ಬೆಂಗಳೂರು; ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಲು ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳ ದಂಡೇ ಸಿದ್ಧವಾಗಿ ನಿಂತಿತ್ತು. ಈ ತಂಡವು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಪರವಾಗಿದ್ದರೇ ಇನ್ನು ಕೆಲವು ಪ್ರಕರಣಗಳಲ್ಲಿ ಸದಸ್ಯರೇ ನೇರವಾಗಿ ಲಕ್ಷಾಂತರ ರುಪಾಯಿ ಮೊತ್ತದ ನಗದನ್ನು ಸ್ವೀಕರಿಸಿದ್ದರು. ಆ ಮೊತ್ತವನ್ನು ತಮ್ಮದೇ ಸ್ವಂತ ಕಾರಿನಲ್ಲಿಟ್ಟುಕೊಂಡು ಹೋಗಿದ್ದರು.
ಅಲ್ಲದೇ ಆರೋಪಿ ಬಸವರಾಜ ಕನ್ನಾಳೆ ಪ್ರಶ್ನೆಪತ್ರಿಕೆಯನ್ನು ಮಾರಾಟ ಹಂಚಿದರೇ, ಸದಸ್ಯೆ ಗೀತಾ ಶಿವಮೂರ್ತಿ ಅವರು ಸರಿಯಾದ ಕೀ ಉತ್ತರಗಳನ್ನು ನೇರವಾಗಿ ಮಾರಾಟ ಮಾಡುತ್ತಿದ್ದರು ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಈ ಅಕ್ರಮ ನೇಮಕಾತಿ ಕುರಿತು ಪಿಎಂಎಲ್ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಹಣ ಪಾವತಿಯ ಹಿಂದಿನ ಅನೇಕ ಘಟನೆಗಳನ್ನು ದಾಖಲಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.
ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಡಾ. ಮಹೇಂದ್ರಕುಮಾರ್ ಹೊಸಳ್ಳಿ ಎಂಬುವರು ಪಶು ವೈದ್ಯಾಧಿಕಾರಿಗಳ ಹುದ್ದೆಗೆ ನಡೆದಿದ್ದ ಪರೀಕ್ಷೆಯಲ್ಲಿ ಹಾಜರಾಗಿ 6ನೇ ರ್ಯಾಂಕ್ ಪಡೆದಿದ್ದರು. ಮಹೇಂದ್ರ ಕುಮಾರ್ ಹೊಸಳ್ಳಿ ಅವರು ಡಾ ಸಿದ್ದಾರ್ಥ ಎಂಬುವರ ಮೂಲಕ ಪವನ್ ಕುಮಾರ್ ರೆಡ್ಡಿ ಎಂಬಾತನನ್ನು ಭೇಟಿ ಮಾಡಿದ್ದರು. ಇವರೂ ಸಹ ಪರೀಕ್ಷೆಯ ಹಿಂದಿನ ದಿನದಂದೇ ದೇವನಹಳ್ಳಿಯ ಆರ್ಕಿಡ್ ನಿರ್ವಾಣದಲ್ಲಿ ಬಸವರಾಜ್ ಕನ್ನಾಳೆ ಅವರಿಂದ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪಡೆದಿದ್ದರು. ಓಂ ಲಕ್ಷ್ಮೀ ಸಂಸ್ಥೆಯ ಖಾತೆಗೆ ₹25 ಲಕ್ಷ ಅಕ್ರಮ ಹಣ ಪಾವತಿಸಿದ್ದರು.
ಪಿಎಂಎಲ್ಎ 2002ರ ಸೆಕ್ಷನ್ 50ರ ಅಡಿಯಲ್ಲಿ ನೀಡಿರುವ ಹೇಳಿಕೆ ಪ್ರಕಾರ ಡಾ. ಮಹೇಂದ್ರಕುಮಾರ್ ಹೊಸಳ್ಳಿ ಅವರು 2024ರಲ್ಲಿ ಬೀದರ್ನ ಪಶುವೈದ್ಯಕೀಯ ಕಾಲೇಜಿನಿಂದ V.Sc. & A.H. ಪದವಿಯನ್ನು ಪೂರ್ಣಗೊಳಿಸಿದ್ದಾರೆ.
