Wednesday | August 12, 2026 |

ಐಎಎಸ್ ಅಧಿಕಾರಿಗಳ ಮನೆಗೆಲಸಕ್ಕೆ ಮಹಿಳಾ ಸ್ವೀಕಾರದ ಹೆಣ್ಣು ಮಕ್ಕಳ ನಿಯೋಜನೆ ಆರೋಪ; ಹಲವರಿಗೆ ಗರ್ಭಪಾತ, ಇನ್ನು ಕೆಲವರು ವೇಶ್ಯಾವಾಟಿಕೆಗೆ, ಹಲವರಿಗೆ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ಆರೋಪ; ಲೋಕಾಯುಕ್ತವನ್ನೇ ಬೆಚ್ಚಿಬೀಳಿಸಿದ ದೂರು

ಬೆಂಗಳೂರು; ‘ಬೆಂಗಳೂರು ನಗರದಲ್ಲಿರುವ ಮಹಿಳಾ ಸ್ವೀಕಾರ ಕೇಂದ್ರದ 1,776 ಅನಾಥ, ನಿರ್ಗತಿಕ ಮಹಿಳೆಯರು, ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ. ಹಲವರಿಗೆ ಗರ್ಭಪಾತ ಮಾಡಿಸಿ ಅನೈತಿಕ ಚಟುವಟಿಕೆಗಳೀಗೆ ಮಾರಾಟ ಮಾಡಲಾಗಿದೆ. ಕೆಲವರನ್ನು ಸಾಯಿಸಿ, ವಿದ್ಯುತ್‌ ಚಿತಾಗಾರದಲ್ಲಿ ಸುಟ್ಟು ಬೂದಿ ಮಾಡಲಾಗಿದೆ,’ ಎಂಬ ಆಘಾತಕಾರಿ, ಕಳವಳಕಾರಿ ಘಟನೆಗಳನ್ನು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಲೋಕಾಯುಕ್ತರ ಗಮನಕ್ಕೆ ತಂದಿದೆ.

ಅಲ್ಲದೇ ‘ಈ ಸ್ವೀಕಾರ ಕೇಂದ್ರದಲ್ಲಿನ ಹಲವು ಹೆಣ್ಣು ಮಕ್ಕಳನ್ನು ಮನೆ ಕೆಲಸದ ನೆಪದಲ್ಲಿ ಐಎಎಸ್‌ ಅಧಿಕಾರಿಗಳ ಮನೆಗೂ ಕಳಿಸಿರುವುದು ದಾಖಲೆಗಳಲ್ಲಿ ರುಜುವಾತಾಗಿದೆ,’ ಎಂದು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಗುರುತರವಾಗಿ ಆಪಾದಿಸಿದೆ. ಆದರೆ ಐಎಎಸ್‌ ಅಧಿಕಾರಿಗಳ ಹೆಸರುಗಳನ್ನು ದೂರಿನಲ್ಲಿ ಹೆಸರಿಸಿಲ್ಲ. ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿರುವ ಅಧಿಕಾರಿ, ಸಿಬ್ಬಂದಿಗಳ ಪಟ್ಟಿಯನ್ನೂ ಸಹ ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಲೋಕಾಯುಕ್ತರಿಗೆ ಒದಗಿಸಿದೆ.

ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನ ಪ್ರತಿಯು ದಿ ಫೈಲ್‌ಗೆ ಲಭ್ಯವಾಗಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಒಟ್ಟು 33 ದಾಖಲೆಗಳನ್ನು ಲೋಕಾಯುಕ್ತರಿಗೆ ದೂರಿನಲ್ಲಿ ಒದಗಿಸಿದೆ. ಸ್ವೀಕಾರ ಕೇಂದ್ರದಿಂದ ಹಲವು ದಾಖಲೆಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೊರಡಿಸಿರುವ ಆದೇಶಗಳು, ನಿವಾಸಿ ನಾಪತ್ತೆ, ಗೃಹ ತನಿಖೆ, ಅಂತ್ಯಕ್ರಿಯೆ, ನಿವಾಸಿ ವರ್ಗಾವಣೆ ಸೇರಿದಂತೆ ಇನ್ನಿತರೆ ಆದೇಶಗಳ ಪ್ರತಿಗಳನ್ನೂ ಸಹ ದೂರಿನಲ್ಲಿ ಒದಗಿಸಿರುವುದು ಗೊತ್ತಾಗಿದೆ.

