ಬೆಂಗಳೂರು; ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಸರಿಯಾದ ಉತ್ತರಗಳನ್ನು ಸೋರಿಕೆ ಮಾಡಿದ್ದ ತಂಡವೇ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇದ್ದ ಸಿವಿಲ್, ಮೆಕ್ಯಾನಿಕಲ್, ಕೃಷಿ ಅಧಿಕಾರಿ ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆ ಸಂದರ್ಭದಲ್ಲಿ ಲಕ್ಷಾಂತರ ರುಪಾಯಿ ನೀಡಿದ್ದ ನಿರ್ದಿಷ್ಟ ಅಭ್ಯರ್ಥಿಗಳಿಗೆ ಸರಿಯಾದ ಉತ್ತರಗಳನ್ನೂ ಸೋರಿಕೆ ಮಾಡಿತ್ತು.
ಈ ಸಂಗತಿಯನ್ನು ಬಯಲು ಮಾಡಿರುವ ಜಾರಿ ನಿರ್ದೇಶನಾಲಯವು ಈ ತಂಡವು ನಡೆಸಿರುವ ಅಕ್ರಮಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಇತರೆ ಇಲಾಖೆಗಳ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿವರಗಳಿವೆ.
ಅಲ್ಲದೇ ‘ಕೆಎಎಸ್ ಸಂದರ್ಶನದ ವೇಳಾಪಟ್ಟಿ ಪ್ರಕಟವಾಗುವುದಕ್ಕೆ ಕೆಲವು ದಿನಗಳ ಮೊದಲು ಐಪಿಎಸ್ ಅಧಿಕಾರಿ ಎಂ.ವಿ. ಚಂದ್ರಕಾಂತ್ ಅವರ ನಿವಾಸದಿಂದ ₹2 ಕೋಟಿ ನಗದು ಸಂಗ್ರಹಿಸುವಂತೆ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮಗೆ ಸೂಚಿಸಿದ್ದರು. ಮತ್ತು ಸಂಗ್ರಹವಾಗಿದ್ದ ಈ ಹಣವನ್ನು ಶಿವಶಂಕರಪ್ಪ ಸಾಹುಕಾರ್ ಅವರಿಗೆ ಹಸ್ತಾಂತರಿಸಬೇಕು,’ ಎಂದು ಗಂಗ್ವಾರ್ ಸೂಚಿಸಿದ್ದರು.
ಹೀಗೆಂದು ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಬಸವರಾಜ ಕನ್ನಾಳೆ ಅವರು ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದನ್ನೂ ಸಹ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.
ಹಾಗೆಯೇ 2023ರಿಂದ ಗಂಗ್ವಾರ್ ಅವರ ಸುಮಾರು ₹12 ಕೋಟಿಯಿಂದ ₹15 ಕೋಟಿ ನಗದು ಹಣವನ್ನು ತಾನೇ ನಿರ್ವಹಿಸಿದ್ದೇನೆ ಎಂದು ಬಸವರಾಜ ಕನ್ನಾಳೆ, ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಯಲ್ಲಿ ಬಾಯಿಬಿಟ್ಟಿದ್ದಾನೆ. ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ಮಕ್ಕಳಿಗೂ ಅನುಕೂಲ ಮಾಡಿಕೊಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈ ಪ್ರಕರಣದ ನಾಲ್ಕನೇ ಆರೋಪಿ ಬಸವರಾಜ ಕನ್ನಾಳೆ, ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಯಲ್ಲಿ ಐಪಿಎಸ್ ಚಂದ್ರಕಾಂತ್ ಅವರ ಹೆಸರನ್ನೂ ಲಿಖಿತವಾಗಿ ಉಲ್ಲೇಖಿಸಿರುವುದು, ಅಕ್ರಮದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದಂತಾಗಿದೆ.
‘ತಮ್ಮ ಕೋರಿಕೆಯ ಮೇರೆಗೆ, ಪಿಡಿಒ, ಜೆಇ (ಜಲಸಂಪನ್ಮೂಲ ಇಲಾಖೆ – ಸಿವಿಲ್ ಮತ್ತು ಮೆಕ್ಯಾನಿಕಲ್) ಮತ್ತು ಕೃಷಿ ಅಧಿಕಾರಿ ಪರೀಕ್ಷೆಗಳಲ್ಲಿ ತಾವು ಶಿಫಾರಸು ಮಾಡಿದ ತಲಾ ಒಬ್ಬ ಅಭ್ಯರ್ಥಿಗೆ ಸರಿಯಾದ ಉತ್ತರ ಕೀಲಿಗಳನ್ನು ಗಂಗ್ವಾರ್ ಒದಗಿಸಿದ್ದರು. ಇದಕ್ಕಾಗಿ ಸುಮಾರು ₹40 ಲಕ್ಷ ಸಂಗ್ರಹಿಸಲಾಗಿತ್ತು. ಯಾದಗಿರಿಯ ಕೃಷಿ ಅಧಿಕಾರಿ ಅಭ್ಯರ್ಥಿಯೊಬ್ಬರು ₹60 ಲಕ್ಷ ಪಾವತಿಸಿದ್ದರು. ಆದರೆ, ಅವರು ಆಯ್ಕೆಯಾಗದ ಕಾರಣ ಆ ಹಣವನ್ನು ಹಿಂದಿರುಗಿಸಲಾಗಿತ್ತು. 2026ರ ಅಕ್ಟೋಬರ್ 10ರಂದು ಓಂಕಾರ್ ಎಂಬುವರು ನೀಡಿದ್ದ ಹೇಳಿಕೆಯನ್ನು 2026ರ ಅಕ್ಟೋಬರ್ 11ರಂದು ಬಸವರಾಜ ಕನ್ನಾಳೆ ಮುಂದಿಟ್ಟು ವಿಚಾರಿಸಿದಾಗ ಅದನ್ನು ತನಿಖಾಧಿಕಾರಿ ಮುಂದೆ ದೃಢಪಡಿಸಿದ್ದರು,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
7.10 ಕೋಟಿ ನಗದು ಸಾಲ ಬಾಕಿ
ಓಂಕಾರ್ ಅವರಿಗೆ ನೀಡಿದ್ದ ₹7.10 ಕೋಟಿ ನಗದು ಸಾಲ ಇನ್ನೂ ಬಾಕಿಯಿದೆ. ಈ ಹಣವನ್ನು ತಮ್ಮ ರಿಯಲ್ ಎಸ್ಟೇಟ್ ವ್ಯವಹಾರದಿಂದ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಂದ ಪಡೆದ ಸಾಲದಿಂದ ಒದಗಿಸಲಾಗಿತ್ತು. ತಮ್ಮ ಸೂಚನೆಯಂತೆ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಅಭ್ಯರ್ಥಿಗಳಿಂದ ಸಂಗ್ರಹಿಸಲಾದ ಹಣದಲ್ಲಿ ₹70 ಲಕ್ಷವನ್ನು M/s Om Lakshmi ಸಂಸ್ಥೆಯ ಖಾತೆಗೆ ಜಮೆ ಮಾಡಲಾಗಿತ್ತು. ಈ ಮೊತ್ತದಲ್ಲಿ ₹15 ಲಕ್ಷವನ್ನು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗಾಗಿ ಆಭರಣ ಖರೀದಿಸಲು M/s Bhima Gold ಸಂಸ್ಥೆಗೆ ವರ್ಗಾಯಿಸಲಾಗಿತ್ತು. ಉಳಿದ ₹55 ಲಕ್ಷವನ್ನು ಅವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸಲಾಗಿತ್ತು ಎಂದು ಹೇಳಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

