Thursday | November 19, 2026 |

ಹಣ ಕೊಡದಿದ್ದರೇ ಆಯ್ಕೆಯಾಗಲು ಸಾಧ್ಯವೇ ಇಲ್ಲದಂತ ಸ್ಥಿತಿ ನಿರ್ಮಾಣ; ಪ್ರತಿದಿನ 1 ಲಕ್ಷದಂತೆ ಪಾವತಿ, 50 ಲಕ್ಷಕ್ಕೆ ಬೇಡಿಕೆಯಿಟ್ಟು 40 ಲಕ್ಷಕ್ಕೆ ಚೌಕಾಸಿ ಮಾಡಿ 20 ಲಕ್ಷ ನಗದು ಪಡೆದಿದ್ದ ಗೀತಾ!

ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಗಳಿಂದ ಅಕ್ರಮ ಹಣ ಸಂಗ್ರಹಿಸಲು ಬಸವರಾಜ ಕನ್ನಾಳೆ ಎಂಬಾತ ವ್ಯವಸ್ಥಿತವಾದ ಜಾಲವನ್ನು ರಚಿಸಿದ್ದ. ಹಣ ಕೊಡದಿದ್ದರೇ ಈ ಹುದ್ದೆಗಳಿಗೆ ಆಯ್ಕೆಯಾಗಲು ಸಾಧ್ಯವೇ ಇಲ್ಲ ಎಂಬಂತ ಸ್ಥಿತಿಯನ್ನೂ ಇದೇ ಜಾಲವು ನಿರ್ಮಿಸಿತ್ತು. ಹೀಗಾಗಿ ಅಭ್ಯರ್ಥಿಗಳು ಅನಿವಾರ್ಯವಾಗಿ ಬೇರೆ ದಾರಿಯಿಲ್ಲದೇ ಲಕ್ಷಾಂತರ ರುಪಾಯಿಗಳನ್ನು ಜಾಲವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳಿಗೆ ಪಾವತಿಸಿತ್ತು.

ಹಾಗೆಯೇ ಅಭ್ಯರ್ಥಿಯೊಬ್ಬ  ಪ್ರತಿ ದಿನ 1 ಲಕ್ಷ ರು ನಂತೆ 7 ದಿನಗಳ ಕಾಲ ಯುಪಿಐ ಮೂಲಕ 7 ಲಕ್ಷ ರು ಪಾವತಿಸಿದ್ದ. ಹಾಗೂ ಆಯೋಗದ ಸದಸ್ಯೆ ಗೀತಾ ಶಿವಮೂರ್ತಿ ಅವರು 50 ಲಕ್ಷಕ್ಕೆ ಬೇಡಿಕೆ ಇಟ್ಟು ಆ ನಂತರ ಚೌಕಾಸಿ ಮಾಡಿ ಅದನ್ನು 40 ಲಕ್ಷಕ್ಕೆ ಇಳಿಸಿದ್ದರು. ಈ ರೀತಿ ಅಭ್ಯರ್ಥಿಗಳು ಪಾವತಿಸಿದ್ದ  ಮೊತ್ತವನ್ನು  ಸ್ವೀಕರಿಸಿದ್ದ ತಂಡ ಮತ್ತು ತಂಡದ ಸದಸ್ಯರು, ಪ್ರಶ್ನೆಪತ್ರಿಕೆಗಳ ಎರಡು-ಮೂರು ಸೆಟ್‌ಗಳನ್ನು ನೀಡಿದ್ದರು. ಕೆಲವೊಮ್ಮೆ ನೀಡಿದ್ದ ಪ್ರಶ್ನೆಪತ್ರಿಕೆಗಳನ್ನು ವಾಪಸ್‌ ಪಡೆದು ಸರಿಯಾದ ಉತ್ತರಗಳನ್ನು ಟಿಕ್ ಮಾಡಿದ್ದ ಪತ್ರಿಕೆಗಳನ್ನು ನೀಡುತ್ತಿದ್ದರು.

ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತೀವ್ರವಾದ ತನಿಖೆ ಮಾಡಿದೆ. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ತನಿಖೆಗೊಳಪಡಿಸಿದ್ದ ಜಾರಿ ನಿರ್ದೇಶನಾಲಯವು ಹಲವು ಹೇಳಿಕೆಗಳನ್ನು ಪಡೆದುಕೊಂಡಿದೆ. ಈ ಹೇಳಿಕೆಗಳು, ಇಡೀ  ಹಗರಣವನ್ನು ವಿವಿಧ ಆಯಾಮಗಳಲ್ಲಿ ತೆರೆದಿಟ್ಟಿದೆ.

ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಡಾ ಬಸವರಾಜ ವಡಾರಿ ನೀಡಿದ್ದ ಹೇಳಿಕೆಯಲ್ಲೇನಿದೆ?

ಡಾ ಬಸವರಾಜ್ ವಡಾರಿ ಎಂಬ ಅಭ್ಯರ್ಥಿಯು ಪಿಎಂಎಲ್‌ಎ 20024  ಸೆಕ್ಷನ್‌ 50ರ ಅಡಿಯಲ್ಲಿ  2026ರ ಅಕ್ಟೋಬರ್‍‌ 27ರಂದು ಜಾರಿ ನಿರ್ದೇಶನಾಲಯಕ್ಕೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಪ್ರಕಾರ ಡಾ ಬಸವರಾಜ ವಡಾರಿ ಅವರು 2026ರ ಜನವರಿ 9ರಂದು ನಡೆದಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಿ ಈ ಹುದ್ದೆಗೆ ಆಯ್ಕೆಯಾಗಿದ್ದರು. ಇವರು ಬಸವರಾಜ ಕನ್ನಾಳೆಯನ್ನು ಅವರ  ಆಪ್ತ ಸಹಾಯಕ ಎಂದು ಹೇಳಲಾದ ಪವನ್ ಕುಮಾರ್ ರೆಡ್ಡಿ ಅವರ ಮೂಲಲಕ ಸಂಪರ್ಕಿಸಿದ್ದರು.

