Saturday | November 21, 2026 |

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು ಅವರ ಪೋಷಕರು ನೇರವಾಗಿ  ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿದ್ದರು. ಅವರ ಸೂಚನೆಯಂತೆ ಹೋಟೆಲ್‌ ಕೊಠಡಿಯಲ್ಲಿ ಮಾತುಕತೆ ನಡೆದಿತ್ತು. ಆ ನಂತರ ಶಿವಶಂಕರಪ್ಪ ಸಾಹುಕಾರ್ ಅವರ ಕಡೆಯವನು ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೋರ್ವ, ಅಂಗೈ ಗಾತ್ರದ ಎರಡು ಚೀಟಿಗಳಲ್ಲಿ  ತಲಾ 10 ಸರಿಯಾದ ಉತ್ತರಗಳ ಸಾಲುಗಳನ್ನು ನೀಡಿದ್ದ.!

ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ವಿವಿಧ ಸ್ವರೂಪದ ಅಕ್ರಮ ಮತ್ತು ಹಣಕಾಸಿನ ವಹಿವಾಟುಗಳ ಹಿಂದಿನ ಹಲವು ರಹಸ್ಯಗಳ ಸರಮಾಲೆಯನ್ನು ಜಾರಿ ನಿರ್ದೇಶನಾಲಯವು ಬಯಲು ಮಾಡಿದೆ. ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಕೆಪಿಎಸ್‌ಸಿ 2026ರ ಜನವರಿ 8ರಂದು ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ಡಾ ವಿನುತಾ ಮಲ್ಲಪ್ಪ ಹಿತ್ತಲಮನಿ ಅವರು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಯು ಕುತೂಹಲಕರ ಸಂಗತಿಗಳನ್ನು  ಅನಾವರಣ ಮಾಡಿದೆ.

ಸಾಹುಕಾರ್ ನಿವಾಸದಲ್ಲಿ ನೇರ ಭೇಟಿ

ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಅವರು ಗೋಕಾಕ್‌ನ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪಶುವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ವಾರ್ಷಿಕ ಆದಾಯ ಸುಮಾರು ₹6–7 ಲಕ್ಷಗಳಾಗಿದೆ. ಅವರು ಈ ಹಿಂದೆ ಡಿಸೆಂಬರ್ 2024ರಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿದ್ದರು, ಆದರೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಆದರೆ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಿ ಆಯ್ಕೆಯಾಗಿದ್ದರು. ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ 600 ಅಂಕಗಳಿಗೆ 486.75 ಅಂಕಗಳನ್ನು ಗಳಿಸಿದ್ದರು (KPSC ನೋಂದಣಿ ಸಂಖ್ಯೆ: 241418058).

ವಿನುತಾ ಮತ್ತು ಅವರ ತಂದೆ ಬೆಂಗಳೂರಿಗೆ ಬಂದು ಯಲಹಂಕದ ಹೋಟೆಲ್ ಸಿಲ್ವರ್ ಚೈಮ್ಸ್‌ನಲ್ಲಿ ತಂಗಿದ್ದರು. ಅವರ ತಂದೆ 2026ರ ಜನವರಿ 6, 7 ಮತ್ತು 8ರಂದು  ಬೆಳಿಗ್ಗೆ, ಎಂ.ಎಸ್. ರಾಮಯ್ಯ ಆಸ್ಪತ್ರೆಯ ಸಮೀಪದ ಬಿಇಎಲ್ ರಸ್ತೆಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದರು.

 

 

ಶಿವಶಂಕರಪ್ಪ ಸಾಹುಕಾರ್ ಅವರು ಅವರ ಡಾ ವಿನುತಾ ಮಲ್ಲಪ್ಪ ಹಿತ್ತಲಮನಿ ಅವರ ತಂದೆಯ ಬಳಿ ಕಾರಿನ ನೋಂದಣಿ ಸಂಖ್ಯೆಯನ್ನು ಕೇಳಿದ್ದರು.  ರಾತ್ರಿ ಸುಮಾರು 9:30 ಗಂಟೆಗೆ ನ್ಯೂ ಬಿಇಎಲ್ ರಸ್ತೆಯ ಡೊಮಿನೋಸ್ ಪಿಜ್ಜಾ ಸಮೀಪಕ್ಕೆ ಬರುವಂತೆ ಸೂಚಿಸಿದ್ದರು. ಅದರಂತೆ ಅವರ ತಂದೆ,  ಸ್ನೇಹಿತರೊಬ್ಬರಿಂದ ಕಾರನ್ನು ವ್ಯವಸ್ಥೆ ಮಾಡಿಕೊಂಡು, ಅದರ ಸಂಖ್ಯೆಯನ್ನು ಖುದ್ದಾಗಿ ಅವರಿಗೆ ತಿಳಿಸಿದ್ದರು.