9 ಅಭ್ಯರ್ಥಿಗಳಿಂದ 1.35 ಕೋಟಿ ಸಂಗ್ರಹ
ಒಂಬತ್ತು ಅಭ್ಯರ್ಥಿಗಳಿಂದ ಒಟ್ಟು ₹1.35 ಕೋಟಿ ಸಂಗ್ರಹಿಸಲಾಗಿತ್ತು. ಅದರಲ್ಲಿ ₹70 ಲಕ್ಷವನ್ನು ಬ್ಯಾಂಕಿಂಗ್ ಮಾರ್ಗದ ಮೂಲಕ ಸ್ವೀಕರಿಸಲಾಗಿತ್ತು ಮತ್ತು ₹65 ಲಕ್ಷವನ್ನು ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ನೇರವಾಗಿ ಹಸ್ತಾಂತರಿಸಲಾಗಿತ್ತು ಎಂದು ಮತ್ತಷ್ಟು ವಿವರವನ್ನು ತನಿಖಾಧಿಕಾರಿಗೆ ತಿಳಿಸಿದ್ದಾರೆ. ಪಿಡಿಒ-ಎಚ್ಕೆ, ಜೆಇ ಮತ್ತು ಕೃಷಿ ಅಧಿಕಾರಿ ಪರೀಕ್ಷೆಗಳಲ್ಲಿ ತಾವು ಶಿಫಾರಸು ಮಾಡಿದ ಅಭ್ಯರ್ಥಿಗಳಿಗೆ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಉತ್ತರ ಕೀಲಿಗಳನ್ನು ಒದಗಿಸಿದ್ದರು ಎಂಬುದನ್ನು ವಿಚಾರಣೆ ವೇಳೆ ಕನ್ನಾಳೆ ದೃಢಪಡಿಸಿರುವುದು ದೋಷಾರೋಪಣ ಪಟ್ಟಿಯಿಂದ ಗೊತ್ತಾಗಿದೆ.
ಗಂಗ್ವಾರ್ ಮತ್ತು ಶಿವಶಂಕರಪ್ಪ ಸಾಹುಕಾರ್ ಅವರು ಆಪ್ತರಾಗಿದ್ದರು. ಕೆಪಿಎಸ್ಸಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳಲ್ಲಿ ಅವರಿಬ್ಬರೂ ಭಾಗಿಯಾಗಿರಬಹುದೆಂದು ತಾವು ಭಾವಿಸಿರುವುದಾಗಿ ತಿಳಿಸಿದರು. ಆದರೆ, ಈ ಸಂಬಂಧ ತಾವು ಯಾವುದೇ ಕೆಪಿಎಸ್ಸಿ ಸದಸ್ಯರು ಅಥವಾ ಅಧಿಕಾರಿಗಳನ್ನು ಭೇಟಿಯಾಗಿರಲಿಲ್ಲ ಎಂದರು.
ಹಣ ಸಂಗ್ರಹ, ಪಾವತಿಯಲ್ಲಿ ವ್ಯತ್ಯಾಸ
ಅಭ್ಯರ್ಥಿಗಳಿಂದ ಸಂಗ್ರಹಿಸಿದ ಮೊತ್ತ ಮತ್ತು ಗಂಗ್ವಾರ್ ಅವರಿಗೆ ಪಾವತಿಸಿದ ಮೊತ್ತಗಳ ನಡುವಿನ ವ್ಯತ್ಯಾಸದ ಬಗ್ಗೆ ತನಿಖಾಧಿಕಾರಿಯು ಪ್ರಶ್ನಿಸಿದ್ದರು. ಆಗ ಕನ್ನಾಳೆ, ಆ ವ್ಯತ್ಯಾಸವನ್ನು ಒಪ್ಪಿಕೊಂಡರು. ಗಂಗ್ವಾರ್ ಅವರ ಸುಮಾರು ₹15 ಕೋಟಿ ಹಣವನ್ನು ತಾವು ನಿರ್ವಹಿಸುತ್ತಿದ್ದುದರಿಂದ, ಹಿಂದಿನ ಮೊತ್ತಗಳೂ ಅದರಲ್ಲಿ ಸೇರಿಕೊಂಡಿರಬಹುದು ಎಂದು ಕನ್ನಾಳೆ, ತನಿಖಾಧಿಕಾರಿ ಮುಂದೆ ಕಾರಣ ನೀಡಿರುವುದು ಗೊತ್ತಾಗಿದೆ.