ಬೆಂಗಳೂರಿನ ಆರ್ಕಿಡ್ ನಿರ್ವಾಣ ವಿಲ್ಲಾಗಳಲ್ಲಿ ಅವರಿಗೆ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಬಸವರಾಜ ವಡಾರಿ ಅವರಿಗೆ ನೀಡಲಾಗಿತ್ತು. ಅದಕ್ಕಾಗಿ ಅವರು ₹27 ಲಕ್ಷ ಅಕ್ರಮ ಹಣ ಪಾವತಿಸಿದ್ದರು. ಡಾ. ಬಸವರಾಜ್ ವಡಾರಿ ಅವರು 2020ರಲ್ಲಿ ಬೀದರ್‌ನ ಪಶುವೈದ್ಯಕೀಯ ಕಾಲೇಜಿನಿಂದ V.Sc. & A.H. ಪದವಿಯನ್ನು ಪೂರ್ಣಗೊಳಿಸಿದ್ದರು.  ಪ್ರಸ್ತುತ ಕರ್ನಾಟಕ ಸರ್ಕಾರದ ಅಡಿಯಲ್ಲಿ ಆಂಬ್ಯುಲೆನ್ಸ್ ಸೇವೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

 

 

ಬೆಂಗಳೂರಿನ ಯಲಹಂಕದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ (ನೋಂದಣಿ ಸಂಖ್ಯೆ: 24148768) ಹಾಜರಾಗಿದ್ದರು. 600 ಅಂಕಗಳಲ್ಲಿ 443.25 ಅಂಕಗಳನ್ನು ಪಡೆದು RPC ವೃಂದದಲ್ಲಿ 13ನೇ ರ‍್ಯಾಂಕ್ ಗಳಿಸಿದ್ದರು. 2024–25ರ ಅವಧಿಯಲ್ಲಿ Vet Informatics ಮೂಲಕ ಆನ್‌ಲೈನ್ ತರಬೇತಿ ಪಡೆದಿದ್ದರು.

ಅಕ್ರಮ ಹಣ ಪಾವತಿಸದೆ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಆಯ್ಕೆಯಾಗಲು ಸಾಧ್ಯವಿಲ್ಲ ಎಂಬ ವದಂತಿಗಳನ್ನು ಕೇಳಿದ್ದರಿಂದ, ಈ ವಿಷಯವನ್ನು ತಮ್ಮ ಸಹೋದ್ಯೋಗಿ ಡಾ. ಸಿದ್ಧಾರ್ಥ ಅವರೊಂದಿಗೆ ಬಸವರಾಜ್ ವಡಾರಿ ಚರ್ಚಿಸಿದ್ದರು. ಡಾ. ಸಿದ್ಧಾರ್ಥ ಅವರು, ಹುದ್ದೆಗೆ  ಆಯ್ಕೆ ಮಾಡಿಸಿಕೊಡಬಲ್ಲ ವ್ಯಕ್ತಿಯೊಬ್ಬರು ತಮಗೆ ಪರಿಚಯವಿದ್ದಾರೆ ಎಂದು ತಿಳಿಸಿದ್ದರು.  ಹೀಗಾಗಿ ಅವರಿಬ್ಬರೂ ಯಾದಗಿರಿಯಲ್ಲಿ ಸುಮಾರು 26–28 ವರ್ಷ ವಯಸ್ಸಿನ ಪವನ್ ಕುಮಾರ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಡಿಸೆಂಬರ್ ತಿಂಗಳಲ್ಲಿ  ಪವನ್ ಕುಮಾರ್ ರೆಡ್ಡಿ ಅವರು ₹60 ಲಕ್ಷ ಪಾವತಿಸಿದರೆ ಖಚಿತ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ನಂತರ ಈ ಬೇಡಿಕೆಯನ್ನು ಆಯ್ಕೆಯಾದ ಬಳಿಕ ಪಾವತಿಸಬೇಕಾದ ₹30 ಲಕ್ಷಕ್ಕೆ ಇಳಿಸಿದ್ದರು. ಅದಕ್ಕೆ ಅವರು ಒಪ್ಪಿಕೊಂಡಿದ್ದರು ಎಂಬ ವಿವರಣೆಯು ದೋಷಾರೋಪಣೆ ಪಟ್ಟಿಯಲ್ಲಿದೆ.

2026ರ ಜನವರಿ 5ರಂದು  ಪವನ್ ಕುಮಾರ್ ರೆಡ್ಡಿ ಅವರು ವಾಟ್ಸಾಪ್ ಮೂಲಕ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು.  ಅದರಂತೆ, ಕೋಡೆಕಲ್‌ನಿಂದ ಬಸ್‌ನಲ್ಲಿ ಪ್ರಯಾಣಿಸಿದ್ದ ಇವರು 2026ರ ಜನವರಿ 7ರಂದು  ಸುಮಾರು 7:00 ಗಂಟೆಗೆ ಬೆಂಗಳೂರಿಗೆ ತಲುಪಿದ್ದರು. ಡಾ. ರಾಜ್ ಮೊಹಮ್ಮದ್, ಡಾ. ಸಿದ್ಧಾರ್ಥ ಮತ್ತು ಶ್ರೀ ಸಲೀಂ ಒಂಟಿ ಅವರೊಂದಿಗೆ ಮೆಜೆಸ್ಟಿಕ್ ಸಮೀಪದ ಸುಭದ್ರಾ ಲಾಡ್ಜ್‌ನಲ್ಲಿ ತಂಗಿದ್ದರು. 2026ರ ಜನವರಿ 8ರಂದು  ತಮ್ಮ ಮೊಬೈಲ್ ಫೋನ್‌ಗಳನ್ನು ಲಾಡ್ಜ್‌ನಲ್ಲಿಯೇ ಬಿಟ್ಟು, ಹಾಲ್ ಟಿಕೆಟ್‌ಗಳನ್ನು ಮಾತ್ರ ತೆಗೆದುಕೊಂಡು ಬರಬೇಕೆಂದು  ಪವನ್ ಕುಮಾರ್ ರೆಡ್ಡಿ ಅವರು ತಮಗೆ, ಡಾ. ರಾಜ್ ಮೊಹಮ್ಮದ್ ಮತ್ತು ಡಾ. ಸಿದ್ಧಾರ್ಥ ಅವರಿಗೆ ಸೂಚಿಸಿದ್ದರು ಎಂಬ ಸಂಗತಿಯನ್ನು ವಡಾರಿ ಅವರು ತನಿಖಾಧಿಕಾರಿಗೆ ಮಾಹಿತಿ ನೀಡಿರುವುದು ಗೊತ್ತಾಗಿದೆ.