ಸದ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಇನ್ನೂ ಸಚಿವರನ್ನು ನೇಮಿಸಿಲ್ಲ. ಹೀಗಾಗಿ ಈ ಖಾತೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಳಿಯೇ ಇದೆ. ಇಲಾಖೆಗೆ ಸಚಿವರ ನೇಮಕವಾದ ನಂತರ ಈ ಪ್ರಕರಣದ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ಒದಗಿಸಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ಫೈಲ್‌ ಗೆ ಪ್ರತಿಕ್ರಿಯಿಸಿದರು.

ಈ ದೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಕೆಎಎಸ್‌ ಅಧಿಕಾರಿ ಮಹೇಶ್‌ ಬಾಬು ಅವರನ್ನು ಪ್ರತಿವಾದಿಯನ್ನಾಗಿಸಿದೆ.

 

 

ಈ ದೂರನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ಸಂಸ್ಥೆಯು ಇದರ ವಿಚಾರಣೆಯನ್ನು 2026ರ ಸೆ.10ರಂದು ನಡೆಸಲಿದೆ.

 

 

ದೂರಿನಲ್ಲೇನಿದೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಗಳೂರು ನಗರ ಸ್ವೀಕಾರ ಕೇಂದ್ರದಲ್ಲಿ 2000ರಿಂದ 2018ರವರೆಗೆ ನಿವಾಸಿಗಳು ದಾಖಲಾಗಿ ಒಳ ಹೋದವರು ಮತ್ತೆ ಹೊರಗಡೆ ಹೋಗಿರುವುದಕ್ಕೆ ದಾಖಲೆಗಳು ಇರುವುದಿಲ್ಲ. ಕೆಲವು ನಿವಾಸಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಅನೈತಿಕ ಚಟುವಟಿಕೆ ಮತ್ತು ವೇಶ್ಯಾವಾಟಿಕೆಗೆ ತಳ್ಳಿರುವುದು ಮತ್ತು ಸಾಯಿಸಿ ವಿದ್ಯುತ್ ಚಿತಾಗಾರಕ್ಕೆ ಹಾಕಿ ಬೂದಿ ಮಾಡಿರುವುದು ದಾಖಲೆಗಳಲ್ಲಿ ಕಂಡುಬರುತ್ತದೆ ಎಂದು ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಆಪಾದಿಸಿರುವುದು ತಿಳಿದು ಬಂದಿದೆ.

2000ರಿಂದ 2018ರವರೆಗೆ 1,776 ನಿವಾಸಿಗಳನ್ನು ದಾಖಲೆ ಮಾಡಿಕೊಂಡ ಹಾಗೇ ಅವರ ಕಡತಗಳಲ್ಲಿ ಬರೆದಿರುವಂತೆ ಸ್ವೀಕಾರ ಕೇಂದ್ರದಲ್ಲಿ ದಾಖಲಾಗಿರುವುದು ಸತ್ಯವಾಗಿದೆ. ವರ ವೈಯಕ್ತಿಕ ಕಡತಗಳು ಮತ್ತು ಅವರ ಚಲನವಲನದ ಜವಾಬ್ದಾರಿ ಹೊತ್ತಿದ್ದ ಸ್ವೀಕಾರ ಕೇಂದ್ರದ ಸಿಬ್ಬಂದಿಗಳು ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮತ್ತು ಅವರ ದಾಖಲೆಗಳನ್ನು ನಾಶ ಮಾಡಿರುವುದು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಕೋರಿದ್ದರೂ ಆ ಕಡತಗಳು ಇರುವುದಿಲ್ಲ ಎಂದು ಷರಾ ಬರೆದಿದ್ದಾರೆ ಎಂದು ಲೋಕಾಯುಕ್ತರ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