2025ರ ಡಿಸೆಂಬರ್ನಲ್ಲಿ ಡಾ. ಸಿದ್ಧಾರ್ಥ್ ಅವರ ಮೂಲಕ ಪವನ್ ಕುಮಾರ್ ರೆಡ್ಡಿ ಅವರು ಯಾದಗಿರಿಯ ಮಲ್ಲಯ್ಯ ದೇವಸ್ಥಾನದಲ್ಲಿ ತಮ್ಮನ್ನು ಮತ್ತು ಡಾ. ನಿರಂಜನ್ ಪಾಟೀಲ್ ಅವರನ್ನು ಸಂಪರ್ಕಿಸಿದ್ದರು. ತಲಾ ₹60 ಲಕ್ಷ ಅಕ್ರಮ ಹಣಕ್ಕೆ ಖಚಿತ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿದ್ದರು.ಆದರೆ ತಮ್ಮ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಆರಂಭದಲ್ಲಿ ಆ ಪ್ರಸ್ತಾಪವನ್ನು ನಿರಾಕರಿಸಿದ್ದರು.

ಆರಂಭದಲ್ಲಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದ ಮಹೇಂದ್ರ ಕುಮಾರ್ ಹೊಸಳ್ಳಿ ಅವರು 2026ರ ಜನವರಿ ಮೊದಲ ವಾರದಲ್ಲಿ ಈ ಪ್ರಸ್ತಾಪಕ್ಕೆ ಒಪ್ಪಿಕೊಂಡಿದ್ದರು. ನಂತರ ಪವನ್ ಕುಮಾರ್ ರೆಡ್ಡಿ ಅವರು ಮೊತ್ತವನ್ನು ₹30 ಲಕ್ಷಕ್ಕೆ ಇಳಿಸಿದ್ದರು. ಅದರಲ್ಲಿ ₹25 ಲಕ್ಷವನ್ನು ಪರೀಕ್ಷೆಯ ನಂತರ ಮತ್ತು ಉಳಿದ ₹5 ಲಕ್ಷವನ್ನು ನೇಮಕಾತಿ ಆದೇಶ ಹೊರಡಿಸಿದ ನಂತರ ಪಾವತಿಸಬೇಕಾಗಿತ್ತು ಎಂದು ಹೇಳಿಕೆಯಲ್ಲಿ ಮಹೇಂದ್ರ ಕುಮಾರ್ ಹೊಸಳ್ಳಿ ಅವರು ವಿವರಿಸಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.
ತಮ್ಮನ್ನು ರೆಸಾರ್ಟ್ಗೆ ಕರೆದೊಯ್ದ ಸಂದರ್ಭಗಳನ್ನು ಮಹೇಂದ್ರಕುಮಾರ್ ವಿವರಿಸಿದ್ದಾರೆ. ಮೊಬೈಲ್ ಫೋನ್ ಇಲ್ಲದೆ ಮೆಜೆಸ್ಟಿಕ್ನ ಗಣೇಶ ದೇವಸ್ಥಾನದ ಸಮೀಪದ ಸ್ಥಳವೊಂದಕ್ಕೆ ಬರುವಂತೆ ಪವನ್ ಕುಮಾರ್ ರೆಡ್ಡಿ ಅವರು ಸೂಚಿಸಿದ್ದರು. ಅಲ್ಲಿಂದ ತಮ್ಮನ್ನು ಡಾ. ಸಿದ್ಧಾರ್ಥ್, ಡಾ. ರಾಜ್ ಮೊಹಮ್ಮದ್, ಡಾ. ಬಸವರಾಜ್ ವಡಾರಿ, ಡಾ. ನಿರಂಜನ್ ಪಾಟೀಲ್ ಮತ್ತು ಇತರ ಅಭ್ಯರ್ಥಿಗಳೊಂದಿಗೆ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ದೇವನಹಳ್ಳಿಯ ಆರ್ಕಿಡ್ ನಿರ್ವಾಣಕ್ಕೆ ಕರೆದೊಯ್ದಿದ್ದರು . ಅಲ್ಲಿ ಬಸವರಾಜ್ ಕನ್ನಾಳೆ ಅವರನ್ನು ಭೇಟಿಯಾಗಿದ್ದರು.
ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಪ್ರಶ್ನೆಗಳನ್ನು ನೀಡಲಾಗುತ್ತದೆ ಎಂದು ಕನ್ನಾಳೆ ತಿಳಿಸಿದ್ದರು. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿದ್ದು, ಸರಿಯಾದ ಉತ್ತರವನ್ನು ಗುರುತಿಸಲಾಗಿದ್ದ ಸಾಮಾನ್ಯ ಪತ್ರಿಕೆಯ ಸುಮಾರು 70–80 ಪ್ರಶ್ನೆಗಳ ಒಂದು ಸೆಟ್ ಮತ್ತು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿದ್ದ ನಿರ್ದಿಷ್ಟ ವಿಷಯದ ಸುಮಾರು 70–80 ಪ್ರಶ್ನೆಗಳ ಮತ್ತೊಂದು ಸೆಟ್ ಅನ್ನು ನೀಡಲಾಗಿತ್ತು. 2026ರ ಜನವರಿ 9ರಂದು ನಡೆದ ಪರೀಕ್ಷೆಯ ಸಾಮಾನ್ಯ ಮತ್ತು ನಿರ್ದಿಷ್ಟ ವಿಷಯದ ಎರಡೂ ಪತ್ರಿಕೆಗಳಲ್ಲಿ ಅದೇ ಪ್ರಶ್ನೆಗಳು ಬಂದಿದ್ದವು.

ಲಂಚದ ಹಣ ಪಾವತಿಸಿದ ಕುರಿತು ವಿವರಣೆ ನೀಡಿರುವ ಮಹೇಂದ್ರಕುಮಾರ್, ಪರೀಕ್ಷೆಯ ನಂತರ ಪವನ್ ಕುಮಾರ್ ರೆಡ್ಡಿ ಅವರು ಒದಗಿಸಿದ್ದ M/s ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಖಾತೆಯ ಮೂಲಕ ಬಸವರಾಜ್ ಕನ್ನಾಳೆ ಅವರಿಗೆ ಒಟ್ಟು ₹25 ಲಕ್ಷ ಪಾವತಿಸಲಾಗಿತ್ತು. ಈ ಪಾವತಿಗಳನ್ನು ತಮ್ಮ ತಂದೆಯ ಬ್ಯಾಂಕ್ ಖಾತೆ ಮತ್ತು M/s ಮಹೇಂದ್ರ ಎಂಟರ್ಪ್ರೈಸಸ್ನಿಂದ ಮೂರು ಕಂತುಗಳಲ್ಲಿ ಮಾಡಲಾಗಿತ್ತು. 2026ರ ಜನವರಿ 23ರಂದು 10 ಲಕ್ಷ, ಫೆ.5ರಂದು 10 ಲಕ್ಷ, ಫೆ.12ರಂದು 5 ಲಕ್ಷ ರುಪಾಯಿ ಪಾವತಿಸಿದ್ದರು ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
‘ಪಿಎಂಎಲ್ಎ 2002ರ ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಲಾದ ಡಾ. ಮಹೇಂದ್ರಕುಮಾರ್ ಹೊಸಳ್ಳಿ ಅವರ ಮೇಲಿನ ಹೇಳಿಕೆಯಿಂದ, 2025ರ ಡಿಸೆಂಬರ್ನಲ್ಲಿ ಯಾದಗಿರಿಯಲ್ಲಿ ತಮ್ಮ ಹಿರಿಯರಾದ ಡಾ. ಸಿದ್ಧಾರ್ಥ್ ಅವರ ಮೂಲಕ ಪವನ್ ಕುಮಾರ್ ರೆಡ್ಡಿ ಅವರು ಅವರನ್ನು ಸಂಪರ್ಕಿಸಿದ್ದರು. ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಖಚಿತ ಆಯ್ಕೆ ಮಾಡಿಸುವುದಾಗಿ ₹60 ಲಕ್ಷ ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ನಂತರ ಅದನ್ನು ₹30 ಲಕ್ಷಕ್ಕೆ ಇಳಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ,’ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.