ಸಂಜೆ ಸುಮಾರು 4:00 ಗಂಟೆಗೆ  ಪವನ್ ಕುಮಾರ್ ರೆಡ್ಡಿ ಅವರು ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಅವರನ್ನು ಕರೆದುಕೊಂಡು ಹೋಗಿದ್ದರು.  ಅವರೊಂದಿಗೆ ಡಾ. ನಿರಂಜನ್ ಪಾಟೀಲ್, ಡಾ. ಮಹೇಂದ್ರ ಮತ್ತು ಡಾ. ಅಮರೇಗೌಡ ಕೂಡ ಇದ್ದರು. ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ, ಸಂಜೆ ಸುಮಾರು 6:00 ಗಂಟೆಗೆ ಬೆಂಗಳೂರಿನ ಆರ್ಕಿಡ್ ನಿರ್ವಾಣ ಹೌಸಿಂಗ್ ಸೊಸೈಟಿಗೆ ತಲುಪಿದರು. ಅಲ್ಲಿಂದ ಅವರನ್ನು ವಿಲ್ಲಾವೊಂದಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಬಸವರಾಜ್ ಕನ್ನಾಳೆ ಅವರನ್ನು ಭೇಟಿಯಾಗಿದ್ದರು ಎಂದು ವಡಾರಿ ಅವರು ವಿವರಿಸಿರುವುದು ತಿಳಿದು ಬಂದಿದೆ.

ಗುರುತು ತಿಳಿಯದ ವ್ಯಕ್ತಿಯೊಬ್ಬರು ಮೆಟಲ್ ಡಿಟೆಕ್ಟರ್ ಮೂಲಕ ಇವರನ್ನೆಲ್ಲಾ ತಪಾಸಣೆ ಮಾಡಿದ್ದರು.  ಪ್ರಶ್ನೆಪತ್ರಿಕೆಗಳನ್ನು ನೀಡಲಾಗುತ್ತದೆ ಮತ್ತು ಸರಿಯಾದ ಉತ್ತರಗಳನ್ನು ಮಾತ್ರ ಕಂಠಪಾಠ ಮಾಡಬೇಕು ಎಂದು  ಬಸವರಾಜ್ ಕನ್ನಾಳೆ ಅವರಿಗೆ ತಿಳಿಸಿದ್ದರು.  ಸಾಮಾನ್ಯ ಅಧ್ಯಯನ ಪತ್ರಿಕೆ-Iಯ ಸುಮಾರು 70–80 ಬಹು ಆಯ್ಕೆಯ ಪ್ರಶ್ನೆಗಳಿದ್ದ ಮುದ್ರಿತ ಪ್ರತಿಗಳನ್ನು ಅಭ್ಯರ್ಥಿಗಳ ನಡುವೆ ಹಂಚಲಾಗಿತ್ತು. ಅವುಗಳಲ್ಲಿ ಸರಿಯಾದ ಉತ್ತರಗಳನ್ನು ಪೆನ್ಸಿಲ್‌ನಿಂದ ಗುರುತಿಸಲಾಗಿತ್ತು. ಊಟದ ನಂತರ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿದ್ದ ನಿರ್ದಿಷ್ಟ ವಿಷಯದ ಪತ್ರಿಕೆ-IIಯ ಸುಮಾರು 70–80 ಪ್ರಶ್ನೆಗಳ ಮತ್ತೊಂದು ಸೆಟ್ ಅನ್ನು ನೀಡಲಾಗಿತ್ತು ಎಂದು ವಡಾರಿ ಅವರು ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

2026ರ ಜನವರಿ 9ರಂದು ಬೆಳಿಗ್ಗೆ, ಪವನ್ ಕುಮಾರ್ ರೆಡ್ಡಿ ಅವರು ಅಭ್ಯರ್ಥಿಗಳನ್ನು ಅವರವರ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ದು ಬಿಟ್ಟಿದ್ದರು. ವಿಲ್ಲಾದಲ್ಲಿ ನೀಡಲಾಗಿದ್ದ ಅದೇ ಪ್ರಶ್ನೆಗಳು ನೈಜ ಪರೀಕ್ಷೆಯಲ್ಲಿ  ಬಂದಿದ್ದವು. ಪರೀಕ್ಷೆ ಮುಗಿದ ಸುಮಾರು ನಾಲ್ಕು ದಿನಗಳ ನಂತರ,  ಪವನ್ ಕುಮಾರ್ ರೆಡ್ಡಿ ಅವರು ಹಣಕ್ಕಾಗಿ ಬೆನ್ನೆತ್ತಿದ್ದರು.  ಒಪ್ಪಿಕೊಂಡಿದ್ದ ಹಣವನ್ನು ಪಾವತಿಸುವಂತೆ ಕೇಳಿದ್ದರು. ಅದರಂತೆ, 2026ರ ಜನವರಿ ಮತ್ತು ಫೆಬ್ರವರಿ ತಿಂಗಳ ನಡುವೆ  ಪವನ್ ಕುಮಾರ್ ರೆಡ್ಡಿ ಅವರು ನೀಡಿದ್ದ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿರುವ M/s ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಖಾತೆಗೆ ಬ್ಯಾಂಕಿಂಗ್ ಮಾರ್ಗಗಳ ಮೂಲಕ ಒಟ್ಟು ₹27 ಲಕ್ಷ ಪಾವತಿಸಿದ್ದರು.

