ಗುರು ಸಾರ್ವಭೌಮ ಸೊಸೈಟಿಯಲ್ಲಿ 163 ಕೋಟಿಗೂ ಹೆಚ್ಚು ಬೇನಾಮಿ ಸಾಲ; ವಿಶೇಷಾಧಿಕಾರಿ ವರದಿ

ಬೆಂಗಳೂರು; ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ-ಅಪರೇಟಿವ್‌ ಲಿಮಿಟೆಡ್‌ನಲ್ಲಿಯೂ 163 ಕೋಟಿಗೂ ಹೆಚ್ಚು ಬೇನಾಮಿ ಸಾಲ ಸೃಷ್ಟಿಯಾಗಿರುವ ಪ್ರಕರಣಗಳೂ ಸೇರಿದಂತೆ ಹಲವು ಅಕ್ರಮಗಳು ಅನಾವರಣಗೊಂಡಿವೆ. ಅಲ್ಲದೇ ಬೇನಾಮಿ ಸಾಲಗಳ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ಮಾಹಿತಿ ನೀಡದೇ ಮುಚ್ಚಿಟ್ಟಿದ್ದ ಆಡಳಿತ ಮಂಡಳಿ ಮುಖವಾಡವನ್ನೂ ಕಳಚಿರುವ ವಿಶೇಷಾಧಿಕಾರಿ, ಅಕ್ರಮಗಳ ಸರಮಾಲೆಯನ್ನೇ ತೆರೆದಿಟ್ಟಿದ್ದಾರೆ.

ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ-ಅಪರೇಟಿವ್‌ ಲಿಮಿಟೆಡ್‌ ಮತ್ತು ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದಲ್ಲಿ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಹೈಕೋರ್ಟ್‌, ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ನಿರ್ದೇಶನ ನೀಡಿದ್ದರ ಬೆನ್ನಲ್ಲೇ ಕ್ರೆಡಿಟ್‌ ಕೋ ಆಪರೇಟೀವ್‌ ಲಿಮಿಟೆಡ್‌ನ ಅಕ್ರಮಗಳ ಸ್ವರ್ಗ ಸೀಮೆಯೇ ಇದೀಗ ಅನಾವರಣಗೊಂಡಿದೆ.

ಬೆಂಗಳೂರಿನ ಶಂಕರಪುಂನಲ್ಲಿರುವ ಶ್ರೀ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲಿ 2015-16ರಿಂದ 2018-19ನೇ ಸಾಲಿನವರೆಗೆ ಪರಿಶೋಧಿತ ಲೆಕ್ಕಪತ್ರಗಳನ್ನು ಮರು ಲೆಕ್ಕಪರಿಶೋಧನೆ ನಡೆಸುವ ಸಂಬಂಧ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕರು 2020ರ ಸೆಪ್ಟಂಬರ್‌ 11ರಂದು ಬರೆದಿರುವ 4 ಪುಟಗಳ ಪತ್ರವು ಹಲವು ಅಕ್ರಮಗಳನ್ನು ಹೊರಗೆಡವಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸೊಸೈಟಿ ಮತ್ತು ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಪೊಲೀಸ್‌ ತನಿಖೆ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997ರ ಪ್ರಕರಣ 35ರಡಿ ವಿಚಾರ್ಣೆ ನಡೆಯುತ್ತಿದೆ. ಅಲ್ಲದೆ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಯುತ್ತಿರುವ ಕಾರಣ ಮರು ಲೆಕ್ಕಪರಿಶೋಧನೆ ಕುರಿತಂತೆ 2020ರ ಸೆ.24ರೊಳಗೆ ಅಗತ್ಯ ಮಾಹಿತಿ ನೀಡಬೇಕು ಎಂದು ಪತ್ರದಲ್ಲಿ ನಿರ್ದೇಶಕರು ಕೋರಿದ್ದಾರೆ.

ಸಂಘದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಶೇಷಾಧಿಕಾರಿಯ ಮನವಿ ಮೇರೆಗೆ ಮರು ಲೆಕ್ಕಪರಿಶೋಧನೆ ನಡೆಸಬೇಕು ಎಂದು ಪತ್ರ ಬರೆದಿರುವ ನಿರ್ದೇಶಕರು ಸಹಕಾರಿಯು ಸಮರ್ಪಕವಾಗಿ ಕಾರ್ಯನಿರ್ವಹಸದಿರುವುದು ಅವ್ಯವಹಾರ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವಿಶೇಷಾಧಿಕಾರಿಯು ಆರ್ಥಿಕ ಅವ್ಯವಹಾರಗಳ ಸರಮಾಲೆಯನ್ನೇ ಪತ್ರದಲ್ಲಿ ನಮೂದಿಸಿರುವುದು ಪತ್ರದಿಂದ ಗೊತ್ತಾಗಿದೆ.

