ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಅಕ್ರಮ ತನಿಖೆ; ಸಿಬಿಐನಿಂದ ಹಿಂಪಡೆದು ಸಿಒಡಿಗೆ ವಹಿಸಲು ಸೂಚನೆ

ಬೆಂಗಳೂರು;  ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಮತ್ತು ಗುರು ರಾಘವೇಂದ್ರ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸೊಸೈಟಿಯಲ್ಲಿ  ಎರಡೂವರೆ ಸಾವಿರ ಕೋಟಿಗೂ ಹೆಚ್ಚಿನ  ಅಕ್ರಮ ನಡೆದಿದೆ ಎನ್ನಲಾಗಿರುವ  ಪ್ರಕರಣದ ತನಿಖೆಯನ್ನು ಸಿಬಿಐನಿಂದ ಹಿಂಪಡೆದು ಸಿಐಡಿ (ಎಸ್‌ಐಟಿ) ತನಿಖೆಗೆ ವಹಿಸಲು ರಾಜ್ಯ ಸರ್ಕಾರವು ಮುಂದಾಗಿದೆ.

 

ಸಿಬಿಐನಿಂದ ಹಿಂಪಡೆದು ಸಿಐಡಿ (ಎಸ್‌ಐಟಿ) ತನಿಖೆಗೆ ವಹಿಸಲು ಕ್ರಮ ವಹಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಫೆ.28ರಂದು ನಡೆದ ಸಭೆಯು ನಿರ್ದೇಶಿಸಿದೆ. ಈ ಸಂಬಂಧ ‘ದಿ ಫೈಲ್‌’ಗೆ ಸಭೆಯ ನಡವಳಿಗಳು (ಕಡತ ಸಂಖ್ಯೆ; ಸಿಒ/14/ಸಿಆರ್‍‌ಸಿ-ಸಿಒ-( ಕಂಪ್ಯೂಟರ್‍‌ ನಂಬರ್‍‌ 1172796) ಲಭ್ಯವಾಗಿವೆ.

 

ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೇ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮತ್ತು ಗುರು ಸಾರ್ವಭೌಮ ಕ್ರೆಡಿಟ್‌ ಸಹಕಾರಿ ಸಂಸ್ಥೆಯಲ್ಲಿ 2,692.13 ಕೋಟಿ ರು ದುರುಪಯೋಗವಾಗಿತ್ತು ಎಂದು ಮರು ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿತ್ತು. ಇದರ ಮಧ್ಯೆಯೇ ಇಡೀ ಪ್ರಕರಣವನ್ನು ತನಿಖೆ ನಡೆಸಲು ಸಿಬಿಐ ತನಿಖೆಗೆ ವಹಿಸಿತ್ತು.

 

ಸಿಬಿಐ ಸಂಸ್ಥೆಯು ಪರಿಣಾಮಕಾರಿಯಾಗಿ ತನಿಖೆ ನಡೆಸಿದ್ದಲ್ಲಿ  ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೇ ಇದು ಮುಳುವಾಗಲಿದೆ  ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಈ ಬೆಳವಣಿಗೆ ನಡುವೆಯೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ  ಸಿಬಿಐ ತನಿಖೆಯಿಂದ ಇಡೀ ಪ್ರಕರಣವನ್ನು ಹಿಂಪಡೆದು ಸಿಐಡಿ (ಎಸ್‌ಐಟಿ)ಗೆ ವಹಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆ ಕುರಿತು ಸಚಿವ ಕೆ ಎನ್‌ ರಾಜಣ್ಣ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಸಿಬ್ಬಂದಿ ಕೊರತೆ ನೆಪವೊಡ್ಡಿದ ಸಿಬಿಐ?