ಸೊಹೈಲ್ ನಬೀಲಾಲ್ ಅವರು ನೀಡಿದ್ದ ಹೇಳಿಕೆಯಲ್ಲೇನಿದೆ?
ಡಾ. ಮೊಹಮ್ಮದ್ ಶೋಯಲ್ ನಬೀಲಾಲ್ ಬಡೆಂಗೋಲ್ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ ಹಾಜರಾಗಿ 2ನೇ ರ್ಯಾಂಕ್ ಪಡೆದಿದ್ದರು. ಮಾರುತಿ ಎಂಬಾತ ಲಂಚ ನೀಡಿದರೇ ಖಚಿತವಾಗಿ ಆಯ್ಕೆ ಮಾಡಿಸಲಾಗುವುದು ಎಂದು ಅವರಿಗೆ ಭರವಸೆ ನೀಡಿದ್ದ. ಪರೀಕ್ಷೆಯ ಹಿಂದಿನ ದಿನ, ಅಂದರೆ 2026ರ ಜನವರಿ 8ರಂದು ದೇವನಹಳ್ಳಿಯ ಆರ್ಕಿಡ್ ನಿರ್ವಾಣದಲ್ಲಿ ಬಸವರಾಜ್ ಕನ್ನಾಳೆ ಅವರಿಂದ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪಡೆದಿದ್ದರು. ಕನ್ನಾಳೆ ಕಳುಹಿಸಿದ್ದ ವ್ಯಕ್ತಿಯೊಬ್ಬರಿಗೆ ₹20 ಲಕ್ಷ ನಗದು ಪಾವತಿಸಿದ್ದರು ಎಂದು ಸೊಹೈಲ್ ಅವರು ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಪರೀಕ್ಷೆಗೆ ಸುಮಾರು 20 ದಿನಗಳ ಮೊದಲು, ಮಾರುತಿ ಎಂಬ ವ್ಯಕ್ತಿಯೊಬ್ಬರು ವಾಟ್ಸಾಪ್ ವಾಯ್ಸ್ ಕರೆಗಳ ಮೂಲಕ ತಮ್ಮನ್ನು ಸಂಪರ್ಕಿಸಿದ್ದರು. ಲಂಚದ ಮೂಲಕ ಖಚಿತ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದ ಸಮೀಪ ಮಾರುತಿ ಅವರನ್ನು ಭೇಟಿಯಾಗಿದ್ದರು. ಅಲ್ಲಿ ಮಾರುತಿ ಅವರು ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಆ ಮೊತ್ತವನ್ನು ₹40 ಲಕ್ಷಕ್ಕೆ ಇಳಿಸಿದ್ದರು. ₹20 ಲಕ್ಷವನ್ನು ಪರೀಕ್ಷೆಯ ನಂತರ ಮತ್ತು ಉಳಿದ ₹20 ಲಕ್ಷವನ್ನು ಸೇರುವ ಆದೇಶ (Joining Order) ಸ್ವೀಕರಿಸಿದ ನಂತರ ಪಾವತಿಸುವುದಾಗಿ ಒಪ್ಪಂದವಾಗಿತ್ತು.

ಮಾರುತಿ ಅವರ ಸೂಚನೆಯಂತೆ, ರಾತ್ರಿ ಸುಮಾರು 10:00 ಗಂಟೆಗೆ ಬೆಂಗಳೂರಿನ ಸಂಜಯನಗರದ ಆರ್ಎಂವಿ ಆಸ್ಪತ್ರೆಗೆ ತಲುಪಿದ್ದರು. ಅಲ್ಲಿ ಮತ್ತೊಬ್ಬ ಅಭ್ಯರ್ಥಿ ಡಾ. ವಿನೋದ್ ಸುಧಾಕರ್ ನಾಯಕ್ ಅವರೊಂದಿಗೆ ಕ್ರೆಟಾ ಕಾರಿನಲ್ಲಿ ಹತ್ತಿದ್ದರು. ಅವರನ್ನು ದೇವನಹಳ್ಳಿಯ ಆರ್ಕಿಡ್ ನಿರ್ವಾಣಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರನ್ನು ತಪಾಸಣೆ ನಡೆಸಿ ವಿಲ್ಲೆಯೊಳಗೆ ಬಿಡಲಾಗಿತ್ತು. ಬಸವರಾಜ್ ಕನ್ನಾಳೆ ಅವರು ಸಾಮಾನ್ಯ ಪತ್ರಿಕೆಯ ಸುಮಾರು 70–80 ಪ್ರಶ್ನೆಗಳಿದ್ದ ಮುದ್ರಿತ ಸೆಟ್ ಒಂದನ್ನು ನೀಡಿದ್ದರು. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿದ್ದು, ಸರಿಯಾದ ಉತ್ತರವನ್ನು ಗುರುತಿಸಲಾಗಿತ್ತು. ಸಿದ್ಧತೆ ಮಾಡಿಕೊಳ್ಳಲು ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿತ್ತು.