 

 

2026ರ ಜನವರಿ 8ರಂದು  ರಾತ್ರಿ ಸುಮಾರು 9:30 ಗಂಟೆಗೆ, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಆ ಸ್ಥಳಕ್ಕೆ ಬಂದು, ತಾನು  ಶಿವಶಂಕರಪ್ಪ ಸಾಹುಕಾರ್ ಅವರ ಕಡೆಯವನು ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೇ  ಅವರನ್ನು ಹೋಟೆಲ್ ಸಿಲ್ವರ್ ಚೈಮ್ಸ್‌ಗೆ ಕರೆದೊಯ್ದಿದ್ದ ಎಂದು ವಿನುತಾ ಮಲ್ಲಪ್ಪ ಹಿತ್ತಲಮನಿ ಅವರು ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅಂಗೈ ಗಾತ್ರದ ಎರಡು ಚೀಟಿಯಲ್ಲಿದ್ದವು ಉತ್ತರಗಳ ಸಾಲು

ಆತ ‘ಹೋಟೆಲ್ ಕೊಠಡಿಯಲ್ಲಿ ಆತ ಅಂಗೈ ಗಾತ್ರದ ಎರಡು ಚೀಟಿಗಳನ್ನು ಹೊರತೆಗೆದಿದ್ದ.  ಅವುಗಳಲ್ಲಿ ಒಂದು ಸಾಮಾನ್ಯ ಪತ್ರಿಕೆಗೆ ಮತ್ತು ಮತ್ತೊಂದು ನಿರ್ದಿಷ್ಟ ವಿಷಯದ ಪತ್ರಿಕೆಗೆ ಸಂಬಂಧಿಸಿದ್ದಾಗಿತ್ತು. ಪ್ರತಿಯೊಂದು ಚೀಟಿಯಲ್ಲೂ ತಲಾ 10 ಸರಿಯಾದ ಉತ್ತರ ಆಯ್ಕೆಗಳನ್ನು ಹೊಂದಿರುವ 8 ಸಾಲುಗಳಿದ್ದವು (ಪ್ರತಿ ಪತ್ರಿಕೆಗೆ 80 ಉತ್ತರಗಳು). ಆತ ಸಾಲುಗಳ ಪ್ರಕಾರ ಉತ್ತರಗಳನ್ನು ಕಂಠಪಾಠ ಮಾಡಿಸಿದ್ದನು. 09/01/2026ರ ಬೆಳಗಿನ ಜಾವ ಸುಮಾರು 2:30 ಗಂಟೆಯವರೆಗೆ ಆತ ಅವರೊಂದಿಗೇ ಇದ್ದ,’ ಎಂದು ವಿನುತಾ ಮಲ್ಲಪ್ಪ ಹಿತ್ತಲಮನಿ ಅಂದಿನ ಘಟನೆಯನ್ನು ತನಿಖಾಧಿಕಾರಿ ಮುಂದೆ ವಿವರಿಸಿರುವುದು ತಿಳಿದು ಬಂದಿದೆ.

 

 