163 ಕೋಟಿಗೂ ಹೆಚ್ಚು ಬೇನಾಮಿ ಸಾಲ

ಈ ಸಹಕಾರಿಯಲ್ಲಿ ಸದಸ್ಯರನ್ನು ಮಾಡಿಕೊಳ್ಳದೇ ಬೇನಾಮಿ ಹೆಸರುಗಳಲ್ಲಿ 163 ಕೋಟಿಗೂ ಹೆಚ್ಚು ಬೇನಾಮಿ ಸಾಲ ಸೃಷ್ಟಿಸಲಾಗಿದೆ. ಈ ಬೇನಾಮಿ ಸಾಲಗಳ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿಯೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ವ್ಯವಹಾರಗಳನ್ನು ಮರು ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಬೇಕು ಎಂದು ನಿರ್ದೇಶಕರು ಪತ್ರದಲ್ಲಿ ವಿವರಿಸಿದ್ದಾರೆ.

ನಕಲಿ ಠೇವಣಿಗಳ ಹಾವಳಿ

ಸಹಕಾರಿಗೆ ನಗದು ಜಮಾ ಆಗದೇ ನಕಲಿ ಠೇವಣಿಗಳನ್ನು ಸೃಷ್ಟಿಸಲಾಗಿದೆ ಎಂದು ನಿರ್ದೇಶಕರು ಮತ್ತು ವಿಶೇಷಾಧಿಕಾರಿ ಬರೆದಿರುವ ಪತ್ರ ಹೊರಗೆಡವಿದೆ. ಈ ಸಂಘದಲ್ಲಿ ಒಟ್ಟು 35 ಪ್ರಕರಣಗಳು ಕಂಡು ಬಂದಿವೆ. ಒಟ್ಟು 5.87 ಕೋಟಿ ಮೊತ್ತವನ್ನು ಹೊಂದಿರುವ ನಕಲಿ ಠೇವಣಿಗಳಿರುವುದು ಪತ್ರದಿಂದ ಗೊತ್ತಾಗಿದೆ.

ಸೊಸೈಟಿಯ ಸಿಬ್ಬಂದಿಯಿಂದಲೇ ನಕಲಿ ಸಾಲ ಸೃಷ್ಟಿ

2017ರಿಂದ 2020ರ ಮಾರ್ಚ್‌ 31ರವರೆಗೆ ಈ ಸೊಸೈಟಿಯಲ್ಲಿ ಒಟ್ಟು 94.57 ಲಕ್ಷ ರು.ಮೊತ್ತದ ನಕಲಿ ಸಾಲ ಸೃಷ್ಟಿಯಾಗಿದೆ. ಸೊಸೈಟಿ ಸಿಬ್ಬಂದಿ ಸಿ ವಿ ರಾಕೇಶ್‌ ಎಂಬುವರು ನಕಲಿ ಸಾಲ ಮತ್ತು ಠೇವಣಿಗಳನ್ನು ಸೃಷ್ಟಿಸಿ ಅವ್ಯವಹಾರ ಮಾಡಿದ್ದಾರೆ ಎಂದು ನಿರ್ದೇಶಕರು ಪತ್ರದಲ್ಲಿ ವಿವರಿಸಿದ್ದಾರೆ.

90 ಕೋಟಿ ಮೊತ್ತದ ಠೇವಣಿ

ಶ್ರೀ ಗುರು ಸಾರ್ವಭೌಮ ಸೌಹಾರ್ದ ಸಹಕಾರಿ ಸಂಸ್ಥೆಯು ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 90 ಕೋಟಿ ಮೊತ್ತದ ಠೇವಣಿ ಹೊಂದಿದೆ. ಈ ಠೇವಣಿಯನ್ನು ನಗದೀಕರಣಗೊಳಿಸಿ ಆ ಮೊತ್ತವನ್ನು ಬ್ಯಾಂಕ್‌ನಲ್ಲಿರುವ ಇತರೆ ವ್ಯಕ್ತಿ, ಸಂಸ್ಥೆಗಳ ಸಾಲ ಖಾತೆಗಳಿಗೆ ವರ್ಗಾಯಿಸಲು ಹಾಗೂ ಮೊತ್ತವನ್ನು ಮುಂದಿನ ದಿನಗಳಲ್ಲಿಯೂ ಕ್ಲೇಮ್‌ ಮಾಡದಿರಲು ಆಡಳಿತ ಮಂಡಳಿಯು 2019ರ ನವೆಂಬರ್‌ 7ರಂದು ನಡೆದಿದ್ದ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು ಎಂಬುದು ಪತ್ರದಿಂದ ತಿಳಿದು ಬಂದಿದೆ.

ತಮಿಳುನಾಡಿನಲ್ಲಿದೆ 22 ಎಕರೆ

ಸೊಸೈಟಿಯ ಹಿಂದಿನ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಎಂ ಎನ್‌ ಶ್ರೀಕಾಂತ್‌ ಅವರು ಸೊಸೈಟಿ ಹೆಸರಿನಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪೆನ್ನಗರಮ ತಾಲೂಕಿನ ಶಿಗರಾಲಹಳ್ಳಿಯಲ್ಲಿ 2016ರ ಡಿಸೆಂಬರ್‌ 30ರಂದು ಒಟ್ಟು 22 ಎಕರೆ 23 ಗುಂಟೆ ಜಮೀನು ಖರೀದಿಸಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ. ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ 5 ಚೆಕ್‌ಗಳ ಮೂಲಕ ಹಣವನ್ನು ಪಾವತಿಸಲಾಗಿದೆ. ಈ ವ್ಯವಹಾರವು ಸಂಶಯಾಸ್ಪದವಾಗಿದೆಯಲ್ಲದೆ ಮರು ಲೆಕ್ಕಪರಿಶೋಧನೆಯ ಅಗತ್ಯವಿದೆ ಎಂದು ನಿರ್ದೇಶಕರು ಅಭಿಪ್ರಾಯಿಸಿದ್ದಾರೆ.