ನಂತರ ಸರಿಯಾದ ಉತ್ತರಗಳನ್ನು ಗುರುತಿಸಲಾಗಿದ್ದ ನಿರ್ದಿಷ್ಟ ವಿಷಯದ ಸುಮಾರು 70–80 ಪ್ರಶ್ನೆಗಳ ಮತ್ತೊಂದು ಸೆಟ್ ಅನ್ನು ನೀಡಲಾಗಿತ್ತು. ಅದಕ್ಕಾಗಿ 2–3 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. 2026ರ ಜನವರಿ 9ರಂದು ನಡೆದಿದ್ದ ಪರೀಕ್ಷೆಯಲ್ಲಿಯೂ ಅದೇ ಪ್ರಶ್ನೆಗಳು ಬಂದಿದ್ದವು. ಪರೀಕ್ಷೆ ಮುಗಿದ ಮಾರನೇ ದಿನವೇ ಹಣಪಾವತಿಸಬೇಕು ಕನ್ನಾಳೆ ಹೇಳಿದ್ದರು. 2026ರ ಜನವರಿ 16ರಂದು ವಿಜಯಪುರದ ಲಲಿತ್ ಮಹಲ್ ಹೋಟೆಲ್ನಲ್ಲಿ ಕನ್ನಾಳೆ ಕಳುಹಿಸಿದ್ದ ವ್ಯಕ್ತಿಯೊಬ್ಬರಿಗೆ ₹20 ಲಕ್ಷ ನಗದನ್ನು ಪಾವತಿಸಿದ್ದರು. ಈ ಮೊತ್ತದಲ್ಲಿ ತಮ್ಮ ಉಳಿತಾಯದ ₹6 ಲಕ್ಷ ಮತ್ತು ಇಬ್ಬರು ಸ್ನೇಹಿತರಿಂದ ಸಾಲವಾಗಿ ಪಡೆದ ₹14 ಲಕ್ಷ ಸೇರಿದ್ದವು. ಉಳಿದ ₹20 ಲಕ್ಷವನ್ನು ಸೇರುವ ಆದೇಶ (Joining Order) ಸ್ವೀಕರಿಸಿದ ನಂತರ ಪಾವತಿಸಬೇಕಾಗಿತ್ತು ಎಂದು ಹಣದ ಮೂಲವನ್ನೂ ತಿಳಿಸಿರುವುದು ಗೊತ್ತಾಗಿದೆ.

ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದ್ದ 10 ಅಭ್ಯರ್ಥಿಗಳಲ್ಲಿ ಡಾ. ಮೊಹಮ್ಮದ್ಶೋಯಲ್ ನಬೀಲಾಲ್ ಬಡೆಂಗೋಲ್ ಅವರ ಹೆಸರನ್ನು ಉಲ್ಲೇಖಿಸಿದ್ದ ಶ್ರೀ ಬಸವರಾಜ್ ಕನ್ನಾಳೆ ಅವರ ಹೇಳಿಕೆ. 2026ರ ಜನವರಿಯಲ್ಲಿ ಅವರಿಂದ ಅಕ್ರಮ ಹಣ ಸಂಗ್ರಹಿಸಿದ್ದಾಗಿ ಕನ್ನಾಳೆ ಒಪ್ಪಿಕೊಂಡಿದ್ದರು. ತಮ್ಮನ್ನು ಡಾ. ಮೊಹಮ್ಮದ್ಶೋಯಲ್ ನಬೀಲಾಲ್ ಬಡೆಂಗೋಲ್ ಅವರೊಂದಿಗೆ ಆರ್ಕಿಡ್ ನಿರ್ವಾಣಕ್ಕೆ ಕರೆದೊಯ್ಯಲಾಗಿತ್ತು ಎಂದು ತಿಳಿಸಿದ್ದ ಡಾ. ವಿನೋದ್ ಸುಧಾಕರ್ ನಾಯಕ್ ಅವರ ಹೇಳಿಕೆಯು ಸಹ ಇದಕ್ಕೆ ಪೂರಕವಾಗಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.