 

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಮತ್ತು ಶ್ರೀ ಗುರುಸಾರ್ವಭೌಮ ಕ್ರೆಡಿಟ್‌ ಸಹಕಾರಿ ಬ್ಯಾಂಕ್‌, ವಶಿಷ್ಟ ಕ್ರೆಡಿಟ್‌ ಸೌಹಾರ್ದ ಸಹಕಾರ ಸಂಘಗಳಲ್ಲಿ ನಡೆದ ಅವ್ಯವಹಾರಗಳ ಕುರಿತು ತನಿಖೆ ನಡೆಸಲು 2023ರ ಡಿಸೆಂಬರ್‍‌ 2ರಂದು ರಾಜ್ಯದ ಗೃಹ ಇಲಾಖೆಯಿಂದ ಪ್ರಕರಣಗಳನ್ನು ಸಿಬಿಐ ತನಿಖೆಗೆ ವರ್ಗಾಯಿಸಿ ಆದೇಶಿಸಲಾಗಿತ್ತು. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿರಲಿಲ್ಲ. ವಿಚಾರಣೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಬೇಕು ಎಂದು  ಸಿಬಿಐ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು ಎಂಬುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

 

ಹೆಚ್ಚುವರಿ ಸಿಬ್ಬಂದಿ ಒದಗಿಸಲು ರಾಜ್ಯ ನಕಾರ

 

ಸಿಬಿಐ ತನಿಖಾ ಸಂಸ್ಥೆಯು ಕೋರಿದ್ದ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸಲು ರಾಜ್ಯ ಸರ್ಕಾರವು ನಿರಾಕರಿಸಿತ್ತು.

 

‘ಸಿಬಿಐ ಸಂಸ್ಥೆಯು ವಿಚಾರಣೆಗೆ ಹೆಚ್ಚುವರಿ ಸಿಬ್ಬಂದಿಗಳ ಅವಶ್ಯಕತೆ ಇರುವುದರಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸುವಂತೆ ಡಿಜಿ ಐಜಿಪಿ ಅವರನ್ನು ಕೋರಿರುತ್ತಾರೆ. ಡಿಜಿಐಜಿಪಿ ಅವರು ಸಿಬ್ಬಂದಿಗಳ ಕುರಿತು ಒಳಾಡಳಿತ ಇಲಾಖೆಗೆ ಪತ್ರ ಬರೆದಿದ್ದು, ಕರ್ನಾಟಕ ರಾಜ್ಯದಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಸಿಬ್ಬಂದಿಗಳನ್ನು ನೀಡಲು ಸಾಧ್ಯವಿರುವುದಿಲ್ಲ. ಆದ ಕಾರಣ ಸದರಿ ಪ್ರಕರಣಗಳನ್ನು ಸಿಬಿಐನಿಂದ ಹಿಂಪಡೆದು ಸಿಐಡಿ (ಎಸ್‌ಐಟಿ) ತನಿಖೆಗೆ ವಹಿಸಲು ಕ್ರಮ ವಹಿಸಬೇಕು,’ ಎಂದು ಒಳಾಡಳಿತ ಇಲಾಖೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಸಭೆಯಲ್ಲಿ ಸೂಚಿಸಿದ್ದರು ಎಂಬುದು ನಡವಳಿಯಿಂದ ತಿಳಿದು ಬಂದಿದೆ.

 

ಪ್ರಕರಣಗಳ ವಿಚಾರಣೆಗೆ ಹೆಚ್ಚುವರಿ ಸಿಬ್ಬಂದಿಗಳು ಅವಶ್ಯಕತೆ ಇದ್ದು ಸಿಬ್ಬಂದಿಗಳನ್ನು ಒದಗಿಸುವಂತೆ ಸಿಬಿಐ ಗೃಹ ಇಲಾಖೆಯನ್ನು ಕೋರಿದೆ.  ಕರ್ನಾಟಕ ರಾಜ್ಯದಲ್ಲಿಯೂ  ಪೊಲೀಸ್‌ ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ಸಿಬಿಐ ಕೋರಿರುವಷ್ಟು ಸಿಬ್ಬಂದಿಗಳನ್ನು ನೀಡಲು ಸಾಧ್ಯವಿರುವುದಿಲ್ಲ. ಪಾರದರ್ಶಕ ತನಿಖೆಗಾಗಿ ಸಿಬಿಐ ಅವರೇ ಅಗತ್ಯ ಸಿಬ್ಬಂದಿಗಳನ್ನು ಒದಗಿಸಿಕೊಳ್ಳುವ ಕುರಿತು ಡಿಒಪಿಟಿಗೆ ಪತ್ರ ವ್ಯವಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯು ಸೂಚಿಸಿರುವುದು ಗೊತ್ತಾಗಿದೆ.