ಸ್ವೀಕಾರ ಕೇಂದ್ರದಲ್ಲಿ ನಿವಾಸಿಗಳು ತಂದೆ ತಾಯಿ ಇಲ್ಲದೇ ಅವರಿಂದ ದೂರವಾಗಿ ಅವರು ಬೇರೆ ದಾರಿ ಇಲ್ಲದೇ ಪೊಲೀಸರಿಂದ ಹಾಗೂ ವೈಯಕ್ತಿಕವಾಗಿ ಸಹಾಯ ಪಡೆಯಲು ದಾಖಲಾಗಿದ್ದಾರೆ. ಇಂತಹ ಹೆಣ್ಣು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿವಾಸಿಗಳನ್ನು ಮನೆ ಕೆಲಸದ ನೆಪದಲ್ಲಿ ಐಎಎಸ್‌ ಅಧಿಕಾರಿಗಳ ಮನೆಗಳಿಗೆ ಕಳಿಸಿರುವುದು ದಾಖಲೆಗಳಲ್ಲಿ ರುಜುವಾತಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ಐಎಎಸ್ ಅಧಿಕಾರಿಗಳ ಮನೆಗಳಿಗೆ ಹೋದ ನಿವಾಸಿಗಳು ಮತ್ತು ಸಂಸ್ಥೆಗೆ ವಾಪಸ್‌ ಬಂದಿರುವುದಕ್ಕೆ ಯಾವುದೇ ದಾಖಲೆಗಳು ಇರುವುದಿಲ್ಲ. ಹಾಗೆಯೇ ಅವರು ಕೆಲಸದ ಅವಧಿಯಲ್ಲಿ ದುಡಿದ ಸಂಬಳ ಸಹ ಅವರ ಅಕೌಂಟ್‌ಗೆ ಜಮಾ ಆಗಿಲ್ಲ. ಈ ನಿವಾಸಿಗಳಿಗೆ ಬ್ಯಾಂಕ್‌ ಖಾತೆ ತೆರೆದು ನಿವಾಸಿ ಬಿಡುಗಡೆ ಆಗುವಾಗ ಅವರು ದುಡಿದಿರುವ ಹಣವನ್ನು ಅವರಿಗೆ ನೀಡಬೇಕು. ಇದು ಇಲಾಖೆಯ ನಿಯಮ. ಆದರೆ ಇವರುಗಳು ಮನೆ ಕೆಲಸದಲ್ಲೇನೆ, ನಿವಾಸಿಗಳಿಗೆ ವೇಶ್ಯಾವಾಟಿಕೆ ಮಾಡಿಸಿ ಗರ್ಭಪಾತ ಮಾಡಿಸಿ ಸಾಯಿಸುವುದು, ಕೊನೆಗೆ ವಿದ್ಯುತ್ ಚಿತಾಗಾರಗಳಿಗೆ ಹಾಕಿರುವುದು ಮತ್ತು ದಾಖಲೆಗಳನ್ನು ನಾಶ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಗುರುತರವಾಗಿ ಆರೋಪಿಸಿರುವುದು ದೂರಿನಿಂದ ಗೊತ್ತಾಗಿದೆ.

‘ಈ ವಿಚಾರಕ್ಕೆ ಸಂಬಂಧಿಸಿದಂತೆ 2018ರಿಂದಲೂ ದಾಖಲೆಗಳನ್ನು ಪಡೆಯಲಾಗಿದೆ. ಅವುಗಳನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಕರ್ನಾಟಕ ಸರ್ಕಾರಕ್ಕೆ ದೂರು ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ಅಧಿಕಾರಿ, ಸಿಬ್ಬಂದಿಗಳನ್ನು ತನಿಖೆ ಮಾಡಿಲ್ಲ. ಶಿಕ್ಷೆಗೂ ಒಳಪಡಿಸಿಲ್ಲ,’ ಎಂದು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವಾಲಯದ ಸಿಬ್ಬಂದಿ, ನಿರ್ದೇಶನಾಲಯದ ಸಿಬ್ಬಂದಿ, ಅಧಿಕಾರಿಗಳು, ಬೆಂಗಲೂರು ನಗರದ ಉಪ ನಿರ್ದೇಶಕರ ಕಚೇರಿ, ಅಧಿಕಾರಿ ಸಿಬ್ಬಂದಿಗಳು, ಇಂತಹ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ಮಾಹಿತಿ ಕೋರಿದವರಿಗೆ ಯಾವುದೇ ಹಿಂಬರಹ ನೀಡುತ್ತಿಲ್ಲ. ಸಚಿವಾಲಯದ ಸಿಬ್ಬಂದಿಗಳು ಕಡತವನ್ನು ಮುಕ್ತಾಯಗೊಳಿಸಿದ್ದೇವೆ ಎಂದು ದಾಖಲೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವುದು ಗೊತ್ತಾಗಿದೆ.