ಐಪಿಎಸ್ ಚಂದ್ರಕಾಂತ್ರಿಂದ 2 ಕೋಟಿ ನಗದು ಸಂಗ್ರಹಿಸಲು ಸೂಚಿಸಿದ್ದ ಗಂಗ್ವಾರ್
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದಾಖಲಿಸಲಾದ ಕನ್ನಾಳೆ ನೀಡಿದ್ದ ಹೇಳಿಕೆಯಲ್ಲಿ, ಕೆಎಎಸ್ ಸಂದರ್ಶನದ ವೇಳಾಪಟ್ಟಿ ಪ್ರಕಟವಾಗುವುದಕ್ಕೆ ಕೆಲವು ದಿನಗಳ ಮೊದಲು, ಐಪಿಎಸ್ ಅಧಿಕಾರಿ ಎಂ.ವಿ. ಚಂದ್ರಕಾಂತ್ ಅವರ ನಿವಾಸದಿಂದ ₹2 ಕೋಟಿ ನಗದು ಸಂಗ್ರಹಿಸುವಂತೆ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮಗೆ ಸೂಚಿಸಿದ್ದರು. ತಾವು ಆ ಹಣವನ್ನು ಸಂಗ್ರಹಿಸಿ ಗಂಗ್ವಾರ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಸಂದರ್ಶನದಲ್ಲಿ ಹೆಚ್ಚಿನ ಅಂಕ
ಚಂದ್ರಕಾಂತ್ ಅವರ ಇಬ್ಬರು ಪುತ್ರಿಯರಾದ ತೇಜಸ್ವಿನಿ ಮತ್ತು ಪಲ್ಲವಿ ಅವರಿಗೆ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸುವ ಉದ್ದೇಶಕ್ಕಾಗಿ ಈ ಹಣವನ್ನು ಮುಂಗಡವಾಗಿ ನೀಡಲಾಗಿತ್ತು. ಮತ್ತು ಅದನ್ನು ಶಿವಶಂಕರಪ್ಪ ಸಾಹುಕಾರ್ ಅವರಿಗೆ ಹಸ್ತಾಂತರಿಸಬೇಕಾಗಿತ್ತು ಎಂದು ಗಂಗ್ವಾರ್ ತಮಗೆ ತಿಳಿಸಿದ್ದರು ಕನ್ನಾಳೆ, ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದರು. ಆದರೆ ಅವರ ಪುತ್ರಿಯರು ಸಂದರ್ಶನಕ್ಕೆ ಅರ್ಹತೆ ಪಡೆಯಲಿಲ್ಲ. ಚಂದ್ರಕಾಂತ್ ಮತ್ತು ಅವರ ಪತ್ನಿ, ಆಯ್ಕೆಯ ವಿಚಾರವಾಗಿ ವಾಟ್ಸಾಪ್ ಮೂಲಕ ತಮಗೆ ಕರೆ ಮಾಡುತ್ತಿದ್ದರು ಎಂದು ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಯಲ್ಲಿ ವಿವರಣೆಯನ್ನು ಒದಗಿಸಿರುವುದು ಗೊತ್ತಾಗಿದೆ.

