Saturday | October 10, 2026 |

ಟ್ರಸ್ಟ್‌, ಟ್ರಸ್ಟಿಗಳ ವಿರುದ್ಧದ ಆರೋಪಗಳೇ ಸುಳ್ಳು, ಇದೊಂದು ಸಾರ್ವಜನಿಕ ದತ್ತಿ ಟ್ರಸ್ಟ್, ಸಿಎ ನಿವೇಶನ ಪಡೆಯಲು ಇದೆ ಅರ್ಹತೆ; ಪ್ರಿಯಾಂಕ್ ಸಮರ್ಥನೆಗೆ ಲೋಕಾಯುಕ್ತ ಮನ್ನಣೆ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌ ವಿರುದ್ಧ ಎನ್ ಆರ್ ರಮೇಶ್‌ ಎಂಬುವರು  ಟ್ರಸ್ಟ್ ಮತ್ತು ಟ್ರಸ್ಟಿಗಳ ವಿರುದ್ಧ ಮಾಡಿರುವ ಸುಳ್ಳು ಆರೋಪಗಳಿಗೆ ಸಂಬಂಧಿಸಿದಂತೆ ಟ್ರಸ್ಟಿಯೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾಯುಕ್ತಕ್ಕೆ  ಸಂಪೂರ್ಣ ಮತ್ತು ಸಮಗ್ರ ಉತ್ತರವನ್ನು ಸಲ್ಲಿಸಿದ್ದರು. ಅಲ್ಲದೇ ಈ ಉತ್ತರವನ್ನು ಆಧರಿಸಿ  ದೂರನ್ನು ಮುಕ್ತಾಯಗೊಳಿಸುವಂತೆ ಮನವಿ ಮಾಡಿದ್ದರು.

ಸಿದ್ದಾರ್ಥ ವಿಹಾರ ಟ್ರಸ್ಟ್‌ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಪ್ರಕಾರ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿರುವ  ಖಾಸಗಿ ದೂರರ್ಜಿಯ ವಿಚಾರಣೆ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಈ ಮಧ್ಯೆ ಲೋಕಾಯುಕ್ತರು  ಎನ್‌ ಆರ್ ರಮೇಶ್‌ ಅವರು ಸಲ್ಲಿಸಿದ್ದ ದೂರರ್ಜಿಯನ್ನು ಮುಕ್ತಾಯಗೊಳಿಸಿದ್ದಾರೆ. ಈ ಬೆಳವಣಿಗೆ ನಡುವೆಯೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾಯುಕ್ತದ ಮುಂದೆ ನೀಡಿದ್ದ ಸಮರ್ಥನೆ, ವಿವರಣೆ, ಸಮಗ್ರ ಉತ್ತರವು ಮುನ್ನೆಲೆಗೆ ಬಂದಿದೆ.

ಇದರ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಈ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ದೂರರ್ಜಿಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು   2025ರ ಜನವರಿ 15ರಂದೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾಯುಕ್ತಕ್ಕೆ ತಮ್ಮ ಉತ್ತರವನ್ನು  ಸಲ್ಲಿಸಿದ್ದರು. ಬಿಡಿಎಯು ಬಿಟಿಎಂ ಬಡಾವಣೆಯಲ್ಲಿ ಹಂಚಿಕೆ ಮಾಡಿದ್ದ ಸಿ ಎ ನಿವೇಶನ ಮತ್ತು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯು ಹಂಚಿಕೆ ಮಾಡಿದ್ದ ಕೈಗಾರಿಕೆ ನಿವೇಶನದ ಕುರಿತಾದ ವಿವರಣೆಯನ್ನು ಕಾಲಾನುಕ್ರಮಗಳ ಸಮೇತ ಉತ್ತರದಲ್ಲಿ ವಿವರಿಸಿರುವುದನ್ನು ಹೆಚ್ಚುವರಿ ನಿಬಂಧಕರು ತಮ್ಮ ಪರಿಶೀಲನಾ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಪ್ರಿಯಾಂಕ್‌ ಖರ್ಗೆ ಅವರ ಉತ್ತರದಲ್ಲೇನಿದೆ?

ಸಿದ್ದಾರ್ಥ ವಿಹಾರ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿಗಳು ಟ್ರಸ್ಟ್ ಸ್ಥಾಪಿಸುವುದಕ್ಕೂ ಮುನ್ನವೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಟ್ರಸ್ಟಿಗಳು ಸ್ಥಾಪಿಸಿರುವ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ (ಹಿಂದಿನ ಹೈದರಾಬಾದ್-ಕರ್ನಾಟಕ ಪ್ರದೇಶ) ಇವೆ. ಸಮಾಜದ ದುರ್ಬಲ ವರ್ಗಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶಕ್ಕೆ ಟ್ರಸ್ಟಿಗಳು ಬದ್ಧರಾಗಿದ್ದಾರೆ. ಅವರು ಸಮಾಜ ಸೇವೆಗೆ, ವಿಶೇಷವಾಗಿ ಶಿಕ್ಷಣ ಮತ್ತು ಹಿಂದುಳಿದ ಸಮುದಾಯಗಳ ಉನ್ನತಿಗೆ ಸಮರ್ಪಿತರಾಗಿದ್ದಾರೆ ಎಂದು ತಿಳಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

 

 

ರಾಜ್ಯದ ವಿವಿಧ ವಲಯಗಳಲ್ಲಿ ಸಿಎ  ಸೈಟ್‌ಗಳ ಹಂಚಿಕೆಗಾಗಿ  ಕೆಐಎಡಿಬಿಯು ( KIADB/HO/Allot/C.No.44705/19145/2023-24) 2024ರ ಫೆ.8ರಂದು   ಅಧಿಸೂಚನೆ  ಪ್ರಕಟಿಸಿತ್ತು.  ಬೆಂಗಳೂರಿನ ವಲಯದ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನ ಸಿಎ ಪ್ಲಾಟ್ (CA Plot No. AM-4 ) ಕೂಡ ಇದರಲ್ಲಿ ಸೇರಿತ್ತು. ಈ ಪ್ಲಾಟ್‌ನ್ನು ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಮೀಸಲಿಡಲಾಗಿತ್ತು. ಕೆಐಎಡಿಬಿಯು ಎಲ್ಲಾ ಸಿಎ ನಿವೇಶನಗಳ  ವಿವರಗಳ ಜೊತೆಗೆ ಅವುಗಳ ಹಂಚಿಕೆ ದರವನ್ನೂ ಪ್ರಕಟಿಸಿತ್ತು.

ಎಲ್ಲಾ ವರ್ಗಗಳ (CA/Amenity ) ಪ್ಲಾಟ್‌ಗಳಿಗೆ ಪ್ರತಿ ಎಕರೆಗೆ ರೂ.2.8 ಕೋಟಿ ದರವನ್ನು ಪ್ರಕಟಿಸಲಾಗಿತ್ತು.  ಸಿದ್ದಾರ್ಥ ವಿಹಾರ್ ಟ್ರಸ್ಟ್ ಕೂಡ ಕೆಐಎಡಿಬಿಗೆ ಸಿಎ  ಸೈಟ್ ಹಂಚಿಕೆಗಾಗಿ ಅರ್ಜಿ ಸಲ್ಲಿಸಿತ್ತು. ಅರ್ಜಿಯೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (Research and Development Centre), ತರಬೇತಿಗಾಗಿ Centre of Excellence ಹಾಗೂ ಸಂಬಂಧಿತ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಸ್ತಾವನೆ, ಅರ್ಜಿ ನಮೂನೆ, ಯೋಜನಾ ವರದಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿತ್ತು ಎಂದು ಉತ್ತರದಲ್ಲಿ ವಿವರಿಸಿದ್ದರು.

