ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಮೊಕದ್ದಮೆಯೂ ಸೇರಿದಂತೆ ದೇಶದಲ್ಲಿ ಪೋಕ್ಸೊ (POCSO) ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗಿದೆ. ಈ ಪ್ರಕರಣಗಳ ತನಿಖೆ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಪ್ರಮಾಣವೂ ಏರಿಕೆ ಮಟ್ಟದಲ್ಲೇ ಇವೆ. ಕರ್ನಾಟಕದಲ್ಲಿ 21,436 ಪ್ರಕರಣಗಳು ನ್ಯಾಯಾಲಯದ ವಿಚಾರಣೆಗೆ ಬಾಕಿ ಇವೆ ಎಂದ ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಾಹಿತಿ ಒದಗಿಸಿದೆ.
ರಾಜ್ಯಸಭೆಯಲ್ಲಿ ಜೆ ಬಿ ಮಾಥುರ್ ಹಿಶಮ್ ಅವರು ಕೇಳಿದ ಚುಕ್ಕೆ ಗುರುತು ಇಲ್ಲದ ಪ್ರಶ್ನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸಾವಿತ್ರಿ ಠಾಕೂರ್ ನೀಡಿರುವ ಉತ್ತರದಲ್ಲಿ ಪೋಕ್ಸೋ ಪ್ರಕರಣಗಳ ಅಂಕಿ ಸಂಖ್ಯೆಗಳ ವಿವರವಿದೆ.
ಸಚಿವಾಲಯದ ಪ್ರಕಾರ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ ಅಂಶಗಳಂತೆ 2024ರಲ್ಲಿ ದೇಶಾದ್ಯಂತ ಮಕ್ಕಳ ವಿರುದ್ಧ ದೌರ್ಜನ್ಯ ನಡೆದ 1,87,702 ಪೋಕ್ಸೊ (POCSO) ಸಹಿತ ಮಕ್ಕಳ ವಿರುದ್ಧ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. 1,11,426 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ವರ್ಷಾಂತ್ಯಕ್ಕೆ 91,121 ಪ್ರಕರಣಗಳು ತನಿಖೆಯಲ್ಲೇ ಬಾಕಿ ಉಳಿದಿವೆ. ದೊಡ್ಡ ಪ್ರಮಾಣದ 6.44 ಲಕ್ಷ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿಯೂ ಪೋಕ್ಸೋ ಪ್ರಕರಣಗಳ ಸಂಖ್ಯೆಯ ಏರಿಕೆ ಕಂಡಿದೆ. ಈಚೆಗಷ್ಟೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಪೋಕ್ಸೋ ಪ್ರಕರಣಗಳ ಏರಿಕೆ ಮತ್ತು ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಒದಗಿಸಿರುವುದು ಮುನ್ನೆಲೆಗೆ ಬಂದಿದೆ.
2020ರಲ್ಲಿ 1.20 ಲಕ್ಷ ಪೋಕ್ಸೊ ಸೇರಿದಂತೆ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2024ರಲ್ಲಿ ದೇಶದಲ್ಲಿ 1, 87,702 ಪ್ರಕರಣಗಳು ದಾಖಲಾಗಿದೆ. ಅಂದರೆ ಈ ಅವಧಿಯಲ್ಲಿ ಶೇಕಡ 46ರಷ್ಟು ಹೆಚ್ಚಳ ಆದಂತಾಗಿದೆ. ಪೋಕ್ಸೊ ಪ್ರಕರಣಗಳ ವಿಚಾರಣೆಯೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಂಡುಬಂದಿಲ್ಲ. ರಾಜ್ಯಸಭೆಗೆ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ವಿಚಾರಣೆಗೆ ಒಟ್ಟು 6.44,887 ಪ್ರಕರಣಗಳು ಬಾಕಿ ಇವೆ. ಮಕ್ಕಳ ಮೇಲಿನ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಆಗುತ್ತಿರುವ ಪ್ರಮಾಣ ಕೂಡ ಕಡಿಮೆಮಟ್ಟದಲ್ಲಿವೆ. 2020ರಲ್ಲಿ ಶಿಕ್ಷೆ ಪ್ರಮಾಣ ಶೇಕಡ 45 ಆಗಿದ್ದರೆ 2023ರಲ್ಲಿ ಇದು ಅತೀ ಕಡಿಮೆ ಅಂದರೆ ಶೇಕಡ 28.5ಕ್ಕಿಳಿದಿತ್ತು. 2024ರಲ್ಲಿ ಶಿಕ್ಷೆ ಪ್ರಮಾಣ ಶೇಕಡ 33.9 ಆಗಿತ್ತು

