ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿವೇಶನಗಳ ಮಂಜೂರಾತಿ ಮಾಡಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂಬ ಆರೋಪವೇ ಆಧಾರರಹಿತವಾಗಿದೆ ಎಂದು ಕರ್ನಾಟಕ ಲೋಕಾಯುಕ್ತರಾದ ಬಿ ಎಸ್ ಪಾಟೀಲ್ ಅವರು ಷರಾ ಬರೆದಿದ್ದಾರೆ.
ಎನ್ ಆರ್ ರಮೇಶ್ ಎಂಬುವರು ಕರ್ನಾಟಕ ಲೋಕಾಯುಕ್ತಕ್ಕೆ 2024ರಲ್ಲಿ ಸಲ್ಲಿಸಿದ್ದ ದೂರನ್ನು ಲೋಕಾಯುಕ್ತ ಸಂಸ್ಥೆಯು ಸತತವಾಗಿ 2 ವರ್ಷಗಳ ಕಾಲ ವಿಚಾರಣೆ ನಡೆಸಿ ತನ್ನ ಅಂತಿಮ ಪರಿಶೀಲನಾ ಟಿಪ್ಪಣಿಯಲ್ಲಿಯೇ ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ಕ್ಲೀನ್ ಚಿಟ್ ನೀಡಿದೆ.
ಇದೇ ಪ್ರಕರಣದ ಬಗ್ಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಸಲ್ಲಿಸಿರುವ ಖಾಸಗಿ ದೂರಿನ ಕುರಿತಾದ ವಿಚಾರಣೆಯನ್ನು ಮುಂದುವರೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಈಚೆಗಷ್ಟೇ ತೀರ್ಪು ನೀಡಿತ್ತು. ಈ ಕುರಿತು 2026ರ ಅಕ್ಟೋಬರ್ 6ರಂದು ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯವು ಅಕ್ಟೋಬರ್ 15ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.
ಈ ಬೆಳವಣಿಗೆ ನಡುವೆಯೇ ಎನ್ ಆರ್ ರಮೇಶ್ ಅವರ ನೀಡಿದ್ದ ದೂರಿನ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಲೋಕಾಯುಕ್ತರು ಸಿದ್ದಾರ್ಥ ವಿಹಾರ ಟ್ರಸ್ಟ್ ಪ್ರಕರಣದಲ್ಲಿ ಮಾಡಿರುವ ಆರೋಪವೇ ಆಧಾರ ರಹಿತವಾಗಿದೆ ಎಂದು ಕ್ಲೀನ್ ಚಿಟ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಎನ್ ಆರ್ ರಮೇಶ್ ಅವರು ನೀಡಿದ್ದ ದೂರರ್ಜಿಯನ್ನು ಸ್ವೀಕರಿಸಿದ್ದ ಲೋಕಾಯುಕ್ತ ಸಂಸ್ಥೆಯು ಈ ಅರ್ಜಿಯ ವಿಚಾರಣೆಯನ್ನು ಲೋಕಾಯುಕ್ತ ಹೆಚ್ಚುವರಿ ನಿಬಂಧಕರಾದ ಜೆ ಪಿ ಅರ್ಚನಾ ಅವರಿಗೆ ವಹಿಸಿತ್ತು. 2026ರ ಆಗಸ್ಟ್ 28ರಂದು ಹೆಚ್ಚುವರಿ ನಿಬಂಧಕರು ಲೋಕಾಯುಕ್ತರಿಗೆ ಪ್ರಾಥಮಿಕ ಪರಿಶೀಲನೆ ಟಿಪ್ಪಣಿ ಸಲ್ಲಿಸಿದ್ದರು. ಈ ಟಿಪ್ಪಣಿಯಲ್ಲಿರುವ ಎಲ್ಲಾ ಅಂಶಗಳ ಕುರಿತು ಪರಿಶೀಲನೆ ಮಾಡಿರುವ ಕರ್ನಾಟಕ ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರು ಅಂತಿಮ ಪರಿಶೀಲನೆ ಟಿಪ್ಪಣಿಗೆ 2026ರ ಸೆ. 29ರಂದು ಸಹಿ ಮಾಡಿದ್ದಾರೆ.
