ಬೆಂಗಳೂರು; ಬರದಿಂದ ತತ್ತರಿಸಿ ಹೋಗಿರುವ ರಾಜ್ಯದ 101 ತಾಲೂಕುಗಳಿಗೆ ನಷ್ಟದ ಪರಿಹಾರ ಮೊತ್ತ ಒದಗಿಸಲು ಹರಸಾಹಸ ಪಡುತ್ತಿದ್ದರೂ ಸಹ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ 2.86 ಕೋಟಿಯಷ್ಟು ಖರ್ಚು ಮಾಡಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಅತೀ ದೊಡ್ಡ ಬರಗಾಲ ಎದುರಾಗಿದೆ. ಬರ ನಿರ್ವಹಣೆಗೆ ಹಣಕಾಸಿನ ಅಡಚಣೆಯಾಗುತ್ತಿದೆ. ಆದರೂ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಯಾವುದೇ ಬಿಗಿಯಾದ ಕ್ರಮವಹಿಸಿಲ್ಲ. ಬದಲಿಗೆ ವಿಧಾನಸೌಧ, ವಿಕಾಸ ಸೌಧ ಮತ್ತು ಕುಮಾರಕೃಪಾ ಅತಿಥಿ ಗೃಹವನ್ನು ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನವೀಕರಣ, ಪೀಠೋಪಕರಣ ಖರೀದಿಯಂತಹ ಇನ್ನಿತರೆ ದುಂದುವೆಚ್ಚಗಳನ್ನು ಎಗ್ಗಿಲ್ಲದೇ ಮಾಡುತ್ತಿದೆ.
ಇದರ ನಡುವೆಯೇ ಬಳ್ಳಾರಿಯ ಕೂಡ್ಲಿಗಿ ತಾಲೂಕಿನಲ್ಲಿ ಪ್ರಜಾಸೇವೆ ಅಭಿಯಾನ ಕಾರ್ಯಕ್ರಮಕ್ಕೆ 2.86 ಕೋಟಿ ಖರ್ಚು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ 2026ರ ಸೆ.5ರಂದು ನಡೆದ ಕಾರ್ಯಕ್ರಮಕ್ಕೆ 2.86 ಕೋಟಿ ರು.ಒದಗಿಸಲು 2026ರ ಸೆ.4ರಂದು ಆದೇಶ ಹೊರಡಿಸಿತ್ತು. ಈ ಆದೇಶದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರಜಾಸೇವೆ ಅಭಿಯಾನ ಆರಂಭಿಸಿದೆ. ಈ ಕಾರ್ಯಕ್ರಮದ ಆಯೋಜನೆಗೆ ತಗಲುವ ವೆಚ್ಚಗಳನ್ನು (ಲೆಕ್ಕ ಶೀರ್ಷಿಕೆ 3451-00-090-2-33) ವಿನೂತನ ಮತ್ತು ಉತ್ತಮ ಆಡಳಿತ ಕೇಂದ್ರ ಸಾಮಾನ್ಯ ವೆಚ್ಚದ ಅಡಿಯಲ್ಲಿ 2.86 ಕೋಟಿ ರುಪಾಯಿಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಿದೆ. ಈ ಹೆಚ್ಚುವರಿ ಅನುದಾನವನ್ನು 2026-27ನೇ ಸಾಲಿನ ಪೂರಕ ಅಂದಾಜುಗಳು 2 ನೇ ಕಂತಿನಲ್ಲಿ ಒದಗಿಸುವ ಮೂಲಕ ಕ್ರಮಬದ್ಧಗೊಳಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಏನಿದು ಪ್ರಜಾಸೇವೆ?
