ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ ಸರ್ಕಾರವು ಇದೀಗ ಈ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ಐಎಎಸ್ಯೇತರ ಶ್ರೇಣಿಯ ಅಧಿಕಾರಿಯಿಂದ ಭರ್ತಿ ಮಾಡಲು ಮುಂದಾಗಿದೆ. ಈ ನಿಗಮವು ಸ್ಥಾಪನೆಯಾದ ದಿನದಿಂದಲೂ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಶ್ರೇಣಿಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇದೀಗ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಆರ್ಥಿಕ ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕರ ಶ್ರೇಣಿ ಅಧಿಕಾರಿಯನ್ನು ನಿಯೋಜಿಸಲು ಮುಂದಾಗಿದೆ.
ಈ ಸಂಬಂಧ ಖುದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದಾರೆ. ಸಚಿವ ಯು ಟಿ ಖಾದರ್ ಅವರು ಹೊರಡಿಸಿರುವ ಈ ಟಿಪ್ಪಣಿಯು ಅಧಿಕಾರಿ ವರ್ಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಚಿವ ಯು ಟಿ ಖಾದರ್ ಅವರು 2026ರ ಜುಲೈ 7ರಂದು ಹೊರಡಿಸಿರುವ ಟಿಪ್ಪಣಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಲ್ಲಿ ಇದುವರೆಗೂ 9 ಮಂದಿ ಐಎಎಸ್, ಇಬ್ಬರು ಕೆಎಎಸ್ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೀಗ ಏಕಾಏಕೀ ಈ ಹುದ್ದೆಗೆ ಐಎಎಸ್ ಮತ್ತು ಕೆಎಎಸ್ಯೇತರ ಶ್ರೇಣಿಯ ಜಂಟಿ ನಿರ್ದೇಶಕರ ಶ್ರೇಣಿ ಅಧಿಕಾರಿಯನ್ನು ನೇಮಿಸಲು ಮುಂದಾಗಿರುವುದು ನಿಗಮದ ಅಧಿಕಾರಿವರ್ಗದ ಅಸಮಾಧಾನಕ್ಕೆ ಕಾರಣವಾಗಿದೆ.
ಟಿಪ್ಪಣಿಯಲ್ಲೇನಿದೆ?
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ನಗರಾಭಿವೃದ್ದಿ ಇಲಾಖೆಯಲ್ಲಿ ಎ ಆರ್ ರವಿ ಅವರು ಜಂಟಿ ನಿರ್ದೇಶಕರಾಗಿ ಸುದೀರ್ಘ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅನುಭವವನ್ನೂ ಹೊಂದಿದ್ದಾರೆ. ಇವರು ತಾಲೂಕು ಮತ್ತು ಜಿಲ್ಲಾ ಮಟ್ಟದ ಹುದ್ದೆಯೂ ಸೇರಿದಂತೆ ನಿರ್ದೇಶನಾಲಯಗಳು ಹಾಗೂ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಸರ್ಕಾರಿ ಸಂಸ್ಥೆಗಳ ಆಡಳಿತ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ಸಚಿವ ಯು ಟಿ ಖಾದರ್ ಅವರು ವಿವರಿಸಿರುವುದು ಗೊತ್ತಾಗಿದೆ.

ಅಲ್ಲದೇ ಎ ಆರ್ ರವಿ ಅವರು ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿದ್ದಾರೆ. ಇವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೆಶಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲು ಇವರ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಶಕ್ಕೆ ನೀಡಬೇಕು ಎಂದು ಸಚಿವ ಯು ಟಿ ಖಾದರ್ ಅವರು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಹೊರಡಿಸಿರುವ ಟಿಪ್ಪಣಿಯಲ್ಲಿ ಕೋರಿರುವುದು ತಿಳಿದು ಬಂದಿದೆ.
ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮವಾಗಿದೆ. ಇದನ್ನು ಕಂಪನಿಗಳ ಕಾಯ್ದೆ 2013ರಡಿಯಲ್ಲಿ ಸ್ಥಾಪಿಸಿದೆ. ಈ ಮೊದಲು ಔಷಧಿಗಳ ಸಮರ್ಪಕ ಪೂರೈಕೆ ಹಾಗೂ ರೋಗಿಗಳಿಗೆ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಔಷಧಿ ಲಾಜಿಸ್ಟಿಕ್ಸ್ ಮತ್ತು ಗೋದಾಮು ಸೊಸೈಟಿ’ (Karnataka State Drugs Logistics and Warehousing Society – KSDLWS)ಯನ್ನು 2002ರಲ್ಲಿ ಸ್ಥಾಪಿಸಿತ್ತು.
ಔಷಧಿಗಳು, ರಾಸಾಯನಿಕಗಳು ಮತ್ತು ವೈದ್ಯಕೀಯ ಉಪಕರಣಗಳ ಕೇಂದ್ರೀಕೃತ ಖರೀದಿ ಹಾಗೂ ವಿತರಣಾ ವ್ಯವಸ್ಥೆ ಜಾರಿಗೊಳಿಸಿ, ರಾಜ್ಯದ ಎಲ್ಲಾ ಹಂತದ ಆರೋಗ್ಯ ಸಂಸ್ಥೆಗಳಿಗೆ ಸಮರ್ಪಕ ಪೂರೈಕೆ ಮಾಡುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು (CHC), ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಹಾಗೂ ಇತರ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಅಗತ್ಯ ಔಷಧಿಗಳನ್ನು ತಲುಪಿಸುವುದು ಇದರ ಗುರಿಯಾಗಿತ್ತು.
ಸೊಸೈಟಿಯಿಂದ ನಿಗಮವಾಗಿ ಪರಿವರ್ತನೆ
2019–20ನೇ ಸಾಲಿನ ರಾಜ್ಯ ಬಜೆಟ್ ಭಾಷಣದಲ್ಲಿ ಕರ್ನಾಟಕ ರಾಜ್ಯ ಔಷಧಿ ಲಾಜಿಸ್ಟಿಕ್ಸ್ ಮತ್ತು ಗೋದಾಮು ಸೊಸೈಟಿಯನ್ನು ಕಂಪನಿಗಳ ಕಾಯ್ದೆ, 2013ರ ಅಡಿಯಲ್ಲಿ ‘ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ’ (Karnataka State Medical Supplies Corporation Limited – KSMSCL) ಆಗಿ ಪರಿವರ್ತಿಸುವ ಪ್ರಸ್ತಾವಿಸಿತ್ತು. ಅದರಂತೆ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಡಿ ಕಂಪನಿಗಳ ಕಾಯ್ದೆ, 2013ರ ಅಡಿಯಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ನಿಯಮಿತವನ್ನಾಗಿ (ಸರ್ಕಾರದ ಆದೇಶ ಸಂಖ್ಯೆ: HFW 76 FPR 2019, ದಿನಾಂಕ 21-10-2020) ನೋಂದಾಯಿಸಿತ್ತು.
ಈ ನಿಗಮವೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಸಾರ್ವಜನಿಕ ಆಸ್ಪತ್ರೆಗಳಿಗೆ ಅಗತ್ಯವಿರುವ ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕನ್ಸೂಮಬಲ್ಸ್ ಗಳನ್ನು ಪಾರದರ್ಶಕವಾಗಿ ಪೂರೈಕೆ ಮಾಡುವುದು ಈ ನಿಗಮದ ಮುಖ್ಯ ಜವಾಬ್ದಾರಿಯಾಗಿದೆ. ಅಲ್ಲದೇ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಆಧಾರದ ಮೇಲೆಯೇ ಈ ನಿಗಮವು ಕಾರ್ಯನಿರ್ವಹಿಸುತ್ತದೆ.
ಪಾರದರ್ಶಕ ಮತ್ತು ಸಮಾನತೆಯ ಆಧಾರದ ಮೇಲೆ ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆಗಳು ಎಲ್ಲರಿಗೂ ತಲುಪುವಂತೆ ಮಾಡುವುದು. ಇದಕ್ಕಾಗಿ ಅಗತ್ಯ ಔಷಧಿಗಳು, ವೈದ್ಯಕೀಯ ಉಪಕರಣಗಳು ಹಾಗೂ ಪ್ರಯೋಗಾಲಯ ಬಳಕೆಯ ಸಾಮಗ್ರಿಗಳ ಖರೀದಿ, ಸುರಕ್ಷಿತ ಸಂಗ್ರಹಣೆ ಮತ್ತು ಪರಿಣಾಮಕಾರಿ ಸರಬರಾಜು ಸರಪಳಿ ನಿರ್ವಹಣೆಯ ಮೂಲಕ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವುದು ಈ ನಿಗಮದ ಉದ್ದೇಶವಾಗಿದೆ.