ಪವನ್ ರೆಡ್ಡಿ ಅವರ ಹೇಳಿಕೆಯನ್ನು ಮುಂದಿಟ್ಟು ವಿಚಾರಿಸಿದಾಗ, ಅಭ್ಯರ್ಥಿಗಳಿಂದ ಹಣ ಸ್ವೀಕರಿಸಲು M/s Om Lakshmi ಮತ್ತು ಬಾಲು ರೆಡ್ಡಿ ಅವರ ಖಾತೆ ಸಂಖ್ಯೆಗಳನ್ನು ತಾವು ನೀಡಿದ್ದಾಗಿ ಒಪ್ಪಿಕೊಂಡರು. ಶ್ರೀ ಬಾಲು ರೆಡ್ಡಿ ಅವರ ಖಾತೆಗೆ ಬಂದಿದ್ದ ಸುಮಾರು ₹10 ಲಕ್ಷದಿಂದ ₹15 ಲಕ್ಷದವರೆಗೆ ಹಣವನ್ನು ಹಿಂಪಡೆಯಲಾಗಿತ್ತು ಎಂದು ತಿಳಿಸಿದರು.
ಗ್ಯಾನೇಂದ್ರ ಕುಮಾರ್ ಗಂಗ್ವಾರ್ ರಿಂದ 2026ರ ಜನವರಿ 7ರಂದೇ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಉತ್ತರಗಳ ಸಮೇತ ಸ್ವೀಕರಿಸಲಾಗಿತ್ತು. ಮತ್ತು ಇದನ್ನು 2026ರ ಜನವರಿ 8ರಂದು ಆರ್ಕಿಡ್ ನಿರ್ವಾಣ ವಿಲ್ಲಾಗಳಲ್ಲಿ ಅಭ್ಯರ್ಥಿಗಳ ನಡುವೆ ಹಂಚಲಾಗಿತ್ತು. ಅಭ್ಯರ್ಥಿಗಳಿಂದ ಸುಮಾರು ₹1.35 ಕೋಟಿಯಿಂದ ₹1.50 ಕೋಟಿ ಹಣವನ್ನು ನಗದು ರೂಪದಲ್ಲಿ ಮತ್ತು M/s Om Lakshmi ಹಾಗೂ ಬಾಲು ರೆಡ್ಡಿ ಅವರ ಖಾತೆಗಳ ಮೂಲಕ ಸಂಗ್ರಹಿಸಿದ್ದಾಗಿ ಹೇಳಿದರು. ಆ ನಗದು ಹಣದ ಒಂದು ಭಾಗವನ್ನು ಜಯಮಹಲ್ ಮತ್ತು ಆರ್.ಟಿ. ನಗರದಲ್ಲಿ ಗಂಗ್ವಾರ್ ಅವರಿಗೆ ಹಸ್ತಾಂತರಿಸಲಾಗಿತ್ತು ಎಂದು ತನಿಖಾಧಿಕಾರಿಗೆ ಕನ್ನಾಳೆ ತಿಳಿಸಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ಗಂಗ್ವಾರ್ ಅವರ ಸೂಚನೆಯಂತೆ, ಯಾಶಿ ಜೈಸ್ವಾಲ್ ಅವರ ಹೆಸರಿನಲ್ಲಿ ಆಭರಣ ಖರೀದಿಸಲು M/s Bhima Gold Pvt. Ltd. ಸಂಸ್ಥೆಗೆ ಒಟ್ಟು ₹52.30 ಲಕ್ಷ ಪಾವತಿಸಲಾಗಿದೆ. ಈ ಪಾವತಿಗಳನ್ನು ಉಮೇಶ್ ಬಿ.ಆರ್., ಓಂಕಾರ್ ಕೆ., M/s Shree Sidda, ರಾಜಶೇಖರ್ ಮತ್ತು ಯಾಶಿ ಜೈಸ್ವಾಲ್ ಅವರ ಮೂಲಕ ಮಾಡಲಾಗಿತ್ತು. ತಮ್ಮ ಸ್ವಂತ ಖಾತೆಯಿಂದ ಅಥವಾ ಕನ್ನಾಳೆ ಅವರ ಖಾತೆಯಿಂದ ಪಾವತಿ ಮಾಡುವುದು ಬೇಡವೆಂದು ಗಂಗ್ವಾರ್ ಬಯಸಿದ್ದರು ಎಂದರು.