ಅಂತಿಮ ಪರಿಶೀಲನೆ ಟಿಪ್ಪಣಿಯ 70 ಪುಟಗಳೂ ದಿ ಫೈಲ್ ಗೆ ಲಭ್ಯವಾಗಿವೆ.
ಬಿ ಎಸ್ ಪಾಟೀಲರ ಷರಾದಲ್ಲೇನಿದೆ?
ಬಿಡಿಎಯಿಂದ ಪಡೆದಿದ್ದ ನಾಗರಿಕ ನಿವೇಶನದ ವಿಚಾರವನ್ನು ಮರೆಮಾಚುವ ಮೂಲಕ ಕೆಎಐಡಿಬಿಯಿಂದ ನಿವೇಶನ ಪಡೆದಿದೆ ಎಂದು ದೂರುದಾರರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರತಿವಾದಿಗಳಾದ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ಪ್ರಿಯಾಂಕ್ ಖರ್ಗೆ, ರಾಹುಲ್ ಎಂ ಖರ್ಗೆ, ರಾಧಾಬಾಯಿ ಖರ್ಗೆ, ಎಂ ಬಿ ಪಾಟೀಲ್, ಡಾ ಸೆಲ್ವಕುಮಾರ್ ಅವರು ತಮ್ಮ ರಾಜಕೀಯ ಪ್ರಭಾವ ಅಥವಾ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿದ್ದಾರ್ಥ ವಿಹಾರ ಟ್ರಸ್ಟ್ ಪರವಾಗಿ ಎರಡು ಸಿ ಎ ನಿವೇಶನಗಳನ್ನು ಹಂಚಿಕೆ ಮಾಡಿಸಿದ್ದಾರೆ ಎಂದು ನಂಬಲು ಯಾವುದೇ ಕಾರಣವಿಲ್ಲ ಎಂದು ಬಿ ಎಸ್ ಪಾಟೀಲ್ ಅವರು ಅಂತಿಮ ಪರಿಶೀಲನಾ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
ಅದೇ ರೀತಿ ಈ ಆರೋಪಗಳನ್ನು ಈ ಪ್ರಾಧಿಕಾರದ ಮುಂದೆ ಸಲ್ಲಿಸಲಾದ ಯಾವುದೇ ದಾಖಲೆ ಸಮರ್ಥಿಸುವುದಿಲ್ಲ. ಮತ್ತು ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಾಗಿದೆ ಎಂಬ ಆರೋಪವೂ ಆಧಾರರಹಿತವಾಗಿದೆ. ಸಿ ಎ ನಿವೇಶನಗಳ ಮೌಲ್ಯ ನಿಗದಿಪಡಿಸುವಾಗ ಅದು ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಮಾತ್ರ ಅನ್ವಯಿಸುವಂತೆ ಮಾಡಲಾಗಿರಲಿಲ್ಲ. ಬದಲಾಗಿ, ಸಂಬಂಧಿತ ವರ್ಗಕ್ಕೆ ಸೇರಿದ ಎಲ್ಲಾ ಅರ್ಜಿದಾರರಿಗೆ ಮತ್ತು ಆ ವರ್ಗಕ್ಕೆ ಅಧಿಸೂಚಿತ/ಮೀಸಲಾದ ಎಲ್ಲಾ ಭೂಮಿಗಳಿಗೆ ಅದೇ ಬೆಲೆ ನಿಗದಿ ಅನ್ವಯಿಸುತ್ತದೆ ಎಂದು ಬಿ ಎಸ್ ಪಾಟೀಲ್ ಅವರು ಅಂತಿಮ ಪರಿಶೀಲನಾ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
ಇದಲ್ಲದೆ ಕೆಎಐಡಿಬಿಯು ತನ್ನ ಅಭಿಪ್ರಾಯದಲ್ಲಿ ತಿಳಿಸಿರುವಂತೆ, ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದ್ದ ಪ್ಲಾಟ್ ಅನ್ನು ಟ್ರಸ್ಟ್ ಮತ್ತೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಗೆ ಹಿಂತಿರುಗಿಸಿದೆ. ಮತ್ತು ಅದನ್ನು ಕೆಐಡಿಬಿಯು ಸ್ವೀಕರಿಸಿದೆ. ಆದ್ದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಂತಿಮ ಪರಿಶೀಲನಾ ಟಿಪ್ಪಣಿಯಲ್ಲಿ ಅಭಿಪ್ರಾಯಿಸಿದ್ದಾರೆ.