2026ರ ಜನವರಿ 12ರಂದು 10 ಲಕ್ಷ, ಜನವರಿ 19ರಂದು 10 ಲಕ್ಷ ಮತ್ತು ಏಳು ದಿನಗಳ ಕಾಲ ಪ್ರತಿ ದಿನ 1 ಲಕ್ಷದಂತೆ ಯುಪಿಐ ಮೂಲಕ 7 ಲಕ್ಷ ಪಾವತಿಸಿದ್ದರು. ಅಲ್ಲದೇ ವಡಾರಿ ಅವರು ಒಟ್ಟಾರೆ 27 ಲಕ್ಷದ ವಹಿವಾಟಿನ ವಿವರಗಳನ್ನು ತನಿಖಾಧಿಕಾರಿಗೆ ಒದಗಿಸಿರುವುದು ತಿಳಿದು ಬಂದಿದೆ.

ತಮ್ಮ OMR ಉತ್ತರ ಪತ್ರಿಕೆಯನ್ನು ಈಗಾಗಲೇ ಸಿಐಡಿಗೆ ಸಲ್ಲಿಸಿದ್ದರಿಂದ, ಅದರ ಬೇರೆ ಯಾವುದೇ ಪ್ರತಿ ಅವರ ಬಳಿ ಇರಲಿಲ್ಲ. ಗುರುತಿಸುವಿಕೆಗಾಗಿ ಛಾಯಾಚಿತ್ರಗಳನ್ನು ತೋರಿಸಿದಾಗ,  ಬಸವರಾಜ್ ಕನ್ನಾಳೆ ಅವರನ್ನು ಗುರುತಿಸಿದರು. ಈ ಹಿಂದೆ ಕನ್ನಾಳೆ ಅವರನ್ನು ವಡಾರಿ  ಭೇಟಿಯಾಗಿರಲಿಲ್ಲ.  ಮತ್ತು ಅವರ ಬಂಧನದ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಗಳ ಮೂಲಕವೇ ಅವರನ್ನು ಗುರುತಿಸಿದ್ದನ್ನು ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು ಗೊತ್ತಾಗಿದೆ.

 

 

ಪಿಎಂಎಲ್‌ 2002ರ ಸೆಕ್ಷನ್‌ 50 ರ ಅಡಿಯಲ್ಲಿ ದಾಖಲಿಸಲಾಗಿರುವ ಡಾ. ಬಸವರಾಜ್ ವಡಾರಿ ಅವರ ಮೇಲಿನ ಹೇಳಿಕೆಯಿಂದ, ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಖಚಿತ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿ, ಡಾ. ಸಿದ್ಧಾರ್ಥ ಮತ್ತು  ಪವನ್ ಕುಮಾರ್ ರೆಡ್ಡಿ ಅವರ ಮೂಲಕ ಅವರನ್ನು ಸಂಪರ್ಕಿಸಲಾಗಿತ್ತು ಮತ್ತು ₹30 ಲಕ್ಷ ಅಕ್ರಮ ಹಣ ಪಾವತಿಸಲು ಅವರು ಒಪ್ಪಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಿದೆ.

‘ಅವರ ಹೇಳಿಕೆಯು  ಬಸವರಾಜ್ ಕನ್ನಾಳೆ ಅವರ ಹೇಳಿಕೆಯನ್ನು ದೃಢಪಡಿಸುತ್ತದೆ. ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದ್ದ 10 ಅಭ್ಯರ್ಥಿಗಳಲ್ಲಿ ಡಾ. ಬಸವರಾಜ್ ವಡಾರಿ ಅವರ ಹೆಸರನ್ನೂ ಮತ್ತು  ಪವನ್ ಕುಮಾರ್ ರೆಡ್ಡಿ ಅವರ ಮೂಲಕ ಪರಿಚಯಿಸಲಾದ ಆರು ಅಭ್ಯರ್ಥಿಗಳಲ್ಲಿಯೂ ಅವರ ಹೆಸರನ್ನೂ  ಬಸವರಾಜ್ ಕನ್ನಾಳೆ ಉಲ್ಲೇಖಿಸಿದ್ದರು. ಅಲ್ಲದೆ, ಈ ಅಭ್ಯರ್ಥಿಗಳಿಂದ ಬಂದ ₹70 ಲಕ್ಷ ಹಣವನ್ನು M/s ಓಂ ಲಕ್ಷ್ಮೀ ಸಂಸ್ಥೆಯ ಖಾತೆಯಲ್ಲಿ ಸ್ವೀಕರಿಸಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದರು,’ ಎಂದು ಜಾರಿ ನಿರ್ದೇಶನಾಲಯವು  ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಹೀಗಾಗಿ  ಡಾ. ಬಸವರಾಜ್ ವಡಾರಿ ಅವರು ಸೋರಿಕೆಯಾದ ಪ್ರಶ್ನೆಪತ್ರಿಕೆಯ ಮೂಲಕ ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ ಮತ್ತು ಅವರಿಂದ ಸಂಗ್ರಹಿಸಲಾದ ₹27 ಲಕ್ಷದ ಅಕ್ರಮ ಹಣವು ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಆದಾಯದ ಭಾಗವಾಗಿದೆ.  M/s ಓಂ ಲಕ್ಷ್ಮೀ ಸಂಸ್ಥೆಯ ಖಾತೆಯ ಮೂಲಕ ವರ್ಗಾಯಿಸಲಾಗಿದೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಹೇಳಿದೆ.