ಗಂಗ್ವಾರ್ ಗೆ ಸೇರಿದ 12ರಿಂದ 15 ಕೊಟಿ ನಗದು ಹಣ ನಿರ್ವಹಿಸಿದ್ದ ಕನ್ನಾಳೆ
ಗಂಗ್ವಾರ್, ಅವರ ಕುಟುಂಬ ಮತ್ತು ಸ್ನೇಹಿತರ ವಿಮಾನ ಪ್ರಯಾಣಕ್ಕಾಗಿ ಮೂರನೇ ವ್ಯಕ್ತಿಗಳ ಖಾತೆಗಳು ಹಾಗೂ ನಗದು ಠೇವಣಿಗಳ ಮೂಲಕ ₹13,31,435 ಪಾವತಿಸಿದ್ದಾಗಿ ತಿಳಿಸಿದರು. ಅಲ್ಲದೆ, ಅವರಿಗಾಗಿ ಫೋನ್ಪೇ ಪಾವತಿಗಳು, ಮೊಬೈಲ್ ರೀಚಾರ್ಜ್ಗಳು ಮತ್ತು ಶಾಪಿಂಗ್ ವೆಚ್ಚಗಳನ್ನೂ ಭರಿಸಿದ್ದರು. ಗಂಗ್ವಾರ್ ಅವರ ಬಳಕೆಗಾಗಿ ತಾವು ಆಕ್ಸಿಸ್ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದರು. ಅರುಣ್ ಕುಮಾರ್ ಅವರ ಹೆಸರಿನಲ್ಲಿದ್ದ ಎರಡು ಎಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ಗಳನ್ನು ಗಂಗ್ವಾರ್ ಬಳಸುತ್ತಿದ್ದರು ಎಂದರು. 2023ರಿಂದ ಗಂಗ್ವಾರ್ ಅವರಿಗೆ ಸೇರಿದ ಸುಮಾರು ₹12 ಕೋಟಿಯಿಂದ ₹15 ಕೋಟಿ ನಗದು ಹಣವನ್ನು ತಾವು ನಿರ್ವಹಿಸಿದ್ದಾಗಿ ತಿಳಿಸಿದರು.
ಶಿವಶಂಕರಪ್ಪ ಸಾಹುಕಾರ್ಗೆ 2 ಕೋಟಿ
ಇದರಲ್ಲಿ ಪಿಡಿಒ, ಜೆಇ ಮತ್ತು ಕೃಷಿ ಅಧಿಕಾರಿ ಪರೀಕ್ಷೆಗಳಿಂದ ಸಂಗ್ರಹಿಸಿದ ಮೊತ್ತಗಳು ಹಾಗೂ ಐಪಿಎಸ್ ಅಧಿಕಾರಿ ಎಂ.ವಿ. ಚಂದ್ರಕಾಂತ್ ಅವರಿಂದ ಸಂಗ್ರಹಿಸಿ ಶಿವಶಂಕರಪ್ಪ ಸಾಹುಕಾರ್ ಅವರಿಗೆ ನೀಡಬೇಕಾಗಿದ್ದ ₹2 ಕೋಟಿ ಹಣವೂ ಸೇರಿತ್ತು. ಪಿಎಂಎಲ್ಎ, 2002ರ ಕಲಂ 50ರ ಅಡಿಯಲ್ಲಿ ದಾಖಲಿಸಲಾದ ‘ಬಸವರಾಜ್ ಕನ್ನಾಳೆ ಅವರ ಮೇಲಿನ ಹೇಳಿಕೆಗಳಿಂದ, ಅವರು ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರಿಂದ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪಡೆದುಕೊಂಡು, ಅಭ್ಯರ್ಥಿಗಳಿಂದ ಸುಮಾರು ₹1.35 ಕೋಟಿಯಿಂದ ₹1.50 ಕೋಟಿ ಅಕ್ರಮ ಹಣವನ್ನು ಸಂಗ್ರಹಿಸಿರುವುದು ಸ್ಪಷ್ಟವಾಗುತ್ತದೆ,’ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಹಣವನ್ನು ಅವರು ತಮ್ಮ ಬಳಿ ನಗದು ರೂಪದಲ್ಲಿ ಮತ್ತು M/s Om Lakshmi Souharda Sahakari Sangha Niyamita ಹಾಗೂ ಬಾಲು ರೆಡ್ಡಿ ಅವರ ಬ್ಯಾಂಕ್ ಖಾತೆಗಳಲ್ಲಿ ಇರಿಸಿದ್ದರು. ನಗದು ಹಣದ ಒಂದು ಭಾಗವನ್ನು ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಹಸ್ತಾಂತರಿಸಿದ್ದರು.