‘ಈ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹಾಗೂ ಈ ಸಂಸ್ಥೆಯ ಹೆಚ್ಚುವರಿ ನಿಬಂಧಕರು (ಎಆರ್‍ಇ 11 ) ಮಂಡಿಸಿದ ವಿವರವಾದ ಪರಿಶೀಲನೆ ಟಿಪ್ಪಣಿಯನ್ನು ಪರಿಗಣಿಸಿದ ನಂತರ, ಈ ಪ್ರಾಧಿಕಾರದ ಮುಂದೆ ಪ್ರತಿವಾದಿಗಳಾಗಿ ಸೇರಿಸಲಾದ ಯಾವುದೇ ಸಾರ್ವಜನಿಕ ಸೇವಕರ ವಿರುದ್ಧ ಕರ್ತವ್ಯಲೋಪ, ದುರ್ವ್ಯವಸ್ಥಾಪನೆ (maladministration), ಪಕ್ಷಪಾತ/ಅನುಕೂಲ ಮಾಡಿಕೊಡುವಿಕೆ (favouritism), ಅಧಿಕಾರದ ದುರುಪಯೋಗ ಇವುಗಳಲ್ಲಿ ಯಾವುದನ್ನೂ ಸಾಬೀತುಪಡಿಸುವ ಪ್ರಕರಣ ರೂಪುಗೊಂಡಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದ್ದರಿಂದ, ಮಂಡಿಸಲಾದ ವಿವರವಾದ ಪರಿಶೀಲನಾ ಟಿಪ್ಪಣಿಯನ್ನು ಅಂಗೀಕರಿಸಿದ್ದೇನೆ. ಯಾವುದೇ ಅರ್ಹತೆ/ಮೆರಿಟ್ ಇಲ್ಲದ ಈ ದೂರನ್ನು ಮುಕ್ತಾಯಗೊಳಿಸಲಾಗಿದೆ,’ ಎಂದು ಬಿ ಎಸ್ ಪಾಟೀಲ್ ಅವರು ವಿವರಿಸಿರುವುದು ತಿಳಿದು ಬಂದಿದೆ.
ಸಿದ್ದಾರ್ಥ ವಿಹಾರ್ ಟ್ರಸ್ಟ್ ಬೆಂಗಳೂರಿನ ಬಿಟಿಎಂ ಲೇಔಟ್ 4ನೇ ಹಂತದಲ್ಲಿ 8,002 ಚದರ ಮೀಟರ್ ಸಿ ಎ ನಿವೇಶನವನ್ನು (No.5) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿತ್ತು. ಈ ಸಂಗತಿಯನ್ನು ಮರೆಮಾಚಿ, ಅದೇ ಟ್ರಸ್ಟ್ 2024ರ ಮೇ 30ರಂದು ಯಲಹಂಕದ ಸಮೀಪದ ಬಾಗಲೂರಿನ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ಹಾರ್ಡ್‌ವೇರ್ ಸೆಕ್ಟರ್‍ನಲ್ಲಿ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ ಪಡೆದುಕೊಂಡಿದೆ ಎಂದು ಎನ್ ಆರ್ ರಮೇಶ್ ಅವರು ಆರೋಪಿಸಿದ್ದರು.