ಬಸವರಾಜ ಬಳಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗೀತಾ ಶಿವಮೂರ್ತಿ

ಇದೇ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಡಾ ನಂದೀಶ್‌ ಬಿ ಎಂಬಾತನ ತಂದೆ ಬಸವರಾಜ ಅವರನ್ನೂ ತನಿಖೆಗೊಳಪಡಿಸಿತ್ತು. ಇವರು 2026ರ ಸೆ.28ರಂದು ಹೇಳಿಕೆ ನೀಡಿದ್ದರು.  ತಮ್ಮ ಮಗನಿಗೆ ಖಚಿತ ಆಯ್ಕೆ ಮಾಡಿಸಿಕೊಡಲು ಆಯೋಗದ ಸದಸ್ಯೆ  ಬಿ.ವಿ. ಗೀತಾ ಶಿವಮೂರ್ತಿ ಅವರು ₹40 ಲಕ್ಷ ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ₹20 ಲಕ್ಷವನ್ನು ಮುಂಗಡವಾಗಿ ಸ್ವೀಕರಿಸಲಾಗಿತ್ತು.

ಡಾ. ನಂದೀಶ್ ಬಿ. ಭದ್ದೂರ್ಗಟ್ಟೆ ಅವರು ಪ್ರಸ್ತುತ ಕೇರಳದಲ್ಲಿ V.Sc. ವ್ಯಾಸಂಗ ಮಾಡುತ್ತಿದ್ದು, ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.  ಬಿ.ವಿ. ಗೀತಾ ಅವರಿಗೆ ಹಣ ಪಾವತಿಸಿದ ವಿಚಾರ ಮತ್ತು ಅವರನ್ನು ಭೇಟಿಯಾಗಿದ್ದ ಕುರಿತು ತನಿಖಾಧಿಕಾರಿಯು ಪ್ರಶ್ನಿಸಿದ್ದರು.  ತಾವು ಅವರನ್ನು ಖುದ್ದಾಗಿ ಎಂದಿಗೂ ಭೇಟಿಯಾಗಿರಲಿಲ್ಲ. ಆದರೆ ವಾಟ್ಸಾಪ್ ಮೂಲಕ ಹಲವು ಬಾರಿ ಮಾತನಾಡಿದ್ದರು.

 

 

ಬಿ.ವಿ. ಗೀತಾ ಅವರು ಆರಂಭದಲ್ಲಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮಾತುಕತೆಯ ನಂತರ ಆ ಮೊತ್ತವನ್ನು ₹40 ಲಕ್ಷಕ್ಕೆ ಇಳಿಸಲಾಗಿತ್ತು. 2026ರ ಜನವರಿ 8ರಂದು ಅವರು ಕರೆ ಮಾಡಿ, ತಮ್ಮ ಮಗನನ್ನು ಹಣದೊಂದಿಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯ ರಾಜಮಹಲ್ ವಿಲಾಸ್ ಕ್ಲಬ್ ಸಮೀಪದ ಸ್ಥಳವೊಂದಕ್ಕೆ ಕಳುಹಿಸುವಂತೆ ತಿಳಿಸಿದ್ದರು. ತಮ್ಮ ಮಗನು ರಾಜಮಹಲ್ ವಿಲಾಸ್ ಕ್ಲಬ್‌ನಲ್ಲಿ ಬಿ.ವಿ. ಗೀತಾ ಅವರಿಗೆ ನೇರವಾಗಿ ₹20 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ಹಸ್ತಾಂತರಿಸಿದ್ದನು. ಉಳಿದ ₹20 ಲಕ್ಷವನ್ನು ನೇಮಕಾತಿ ಆದೇಶ ಪತ್ರ ಸ್ವೀಕರಿಸಿದ ನಂತರ ಪಾವತಿಸಬೇಕಾಗಿತ್ತು. ಆದರೆ ತಮ್ಮ ಹೇಳಿಕೆ ದಾಖಲಿಸಿದ ದಿನಾಂಕದವರೆಗೆ ಆ ಹಣವನ್ನು ಪಾವತಿಸಿರಲಿಲ್ಲ ಎಂದು ವಿವರಿಸಿದ್ದಾರೆ.

ಬಿ.ವಿ. ಗೀತಾ ಅವರಿಗೆ ಪಾವತಿಸಿದ ₹20 ಲಕ್ಷದ ಮೂಲದ ಕುರಿತು ಬಸವರಾಜ ಅವರು ವಿವರಿಸಿದ್ದಾರೆ.  ತಮ್ಮ ಬಳಿ ಈಗಾಗಲೇ ಇದ್ದ ಸುಮಾರು ₹3 ಲಕ್ಷ ನಗದು,  ಸ್ಥಿರ ಠೇವಣಿಯನ್ನು (Fixed Deposit) ನಗದೀಕರಿಸುವ ಮೂಲಕ ಪಡೆದ ಸುಮಾರು ₹6 ಲಕ್ಷ.  ಉಳಿದ ಸುಮಾರು ₹11 ಲಕ್ಷವನ್ನು ಸಂಬಂಧಿಕರು ಮತ್ತು ಸ್ನೇಹಿತರಿಂದ ಸಾಲವಾಗಿ ಪಡೆದಿದ್ದರು ಎಂದು ವಿವರಿಸಿರುವುದು ತಿಳಿದು ಬಂದಿದೆ.

ಪಿಎಂಎಲ್‌ಎ 2002ರ ಸೆಕ್ಷನ್‌ 50ರ ಅಡಿಯಲ್ಲಿ   ದಾಖಲಿಸಲಾದ ಬಸವರಾಜಪ್ಪ ಬಿ.ಸಿ. ಅವರ ಮೇಲಿನ ಹೇಳಿಕೆಯಿಂದ, ತಮ್ಮ ಮಗ ಡಾ. ನಂದೀಶ್ ಬಿ. ಭದ್ದೂರ್ಗಟ್ಟೆ ಅವರಿಗೆ ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಆಯ್ಕೆ ಮಾಡಿಸಿಕೊಡಲು ಬಿ..ವಿ. ಗೀತಾ ಅವರಿಗೆ ₹40 ಲಕ್ಷ ಅಕ್ರಮ ಹಣ ಪಾವತಿಸಲು ಅವರು ಒಪ್ಪಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಹೇಳಿದೆ.