ಗಂಗ್ವಾರ್ ಅವರ ಸೂಚನೆಯಂತೆ, ಉಳಿದ ಹಣವನ್ನು ಉಮೇಶ್ ಬಿ.ಆರ್., ಓಂಕಾರ್ ಕೆ., M/s Shree Sidda, ರಾಜಶೇಖರ್ ಮತ್ತು ಇತರರ ಖಾತೆಗಳ ಮೂಲಕ ವರ್ಗಾಯಿಸಿ, ಯಾಶಿ ಜೈಸ್ವಾಲ್ ಅವರ ಹೆಸರಿನಲ್ಲಿ ₹52.30 ಲಕ್ಷ ಮೌಲ್ಯದ ಆಭರಣಗಳನ್ನು ಖರೀದಿಸಲು ಹಾಗೂ ಗಂಗ್ವಾರ್ ಅವರ ವಿಮಾನ ಪ್ರಯಾಣಕ್ಕಾಗಿ ₹13,31,435 ಪಾವತಿಸಲು ಬಳಸಲಾಗಿತ್ತು. ಈ ಪಾವತಿಗಳು ತಮ್ಮ ಸ್ವಂತ ಖಾತೆಗಳಲ್ಲಿ ಕಾಣಿಸಿಕೊಳ್ಳದಂತೆ ಈ ವ್ಯವಸ್ಥೆ ಮಾಡಲಾಗಿತ್ತು. 2023ರಿಂದ ಗಂಗ್ವಾರ್ ಅವರ ಸುಮಾರು ₹12 ಕೋಟಿಯಿಂದ ₹15 ಕೋಟಿ ನಗದು ಹಣವನ್ನು ತಾವು ನಿರ್ವಹಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಕೆಪಿಎಸ್ಸಿಯ ಇತರ ನೇಮಕಾತಿ ಪರೀಕ್ಷೆಗಳಿಂದ ಬಂದ ಅಕ್ರಮ ಹಣವೂ ಸೇರಿತ್ತು.

‘ಹೀಗಾಗಿ, ಕೆಪಿಎಸ್ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಬಂದ ಅಪರಾಧದ ಆದಾಯವನ್ನು ಪಡೆದುಕೊಳ್ಳುವುದು, ಹೊಂದಿರುವುದು, ಮರೆಮಾಚುವುದು ಮತ್ತು ಬಳಸಿಕೊಳ್ಳುವಲ್ಲಿ ಬಸವರಾಜ್ ಕನ್ನಾಳೆ ಅವರು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸಕ್ರಿಯವಾಗಿ ಸಹಾಯ ಮಾಡಿದ್ದಾರೆ ಹಾಗೂ ಆ ಹಣವನ್ನು ಕಳಂಕರಹಿತ ಆಸ್ತಿಯೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂಬುದನ್ನು ಈ ಅಂಶಗಳು ಸ್ಪಷ್ಟವಾಗಿ ಸೂಚಿಸುತ್ತವೆ,’ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.