ಮೊದಲನೇ ಪ್ರತಿವಾದಿಯಾದ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು 6ನೇ ಪ್ರತಿವಾದಿಯಾದ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ತಮ್ಮ ರಾಜಕೀಯ ಪ್ರಭಾವ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಎರಡು ಸಿ ಎ ನಿವೇಶನವನ್ನು ಹಂಚಿಕೆ ಮಾಡಿಸಿದ್ದಾರೆ ಎಂದು ರಮೇಶ್ ದೂರಿನಲ್ಲಿ ಆಪಾದಿಸಿದ್ದರು. ಇವುಗಳನ್ನು ಅದೇ ಟ್ರಸ್ಟ್‌ಗೆ ಕಾನೂನಿಗೆ ವಿರುದ್ಧವಾಗಿ ಹಂಚಿಕೆ ಮಾಡಲಾಗಿತ್ತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ರೂ.240.00 ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದರು.
ಕೆಐಎಡಿಬಿಯಿಂದ ಭೂಮಿ ಹಂಚಿಕೆ ಸಂದರ್ಭದಲ್ಲಿ ಬಿಡಿಎನಿಂದ ಈ ಹಿಂದೆ ಪಡೆದಿದ್ದ ಸಿ ಎ ನಿವೇಶನ ಹಂಚಿಕೆ ಮಾಹಿತಿಯನ್ನು ಮರೆಮಾಚಲಾಗಿದೆ ಎಂದು ಆರೋಪಿಸಿದ್ದರು. ಈ ಎಲ್ಲಾ ಆರೋಪಗಳ ಕುರಿತು 7ನೇ ಪ್ರತಿವಾದಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾದ ಡಾ ಸೆಲ್ವಕುಮಾರ್ ಅವರಿಂದ ಲೋಕಾಯುಕ್ತರಾದ ಹೆಚ್ಚುವರಿ ನಿಬಂಧಕರಾದ ಅರ್ಚನಾ ಅವರು ನಿರ್ದಿಷ್ಟ ಅಂಶಗಳ ಕುರಿತು ವಿವರವಾದ ವರದಿ ನೀಡಲು ಕೋರಿದ್ದರು.
ಅದೇ ರೀತಿ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಬಿಟಿಎಂ ಲೇ ಔಟ್‌ನ 4ನೇ ಹಂತ, 2ನೇ ಬ್ಲಾಕ್‌ನಲ್ಲಿ ಸಿ ಎ ನಿವೇಶನ (No.5) ಕ್ಕೆ ಬದಲಿಯಾಗಿ ಸಿ ಎ ನಿವೇಶನವ ಹಂಚಿಕೆ ಅನುಸರಿಸಿದ ಕ್ರಮದ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಂದ ವಿವರಣೆ ಕೋರಿದ್ದರು. BDAಯಿಂದ CA Sites ಹಂಚಿಕೆ ಮತ್ತು ಕೆಐಎಡಿಬಿಯಿಂದ 5 ಎಕರೆ ( Plot No. AM-4 ) ಹಂಚಿಕೆ ಎರಡಕ್ಕೂ ಸಂಬಂಧಿಸಿದಂತೆ, ಸಂಬಂಧಪಟ್ಟ ಪ್ರಾಧಿಕಾರಗಳು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿವೆ.
ಅದೇ ರೀತಿ ಮೂರನೇ ಪ್ರತಿವಾದಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದಲೂ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದರು.
