ಬೆಂಗಳೂರು; ದೇಶದ 20 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸರಬರಾಜು ನಿಗಮಗಳಲ್ಲಿ ಐಎಎಸ್ ವೃಂದದ ಅಧಿಕಾರಿಗಳೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದರೇ ಇದೇ ಮೊದಲ ಬಾರಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮಕ್ಕೆ ಐಎಎಸ್‌ಯೇತರ ವೃಂದದ ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯನ್ನು ಹಿಂದಿನ ಬಿಜೆಪಿ ಸರ್ಕಾರವು ನಿಗಮವನ್ನಾಗಿ ರಚಿಸಿತ್ತು. ನಿಗಮದ ಮೂಲಕ ವೈದ್ಯಕೀಯ ಸರಬರಾಜು ಖರೀದಿ, ಪೂರೈಕೆ ಸರಪಳಿ ಕಾರ್ಯಾಚರಣೆಯೂ ಸೇರಿದಂತೆ ಉತ್ತಮ ಆಡಳಿತ ನೀಡಲು ನಿಗಮಕ್ಕೆ ಐಎಎಸ್ ವೃಂದದ ಅಧಿಕಾರಿಯನ್ನೇ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಸರ್ಕಾರಿ ಆದೇಶವನ್ನೂ ಹೊರಡಿಸಿತ್ತು.
ಆದರೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು ಟಿ ಖಾದರ್ ಅವರು ನೇರವಾಗಿ ಈ ಆದೇಶವನ್ನೇ ಉಲ್ಲಂಘಿಸಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದ್ದಾರೆ. ಇದು ನಿಗಮದ ಸಾಂಸ್ಥಿಕ ರಚನೆಗೆ ವಿರುದ್ಧವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸರ್ಕಾರ ಮಾಡಿರುವ ಈ ನೇಮಕಾತಿಯಿಂದ ಆಡಳಿತಾತ್ಮಕ ವಲಯದಲ್ಲಿ ವ್ಯತಿರಿಕ್ತ ಪರಿಣಾಮಗಳಿಗೂ ದಾರಿ ಮಾಡಿಕೊಡಲಿದೆ ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೇ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರನ್ನು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಿಸಿ ಹೊರಡಿಸಿದ್ದ ಅಧಿಸೂಚನೆಯಲ್ಲಿಯೇ ಸ್ಪಷ್ಟವಾಗಿ ಹೇಳಿದೆ. ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ಐಎಎಸ್ ವೇತನ ಶ್ರೇಣಿಯ ನಿಯಮ 12, 2016ರ ನಿಯಮ ಮತ್ತು ಹಿರಿಯ ಐಎಎಸ್ ಅಧಿಕಾರಿ ವೇತನ ಶ್ರೇಣಿಯ ಷೆಡ್ಯೂಲರ್ II ಬಿ ನಿಯಮಗಳ ಪ್ರಕಾರ ಮತ್ತು ಕರ್ನಾಟಕ ಮುನ್ಸಿಪಲ್ ಆಡಳಿತದ ನಿರ್ದೇಶಕರ ಹುದ್ದೆಗೆ ಸಮಾನಾಂತರವಾಗಿದೆ ಎಂದು ಸರ್ಕಾರವೇ ಅಧಿಸೂಚನೆಯಲ್ಲಿಯೇ ಅತ್ಯಂತ ಸ್ಪಷ್ಟವಾಗಿ ಹೇಳಿದೆ.