ಪ್ರಜಾಸೇವೆ ಇಲಾಖೆ ಮೂಲಕ ಮುಂದಿನ ದಿನಗಳಲ್ಲಿ ಕ್ಷಣಾರ್ಧದಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಸಾರ್ವಜನಿಕರು ಈ ಹಿಂದೆ ಸರ್ಕಾರದ ಸೇವೆಗಳನ್ನು ಪಡೆಯಲು ಸಾಧ್ಯವಾಗದೇ ಇದ್ದಾಗ ಅಥವಾ ಯೋಜನೆಯ ಪ್ರಯೋಜನಗಳು ತಲುಪದೇ ಇದ್ದ ಸಂದರ್ಭದಲ್ಲಿ ಕುಂದುಕೊರತೆಯನ್ನು ಅಧಿಕಾರಿಗಳ/ಜನಪ್ರತಿನಿಧಿಗಳ ಬಳಿ ಹೇಳಿಕೊಳ್ಳಬಹುದು. ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಹರ ಸಾಹಸ ಪಡಬೇಕಾದ ಪರಿಸ್ಥಿತಿ ಇತ್ತು. ಆದರೀಗ ಪ್ರಜಾಸೇವೆ ಮೂಲಕ ಕ್ಷಣಾರ್ಧದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳನ್ನು ಸರ್ಕಾರದ ಬಳಿ ಹೇಳಿಕೊಳ್ಳಬಹುದು ಎಂದು ಸರ್ಕಾರವು ವಿವರಿಸಿದೆ.

ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ನೇರ ಆಡಳಿತ ಪರಿಕಲ್ಪನೆಯಾಗಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆಯನ್ನು ಕಲ್ಪಿಸಲಿದೆ. ಪ್ರತಿ ಶನಿವಾರ ತಾಲ್ಲೂಕು/ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಪರ್ಯಾಯವಾಗಿ ರಾಜ್ಯಾದ್ಯಂತ ನಡೆಸಲು ಕ್ರಮವಹಿಸಿದೆ.
ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು/ ಹೋಬಳಿ ಮಟ್ಟದಲ್ಲಿ ಸಭೆಯನ್ನು ಆಯೋಜಿಸಲಾಗುತ್ತದೆ. 3-4 ತಿಂಗಳಲ್ಲಿ ಎಲ್ಲಾ ತಾಲ್ಲೂಕು/ಹೋಬಳಿ ಮಟ್ಟದ ಸಭೆಗಳನ್ನು ಏರ್ಪಡಿಸಲಿದೆ.
ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಯುವ ಸಂದರ್ಭದಲ್ಲಿ ಅದೇ ದಿನ ಆ ಕ್ಷೇತ್ರದಲ್ಲಿ ಪ್ರತ್ಯೇಕ ಹೋಬಳಿ ಮಟ್ಟದ ಶಾಸಕರ ಸಭೆಯನ್ನು ನಡೆಸಲಾಗುವುದಿಲ್ಲ. ಬದಲಾಗಿ, ಸಂಬಂಧಿಸಿದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಭಾಗವಹಿಸುತ್ತಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಭೆಗಳಿಗೆ ಸಂಬಂಧಿಸಿದ ತಾಲ್ಲೂಕು ಅಧಿಕಾರಿಗಳೊಂದಿಗೆ ಹಾಜರಾಗುತ್ತಾರೆ. ಅದೇ ರೀತಿ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ತಾಲ್ಲೂಕು ಒಳಪಡುವ ಕ್ಷೇತ್ರದಲ್ಲಿ ನಡೆಯುವ ಶಾಸಕರ ಸಭೆಗಳಲ್ಲಿ ಭಾಗವಹಿಸುತ್ತಾರೆ. ಎಲ್ಲಾ ಸಭೆಗಳಲ್ಲಿ ಸ್ಥಳೀಯ ಮಾಜಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಮುಖಂಡರಿಗೂ ಆಹ್ವಾನಿಸಲಾಗುತ್ತದೆ.