ಈ ದೂರಿನ ಪ್ರಮುಖ ಆರೋಪವೆಂದರೆ, ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಬಿಟಿಎಂ ಲೇ ಔಟ್‌ನ BTM 4ನೇ ಹಂತ, 2ನೇ ಬ್ಲಾಕ್‌ನಲ್ಲಿ ಸಿ ಎ ನಿವೇಶನವನ್ನು ( No.5) ಶೈಕ್ಷಣಿಕ ಉದ್ದೇಶಕ್ಕಾಗಿ 2014ರಲ್ಲಿ ಬಿಡಿಎನಿಂದ ಹಂಚಿಕೆ ಮಾಡಲಾಗಿತ್ತು. ಆದರೆ ಈ ಸಂಗತಿಯನ್ನು ಮರೆಮಾಚಿ, ಅದೇ ಸಂಸ್ಥೆಯು 2024ರ ಮೇ 30ರಂದು ಕೆಐಎಡಿಬಿಯಿಂದ ಸಿ ಎ ನಿವೇಶನ (ಎಎಂ-4) ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 2026ರ ಜನವರಿ 16ರಂದು ಈ ಸಂಬಂಧ ವರದಿ ಸಲ್ಲಿಸಿದ್ದರು. ಸಿಎ ನಿವೇಶನಗಳ ಹಂಚಿಕೆಗೆ ನಿಗದಿಪಡಿಸಿದ ಮಾನದಂಡಗಳಲ್ಲಿ ಇತರ ಯಾವುದೇ ಸರ್ಕಾರಿ ಸಂಸ್ಥೆಯಿಂದ ಪಡೆದಿರುವ ಬೇರೆ ಸಿ ಎ ನಿವೇಶನಗಳ ಹಂಚಿಕೆಯ ವಿವರವನ್ನು ಕಡ್ಡಾಯವಾಗಿ ಘೋಷಿಸಬೇಕೆಂಬ ನಿಯಮ ಇರಲಿಲ್ಲ ಎಂದು ವರದಿಯಲ್ಲಿ ವಿವರಿಸಿದ್ದರು.

ಅದೇ ರೀತಿ ಅರ್ಜಿದಾರರು ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಬಿಟಿಎಂ ಬಡಾವಣೆಯಲ್ಲಿನ ಪಡೆದಿದ್ದ ನಿವೇಶನವನ್ನು ಸ್ವಯಂ ಪ್ರೇರಿತವಾಗಿ ಘೋಷಿಸಿದ್ದರು. ಆದ್ದರಿಂದ ಕೆಐಎಡಿಬಿಯು ತೆಗೆದುಕೊಂಡಿರುವ ನಿಲುವಿನಿಂದ ಮತ್ತು ಹಿಂದಿನ ಸಿಎ ನಿವೇಶನ ಹಂಚಿಕೆಯ ಮಾಹಿತಿಯನ್ನು ಬಹಿರಂಗಪಡಿಸುವುದು ಮತ್ತು ಅದರ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಕೆಐಎಡಿಬಿಯ ಸಿಇಒ ತಮ್ಮ ವರದಿಯಲ್ಲಿ ವಿವರಿಸಿದ್ದರು.