 

 

2024ರ ಮಾರ್ಚ್‌ 11ರಂದು ಕೆಐಎಡಿಬಿಯು  (ಪತ್ರ ಸಂಖ್ಯೆ KIADB/HO/Allot/25108/21556/2023-24)  R&D ಕೇಂದ್ರ, Centre of Excellence ಮತ್ತು ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವ ಟ್ರಸ್ಟ್‌ನ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು.  ಬೆಂಗಳೂರಿನ ವಲಯದ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನ ಸಿಎ ( CA/Amenity Plot No. AM-4)  ಹಂಚಿಕೆ ಮಾಡಿರುವುದನ್ನು  ಟ್ರಸ್ಟ್‌ಗೆ ತಿಳಿಸಿತ್ತು. ಕೆಐಎಡಿಬಿಯ ಸೂಚನೆಯಂತೆ  2024ರ ಮಾರ್ಚ್ 16ರಂದು  ಹಂಚಿಕೆಯಾಗಿದ್ದ ಸಿಎ ನಿವೇಶನಕ್ಕೆ   ಸಂಬಂಧಿಸಿದ ಮುಂಗಡ ಪ್ರೀಮಿಯಂನ 10% ಮೊತ್ತವಾದ ರೂ.1,40,25,000/- ಅನ್ನು ಟ್ರಸ್ಟ್ ಪಾವತಿಸಿತ್ತು.   2024ರ ಮೇ 30ರಂದು ಕೆಐಎಡಿಬಿಯು  ಹಂಚಿಕೆ ಪತ್ರ (ಸಂಖ್ಯೆ KIADB/HO/Allot/4043/2024-25)  ಹೊರಡಿಸಿತ್ತು. ಅಲ್ಲದೇ ಸಿಎ ನಿವೇಶನ ಹಂಚಿಕೆ  ಗುತ್ತಿಗೆ ಷರತ್ತುಗಳು ಮತ್ತು ಪಾವತಿ ಷರತ್ತುಗಳ ಕುರಿತು ಟ್ರಸ್ಟ್‌ಗೆ ತಿಳಿಸಿತ್ತು.

ಹಂಚಿಕೆಯ ಷರತ್ತುಗಳ ಪ್ರಕಾರ, ಭೂಮಿಯನ್ನು 10 ವರ್ಷಗಳ ಅವಧಿಯ ಲೀಸ್‌ ಕಂ ಸೇಲ್‌  ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು. ಟ್ರಸ್ಟ್ ಮೂರು ವರ್ಷಗಳೊಳಗೆ ನಿಗದಿತ ಷರತ್ತುಗಳನ್ನು ಪೂರೈಸದಿದ್ದರೆ, ಗುತ್ತಿಗೆಯನ್ನು ರದ್ದುಪಡಿಸುವ ಅಧಿಕಾರವು ಕೆಐಎಡಿಬಿಗಿತ್ತು. ಕೆಐಎಡಿಬಿ  ಕೇವಲ ಹಂಚಿಕೆ ಪತ್ರವನ್ನು ನೀಡಿತ್ತು. ಟ್ರಸ್ಟ್ ಪರವಾಗಿ ಯಾವುದೇ ಗುತ್ತಿಗೆ ಪತ್ರವನ್ನು (Lease Deed) KIADB ಜಾರಿಗೊಳಿಸಿರಲಿಲ್ಲ. ಹಾಗೆಯೇ ಸಿಎ ( CA/Amenity Plot AM-4ರ) ನಿವೇಶನದ  ಸ್ವಾಧೀನವನ್ನೂ ಟ್ರಸ್ಟ್‌ಗೆ ಹಸ್ತಾಂತರಿಸಿರಲಿಲ್ಲ. ಹಂಚಿಕೆ ಮಾಡಿದ್ದ ಸಿಎ ಪ್ಲಾಟ್‌ ( CA Plot No. AM-4ಕ್ಕೆ)ಗೆ  ಸಂಬಂಧಿಸಿದಂತೆ ಟ್ರಸ್ಟ್ , ಕೆಎಐಡಿಬಿಯಿಂದ ಯಾವುದೇ ಸಬ್ಸಿಡಿ ಅಥವಾ ರಿಯಾಯಿತಿಯನ್ನು ಕೇಳಿರಲಿಲ್ಲ ಅಥವಾ ಪಡೆದಿರಲಿಲ್ಲ ಎಂದು ಉತ್ತರದಲ್ಲಿ ವಿವರಿಸಿದ್ದರು.

 

 

ಎಸ್‌ಸಿ, ಎಸ್‌ ಟಿ  ಉದ್ಯಮಿಗಳಿಗೆ ಹಂಚಿಕೆ ಮಾಡಲಾಗುವ ಕೈಗಾರಿಕಾ ಪ್ಲಾಟ್‌ಗಳಿಗೆ ಮಾತ್ರ 50% ರಿಯಾಯಿತಿ ನೀಡಲಾಗುತ್ತದೆ. ಎಸ್‌ ಸಿ ಎಸ್‌ ಟಿ  ಟ್ರಸ್ಟ್‌ಗಳು/ಸೊಸೈಟಿಗಳು/ಸಂಸ್ಥೆಗಳಿಗೆ ಸಿಎ ( CA/Amenity) ನಿವೇಶನಗಳನ್ನು  ಹಂಚಿಕೆ ಮಾಡಿದರೂ, ಅವುಗಳಿಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ ಎಂದು ತಿಳಿಸಿತ್ತು.  2024ರ ಸೆ. 20ರಂದು   ಟ್ರಸ್ಟ್, ಕೆಐಎಡಿಬಿಗೆ ಪತ್ರ ಸಲ್ಲಿಸಿತ್ತು.   R&D ಕೇಂದ್ರ, Centre of Excellence ಮತ್ತು ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವ ತನ್ನ ಪ್ರಸ್ತಾವನೆಯನ್ನು ಹಿಂಪಡೆಯಲಾಗುವುದು ಎಂದು ಪತ್ರದಲ್ಲಿ   ತಿಳಿಸಿತ್ತು.  ಹಂಚಿಕೆಯಾಗಿದ್ದ ಸಿಎ ( CA Plot AM-4) ನಿವೇಶನವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿತ್ತು.  ತನ್ನ ಪ್ರಸ್ತಾವನೆಯನ್ನು ಹಿಂಪಡೆಯಬೇಕು  ಮತ್ತು ಹಂಚಿಕೆ ಮಾಡಿರುವ ಸಿಎ (CA/Amenity ) ಪ್ಲಾಟ್‌ನ್ನು ಸ್ವಯಂಪ್ರೇರಿತವಾಗಿ ಹಿಂತಿರುಗಿಸಲು ಕಾರಣಗಳನ್ನು ಟ್ರಸ್ಟ್ ತನ್ನ ಪತ್ರದಲ್ಲಿ ವಿವರವಾಗಿ ತಿಳಿಸಿತ್ತು.