ಹೀಗಿದ್ದರೂ ಸಹ ಈ ಅಧಿಸೂಚನೆಯನ್ನೇ ಬದಿಗೊತ್ತಿರುವ ಸಚಿವ ಯು ಟಿ ಖಾದರ್ ಅವರು ಆರ್ಥಿಕ, ಸಾಂಖ್ಯಿಕ ಇಲಾಖೆಯ ಜಂಟಿ ನಿರ್ದೇಶಕ ಶ್ರೇಣಿಯ ಎ ಆರ್ ರವಿ ಅವರನ್ನು ಐಎಎಸ್ ವೃಂದದ ಶ್ರೇಣಿಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾಯಿಸಿ ಆದೇಶಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯನ್ನು ನಿಗಮವನ್ನಾಗಿ ಮಾರ್ಪಡಿಸಿ 2020ರಲ್ಲಿ ಆದೇಶ ಹೊರಡಿಸಿದ್ದ ಸರ್ಕಾರವು ಈ ನಿಗಮದ ಮಂಡಳಿಯಲ್ಲಿ ಯಾವ್ಯಾವ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಸ್ಪಷ್ಟವಾಗಿ ಹೇಳಿತ್ತು. ಇದರ ಪ್ರಕಾರ ಈ ಮಂಡಳಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ (ಐಎಎಸ್) ಅಧ್ಯಕ್ಷರಾಗಿರುತ್ತಾರೆ. ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಐಎಎಸ್ ವೃಂದದ ಅಧಿಕಾರಿಯನ್ನು ನಿಯೋಜನೆ ಮೇರೆಗೆ ನೇಮಿಸಬೇಕು. ಇದಲ್ಲದೇ ವಿವಿಧ ವಿಭಾಗಗಳ ನಿರ್ದೇಶಕರ ಹುದ್ದೆಯನ್ನು ಇಲಾಖೆಯಲ್ಲಿನ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸೂಚಿಸಿತ್ತು.

ಎ ಆರ್ ರವಿ ನೇಮಕದಿಂದ ಉದ್ಭವಿಸಿರುವ ಪ್ರಶ್ನೆಗಳೇನು?
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎ ಆರ್ ರವಿ ಅವರನ್ನು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಆಡಳಿತ ವರ್ಗದಿಂದಲೇ ಹಲವು ಪ್ರಶ್ನೆಗಳು ಕೇಳಿ ಬಂದಿವೆ.
1 . ಎ ಆರ್ ರವಿ ಅವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡುವ ಮೊದಲು ಸರ್ಕಾರದ ಆದೇಶವನ್ನು ಸರ್ಕಾರವು ತಿದ್ದುಪಡಿ ಮಾಡಿದೆಯೇ, ಬದಲಾವಣೆ ಮಾಡಿದೆಯೇ ಅಥವಾ ಈ ಹಿಂದಿನ ಆದೇಶವನ್ನು ರದ್ದುಗೊಳಿಸಿದೆಯೇ?
2. 2020ರ ಆಗಸ್ಟ್ 25ರಂದು ಹೊರಡಿಸಿದ್ದ ಆದೇಶದಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವನ್ನಾಗಿ ಪರಿವರ್ತಿಸಿ ಅದನ್ನು ಸಾಂಸ್ಥಿಕವಾಗಿ ರಚಿಸಿತ್ತು. ಈಗ ಈ ಸಾಂಸ್ಥಿಕ ರಚನೆಗೆ ವಿರುದ್ಧವಾಗಿ ಐಎಎಸ್ ಅಧಿಕಾರಿಯಲ್ಲದ ವ್ಯಕ್ತಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೆಮಕ ಮಾಡಲು ಕಾನೂನುಬದ್ಧ, ಆಡಳಿತಾತ್ಮಕ ಮತ್ತು ನೀತಿ ಆಧಾರಿತ ಕಾರಣಗಳೇನು?
3. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕಾತಿ ಮಾಡುವ ಕುರಿತು ಸರ್ಕಾರವು ಹೊರಡಿಸಿದ ಆದೇಶದ ಹೊರತಾಗಿ ಯಾವುದೇ ಅರ್ಹತಾ ಮಾನದಂಡಗಳು, ಸೇವಾ ವರ್ಗ ಸಂಬಂಧಿತ ನಿಯಮಗಳು, ಸೇವಾ ನಿಯಮಗಳು ಅಥವಾ ನೇಮಕಾತಿ ನಿಯಮವನ್ನು ನಿಗದಿಪಡಿಸಿದೆಯೇ?
4. ಈ ನಿಗಮಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ಆಡಳಿತಾತ್ಮಕ ಪದ್ಧತಿಯಿಂದ ಭಿನ್ನವಾಗಿ ಈ ನೇಮಕಾತಿ ಮಾಡಲು ವಿಶೇಷ ಕಾರಣಗಳೇನಾದರೂ ಇವೆಯೇ?
5. ಆಡಳಿತಾತ್ಮಕ ಮತ್ತು ನೀತಿ ಕಾರಣಗಳೇನು?