ಕಂಠಪಾಠ ಮಾಡಿಕೊಂಡ ಉತ್ತರಗಳನ್ನು ಅವರು ಬರೆದುಕೊಂಡು ಮತ್ತೊಮ್ಮೆ ಅಭ್ಯಾಸ ಮಾಡಿದ್ದರು. ಅವರು  ಸೂಚಿಸಿದಂತೆ ಕಂಠಪಾಠ ಮಾಡಿದ ನಂತರ ಹಾಳೆಗಳನ್ನು ನಾಶಪಡಿಸಿದ್ದರು. 2026ರ ಜನವರಿ 9ರಂದು  ನಡೆದಿದ್ದ ಪರೀಕ್ಷೆಯಲ್ಲಿ ಅವರು ಕಂಠಪಾಠ ಮಾಡಿಕೊಂಡಿದ್ದ ಉತ್ತರ ಆಯ್ಕೆಗಳನ್ನು ಬರೆದಿದ್ದರು.  ಪ್ರತಿ ಪತ್ರಿಕೆಗೆ ಕೇವಲ 80 ಉತ್ತರಗಳನ್ನು ಮಾತ್ರ ಒದಗಿಸಲಾಗಿದ್ದರಿಂದ, 80ನೇ ಪ್ರಶ್ನೆಯ ನಂತರದ ಅವರ ಉತ್ತರಗಳು ಆರಂಭಿಕ ಉತ್ತರ ಕೀಗೆ ಹೊಂದಿಕೆಯಾಗಿರಲಿಲ್ಲ.

ಈ ಹೇಳಿಕೆಯನ್ನು  ಜಾರಿ ನಿರ್ದೇಶನಾಲಯದ ತಂಡವು  ಪ್ರಕಟಿಸಿದ್ದ ಆರಂಭಿಕ ಮತ್ತು ಪರಿಷ್ಕೃತ ಉತ್ತರ ಕೀಗಳೊಂದಿಗೆ ಅವರ OMR ಉತ್ತರ ಪತ್ರಿಕೆಗಳನ್ನು (ಸಾಮಾನ್ಯ ಪತ್ರಿಕೆ ಉತ್ತರ ಪತ್ರಿಕೆ ಸಂಖ್ಯೆ 2264078 ಮತ್ತು ನಿರ್ದಿಷ್ಟ ವಿಷಯದ ಪತ್ರಿಕೆ ಉತ್ತರ ಪತ್ರಿಕೆ ಸಂಖ್ಯೆ 2266078) ಹೋಲಿಕೆ ಮಾಡಿ ವಿಶ್ಲೇಷಿಸಿದೆ.  ನಂತರ ಪರಿಷ್ಕರಿಸಲಾದ ಅಥವಾ ಗ್ರೇಸ್ ಅಂಕಗಳನ್ನು ನೀಡಲಾದ ಪ್ರಶ್ನೆಗಳೂ ಸೇರಿದಂತೆ ಅವರ ಉತ್ತರಗಳು ಆರಂಭಿಕ ಉತ್ತರ ಕೀಗೆ ಹೊಂದಿಕೆಯಾಗಿರುವುದು ಕಂಡುಬಂದಿದೆ ಎಂದು ವಿವರಿಸಿದೆ.

ಸಾಮಾನ್ಯ ಪತ್ರಿಕೆ (B-Series)ಯ ಪ್ರಶ್ನೆ ಸಂಖ್ಯೆ 48, 57 ಮತ್ತು 74,  ನಿರ್ದಿಷ್ಟ ವಿಷಯದ ಪತ್ರಿಕೆ (Q-Series)ಯ ಪ್ರಶ್ನೆ ಸಂಖ್ಯೆ 15, 17, 34, 51 ಮತ್ತು 74 ಕುರಿತು ತನಿಖಾಧಿಕಾರಿಗಳು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಡಾ ವಿನುತಾ  80ನೇ ಪ್ರಶ್ನೆಯವರೆಗಿನ ತಮ್ಮ ಬಹುತೇಕ ಎಲ್ಲಾ ಉತ್ತರಗಳು ಆರಂಭಿಕ ಉತ್ತರ ಕೀಗೆ ನಿಖರವಾಗಿ ಹೊಂದಿಕೆಯಾಗಿದ್ದವು ಎಂದು ಅವರು ಒಪ್ಪಿಕೊಂಡಿದ್ದರು. ಇದು ಕೇವಲ ಕಾಕತಾಳೀಯವಲ್ಲ ಎಂದಿದ್ದರಲ್ಲದೇ  ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಎರಡೂ ಪತ್ರಿಕೆಗಳ ಉತ್ತರ ಕೀಗಳನ್ನು ತಮಗೆ ಒದಗಿಸಲಾಗಿತ್ತು ಎಂದೂ ಅವರು ಒಪ್ಪಿಕೊಂಡಿದ್ದರು.