ಪೋಕ್ಸೊ ಕಾಯ್ದೆಯ ಪ್ರಕಾರ ಸಾಧ್ಯವಾದಷ್ಟು ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಕಾಯ್ದೆಯಲ್ಲಿ ಸೂಚಿಸಲಾಗಿದೆ. ಆದರೂ ವಿಚಾರಣೆ ವಿಳಂಬ ಆಗುತ್ತಿರುವುದು ಅಂಕಿ ಅಂಶಗಳಿಂದ ಕಂಡುಬರುತ್ತದೆ. ದೇಶದಲ್ಲಿ 6.44 ಲಕ್ಷ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ. ಅತೀ ಹೆಚ್ಚು ಮಹಾರಾಷ್ಟ್ರ ರಾಜ್ಯದಲ್ಲಿ 2024ರಲ್ಲಿ 19,888 ಪ್ರಕರಣಗಳು ತನಿಖೆಗೆ ಬಾಕಿ ಇವೆ. ಉತ್ತರ ಪ್ರದೇಶದಲ್ಲಿ 92, 162 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ 21,436 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ.
ನಾಗಲ್ಯಾಂಡ್ ರಾಜ್ಯದಲ್ಲಿ ಅತೀ ಕಡಿಮೆ ಪ್ರಕರಣಗಳು ದಾಖಲಾಗಿವೆ ಮತ್ತು ವಿಚಾರಣೆಗ ಬಾಕಿ ಇರುವ ಪ್ರಕರಣಗಳು ಕೂಡ ಕಡಿಮೆ ಇವೆ. ಗೋವಾ ರಾಜ್ಯದಲ್ಲಿ ಅತೀ ಕಡಿಮೆ ಶಿಕ್ಷೆ ಪ್ರಮಾಣ ದಾಖಲಾಗಿದೆ. ಮಿಜೋರಾಂ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ ಶೇಕಡ 87 ಶಿಕ್ಷೆ ಪ್ರಮಾಣ ದಾಖಲಾಗಿದೆ.
ಮಕ್ಕಳ ಮೇಲಿನ ಅಪರಾಧ ಪ್ರಕರಣ- ಕರ್ನಾಟಕದ ಸ್ಥಿತಿ
ಕರ್ನಾಟಕದಲ್ಲಿ 2024ರಲ್ಲಿ 9,568 ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ದಾಖಲಾಗಿವೆ. 5,396 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, 1,948 ಪ್ರಕರಣಗಳು ತನಿಖೆಯಲ್ಲೇ ಬಾಕಿ ಉಳಿದಿವೆ. ಶಿಕ್ಷೆ ಪ್ರಮಾಣ ಶೇ. 20.8ರಷ್ಟಿದೆ. ನ್ಯಾಯಾಲಯಗಳಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
ರಾಜ್ಯದಲ್ಲಿ 2020ರಲ್ಲಿ ಕಡಿಮೆ ಅಂದರೆ 5,471 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದವು. 2024ರಲ್ಲಿ ಪೋಕ್ಸೊ ಪ್ರಕರಣಗಳು ಸಂಖ್ಯೆ 9,568 ಆಗಿದೆ. ಪೊಕ್ಸೊ ಪ್ರಕರಣಗಳು ಶೇಕಡ 75 ರಷ್ಟು ಏರಿಕೆ ಆಗಿರುವುದು ಕಳವಳಕಾರಿ ವಿದ್ಯಮಾನವಾಗಿದ್ದು, ರಾಜ್ಯದಲ್ಲಿ ಪೊಕ್ಸೊ ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ವಿರುದ್ಧದ ಪೊಕ್ಸೊ ಪ್ರಕರಣ ಕೂಡ ಸೇರಿದೆ.

ಬಾಕಿ ಉಳಿಯಲು ಕಾರಣಗಳೇನು?