 

 

‘ಹೀಗಾಗಿ ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ ಸಂಬಂಧಿಸಿದಂತೆ ಬಿ.ವಿ. ಗೀತಾ ಅವರು ಶ್ರೀ ಬಸವರಾಜಪ್ಪ ಬಿ.ಸಿ. ಅವರಿಂದ ₹20 ಲಕ್ಷ ನಗದು ಅಕ್ರಮ ಹಣವನ್ನು ಸ್ವೀಕರಿಸಿದ್ದಾರೆ ಮತ್ತು ಈ ಮೊತ್ತವು KPSC ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಆದಾಯದ ಭಾಗವಾಗಿದೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ,’ ಎಂದು ಹೇಳಿದೆ.

ಚೈತ್ರಾ ಅವರ ಹೇಳಿಕೆಯಲ್ಲೇನಿದೆ?

ಡಾ. ಚೈತ್ರಾ ಎಚ್.ಎಲ್. ಅವರು 2026ರ ಜನವರಿ 9ರಂದು ಕೆಪಿಎಸ್‌ಸಿ ನಡೆಸಿದ್ದ   ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಿ 10ನೇ ರ‍್ಯಾಂಕ್ ಪಡೆದಿದ್ದರು. ಲಂಚದ ಮೂಲಕ ಖಚಿತ ಆಯ್ಕೆ ಮಾಡಿಸುವುದಾಗಿ ಡಾ. ಕಿರಣ್ ಗೌಡ ಬಿ.ಎಸ್. ಅವರ ಮೂಲಕ ಡಾ ಚೈತ್ರಾ  ಅವರನ್ನು ಸಂಪರ್ಕಿಸಲಾಗಿತ್ತು. ಬೆಂಗಳೂರಿನ ಆರ್ಕಿಡ್ ನಿರ್ವಾಣದಲ್ಲಿ ಅವರಿಗೆ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ನೀಡಲಾಗಿತ್ತು.  ಡಾ. ಚೈತ್ರಾ ಎಚ್.ಎಲ್. ಅವರು ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಿಂದ V.Sc. ಪದವಿಯನ್ನು ಮತ್ತು ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಿಂದ 2021ರಲ್ಲಿ M.V.Sc. ಪದವಿಯನ್ನು ಪೂರ್ಣಗೊಳಿಸಿರುವುದು ಹೇಳಿಕೆಯಿಂದ ತಿಳಿದು ಬಂದಿದೆ.

 

 

ಪ್ರಸ್ತುತ ಅವರು ಸಿರಾ ತಾಲ್ಲೂಕಿನ ಬುಕ್ಕಾಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಪಶುವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2026ರ ಜನವರಿ 9ರಂದು  ಬೆಂಗಳೂರಿನ ಯಲಹಂಕದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ (ನೋಂದಣಿ ಸಂಖ್ಯೆ: 241418099) ಹಾಜರಾಗಿ 10ನೇ ರ‍್ಯಾಂಕ್ ಪಡೆದಿದ್ದಾರೆ.  M/s Vet Informatics ಮೂಲಕ ಆನ್‌ಲೈನ್ ತರಬೇತಿ ಪಡೆದಿದ್ದರು. 2026ರ ಜನವರಿ 7ರಂದು ತುಮಕೂರು ಜಿಲ್ಲೆಯ ಸಿರಾದಿಂದ ಪ್ರಯಾಣಿಸಿ, ಮರಪ್ಪನ ಪಾಳ್ಯದಲ್ಲಿರುವ ತಮ್ಮ ಸಹೋದರಿಯ ಮನೆಯಲ್ಲಿ ತಂಗಿದ್ದರು.

ಯಾರಾದರೂ ತಮ್ಮನ್ನು ಪರೀಕ್ಷೆಯಲ್ಲಿ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿದ್ದರೇ ಎಂದು ತನಿಖಾಧಿಕಾರಿಯು ಪ್ರಶ್ನಿಸಿದ್ದರ.  2021–22ರಿಂದ ಕಿರಿಯ ಪಶುವೈದ್ಯಾಧಿಕಾರಿಯಾಗಿರುವ ಡಾ. ಕಿರಣ್ ಗೌಡ ಬಿ.ಎಸ್. ಅವರು ತಮಗೆ ಪರಿಚಯವಿದ್ದಾರೆ ಎಂದು ತಿಳಿಸಿದ್ದರು.  2025ರ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ, ಕೆಲವು ವ್ಯಕ್ತಿಗಳು ಅಕ್ರಮ ಹಣ ಪಡೆದು ಆಯ್ಕೆ ಮಾಡಿಸುವುದಾಗಿ ತಮ್ಮನ್ನು ಸಂಪರ್ಕಿಸಿದ್ದಾರೆ.  ಮತ್ತು ಆಸಕ್ತ ಅಭ್ಯರ್ಥಿಗಳನ್ನು ಪರಿಚಯಿಸುವಂತೆ ಕೇಳಿದ್ದಾರೆ ಎಂದು ಡಾ. ಕಿರಣ್ ಗೌಡ ಬಿ.ಎಸ್. ಅವರು ಡಾ ಚೈತ್ರಾ ಅವರಿಗೆ ಹೇಳಿದ್ದರು ಎಂಬ ಸಂಗತಿಯು ದೋಷಾರೋಪಣೆ ಪಟ್ಟಿಯಲ್ಲಿ ಪ್ರಸ್ತಾಪವಾಗಿದೆ.