6. ಈ ಹುದ್ದೆಗೆ ಯಾವುದೇ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನಷ್ಟೇ ಪರಿಗಣಿಸಲಾಗಿತ್ತೇ ಅಥವಾ ಇಲ್ಲವೇ?
7. ಎ ಆರ್ ರವಿ ಅವರನ್ನು ಆಯ್ಕೆ ಮಾಡಲು ಇರುವ ಕಾರಣ ಮತ್ತು ಮಾನದಂಡಗಳೇನು?
8. ಪ್ರತೀ ವರ್ಷ ಸಾವಿರಾರು ಕೋಟಿ ರುಪಾಯಿ ಮೊತ್ತದಲ್ಲಿ ಔಷಧಗಳು, ವೈದ್ಯಕೀಯ ಉಪಕರಣಗಳು, ಇತರೆ ವೈದ್ಯಕೀಯ ಸಾಮಗ್ರಿಗಳ ಖರೀದಿ, ಗುಣಮಟ್ಟ ನಿಯಂತ್ರಣ, ಗೋದಾಮು ನಿರ್ವಹಣೆ, ವಿತರಣೆ ಜವಾಬ್ದಾರಿ ಹೊಂದಿರುವ ಸಂಸ್ಥೆಯ ಮುಖ್ಯಸ್ಥರಾಗಿ ಐಎಎಸ್ ಅಧಿಕಾರಿಯಲ್ಲದ ವ್ಯಕ್ತಿಯನ್ನು ನೇಮಕ ಮಾಡುವ ಮುನ್ನ ಆಡಳಿತಾತ್ಮಕ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಿತ್ತೇ?
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೋಗಿಗಳಿಗೆ ಸಾಕಷ್ಟು ಉಚಿತ ಪೂರೈಕೆ ಮತ್ತು ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 2022ರಲ್ಲಿ ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯನ್ನು ರಚಿಸಿತ್ತು. ಅಗತ್ಯ ಔಷಧ, ರಾಸಾಯನಿಕ ಮತ್ತು ವೈದ್ಯಕೀಯ ಉಪಕರಣಗಳ ಸಂಗ್ರಹಣೆ ಮತ್ತು ವಿತರಣೆಯನ್ನು ಕೇಂದ್ರೀಕೃತಗೊಳಿಸಿತ್ತು. ಇದರಿಂದ ಸಂಗ್ರಹಣೆ ಮತ್ತು ಸರಬರಾಜಿನಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೂ ಹಲವು ಸಮಸ್ಯೆಗಳು ಉಳಿದಿದ್ದವು. ಹೀಗಾಗಿ ನಿಗಮದ ಕಾರ್ಯಾಚರಣೆ ಸಮಸ್ಯೆಗಳನ್ನು ಪರಿಹರಿಸಲು ಖರೀದಿ ಪ್ರಕ್ರಿಯೆ ಮತ್ತು ಪೂರೈಕೆ ನಿರ್ವಹಣೆಯನ್ನು ಸಾಂಸ್ಥಿಕ ರೀತಿಯಲ್ಲಿ ವೃತ್ತಿಪರಗೊಳಿಸುವ ಉದ್ದೇಶದಿಂದ ಈ ಸೊಸೈಟಿಯನ್ನು ನಿಗಮವನ್ನಾಗಿ ಪರಿವರ್ತಿಸಿತ್ತು.

ಅಲ್ಲದೇ ಕೆಎಸ್‌ಡಿಎಲ್‌ಡಬ್ಲ್ಯುಎಸ್‌ನ ಸಾಂಸ್ಥೀಕರಣದ ವಿಶಾಲ ಉದ್ದೇಶಗಳು ಎಲ್ಲಾ ಹಂತಗಳಲ್ಲಿ ಸರ್ಕಾರದ ಆರೋಗ್ಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವ ಉದ್ದೇಶವೂ ಇದರಲ್ಲಿತ್ತು. ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಜನರಲ್ ಆಸ್ಪತ್ರೆಗಳು, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳು, ಇತರೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಸಾಕಷ್ಟು ಔಷಧಗಳನ್ನು ಸಂಗ್ರಹಿಸುವುದು, ಉಪಕರಣಗಳು ಮತ್ತು ಅಗತ್ಯ ಔಷಧಗಳು, ರಾಜ್ಯದ ಆರೋಗ್ಯ ರಕ್ಷಣಾ ಜಾಲದ ಆರೋಗ್ಯ ಸೇವೆಗಳ ಸಮರ್ಪಕತೆ ಮತ್ತು ಗುಣಮಟ್ಟ ಹೆಚ್ಚಿಸುವ ಕಾಳಜಿಯೂ ಇತ್ತು.

ವಿಶೇಷವಾಗಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ರಕ್ಷಣ ಮಟ್ಟವನ್ನು ಹೆಚ್ಚಿಸಲು ಸೊಸೈಟಿಯನ್ನು ಸಾಂಸ್ಥೀಕರಣಗೊಳಿಸಲು ಉದ್ದೇಶಿಸಿತ್ತು. ಅಗತ್ಯ ಔಷಧಗಳು, ಸಲಕರಣೆಗಳು, ತರ್ಕಬದ್ಧ ಸಂಗ್ರಹಣೆ, ಪೂರೈಕೆ ಮತ್ತು ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಸೊಸೈಟಿಯನ್ನು ನಿಗಮವನ್ನಾಗಿ ಮಾರ್ಪಡಿಸಿತ್ತು.

ತಮಿಳುನಾಡು, ಗುಜರಾತ್, ರಾಜಸ್ಥಾನ, ಕೇರಳ, ಒಡಿಶಾ ರಾಜ್ಯಗಳು ಸಾಂಸ್ಥಿಕ ವೈದ್ಯಕೀಯ ಸೇವೆಗಳನ್ನು ಹೊಂದಿವೆ. ಮತ್ತು ಔಷಧ ರಾಸಾಯನಿಕಗಳು ಮತ್ತು ಸಲಕರಣೆಗಳ ಸಂಗ್ರಹಣೆಯನ್ನು ವೃತ್ತಿಪರಗೊಳಿಸಿವೆ. ಇದೇ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ವೈದ್ಯಕೀಯ ಸರಬರಾಜು ನಿಗಮವನ್ನು ಸಾಂಸ್ಥೀಕರಣಗೊಳಿಸಿ ರಚಿಸಿತ್ತು. ಇಷ್ಟೆಲ್ಲಾ ಉದ್ದೇಶಗಳನ್ನು ಇಟ್ಟುಕೊಂಡು ರಚನೆ ಮಾಡಿರುವ ನಿಗಮದ ಸಾಂಸ್ಥಿಕ ರಚನೆಗಳಿಗೆ ವಿರುದ್ಧವಾಗಿ ಐಎಎಸ್‌ಯೇತರ ವೃಂದದ ಅಧಿಕಾರಿಯನ್ನು ನೇಮಿಸಿರುವುದು ಅಧಿಕಾರಿವರ್ಗದಲ್ಲಿಯೇ ಚರ್ಚೆಗೆ ಗ್ರಾಸವಾಗಿದೆ.

ಕೇರಳ, ಗುಜರಾತ್, ರಾಜಸ್ಥಾನ, ತಮಿಳುನಾಡು, ಅಸ್ಸಾಂ, ಬಿಹಾರ, ಜಾರ್ಖಂಡ್, ಹರ್ಯಾಣ, ಛತ್ತೀಸ್ ಗಡ್, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಮಿಜೋರಾಂ, ಪಂಜಾಬ್, ಒಡಿಶಾ ರಾಜ್ಯದಲ್ಲಿ ವೈದ್ಯಕೀಯ ಸರಬರಾಜು ನಿಗಮಗಳು ಕಾರ್ಯಾಚರಿಸುತ್ತಿವೆ. ಈ ಎಲ್ಲಾ ನಿಗಮಗಳಲ್ಲಿನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ ಐಎಎಸ್ ವೃಂದದ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ.