 

 

ಅಕ್ರಮವಾಗಿ ಹಣ ಪಾವತಿಸದೇ ಆಯ್ಕೆಯಾಗುವುದು ಅಸಾಧ್ಯ

ಕೆಪಿಎಸ್‌ಸಿ ಅಧಿಕಾರಿಗಳಿಗೆ ಅಥವಾ ಸದಸ್ಯರಿಗೆ ಅಕ್ರಮವಾಗಿ ಹಣ ಪಾವತಿಸದೆ ಆಯ್ಕೆಯಾಗುವುದು ಅಸಾಧ್ಯ ಎಂಬ ಬಲವಾದ ವದಂತಿಗಳು ಹರಡಿದ್ದವು.  ₹80 ಲಕ್ಷ ಪಾವತಿಸಿದರೆ ಖಚಿತ ಆಯ್ಕೆ ಮಾಡಿಸಿಕೊಡುವುದಾಗಿ ಹಲವು ಮಧ್ಯವರ್ತಿಗಳು ತಮ್ಮನ್ನು ಸಂಪರ್ಕಿಸಿದ್ದರು. ಆದರೆ ಅವರು ಆ ಪ್ರಸ್ತಾಪಗಳನ್ನು ಸ್ವೀಕರಿಸಿರಲಿಲ್ಲ. ಕೇವಲ ಪ್ರತಿಭೆಯಿಂದ ಆಯ್ಕೆಯಾಗಲು ಸಾಧ್ಯವಿಲ್ಲ ಎಂಬ ಸ್ನೇಹಿತರ ಸಲಹೆ ನೀಡಿದ್ದರು.  ತಮ್ಮ ಅಂತಿಮ ಆಯ್ಕೆಗಾಗಿ ಅವರ ತಂದೆ ಆಗಿನ ಕೆಪಿಎಸ್‌ಸಿ  ಅಧ್ಯಕ್ಷರಾದ  ಶಿವಶಂಕರಪ್ಪ ಸಾಹುಕಾರ್ ಅವರನ್ನು ಸಂಪರ್ಕಿಸಿದ್ದರು. ಆರಂಭದಲ್ಲಿ ಅವರು ಸಹಾಯ ಮಾಡುವ ಭರವಸೆ ನೀಡಿರಲಿಲ್ಲ ಎಂದು ಹೇಳಿಕೆ ನೀಡಿರುವುದು ಗೊತ್ತಾಗಿದೆ.

ಹಣ ಪಾವತಿ ಮಾಹಿತಿಯಿಲ್ಲವೆಂದ ಡಾ ವಿನುತಾ

ಶಿವಶಂಕರಪ್ಪ ಸಾಹುಕಾರ್ ಅವರಿಗೆ ಅಥವಾ ಅವರ ತಂದೆಗೆ ಯಾವ ರೀತಿಯಲ್ಲಿ ಹಣ ಪಾವತಿಸಲಾಗಿತ್ತು ಎಂದು ತನಿಖಾಧಿಕಾರಿಯು ಪ್ರಶ್ನಿಸಿದ್ದರು.  ತಮ್ಮ ತಂದೆ ಯಾವುದೇ ಹಣ ಪಾವತಿಸಿರುವ ಬಗ್ಗೆ ತಮಗೆ ತಿಳಿದಿಲ್ಲವೆಂದು ಅವರು ತಿಳಿಸಿದ್ದರು. ಈ ಬಗ್ಗೆ ತಮ್ಮ ತಂದೆ ಅಥವಾ  ಶಿವಶಂಕರಪ್ಪ ಸಾಹುಕಾರ್ ಅವರನ್ನು ವಿಚಾರಿಸಬಹುದು ಎಂದೂ ಹೇಳಿದ್ದರು. ಇಂತಹ ಉತ್ತರ ಆಯ್ಕೆಗಳನ್ನು ಒದಗಿಸಲಾಗಿದ್ದ ಇತರ ಅಭ್ಯರ್ಥಿಗಳ ಬಗ್ಗೆಯೂ ತಮಗೆ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದ್ದರು.