ಖಚಿತ ಆಯ್ಕೆ ಮಾಡಿಸಲು ₹40 ಲಕ್ಷ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದರು. ಆದರೆ ಹಣದ ಕೊರತೆಯಿಂದ ತಾವು ಅದನ್ನು ನಿರಾಕರಿಸಿದ್ದರು. ನಂತರ ಬೇಡಿಕೆಯ ಮೊತ್ತವನ್ನು ₹25 ಲಕ್ಷಕ್ಕೆ ಇಳಿಸಲಾಗಿದೆ ಮತ್ತು ಮಹಿಳಾ ಮೀಸಲಾತಿ ವರ್ಗದಡಿ ಆಯ್ಕೆ ಮಾಡಿಸಬಹುದು ಎಂದು ಡಾ. ಕಿರಣ್ ಗೌಡ ತಿಳಿಸಿದ್ದರು. 2026ರ ಜನವರಿ 7ರಂದು  ಡಾ. ಕಿರಣ್ ಗೌಡ ಬಿ.ಎಸ್. ಅವರು 2026ರ ಜನವರಿ 8ರಂದು  ಮಧ್ಯಾಹ್ನ 2:30 ಗಂಟೆಗೆ ಬೆಂಗಳೂರಿನ ಯಶವಂತಪುರ ಬಸ್ ನಿಲ್ದಾಣದಲ್ಲಿ ಕಾಯುವಂತೆ ತಿಳಿಸಿದ್ದರು.  ಗುರುತಿನ ಚೀಟಿ ಮತ್ತು ಬಟ್ಟೆಗಳೊಂದಿಗೆ ತಾವು ಅಲ್ಲಿಗೆ ತಲುಪಿದ್ದರು. ಡಾ. ಕಿರಣ್ ಗೌಡ ಬಿ.ಎಸ್. ಅವರು ತಮ್ಮ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು, ಅದನ್ನು ಸಂಬಂಧಿಕರ ಮನೆಯಲ್ಲಿ ಇಡುವುದಾಗಿ ಹೇಳಿ ಅಲ್ಲಿಂದ ತೆರಳಿದ್ದರು.

ಮಧ್ಯಾಹ್ನ ಸುಮಾರು 3:00 ಗಂಟೆಗೆ ಗುರುತು ತಿಳಿಯದ ವ್ಯಕ್ತಿಯೊಬ್ಬರು ಕಾರಿನಲ್ಲಿ ಅಲ್ಲಿಗೆ ಬಂದರು. ಆ ಕಾರಿನಲ್ಲಿ ತಾವು ಮತ್ತು ಡಾ. ಕಿರಣ್ ಗೌಡ ಬಿ.ಎಸ್. ಅವರು ಸುಮಾರು 30–40 ನಿಮಿಷ ಪ್ರಯಾಣಿಸಿ ಆರ್ಕಿಡ್ ನಿರ್ವಾಣ ಹೌಸಿಂಗ್ ಸೊಸೈಟಿಗೆ ತಲುಪಿದ್ದರು.  ಅಲ್ಲಿನ ತಪಾಸಣಾ ಸ್ಥಳದಿಂದ ಸುಮಾರು 50–100 ಮೀಟರ್ ಒಳಗಿದ್ದ ಕಾಟೇಜ್ ಒಂದಕ್ಕೆ ಚಾಲಕನೊಂದಿಗೆ ಮಾತ್ರ ತಮ್ಮನ್ನು ಕರೆದೊಯ್ಯಲಾಗಿತ್ತು.  ಸುಮಾರು ಎರಡು ಗಂಟೆಗಳ ಕಾಲ ಕಾಯಿಸಿದ ನಂತರ, ಗುರುತು ತಿಳಿಯದ ವ್ಯಕ್ತಿಯೊಬ್ಬರು ಸಾಮಾನ್ಯ ಪತ್ರಿಕೆಯ ಸುಮಾರು 70–80 ಪ್ರಶ್ನೆಗಳಿದ್ದ ಒಂದು ಸೆಟ್ ಅನ್ನು ನೀಡಿದ್ದರು. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿದ್ದು, ಸರಿಯಾದ ಉತ್ತರವನ್ನು ಗುರುತಿಸಲಾಗಿತ್ತು. ಅವುಗಳನ್ನು ಕಂಠಪಾಠ ಮಾಡುವಂತೆ ಸೂಚಿಸಲಾಗಿತ್ತು.

30–40 ನಿಮಿಷಗಳ ನಂತರ ಆ ಪ್ರಶ್ನೆಪತ್ರಿಕೆಗಳನ್ನು ಹಿಂದಕ್ಕೆ ಪಡೆದು, ಸರಿಯಾದ ಉತ್ತರಗಳನ್ನು ಟಿಕ್ ಮಾಡಲಾಗಿದ್ದ ಪಶುವೈದ್ಯಕೀಯ ನಿರ್ದಿಷ್ಟ ವಿಷಯದ ಪತ್ರಿಕೆಯ ಸುಮಾರು 70–80 ಪ್ರಶ್ನೆಗಳ ಮತ್ತೊಂದು ಸೆಟ್ ಅನ್ನು ನೀಡಲಾಗಿತ್ತು. ಅದನ್ನೂ 30–40 ನಿಮಿಷಗಳ ನಂತರ ಹಿಂದಕ್ಕೆ ಪಡೆಯಲಾಗಿತ್ತು.

ಪ್ರಶ್ನೆಪತ್ರಿಕೆಗಳ ಸ್ವರೂಪವನ್ನು ವಿವರಿಸುವಂತೆ ತನಿಖಾಧಿಕಾರಿ ಕೇಳಿದ್ದರು. ಪ್ರತಿ ಸೆಟ್‌ನಲ್ಲಿಯೂ ಸುಮಾರು 70–80 ನಿರಂತರ ಪ್ರಶ್ನೆಗಳಿದ್ದು, ಪ್ರತಿ ಪ್ರಶ್ನೆಯ ಕೆಳಗೆ ನಾಲ್ಕು ಆಯ್ಕೆಗಳಿದ್ದವು ಮತ್ತು ಸರಿಯಾದ ಉತ್ತರವನ್ನು ಗುರುತಿಸಲಾಗಿತ್ತು ಎಂದು ತಿಳಿಸಿದರು. ಪ್ರಶ್ನೆಗಳ ನಡುವೆ ಯಾವುದೇ ವಿರಾಮಗಳಿರಲಿಲ್ಲ.