ಹೀಗಾಗಿ ಹಿಂದಿನ ಸಿ ಎ ನಿವೇಶನ ಹಂಚಿಕೆಯ ವಿವರವನ್ನು ಬಹಿರಂಗಪಡಿಸುವ ಯಾವುದೇ ಕಡ್ಡಾಯವಿಲ್ಲದ ಸಂದರ್ಭದಲ್ಲಿ ಮತ್ತೊಂದು ಸಿ ಎ ನಿವೇಶನ ಪಡೆಯುವ ಉದ್ದೇಶದಿಂದ ಟ್ರಸ್ಟ್ ಆ ಸಂಗತಿಯನ್ನು ಮರೆಮಾಚಿದೆ ಎಂದು ಹೇಳಲಾಗುವುದಿಲ್ಲ. ಬಿಡಿಎ ಈ ಪ್ರಾಧಿಕಾರದ ಮುಂದೆ ಸಲ್ಲಿಸಿದ ದಾಖಲೆಗಳಿಂದ ಮತ್ತು ಈ ಸಂಸ್ಥೆಯ ಹೆಚ್ಚುವರಿ ನಿಬಂಧಕರು ಸಲ್ಲಿಸಿದ್ದ ಅಂತಿಮ ಪರಿಶೀಲನಾ ಟಿಪ್ಪಣಿಯಲ್ಲಿ ವಿವರವಾಗಿ ಚರ್ಚಿಸಿರುವ ವಿಷಯಗಳಿಂದ ಬಿಟಿಎಂ ಬಡಾವಣೆಗಾಗಿ ಭೂ ಸ್ವಾಧೀನ ಪ್ರಕ್ರಿಯೆಗಾಗಿ 1988ರ ಆಗಸ್ಟ್ 6ರಂದು ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆ ಮತ್ತು 1990ರ ನವೆಂಬರ್ 3ರಂದು ಹೊರಡಿಸಿದ್ದ ಅಂತಿಮ ಅಧಿಸೂಚನೆ ಮೂಲಕ ನಡೆದಿತ್ತು.
ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಭೂಮಿಯ ಮಾಲೀಕರು ಸಲ್ಲಿಸಿದ್ದ ರಿಟ್ ಅರ್ಜಿ (WP No.6370/2020) ಅಂಗೀಕರಿಸುವ ಮೂಲಕ ಲ್ಯಾಪ್ಸ್ ಎಂದು ಘೋಷಿಸಲಾಗಿತ್ತು. ಈ ರಿಟ್ ಅರ್ಜಿಯಲ್ಲಿ ನೀಡಲಾದ ಆದೇಶದ ಪರಿಣಾಮವಾಗಿ ಭೂಸ್ವಾಧೀನ ಪ್ರಕ್ರಿಯೆಗಳು ಲ್ಯಾಪ್ಸ್ ಆಗಿವೆ ಎಂದು ಘೋಷಿಸಲಾಗಿತ್ತು. ಇದರ ಪರಿಣಾಮವಾಗಿ, ಆ ಭೂಮಿಯಲ್ಲಿ ರೂಪಿಸಲಾದ ನಿವೇಶನಗಳ ನಂತರದ ಹಂಚಿಕೆಗಳಿಗೂ, ಸಿದ್ದಾರ್ಥ ವಿಹಾರ್ ಟ್ರಸ್ಟ್ ಪರವಾಗಿ ಮಾಡಲಾದ ಹಂಚಿಕೆಯೂ ಸೇರಿದಂತೆ, ಕಾನೂನುಬದ್ಧ ಆಧಾರ ಉಳಿಯುವುದಿಲ್ಲ ಎಂದು ಬಿ ಎಸ್ ಪಾಟೀಲ್ ಅವರು ಷರಾದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಆದಾಗ್ಯೂ, ಬಿಡಿಎ ಮತ್ತು ಸಿದ್ದಾರ್ಥ ವಿಹಾರ್ ಟ್ರಸ್ಟ್ ಸಲ್ಲಿಸಿರುವ ರಿಟ್ ಮೇಲ್ಮನವಿಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಬಾಕಿ ಇವೆ. ಸಿದ್ದಾರ್ಥ ವಿಹಾರ್ ಟ್ರಸ್ಟ್ ಗೆ ಹಂಚಿಕೆ ಮಾಡಲಾದ ಸಿ ಎ ನಿವೇಶನದ ಹಂಚಿಕೆಯ ಸ್ಥಿತಿ ಇನ್ನೂ ಅಂತಿಮವಾಗಿ ನಿರ್ಧಾರವಾಗದೆ ಉಳಿದಿದೆ. ‘ಏನೇ ಇರಲಿ, ಮೇಲ್ಕಂಡಂತೆ ಕೆಐಎಡಿಬಿಯಿಂದ ಸಿ ಎ ನಿವೇಶನ ಹಂಚಿಕೆಯನ್ನು ಬಿಡಿಎಯಿಂದ ಹಿಂದಿನ ಸಿ ಎ ನಿವೇಶನ ಹಂಚಿಕೆಯ ಮಾಹಿತಿಯನ್ನು ಮರೆಮಾಚುವ ಮೂಲಕ ಪಡೆದುಕೊಳ್ಳಲಾಗಿದೆ ಎಂಬ ದೂರುದಾರರ ಆರೋಪದಲ್ಲಿ ಯಾವುದೇ ಹುರುಳಿಲ್ಲ,’ ಎಂದು ಬಿ ಎಸ್ ಪಾಟೀಲ್ ಅವರು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ದೂರುದಾರರ ಮತ್ತೊಂದು