‘ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಅವರ ಮೇಲಿನ ಹೇಳಿಕೆಯಿಂದ, ಎರಡೂ ಪತ್ರಿಕೆಗಳ ಉತ್ತರ ಕೀಗಳನ್ನು ಕಂಠಪಾಠ ಮಾಡುವ ಮೂಲಕ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.  ಶಿವಶಂಕರಪ್ಪ ಸಾಹುಕಾರ್ ಅವರ ಪ್ರತಿನಿಧಿಯೊಬ್ಬರು 2026ರ ಜನವರಿ 8ರಂದು ರಾತ್ರಿ ಯಲಹಂಕದ ಹೋಟೆಲ್ ಸಿಲ್ವರ್ ಚೈಮ್ಸ್‌ನಲ್ಲಿ ಅವರಿಗೆ ಈ ಉತ್ತರ ಕೀಗಳನ್ನು ಒದಗಿಸಿದ್ದರು. ಪರೀಕ್ಷೆಗೆ ಮುನ್ನ ಸತತ ಮೂರು ದಿನಗಳ ಕಾಲ ಅವರ ತಂದೆ ಅಧ್ಯಕ್ಷರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ನಂತರ ಪರಿಷ್ಕರಿಸಲಾದ ಪ್ರಶ್ನೆಗಳೂ ಸೇರಿದಂತೆ, ಅವರ OMR ಉತ್ತರಗಳು ಕೆಪಿಎಸ್‌ಸಿ ಆರಂಭಿಕ ಉತ್ತರಗಳಿಗೆ ಹೊಂದಿಕೆಯಾಗಿವೆ,’ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.

ನಂತರ ಪರಿಷ್ಕರಿಸಲಾದ ಪ್ರಶ್ನೆಗಳಿಗೂ ಅವರ ಉತ್ತರಗಳು ಹೊಂದಿಕೆಯಾಗಿರುವುದು ಕಂಡುಬಂದಿದೆ.  ಬಸವರಾಜ್ ಕನ್ನಾಳೆ ಅವರ ಮೂಲಕ ಸೋರಿಕೆಯಾದ ಪ್ರಶ್ನೆಪತ್ರಿಕೆ ಪಡೆದಿದ್ದ ಡಾ. ಕಿರಣ್ ಗೌಡ ಬಿ.ಎಸ್. ಅವರ ಒಎಂಆರ್ ಉತ್ತರ ಪತ್ರಿಕೆಗಳಲ್ಲಿಯೂ ಇದೇ ಮಾದರಿ ಕಂಡುಬಂದಿದೆ. ಇದರಿಂದ ಪರೀಕ್ಷೆಗೆ ಮುನ್ನವೇ ಕೀ  ಉತ್ತರಗಳು ಕೀ ಕೆಪಿಎಸ್‌ಸಿ ಒಳಗಿನಿಂದಲೇ ಸೋರಿಕೆಯಾಗಿವೆ.  ಒಂದಕ್ಕಿಂತ ಹೆಚ್ಚು ಮಾರ್ಗಗಳ ಮೂಲಕ ಅಭ್ಯರ್ಥಿಗಳಿಗೆ ವಿತರಿಸಲಾಗಿದೆ ಎಂಬುದು ಸೂಚಿಸುತ್ತದೆ. ಹಣ ಪಾವತಿಯ ಬಗ್ಗೆ ತಮಗೆ ತಿಳಿದಿಲ್ಲವೆಂದು ಅವರು ನಿರಾಕರಿಸಿದ್ದರೂ, ಅವರ ತಂದೆ ವ್ಯವಸ್ಥೆ ಮಾಡಿದ್ದ ಅಕ್ರಮ ಹಣದ ಪ್ರತಿಫಲವಾಗಿ ಅವರಿಗೆ ಉತ್ತರ ಕೀಗಳನ್ನು ಒದಗಿಸಲಾಗಿದೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.

ಡಾ. ನಿರಂಜನ್ ಪಾಟೀಲ್ ಹೇಳಿಕೆಯಲ್ಲೇನಿದೆ?