 

 

ಅಕ್ರಮ ಹಣದ ಮೂಲಕ ಆಯ್ಕೆ ಮಾಡಿಸುವುದಾಗಿ ಡಾ. ಕಿರಣ್ ಗೌಡ ಬಿ.ಎಸ್. ಅವರನ್ನು ಸಂಪರ್ಕಿಸಿದ್ದ ವ್ಯಕ್ತಿಯ ಕುರಿತು ತನಿಖಾಧಿಕಾರಿಯು ಕೇಳಿದ್ದಾಗ ಸಿಐಡಿ ತನಿಖೆಯ ಸಂದರ್ಭದಲ್ಲಿ ಅದು  ಬಸವರಾಜ್ ಕನ್ನಾಳೆ ಎಂದು ಡಾ. ಕಿರಣ್ ಗೌಡ ಬಿ.ಎಸ್. ತಮಗೆ ತಿಳಿಸಿದ್ದರು. ಆ ವ್ಯಕ್ತಿಯನ್ನು ಈ ಹಿಂದೆ ತಾವು ತಿಳಿದಿರಲಿಲ್ಲ. ಆದರೆ ಸುದ್ದಿ ವಾಹಿನಿಗಳಲ್ಲಿ ಬಂದ ವರದಿಗಳ ಮೂಲಕ ಅವರು  ಬಸವರಾಜ್ ಕನ್ನಾಳೆ ಎಂದು ಗುರುತಿಸಿದ್ದಾಗಿ ತಿಳಿಸಿದರು.

ಡಾ. ಕಿರಣ್ ಗೌಡ ಬಿ.ಎಸ್. ಅವರು ತಮಗೆ ತಿಳಿಸಿದ ಪ್ರಕಾರ, ಅಭ್ಯರ್ಥಿಗಳಿಂದ ₹25 ಲಕ್ಷ ಅಕ್ರಮ ಹಣ ಪಡೆದು ಅವರನ್ನು ಆಯ್ಕೆ ಮಾಡಿಸುವ ವ್ಯವಸ್ಥೆ ಮಾಡಲು ಕನ್ನಾಳೆ ಅವರನ್ನು ಸಂಪರ್ಕಿಸಿದ್ದರು ಎಂದು ಪುನರುಚ್ಚರಿಸಿದರು.

 

 

ಮೊಬೈಲ್ ಫೋನ್ ಇಲ್ಲದೆ ಅವರನ್ನು ದೇವನಹಳ್ಳಿಯ ಆರ್ಕಿಡ್ ನಿರ್ವಾಣಕ್ಕೆ ಕರೆದೊಯ್ಯಲಾಗಿತ್ತು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಉದ್ದೇಶದಿಂದ ಕಂಠಪಾಠ ಮಾಡಲು ಸರಿಯಾದ ಉತ್ತರಗಳನ್ನು ಗುರುತಿಸಲಾಗಿದ್ದ ಸೋರಿಕೆಯಾದ ಸಾಮಾನ್ಯ ಮತ್ತು ನಿರ್ದಿಷ್ಟ ವಿಷಯದ ಪ್ರಶ್ನೆಪತ್ರಿಕೆಗಳನ್ನು ಅವರಿಗೆ ನೀಡಲಾಗಿತ್ತು. ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದ್ದ 10 ಅಭ್ಯರ್ಥಿಗಳಲ್ಲಿ ಡಾ. ಚೈತ್ರಾ ಎಚ್.ಎಲ್. ಅವರ ಹೆಸರನ್ನೂ  ಬಸವರಾಜ್ ಕನ್ನಾಳೆ ಅವರು ಉಲ್ಲೇಖಿಸಿದ್ದರು. ಅವರ ಹೇಳಿಕೆಯು ಇದನ್ನು ದೃಢಪಡಿಸುತ್ತದೆ ಎಂದು ಜಾರಿ ನಿರ್ದೇಶನಾಲಯವು ವಿವರಿಸಿದೆ.

Hot this week

ಗಂಗ್ವಾರ್‍‌ರಿಂದ ಪ್ರಶ್ನೆಪತ್ರಿಕೆ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಹಂಚಿಕೆ; ಗಂಗ್ವಾರ್ ಬಳಕೆಗಾಗಿ ಖಾತೆ, ಕನ್ನಾಳೆಯಿಂದಲೇ ನಿರ್ವಹಣೆ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್ ಗಂಗ್ವಾರ್...

ಮನೆಯಲ್ಲಿ ವಾಸಿಸದಿದ್ದರೂ ಬಾಡಿಗೆದಾರ, ಪುತ್ರಿಯ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸಿದ್ದ ಸಾಹುಕಾರ್; ಸದಸ್ಯೆ ಗೀತಾ ಹೇಳಿಕೆಯಲ್ಲಿದೆ ಕುತೂಹಲಕರ ಸಂಗತಿ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗವು 2026ರ ಜನವರಿಯಲ್ಲಿ  ನಡೆಸಿದ್ದ ಪಶು ವೈದ್ಯಾಧಿಕಾರಿಗಳ...
Please Scan to make Your Contribution

Topics

ಗಂಗ್ವಾರ್‍‌ರಿಂದ ಪ್ರಶ್ನೆಪತ್ರಿಕೆ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಹಂಚಿಕೆ; ಗಂಗ್ವಾರ್ ಬಳಕೆಗಾಗಿ ಖಾತೆ, ಕನ್ನಾಳೆಯಿಂದಲೇ ನಿರ್ವಹಣೆ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್ ಗಂಗ್ವಾರ್...

ರಾಷ್ಟ್ರೀಯ ವಿದ್ಯಾರ್ಥಿ ವೇತನ; ಕೊನೆ ದಿನಾಂಕ ಸಮೀಪಿಸಿದರೂ ರಾಜ್ಯದ 2,418 ಶಾಲೆಗಳ ಒಟ್ಟು 6,991 ಅರ್ಜಿಗಳು ಪರಿಶೀಲನೆಗೆ ಬಾಕಿ

ಬೆಂಗಳೂರು; ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ...

Related Articles

Popular Categories

error: Content is protected !!