ಬೆಂಗಳೂರು; ಜೆಎಸ್ಡಬ್ಲ್ಯೂ ಲಿಮಿಟೆಡ್ ಬಳ್ಳಾರಿಯ ವಿವಿಧೆಡೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪಗಳು ಮತ್ತು ಅದಕ್ಕೆ ಸಂಬಂಧಿಸಿದ ಭೂ ವಿವಾದಗಳು ದೀರ್ಘಕಾಲದಿಂದ ತೀವ್ರ ಚರ್ಚೆಗೆ ಹಾಗೂ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ನಡುವೆಯೇ ಇದೇ ಬಳ್ಳಾರಿ ಜಿಲ್ಲೆಯ ತೋರಣಗಲ್ ಗ್ರಾಮದಲ್ಲಿರುವ ಜೆಎಸ್ಡಬ್ಲ್ಯೂ ಸಿಮೆಂಟ್ ಕಾರ್ಖಾನೆಯು ಒಟ್ಟು 14 ಸರ್ವೆ ನಂಬರ್ಗಳ ಪೈಕಿ 3 ಸರ್ವೆ ನಂಬರ್ಗಳಲ್ಲಿ ಜಮೀನುಗಳನ್ನು ಒತ್ತುವರಿ ಮಾಡಿರುವುದನ್ನು ಇದೀಗ ಹೆಚ್ಚುವರಿ ಜಿಲ್ಲಾಧಿಕಾರಿಯೇ ವರದಿ ನೀಡಿರುವುದು ಬಹಿರಂಗವಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ನೀಡಿರುವ ವರದಿಯನ್ನೇ ಕಂದಾಯ ಇಲಾಖೆಯು ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿಗೆ ಸಲ್ಲಿಸಿದೆ. 2026ರ ಜುಲೈ 4ರಂದು ಸಲ್ಲಿಸಿರುವ ವರದಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕಂದಾಯ ಸಚಿವ ಡಾ ಜಿ ಪರಮೇಶ್ವರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ. ಒತ್ತುವರಿ ತೆರವಿನ ಬಗ್ಗೆ ಸರ್ಕಾರವು ಇದುವರೆಗೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮತ್ತು ಅಂದಾಜು ಸಮಿತಿಯಲ್ಲಿಯೂ ಈ ಬಗ್ಗೆ ಚರ್ಚೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಬಳ್ಳಾರಿ ಜಿಲ್ಲೆಯ ತೋರಣಗಲ್ ಗ್ರಾಮದಲ್ಲಿ ಗಣಿಗಾರಿಕೆ ಮ ಮಾಡುತ್ತಿರುವ ಜೆಎಸ್ಡಬ್ಲ್ಯೂ ಸಿಮೆಂಟ್ ಕಾರ್ಖಾನೆಯು ಅನಧಿಕೃತವಾಗಿ ಸ್ವಂತ ರೈಲ್ವೆ ಹಳಿ ಕಾಮಗಾರಿ ನಿರ್ಮಾಣ ಮಾಡಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಐಟಿಐ ಕಾಲೇಜುಗಳಿಗೆ ಮೀಸಲಿರಿಸಿದ್ದ ಸುಮಾಋಉ 55 ಎಕರೆ ವಿಸ್ತೀರ್ಣದ ಜಮೀನನ್ನು ಒತ್ತುವರಿ ಮಾಡಿ ರೈಲ್ವೆ ಹಳಿ ಕಾಮಗಾರಿ ಮಾಡಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.
ಇದಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್ ಮತ್ತು ಸಂಡೂರು ತಾಲೂಕಿನ ಭೂದಾಖಲೆಗಳ ಉಪ ನಿರ್ದೇಶಕರ ತಂಡವು ಭೌತಿಕವಾಗಿ ಸರ್ವೆ ನಡೆಸಿತ್ತು. ಈ ಸರ್ವೇ ನಡೆಸಿದ ವೇಳೆಯಲ್ಲಿ ಒಟ್ಟು 14 ಸರ್ವೆ ನಂಬರ್ಗಳ ಪೈಕಿ 3 ಸರ್ವೆ ನಂಬರ್ಗಳಲ್ಲಿನ ಜಮೀನು ಒತ್ತುವರಿಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳ ನೇತೃತ್ವದ ಪರಿಶೀಲನಾ ತಂಡವು ದೃಢಪಡಿಸಿರುವುದು ಅಂದಾಜು ಸಮಿತಿಗೆ ನೀಡಿರುವ ವರದಿಯಿಂದ ತಿಳಿದು ಬಂದಿದೆ.