 

 

ಈ ಸಂಬಂಧ ಇಲಾಖೆಯ ಬೆಂಗಳೂರು ನೋಡಲ್‌ ಅಧಿಕಾರಿಯನ್ನು ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಸಂಪರ್ಕಿಸಿತ್ತು. ಈ ಪ್ರಕರಣಗಳ ಕುರಿತು ಗಮನಸೆಳದಿತ್ತು. ಆ ಸಂದರ್ಭದಲ್ಲಿ ‘ ಪ್ರತಿಯೊಂದು ನಾಯಿಗೂ ಸಹ ಲೆಕ್ಕ ಇರಬೇಕು. ಅಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ನಾಪತ್ತೆಯಾಗಿರುವ ಗಂಭೀರ ಪ್ರಕರಣದಲ್ಲಿ ವರದಿ ಕೇಳುತ್ತೇವೆ,’ ಎಂದು ಹೇಳಿದ್ದರು. ಆದರೆ ಈ ಹೇಳಿಕೆ ನೀಡಿದ ನಂತರವೂ ನೋಡಲ್‌ ಅಧಿಕಾರಿ ಈ ಪ್ರಕರಣದಲ್ಲಿ ಕಳೆದ 6 ತಿಂಗಳಿನಿಂದಲೂ ಯಾವುದೇ ಶಿಸ್ತುಕ್ರಮ ವಹಿಸಿಲ್ಲ. ಬದಲಿಗೆ ಕ್ರಮ ಕೈಗೊಳ್ಳಬೇಕಾಗಿರುವುದನ್ನು ಮುಂದೂಡುತ್ತಿದ್ದಾರೆ ಎಂದು ಆಪಾದಿಸಿರುವುದು ದೂರಿನಿಂದ ತಿಳಿದು ಬಂದಿದೆ.

 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸೇರಿದಂತೆ ಹಲವರ ಹೆಸರನ್ನೂ ದೂರಿನಲ್ಲಿ ಹೆಸರಿಸಿದೆ. ಇಲಾಖೆಯ ನಿರ್ದೇಶಕರಾಗಿದ್ದ ಅರುಂಧತಿ ಚಂದ್ರಶೇಖರ್, ಮಹೇಶ್‌ ಬಾಬು, ಉಪ ನಿರ್ದೇಶಕರಾಗಿದ್ದ ಸುಮಂಗಲ ಮಾಲಾಪುರ್, ಜಂಟಿ ನಿರ್ದೇಶಕರಾದ ಪುಷ್ಪ ರಾಯರ್, ಗೀತಾ ಲಕ್ಷ್ಮಿ, ರಾಜಣ್ಣ, ಕಲ್ಪನಾ, ರೇವತಿ, ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್‌, ವನಿತಾ, ಜಯಶ್ರೀ, ಮೋಹನ್‌ ಕುಮಾರ್‍‌, ಸರ್ವಮಂಗಳ, ಪ್ರಸನ್ನ ಪಾರ್ವತಿ ಸೇರಿದಂತೆ ಹಲವರ ಹೆಸರುಗಳನ್ನು ದೂರಿನಲ್ಲಿ ಹೆಸರಿಸಿರುವುದು ಗೊತ್ತಾಗಿದೆ.

 

ಈ ಕುರಿತು ಇಲಾಖೆಯ ಹಿಂದಿನ ನಿರ್ದೇಶಕರಾದ ಡಾ ಮಹೇಶ್‌ ಬಾಬು ಅವರು ದಿ ಫೈಲ್‌ ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ ದೂರುದಾರರ ಅರ್ಜಿಯ ಬಗ್ಗೆ ಸರ್ಕಾರದ  ಕಾನೂನು ಇಲಾಖೆಯಿಂದ ಅಭಿಪ್ರಾಯವನ್ನು ಪಡೆದು ಕಾನೂನು ಇಲಾಖೆಯ ಅಭಿಪ್ರಾಯದಂತೆ ನಿಯಮಾನುಸಾರ ಸೂಕ್ತ ಹಿಂಬರಹ ನೀಡಲಾಗಿದೆ,’ ಎಂದಷ್ಟೇ ಹೇಳಿದರು.

 

ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಹೆಣ್ಣು ಮಕ್ಕಳ ದುರುಪಯೋಗ ಆರೋಪ; ಬೆಂಗಳೂರು ಕೇಂದ್ರವೊಂದರಲ್ಲೇ 1,776 ಮಹಿಳೆ, ಹೆಣ್ಣು ಮಕ್ಕಳ ನಾಪತ್ತೆ, ಗಡುವು ಮೀರಿದರೂ ವರದಿ ನೀಡದ ಡಿಜಿಪಿ, ಸರ್ಕಾರದ ಕಾರ್ಯದರ್ಶಿ

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ವಿವರಣೆ ಒದಗಿಸಲು ಸೂಚಿಸಿದ್ದರು. ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಡಿಜಿಪಿಯಿಂದ ವರದಿ ಕೇಳಿತ್ತು.  ಆದರೆ ಯಾವುದೇ ವರದಿ ನೀಡಿರಲಿಲ್ಲ. ಈ ಕುರಿತು ದಿ ಫೈಲ್‌ 2026ರ ಆಗಸ್ಟ್‌ 11ರಂದು ವರದಿ ಪ್ರಕಟಿಸಿತ್ತು.

