿಗಣಿಸಲಾಗಿತ್ತು.
ಇದರ ಪ್ರಕಾರ 3,057.52 ಕೋಟಿ ರು ಗಳಿಂದ 1,297.38 ಕೋಟಿಗೆ ಹಾಗೂ ಆರ್ಥಿಕ ತಃಖ್ತೆಗಳಲ್ಲಿ ದುರುಪಯೋಗದ ಮೊತ್ತವನ್ನು 2,574.14 ಕೋಟಿಯಿಂದ 1,808.36 ಕೋಟಿ ರು ಎಂದು ನಮೂದಿಸಿತ್ತು. ಇದೇ ವರದಿಯ ಪುಟ ಸಂಖ್ಯೆ 04 ಪ್ರಕಾರ 3 ಎ ರಲ್ಲಿ 2022ರ ಜುಲೈ 29ರಂದು ಬಿಡುಗಡೆಯಾಗಿದ್ದ ಪರಿಷ್ಕೃತ ಲೆಕ್ಕದ ಪ್ರಕಾರ ಈ ಮೊತ್ತವನ್ನು 811.00 ಕೋಟಿ ರುಗೆ ಕಡಿಮೆಗೊಳಿಸಲಾಗಿತ್ತು.

ಅದೇ ರೀತಿ ವಿ ಕೆ ನಿರಂಜನ್ ಅಂಡ್ ಕಂಪನಿಯೂ ಸಹ 2020-21ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸಿತ್ತು. 2023ರ ಆಗಸ್ಟ್ 25ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿಯೂ ಸಹ 3,057.52 ಕೋಟಿ ರು ನಷ್ಟದಿಂದ 1,294.38 ಕೋಟಿಗೆ ಇಳಿಸಲಾಗಿತ್ತು. ಮತ್ತು ದುರುಪಯೋಗದ ಮೊತ್ತವನ್ನು 2,574.14 ಕೋಟಿ ರು ನಿಂದ 811.00 ಕೋಟಿ ರು ಗೆ ಕಡಿಮೆ ಮಾಡಿತ್ತು.

ಆದರೆ 2020-21ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಪ್ರಕಾರ ಆಸ್ತಿಯ ಕಡೆ ಒಟ್ಟು 1,802.51 ಕೋಟಿ ರು ಹಣ ದುರುಪಯೋಗವಾಗಿದೆ ಎಂದು ತೋರಿಸಿತ್ತು.

ಹಾಗೆಯೇ ಇದೇ ನಿರಂಜನ್ ಅಂಡ್ ಕಂಪನಿಯು 2022-23ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸಿತ್ತು. ಈ ಕಂಪನಿಯು 2024ರ ಮೇ 3ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಕಂಪನಿಯ ನೀಡಿದ್ದ 2022-23ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಂತೆ ಆಸ್ತಿ ಕಡೆ 1,788, 48,69, 150.00 ರು ಹಣ ದುರುಪಯೋಗವಾಗಿತ್ತು.
ಎಸ್ ಆರ್ ಆರ್ ಕೆ ಶರ್ಮಾ ಅಂಡ್ ಕೋ 2023-24ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸಿತ್ತು.

ಈ ಕಂಪನಿಯೂ 2024ರ ಅಕ್ಟೋಬರ್ 21ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವಿಶೇಷವೆಂದರೇ 2022-23ನೇ ಸಾಲಿಗೆ ಸಂಬಂಧಿಸಿದಂತೆ ಈ ಹಿಂದಿನ ಲೆಕ್ಕ ಪರಿಶೋಧಕರು ತೋರಿಸಿದ್ದ 1,788,48,69,150.00 ರು ಹಣ ದುರುಪಯೋಗವೆಂದು ತೋರಿಸಿದ್ದ ಮೊತ್ತವನ್ನು ಎಸ್ ಆರ್ ಆರ್ ಕೆ ಶರ್ಮಾ ಅಂಡ್ ಕೋ ಸಂಪೂರ್ಣವಾಗಿ ತೆಗೆದು ಹಾಕಿತ್ತು.