ರಾಜ್ಯದಲ್ಲಿ 2024ರ ವೇಳೆಗೆ 21,436 ಪ್ರಕರಣಗಳು ವಿಚಾಕಣೆಗೆ ಬಾಕಿ ಇವೆ. 2020ರಲ್ಲಿ 13,911 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ರಾಜ್ಯದಲ್ಲಿ 2020ರಲ್ಲಿ ಶಿಕ್ಷೆ ಆದವರ ಪ್ರಮಾಣ ಶೇಕಡ 46 ಆಗಿದ್ದರೆ 2023ರ ವೇಳೆಗೆ ಅದು ಶೇಕಡ 15.8ಕ್ಕೆ ಕುಸಿಯಿತು. ಸರ್ಕಾರದ ಪ್ರಕಾರ, ಬಾಕಿ ಪ್ರಕರಣಗಳಿಗೆ ಕಾರಣಗಳೆಂದರೆ ಪ್ರಕರಣಗಳ ಸಂಕೀರ್ಣ ಸ್ವರೂಪ, ಸಾಕ್ಷ್ಯಗಳ ಲಭ್ಯತೆ, ತನಿಖೆ ಪೂರ್ಣಗೊಳ್ಳಲು ತೆಗೆದುಕೊಳ್ಳುವ ಸಮಯ, ಸಾಕ್ಷಿದಾರರ ವಿಚಾರಣೆ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳ ಕಾರಣದಿಂದ ಆರೋಪಪಟ್ಟಿ ಸಲ್ಲಿಕೆ ಮತ್ತು ಶಿಕ್ಷೆ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುತ್ತಿದೆ.
ಸರ್ಕಾರ ಕೈಗೊಂಡ ಕ್ರಮಗಳು
ಪೋಕ್ಸೊ (POCSO) ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಮಿಷನ್ ವಾತ್ಸಲ್ಯ ಯೋಜನೆಯಡಿ ಸಂಸ್ಥಾತ್ಮಕ ವ್ಯವಸ್ಥೆ ಬಲಪಡಿಸುವುದು, ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳಿಗೆ (FTSC) ಆರ್ಥಿಕ ನೆರವು, ತನಿಖಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ತರಬೇತಿ, ಮಕ್ಕಳ ಸ್ನೇಹಿ ತನಿಖಾ ಕ್ರಮಗಳು ಹಾಗೂ ರಾಜ್ಯಗಳೊಂದಿಗೆ ನಿಯಮಿತ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಪ್ರಕಾರ, ಅತ್ಯಾಚಾರ ಮತ್ತು ಪೊಕ್ಸೊ ಕಾಯ್ದೆಯ ಗಂಭೀರ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ತನಿಖೆಯನ್ನು ದೂರು ದಾಖಲಾದ ದಿನದಿಂದ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು. ಆರೋಪಪಟ್ಟಿ ಸಲ್ಲಿಕೆಯಾದ ಬಳಿಕ ವಿಚಾರಣೆಯನ್ನೂ ಸಾಧ್ಯವಾದಷ್ಟು ಎರಡು ತಿಂಗಳೊಳಗೆ ಮುಗಿಸುವಂತೆ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ಮಗುವಿನ ಸಾಕ್ಷ್ಯವನ್ನು 30 ದಿನಗಳೊಳಗೆ ದಾಖಲಿಸಿ, ವಿಚಾರಣೆಯನ್ನು ಸಾಧ್ಯವಾದಷ್ಟು ಒಂದು ವರ್ಷದೊಳಗೆ ಪೂರ್ಣಗೊಳಿಸುವ ಉದ್ದೇಶವೂ ಕಾಯ್ದೆಯಲ್ಲಿದೆ.
ಪೋಕ್ಸೊ (POCSO) ಕಾಯ್ದೆ ಜಾರಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ರಕ್ಷಣೆ ನೀಡುವ ಪಕ್ಸೊ (Protection of Children from Sexual Offences – POCSO) ಕಾಯ್ದೆಯ ಪರಿಣಾಮಕಾರಿ ಜಾರಿ ಮಾಡುತ್ತಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 775 ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು, ಅವುಗಳಲ್ಲಿ 398 ವಿಶೇಷ POCSO ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದ್ದಾರೆ.