 

ಸಿಬಿಐನಿಂದ ಮೂಲ ದಾಖಲೆಗಳ ಹಿಂಪಡೆಯಿರಿ

 

ಪ್ರಕರಣಕ್ಕೆ ಸಂಬಂಧಪಟ್ಟ ಮೂಲ ದಾಖಲೆಗಳನ್ನು ಸಿಬಿಐನಿಂದ ಕೂಡಲೇ ಹಿಂಪಡೆದು ಸಿಐಡಿ (ಎಸ್‌ಐಟಿ) ತನಿಖೆಗೆ ಅವಶ್ಯವಿರುವ ದಾಖಲೆಗಳನ್ನು ತುರ್ತಾಗಿ ಒದಗಿಸಬೇಕು ಎಂದು ಸಭೆಯು ಸೂಚಿಸಿರುವುದು ಗೊತ್ತಾಗಿದೆ.

 

ಆಡಳಿತಾಧಿಕಾರಿ ಬದಲಿಸುತ್ತಿರುವ ಆರ್‍‌ಬಿಐ

 

ಅದೇ ರೀತಿ  ಸಹಕಾರ ಬ್ಯಾಂಕ್‌/ಸಂಘಗಳಲ್ಲಿನ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ಆಡಳಿತಾಧಿಕಾರಿಯನ್ನು ಆರ್‍‌ಬಿಐ ನೇಮಿಸಿದೆ.   ಆಡಳಿತಾಧಿಕಾರಿಯನ್ನು ಪದೇ ಪದೇ ಬದಲಿಸುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ತೊಂದರೆಯಾಗುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಆಡಳಿತಾಧಿಕಾರಿಯನ್ನು ಬದಲಿಸದಂತೆ ಕ್ರಮವಹಿಸಲು ಆರ್‍‌ಬಿಐಗೆ ಪತ್ರ ಬರೆಯಬೇಕು ಎಂದು ಸಭೆಯು ನಿರ್ದೇಶಿಸಿರುವುದು ತಿಳಿದು ಬಂದಿದೆ.

 

ಸಹಕಾರ ಬ್ಯಾಂಕ್‌/ಸಹಕಾರ ಸಂಘಗಳಲ್ಲಿನ ಆಡಳಿತಾಧಿಕಾರಿಯು ಕೂಡಲೇ ಬ್ಯಾಂಕ್‌ನ ವ್ಯವಹಾರಗಳ ಲೆಕ್ಕ ಪರಿಶೋಧನೆ ನಡೆಸಬೇಕಕು.  ಮೂರು ತಿಂಗಳೊಳಗಾಗಿ ತನಿಖಾಧಿಕಾರಿಗಳಿಗೆ ವರದಿಯನ್ನು ನೀಡಬೇಕು.  ಹಾಗೂ ತನಿಖೆಗೆ ಹಾಗೂ ತನಿಖೆಗೆ ಅಗತ್ಯವಿರುವ ನೆರವನ್ನು ಸಂಬಂಧಪಟ್ಟ ಇಲಾಖೆಗಳು ಒದಗಿಸಬೇಕು. ಲೆಕ್ಕ ಪರಿಶೋಧನಾ ವರದಿಯು ಸ್ವೀಕೃತವಾದ 2 ತಿಂಗಳ ಒಳಗೇ ಗೃಹ ಇಲಾಖೆಯು ತನಿಖೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.

 

ತಂತ್ರಾಂಶದಲ್ಲಿ ತೊಡಕು

 

ಬ್ಯಾಂಕ್‌ನಲ್ಲಿ ಅವ್ಯವಹಾರ ಮಾಡಲು ಕಾರಣವಾಗಿದ್ದ ತಂತ್ರಾಂಶದಲ್ಲಿ ಕೆಲವು ತೊಡಕುಗಳಿದ್ದು ಅದನ್ನು ಪರಿಶೀಲಿಸಿ ವರದಿ ನೀಡಬೇಕು.  ಮತ್ತು ಆಡಳಿತಾಧಿಕಾರಿಯವರಿಗೆ ಅಗತ್ಯ ತಾಂತ್ರಿಕ ಹಾಗೂ ನುರಿತ ಸಿಬ್ಬಂದಿಗಳನ್ನು ಒದಗಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸಭೆಯು ನಿರ್ದೇಶಿಸಿದೆ.