ಅಲ್ಲದೇ 371.00 ಕೋಟಿ ರು ಮೊತ್ತವನ್ನು ಆಸ್ತಿ ಕಡೆ ಷೆಡ್ಯೂಲ್ 11 ಬಿ ಯಲ್ಲಿ ಹಣ ದುರುಪಯೋಗವಾಗಿದೆ ಎಂದು ತೋರಿಸಿತ್ತು. ಹಾಗೆಯೆ ಈ ಮೊತ್ತಕ್ಕೆ ಅವಕಾಶ ಕಲ್ಪಿಸಿ ಜವಾಬ್ದಾರಿ ಕಡೆ ಕಂಡು ಬಂದಿಲ್ಲ ಎಂದು ಹೇಳಿತ್ತು.

ಇದೇ ಎಸ್ ಆರ್ ಆರ್ ಕೆ ಶರ್ಮಾ ಅಂಡ್ ಕೋ 2024-25ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸಿತ್ತು. ಈ ವರದಿಯನ್ನು 2025ರ ಜುಲೈ 14ರಂದು ಸಲ್ಲಿಸಿತ್ತು. ಈ ವರದಿಯಲ್ಲಿಯೂ ಸಹ 2022-23ನೇ ಸಾಲಿಗೆ ಸಂಬಂಧಿಸಿದಂತೆ ಈ ಹಿಂದಿನ ಲೆಕ್ಕ ಪರಿಶೋಧಕರು ತೋರಿಸಿದ್ದ 1,788,48,69,150.00 ರು ಹಣ ದುರುಪಯೋಗವೆಂದು ತೋರಿಸಿದ್ದ ಮೊತ್ತವನ್ನು ಎಸ್ ಆರ್ ಆರ್ ಕೆ ಶರ್ಮಾ ಅಂಡ್ ಕೋ ಸಂಪೂರ್ಣವಾಗಿ ತೆಗೆದು ಹಾಕಿತ್ತು. ಆದರೆ ಆಸ್ತಿಯ ಕಡೆ 339.23 ಕೋಟಿ ರು ಮೊತ್ತವನ್ನು ಷೆಡ್ಯೂಲ್ 11 ಬಿ ನಲ್ಲಿ ಹಣ ದುರುಪಯೋಗವಾಗಿದೆ ಎಂದು ತೋರಿಸಿತ್ತು. ಈ ಮೊತ್ತಕ್ಕೆ ಅವಕಾಶ ಕಲ್ಪಿಸಿ ಜವಾಬ್ದಾರಿ ಕಡೆ ಕಂಡು ಬಂದಿಲ್ಲವೆಂದು ಹೇಳಿತ್ತು.

2020-21, 2022-23ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಗಳಲ್ಲೂ ಇದೇ ವಿವರಗಳನ್ನು ಮುಂದುವರೆಸಲಾಗಿತ್ತು. ಈ ರೀತಿ ನಿಯಮಗಳಲ್ಲಿ ಅವಕಾಶಗಳು ಇಲ್ಲದಿದ್ದರೂ ಸಹ ಪರಿಷ್ಕೃತ ಮರು ಲೆಕ್ಕ ಪರಿಶೋಧನಾ ವರದಿ ಎಂದು ಪರಿಗಣಿಸಲು ಕ್ರಮವಹಿಸಿದ ವಿಧಾನ ಮತ್ತು ಅದಕ್ಕೆ ಸಂಬಂಧಪಟ್ಟ ಸಮನ್ವಯೀಕರಣ ಮಾಡಿದ್ದ ಅಧಿಕಾರಿಗಳೇ ಈ ಎಲ್ಲಾ ನ್ಯೂನತೆಗಳಿಗೆ ಕಾರಣರು ಎಂದು ಜಂಟಿ ನಿರ್ದೇಶಕರು ಅಭಿಪ್ರಾಯಪಟ್ಟಿದ್ದರು.