2024ರ ಸೆ.27ರಂದು ಕೆಐಎಡಿಬಿಯು  ( KIADB/HO/Allot/25108/11403/2024-25 ) ಪತ್ರದ ಮೂಲಕ ಹಂಚಿಕೆಯನ್ನು ರದ್ದುಪಡಿಸಿ, ಮೂಲ ಹಂಚಿಕೆ ಪತ್ರ ಮತ್ತು ರಸೀದಿಗಳನ್ನು ಹಿಂತಿರುಗಿಸುವಂತೆ ಟ್ರಸ್ಟ್‌ಗೆ ಸೂಚಿಸಿತ್ತು.  2024ರ ಅಕ್ಟೋಬರ್‍‌ 7ರಂದು  ಟ್ರಸ್ಟ್ ಮೂಲ ಹಂಚಿಕೆ ಪತ್ರ ಮತ್ತು ರಸೀದಿಗಳನ್ನು ಸಲ್ಲಿಸಿತ್ತು.  ಹಂಚಿಕೆಯನ್ನು ಸ್ವಯಂಪ್ರೇರಿತವಾಗಿ ಹಿಂತಿರುಗಿಸಿದ್ದಕ್ಕಾಗಿ ನಿಯಮಾನುಸಾರ ವಿಧಿಸಲಾದ ದಂಡದ ಮೊತ್ತವನ್ನು ಕಡಿತಗೊಳಿಸಿ, ಉಳಿದ ಪ್ರೀಮಿಯಂ ಮೊತ್ತವನ್ನು ಕೆಐಎಡಿಬಿಯು ಮರು ಪಾವತಿಸಿತ್ತು.

ಅಲ್ಲದೇ ಬಿಟಿಎಂ ಬಡಾವಣೆಯಲ್ಲಿ  ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ  ಶಾಲೆ ಸ್ಥಾಪಿಸುವ ಉದ್ದೇಶಕ್ಕಾಗಿ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿರುವ ಕುರಿತು ಪ್ರಿಯಾಂಕ್ ಖರ್ಗೆ ಅವರು  ಮಾಹಿತಿ ಸಲ್ಲಿಸಿದ್ದರು.  2009ರ ಮಾರ್ಚ್‌ 5ರಂದು ಬಿಡಿಎಗೆ    ಅರ್ಜಿ ಸಲ್ಲಿಸಿತ್ತು. (ನೋಂದಣಿ ಸಂಖ್ಯೆ 431 ಮತ್ತು ಅರ್ಜಿ ಸಂಖ್ಯೆ 2299)  ಅರ್ಜಿಯೊಂದಿಗೆ ಅಗತ್ಯವಿದ್ದಂತೆ ಟ್ರಸ್ಟ್ ರೂ.20,31,250/- ಆರಂಭಿಕ ಠೇವಣಿ ಪಾವತಿಸಿತ್ತು . ಬನಶಂಕರಿ 6ನೇ ಹಂತ, 5ನೇ ಬ್ಲಾಕ್‌ನ 8,125 ಚದರ ಮೀಟರ್ ವಿಸ್ತೀರ್ಣದ CA Site No.03ನ್ನು ಟ್ರಸ್ಟ್‌ಗೆ 07/04/2010ರ ಹಂಚಿಕೆ ಪತ್ರದ ಮೂಲಕ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಹಂಚಿಕೆಯಾಗಿತ್ತು.

 

 

ಟ್ರಸ್ಟ್‌ನ ಸದಸ್ಯರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ (UDD/74/MNJ/2009ರ)  ಸರ್ಕಾರಿ ಆದೇಶದ ಪ್ರಕಾರ ಹಂಚಿಕೆ ದರದಲ್ಲಿ 50% ರಿಯಾಯಿತಿಗೆ ಅರ್ಹರಾಗಿದ್ದೇವೆ ಎಂದು ತಿಳಿಸಿತ್ತು.  ಇತರ ಟ್ರಸ್ಟ್‌ಗಳು/ಸಂಸ್ಥೆಗಳಿಗೆ ನೀಡಲಾದ ಇಂತಹುದೇ ರಿಯಾಯಿತಿಗಳ ಆಧಾರದ ಮೇಲೆ 2010ರ ಜೂನ್‌ 8ರಂದು ಬಿಡಿಎಗೆ ಮನವಿ ಸಲ್ಲಿಸಿತ್ತು.  ಈ ಮನವಿಯನ್ನು ಬಿಡಿಎ ಅಂಗೀಕರಿಸಿತ್ತು.  ಹಿಂದಿನ ನಿದರ್ಶನ ಮತ್ತು  ಸರ್ಕಾರಿ ಆದೇಶದ ಪ್ರಕಾರ 50% ರಿಯಾಯಿತಿ ನೀಡಿತ್ತು. ಈ ಮಧ್ಯೆ ಸಿದ್ದಾರ್ಥ ವಿಹಾರ ಟ್ರಸ್ಟ್‌,  2010ರ ಸೆ. 9ರಂದು ಬಿಡಿಗೆ ಮತ್ತೊಂದು ಪತ್ರ ಸಲ್ಲಿಸಿತ್ತು.  ಹಂಚಿಕೆ ಮಾಡಲಾಗಿದ್ದ ಸೈಟ್‌ನಲ್ಲಿ ಮಕ್ಕಳಿಗಾಗಿ ಶಾಲೆ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿತ್ತು.

‘ಆ ಪ್ರದೇಶವು ಅಭಿವೃದ್ಧಿಯಾಗಿರಲಿಲ್ಲ ಮತ್ತು ಅಗತ್ಯ ನಾಗರಿಕ ಸೌಲಭ್ಯಗಳು ಇರಲಿಲ್ಲ.   ಉತ್ತಮ ನಾಗರಿಕ ಸೌಲಭ್ಯಗಳನ್ನು ಹೊಂದಿರುವ ಯಾವುದೇ ಬದಲಿ ಸಿಎ ನಿವೇಶನ ನೀಡಬೇಕು,’ ಎಂದು  ಮನವಿ ಮಾಡಿತ್ತು.   ಈ ಮನವಿಯ ಮೇರೆಗೆ ಬಿಡಿಎಯು ಬಿಟಿಎಂ   ಲೇಔಟ್, 4ನೇ ಹಂತ, 2ನೇ ಬ್ಲಾಕ್‌ನ 8,002 ಚದರ ಮೀಟರ್ ವಿಸ್ತೀರ್ಣದ  ( CA Site No.5ನ್ನು) ಬದಲಿ ನಿವೇಶನ ಹಂಚಿಕೆ ಮಾಡಿತ್ತು.   ಬದಲಿ ನಿವೇಶನವು  30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಹಂಚಿಕೆಯಾಗಿತ್ತು.   ಟ್ರಸ್ಟ್ ಈಗಾಗಲೇ ತನ್ನ ಅರ್ಜಿಯೊಂದಿಗೆ (03/03/2009) 20,31,250 ರು  ಪಾವತಿಸಿತ್ತು. ಗುತ್ತಿಗೆ ಮೊತ್ತಕ್ಕೆ ಸಂಬಂಧಿಸಿದ ಬಾಕಿ 80,49,000 ರು ಅನ್ನು  (20/11/2010) ರಂದು ಟ್ರಸ್ಟ್ ಪಾವತಿಸಿತ್ತು ಗುತ್ತಿಗೆ ಪತ್ರವನ್ನು ಜಾರಿಗೊಳಿಸುವಂತೆ ಟ್ರಸ್ಟ್ ಮನವಿ ಮಾಡಿತ್ತು ಎಂದು ಅಂಕಿ ಅಂಶಗಳ ಸಮೇತ ವಿವರಿಸಿದ್ದರು.