ಡಾ. ನಿರಂಜನ್ ಪಾಟೀಲ್ ಅವರು 2026ರ ಜನವರಿ 9ರಂದು  ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ ಹಾಜರಾಗಿ 4ನೇ ರ‍್ಯಾಂಕ್ ಪಡೆದಿದ್ದಾರೆ. ಡಾ. ಸಿದ್ಧಾರ್ಥ್ ಅವರ ಮೂಲಕ  ಪವನ್ ಕುಮಾರ್ ರೆಡ್ಡಿ ಅವರು ಲಂಚದ ಪ್ರತಿಯಾಗಿ ಖಚಿತ ಆಯ್ಕೆಯ ಆಮಿಷವೊಡ್ಡಿದ್ದರು. ಪರೀಕ್ಷೆಯ ಹಿಂದಿನ ದಿನ ದೇವನಹಳ್ಳಿಯ ಆರ್ಕಿಡ್ ನಿರ್ವಾಣದಲ್ಲಿ  ಬಸವರಾಜ್ ಕನ್ನಾಳೆ ಅವರಿಂದ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಅವರು ಪಡೆದಿದ್ದರು. M/s ಓಂ ಲಕ್ಷ್ಮಿ ಮತ್ತು ಬಾಲು ರೆಡ್ಡಿ ಅವರ ಖಾತೆಗಳಿಗೆ ₹20 ಲಕ್ಷ ಪಾವತಿಸಿದ್ದರು ಎಂಬ ಮಾಹಿತಿಯು ದೋಷಾರೋಪಣೆ ಪಟ್ಟಿಯಲ್ಲಿದೆ.

ಡಾ. ನಿರಂಜನ್ ಪಾಟೀಲ್ ಅವರು  ಕೊಪ್ಪಳ ಜಿಲ್ಲೆಯ ಗಂಗಾವತಿಯ ವೆಂಕಟಗಿರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಪಶುವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.  ಬೆಂಗಳೂರಿನ ಯಲಹಂಕದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ ಹಾಜರಾಗಿದ್ದರು.  ಅವರ ಒಎಂಆರ್‍‌ ಶೀಟ್‌ನಲ್ಲಿದ್ದ  ಉತ್ತರಗಳು ಕೆಪಿಎಸ್‌ಸಿ  ಪ್ರಕಟಿಸಿದ್ದ ಆರಂಭಿಕ ಉತ್ತರ ಕೀಗಳಿಗೆ ಏಕೆ ಹೊಂದಿಕೆಯಾಗಿವೆ ಎಂದು ತನಿಖಾಧಿಕಾರಿಯು ವಿಚಾರಣೆ  ನಡೆಸಿದ್ದರು.  ಸಾಮಾನ್ಯ ಮತ್ತು ನಿರ್ದಿಷ್ಟ ವಿಷಯದ ಎರಡೂ ಪತ್ರಿಕೆಗಳಲ್ಲಿನ ತಮ್ಮ ಬಹುತೇಕ ಉತ್ತರಗಳು ಅವುಗಳಿಗೆ ಹೊಂದಿಕೆಯಾಗಿದ್ದವು ಎಂದು ಅವರು ದೃಢಪಡಿಸಿದ್ದರು.   ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಸರಿಯಾದ ಉತ್ತರಗಳೊಂದಿಗೆ ಪ್ರಶ್ನೆಪತ್ರಿಕೆಗಳನ್ನು ತಮಗೆ ನೀಡಲಾಗಿತ್ತು ಎಂದು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಿದರು.

 

 

ಆಯ್ಕೆಯ ಭರವಸೆ ನೀಡಿ ತಮ್ಮನ್ನು ಸಂಪರ್ಕಿಸಿದವರು ಯಾರು ಎಂದು ತನಿಖಾಧಿಕಾರಿಯು ಕೇಳಿದಾಗ 2025ರ ಡಿಸೆಂಬರ್ 18ರಂದು ತಾವು ಮತ್ತು ತಮ್ಮ ಸ್ನೇಹಿತ ಡಾ. ಮಹೇಂದ್ರಕುಮಾರ್ ಹೊಸಳ್ಳಿ ಅವರು ಯಾದಗಿರಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಡಾ. ಸಿದ್ಧಾರ್ಥ್ ಅವರನ್ನು ಭೇಟಿಯಾಗಿದ್ದರು.  ಅಲ್ಲಿ  ಪವನ್ ಕುಮಾರ್ ರೆಡ್ಡಿ ಅವರು ಅವರನ್ನು ಸಂಪರ್ಕಿಸಿದ್ದರು.  ತಲಾ ₹60 ಲಕ್ಷ ಅಕ್ರಮ ಹಣ ಪಾವತಿಸಿದರೆ ಖಚಿತವಾಗಿ ಆಯ್ಕೆ ಮಾಡಿಸುವುದಾಗಿ ಆಮಿಷವೊಡ್ಡಿದ್ದರು. ನಂತರ ಪವನ್ ಕುಮಾರ್ ರೆಡ್ಡಿ ಅವರು ಮೊತ್ತವನ್ನು ₹30 ಲಕ್ಷಕ್ಕೆ ಇಳಿಸಿ, ಪರೀಕ್ಷೆಯ ನಂತರ ಹಣ ಪಾವತಿಸಬಹುದೆಂದು ತಿಳಿಸಿದ್ದರು.