ಪ್ರಜಾಸೇವಾ ಅಭಿಯಾನದಡಿ ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮನೆ-ಮನೆಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಲಾಗುತ್ತದೆ. ಈ ಕರಪತ್ರಗಳಲ್ಲಿ ಪೂರ್ವಮುದ್ರಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿಯನ್ನು ಒಳಗೊಂಡಿರುತ್ತದೆ. ಅಲ್ಲದೆ, ತಾಲ್ಲೂಕು ಅಥವಾ ಹೋಬಳಿ ವ್ಯಾಪ್ತಿಯ ನಿವಾಸಿಗಳಿಗೆ ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯ ವಿವರಗಳನ್ನು ತಿಳಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಕಾಲ್ ಸೆಂಟರ್ ಮೂಲಕ ಹಿರಹೋಗುವ ಕರೆಗಳನ್ನು ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ಅರ್ಜಿಗಳು ಹಾಗೂ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿಯೇ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ಸ್ಥಳದಲ್ಲಿ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ, ಕಂಪ್ಯೂಟರ್ ಲ್ಯಾಪ್ಟಾಪ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸೌಲಭ್ಯಗಳ ಸಾರ್ವಜನಿಕರಿಗೆ ನೇರವಾಗಿ ಆನ್ಲೈನ್ನಲ್ಲಿ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗುತ್ತದೆ. ಪ್ರಜಾಸೇವಾ ಅಭಿಯಾನ ಸಭೆಯ ದಿನದಂದು ಅಹವಾಲುಗಳನ್ನು ಎರಡು ಪ್ರತ್ಯೇಕ ಸರತಿಗಳಲ್ಲಿ ನಿರ್ವಹಿಸಲಾಗುತ್ತದೆ. ಮೊದಲನೆಯದು ಹೊಸ ಅಹವಾಲುಗಳ ಸರತಿ. ಇದರಲ್ಲಿ ಸಾರ್ವಜನಿಕರು ಮೊದಲ ಬಾರಿಗೆ ನೋಂದಾಯಿಸುವ ಅಹವಾಲುಗಳನ್ನು ದಾಖಲಿಸಲು ಕ್ರಮ ವಹಿಸಿದೆ.

ಎರಡನೆಯದು ಪರಿಹಾರವಾಗದ ಅಥವಾ ಅಸಮಾಧಾನಕರವಾಗಿ ಪರಿಹರಿಸಲಾದ ಅಹವಾಲುಗಳ ಸರತಿ. ಈಗಾಗಲೇ ಸಕಾಲ ಅಥವಾ ಏಕೀಕೃತ ದೂರು ನಿವಾರಣೆ ತಂತ್ರಾಂಶದಲ್ಲಿ ನೋಂದಾಯಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಅಥವಾ 21 ದಿನಗಳ ನಂತರವೂ ಸಮರ್ಪಕ ಪರಿಹಾರ ದೊರೆಯದ ಅಹವಾಲುಗಳನ್ನು ಈ ಸರತಿಯಲ್ಲಿ ಪರಿಗಣಿಸಲಾಗುತ್ತದೆ. ಈ ಸರತಿಯನ್ನು ಬಳಸಲು ಸಾರ್ವಜನಿಕರು ತಮ್ಮ ಸಕಾಲ, CSC ಅಥವಾ IPGRS ಸಂಖ್ಯೆಯನ್ನು ನೀಡಬೇಕಾಗುತ್ತದೆ. ಸಮಯದ ಅಭಾವವಿದ್ದಲ್ಲಿ ಇಂತಹ ಅಹವಾಲುದಾರರಿಗೆ ಸಭೆಯ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯೊಂದಿಗೆ ನೇರವಾಗಿ ಸಂವಹನ ನಡೆಸಲು ಆದ್ಯತೆ ನೀಡಲಾಗುತ್ತದೆ ಎಂದು ವಿವರಿಸಿದೆ.
ಪ್ರಜಾಸೇವಾ ಅಭಿಯಾನ ಸಭೆಯ ಸಂದರ್ಭದಲ್ಲಿ ಅರ್ಹತೆ ಹೊಂದಿರುವ ಯೋಜನಾ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಸ್ಥಳದಲ್ಲಿಯೇ ವಿತರಿಸಬಹುದು. ಅದೇ ರೀತಿ ಈಗಾಗಲೇ ಪರಿಹರಿಸಲಾದ ಅಹವಾಲುಗಳಿಗೆ ಸಂಬಂಧಿಸಿದಂತೆ ಪರಿಹಾರದ ಸೂಕ್ತ ಅನುಮೋದನೆ/ದೃಢೀಕರಣ ಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ. ಅರ್ಜಿಗಳು ಹಾಗೂ ಅಹವಾಲುಗಳ ಪ್ರಗತಿಯನ್ನು ಸಾರ್ವಜನಿಕರು ತಿಳಿದುಕೊಳ್ಳಲು ನೈಜ-ಸಮಯದ ಸ್ಥಿತಿ ಪರಿಶೀಲನಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಇದರ ಮೂಲಕ ಅರ್ಜಿದಾರರು ತಮ್ಮ ಅರ್ಜಿ ಅಥವಾ ಅಹವಾಲಿನ ಪ್ರಗತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದೆ.