 

 

ಬಿಡಿಎ   ಸ್ವಾಧೀನ ಪ್ರಮಾಣಪತ್ರ ನೀಡಿದ್ದರೂ, ಭೂಮಾಲೀಕರು ಸಲ್ಲಿಸಿದ್ದ ವಿವಿಧ ನ್ಯಾಯಾಂಗ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಕಾರಣ, ಟ್ರಸ್ಟ್‌ಗೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವುದು ಕಷ್ಟವಾಗಿತ್ತು.  ಕೆಲವು ಮೂಲ ಭೂಮಾಲೀಕರು ಕರ್ನಾಟಕ ಹೈಕೋರ್ಟ್‌ನಲ್ಲಿ ( WP No.6370/2020) ರಿಟ್  ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ಗಳು 50/1, 50/2 ಮತ್ತು 51/5ಗಳಿಗೆ ಸಂಬಂಧಿಸಿದ ಅಧಿಸೂಚನೆ ಮತ್ತು ಭೂಸ್ವಾಧೀನವನ್ನು ರದ್ದುಪಡಿಸುವಂತೆ ಅವರು ಮನವಿ ಮಾಡಿದ್ದರು.

 

 

ಈ ಸರ್ವೆ ನಂಬರ್‌ಗಳ ಭಾಗವು ಬಿಟಿಎಂ  ಲೇಔಟ್, 4ನೇ ಹಂತ, 2ನೇ ಬ್ಲಾಕ್‌ನ (CA Site No.5ಗೆ)  ಸೇರಿದೆ. ಬಿಡಿಎಯು  ದೇವರಚಿಕ್ಕನಹಳ್ಳಿ ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಸರ್ವೆ ನಂಬರ್‌ಗಳು 50/1, 50/2, 50/3, 50/4, 51/2, 51/4 ಮತ್ತು 51/5ರ ಭಾಗಗಳಿಂದ BTM ಲೇಔಟ್ 4ನೇ ಹಂತ, 2ನೇ ಬ್ಲಾಕ್‌ನ ( CA Site No.5ನ್ನು) ನಿವೇಶನ  ರಚಿಸಿತ್ತು.

ಬಿಟಿಎಂ  4ನೇ ಹಂತದ ಲೇಔಟ್ ರಚಿಸುವ ಸಂದರ್ಭದಲ್ಲಿ (03/11/1990ರ ) ಅಂತಿಮ ಅಧಿಸೂಚನೆ (ಸಂಖ್ಯೆ HUD/334/MNX)  ಮೂಲಕ   ಸರ್ವೆ ನಂಬರ್‌ಗಳನ್ನು ಬಿಡಿಎಯು  ಸ್ವಾಧೀನಪಡಿಸಿಕೊಂಡಿತ್ತು.  1994ರ ಮೇ 11ರಿಂದಲೂ ಭೂಮಿಯು  ಬಿಡಿಎಯ ಸ್ವಾಧೀನದಲ್ಲಿತ್ತು. ಭೂಮಾಲೀಕರಿಗೆ ಪ್ರತಿ ಎಕರೆಗೆ ರೂ.1,10,000/- ಪರಿಹಾರ ಪಾವತಿಸಲಾಗಿತ್ತು. ಈ ಪರಿಹಾರವನ್ನು ಭೂಮಾಲೀಕರು ಒಪ್ಪಿಕೊಂಡಿದ್ದರು. ಪರಿಹಾರ ಹೆಚ್ಚಿಸುವಂತೆ ಅವರು LAC Nos.11/2008, 12/2008, 13/2008, 20/2008 ಮತ್ತು 21/2008ರಲ್ಲಿ ಮನವಿ ಸಲ್ಲಿಸಿದ್ದರು.

 

 

ಹಿಂದಿನ ಭೂಮಾಲೀಕರು ಕರ್ನಾಟಕ ಹೈಕೋರ್ಟ್‌ಗೆ ಕೆಳಗಿನ ವಿಷಯಗಳನ್ನು ಬಹಿರಂಗಪಡಿಸದೆ ವಾಸ್ತವಾಂಶಗಳನ್ನು ಮರೆಮಾಚಿದ್ದರು.  ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದ ಪರಿಹಾರವನ್ನು ಬಿಡಿಎ ಈಗಾಗಲೇ ಅವರಿಗೆ ಪಾವತಿಸಿತ್ತು.  ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಬಿಡಿಎಯು  ಈಗಾಗಲೇ ರಸ್ತೆಗಳು ಮತ್ತು ಸೈಟ್‌ಗಳನ್ನು ರಚಿಸಿತ್ತು. ಈ  ಪ್ರಕರಣದಲ್ಲಿ ಆದೇಶ ಹೊರಡಿಸಿದ್ದ  ಕರ್ನಾಟಕ ಹೈಕೋರ್ಟ್ (19/03/2021) ಬಿಟಿಎಂ  ಲೇಔಟ್ 4ನೇ ಹಂತ, 2ನೇ ಬ್ಲಾಕ್‌ನ CA Site No.5ರ ಭಾಗವಾಗಿರುವ ಸರ್ವೆ ನಂಬರ್‌ಗಳು 50/1, 50/2 ಮತ್ತು 51/5ರ ಭೂಸ್ವಾಧೀನವನ್ನು ರದ್ದುಪಡಿಸಿತ್ತು.

ಈ ಆದೇಶದ ವಿರುದ್ಧ ಬಿಡಿಎಯು (28/02/2022- WA 252/2022) ರಿಟ್ ಮೇಲ್ಮನವಿ ಸಲ್ಲಿಸಿತ್ತು.  ಟ್ರಸ್ಟ್ ಕೂಡ (WA 857/2022) ಮೂಲಕ ಮೇಲ್ಮನವಿ ಸಲ್ಲಿಸಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಮೇಲ್ಮನವಿಗಳ ವಿಚಾರಣೆ ಬಾಕಿ ಇವೆ. ಈ  ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ಜಾರಿಯಲ್ಲಿದೆ. ಭೂಸ್ವಾಧೀನ ರದ್ದುಪಡಿಸಿರುವ ಹಿನ್ನೆಲೆಯಲ್ಲಿ, ಟ್ರಸ್ಟ್‌ಗೆ ಮೇಲ್ಕಂಡ CA ಸೈಟ್‌ನ ಹಂಚಿಕೆಯು ಈ ಮೇಲ್ಮನವಿಯ ಅಂತಿಮ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ವಿವರಿಸಿದ್ದಾರೆ.