ವರದಿಯಲ್ಲೇನಿದೆ?
ಬಳ್ಳಾರಿ ಜಿಲ್ಲೆಯ ತೋರಣಗಲ್ ಗ್ರಾಮದಲ್ಲಿ ಗಣಿಗಾರಿಕೆ ಮಾಡುತ್ತಿರುವ ಜೆಎಸ್ಡಬ್ಲ್ಯೂ ಸಿಮೆಂಟ್ ಕಾರ್ಖಾನೆಯು ಒಟ್ಟು 14 ಸರ್ವೆ ನಂಬರ್ಗಳ ಪೈಕಿ 3 ಸರ್ವೆ ನಂಬರ್ಗಳಲ್ಲಿ ಜಮೀನುಗಳನ್ನು ಒತ್ತುವರಿ ಮಾಡಿದೆ. ಸರ್ವೆ ನಂಬರ್ 476ರಲ್ಲಿನ 2.15 ಎಕರೆ ಜಮೀನಿನ ಪೈಕಿ 11 ಸೆಂಡ್ ಸರ್ಕಾರಿ ಹಳ್ಳದ ಜಮೀನು ಒತ್ತುವರಿ ಮಾಡಿ ಸಿಮೆಂಟ್ ಬ್ರಿಡ್ಜ್ ಕಟ್ಟಡ ನಿರ್ಮಾಣ ಮಾಡಿದೆ. ಸರ್ವೆ ನಂಬರ್ 29ರಲ್ಲಿನ 1.35 ಎಕರೆ ಜಮೀನಿನ ಪೈಕಿ 06 ಸೆಂಟ್ ರಸ್ತೆ ಜಮೀನನ್ನು ಒತ್ತುವರಿ ಮಾಡಿ ಸಿಮೆಂಟ್ ಬ್ರಿಡ್ಜ್ ಕಟ್ಟಡವನ್ನು ನಿರ್ಮಾಣ ಮಾಡಿದೆ. ಸರ್ವೇ ನಂಬರ್ 15/1ರಲ್ಲಿನ 82 ಸೆಂಟ್ ಜಮೀನಿನ ಪೈಕಿ 03 ಸೆಂಟ್ ಜಮೀನನ್ನು ಒತ್ತುವರಿ ಮಾಡಿ ಸಿಮೆಂಟ್ ಬ್ರಿಡ್ಜ್ ಕಟ್ಟಡವನ್ನು ನಿರ್ಮಾಣ ಮಾಡಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

ಒಟ್ಟು 14 ಸರ್ವೇ ನಂಬರ್ಗಳಲ್ಲಿನ ಜಮೀನುಗಳ ಪೈಕಿ 3 ಸರ್ವೇ ನಂಬರ್ಗಳಲ್ಲಿ ಜಮೀನುಗಳು ಒತ್ತುವರಿಯಾಗಿದ್ದು ಇನ್ನುಳಿದ ಸರ್ವೇ ನಂಬರ್ಗಳಲ್ಲಿನ ಸರ್ಕಾರಿ ಜಮೀನುಗಳು ಒತ್ತುವರಿಯಾಗಿಲ್ಲ ಎಂದು ವರದಿ ಹೇಳಿದೆ.
ಸರ್ವೇ ನಂಬರ್ 476ರಲ್ಲಿರಲ್ಲಿನಕ 2.15 ಎಕರೆ ಸರ್ಕಾರಿ ಹಳ್ಳದ ಜಮೀನಿನಲ್ಲಿ ಜೆಎಸ್ಡಬ್ಲ್ಯೂ ಕಂಪನಿಯವರು ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಈ ಜಮೀನನ್ನು ತಾಲೂಕು ಮೋಜಣಿದಾರರು ಅಳತೆ ಮಾಡಿ ಗಡಿ ಗುರುತಿಸಿ, ಈ ಜಮೀನಿನ ವಿಸ್ತೀರ್ಣ 2.15 ಎಕರೆ ಪ್ರದೇಶದಲ್ಲಿ 11 ಸೆಂಟ್ ಜಮೀನು ಒತ್ತುವರಿಯಾಗಿರುವ ಜಮೀನಿನ ನಕ್ಷೆ ಸಿದ್ಧಪಡಿಸಿ ತಾಲೂಕು ಸರ್ವೆಯರ್, ಸಹಾಯಕ ನಿರ್ದೇಶಕರು, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರು ದೃಢೀಕರಿಸಿ ನೀಡಿದ್ದಾರೆ. ಅದರೆ ಅಧಿಕೃತವಾಗಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕಾಮಗಾರಿ ಕೈಗೊಂಡಿದ್ದಾರೆ ಎಂದು ವರದಿಯು ವಿವರಿಸಿದೆ.