ನಂದೀಶ್ ಬಿ. ಭದ್ದೂರ್ಗಟ್ಟೆ ಹೇಳಿಕೆಯ ಸಾರಾಂಶದಲ್ಲೇನಿದೆ?
ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ ಹಾಜರಾಗಿದ್ದ ಡಾ. ನಂದೀಶ್ ಬಿ. ಭದ್ದೂರ್ಗಟ್ಟೆ ಅವರು 600 ಅಂಕಗಳಲ್ಲಿ 493.50 ಅಂಕಗಳನ್ನು ಪಡೆದಿದ್ದರು. ತಮ್ಮ ತಂದೆ ಬಸವರಾಜಪ್ಪ ಬಿ.ಸಿ. ಅವರ ಮೂಲಕ, ತಮ್ಮ ಆಯ್ಕೆಗಾಗಿ ಕೆಪಿಎಸ್ಸಿ ಸದಸ್ಯರಾದ ಬಿ.ವಿ. ಗೀತಾ ಅವರಿಗೆ ₹40 ಲಕ್ಷ ಅಕ್ರಮ ಹಣ ಪಾವತಿಸಲು ಒಪ್ಪಿಕೊಂಡಿದ್ದರು. ಪರೀಕ್ಷೆಯ ಹಿಂದಿನ ದಿನ, ಅವರಿಗೆ ₹20 ಲಕ್ಷ ನಗದನ್ನು ಹಸ್ತಾಂತರಿಸಿ, ಪ್ರತಿಯಾಗಿ ಎರಡೂ ಪತ್ರಿಕೆಗಳ ಸರಿಯಾದ ಉತ್ತರಗಳನ್ನು ಪಡೆದಿದ್ದರು.

ತಮ್ಮ ಓಎಂಆರ್ ಶೀಟ್ನಲ್ಲಿದ್ದ ಉತ್ತರಗಳು ಕೆಪಿಎಸ್ಸಿ ಪ್ರಕಟಿಸಿದ್ದ ಆರಂಭಿಕ ಉತ್ತರಗಳೊಂದಿಗೆ ಏಕೆ ಹೊಂದಿಕೆಯಾಗಿದ್ದವು ಎಂದು ತನಿಖಾಧಿಕಾರಿಯು ಪ್ರಶ್ನಿಸಿದ್ದರು. ತಮ್ಮ ಬಹುತೇಕ ಎಲ್ಲಾ ಉತ್ತರಗಳು, ವಿಶೇಷವಾಗಿ ನಿರ್ದಿಷ್ಟ ವಿಷಯದ ಪತ್ರಿಕೆಯ ಉತ್ತರಗಳು, ಆರಂಭಿಕ ಉತ್ತರ ಕೀಲಿಗಳೊಂದಿಗೆ ಹೊಂದಿಕೆಯಾಗಿದ್ದವು ಎಂದು ನಂದೀಶ್ ದೃಢಪಡಿಸಿದ್ದರು. ಅಲ್ಲದೇ ಈ ಹೊಂದಾಣಿಕೆ ಕೇವಲ ಕಾಕತಾಳೀಯವಲ್ಲ ಎಂದು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡಿದ್ದರು. ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಎರಡೂ ಪತ್ರಿಕೆಗಳ ಸರಿಯಾದ ಉತ್ತರಗಳನ್ನು ಪಡೆಯಲಾಗಿತ್ತು ಎಂದು ತಿಳಿಸಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ಖಚಿತ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿ ತಮ್ಮನ್ನು ಸಂಪರ್ಕಿಸಿದ್ದ ವ್ಯಕ್ತಿಗಳ ಕುರಿತು ತನಿಖಾಧಿಕಾರಿಯು ಕೇಳಿದ್ದರು. ಹಲವು ಮಧ್ಯವರ್ತಿಗಳು ಸುಮಾರು ₹80 ಲಕ್ಷ ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಆರಂಭದಲ್ಲಿ ತಾವು ಅದನ್ನು ನಿರಾಕರಿಸಿದ್ದಾಗಿ ತಿಳಿಸಿದರು. ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಅಕ್ರಮ ಹಣ ಪಾವತಿಸದೆ ಆಯ್ಕೆಯಾಗಲು ಸಾಧ್ಯವಿಲ್ಲ ಎಂಬ ಆಗಿನ ಸಾಮಾನ್ಯ ನಂಬಿಕೆಯ ಕಾರಣದಿಂದ, ತಮ್ಮ ತಂದೆಯವರು ತಮ್ಮನ್ನು ಆಯ್ಕೆ ಮಾಡಿಸಲು ಕೆಪಿಎಸ್ಸಿ ಸದಸ್ಯರಾದ ಬಿ.ವಿ. ಗೀತಾ ಅವರನ್ನು ಸಂಪರ್ಕಿಸಿದ್ದರು ಎಂದು ನಂದೀಶ್ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಬಿ.ವಿ. ಗೀತಾ ಅವರು ಆರಂಭದಲ್ಲಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅವರ ತಂದೆಯವರು ಮಾತುಕತೆ ನಡೆಸಿ ಆ ಮೊತ್ತವನ್ನು ₹40 ಲಕ್ಷಕ್ಕೆ ಇಳಿಸಿದ್ದರು. ಅದರಲ್ಲಿ ₹20 ಲಕ್ಷವನ್ನು ಮುಂಗಡವಾಗಿ ಮತ್ತು ಉಳಿದ ₹20 ಲಕ್ಷವನ್ನು ನೇಮಕಾತಿ ಆದೇಶ ಹೊರಡಿಸಿದ ನಂತರ ಪಾವತಿಸಬೇಕಾಗಿತ್ತು. ಬಿ.ವಿ. ಗೀತಾ ಅವರನ್ನು ಭೇಟಿಯಾದ ಸಂದರ್ಭ ಮತ್ತು ಲಂಚದ ಹಣ ಪಾವತಿಸಿದ ಕುರಿತು ತನಿಖಾಧಿಕಾರಿ ವಿಚಾರಣೆ ನಡೆಸಿದ್ದರು.
2026ರ ಜನವರಿ 8ರಂದು ಅವರ ಸೂಚನೆಯಂತೆ, ತಾವು ಮತ್ತು ತಮ್ಮ ತಂದೆ ಬೆಂಗಳೂರಿನ ಡಾಲರ್ಸ್ ಕಾಲೋನಿಯ ರಾಜಮಹಲ್ ವಿಲಾಸ್ ಕ್ಲಬ್ ಸಮೀಪ ಅವರನ್ನು ಭೇಟಿಯಾಗಿದ್ದರು. ನಗದು ಹಣವನ್ನು ತಮ್ಮ ಮೂಲಕವೇ ಹಸ್ತಾಂತರಿಸಬೇಕೆಂದು ಅವರು ತಿಳಿಸಿದ್ದರು. ಅದರಂತೆ, ತಮ್ಮ ಕಾರಿನೊಳಗೆ ಬಿ.ವಿ. ಗೀತಾ ಅವರಿಗೆ ₹20 ಲಕ್ಷ ನಗದನ್ನು ಹಸ್ತಾಂತರಿಸಿದ್ದರು. ಇದಕ್ಕೆ ಪ್ರತಿಯಾಗಿ, ಸಾಮಾನ್ಯ ಮತ್ತು ನಿರ್ದಿಷ್ಟ ವಿಷಯದ ಪತ್ರಿಕೆಗಳ ಸರಿಯಾದ ಉತ್ತರ ಆಯ್ಕೆಗಳನ್ನು ಒಳಗೊಂಡ ಒಂದು ಹಾಳೆಯನ್ನು ಅವರು ನೀಡಿದ್ದರು. ತಮ್ಮ ಹೇಳಿಕೆ ದಾಖಲಿಸಿದ ದಿನಾಂಕದವರೆಗೆ ಉಳಿದ ₹20 ಲಕ್ಷವನ್ನು ಪಾವತಿಸಿರಲಿಲ್ಲ.