2023ರಲ್ಲಿ ನಿಗಮದ ಪುನರ್ ರಚನೆ
ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವನ್ನು ತಮಿಳುನಾಡು ವೈದ್ಯಕೀಯ ಸರಬರಾಜು ನಿಗಮದ ಮಾದರಿಯಲ್ಲಿ 2023ರಲ್ಲಿಯ ಪುನರ್ ರಚಿಸಿದೆ. ಹೆಚ್ಚುವರಿಯಾಗಿ ಹುದ್ದೆಗಳನ್ನು ಸೃಜಿಸಿತ್ತು. ಕೆಎಎಸ್ ಅಧಿಕಾರಿ ಅಥವಾ ವಿಶೇಷ ಜಿಲ್ಲಾಧಿಕಾರಿ ಶ್ರೇಣಿಯ 3 ಹುದ್ದೆಗಳನ್ನು ಸೃಜಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನಿಯೋಜನೆ ಮೇರೆಗೆ ಔಷಧ ವ್ಯವಸ್ಥಾಪಕರ ಹುದ್ದೆ, ಔಷಧ ನಿಯಂತ್ರಣ ಇಲಾಖೆಯ ಮೂಲಕ ಸಹಾಯಕ ವ್ಯವಸ್ಥಾಪಕರನ್ನು ನಿಯೋಜನೆ ಮೇರೆಗೆ ಭರ್ತಿ ಮಾಡಿದೆ. ಒಟ್ಟು 6 ಹುದ್ದೆಗಳನ್ನು ಭರ್ತಿಮಾಡಿದೆ. ಈ ಎಲ್ಲಾ ಹುದ್ದೆಗಳನ್ನು ಹೊಸದಾಗಿ ಸೃಜಿಸಿತ್ತು.


2020ರಲ್ಲಿ ಐಎಎಸ್ ಅಧಿಕಾರಿ ಮಂಜುಶ್ರೀ, 2021ರಲ್ಲಿ ಡಾ ತ್ರಿಲೋಕ್ ಚಂದ್ರ, ಕೆ ಎಸ್ ಲತಾಕುಮಾರಿ, 2022ರಲ್ಲಿ ಎನ್ ಎಂ ನಾಗರಾಜ, ರಾಜೇಂದ್ರ ಚೋಳನ್, ಎಸ್ ಜೆ ಸೋಮಶೇಖರ್, 2023ರಲ್ಲಿ ರಂಗಪ್ಪ ಎಸ್, 2023ರಲ್ಲಿ ಕೆಎಎಸ್ ಅಧಿಕಾರಿ ಚಿದಾನಂದ ಎಸ್ ವಟಾರೆ, ಎಸ್ ಎಂ ಶ್ರೀನಿವಾಸ, 2025ರಲ್ಲಿ ಐಎಎಸ್ ಕನಗವಲ್ಲಿ ಎಂ., 2026ರಲ್ಲಿ ರಾಹುಲ್ ರತ್ನಂ ಪಾಂಡೆ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2026ರ ಫೆಬ್ರುವರಿಯಲ್ಲಿ ಈ ನಿಗಮಕ್ಕೆ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿತ್ತು.

ರಾಹುಲ್ ರತ್ನಂ ಪಾಂಡೆ ಅವರು ಕೆಎಸ್ಎಂಎಸ್ಸಿಎಲ್ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೇವಲ 5 ತಿಂಗಳ ಹಿಂದೆಯಷ್ಟೇ ನೇಮಕವಾಗಿದ್ದಾರೆ. ಆದರೀಗ ಸಚಿವ ಯು ಟಿ ಖಾದರ್ ಅವರು ಅವರನ್ನು ಬದಲಿಸಲು ಹೊರಟಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.