ಸರ್ವೇ ನಂಬರ್ 295ರಲ್ಲಿನ 1.38 ಎಕರೆ ಸರ್ಕಾರಿ ರಸ್ತೆ ಜಮೀನಿನಲ್ಲಿ ಜೆಎಸ್ಡಬ್ಲ್ಯೂ ಕಂಪನಿಯವರು ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ್ದು ಈ ಬಗ್ಗೆ ತಾಲೂಕು ಮೋಜಣಿದಾರರು ಅಳತೆ ಮಾಡಿ ಗಡಿ ಗುರುತಿಸಿದ್ದಾರೆ. 1.38 ಎಕರೆ ಜಮೀನಿನ ಪೈಕಿ 06 ಸೆಂಟ್ ಜಮೀನಿನಲ್ಲಿ ಸಿಮೆಂಟ್ ಸೇತುವೆ ಕಟ್ಟಡ ನಿರ್ಮಿಸಿದ್ದಾರೆ. ಸರ್ವೇ ನಂಬರ್ 15/1ರಲ್ಲಿಯೂ ಜಮೀನು ಒತ್ತುವರಿ ಮಾಡಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಅನಧಿಕೃತವಾಗಿ ಕಾಮಗಾರಿ ಕೈಗೊಂಡಿದ್ದಾರೆ ಎಂದು ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಪರಿಶೀಲನಾ ತಂಡವು ದೃಢಪಡಿಸಿರುವುದು ವರದಿಯಿಂದ ಗೊತ್ತಾಗಿದೆ.

ಒತ್ತುವರಿಯನ್ನು ತೆರವುಗೊಳಿಸಲು ಸಂಡೂರು ತಹಶೀಲ್ದಾರ್ ಅವರು ಜೆಎಸ್ಡಬ್ಲ್ಯೂ ಕಂಪನಿಗೆ ನೋಟೀಸ್ ಜಾರಿ ಮಾಡಿದ್ದರು. ಈ ನೋಟೀಸ್ ಜೆಎಸ್ಡಬ್ಲ್ಯೂ ಸಮಜಾಯಿಷಿ ನೀಡಿದ್ದರು. ಆದರೆ ಈ ಸಮಜಾಯಿಷಿಯು ಸಮಂಜಸವಾಗಿಲ್ಲ ಎಂದು ತಹಶೀಲ್ದಾರ್ ತಿರಸ್ಕರಿಸಿದ್ದರು.
ಒತ್ತುವರಿಯಾಗಿರುವ ಸರ್ವೇ ನಂಬರ್ಗಳಲ್ಲಿನ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸಿಮೆಂಟ್ ಬ್ರಿಡ್ಜ್ ಕಟ್ಟಡಗಳನ್ನು ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯಪಡಿಸಬೇಕು. ತಪ್ಪಿದಲ್ಲಿ ಯಾವುದೇ ನೋಟೀಸ್ ನೀಡದೇ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 192 ಎ ಮತ್ತು 192 ಬಿ ಅನ್ವಯ ಪ್ರಕರಣ ದಾಖಲಿಸಲಾಗುವುದು ಮತ್ತು ಒತ್ತುವರಿಯಾದ ಜಮೀನನನ್ನು ಸರ್ಕಾರದಿಂದಲೇ ತೆರವುಗೊಳಿಸಿ ಅದಕ್ಕೆ ತಗುಲುವ ವೆಚ್ಚವನ್ನು ಜೆಎಸ್ಡಬ್ಲ್ಯೂ ಕಂಪನಿಯ ಸ್ವತ್ತಿನ ದಾಖಲೆಯಲ್ಲಿ ಭೂ ಕಂದಾಯ ಬಾಕಿ ಪ್ರಕರಣ ಎಂದು ದಾಖಲಿಸಿ ವಸೂಲು ಮಾಡಲಾಗುವುದು ಎಂದು ತಹಶೀಲ್ದಾರ್ ನೋಟೀಸ್ ಜಾರಿಗೊಳಿಸಿದ್ದರು.

ಈ ಒತ್ತುವರಿಯನ್ನು ತ್ವರಿತವಾಗಿ ತೆರವುಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ತಿಳಿಸಲಾಗಿದೆ ಎಂದು ಕಂದಾಯ ಇಲಾಖೆಯು ಅಂದಾಜು ಸಮಿತಿಗೆ ಮಾಹಿತಿ ಒದಗಿಸಿದೆ.

ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಂಪನಿಗೆ ಸಂಡೂರು ತಾಲೂಕಿನಲ್ಲಿ ಒಟ್ಟು 3,666 ಎಕರೆ ಭೂಮಿಯನ್ನು ಶುದ್ಧ ಕ್ರಯಪತ್ರಕ್ಕೆ ನೀಡುವ ಬಹುವಿವಾದಿತ ತೀರ್ಮಾನವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಸಚಿವ ಸಂಪುಟವು ಕೈಗೊಂಡಿತ್ತು. ಸಂಡೂರು ತಾಲೂಕಿನ ತೋರಣಗಲ್ಲು, ಕುರೇಕುಪ್ಪ ಗ್ರಾಮದ 2000.58 ಎಕರೆ ಹಾಗೂ ತೋರಣಗಲ್ಲು, ಮುಸೇನಾಕನಹಳ್ಳಿ ಮತ್ತು ಯರಬನಹಳ್ಳಿಯ 1,666.73 ಎಕರೆ ಭೂಮಿಯನ್ನು ಕಂಪನಿಗೆ ಶುದ್ಧ ಕ್ರಯಕ್ಕೆ ನೀಡಲು ಸಂಪುಟವು ಸಮ್ಮತಿಸಿತ್ತು.
2006ರಲ್ಲಿ ನಿಗದಿಯಾಗಿದ್ದಂತೆ ದರದಂತೆ ಒಟ್ಟು 2000.58 ಎಕರೆ ಭೂಮಿಗೆ ಪ್ರತಿ ಎಕರೆಗೆ 1,22,200 ರೂ. ಹಾಗೂ 1666.73 ಎಕರೆ ಭೂಮಿಗೆ ಪ್ರತಿ ಎಕರೆಗೆ 1,50,635 ರೂ. ಅಂತಿಮ ಬೆಲೆ ನಿಗದಿಪಡಿಸಿ ಕ್ರಮಪತ್ರಗಳನ್ನು ನೀಡಲು ಸಂಪುಟವು ಈಗಾಗಲೇ ಸಮ್ಮತಿಸಿದೆ. ಬಿಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರ ಸಿಎಂ ಆಗಿದ್ದ ಕಾಲದಿಂದಲೂ ಈ ಪ್ರಸ್ತಾಪ ತೀವ್ರ ವಿವಾದ ಸೃಷ್ಟಿಸಿತ್ತು.
ಜೆಎಸ್ಡಬ್ಲ್ಯೂ ಸ್ಟೀಲ್ಸ್ಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಕ್ರಯಕ್ಕೆ ನೀಡುವುದನ್ನು ಈ ಹಿಂದೆ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಎಚ್ಕೆ ಪಾಟೀಲ್ ಅವರೂ ಈ ಹಿಂದೆ ಸದನದ ಒಳಗೆ ಮತ್ತು ಹೊರಗೆ ಈ ಪ್ರಸ್ತಾಪದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದರು.
ತೋರಣಗಲ್ಲು ಸುತ್ತಮುತ್ತಲಿನ ಭಾಗಗಳಲ್ಲಿ ನಿಗದಿಗಿಂತ ಹೆಚ್ಚಿನ ಸರ್ಕಾರಿ ಭೂಮಿ, ಗೋಮಾಳ ಹಾಗೂ ಸಾರ್ವಜನಿಕ ರಸ್ತೆಗಳನ್ನು ಜೆಎಸ್ಡಬ್ಲ್ಯೂ ಸಂಸ್ಥೆ ಒತ್ತುವರಿ ಮಾಡಿಕೊಂಡಿದೆ ಎಂದು ಸ್ಥಳೀಯ ರೈತರು ಮತ್ತು ಸಾಮಾಜಿಕ ಕಾರ್ಯಕರ್ತರು ಹಲವು ಬಾರಿ ಕಂದಾಯ ಇಲಾಖೆಗೆ ದೂರು ನೀಡಿದ್ದರು. ಕಂಪನಿಯು ನಿಯಮಾವಳಿಗಳನ್ನು ಉಲ್ಲಂಘಿಸಿ ಜಮೀನುಗಳನ್ನು ಬೇಲಿ ಹಾಕಿ ವಶಪಡಿಸಿಕೊಂಡಿದೆ ಎಂಬುದು ಪ್ರತಿಭಟನಾಕಾರರು ಆರೋಪಿಸಿರುವುದನ್ನು ಸ್ಮರಿಸಬಹುದು.