ಈ ಆದೇಶ ಹೊರಬೀಳುವ ಮುನ್ನವೇ ದಿ ಫೈಲ್ ಸಚಿವ ಯು ಟಿ ಖಾದರ್ ಅವರ ಟಿಪ್ಪಣಿ ಆಧರಿಸಿ ವರದಿ ಪ್ರಕಟಿಸಿತ್ತು. ಈ ಆದೇಶ ಹೊರಬೀಳುವ ಮುನ್ನವೇ ದಿ ಫೈಲ್ ಸಚಿವ ಯು ಟಿ ಖಾದರ್ ಅವರ ಟಿಪ್ಪಣಿ ಆಧರಿಸಿ ವರದಿ ಪ್ರಕಟಿಸಿತ್ತು.
ಈ ಸಂಬಂಧ ಖುದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದರು.
ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಲ್ಲಿ ಇದುವರೆಗೂ 9 ಮಂದಿ ಐಎಎಸ್, ಇಬ್ಬರು ಕೆಎಎಸ್ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೀಗ ಏಕಾಏಕೀ ಈ ಹುದ್ದೆಗೆ ಐಎಎಸ್ ಮತ್ತು ಕೆಎಎಸ್‌ಯೇತರ ಶ್ರೇಣಿಯ ಜಂಟಿ ನಿರ್ದೇಶಕರ ಶ್ರೇಣಿ ಅಧಿಕಾರಿಯನ್ನು ನೇಮಿಸಲು ಮುಂದಾಗಿರುವುದು ನಿಗಮದ ಅಧಿಕಾರಿವರ್ಗದ ಅಸಮಾಧಾನಕ್ಕೆ ಕಾರಣವಾಗಿದೆ.
ಟಿಪ್ಪಣಿಯಲ್ಲೇನಿತ್ತು?
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ನಗರಾಭಿವೃದ್ದಿ ಇಲಾಖೆಯಲ್ಲಿ ಎ ಆರ್ ರವಿ ಅವರು ಜಂಟಿ ನಿರ್ದೇಶಕರಾಗಿ ಸುದೀರ್ಘ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅನುಭವವನ್ನೂ ಹೊಂದಿದ್ದಾರೆ. ಇವರು ತಾಲೂಕು ಮತ್ತು ಜಿಲ್ಲಾ ಮಟ್ಟದ ಹುದ್ದೆಯೂ ಸೇರಿದಂತೆ ನಿರ್ದೇಶನಾಲಯಗಳು ಹಾಗೂ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಸರ್ಕಾರಿ ಸಂಸ್ಥೆಗಳ ಆಡಳಿತ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ಸಚಿವ ಯು ಟಿ ಖಾದರ್ ಅವರು ವಿವರಿಸಿರುವುದು ಗೊತ್ತಾಗಿದೆ.

ಅಲ್ಲದೇ ಎ ಆರ್ ರವಿ ಅವರು ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿದ್ದಾರೆ. ಇವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೆಶಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲು ಇವರ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಶಕ್ಕೆ ನೀಡಬೇಕು ಎಂದು ಸಚಿವ ಯು ಟಿ ಖಾದರ್ ಅವರು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಹೊರಡಿಸಿರುವ ಟಿಪ್ಪಣಿಯಲ್ಲಿ ಕೋರಿರುವುದು ತಿಳಿದು ಬಂದಿದೆ.

2020ರಲ್ಲಿ ಐಎಎಸ್ ಅಧಿಕಾರಿ ಮಂಜುಶ್ರೀ, 2021ರಲ್ಲಿ ಡಾ ತ್ರಿಲೋಕ್ ಚಂದ್ರ, ಕೆ ಎಸ್ ಲತಾಕುಮಾರಿ, 2022ರಲ್ಲಿ ಎನ್ ಎಂ ನಾಗರಾಜ, ರಾಜೇಂದ್ರ ಚೋಳನ್, ಎಸ್ ಜೆ ಸೋಮಶೇಖರ್, 2023ರಲ್ಲಿ ರಂಗಪ್ಪ ಎಸ್, 2023ರಲ್ಲಿ ಕೆಎಎಸ್ ಅಧಿಕಾರಿ ಚಿದಾನಂದ ಎಸ್ ವಟಾರೆ, ಎಸ್ ಎಂ ಶ್ರೀನಿವಾಸ, 2025ರಲ್ಲಿ ಐಎಎಸ್ ಕನಗವಲ್ಲಿ ಎಂ., 2026ರಲ್ಲಿ ರಾಹುಲ್ ರತ್ನಂ ಪಾಂಡೆ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.