 

 

‘ಬಿಡಿಎಯು ಟ್ರಸ್ಟ್‌ಗೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಬಿಟಿಎಂ ಬಡಾವಣೆಯ ನಾಲ್ಕನೇ ಹಂತದಲ್ಲಿ ಸಿಎ ನಿವೇಶನವನ್ನು ಹಂಚಿಕೆ ಮಾಡಿದ್ದ ಸಮಯದಿಂದಲೇ ಕಾನೂನು ಸಂಬಂಧಿತ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ. ಹಂಚಿಕೆಯ ಸಮಯದಿಂದಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಭೂಮಿಯ ಸ್ವಾಧೀನ ಪಡೆಯಲು ಅಥವಾ ಪರ್ಯಾಯ ಪರಿಹಾರ ಪಡೆಯಲು ಟ್ರಸ್ಟ್ ಯಾವುದೇ ಒತ್ತಡ ಅಥವಾ ಪ್ರಭಾವವನ್ನು ಬಳಸಿಲ್ಲ. ಸಮಸ್ಯೆಗಳನ್ನು ಪರಿಹರಿಸಲು ಟ್ರಸ್ಟ್ ಯಾವಾಗಲೂ ಸೂಕ್ತ ಅಧಿಕೃತ ಮಾರ್ಗಗಳ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿದೆ,’  ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಿಳಿಸಿದ್ದರು.

2014ರಲ್ಲಿ ಬಿಡಿಎನಿಂದ ಬಿಟಿಎಂ ಲೇಔಟ್ ನ ನಾಲ್ಕನೇ ಹಂತದಲ್ಲಿ ಸಿಎ ನಿವೇಶನವನ್ನು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿರುವ ವಿಚಾರವನ್ನು ಕೆಐಎಡಿಬಿಗೆ ಟ್ರಸ್ಟ್‌ ಮರೆ ಮಾಚಿದೆ ಎಂಬ ಆರೋಪವೇ ಸುಳ್ಳು. ಇತರ ಯಾವುದೇ ಸರ್ಕಾರಿ ಸಂಸ್ಥೆಯಿಂದ ಈ ಹಿಂದೆ ಹಂಚಿಕೆ ಮಾಡಲಾದ ಯಾವುದೇ ನಾಗರಿಕ ನಿವೇಶದ ಕುರಿತಾದ ಮಾಹಿತಿಯನ್ನು ಕೆಐಎಡಿಬಿಯು ತನ್ನ ಅರ್ಜಿ ನಮೂನೆಯಲ್ಲಿ ಕೇಳಿರಲಿಲ್ಲ.

 

 

ಈ ಟ್ರಸ್ಟ್ ಈ ಹಿಂದಿನ ನಾಗರಿಕ ನಿವೇಶನ ಹಂಚಿಕೆಯ ಬಗ್ಗೆ ಕೆಐಎಡಿಬಿಗೆ ಪ್ರತ್ಯೇಕವಾಗಿ ಮಾಹಿತಿ ನೀಡಬೇಕೆಂಬ ಯಾವುದೇ ನಿಯಮ ಇರದಿದ್ದರೂ ಬಿಡಿಎನಿಂದ ದೊರೆತ ನಿವೇಶನವನ್ನು ಟ್ರಸ್ಟ್ ಸಲ್ಲಿಸಿದ ಹಣಕಾಸು ದಾಖಲೆಗಳಲ್ಲಿ ಆಸ್ತಿಯಾಗಿ ನಮೂದಿಸಿತ್ತು.  ಒಂದೇ ಟ್ರಸ್ಟ್‌ಗೆ ಒಂದೇ ಉದ್ದೇಶಕ್ಕಾಗಿ ಎರಡು ನಾಗರಿಕ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಕಾನೂನುಬಾಹಿರ ಎಂಬ ದೂರುದಾರರ ಆರೋಪಕ್ಕೆ ಯಾವುದೇ ಆಧಾರವಿಲ್ಲ.  ಅದೇ ರೀತಿ ಕೆಐಎಡಿಬಿಯು ತನ್ನ ಅರ್ಜಿ ನಮೂನೆಯಲ್ಲಿ ಕೆಐಎಡಿಬಿಯಿಂದ ಅಥವಾ ಇತರ ಯಾವುದೇ ಸರ್ಕಾರಿ ಸಂಸ್ಥೆಯಿಂದ ಹಿಂದೆ ಹಂಚಿಕೆ ಮಾಡಲಾದ ಯಾವುದೇ ನಾಗರಿಕ ನಿವೇಶನಗಳ ಕುರಿತು ಮಾಹಿತಿಯನ್ನು ಕೇಳಿರಲಿಲ್ಲ ಎಂದು ತಿಳಿಸಿದ್ದರು.

ಇದಲ್ಲದೆ ಕೆಐಎಡಿಬಿಯು 2024ರ ಫೆ.8ರಂದು ಪ್ರಕಟಿಸಿದ್ದ ಜಾಹೀರಾತು/ಅಧಿಸೂಚನೆಯಲ್ಲಿ, ಈಗಾಗಲೇ ಯಾವುದೇ ಸರ್ಕಾರಿ ಸಂಸ್ಥೆಯಿಂದ ನಾಗರಿಕ ನಿವೇಶನ ಹಂಚಿಕೆ ಪಡೆದಿರುವ ಅರ್ಜಿದಾರರು ಸಿಎ ಪ್ಲಾಟ್‌ಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂಬಂತಹ ಯಾವುದೇ ಷರತ್ತನ್ನು ವಿಧಿಸಿರಲಿಲ್ಲ. ಟ್ರಸ್ಟ್, 2024ರ ಫೆ.23ರಂದು ಕೆಐಎಡಿಬಿಗೆ ಅರ್ಜಿ ಸಲ್ಲಿಸಿದ ದಿನಾಂಕದ ವೇಳೆಗೆ ಬಿಡಿಎಯು ಟ್ರಸ್ಟ್‌ಗೆ ಹಂಚಿಕೆ ಮಾಡಿದ್ದ ಬಿಟಿಎಂ ಬಡಾವಣೆಯಲ್ಲಿನ ನಿವೇಶನ (ಸಂಖ್ಯೆ 5) ಕ್ಕೆ ಸಂಬಂಧಿಸಿದ ಸರ್ವೆ ನಂಬರ್‌ಗಳ ಭೂಸ್ವಾಧೀನವನ್ನು ಕರ್ನಾಟಕ ಹೈಕೋರ್ಟ್ ಈಗಾಗಲೇ ರದ್ದುಪಡಿಸಿತ್ತು. ಆದ್ದರಿಂದ ಬಿಡಿಎಯಿಂದ ಬಿಟಿಎಂ ಬಡಾವಣೆಯಲ್ಲಿ ಹಂಚಿಕೆ ಮಾಡಿದ್ದ ಸಿಎ ನಿವೇಶನದ ಮಾರುಕಟ್ಟೆ ಮೌಲ್ಯ 130 ಕೋಟಿ ರುಪಾಯಿ  ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದರು.