ಆರೋಪವೆಂದರೆ ಮೊದಲನೇ ಪ್ರತಿವಾದಿ ಮಲ್ಲಿಕಾರ್ಜುನ ಖರ್ಗೆ, ಮೂರನೇ ಪ್ರತಿವಾದಿ ಪ್ರಿಯಾಂಕ್ ಖರ್ಗೆ, ಆರನೇ ಪ್ರತಿವಾದಿಯಾದ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ಮತ್ತು ಏಳನೇ ಪ್ರತಿವಾದಿಯಾದ ಕೈಗಾರಿಕೆ ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಸೆಲ್ವಕುಮಾರ್ ಅವರು ತಮ್ಮ ರಾಜಕೀಯ ಪ್ರಭಾವ ಮತ್ತು ಅಧಿಕೃತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಿಡಿಎ ಮತ್ತು ಕೆಐಎಡಿಬಿಯಿಂದ ಕಾನೂನು ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಎರಡು ಸಿ ಎ ನಿವೇಶನಗಳನ್ನು ಹಂಚಿಕೆ ಮಾಡಿಸಿದ್ದಾರೆ ಎಂಬ ಆರೋಪವು ಆಧಾರರಹಿತವಾಗಿದೆ ಎಂದು ವಿವರಿಸಿದ್ದಾರೆ.

‘ಅಲ್ಲದೇ ನಿವೇಶನಕ್ಕಾಗಿ ಎಷ್ಟು ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು, ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಹಂಚಿಕೆಯಲ್ಲಿ ಏಕೆ ಆದ್ಯತೆ ನೀಡಲಾಯಿತು, ಅರ್ಜಿಗಳನ್ನು ಹೇಗೆ ಪರಿಶೀಲಿಸಲಾಯಿತು ಎಂಬುದನ್ನು ಕೆಐಎಡಿಬಿಯು ತೆಗೆದುಕೊಂಡ ನಿಲುವನ್ನು ಉಲ್ಲೇಖಿಸಿ ವಿವರವಾಗಿ ಪರಿಗಣಿಸಲಾಗಿದೆ. ಅದೇ ರೀತಿಯಲ್ಲಿ ಬಿಡಿಎ ಮುಂದೆ ಸಲ್ಲಿಸಲಾದ ಅರ್ಜಿಯ ಪರಿಗಣನೆಯನ್ನೂ ಪರಿಶೀಲಿಸಲಾಗಿದೆ. ಹೆಚ್ಚುವರಿ ನಿಬಂಧಕರು ಮಂಡಿಸಿದ ವಿವರವಾದ ಪರಿಶೀಲನಾ ಟಿಪ್ಪಣಿ ಹಾಗೂ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ನಾನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇನೆ,’ ಎಂದು ಬಿ ಎಸ್ ಪಾಟೀಲ್ ಅವರು ಅಂತಿಮ ಪರಿಶೀಲನಾ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
ಪ್ರತಿವಾದಿ ಸಂಖ್ಯೆ 1, 3, 6 ಮತ್ತು 7 ಅವರು ತಮ್ಮ ರಾಜಕೀಯ ಪ್ರಭಾವ ಅಥವಾ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿದ್ದಾರ್ಥ ವಿಹಾರ್ ಟ್ರಸ್ಟ್ ಪರವಾಗಿ ಎರಡು CA Sitesಗಳನ್ನು ಹಂಚಿಕೆ ಮಾಡಿಸಿದ್ದಾರೆ ಎಂದು ನಂಬಲು ಯಾವುದೇ ಕಾರಣವಿಲ್ಲ. ಈ ಆರೋಪಗಳನ್ನು ಈ ಪ್ರಾಧಿಕಾರದ ಮುಂದೆ ಸಲ್ಲಿಸಲಾದ ಯಾವುದೇ ದಾಖಲೆ ಸಮರ್ಥಿಸುವುದಿಲ್ಲ. ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಾಗಿದೆ ಎಂಬ ಆರೋಪವೂ ಆಧಾರರಹಿತವಾಗಿದೆ ಎಂದು ವಿವರಿಸಿದ್ದಾರೆ.