ಪವನ್ ಕುಮಾರ್ ರೆಡ್ಡಿ ಅವರ ಸೂಚನೆಯಂತೆ ಬೆಂಗಳೂರಿನ ಮೆಜೆಸ್ಟಿಕ್‌ನ ಗಣೇಶ ದೇವಸ್ಥಾನದ ಸಮೀಪ ಅವರನ್ನು ಭೇಟಿಯಾಗಿದ್ದರು. ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಅವರನ್ನು ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು. ಅವರೊಂದಿಗೆ ಡಾ. ರಾಜ್ ಮೊಹಮ್ಮದ್, ಡಾ. ಬಸವರಾಜ್ ವಡಾರಿ, ಡಾ. ಸಿದ್ಧಾರ್ಥ್, ಡಾ. ಅಮರೇಗೌಡ, ಡಾ. ಮಹೇಂದ್ರಕುಮಾರ್ ಹೊಸಳ್ಳಿ ಮತ್ತು ಡಾ. ಕಿರಣ್ ಗೌಡ ಕೂಡ ಇದ್ದರು. ರೆಸಾರ್ಟ್‌ನಲ್ಲಿ  ಬಸವರಾಜ್ ಕನ್ನಾಳೆ ಅವರು ತಯಾರಿಗಾಗಿ ಪ್ರಶ್ನೆಗಳು ಮತ್ತು ಸರಿಯಾದ ಉತ್ತರಗಳನ್ನು ಒದಗಿಸಲಾಗುವುದು ಎಂದು ಅವರಿಗೆ ತಿಳಿಸಿದ್ದರು.

ಸಾಮಾನ್ಯ ಮತ್ತು ನಿರ್ದಿಷ್ಟ ವಿಷಯದ ಪತ್ರಿಕೆಗಳಿಗಾಗಿ ತಲಾ ಸುಮಾರು 70–80 ಪ್ರಶ್ನೆಗಳನ್ನು ಒಳಗೊಂಡ, ಮುದ್ರಿತ ದ್ವಿಭಾಷಾ ಪ್ರಶ್ನೆಪತ್ರಿಕೆಗಳ ಎರಡು ಸೆಟ್‌ಗಳನ್ನು ಅವರಿಗೆ ನೀಡಲಾಗಿತ್ತು. ಅವುಗಳಲ್ಲಿ ಸರಿಯಾದ ಉತ್ತರಗಳನ್ನು ಪೆನ್ಸಿಲ್‌ನಿಂದ ಗುರುತಿಸಲಾಗಿತ್ತು.

