ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ಎನ್ ಆರ್ ರಮೇಶ್ ಅವರು ದಾಖಲಿಸಿರುವ ಅರ್ಜಿಯಲ್ಲಿ ಮಾಹಿತಿಯನ್ನು ಅಧಿಕೃತವಾಗಿ ಲೋಕಾಯುಕ್ತದಿಂದ ಪಡೆದು ಮುಂದಿನ ದಿನಾಂಕದಿಂದ ಸ್ಪಷ್ಟ ವರದಿಯನ್ನು ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಮಹಾಂತೇಶ್ವರ ಎಸ್ ಜಿದ್ದಿ ಅವರು ನ್ಯಾಯಾಲಯವನ್ನು ಕೋರಿರುವುದು ಇದೀಗ ಬಹಿರಂಗವಾಗಿದೆ.
ಈ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿದ್ದರೂ ಸಹ ಲೋಕಾಯುಕ್ತ ಸಂಸ್ಥೆಯು ಇನ್ನೂ ಸ್ಪಷ್ಟ ಮತ್ತು ಖಚಿತವಾದ ತೀರ್ಮಾನಕ್ಕೆ ಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶದ ಅನ್ವಯ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯವು ಲೋಕಾಯುಕ್ತಕ್ಕೆ ನೋಟೀಸ್ ಜಾರಿಗೊಳಿಸಿತ್ತು. ಈ ನೋಟೀಸ್ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯ ವಿಶೇಷ ಸರ್ಕಾರಿ ಅಭಿಯೋಜಕರಾದ ವೆಂಕಟೇಶ್ ಎಸ್ ಅರಬಟ್ಟಿ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದ್ದಾರೆ. ಇವರು ಸಲ್ಲಿಸಿರುವ ಮೆಮೋದಲ್ಲಿ ಈ ಮಾಹಿತಿ ಇದೆ.
ಲೋಕಾಯುಕ್ತ ಸಂಸ್ಥೆಯ ವಿಶೇಷ ಸರ್ಕಾರಿ ಅಭಿಯೋಜಕರು 2026ರ ಅಕ್ಟೋಬರ್ 6ರಂದು ಸಲ್ಲಿಸಿರುವ ಮೆಮೋ ಮತ್ತು ನ್ಯಾಯಾಲಯದ ಮುಂದೆ ಲೋಕಾಯುಕ್ತ ಎಸ್ಪಿ ಕೋರಿರುವ ಕೋರಿಕೆಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಸಿದ್ದಾರ್ಥ ವಿಹಾರ ಟ್ರಸ್ಟ್ ಮೇಲೆ ಎಫ್‌ಐಆರ್ ಏಕಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮುಳುಬಾಗಿಲಿನಲ್ಲಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಲೋಕಾಯುಕ್ತ ಎಸ್ಪಿ ಅವರು ಕೋರಿರುವ ವಿಷಯವು ಮುನ್ನೆಲೆಗೆ ಬಂದಿದೆ.
ವಿಶೇಷವೆಂದರೇ ಲೋಕಾಯುಕ್ತ ಎಸ್ಪಿ ಅವರು ತನಿಖೆಯ ಪ್ರಸ್ತುತ ಸ್ಥಿತಿಗತಿಗೆ ಸಂಬಂಧಿಸಿದಂತೆ ವರದಿಯನ್ನಷ್ಟೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಸಲು ಸಾಧ್ಯವಾಗದಿರುವುದಕ್ಕೆ ಕಾರಣಗಳನ್ನು ವರದಿ/ಅಭಿಪ್ರಾಯದಲ್ಲಿ ನೀಡಿದ್ದಾರೆ. ಮುಖ್ಯವಾಗಿ ಈ ಪ್ರಕರಣದಲ್ಲಿ ತನಿಖೆಗೆ ಅನುಮತಿ ದೊರೆತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರ ಕೋರಿಕೆಯಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಲೋಕಾಯುಕ್ತ ಸಂಸ್ಥೆಯ ವಿಶೇಷ ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ಮೆಮೋ ಮೂಲಕ ಸಲ್ಲಿಸಿರುವ ವಸ್ತುಸ್ಥಿತಿ ವರದಿಯ ಆಧರಿಸಿ ನ್ಯಾಯಾಲಯವು 2026ರ ಅಕ್ಟೋಬರ್ 15ರಂದು ಮುಂದಿನ ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸಿದೆ.