 

 

2014ರ ಮೇ 12ರಂದು ಜಾರಿಯಲ್ಲಿದ್ದ ಸಿಎ ನಿವೇಶನ ಗುತ್ತಿಗೆ ಕರಾರು ಪತ್ರದ ಪ್ರಕಾರ (CA Site Lease Agreement BDA-1-00441/2014-15, CD No. BDA D202, Book No.1) ನ ಕೇವಲ 30 ವರ್ಷಗಳ ಅವಧಿಗೆ ಟ್ರಸ್ಟ್‌ಗೆ ಗುತ್ತಿಗೆಗೆ ನೀಡಲಾಗಿತ್ತು. ಸಿಎ ನಿವೇಶನಗಳನ್ನು ಶಾಲೆಗಳು, ಆಟದ ಮೈದಾನಗಳು, ಉದ್ಯಾನಗಳು, ಆಸ್ಪತ್ರೆಗಳು ಮುಂತಾದ ಸಾರ್ವಜನಿಕ ಸೌಲಭ್ಯಗಳು ಮತ್ತು ಸೇವೆಗಳನ್ನು ಸಾರ್ವಜನಿಕರ ಸಾಮಾನ್ಯ ಹಿತಕ್ಕಾಗಿ ಒದಗಿಸುವ ಉದ್ದೇಶದಿಂದ ಪ್ರಾಧಿಕಾರಗಳು ಮೀಸಲಿಟ್ಟು ಹಂಚಿಕೆ ಮಾಡುತ್ತವೆ.

ಈ ಸಿಎ ನಿವೇಶನಗಳು ವಾಣಿಜ್ಯ ಚಟುವಟಿಕೆಗಳಿಗಾಗಿ ಉದ್ದೇಶಿತವಾಗಿಲ್ಲ. ಆದ್ದರಿಂದ ಅದೇ ಪ್ರದೇಶದಲ್ಲಿರುವ ವಾಣಿಜ್ಯ ನಿವೇಶನಗಳೊಂದಿಗೆ ಸಿಎ ನಿವೇಶನಗಳ ಮೌಲ್ಯವನ್ನು ಹೋಲಿಕೆ ಮಾಡಲಾಗುವುದಿಲ್ಲ. ಸಿಎ ನಿವೇಶನವನ್ನು ಟ್ರಸ್ಟ್‌ಗೆ ಮಾರಾಟ ಮಾಡಲಾಗಿಲ್ಲ. ಟ್ರಸ್ಟ್ ಕೇವಲ ಗುತ್ತಿಗೆದಾರ (lessee) ಮಾತ್ರ. ಆದ್ದರಿಂದ 2010ರಲ್ಲಿ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾದ ಸಿಎ ನಿವೇಶನಕ್ಕೆ ಪ್ರಸ್ತುತ ವಾಣಿಜ್ಯ ಆಸ್ತಿಗಳ ಮಾರುಕಟ್ಟೆ ದರವನ್ನು ಅನ್ವಯಿಸುವುದು ಸಂಪೂರ್ಣವಾಗಿ ತಪ್ಪು ಮತ್ತು ತರ್ಕಬದ್ಧವಲ್ಲ.

 

 

ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನ ಸಿಎ (CA/Amenity Plot AM-04) ನಿವೇಶನದ ಮಾರುಕಟ್ಟೆ ಮೌಲ್ಯ ರೂ.110 ಕೋಟಿ ಎಂಬ ಆರೋಪಕ್ಕೂ ಯಾವುದೇ ಆಧಾರವಿಲ್ಲ. ಕೆಐಎಡಿಬಿಯು 2024ರ ಫೆ.8ರಂದು ರಾಜ್ಯದ ವಿವಿಧ ವಲಯಗಳಲ್ಲಿರುವ ಹಲವು ಸಿಎ ನಿವೇಶನಗಳಿಗಾಗಿ ಜಾಹೀರಾತು/ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ ಬೆಂಗಳೂರು ವಲಯದ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಾದ ಸಿಎ ನಿವೇಶನ ( CA Plot No. AM-4) ಕೂಡ ಸೇರಿತ್ತು.

 

 

ಅರ್ಜಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಕೆಐಎಡಿಬಿಯು ತನ್ನ ವೆಬ್‌ಸೈಟ್‌ನಲ್ಲಿ ಎಲ್ಲಾ ಸಿಎ ನಿವೇಶನಗಳ ವಿವರಗಳ ಜೊತೆಗೆ ಅವುಗಳ ಹಂಚಿಕೆ ದರವನ್ನೂ ಪ್ರಕಟಿಸಿತ್ತು. ಇದರ ಪ್ರಕಾರ ಎಲ್ಲಾ ನಾಗರಿಕ ನಿವೇಶನಗಳಿಗೆ (CA/Amenity Plotsಗಳಿಗೆ) ಪ್ರತಿ ಎಕರೆಗೆ ರೂ.2.8 ಕೋಟಿ ದರವನ್ನು ಪ್ರಕಟಿಸಲಾಗಿತ್ತು. ಈ ಹಂಚಿಕೆ ದರದ ಆಧಾರದ ಮೇಲೆ CA/Amenity Plot AM-04ರ ಗುತ್ತಿಗೆ ಮೊತ್ತವನ್ನು ಕೆಐಎಡಿಬಿಯು 14.25 ಕೋಟಿ ರು ದರ ನಿಗದಿಪಡಿಸಿತ್ತು.  ಶಿಕ್ಷಣ/ಸಂಶೋಧನೆ/ತರಬೇತಿ ಸಂಸ್ಥೆಗಳಿಗೆ ಸಂಬಂಧಿಸಿದ ನಾಗರಿಕ ನಿವೇಶನ ( Civic Amenity Site) ವೆಚ್ಚವನ್ನು ಪ್ರತಿ ಎಕರೆಗೆ ರೂ.2.8 ಕೋಟಿ ಎಂದು ನಿಗದಿಪಡಿಸಲಾಗಿತ್ತು.

 

 

ಇದು ಇತರ ಯಾವುದೇ ಚಟುವಟಿಕೆಗಳಿಗೆ ಉದ್ದೇಶಿಸಲಾದ ಸಿಎ ( CA/Amenity Plotಗಳಿಗೆ) ನಿವೇಶನಗಳಿಗೆ ನಿಗದಿಪಡಿಸಿದ ದರದಷ್ಟೇ ಆಗಿತ್ತು. ಟ್ರಸ್ಟ್ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ ಸೆಂಟರ್ ಫಾರ್ ಎಕ್ಷಲೆನ್ಸ್‌ ಮತ್ತು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದ ಸಿಎ ( CA/Amenity Plot) ನಿವೇಶನಕ್ಕೂ ವಾಣಿಜ್ಯ ಚಟುವಟಿಕೆ ನಡೆಯಬಹುದಾದ ಪ್ಲಾಟ್‌ಗೂ ಒಂದೇ ದರವನ್ನು ನಿಗದಿಪಡಿಸಲಾಗಿತ್ತು.