2026ರ ಜನವರಿ 9ರಂದು ನಡೆದಿದ್ದ ಪರೀಕ್ಷೆಯಲ್ಲಿ ಅದೇ ಪ್ರಶ್ನೆಗಳು ಬಂದಿದ್ದವು.  ಮತ್ತು ಅವರು ತಮ್ಮ ಒಎಂಎಆರ್ ಉತ್ತರ ಪತ್ರಿಕೆಯಲ್ಲಿ ಅದಕ್ಕೆ ಅನುಗುಣವಾಗಿ ಉತ್ತರಗಳನ್ನು ಗುರುತಿಸಿದ್ದರು.  ಲಂಚದ ಹಣ ಪಾವತಿ ಕುರಿತು ತನಿಖಾಧಿಕಾರಿಯು ಕೇಳಿದಾಗ, ಪರೀಕ್ಷೆ ನಡೆದ ಸುಮಾರು 15 ದಿನಗಳ ನಂತರ  ಪವನ್ ಕುಮಾರ್ ರೆಡ್ಡಿ ಅವರು ₹30 ಲಕ್ಷ ಕೇಳಿ, M/s ಓಂ ಲಕ್ಷ್ಮಿ ಸಂಸ್ಥೆಯ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದರು ಎಂದು ತಿಳಿಸಿದರು. ಅವರ ತಂದೆಯು ₹6 ಲಕ್ಷ ಮತ್ತು ಅವರ ತಂದೆಯ ಸ್ನೇಹಿತರೊಬ್ಬರು ₹4 ಲಕ್ಷವನ್ನು M/s ಓಂ ಲಕ್ಷ್ಮಿ ಸಂಸ್ಥೆಯ ಖಾತೆಗೆ ವರ್ಗಾಯಿಸಿದ್ದರು.  ಅವರ ತಂದೆಯ ಸ್ನೇಹಿತರೊಬ್ಬರು 2026ರ ಫೆ.23ರಂದು ₹8 ಲಕ್ಷವನ್ನು ಹಾಗೂ ಅವರ ತಂದೆ 2026ರ ಫೆ.25ರಂದು ₹2 ಲಕ್ಷವನ್ನು, ಪವನ್ ಕುಮಾರ್ ರೆಡ್ಡಿಗೆ ಒದಗಿಸಿದ್ದರು ಒಟ್ಟು ₹20 ಲಕ್ಷ ಪಾವತಿಸಲಾಗಿತ್ತು. ಉಳಿದ ₹10 ಲಕ್ಷವನ್ನು ನೇಮಕಾತಿ ಆದೇಶ ಹೊರಡಿಸಿದ ನಂತರ ಪಾವತಿಸಬೇಕಾಗಿತ್ತು. ಇದನ್ನು ಬಾಲು ರೆಡ್ಡಿ ಅವರ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು ಎಂದು ಹಣದ ವಹಿವಾಟಿನ ವಿವರ ಒದಗಿಸಿರುವುದು ತಿಳಿದು ಬಂದಿದೆ.

 

 

‘ಹೀಗಾಗಿ ಕೆಪಿಎಸ್‌ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಆದಾಯದ ಭಾಗವಾಗಿರುವ ₹20 ಲಕ್ಷ ಅಕ್ರಮ ಹಣಕ್ಕೆ ಪ್ರತಿಯಾಗಿ, M/s ಓಂ ಲಕ್ಷ್ಮಿ ಮತ್ತು ಶ್ರೀ ಬಾಳು ರೆಡ್ಡಿ ಅವರ ಖಾತೆಗಳ ಮೂಲಕ ಪಾವತಿ ಮಾಡಲಾಗಿದೆ. ಸೋರಿಕೆಯಾದ ಪ್ರಶ್ನೆಪತ್ರಿಕೆಯ ಸಹಾಯದಿಂದ ಡಾ. ನಿರಂಜನ್ ಪಾಟೀಲ್ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ,’ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

Hot this week

ಪರಿಚಯವಿರದಿದ್ದರೂ ಅಭ್ಯರ್ಥಿಗಳ ಬೆನ್ನತ್ತಿದ್ದ, ಪರೀಕ್ಷೆಗೂ ಮೊದಲೇ ಪವನ್ ಕುಮಾರ್ ರೆಡ್ಡಿಯಿಂದ ಕರೆ; ಕಮಿಷನ್‌ ಉಳಿಸಿಕೊಳ್ಳದೇ ಸಾಹುಕಾರ್, ಗ್ಯಾನೇಂದ್ರಗೆ 35 ಲಕ್ಷ ಪಾವತಿ

ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ಬರೆದು ವಿವಿಧ ರ್‍ಯಾಂಕ್‌ಗಳಲ್ಲಿದ್ದ...
Please Scan to make Your Contribution

Topics

ಗಂಗ್ವಾರ್‍‌ರಿಂದ ಪ್ರಶ್ನೆಪತ್ರಿಕೆ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಹಂಚಿಕೆ; ಗಂಗ್ವಾರ್ ಬಳಕೆಗಾಗಿ ಖಾತೆ, ಕನ್ನಾಳೆಯಿಂದಲೇ ನಿರ್ವಹಣೆ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್ ಗಂಗ್ವಾರ್...

Related Articles

Popular Categories

error: Content is protected !!