ಮೂಲ ಲೆಕ್ಕ ಪರಿಶೋಧನಾ ವರದಿಯಲ್ಲಿ ನಮೂದಾಗಿದ್ದ ,574.14 ಕೋಟಿ ರು ದುರುಪಯೋಗದ ಮೊತ್ತವನ್ನು 1,514.60 ಕೋಟಿ ರುಗಳಿಗೆ ಕಡಿಮೆ ಮಾಡಿ ನಂತರ 2024-25ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಮೊತ್ತವನ್ನು ಕೇವಲ 339.23 ಕೋಟಿ ರು ಗಳಿಗೆ ಕಡಿಮೆ ಮಾಡಿರುವುದನ್ನು ಜಂಟಿ ನಿರ್ದೇಶಕರು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

‘ಈ ರೀತಿ ಹಣ ದುರುಪಯೋಗದ ಮೊತ್ತವನ್ನೇ ಕಡಿಮೆಗೊಳಿಸಿರುವ ಕ್ರಮ ಸಮಂಜಸವಾಗಿಲ್ಲ. ಇದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ,’ ಎಂದು ಜಂಟಿನ ನಿರ್ದೇಶಕರು ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಗುರು ಸಾರ್ವಭೌಮ ಸೊಸೈಟಿಯಲ್ಲಿಯೂ 163 ಕೋಟಿಗೂ ಹೆಚ್ಚು ಬೇನಾಮಿ ಸಾಲ ನೀಡಲಾಗಿತ್ತು ಎಂದು ವಿಶೇಷಾಧಿಕಾರಿ ವರದಿ ಸಲ್ಲಿಸಿದ್ದರು. ಈ ಕುರಿತು ದಿ ಫೈಲ್ 2020ರ ಸೆ.16ರಂದೇ ವರದಿ ಪ್ರಕಟಿಸಿತ್ತು.
ಗುರು ಸಾರ್ವಭೌಮ ಸೊಸೈಟಿಯಲ್ಲಿ 163 ಕೋಟಿಗೂ ಹೆಚ್ಚು ಬೇನಾಮಿ ಸಾಲ; ವಿಶೇಷಾಧಿಕಾರಿ ವರದಿ
ಗುರು ಸಾರ್ವಭೌಮ ಸೊಸೈಟಿಯಲ್ಲಿ ನಡೆದಿದೆ ಎನ್ನಲಾಗಿದ್ದ ಹಗರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಅಂದಿನ ಡಿಜಿಪಿ ನಿರಾಕರಿಸಿದ್ದರು. ಈ ಕುರಿತು ದಿ ಫೈಲ್ 2020ರ ಸೆ.25ರಂದು ವರದಿ ಪ್ರಕಟಿಸಿತ್ತು.
ಗುರು ಸಾರ್ವಭೌಮ ಸೊಸೈಟಿ ಹಗರಣ; ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಡಿಜಿಪಿ ನಕಾರ
ಸಿದ್ದರಾಮಯ್ಯ ಅವರ ಅವಧಿಯಲ್ಲಿ 807 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿತ್ತು ಎಂದು ಮರು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿತ್ತು. ಈ ಕುರಿತು ‘ದಿ ಫೈಲ್’ 2021ರ ಸೆ.16ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಬ್ಯಾಂಕ್ ಹಗರಣ;1,480 ಕೋಟಿ ದುರುಪಯೋಗ, ಸಿದ್ದು ಸರ್ಕಾರದಲ್ಲೂ 807 ಕೋಟಿ ಅವ್ಯವಹಾರ