ಈ  ಸಂಸ್ಥೆಗಳು ಲಾಭರಹಿತ ಸಂಸ್ಥೆಗಳು (not-for-profit institutions) ಆಗಿದ್ದರೂ ದರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಎಸ್‌ ಸಿ, ಎಸ್‌ ಟಿ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗುವ ಕೈಗಾರಿಕಾ ಪ್ಲಾಟ್‌ಗಳಿಗೆ ಹಂಚಿಕೆ ದರದಲ್ಲಿ ಶೇ. 50 ರಿಯಾಯಿತಿ ನೀಡಲಾಗುತ್ತದೆ. ಆದರೆ ಎಸ್‌ಸಿ ಎಸ್‌ ಟಿ ಟ್ರಸ್ಟ್‌ಗಳು/ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವ ಸಿಎ (CA/Amenity Sites) ನಿವೇಶನಗಳಿಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಟ್ರಸ್ಟ್ ಯಾವುದೇ ರಿಯಾಯಿತಿಯನ್ನು ಕೇಳಿರಲಿಲ್ಲ ಅಥವಾ ಪಡೆದಿರಲಿಲ್ಲ. ಕೆಐಎಡಿಬಿಯು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದ ದರದಂತೆ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಸಿಎ (CA/Amenity Plot AM-04) ನಿವೇಶನವನ್ನು ಹಂಚಿಕೆ ಮಾಡಲಾಗಿತ್ತು.

 

 

‘ಆದ್ದರಿಂದ ಟ್ರಸ್ಟ್‌ಗೆ ಹಂಚಿಕೆ ಮಾಡಲಾದ ಸಿಎ ( CA/Amenity Plot) ಪ್ಲಾಟ್‌ ಮಾರುಕಟ್ಟೆ ಮೌಲ್ಯ ರೂ.110 ಕೋಟಿ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ,’  ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಪಾದಿಸಿರುವುದು ಅಂತಿಮ ಪರಿಶೀಲನೆ ಟಿಪ್ಪಣಿಯಿಂದ ತಿಳಿದು ಬಂದಿದೆ.

ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಸಿಎ (CA/Amenity Plot) ಪ್ಲಾಟ್‌ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಕೆಐಎಡಿಬಿಯು ತ್ವರಿತಗೊಳಿಸಿತ್ತು ಎಂಬ ಆರೋಪವೂ ಸುಳ್ಳು ಎಂದು ತಿಳಿಸಿದ್ದಾರೆ. ಕೆಐಎಡಿಬಿಯು 2024ರ ಫೆ.8ರಂದು ರಾಜ್ಯದ ವಿವಿಧ ವಲಯಗಳಲ್ಲಿ ಹಲವು ಸಿಎ ನಿವೇಶನಗಳಿಗಾಗಿ ಜಾಹೀರಾತು/ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ ಬೆಂಗಳೂರು ವಲಯದ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನ ಎಸ್‌ಸಿ, ಎಸ್‌ ಟಿ ವರ್ಗಕ್ಕೆ ಮೀಸಲಾದ ಸಿಎ ( CA Plot No. AM-04) ಕೂಡ ಸೇರಿತ್ತು. ಪ್ರಕಟಿತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು 2024ರ ಫೆ.23 ಕೊನೆಯ ದಿನಾಂಕವಾಗಿತ್ತು.

 

 

ಸಿದ್ದಾರ್ಥ ವಿಹಾರ್ ಟ್ರಸ್ಟ್ 2024ರ ಫೆ.23ರಂದು ಕೆಐಎಡಿಬಿಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯೊಂದಿಗೆ Research and Development Centre, Centre of Excellence in Training ಮತ್ತು ಸಂಬಂಧಿತ Training Institutes ಸ್ಥಾಪಿಸುವ ಪ್ರಸ್ತಾವನೆ, ಅರ್ಜಿ ನಮೂನೆ, ಯೋಜನಾ ವರದಿ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಟ್ರಸ್ಟ್, 2024ರ ಮಾರ್ಚ್‌ 11ರಂದು ಅರ್ಜಿ ಸಲ್ಲಿಸಿತ್ತು ಎಂಬ ಆರೋಪ ಸುಳ್ಳು ಎಂದು ತಿಳಿಸಿದ್ದಾರೆ.

ಕೆಐಎಡಿಬಿಯು 2024ರ ಮಾರ್ಚ್‌ 11ರಂದು (ಪತ್ರ ಸಂಖ್ಯೆ KIADB/HO/Allot/25108/21556/2023-24) R&D Centre, Centre of Excellence ಮತ್ತು Training Institutes ಸ್ಥಾಪಿಸುವ ಟ್ರಸ್ಟ್‌ನ ಯೋಜನೆಗೆ ಅನುಮೋದನೆ ನೀಡಿರುವುದಾಗಿ ತಿಳಿಸಿತ್ತು. ಅದೇ ಪತ್ರದ ಮೂಲಕ ಬೆಂಗಳೂರು ವಲಯದ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನ CA/Amenity Plot No. AM-4 ಹಂಚಿಕೆಯ ವಿಚಾರವನ್ನೂ ತಿಳಿಸಿತ್ತು.

 

 

ಆರ್‍‌ಟಿಐ ಕಾಯ್ದೆಯಡಿ ಕೆಐಎಡಿಬಿಯು ಒದಗಿಸಿದ ಮಾಹಿತಿಯ ಪ್ರಕಾರ, ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನಲ್ಲಿರುವ ಎಲ್ಲಾ CA/Amenity Plotsಗಳಿಗೆ ಸಲ್ಲಿಸಲಾದ ಇತರ ಎಲ್ಲಾ ಅರ್ಜಿಗಳ ಜೊತೆಗೆ ಟ್ರಸ್ಟ್ ಸಲ್ಲಿಸಿದ ಯೋಜನಾ ಪ್ರಸ್ತಾವನೆಯನ್ನೂ ಕೆಐಎಡಿಬಿಯು ಪರಿಶೀಲಿಸಿತ್ತು. ಹೀಗಾಗಿ ಈ ಟ್ರಸ್ಟ್‌ಗೆ ಮಾತ್ರ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿತ್ತು ಎಂಬ ಆರೋಪ ಸುಳ್ಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನಲ್ಲಿ ಸಿಎ ( CA/Amenity Plot AM-4) ನಿವೇಶನ ಪಡೆಯಲು ಟ್ರಸ್ಟ್ ಪ್ರಭಾವ ಬಳಸಿತ್ತು ಎಂಬ ಆರೋಪವೂ ಆಧಾರರಹಿತ ಮತ್ತು ಸುಳ್ಳು ಎಂದು ತಿಳಿಸಿದ್ದಾರೆ.

 

 

ಸಿದ್ದಾರ್ಥ ವಿಹಾರ್ ಟ್ರಸ್ಟ್ 1994ರ ಜುಲೈ 1ರಂದು ಸ್ಥಾಪಿಸಲಾದ, ರದ್ದುಗೊಳಿಸಲಾಗದ ಸಾರ್ವಜನಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ದತ್ತಿ ಟ್ರಸ್ಟ್ ಆಗಿದೆ.  ಟ್ರಸ್ಟ್‌ನ ಉದ್ದೇಶಗಳಲ್ಲಿ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವುದು ಕೂಡ ಒಂದಾಗಿದೆ. ಆದ್ದರಿಂದ Training Institutes, Centre of Excellence ಮತ್ತು Research and Development Centre ಸ್ಥಾಪಿಸಲು CA/Amenity Plotಗೆ ಅರ್ಜಿ ಸಲ್ಲಿಸಲು ಮತ್ತು ಅದನ್ನು ಪಡೆಯಲು ಟ್ರಸ್ಟ್ ಸಂಪೂರ್ಣವಾಗಿ ಅರ್ಹವಾಗಿತ್ತು.