Hot this week

ಚಿಲುಮೆ ಪ್ರಕರಣ; ನಿರ್ದಿಷ್ಟ, ಖಚಿತ, ಸ್ಪಷ್ಟವಾಗಿ ಕೋರಿದ್ದ ಮಾಹಿತಿಯೇ ‘ಮಾಹಿತಿ ವ್ಯಾಖ್ಯಾನದಡಿಯಲ್ಲಿಲ್ಲವೆಂದ’ ಇಲಾಖೆ, ಮತದಾರರ ದತ್ತಾಂಶ ಕಳ್ಳತನ ಮುಚ್ಚಿ ಹಾಕಿತೇ ಕಾಂಗ್ರೆಸ್?

ಬೆಂಗಳೂರು;  ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರವು...

ಗಣಿ ಗುತ್ತಿಗೆಯ 14 ಬ್ಲಾಕ್‌ಗಳ ಹರಾಜಿಗೆ ತರಾತುರಿ; ಗಣಿ ಅಧಿಕಾರಿಗಳ ಕುತ್ತಿಗೆ ಮೇಲೆ ಕುಳಿತ ಮುಖ್ಯಮಂತ್ರಿ?

ಬೆಂಗಳೂರು; ರಾಮಗಢ್, ದೋಣಿಮಲೈ, ಡೆಕ್ಕನ್ ಮೈನಿಂಗ್, ಕುಮಾರಸ್ವಾಮಿ ಬ್ಲಾಕ್, ಹನುಮಾನ್ ಮೈನ್ಸ್‌...

ಶೇ.60ರಷ್ಟು ವಸೂಲಾಗದ ತೆರಿಗೆಯೇತರ ಆದಾಯ, ತೆರಿಗೆ ಪಾವತಿಯಲ್ಲಿ ದುರ್ಬಳಕೆ; ಜಮೆಯಾಗದ 13.07 ಕೋಟಿ ತೆರಿಗೆ ಹಣ, 1,478 ಪಂಚಾಯ್ತಿಗಳಲ್ಲಿ ಅಕ್ರಮ?

ಬೆಂಗಳೂರು;  ರಾಜ್ಯದ ಗ್ರಾಮ ಪಂಚಾಯ್ತಿಗಳು  ಶೇಕಡ 60ರಷ್ಟು  ತೆರಿಗೆಯೇತರ ಆದಾಯವನ್ನು ವಸೂಲಿ...

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...
Please Scan to make Your Contribution

Topics

ಗಣಿ ಗುತ್ತಿಗೆಯ 14 ಬ್ಲಾಕ್‌ಗಳ ಹರಾಜಿಗೆ ತರಾತುರಿ; ಗಣಿ ಅಧಿಕಾರಿಗಳ ಕುತ್ತಿಗೆ ಮೇಲೆ ಕುಳಿತ ಮುಖ್ಯಮಂತ್ರಿ?

ಬೆಂಗಳೂರು; ರಾಮಗಢ್, ದೋಣಿಮಲೈ, ಡೆಕ್ಕನ್ ಮೈನಿಂಗ್, ಕುಮಾರಸ್ವಾಮಿ ಬ್ಲಾಕ್, ಹನುಮಾನ್ ಮೈನ್ಸ್‌...

ಶೇ.60ರಷ್ಟು ವಸೂಲಾಗದ ತೆರಿಗೆಯೇತರ ಆದಾಯ, ತೆರಿಗೆ ಪಾವತಿಯಲ್ಲಿ ದುರ್ಬಳಕೆ; ಜಮೆಯಾಗದ 13.07 ಕೋಟಿ ತೆರಿಗೆ ಹಣ, 1,478 ಪಂಚಾಯ್ತಿಗಳಲ್ಲಿ ಅಕ್ರಮ?

ಬೆಂಗಳೂರು;  ರಾಜ್ಯದ ಗ್ರಾಮ ಪಂಚಾಯ್ತಿಗಳು  ಶೇಕಡ 60ರಷ್ಟು  ತೆರಿಗೆಯೇತರ ಆದಾಯವನ್ನು ವಸೂಲಿ...

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

Related Articles

Popular Categories

error: Content is protected !!