ಅದೇ ರೀತಿ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ರಾಮಕೃಷ್ಣ ಎಂಬುವರು ಬಸವನಗುಡಿಯ ಸುಬ್ಬರಾಮಚೆಟ್ಟಿ ರಸ್ತೆಯಲ್ಲಿನ 884.25 ಚದರ ಅಡಿಯ ನಿವೇಶನ (ಸಂಖ್ಯೆ 57)ವನ್ನು 600 ಚಾಡಿ ಕಟ್ಟಡದ ಸಮೇತ 56,12,000 ರು.ಗೆ ಖರೀದಿಸಿದ್ದಾರೆ. ಈ ವ್ಯವಹಾರವೂ ಸಂಶಯಾಸ್ಪದವಾಗಿದೆಯಲ್ಲದೆ ಮರು ಲೆಕ್ಕಪರಿಶೋಧನೆಯ ಅಗತ್ಯವಿದೆ ಎಂದು ಹೇಳಿರುವುದು ಪತ್ರದಿಂದ ಗೊತ್ತಾಗಿದೆ.

ಬೇರೆ ಬೇರೆ ವ್ಯಕ್ತಿಗಳ ಖಾತೆಗೆ 1,81,75,73,258 ರು ವರ್ಗಾವಣೆ

ಶ್ರೀ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ಸಂಸ್ಥೆ ಸ್ಥಾಪನೆ ಆದಾಗಿನಿಂದಲೂ ಎರಡು ಚಾಲ್ತಿ ಖಾತೆಗಳನ್ನು ಹೊಂದಿತ್ತು. (ಸಂಖ್ಯೆ 100300001366 ಮತ್ತು 10200001217) ‘ಬ್ಯಾಂಕ್‌ ವ್ಯವಹಾರದ ದಾಖಲೆಗಳನ್ನು ಪರಿಶೀಲಿಸಿದಾಗ ಸಹಕಾರಿಯಿಂದ ಯಾವುದೇ ಚೆಕ್‌/ಡಿಡಿ/ಎನ್‌ಇಎಫ್‌ಟಿ/ಆರ್‌ಟಿಜಿಎಸ್‌ ದಾಖಲೆಗಳನ್ನು ಪಡೆಯದೇ ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ಹಣದ ವರ್ಗಾವಣೆಗಳು ನಡೆದಿರುವುದು ಕಂಡು ಬಂದಿದೆ,’ ಎಂದು ಪತ್ರದಲ್ಲಿ ಹೊರಗೆಡವಿದ್ದಾರೆ. ಒಟ್ಟು 1,81,75,73,258 ರು.ಗಳನ್ನು 44 ಬಾರಿ ವರ್ಗಾವಣೆ ಆಗಿವೆ. ಈ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ನಿರ್ದೇಶಕರು ಈ ವ್ಯವಹಾರವನ್ನು ಮರು ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.

‘ವಿಶೇಷಾಧಿಕಾರಿಗಳ ವರದಿಯಂತೆ ಸಹಕಾರಿ ಪ್ರಾರಂಭವಾದಾಗಿನಿಂದ ಯಾವುದೇ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಕುರಿತು ಪ್ರಸ್ತಾಪಿಸದೇ ಇರುವುದರಿಂದ ಸಂಶಯಕ್ಕೆ ಕಾರಣವಾಗಿದೆ. ಹಾಗೆಯೇ ಎಲ್ಲಾ ವರದಿಗಳು ನೈಜತೆಯಿಂದ ಕೂಡಿರದೇ ತಪ್ಪು/ಸುಳ್ಳು ಮಾಹಿತಿಗಳಿಂದ ಕೂಡಿರುವುದು ಕಂಡು ಬಂದಿರುತ್ತದೆ. ಹೀಗಾಗಿ ಈ ಎಲ್ಲಾ ವಿಷಯಗಳನ್ನು ಪರಿಶೀಲನೆ ಮಾಡಿ ಸಹಕಾರಿ ನೈಜ ಸ್ಥಿತಿ ಕಂಡು ಹಿಡಿಯುವ ದೃಷ್ಟಿಯಿಂದ 2015-16ರಿಂದ 2018-19ನೇ ಸಾಲಿನವರೆಗೆ ಮರು ಲೆಕ್ಕಪರಿಶೋಧನೆ ಕೈಗೊಳ್ಳಬೇಕು,’ ಎಂದು ಪತ್ರದಲ್ಲಿ ಕೋರಿದ್ದಾರೆ.

the fil favicon

SUPPORT THE FILE

Latest News

Related Posts