ವಿಶೇಷವೆಂದರೇ ಲೋಕಾಯುಕ್ತ ಎಸ್ಪಿ ಅವರು ತನಿಖೆಯ ಪ್ರಸ್ತುತ ಸ್ಥಿತಿಗತಿಗೆ ಸಂಬಂಧಿಸಿದಂತೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆ ವರದಿಯಲ್ಲಿ ತನಿಖೆ ನಡೆಸಲು ಸಾಧ್ಯವಾಗದಿರುವುದಕ್ಕೆ ವರದಿ/ಅಭಿಪ್ರಾಯದಲ್ಲಿ ಕಾರಣಗಳನ್ನು ನೀಡಿದ್ದಾರೆ. ಮುಖ್ಯವಾಗಿ ಅನುಮತಿ (Sanction) ದೊರೆತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರ ಕೋರಿಕೆಯಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಅನುಮತಿ ದೊರೆಯದ ಕಾರಣದಿಂದ ಯಾವುದೇ ತನಿಖೆಯನ್ನು ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ. ನ್ಯಾಯಾಲಯವು ಲೋಕಾಯುಕ್ತರು ಸಲ್ಲಿಸಿರುವ ಈ ವರದಿಯ ಕುರಿತು ಮುಂದಿನ ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸಿರುವುದು ಗೊತ್ತಾಗಿದೆ.

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ಅವರು ಸಂಕ್ಷಿಪ್ತವಾಗಿ ತಮ್ಮ ವಾದವನ್ನು ಮಂಡಿಸಿದರು. ಲೋಕಾಯುಕ್ತ ಎಸ್ಪಿ ಸಲ್ಲಿಸಿದ್ದ ವರದಿಯಲ್ಲಿರುವ ಅಂಶಗಳು, ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅಪ್ರಸ್ತುತವಾಗಿವೆ ಎಂದು ತಿಳಿಸಿದರು. ಅಲ್ಲದೆ ಲೋಕಾಯುಕ್ತ ಸಂಸ್ಥೆಯು ವರದಿ ಸಲ್ಲಿಸಿದ್ದರೂ ಸಹ ಮ್ಯಾಜಿಸ್ಟ್ರೇಟ್ ಅವರಿಗೆ ಕಾನೂನು ಅಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳಲು ಯಾವುದೇ ಅಡ್ಡಿಯಿಲ್ಲವೆಂದು ವಾದಿಸಿದರು.
ಲೋಕಾಯುಕ್ತ ಎಸ್ಪಿ ನೀಡಿರುವ ವಸ್ತುಸ್ಥಿತಿ ವರದಿಯಲ್ಲೇನಿದೆ?
ದೂರು ಅರ್ಜಿಗಳು ಬಂದಾಗ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರ ಪ್ರಕಾರ ಮೊದಲಿಗೆ ಪರಿಶೀಲನೆ ಕೈಗೊಂಡು ದೂರಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸಲಾಗುತ್ತದೆ. ಮೇಲ್ನೋಟಕ್ಕೆ ವಿಚಾರಣೆ ಕೈಗೆತ್ತಿಕೊಳ್ಳಬಹುದಾದ ಆರೋಪಗಳಿದ್ದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಕಲಂ 17(ಎ) ಅಡಿಯಲ್ಲಿ ಪರಿಶೀಲನಾಧಿಕಾರಿಯವರು ಸಲ್ಲಿಸುವ ಪ್ರಸ್ತಾವನೆಯನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳ ಮುಖಾಂತರ ಸಕ್ಷಮ ಪ್ರಾಧಿಕಾರಗಳಿಗೆ ವಿಚಾರಣೆ, ತನಿಖೆ ಕೈಗೊಳ್ಳಲು ಪೂರ್ವಾನುಮತಿಗಾಗಿ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸುವುದು ಕಾನೂನು ಕ್ರಮವಾಗಿರುತ್ತದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಈಗಾಗಲೇ ಸಲ್ಲಿಕೆಯಾಗಿರುವ ಲೋಕಾಯುಕ್ತದಲ್ಲಿ ಸಲ್ಲಿಕೆಯಾಗಿರುವ ( compt/lok/bcd/5141/2024) ದೂರು ಅರ್ಜಿಯ ವಿಚಾರಣೆಯಲ್ಲಿದೆ. ಈ ದೂರಿನಲ್ಲಿರುವ ಆರೋಪಗಳು ಹಾಗೂ ಅರ್ಜಿದಾರರು ನಮಗೆ ನೀಡಿರುವ ದೂರಿನಲ್ಲಿರುವ ಆಪಾದನೆಗಳು ಒಂದೇ ಆಗಿವೆ. ಈಗಾಗಲೇ ಲೋಕಾಯುಕ್ತ ಕಾಯ್ದೆಯಡಿಯಲ್ಲಿ ದಾಖಲಾಗಿರುವ ದೂರಿನಲ್ಲಿ ಹೆಸರಿಸಿರುವ ಸಂಬಂಧಪಟ್ಟ ಎದುರುದಾರರ ವಿರುದ್ಧ ಹೆಚ್ಚುವರಿ ನಿಬಂಧಕರು (ಇ-11) ಎದುರುದಾರರಿಂದ ಆರೋಪಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ಅಭಿಪ್ರಾಯ ಮತ್ತು ದಾಖಲಾತಿಗಳನ್ನು ಹಾಜರುಪಡಿಸಬೇಕು ಎಂದು ನೋಟೀಸ್ ನೀಡಲಾಗಿದೆ ಎಂಬ ಮಾಹಿತಿಯನ್ನು ವರದಿಯಲ್ಲಿ ನೀಡಿರುವುದು ತಿಳಿದು ಬಂದಿದೆ.