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 20 ವರ್ಷಗಳಿಂದಲೂ ಅಕ್ರಮ, ಅವ್ಯವಹಾರ, ಹಣ ದುರುಪಯೋಗ ನಡೆದಿತ್ತು. ಆದರೂ ಸರ್ಕಾರಗಳು ಕಣ್ಮುಚ್ಚಿ ಕುಳಿತಿದ್ದವು. ಈ ಕುರಿತು ದಿ ಫೈಲ್ 2022ರ ಫೆ.14ರಂದು ವರದಿ ಪ್ರಕಟಿಸಿತ್ತು.
ಗುರುರಾಘವೇಂದ್ರ ಬ್ಯಾಂಕ್ ಹಗರಣ; 20 ವರ್ಷದಿಂದಲೂ ಅವ್ಯವಹಾರ, ಕಣ್ಮುಚ್ಚಿ ಕುಳಿತಿದ್ದ ಸರ್ಕಾರ
ಈ ಬ್ಯಾಂಕ್‌ನಲ್ಲಿನ ಹಣಕಾಸು ಲೆಕ್ಕಪತ್ರಗಳ ಬಗ್ಗೆ ಮರು ಲೆಕ್ಕ ಪರಿಶೋಧನೆಯು ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ. ಈ ಕುರಿತು ದಿ ಫೈಲ್ 2022ರ ಜುಲೈ 22ರಂದು ವರದಿ ಪ್ರಕಟಿಸಿತ್ತು.
ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮ; ನಿರೀಕ್ಷಿತ ಮಟ್ಟದಲ್ಲಿ ನಡೆಯದ ಮರುಲೆಕ್ಕಪರಿಶೋಧನೆ
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ 2,692 ಕೋಟಿಯಷ್ಟು ಹಣ ದುರುಪಯೋಗವಾಗಿತ್ತು. ಈ ಕುರಿತು ಮರು ಲೆಕ್ಕ ಪರಿಶೋಧನೆ ವರದಿ ಆಧರಿಸಿ ದಿ ಫೈಲ್ 2022ರ ಜುಲೈ 28ರಂದು ವರದಿ ಪ್ರಕಟಿಸಿತ್ತು.
ಗುರುರಾಘವೇಂದ್ರ ಬ್ಯಾಂಕ್, ಸೊಸೈಟಿಯಲ್ಲಿ 2,692 ಕೋಟಿ ರು. ದುರುಪಯೋಗ ಪತ್ತೆ; ಮರು ಲೆಕ್ಕಪರಿಶೋಧನೆ
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 1,400 ಕೋಟಿ ರುಪಾಯಿ ಮೊತ್ತದ ಸಾಲವನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸಿತ್ತು. ಈ ಕುರಿತು ದಿ ಫೈಲ್ 2023ರ ಜುಲೈ 7ರಂದು ವರದಿ ಪ್ರಕಟಿಸಿತ್ತು.
ಗುರು ರಾಘವೇಂದ್ರ ಸಹಕಾರ ಬ್ಯಾಂಕ್; 1,400 ಕೋಟಿ ರು. ಮೊತ್ತದ ಸಾಲ ಅನುತ್ಪಾದಕ ಆಸ್ತಿ ಎಂದು ಘೋಷಣೆ
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ, ಅವ್ಯವಹಾರ, ಹಣ ದುರುಪಯೋಗ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿತ್ತು.
ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮ ತನಿಖೆ; ಸಿಬಿಐನಿಂದ ಹಿಂಪಡೆದು ಸಿಒಡಿಗೆ ವಹಿಸಲು ಸೂಚನೆ
ಆದರೆ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಸಿಬಿಐನಿಂದ ಹಿಂಪಡೆದು ಸಿಒಡಿಗೆ ವಹಿಸಲು ಸೂಚಿಸಿತ್ತು. ಈ ಕುರಿತು ದಿ ಫೈಲ್ 2025ರ ಮೇ 24ರಂದು ವರದಿ ಪ್ರಕಟಿಸಿತ್ತು.