ಮಿಷನ್ ವಾತ್ಸಲ್ಯ ಯೋಜನೆ ಅಡಿಯಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಸಾಂಸ್ಥಿಕ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು ಹಾಗೂ ವಿಶೇಷ ಪೋಕ್ಸೊ ನ್ಯಾಯಾಲಯಗಳ ಸ್ಥಾಪನೆ ಮತ್ತು ನಿರ್ವಹಣೆಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದಿದ್ದಾರೆ. ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಭಿಯೋಜಕರು ಮತ್ತು ಇತರ ಸಂಬಂಧಿತ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ಹಾಗೂ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ. ಪೊಕ್ಸೊ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾರ್ಗಸೂಚಿ ಮತ್ತು ಸಲಹಾ ಸೂಚನೆಗಳನ್ನು ರಾಜ್ಯಗಳಿಗೆ ನೀಡಲಾಗಿದೆ.
ಪೊಲೀಸ್, ಅಭಿಯೋಜಕರು ಹಾಗೂ ಇತರ ಇಲಾಖೆಗಳ ನಡುವೆ ಸಮನ್ವಯವನ್ನು ಬಲಪಡಿಸುವ ಕ್ರಮಗಳು ಕೈಗೊಳ್ಳಲಾಗಿದೆ. ಕಾಯ್ದೆಯ ಅನುಷ್ಠಾನ, ತನಿಖೆ ಮತ್ತು ಪ್ರಕರಣಗಳ ಪ್ರಗತಿಯನ್ನು ಕೇಂದ್ರ ಸರ್ಕಾರ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಸಮಯ ನಿಗದಿ ವಿಚಾರಣೆ
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಪ್ರಕಾರ, ಪೋಕ್ಸೊ ಕಾಯ್ದೆಯ ಗಂಭೀರ ಲೈಂಗಿಕ ಅಪರಾಧಗಳ ತನಿಖೆಯನ್ನು ದೂರು ದಾಖಲಾದ ದಿನದಿಂದ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು. ಆರೋಪಪಟ್ಟಿ ಸಲ್ಲಿಕೆಯಾದ ನಂತರ ವಿಚಾರಣೆಯನ್ನೂ ಸಾಧ್ಯವಾದಷ್ಟು ಎರಡು ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.
ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ಆರಂಭಿಸಿದ 30 ದಿನಗಳೊಳಗೆ ಮಗುವಿನ ಸಾಕ್ಷ್ಯವನ್ನು ದಾಖಲಿಸಬೇಕು. ಸಾಧ್ಯವಾದಷ್ಟು ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಪೋಕ್ಸೊ ಕಾಯ್ದೆಯಲ್ಲಿ ಸೂಚಿಸಲಾಗಿದೆ. 2019ರ ತಿದ್ದುಪಡಿ ಮೂಲಕ ಕೆಲವು ಗಂಭೀರ ಲೈಂಗಿಕ ಅಪರಾಧಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಗಳನ್ನು ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಸಂತ್ರಸ್ತ ಮಕ್ಕಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಸಮಾಲೋಚನೆ, ಕಾನೂನು ನೆರವು, ಪುನರ್ವಸತಿ ಹಾಗೂ ಪರಿಹಾರ ಒದಗಿಸಲು ನಿಯಮಗಳಲ್ಲಿ ಅವಕಾಶ ನೀಡಲಾಗಿದೆ.