ಅಲ್ಲದೆ ‘ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು 1 ಮತ್ತು 2 ಬೆಂಗಳೂರು ನಗರ ವಿಭಾಗದ ಎಸ್ಪಿಯಾಗಿ ಪ್ರಭಾರ ಕಾರ್ಯಭಾರ ವಹಿಸಿಕೊಂಡಿದ್ದೇನೆ. ಈ ದೂರು ಅರ್ಜಿ /ಪಿಸಿಆರ್‍ಗಳಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ಚರ್ಚೆಗೆ ಬಂದಾಗ ನಾನು ದೂರು ಅರ್ಜಿಯ ಪರಿಶೀಲನಾಧಿಕಾರಿಗಳೊಂದಿಗೆ ಚರ್ಚೆ ಮಾಡಿರುತ್ತೇನೆ. ಪರಿಶೀಲನಾಧಿಕಾರಿಗಳ ಮಾಹಿತಿ ಪ್ರಕಾರ ದೂರು ಅರ್ಜಿಯು ಈಗಾಗಲೇ ಲೋಕಾಯುಕ್ತ ಘಟಕದಲ್ಲಿ ವಿಚಾರಣೆಯಲ್ಲಿರುವುದು ತಿಳಿದು ಬಂದಿದೆ. ಲೋಕಾಯುಕ್ತದಲ್ಲಿ ಈಗಾಗಲೇ ದಾಖಲಾಗಿರುವ (compt/lok/bcd/5141/2024) ಅರ್ಜಿಯಲ್ಲಿನ ಮಾಹಿತಿಯನ್ನು ಅಧಿಕೃತವಾಗಿ ಲೋಕಾಯುಕ್ತ ವಿಭಾಗದಿಂದ ಪಡೆದು ಮುಂದಿನ ದಿನಾಂಕದಂದು ಸ್ಪಷ್ಟ ವರದಿ ನೀಡಲಾಗುವುದು,’ ಎಂದು ಎಸ್ಪಿ ಮಹಾಂತೇಶ್ವರ ಎಸ್ ಜಿದ್ದಿ ಅವರು ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿರುವುದು ಗೊತ್ತಾಗಿದೆ.

ಭ್ರಷ್ಟಾಚಾರ ವಿರೋಧಿ ವೇದಿಕೆ ಎನ್ ಆರ್ ರಮೇಶ್ ಎಂಬುವರು ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಸ್ಥರ ಹೆಸರಿನಲ್ಲಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ಬಿಡಿಎಯು 2014ನೇ ಸಾಲಿನಲ್ಲಿ ಹಾಗೂ ಕೆಎಐಡಿಬಿಯು 2024ರರಂದು 2 ಸಿ ಎ ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡಿದೆ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ದೂರನ್ನು ಸಲ್ಲಿಸಿದ್ದರು.
ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!
ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಖಾಸಗಿ ದೂರಿನ ವಿಚಾರಣೆ ಮುಂದುವರೆಸಲು ಹೈಕೋರ್ಟ್ ಅನುಮತಿ ನೀಡಿತ್ತು.
ಈ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಸ್ತೃತವಾಗಿ ಅವಲೋಕಿಸಿದ್ದನ್ನು ಸ್ಮರಿಸಬಹುದು.