ಉತ್ತರ ಪತ್ರಿಕೆಯ ಸ್ವರೂಪದ ಕುರಿತು ಕೇಳಿದಾಗ, ಪ್ರತಿ ಪತ್ರಿಕೆಯ 80 ಪ್ರಶ್ನೆಗಳ ಸರಿಯಾದ ಉತ್ತರ ಆಯ್ಕೆಗಳನ್ನು ಸಾಲುಗಳ ರೂಪದಲ್ಲಿ ಜೋಡಿಸಿ ಅದರಲ್ಲಿ ನೀಡಲಾಗಿತ್ತು ಎಂದು ತಿಳಿಸಿದರು. ಉತ್ತರಗಳನ್ನು ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಅದೇ ಉತ್ತರಗಳನ್ನು ಬರೆಯುವಂತೆ ಬಿ.ವಿ. ಗೀತಾ ಅವರು ಸೂಚಿಸಿದ್ದರು. ಅದರಂತೆ, ಅವುಗಳನ್ನು ಕಂಠಪಾಠ ಮಾಡಿ 2026ರ ಜನವರಿ 9ರಂದು ನಡೆದ ಪರೀಕ್ಷೆಯಲ್ಲಿ ಬರೆಯಲಾಗಿತ್ತು. ಅವರು ನೀಡಿದ್ದ ಉತ್ತರಗಳು ಸರಿಯಾಗಿದ್ದವು ಎಂದು ದೃಢಪಡಿಸಿದರು. 80ನೇ ಪ್ರಶ್ನೆಯ ನಂತರದ ಉತ್ತರಗಳು ಮಾತ್ರ ತಮ್ಮ ಸ್ವಂತ ಸಿದ್ಧತೆಯ ಆಧಾರದ ಮೇಲೆ ಬರೆದಿದ್ದಾಗಿ ತಿಳಿಸಿದರು.
ಬಸವರಾಜ್ ಕನ್ನಾಳೆ ಅವರು ಆರ್ಕಿಡ್ ನಿರ್ವಾಣದಲ್ಲಿ ಪ್ರಶ್ನೆಪತ್ರಿಕೆಗಳನ್ನು ಹಂಚಿದ್ದಲ್ಲದೆ, ಕೆಪಿಎಸ್ಸಿ ಸದಸ್ಯರಾದ ಬಿ.ವಿ. ಗೀತಾ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಸರಿಯಾದ ಉತ್ತರಗಳನ್ನು ನೇರವಾಗಿ ಮಾರಾಟ ಮಾಡುತ್ತಿದ್ದರು ಎಂಬುದನ್ನೂ ಈ ಹೇಳಿಕೆ ತೋರಿಸುತ್ತದೆ.

‘ಹೀಗಾಗಿ ಕೆಪಿಎಸ್ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಆದಾಯದ ಭಾಗವಾಗಿರುವ ₹20 ಲಕ್ಷ ನಗದು ಅಕ್ರಮ ಹಣವನ್ನು, ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಕೀ ಉತ್ತರಗಳನ್ನು ಒದಗಿಸಿದ್ದಕ್ಕೆ ಆಯೋಗದ ಸದಸ್ಯೆ ಬಿ ವಿ ಗೀತಾ ಅವರು ಡಾ. ನಂದೀಶ್ ಬಿ. ಭದ್ದೂರ್ಗಟ್ಟೆ ಮತ್ತು ಅವರ ತಂದೆಯಿಂದ ಹಣ ಸ್ವೀಕರಿಸಿದ್ದಾರೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ,’ ಎಂದು

ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.