 

ಪಾಪ್ಯುಲರ್‍‌ ಫೈನಾನ್ಸ್‌ನಲ್ಲಿ ನಡೆದ ಅವ್ಯವಹಾರದ ಕುರಿತು ಸಿಬಿಐ ಅವರು ತನಿಖೆ ನಡೆಸುತ್ತಿದ್ದು ಸದರಿ ಪ್ರಕರಣವು ಅಂತರ್ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ಸಿಬಿಐ ಅವರು ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

 

ಎರಡೂವರೆ ಸಾವಿರ ಕೋಟಿ ಅಕ್ರಮ ಹಾಗೂ 6 ಲಕ್ಷ ಠೇವಣಿದಾರರಿದ್ದ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದ ಬಗ್ಗೆ ಎಸ್ಐಟಿ ರಚನೆ ಮಾಡುವಂತೆ ಪ್ರಿಯಾಂಕಾ ಗಾಂಧಿ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದರು.  ಪ್ರಕರಣವನ್ನು  ಸಿಬಿಐಗೆ ಹಸ್ತಾಂತರಿಸಿದ್ದರೂ ಸಹ  ತನಿಖೆ ಪ್ರಾರಂಭವಾಗಿಲ್ಲ. ಈ ಹಗರಣದಲ್ಲಿ ಬಿಜೆಪಿ ನಾಯಕರೇ ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಕೈಗೊಂಡಿಲ್ಲ. ಇದರಿಂದಾಗಿ ಲಕ್ಷಾಂತರ ಮಂದಿ ಠೇವಣಿದಾರರು ಬೀದಿಗೆ ಬಿದ್ದಿದ್ದಾರೆ. ಠೇವಣಿದಾರರಿಗೆ ನ್ಯಾಯ ಸಿಗಬೇಕಿದೆ ಎಂದು ಪ್ರಿಯಾಂಕ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದನ್ನು ಸ್ಮರಿಸಬಹುದು.

 

ಅಲ್ಲದೆ ಕಳೆದ 20 ವರ್ಷಗಳಿಂದಲೂ ಈ ಬ್ಯಾಂಕ್‌ನಲ್ಲಿ ಹಣ ದುರುಪಯೋಗವಾಗುತ್ತಿದೆ ಎಂಬ ಕುರಿತು 2022ರ ಫೆ. 14ರಂದು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಗುರುರಾಘವೇಂದ್ರ ಬ್ಯಾಂಕ್‌ ಹಗರಣ; 20 ವರ್ಷದಿಂದಲೂ ಅವ್ಯವಹಾರ, ಕಣ್ಮುಚ್ಚಿ ಕುಳಿತಿದ್ದ ಸರ್ಕಾರ

 

ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೇ (2014-15ರಿಂದ 2018-19ರವರೆಗೆ) ಒಟ್ಟು 2,692.13 ಕೋಟಿ ರು. ಹಣ ದುರುಪಯೋಗವಾಗಿದೆ ಎಂದು ಮರು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿತ್ತು. ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮತ್ತು ಗುರು ಸಾರ್ವಭೌಮ ಕ್ರೆಡಿಟ್‌ ಸಹಕಾರಿ ಸಂಸ್ಥೆಯಲ್ಲಿ 2,692.13 ಕೋಟಿ ರು ದುರುಪಯೋಗವಾಗಿತ್ತು ಎಂದು ಮರು ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿತ್ತು.

 

ಗುರುರಾಘವೇಂದ್ರ ಬ್ಯಾಂಕ್‌, ಸೊಸೈಟಿಯಲ್ಲಿ 2,692 ಕೋಟಿ ರು. ದುರುಪಯೋಗ ಪತ್ತೆ; ಮರು ಲೆಕ್ಕಪರಿಶೋಧನೆ

‘ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನ 2014-15ರಿಂದ 2018-19ನೇ ಸಾಲಿನವರೆಗಿನ ಮರು ಲೆಕ್ಕ ಪರಿಶೋಧನೆ ವರದಿ ಪೂರ್ಣಗೊಂಡಿದ್ದು ವರದಿಗಳನ್ನು ಬಿಡುಗಡೆಗೊಳಿಸಲಾಗಿದೆ.  ಮರುಲೆಕ್ಕಪರಿಶೋಧನೆಯಿಂದ 2,574.13 ಕೋಟಿ ರು ಹಣ ದುರುಪಯೋಗದ ಮೊತ್ತವನ್ನು ಪತ್ತೆ ಹಚ್ಚಿದೆ. ಈ ಸಂಬಂಧ ಸರ್ಕಾರಕ್ಕೆ ಹಾಗೂ ಸಹಕಾರ ಸಂಘಗಳ ನಿಬಂಧಕರಿಗೆ ವರದಿ ಮಾಡಲಾಗಿದೆ,’ ಎಂದು ಅನುಪಾಲನಾ ವರದಿಯು ವಿವರಿಸಿತ್ತು.