 

 

ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿರುವುದರಿಂದ, ಟ್ರಸ್ಟ್ ಮತ್ತು ಅದರ ಮೂಲಕ ಸ್ಥಾಪಿಸಲಾಗುವ ಸಂಸ್ಥೆಗಳ ಎಲ್ಲಾ ಚಟುವಟಿಕೆಗಳು ಲಾಭರಹಿತ ಆಧಾರದ ಮೇಲೆ ನಡೆಯಲಿವೆ. ಆದ್ದರಿಂದ ಟ್ರಸ್ಟ್ CA/Amenity Plot ಪಡೆಯಲು ಸಂಪೂರ್ಣವಾಗಿ ಅರ್ಹವಾಗಿತ್ತು. ಟ್ರಸ್ಟ್‌ನ ಅಧ್ಯಕ್ಷರಾದ ರಾಹುಲ್ ಖರ್ಗೆ ಅವರು ಸೈಬರ್ ಭದ್ರತೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ 25 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಅವರು Indian Institute of Scienceನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಮತ್ತು Defence Research & Development Organisation (DRDO) ನ ಪ್ರಯೋಗಾಲಯಗಳೊಂದಿಗೆ ಸಹಯೋಗ ಹೊಂದಿದ್ದಾರೆ. ಮಾಹಿತಿ ಭದ್ರತಾ ಕ್ಷೇತ್ರದಲ್ಲಿ ಅವರ ಕೆಲಸಕ್ಕಾಗಿ 2008ರಲ್ಲಿ DRDOಯಿಂದ Agni Award for Excellence in Self Reliance ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

 

ಸಿದ್ದಾರ್ಥ ವಿಹಾರ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿಗಳು ಸಾಮಾಜಿಕ ಸೇವೆಯ ಹಿನ್ನೆಲೆ ಹೊಂದಿದ್ದು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಅನುಭವ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. Training Institute/Skill Development Centre ಹಾಗೂ Research & Development Centre ಸ್ಥಾಪಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ ಏಕೈಕ ಅರ್ಜಿದಾರ ಸಿದ್ದಾರ್ಥ ವಿಹಾರ್ ಟ್ರಸ್ಟ್ ಆಗಿತ್ತು ಎಂದು ತಿಳಿಸಿದ್ದಾರೆ.

ಬೆಂಗಳೂರು ವಲಯದ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನ ಹಾರ್ಡ್‌ವೇರ್ ಸೆಕ್ಟರ್‌ನ CA/Amenity Plot AM-4ಗೆ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಜಿದಾರರ ವಿವರಗಳನ್ನು ನೀಡಲಾಗಿದೆ. ಕೆಐಎಡಿಬಿ ವಲಯದಲ್ಲಿ ಯುವಕರಿಗೆ ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕಾ ತರಬೇತಿಗೆ ಸೂಕ್ತ ವಾತಾವರಣ ಒದಗಿಸುವಂತಹ ಪ್ರಸ್ತಾವನೆಯ ಅರ್ಹತೆ ಮತ್ತು ಗುಣಮಟ್ಟದ ಆಧಾರದ ಮೇಲೆ ಟ್ರಸ್ಟ್ CA/Amenity Plot ಪಡೆಯಲು ಸಂಪೂರ್ಣವಾಗಿ ಅರ್ಹವಾಗಿತ್ತು. ಆದ್ದರಿಂದ ಟ್ರಸ್ಟ್ ಈ ಹಂಚಿಕೆಗೆ ಅರ್ಹವಾಗಿರಲಿಲ್ಲ ಎಂಬ ಆರೋಪ ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಎಂದು ತಿಳಿಸಿದ್ದಾರೆ.

 

 

ಸಿದ್ದಾರ್ಥ ವಿಹಾರ್ ಟ್ರಸ್ಟ್ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿದ್ದು, ಅದು ರದ್ದುಗೊಳಿಸಲಾಗದ ಸಂಸ್ಥೆಯಾಗಿದೆ. ಟ್ರಸ್ಟ್‌ನ ಮೂಲ ಸ್ಥಾಪಕರ ನಂತರವೂ ಅದು ಮುಂದುವರಿಯುತ್ತದೆ ಮತ್ತು ಅಸ್ತಿತ್ವದಲ್ಲಿರುತ್ತದೆ. ಇತರ ಅನೇಕ ಸಾರ್ವಜನಿಕ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್‌ಗಳಂತೆ, ಮುಂದಿನ ದಿನಗಳಲ್ಲಿ ಮೂಲ ಸ್ಥಾಪಕರೊಂದಿಗೆ ಯಾವುದೇ ಸಂಬಂಧವಿಲ್ಲದ ಇತರ ಟ್ರಸ್ಟಿಗಳಿಂದಲೂ ಈ ಟ್ರಸ್ಟ್ ನಿರ್ವಹಿಸಲ್ಪಡಬಹುದು.
ಹಿಂದೆ ಸಲ್ಲಿಸಿದಂತೆ, ಟ್ರಸ್ಟ್ ತನ್ನ ವೈಯಕ್ತಿಕ ಟ್ರಸ್ಟಿಗಳಿಗಿಂತ ಪ್ರತ್ಯೇಕ ಮತ್ತು ಸ್ವತಂತ್ರ ಕಾನೂನು ಘಟಕವಾಗಿದೆ. ಯಾವುದೇ ಟ್ರಸ್ಟಿಯು ವೈಯಕ್ತಿಕವಾಗಿ ಟ್ರಸ್ಟ್‌ನ ಆಸ್ತಿಗಳು ಅಥವಾ ಆದಾಯದಿಂದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

 

‘ತಾವು ಸಿದ್ದಾರ್ಥ ವಿಹಾರ್ ಟ್ರಸ್ಟ್‌ನ ಟ್ರಸ್ಟಿಯಾಗಿದ್ದರೂ, ಟ್ರಸ್ಟ್‌ನ ದೈನಂದಿನ ಚಟುವಟಿಕೆಗಳಲ್ಲಿ ಎಂದಿಗೂ ಸಕ್ರಿಯವಾಗಿ ಭಾಗವಹಿಸಿರಲಿಲ್ಲ. ಆದಾಗ್ಯೂ, ದೂರುದಾರರು ಟ್ರಸ್ಟ್ ಮತ್ತು ಟ್ರಸ್ಟಿಗಳ ವಿರುದ್ಧ ಮಾಡಿರುವ ಸುಳ್ಳು ಆರೋಪಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮತ್ತು ಸಮಗ್ರ ಉತ್ತರವನ್ನು ಸಲ್ಲಿಸಲಾಗಿದೆ.  ಆದ್ದರಿಂದ ದೂರನ್ನು ಮುಕ್ತಾಯಗೊಳಿಸಬೇಕು,’ ಎಂದು ಪ್ರಿಯಾಂಕ್ ಖರ್ಗೆ ಅವರು  ಮನವಿ ಮಾಡಿದ್ದರು.

Hot this week

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...
Please Scan to make Your Contribution

Topics

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

Related Articles

Popular Categories

error: Content is protected !!