398 ಫಾಸ್ಟ್ ಟ್ರ್ಯಾಕ್ ಪೋಕ್ಸೋ ವಿಶೇಷ ನ್ಯಾಯಾಲಯ
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 775 ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು, ಅವುಗಳಲ್ಲಿ 398 ವಿಶೇಷ ಪೋಕ್ಸೋ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳನ್ನು ಸ್ಥಾಪಿಸಲು ಕೇಂದರ ಸರಕಾರದ ಅನುದಾನಿತ ಯೋಜನೆಯನ್ನು 2019ರಿಂದ ಆರಂಭಿಸಲಾಗಿದೆ. 790 ವಿಶೇಷ ಕೋರ್ಟುಗಳನ್ನು ರಚಿಸಬೇಕಾಗಿದೆ. ಯೋಜನೆಯುನ್ನು ತಾತ್ಕಾಲಿಕವಾಗಿ 2026 ಸೆಪ್ಟಂಬರ್ ತನಕ ವಿಸ್ತರಿಸಲಾಗಿದೆ. ಅಂಕಿಅಂಶಗಳ ಪ್ರಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 775 ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು, ಅವುಗಳಲ್ಲಿ 398 ವಿಶೇಷ POCSO ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಕೇಂದ್ರ ಪ್ರಾಯೋಜಿತ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು ನಿರ್ವಹಣೆಗೆ ಕೇಂದ್ರ ಸರಕಾರ 1,259 ಕೋಟಿ ರೂಪಾಯಿ ನೀಡಿದೆ. ವಿಶೇಷ ಪೋಕ್ಸೋ ನ್ಯಾಯಾಲಯಗಳ ಸಹಿತ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳಲ್ಲಿ 2025ರ ವೇಳೆಗ 2.45 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ. 2024ರಲ್ಲಿ 85 ಸಾವಿರ, 2025ರಲ್ಲಿ 66 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ದೇಶದಲ್ಲಿ 775 ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು ಕಾರ್ಯ ನಿವರ್ಹಿಸುತ್ತಿವೆ.

ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು 218 (74 ಪೋಕ್ಸೋ ನ್ಯಾಯಾಲಯಗಳ ಸಹಿತ) ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು ಕೆಲಸ ಮಾಡುತ್ತಿವೆ. ಅನಂತರ ಮಧ್ಯಪ್ರದೇಶ, ಕೇರಳ, ರಾಜಸ್ತಾನ, ಓಡಿಶಾ ಮತ್ತು ಬಿಹಾರದಲ್ಲಿ ಹೆಚ್ಚು ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳಿವೆ. ಕರ್ನಾಟಕ ರಾಜ್ಯದಲ್ಲಿ 14 (POCSO ಕೋರ್ಟ್) ಸಹಿತ 30 ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್‌ಗಳು ಇವೆ. ರಾಜ್ಯಕ್ಕೆ ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ ಯೋಜನೆಯಡಿ 2023-24ರಲ್ಲಿ 7 ಕೋಟಿ, 2024-25ರಲ್ಲಿ 7.65 ಕೋಟಿ ರೂಪಾಯಿ 2025-26ರಲ್ಲಿ 8 ಕೋಟಿ ರು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಸರಕಾರವು ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ ಯೋಜನೆಯಡಿ ರಾಜ್ಯಗಳಿಗೆ ವಾರ್ಷಿಕ ತಲಾ 200 ಕೋಟಿ ರು, 2023-24ರಿಂದ ಬಿಡುಗಡೆ ಮಾಡುತ್ತಿದೆ. ಫಾಸ್ಟ್ ಟ್ರ್ಯಾಕ್ ಸ್ಪೆಷಲ್ ಕೋರ್ಟ್ ಗಳ ಮೂಲಭೂತ ಸೌಕರ್ಯ ಒದಗಿಸಲು ಸರಕಾರ ವಿಶೇಷ ಅನುದಾನ ನೀಡುತ್ತಿದೆ ಎದು ಸಚಿವರು ತಿಳಿಸಿದ್ದಾರೆ. ಇಂತಹ ಅನುದಾನದ ಮೂಲಕ ಕೋರ್ಟ್ ಹಾಲ್, ಡಿಜಿಟಲ್ ಕಂಪ್ಯೂಟರ್ ರೂಮ್, ವಕೀಲರ ಕೊಠಡಿ ಇತ್ಯಾದಿ ನಿರ್ಮಾಣ ಮಾಡಬಹುದಾಗಿದೆ.
3 ವರ್ಷದಲ್ಲಿ 15,769 ಲೈಂಗಿಕ ಹಿಂಸೆ, 8,333 ಪೋಕ್ಸೋ, 1,606 ಅತ್ಯಾಚಾರ, 880 ಮಹಿಳೆಯರ ಅಕ್ರಮ ಸಾಗಾಣಿಕೆ
2023ರ ಅಂತ್ಯಕ್ಕೆ 8,333 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.