 

ಅದೇ ರೀತಿ ಗುರು ರಾಘವೇಂದ್ರ ಸಹಕಾರ ಬ್ಯಾಂಕನಲ್ಲಿ 1,400 ಕೋಟಿ ರು ಮೊತ್ತದ ಸಾಲವು ಅನುತ್ಪಾದಕ ಆಸ್ತಿ ಎಂದು ಘೋಷಣೆಯಾಗಿತ್ತು.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌; 1,400 ಕೋಟಿ ರು. ಮೊತ್ತದ ಸಾಲ ಅನುತ್ಪಾದಕ ಆಸ್ತಿ ಎಂದು ಘೋಷಣೆ

 

ಅದೇ ರೀತಿ ‘ಶ್ರೀ ಗುರುಸಾರ್ವಭೌಮ ಕ್ರೆಡಿಟ್‌ ಸೌಹಾರ್ದ ಸಹಕಾರಿಯ 2015-16 ಮತ್ತು 2016-17ನೇ ಸಾಲಿನ ಮರುಲೆಕ್ಕಪರಿಶೋಧನೆ ವದಿ ಪೂರ್ಣಗೊಂಡು ವರದಿ ಬಿಡುಗಡೆಯಾಗಿದೆ. 2017-18ನೇ ಸಾಲಿನ ಮರುಲೆಕ್ಕಪರಿಶೋಧನೆ ಪೂರ್ಣಗೊಂಡಿದ್ದು  ವರದಿ ಬಿಡುಗಡೆಗೆ ಬಾಕಿ ಇದೆ. 2015-16ರಿಂದ 2017-18ನೇ ಸಾಲುಗಳ ಮರುಲೆಕ್ಕಪರಿಶೋಧನೆಯಿಂದ 118 ಕೋಟಿ ರು. ಹಣ ದುರುಪಯೋಗ ಪತ್ತೆಯಾಗಿದೆ,’ ಎಂದು ಅನುಪಾಲನಾ ವರದಿಯಲ್ಲಿ ಉಲ್ಲೇಖಿಸಿತ್ತು.

 

2018-19ನೇ ಸಾಲಿನ ಮರುಲೆಕ್ಕಪರಿಶೋಧನೆ ವರದಿಯಿನ್ನು ಜುಲೈ 2022ರೊಳಗೆ ಪೂರ್ಣಗೊಳಿಸಿ ವರದಿ ಬಿಡುಗಡೆಗೊಳಿಸಲು ಸನ್ನದು ಲೆಕ್ಕಪರಿಶೋಧಕರಿಗೆ ಸೂಚಿಸಿದೆ. 2015-16 ಮತ್ತು 2016-17ನೇ ಸಾಲಿನ ವಿಧಿವಿಜ್ಞಾನ ಲೆಕ್ಕಪರಿಶೋಧನೆ ವರದಿ ಪೂರ್ಣಗೊಂಡು ವರದಿ ಬಿಡುಗಡೆಯಾಗಿತ್ತು.  2017-18, 2018-19, 2019-20ನೇ ಸಾಲಿನ ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಪ್ರಗತಿಯಲ್ಲಿದೆ ಎಂಬುದು ಅನುಪಾಲನಾ ವರದಿಯಲ್ಲಿ ಮಾಹಿತಿ ಒದಗಿಸಿತ್ತು.

 

ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಡಿಜಿಪಿ ನಿರಾಕರಿಸಿದ್ದರು.