ನಾಗರಿಕ ನಿವೇಶನಗಳ ಮೌಲ್ಯ ನಿಗದಿಪಡಿಸುವಾಗ ಅದು ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಮಾತ್ರ ಅನ್ವಯಿಸುವಂತೆ ಮಾಡಲಾಗಿರಲಿಲ್ಲ. ಬದಲಾಗಿ, ಸಂಬಂಧಿತ ವರ್ಗಕ್ಕೆ ಸೇರಿದ ಎಲ್ಲಾ ಅರ್ಜಿದಾರರಿಗೆ ಮತ್ತು ಆ ವರ್ಗಕ್ಕೆ ಅಧಿಸೂಚಿತ/ಮೀಸಲಾದ ಎಲ್ಲಾ ಭೂಮಿಗಳಿಗೆ ಅದೇ ಬೆಲೆ ನಿಗದಿ ಅನ್ವಯಿಸುತ್ತದೆ. ಇದಲ್ಲದೆ ಕೆಎಐಡಿಬಿಯು ತನ್ನ ಅಭಿಪ್ರಾಯದಲ್ಲಿ ತಿಳಿಸಿರುವಂತೆ, ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದ್ದ ಪ್ಲಾಟ್‌ನ್ನು ಟ್ರಸ್ಟ್ ಮತ್ತೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಗೆ ಹಿಂತಿರುಗಿಸಿದೆ ಮತ್ತು ಕೆಎಡಿಬಿಯು ಅದನ್ನು ಸ್ವೀಕರಿಸಿದೆ. ಆದ್ದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

‘ದುರ್ವ್ಯವಸ್ಥಾಪನೆ (maladministration),, ಪಕ್ಷಪಾತ/ಅನುಕೂಲ ಮಾಡಿಕೊಡುವಿಕೆ (favouritism), ಅಧಿಕಾರದ ದುರುಪಯೋಗ ಇವುಗಳಲ್ಲಿ ಯಾವುದನ್ನೂ ಸಾಬೀತುಪಡಿಸುವ ಪ್ರಕರಣ ರೂಪುಗೊಂಡಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದ್ದರಿಂದ, ಮಂಡಿಸಲಾದ ವಿವರವಾದ ಪರಿಶೀಲನಾ ಟಿಪ್ಪಣಿಯನ್ನು ಅಂಗೀಕರಿಸಿದ್ದೇನೆ. ಯಾವುದೇ ಅರ್ಹತೆ/ಮೆರಿಟ್ ಇಲ್ಲದ ಈ ದೂರನ್ನು ಮುಕ್ತಾಯಗೊಳಿಸಲಾಗಿದೆ,’ ಎಂದು ಕ್ಲೀನ್ ಚಿಟ್ ನೀಡಿದ್ದಾರೆ.