ಗುರು ಸಾರ್ವಭೌಮ ಸೊಸೈಟಿ ಹಗರಣ; ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಡಿಜಿಪಿ ನಕಾರ

 

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 2014-15ನೇ ಸಾಲಿಗೆ 871 ಕೋಟಿ ರು. ನಷ್ಟ ಮತ್ತು 807 ಕೋಟಿ ರು. ಹಣ ದುರುಪಯೋಗವಾಗಿದೆ. 2018-19ರವರೆಗಿನ ಲೆಕ್ಕಪತ್ರಗಳನ್ನು ಮರು ಲೆಕ್ಕಪರಿಶೋಧನೆ ನಡೆಸಿದ್ದ ಸನ್ನದು ಲೆಕ್ಕಪರಿಶೋಧಕರು 2020ರ ಮಾರ್ಚ್‌ ಅಂತ್ಯಕ್ಕೆ ಒಟ್ಟು 1,923 ಕೋಟಿ ರು. ನಷ್ಟ ಹೊಂದಿದೆ ಎಂದು ವರದಿ ಸಲ್ಲಿಸಿದ್ದರು. ಮತ್ತು ಗುರುಸಾರ್ವಭೌಮ ಸೊಸೈಟಿಯಲ್ಲಿ 163 ಕೋಟಿಗೂ ಹೆಚ್ಚು ಬೇನಾಮಿ ಸಾಲ ಇದೆ ಎಂದು ವಿಶೇಷಾಧಿಕಾರಿಯೂ ವರದಿ ನೀಡಿದ್ದರು.

 

‘ಎವರ್‌ ಗ್ರೀನ್‌ ಅಕೌಂಟ್ಸ್‌ ಎಂದು ಸೃಷ್ಟಿಸಿ ವಾಸ್ತವಿಕವಾಗಿ ಸಾಲಗಾರರಿಗೆ  ಸಾಲ ನೀಡಲಾಗಿದೆ ಎಂದು ದಾಖಲೆಯನ್ನು ಸೃಷ್ಟಿಸಿ ಎವರ್‌ ಗ್ರೀನ್‌ ಅಕೌಂಟ್ಸ್‌ ಸೃಷ್ಟಿಸಿರುತ್ತಾರೆ. ಸಾಲ ನೀಡುವಿಕೆಯಲ್ಲಿ ದೊಡ್ಡ ಪ್ರಮಾಣದ ವಂಚನೆ ಕಂಡು ಬರುತ್ತಿದೆ. ಪ್ರತಿ ಖಾತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು, ಸಾಲ ಮಂಜೂರಾತಿ, ಸಾಲದ ಹಣ ವರ್ಗಾವಣೆ ಆಯಾ ಸಾಲಗಾರರಿಗೆ ಆಗದೇ ಬೇರೆ ಸಾಲಗಳಿಗೆ ವರ್ಗಾವಣೆ ಮಾಡಿ ಹೊಂದಾಣಿಕೆ ಮಾಡಿರುವುದು ಸಾಬೀತಾಗುತ್ತಿದೆ,’ ಎಂದು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅಧ್ಯಕ್ಷತೆಯಲ್ಲಿ 2022ರ ಫೆಬ್ರುವರಿ 9ರಂದು ನಡೆದಿದ್ದ ಸಭೆಯಲ್ಲಿ ಸಹಕಾರ ನಿಬಂಧಕರು ವಿವರಣಾತ್ಮಕವಾದ ಟಿಪ್ಪಣಿ ಸಲ್ಲಿಸಿದ್ದರು.

 

ರಾಜ್ಯದ ಸಹಕಾರ ಬ್ಯಾಂಕ್‌, ಸಹಕಾರ ಸಂಘಗಳಲ್ಲಿ ಕಳೆದ 5 ವರ್ಷಗಳಲ್ಲಿ 141.78 ಕೋಟಿ ರು ದುರುಪಯೋಗವಾಗಿತ್ತು ಎಂದು ವಿಧಾನಮಂಡಲಕ್ಕೆ ಸರ್ಕಾರವೇ ಲಿಖಿತ ಉತ್ತರ ನೀಡಿತ್ತು.

 

ಸಹಕಾರ ಸಂಘಗಳಲ್ಲಿ ಅಕ್ರಮ; ಕಳೆದ 5 ವರ್ಷಗಳಲ್ಲಿ 141.78 ಕೋಟಿ ರು. ದುರುಪಯೋಗ ಪತ್ತೆ

 

ಸಂಘದ ಅವ್ಯವಹಾರಕ್ಕೆ ಕಾರಣರಾಗಿರುವವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಅವರು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ನಿರ್ದೇಶಕರಿಗೆ 2022ರ ಜುಲೈ 20ರಂದು ಪತ್ರ ಬರೆದಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts