ಬೆಂಗಳೂರು; ಆಯುಷ್ಮಾನ್ ಭಾರತ್ ಮತ್ತು ಎಆರ್‍ಕೆ ಯೋಜನೆಯಡಿಯಲ್ಲಿ ಕಲ್ಬುರ್ಗಿ ಜಿಲ್ಲಾ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಅಗಿರುವ ಬಹುತೇಕ ಪ್ರಕರಣಗಳಲ್ಲಿ ಸಕಾರಣಗಳೇ ಇರಲಿಲ್ಲ. ಅಲ್ಲದೇ ಜಿಲ್ಲಾ ಅಸ್ಪತ್ರೆಯಲ್ಲಿ ಸೌಕರ್ಯಗಳಿಲ್ಲ ಎಂದು ವಿನಾ ಕಾರಣ ತಪ್ಪು ಮಾಹಿತಿ ನೀಡಿ ಮತ್ತು ವೈದ್ಯರೊಬ್ಬರ ಹೆಸರಿನಲ್ಲಿ ನಕಲಿ ಓಆರ್‍ಎಸ್ ಗಳನ್ನು ಸೃಜಿಸಿ ರೆಫರಲ್ ಮಾಡುವ ಮೂಲಕ ಆರ್ಥಿಕ ನಷ್ಟ ಸಂಭವಿಸಿದೆ ಎಂದು ತನಿಖೆ ನಡೆಸಿರುವ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್-ಡೈರೆಕ್ಟರ್ ನೇತೃತ್ವದ ಸಮಿತಿಯು ವರದಿ ನೀಡಿದೆ.
ವಿಶೇಷವೆಂದರೇ ಕಲ್ಬುರ್ಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆಗೆ ರಾಜೀನಾಮೆ ನೀಡಿದ್ದ ಡಾ ಸಲ್ಮಾನ್ ಅವರ ಹೆಸರಿನಲ್ಲಿಯೇ ನಕಲಿ ಓಆರ್‍ಎಸ್‌ಗಳನ್ನು ಸೃಜಿಸಲಾಗಿತ್ತು. ಈ ನಕಲಿ ಓಆರ್‍ಎಸ್‌ಗಳ ಮೂಲಕವೇ ಬಹುಮನಿ ಆಸ್ಪತ್ರೆಗೆ ರೋಗಿಗಳನ್ನು ರೆಫರಲ್ ಮಾಡಲಾಗಿತ್ತು ಎಂಬುದನ್ನೂ ಸಹ ತನಿಖಾ ಸಮಿತಿಯು ಪತ್ತೆ ಹಚ್ಚಿದೆ.
ಈ ಪ್ರಕರಣಗಳ ಕುರಿತು ತನಿಖೆ ನಡೆಸಿರುವ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್-ಡೈರೆಕ್ಟರ್ ನೇತೃತ್ವದ ಸಮಿತಿಯ ವರದಿಯು ಜಿಮ್ಸ್‌ನಲ್ಲಿನ ಹಲವು ಅಕ್ರಮಗಳನ್ನು ಬಯಲಿಗೆಳೆದಿದೆ. ಅಲ್ಲದೇ ಈ ಸಮಿತಿಯು 20 ವೈದ್ಯರುಗಳ ಹಾಗೂ ಒಬ್ಬ ಡೇಟಾ ಎಂಟ್ರಿ ಆಪರೇಟರ್ ಹೇಳಿಕೆಗಳನ್ನು ಪಡೆದಿದೆ.
ಈ ವರದಿಯ ಕೆಲವು ಹಾಳೆಗಳ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ತನಿಖಾ ಸಮಿತಿಯು ರೆಫರಲ್ ಆದ ಪ್ರಕರಣಗಳ ಪಟ್ಟಿ ಮತ್ತು ವರದಿಯನ್ನು ಪರಿಶೀಲಿಸಿದೆ. ಬಹುತೇಕ ಪ್ರಕರಣಗಳಲ್ಲಿ ಸಕಾರಣಗಳೇ ಇರಲಿಲ್ಲ. ವಿನಾ ಕಾರಣ ತಪ್ಪು ಮಾಹಿತಿ ನೀಡಿ ರೆಫರಲ್ ಮಾಡಿರುವುದನ್ನು ಪತ್ತೆ ಹಚ್ಚಿದೆ. ರೆಫರಲ್‌ಗೆ ಕಾರಣಗಳನ್ನು ಪರಿಶೀಲಿಸಿರುವ ತನಿಖಾ ಸಮಿತಿಯು ಕಾರ್ಡಿಯಾಕ್ ಇಲ್ ನೆಲ್ ಎಂದು ತೋರಿಸಿರುವುದನ್ನು ಸಹ ತನಿಖಾ ಸಮಿತಿಯು ಬಯಲಿಗೆಳೆದಿದೆ. ಆದರೆ ಆಸ್ಪತ್ರೆಯ ಚಿಕಿತ್ಸಾ ದಾಖಲೆಗಳಲ್ಲಿ ಅಥವಾ ಕೇಸ್ ಶೀಟ್‌ನಲ್ಲಿ ಇದರ ಪ್ರಸ್ತಾಪವೇ ಇರಲಿಲ್ಲ. ಇನ್ನು ಹಲವು ಪ್ರಕರಣಗಳಲ್ಲಿ ಉಪಕರಣಗಳು ಸಹ ಇರಲಿಲ್ಲ. ಪ್ಲಾಸ್ಟಿಕ್ ಸರ್ಜನ್ ಇರುವುದಿಲ್ಲ ಎಂಬ ಕಾರಣಗಳನ್ನು ನೀಡಿರುವುದನ್ನು ತನಿಖಾ ಸಮಿತಿಯು ಕಂಡು ಹಿಡಿದಿರುವುದು ವರದಿಯಿಂದ ಗೊತ್ತಾಗಿದೆ.
ಜಿಮ್ಸ್ ಆಸ್ಪತ್ರೆಯ ಬಹುತೇಕ ಆರ್ಥೋಪೆಡಿಕ್ ರೋಗಿಗಳು ಕಲ್ಬುರ್ಗಿಯ ಬಹುಮನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವುಗಳು ನಕಲಿ ರೆಫರಲ್ ಆಗಿವೆ ಮತ್ತು ಬಹುಮನಿ ಆಸ್ಪತ್ರೆಯ ಚಿಕಿತ್ಸೆಗಳು ಸಂಶಯಾಸ್ಪದವಾಗಿದೆ ಎಂದು ಸುವರ್ಣ ಆರೋಗ್ಯ ಟ್ರಸ್ಟ್ ವೈದ್ಯಕೀಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ನಕಲಿ ಓಆರ್‍ಎಸ್‌ಗಳನ್ನು ಸೃಷ್ಟಿಸಲಾಗಿತ್ತೇ?
ಕಲ್ಬುರ್ಗಿ ಜಿಲ್ಲಾ ಆಸ್ಪತ್ರೆಯಿಂದ ಡಾ ಸಲ್ಮಾನ್ ಅವರ ಹೆಸರಿನಲ್ಲಿ ಬಹುಮನಿ ಆಸ್ಪತ್ರೆಗೆ ಓಆರ್‍ಎಸ್ ಮುಖಾಂತರ ರೋಗಿಗಳು ರೆಫರ್ ಮಾಡಲಾಗಿತ್ತು. ಆದರೆ ಡಾ ಸಲ್ಮಾನ್ ಅವರು ಕಳೆದ 2 ವರ್ಷಗಳ ಹಿಂದೆಯೇ ಜಿಲ್ಲಾ ಆಸ್ಪತ್ರೆಯಿಂದ ರಾಜೀನಾಮೆ ನೀಡಿದ್ದರು. ಖಾಸಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೂ ಅವರ ಹೆಸರಿನಲ್ಲಿ ಓಆರ್‍ಎಸ್ ಮೂಲಕ ನಿರಂತರವಾಗಿ ರೋಗಿಗಳನ್ನು ರೆಫರ್ ಮಾಡಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಡಾ ಸಲ್ಮಾನ್ ಅವರ ಹೇಳಿಕೆಯಲ್ಲೇನಿದೆ?
ಈ ಸಂಬಂಧ ತನಿಖಾ ಸಮಿತಿ ಮುಂದೆ ಡಾ ಸಲ್ಮಾನ್ ಅವರು ಹೇಳಿಕೆ ನೀಡಿದ್ದಾರೆ. ಇದರ ಪ್ರಕಾರ ಡಾ ಸಲ್ಮಾನ್ ಅವರು 2022ರ ಅಕ್ಟೋಬರ್ 13ರಿಂದ 2023ರ ಆಗಸ್ಟ್ 16ರವರೆಗೆ ಜಿಮ್ಸ್ ಅಸ್ಪತ್ರೆಯ ಆರ್ಥೋಪೆಡಿಕ್ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ನಂತರ ರಾಜೀನಾಮೆ ನೀಡಿದ್ದರು. ಇದಾದ ನಂತರ ಯಾದಗಿರಿಯಲ್ಲಿ ಖಾಸಗಿ ವೈದ್ಯ ವೃತ್ತಿಯನ್ನು ನಡೆಸುತ್ತಿದ್ದರು. ಅವರ ಹೆಸರಿನಲ್ಲಿ ನಕಲಿ ಓಆರ್‍ಎಸ್ ಸೃಜನೆಯಾಗಿರುವ ಸಂಗತಿಯು ಅವರ ಗಮನಕ್ಕೆ ಬಂದಿತ್ತು. ಇದರಿಂದ ಅವರ ಹೆಸರಿನ ದುರುಪಯೋಗವಾಗಿತ್ತು. ಅವರ ಗೌರವಕ್ಕೂ ಧಕ್ಕೆಯಾಗಿದೆ ಎಂದು ವಿಚಾರಣೆ ಸಮಿತಿಗೆ ಮುಂದೆ ಹೇಳಿಕೆಯಲ್ಲಿ ವಿವರಿಸಿದ್ದರು.
ಅಲ್ಲದೇ ಡಾ ಸಲ್ಮಾನ್ ಅವರು ಕೆಲಸ ಬಿಟ್ಟ ನಂತರ ಅವರ ಹಾಜರಿ ಮತ್ತು ಸಂಬಳವೂ ಸಹ ಮುಕ್ತಾಯವಾಗಿತ್ತು. ಆದರೆ ಸಂಬಂಧಿಸಿದ ವಿಭಾಗವು ಓಆರ್‍ಎಸ್ ಐಡಿ ಮುಕ್ತಾಯ ಮಾಡಿರಲಿಲ್ಲ. ಹೀಗಾಗಿ ಐಡಿಯು ಉಪಯೋಗವಾಗುತ್ತಿತ್ತು. ಈ ಬಗ್ಗೆ ಡಾ ಸಲ್ಮಾನ್ ಅವರು ಹೇಳಿಕೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದರು. ಅಲ್ಲದೇ ಇದರಿಂದಾಗಿ ಜಿಮ್ಸ್ ಸಂಸ್ಥೆಗೆ ಆರ್ಥಿಕ ನಷ್ಟವುಂಟಾಗಿದೆ. ಈ ಬಗ್ಗೆ ಕಠಿಣ ಕ್ರಮ ವಹಿಸಬೇಕು ಎಂದು ಡಾ ಸಲ್ಮಾನ್ ಅವರು ತನಿಖಾ ಸಮಿತಿಯನ್ನು ಕೋರಿರುವುದು ಗೊತ್ತಾಗಿದೆ.
ಡಾ ಸಲ್ಮಾನ್ ಅವರು ರಾಜೀನಾಮೆ ನೀಡಿದ ನಂತರ ಅಂದಾಜು 221 ನಕಲಿ ಓಆರ್‍ಎಸ್ ಗಳು ಸೃಜನೆಯಾಗಿರುವುದನ್ನು ತನಿಖಾ ಸಮಿತಿಯು ಗಮನಿಸಿದೆ. ಅಲ್ಲದೇ ರೆಫರಲ್ ಆದ ಪ್ರಕರಣಗಳ ಪಟ್ಟಿ ಮತ್ತು ವರದಿಯನ್ನೂ ಪರಿಶೀಲಿಸಿದೆ. ‘ಬಹುತೇಕ ಪ್ರಕರಣಗಳಲ್ಲಿ ಸಕಾರಣಗಳಿರಲಿಲ್ಲ. ವಿನಾಕಾರಣ ತಪ್ಪು ಮಾಹಿತಿ ನೀಡಿ ರೆಫರಲ್ ನೀಡಿರುವುದು ಕಂಡು ಬಂದಿದೆ. ರೆಫರಲ್‌ಗೆ ಕಾರಣಗಳನ್ನು ಪರಿಶೀಲಿಸಿದಾಗ ಕಾರ್ಡಿಯಾಕ್ ಇಲ್‌ನೆಸ್ ಎಂದು ತೋರಿಸಲಾಗಿದೆ. ಆದರೆ ಆಸ್ಪತ್ರೆಯ ಚಿಕಿತ್ಸಾ ದಾಖಲೆಗಳಲ್ಲಿ ಅಥವಾ ಕೇಸ್ ಶೀಟ್‌ನಲ್ಲಿ ಇದರ ಪ್ರಸ್ತಾಪವೇ ಇರುವುದಿಲ್ಲ. ಇನ್ನು ಹಲವು ಪ್ರಕರಣಗಳಲ್ಲಿ ಉಪಕರಣಗಳು ಇರುವುದಿಲ್ಲ, ಪ್ಲಾಸ್ಟಿಕ್ ಸರ್ಜನ್ ಇರುವುದಿಲ್ಲ ಎಂಬ ಇತ್ಯಾದಿ ಕಾರಣಗಳನ್ನು ನೀಡಿರುವುದು ಕಂಡು ಬಂದಿರುತ್ತದೆ,’ ಎಂದು ತನಿಖಾ ಸಮಿತಿಯ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಜಿಮ್ಸ್‌ನ ಮತ್ತೊಬ್ಬ ವೈದ್ಯರು ತನಿಖಾ ಸಮಿತಿಗೆ ಹೇಳಿಕೆ ನೀಡಿದ್ದರು. ತಮ್ಮ ಗುರುತನ್ನು ಗೌಪ್ಯವಾಗಿಡಲು ಸಮಿತಿಯನ್ನು ಕೋರಿದ್ದರು. ಹೀಗಾಗಿ ಅವರ ಸಹಿ ಮಾಡಿದ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಿರುವುದನ್ನು ಸರ್ಕಾರಕ್ಕೆ ವರದಿಯಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ಗೌಪ್ಯ ಹೇಳಿಕೆಯಲ್ಲೇನಿದೆ?
ಸ್ಯಾಸ್ಟ್ (SAST) ನಲ್ಲಿ ನನ್ನ ಹೆಸರು ಸಹ ಎಂಪ್ಯಾನಲ್ ಆಗಿದೆ. ಇದುವರೆಗೂ ನನ್ನ ಹೆಸರಿನಲ್ಲಿ SAST ಐಡಿ ಮತ್ತು ಪಾಸ್‌ವರ್ಡ್ ಇದೆ ಎಂದು ಗೊತ್ತಿರಲಿಲ್ಲ. ಇಲ್ಲಿಯವರೆಗೆ ನಾನು ಯಾವುದೇ ರೋಗಿಯನ್ನು ಹೈಯರ್ ಸೆಂಟರ್‍ಗೆ ರೆಫೆರ್ ಮಾಡಿರುವುದಿಲ್ಲ. ರೆಫರ್ ಮಾಡುವ ಪರಿಸ್ಥಿತಿ ಬಂದಾಗ ನಾನು ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ನೀಡಲೇಬೇಕು. ಮತ್ತು ಅವರ ಗಮನಕ್ಕೆ ಬಾಋದೇ ರೆಫರ್ ಮಾಡುವ ಹಾಗಿಲ್ಲ ಎಂದು ತಿಳಿಸಿದ್ದಾರೆ. ಎಚ್‌ಒಡಿ ಅವರೇ ಬೇರೆ ಐಡಿ ಪಾಸ್‌ವರ್ಡ್ ನಿಂದ ರೆಫರ್ ಮಾಡಿರುತ್ತಾರೆ. ರೋಗಿಗಳು ಆಗಲೇ ಬಹುಮನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ಸಂಗತಿಯನ್ನು ಗೌಪ್ಯ ಹೇಳಿಕೆಯಲ್ಲಿ ದಾಖಲು ಮಾಡಿರುವುದನ್ನು ವರದಿಯಲ್ಲಿ ತನಿಖಾ ಸಮಿತಿಯು ದಾಖಲಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ರೋಗಿಗಳು ಜಿಮ್ಸ್ ಅಸ್ಪತ್ರೆಗೆ ಬರದೇ ಬಹುಮನಿ ಆಸ್ಪತ್ರೆ ಸಿಬ್ಬಂಧಿಗಳು ಜಿಮ್ಸ್ ಆಸ್ಪತ್ರೆಗೆ ಬಂದು ಕಾನೂನುಬಾಹಿರವಾಗಿ ರೆಫರ್ ಮಾಡಿಸಿಕೊಂಡು ಹೋಗುತ್ತಾರೆ. ಸಹದ್ಯೋಗಿಗಳಿಗೆ ದುರುದ್ದೇಶದಿಂದ SASTನಲ್ಲಿ ಟಿಎಚ್‌ಆರ್, ಟಿಕೆಆರ್ ಮತ್ತು ಆರ್ಥೋಸ್ಕೋಪಿ ಶಸ್ತ್ರಚಿಕಿತ್ಸೆಗಳಿಗೆ ಎಂಪ್ಯಾನಲ್ ಮಾಡಿಲ್ಲ. ಮತ್ತು ಫಸ್ಟ್ ರೆಫರೆನ್ಸ್, ವಿಭಾಗದ ಮುಖ್ಯಸ್ಥರಿಗೆ ಬರಲೇಬೇಕು ಎಂದು ಎಚ್‌ಒಡಿ ತಿಳಿಸಿದ್ದಾಋಎ. ನಾನು ಮತ್ತು ಇತರ ವೈದ್ಯರು ಉನ್ನತ ಶಸ್ತ್ರ ಚಿಕಿತ್ಸೆಗಳನ್ನು ಮಾಡಲು ಅರ್ಹರಿದ್ದರೂ ಸಹ ನಮಗೆ ಅವಕಾಶವನ್ನೇ ನೀಡಿಲ್ಲ. ರೆಫರ್ ಮಾಡಲು ಸೌಕರ್ಯಗಳ ಅಲಭ್ಯತೆ ಎಂಧು ಉದ್ದೇಶಪೂರ್ವಕವಾಗಿ ತೋರಿಸಿದ್ದಾಋಎ. ವಿಭಾಗಕ್ಕೆ ಹಳೆಯ ಉಪಕರಣಗಳು ಇವೆ. ಮತ್ತು ಇಂಡೆಂಟ್ ಮಾಡದೇ ಇರುವುದು, ಆರ್ಥೋಸ್ಕೋಪಿ ಉಪಕರಣವನ್ನು ಇಲ್ಲಿಯವರೆಗೂ ಇಂಡೆಂಡ್ ಮಾಡಿಲ್ಲ. ಈ ಕಾರಣಗಳಿಂದ ರೆಫರ್ ಮಾಡಲು ತುಂಬಾ ಅನುಕೂಲವಾಗಿರುತ್ತದೆ ಎಂದು ವೈದ್ಯರೊಬ್ಬರು ಗೌಪ್ಯ ಹೇಳಿಕೆಯಲ್ಲಿ ವಿವರಿಸಿರುವುದು ವರದಿಯಿಂದ ಗೊತ್ತಾಗಿದೆ.
ಎಲುಬು ಕೀಲು ವಿಭಾಗದಲ್ಲೂ ಅಕ್ರಮ
ಜಿಮ್ಸ್‌ನ ಎಲುಬು ಮತ್ತು ಕೀಲು ವಿಭಾಗದಲ್ಲೂ ಅಕ್ರಮ ನಡೆದಿದೆ ಎಂದು ಮತ್ತೊಬ್ಬ ವೈದ್ಯ ತನಿಖಾ ಸಮಿತಿ ಮುಂದೆ ಗೌಪ್ಯ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನೂ ಸಹ ತನಿಖಾ ಸಮಿತಿಯು ಮುಚ್ಚಿದ ಲಕೋಟೆಯಲ್ಲಿ ಇರಿಸಿರುವುದು ಸರ್ಕಾರಕ್ಕೆ ಸಲ್ಲಿಸಿದ ವರದಿಯಿಂದ ತಿಳಿದು ಬಂದಿದೆ.
ಹೊರರೋಗಿಗಳ ಗೈರು ಹಾಜರಿಯಲ್ಲಿ ಬಿಪಿಎಲ್ ಸೇರಿ ಇತರೆ ದಾಖಲೆಗಳ ಸಂಗ್ರಹವಾಗಿತ್ತೇ?
ಕಲ್ಬುರ್ಗಿಯ ಜಿಮ್ಸ್ ನ ಎಲುಬು ಮತ್ತು ಕೀಲು ವಿಭಾಗದಲ್ಲಿ ಹಲವು ವರ್ಷಗಳಿಂದಲೂ ಅಕ್ರಮ ನಡೆಯುತ್ತಿದೆ. ಡಾ ಮೊಹಮ್ಮದ್ ಇಬ್ರಾಹಿಂ ಅವರೇ ಇದರ ಮುಖ್ಯ ರೂವಾರಿಗಳು. ಇವರು ನನ್ನ ಮತ್ತು ಕೆಲ ಸಹದ್ಯೋಗಿಗಳ ಮೇಲೆ ವೈಯಕ್ತಿಕ ಅರ್ಥಿಕ ಲಾಭಕ್ಕಾಗಿ ಮಾನಸಿಕ ಒತ್ತಡ ಮತ್ತು ಕಿರುಕುಳ ನೀಡುತ್ತಿದ್ದಾರೆ. ಡಾ ಮೊಹಮದ್ ಇಬ್ರಾಹಿಂ ಅವರು ಬಡ ರೋಗಿಗಳನ್ನು ಜಿಮ್ಸ್ ಆಸ್ಪತ್ರೆಯಿಂದ ತಮ್ಮ ಖಾಸಗಿ ಆಸ್ಪತ್ರೆ (ಬಹುಮನಿ) ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಈ ಆಸ್ಪತ್ರೆಯು 2009ರಲ್ಲಿ ಸ್ಥಾಪನೆಯಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಚಿಕಿತ್ಸೆಗಳ ಸೌಲಭ್ಯವಿದ್ದರೂ ಸಹ ಸುಳ್ಳು ಮಾಹಿತಿ ನೀಡಿ ಅವರ ಖಾಸಗಿ ಆಸ್ಪತ್ರೆಗೆ (ಬಹುಮನಿ) ರೆಫರ್ ಮಾಡಿದ್ದಾರೆ ಎಂದು ಗೌಪ್ಯ ಹೇಳಿಕೆಯಲ್ಲಿ ವೈದ್ಯರೊಬ್ಬರು ಆರೋಪಿಸಿರುವುದು ತಿಳಿದು ಬಂದಿದೆ.
ಜಿಮ್ಸ್ ಆಸ್ಪತ್ರೆಯಿಂದ ರೆಫರ್ ಮಾಡಿದ ರೋಗಿಗಳ ಬಳಿ ಇರುವ ಬಿಪಿಎಲ್ ಕಾರ್ಡ್ ಮತ್ತು ಇತರೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಬಹುಮನಿ ಆಸ್ಪತ್ರೆಯ ಸಿಬ್ಬಂದಿ ಒಬ್ಬರನ್ನು ಜಿಮ್ಸ್ ಗೆ ಕಳಿಸಿ ಹೊರರೋಗಿಗಳ ಚೀಟಿಯನ್ನು ರೋಗಿಗಳ ಗೈರು ಹಾಜರಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಅದೇ ಒಪಿಡಿ ಸ್ಲಿಪ್‌ನ ಆಧಾರದ ಮೇಲೆ ಓಆರ್‍ಎಸ್ ಬೇರೆ ಯಾವುದೋ ಐ ಡಿ ( ಡಾ ಸಲ್ಮಾನ್ ಅವರ ಐಡಿ) ಮುಖಾಂತರ ತಯಾರಿಸಿರುತ್ತಾರೆ ಎಂದು ವೈದ್ಯರೊಬ್ಬರು ಗೌಪ್ಯ ಹೇಳಿಕೆಯಲ್ಲಿ ಬಹಿರಂಗಪಡಿಸಿರುವುದು ವರದಿಯಿಂದ ಗೊತ್ತಾಗಿದೆ.
ಹಾಗೆಯೇ ‘ಹೃದಯ ಸಂಬಂಧಿ ಕಾಯಿಲೆ (Compartment syndrome, neuro vascular injury) ಗಳಿಗೆ ಜಿಮ್ಸ್ ನಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿ ರೆಫರಲ್ ಪತ್ರ ತಯಾರಿಸಿ ಬಡ ರೋಗಿಗಳಿಂದ ಹಣ ಪಡೆದು ಬಹುಮನಿ ಆಸ್ಪತ್ರೆಯಲ್ಲಿ ಹೆಚ್ಚಿನ ಹಣಕ್ಕಾಗಿ ಶಸ್ತ್ರ ಚಿಕಿತ್ಸೆ ನಡೆಸಿರುತ್ತಾರೆ. ಇದು ಅನೇಕ ದಿನಗಳಿಂದ ನಡೆದು ಬಂದಿದೆ. ಮುಂದೆ ಆಗುವ ಪರಿಣಾಮಗಳಿಗೆ ಹೆದರಿ ಯಾರೂ ಪ್ರಶ್ನಿಸಿಲ್ಲ,’ ಎಂದು ವೈದ್ಯರೊಬ್ಬರು ಗೌಪ್ಯ ಹೇಳಿಕೆಯಲ್ಲಿ ವಿವರಿಸಿದ್ದಾರೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ‘ ಈ ವಿಚಾರ ಹೊರಬಂದಾಗ ವಿಭಾಗದ ಮುಖ್ಯಸ್ಥರಾದ ಡಾ ಮೊಹಮದ್ ಇಬ್ರಾಹಿಂ ಅವರು 2025 ಸೆ.2ರಂದು ವಿಭಾಗದ ತುರ್ತು ಸಭೆಯನ್ನು ಕರೆದಿದ್ದರು. ದೂರು ಬಂದ ಕಾರಣ ಎಲ್ಲಾ ಸಹದ್ಯೋಗಿಗಳಿಗೆ ನಕಲಿ ರೆಫರಲ್ ಸಿಸ್ಟಂನ್ನು ಸಮರ್ಥಿಸಲು ತಾಕೀತು ಮಾಡಿದ್ದರು. ಸಮರ್ಥಿಸದ ಪಕ್ಷದಲ್ಲಿ ವೃತ್ತಿ ಜೀವನವನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬೇರೆ ಎಲ್ಲಾ ಸಿಬ್ಬಂದಿಗಳು ಇದಕ್ಕೆ ಒಪ್ಪಿರುತ್ತಾರೆ. ಇದಕ್ಕೆ ಒಪ್ಪದಿದ್ದ ಪಕ್ಷದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಬೆದರಿಸಿದ್ದರು. ನನ್ನ ವೃತ್ತಿ ಜೀವನಕ್ಕೆ ಧಕ್ಕೆ ಮಾಡಿರುತ್ತಾರೆ. ಇವರೇ ಡಾ ಸಲ್ಮಾನ್ ಅವರ ಐ ಡಿ ಪಾಸ್ ವರ್ಡ್ ನ್ನು ನಕಲು ಮಾಡಿ ಹಣ ಲಪಟಾಯಿಸಲು ಉಪಯೋಗಿಸಿದ್ದಾರೆ,’ ಎಂದು ಹೇಳಿಕೆಯಲ್ಲಿ ಆರೋಪಿಸಿರುವುದು ವರದಿಯಿಂದ ಗೊತ್ತಾಗಿದೆ.

ಡೇಟಾ ಎಂಟ್ರಿ ಆಪರೇಟರ್ ಹೇಳಿಕೆಯಲ್ಲೇನಿದೆ?
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇಟಾ ಎಂಟ್ರಿ ಆಪರೇಟರ್ ಮಲ್ಲಿಕಾರ್ಜುನ್ ಎಂಬುವರು ಸಹ ತನಿಖಾ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ. ಡಾ ಸಲ್ಮಾನ್ ಅವರ ಐ ಡಿ ಮತ್ತು ಪಾಸ್ ವರ್ಡ್ ಕಂಪ್ಯೂಟರ್‍ನಲ್ಲೇ ಇದೆ. ಅದೇ ಐ ಡಿ, ಪಾಸ್ ವರ್ಡ್ ನ್ನು ಉಪಯೋಗಿಸಿ ರೆಫರ್ ಮಾಡಿದ್ದೇನೆ. ಇದು ಎಚ್‌ಒಡಿ ಗಮನಕ್ಕೆ ಬಂದಿದೆ. ರೋಗಿಗಳ ಸಂಬಂಧಿಕರು ರೋಗಿಗಳನ್ನು ಕರೆದುಕೊಂಡು ಬರದೇ ರೆಫರಲ್‌ಗಾಗಿ ಬಂದಿರುತ್ತಾರೆ ಎಂದು ತನಿಖಾ ಸಮಿತಿ ಮುಂದೆ ಹೇಳಿಕೆ ನೀಡಿರುವುದು ವರದಿಯಿಂದ ತಿಳಿದು ಬಂದಿದೆ.
‘ಡಾ ಮೊಹಮ್ಮದ್ ಇಬ್ರಾಹಿಂ, ಡಾ ಸಲ್ಮಾನ್, ಡಾ ನಿಶಾಂತ್ ಪಾಣೇಕರ್ ಮತ್ತು ಡಾ ವಿಠಲ್ ಗುಂಡಪ್ಪ ಇವರ ಐ ಡಿ ಮತ್ತು ಪಾಸ್ ವರ್ಡ್ ನನ್ನ ಬಳಿ ಇದೆ. ಅವುಗಳನ್ನು ರೆಫರ್ ಮಾಡಲು ಉಪಯೋಗ ಮಾಡಿರುತ್ತೇನೆ. ಡಾ ಸಲ್ಮಾನ್ ಅವರ ಹೆಸರಿನಲ್ಲಿ ರೆಫರ್ ಮಾಡಿರುವುದನ್ನು ಎಚ್‌ಒಡಿ ಗಮನಕ್ಕೆ ತಂದರೂ ಅವರು ಏನು ಹೇಳಲಿಲ್ಲ. ಯಾವಾಗ ವೈದ್ಯರು ತಮ್ಮ ಐ ಡಿ ಪಾಸ್‌ವರ್ಡ್ ಕೊಡಲಾರದಾಗ ಡಾ ಸಲ್ಮಾನ್ ಅವರ ಐ ಡಿ ಪಾಸ್ ವರ್ಡ್ ಉಪಯೋಗ ಮಾಡಿ ರೆಫರ್ ಮಾಡುತ್ತಿದ್ದು ಇದು ಎಚ್‌ಒಡಿ ಗಮನದಲ್ಲಿದೆ. ಎಚ್‌ಒಡಿ ಅವರು ಡಾ ಸಲ್ಮಾನ್ ಅವರ ಹೆಸರಿನಲ್ಲಿ ರೆಫರ್ ಮಾಡಲು ನನಗೆ ಹೇಳಿರುತ್ತಾರೆ. ಓಪಿಡಿ ಸ್ಲಿಪ್‌ನಲ್ಲಿ ಏನು ಬರೆದಿರುತ್ತಾರೋ ಅದನ್ನು ರೆಫರ್ ಮಾಡುವಾಗ SAST ನಲ್ಲಿ ನಮೂದಿಸಿದ್ದೇನೆ,’ ಎಂದು ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಡಾ ಸಲ್ಮಾನ್ ರಾಜೀನಾಮೆ ಗಮನಕ್ಕೆ ಬಂದಿರಲಿಲ್ಲವೇ?
ಡಾ ಸಲ್ಮಾನ್ ಅವರು ರಾಜೀನಾಮೆ ನೀಡಿದ್ದನ್ನು ಓಆರ್‍ಎಸ್ ನೋಡಲ್ ಅಧಿಕಾರಿಯಾದ ಡಾ ನಾಗರಾಜು ಪಾಟೀಲ್ ಅವರನ್ನು ತನಿಖಾ ಸಮಿತಿಯು ಪ್ರಶ್ನಿಸಿತ್ತು. ರೆಫರ್ ಮಾಡಿರುವ ವೈದ್ಯರಿಗೆ ರೆಫರಲ್‌ನ ಅವಶ್ಯಕತೆ ಇದೆಯೇ ಎಂಬ ಬಗ್ಗೆ ನೀವು ಪ್ರಶ್ನಿಸಿಲ್ಲವೇ ಎಂದು ತನಿಖಾ ಸಮಿತಿಯು ಕೇಳಿತ್ತು. ಇದಕ್ಕೆ ಉತ್ತರಿಸಿದ್ದ ಡಾ ನಾಗರಾಜ ಪಾಟೀಲ್ ಅವರು ‘ in the interest of the patient ಅವರಿಗೆ ರೆಫರಲ್ ನೀಡಿರುತ್ತಾರೆ. ಮೆಡಿಕಲ್ ಕಾಲೇಜಿನಿಂದ ಟ್ರಾನ್ಸ್‌ಫರ್/ ರಾಜೀನಾಮೆ ನೀಡಿರುವ ವೈದ್ಯರುಗಳ ಬಗ್ಗೆ ನನಗೆ ಪ್ರತಿ ಬಂದಿರುವುದಿಲ್ಲ. ಡಾ ಸಲ್ಮಾನ್ ಅವರ ರಾಜೀನಾಮೆ ವಿಷಯವಾಗಿ ನಮಗೆ ಮಾಹಿತಿ ಇಲ್ಲ,’ ಎಂದು ತನಿಖಾ ಸಮಿತಿ ಮುಂದೆ ಹೇಳಿಕೆ ನೀಡಿರುವುದು ತಿಳಿದು ಬಂದಿದೆ.
ಡಾ ಸಲ್ಮಾನ್ ಅವರು 2 ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿದ್ದರೂ ಮತ್ತು ವೈದ್ಯರ ಐ ಡಿ ಮತ್ತು ಪಾಸ್‌ವರ್ಡ್‌ನಲ್ಲಿ ರೆಫರಲ್ ನೀಡಿರುವುದನ್ನು ನೋಡಲ್ ಅಧಿಕಾರಿಗಳಾದ ಡಾ ನಾಗರಾಜು ಪಾಟೀಲ್ ಅವರು ಸರಿಯಾಗಿ ಗಮನಿಸದೇ ಇರುವುದು ಸಂಶಯಾಸ್ಪದವಾಗಿದೆ ಎಂದು ತನಿಖಾ ಸಮಿತಿಯು ಅನುಮಾನಿಸಿರುವುದು ಗೊತ್ತಾಗಿದೆ.

ವಿಶೇಷವೆಂದರೇ ಡಾ ನಾಗರಾಜ ಅವರು ಜಿಮ್ಸ್‌ನ ವೈದ್ಯಕೀಯ ಅಧೀಕ್ಷಕರಿಗೆ 2025ರ ಸೆ.9ರಂದು ಬರೆದಿದ್ದ ಪತ್ರದಲ್ಲಿ ಇದೊಂದು ತಾಂತ್ರಿಕ ದೋಷ ಎಂದು ವಿವರಿಸಿದ್ದರು.

ರೋಗಿಗಳ ದೈಹಿಕ ಪರೀಕ್ಷೆ ಆಧಾರದ ಮೇಲೆ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಚಿಕಿತ್ಸೆ ಪೊಡೆಯುವ ಸಲುವಾಗಿ ರೋಗಿಯ ಹೇಳಿಕೆ ಆಧಾರದ ಮೇಲೆ ಮೇಲ್ದರ್ಜೆ ಆಸ್ಪತ್ರೆಗೆ ರೆಫರಲ್ ಮಾಡುವುದು ಸಹಜವಾದ ಪ್ರಕ್ರಿಯೆ ಆಗಿದೆ. ರೆಫರಲ್ ನೀಡುವ ಸಮಯದಲ್ಲಿ ಯಾವುದೇ ನಿರ್ದಿಷ್ಟವಾದ ಆಸ್ಪತ್ರೆಗೆ ಶಿಫಾರಸ್ಸು ಮಾಡಿಲ್ಲ. ವೈದ್ಯಾಧಿಕಾರಿಗಳು ರೋಗಿಗಳಿಗೆ ನೀಡುವ ರೆಫರಲ್‌ನ್ನು ಡೇಟಾ ಎಂಟ್ರಿ ಆಪರೇಟರ್ ಮೂಲಕ ತಂತ್ರಾಂಶದಲ್ಲಿ ಮಾಹಿತಿ ನಮೂದಿಸಲಾಗುತ್ತದೆ. ಆ ನಂತರ ತಮ್ಮ ಲಾಗಿನ್ ಗೆ ಬರುತ್ತದೆ. ನಮ್ಮ ಆಸ್ಪತ್ರೆಯಲ್ಲಿ ದಿನನಿತ್ಯ ಬಹಳಷ್ಟು ರೋಗಿಗಳು ಬರುತ್ತಿರುವ ಕಾರಣ ರೋಗಿಗಳಿಗೆ ತುರ್ತು ಸೇವೆ ನೀಡಲಾಗುತ್ತದೆ. ರೋಗಿಯು ರೆಫರಲ್ ಪ್ರಿಂಟ್ ಪ್ರತಿ ಪಡೆದು ಮುಂದಿನ ಚಿಕಿತ್ಸೆಗೆ ಅವರ ವಿವೇಚನೆಯಂತೆ ಬೇರೆ ಬೇರೆ ಆಸ್ಪತ್ರೆಗೆ ತೆರಳಿರುತ್ತಾರೆ ಎಂದು ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.
ಖಾಯಂ ಆಪರೇಟರ್ ಇಲ್ಲ
ಇದೇ ಸಮಜಾಯಿಷಿಯಲ್ಲಿ ಡಾ ನಾಗರಾಜ್ ಅವರು ಮತ್ತೊಂದು ಕಾರಣವನ್ನು ಮುಂದಿರಿಸಿದ್ದಾರೆ. ಡಾ ಸಲ್ಮಾನ್ ಅವರು ರಾಜೀನಾಮೆ ನೀಡಿದ ಬಗ್ಗೆ ಮಾಹಿತಿ ಇರಲಿಲ್ಲ. ಕಚೇರಿಯಲ್ಲಿ ಖಾಯಂ ಆಪರೇಟರ್ ಇಲ್ಲ. ಹೀಗಾಗಿ ಬೇರೆ ಬೇರೆ ಆಪರೇಟರ್ ಇವರಿಂದ ರೋಗಿಗಳ ಹಿತದೃಷ್ಟಿಯಿಂದ ಕೆಲಸ ಪಡೆದಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಇದೊಂದು ತಾಂತ್ರಿಕ ದೋಷವಾಗಿದೆ. ಆಪರೇಟರ್ ಡಾ ಸಲ್ಮಾನ್ ಅವರ ಹೆಸರಿನಲ್ಲಿ ಇರುವ ಐ ಡಿ ಉಪಯೋಗಿಸಿರುವುದು ಕಂಡು ಬಂದಿದೆ. ಆದ್ದರಿಂದ ಆಪರೇಟರ್ ಗೆ ಎಚ್ಚರಿಕೆ ನೀಡಲಾಗಿದೆ ಎಂದು ವಿವರಿಸಿದ್ದರು.
‘ಸುಮಾರು ವರ್ಷಗಳಿಂದ ಅಂದಾಜು 355 ಪ್ರಕರಣಗಳಿವೆ. ಡಾ ಸಲ್ಮಾನ್ ಅವರು 221, ಡಾ ಮೊಹಮದ್ ಇಬ್ರಾಹಿಂ ಅವರು 70, ಇತರೆ 8 ವೈದ್ಯರು ಸೇರಿ 64 ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗೆ ರೆಫರಲ್ ಮಾಡಿರುವುದು ಕಂಡು ಬಂದಿದೆ ಎಂದು ತನಿಖಾ ಸಮಿತಿ ನೀಡಿರುವ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಸ್ಯಾಸ್ಟ್ ಪತ್ರದಲ್ಲೇನಿದೆ?
ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಟ್ರಸ್ಟ್ ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆಯಡಿ ಬಹಮನಿ ಆಸ್ಪತ್ರೆಯು ಸಲ್ಲಿಸಿfದ ಕ್ಲೈಮ್‌ಗಳನ್ನು ಮೆಡಿಕಲ್ ಆಡಿಟ್‌ನ್ನು ಪರಿಶೀಲಿಸಿತ್ತಲ್ಲದೇ
ಸಹ ವೈದ್ಯಕೀಯ ನಿರ್ದೇಶಕರಿಗೆ ಪತ್ರ ಬರೆದಿತ್ತು. ಈ ಪತ್ರದ ಪ್ರಕಾರ ಜಿಮ್ಸ್ ಆಸ್ಪತ್ರೆಯ ಬಹುತೇಕ ಆರ್ಥೋಪೆಡಿಕ್ ರೋಗಿಗಳು ಬಹುಮನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ನಕಲಿ ರೆಫರಲ್ ಗಳು ಮತ್ತು ಬಹುಮನಿ ಆಸ್ಪತ್ರೆಯ ಚಿಕಿತ್ಸೆಗಳು ಸಂಶಯಾಸ್ಪದವಾಗಿದೆ ಎಂದು ಗೊತ್ತಾಗಿದೆ.
ಅದೇ ರೀತಿ ಇದೇ ಟ್ರಸ್ಟ್ 2025ರ ಆಗಸ್ಟ್ 26ರಂದು ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿತ್ತು.
ಬಹುಮನಿ ಆಸ್ಪತ್ರೆಗೆ ಜಿಲ್ಲಾ ಆಸ್ಪತ್ರೆಯಿಂದ ಡಾ ಸಲ್ಮಾನ್ ಅವರ ಹೆಸರಿನಲ್ಲಿ ಆನ್‌ಲೈನ್ ರೆಫರಲ್ ಸಿಸ್ಟಂ ಮೂಲಕ ರೋಗಿಗಳು ನಿರ್ದೇಶಿತಗೊಂಡಿದ್ದರು. ಆದರೆ ಈ ವೈದ್ಯರು ಕಳೆದ 2 ವರ್ಷಗಳಿಂದಲೂ ಜಿಲ್ಲಾ ಆಸ್ಪತ್ರೆಗೆ ರಾಜೀನಾಮೆ ನೀಡಿ ಖಾಸಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಡಾ ಸಲ್ಮಾನ್ ಅವರ ಹೆಸರಿನಲ್ಲಿ ನಕಲಿಯಾದ ಬೇರೆ ವ್ಯಕ್ತಿಯು ಒಆರ್‍ಎಸ್ ಸೃಜಿಸುತ್ತಿರುವುದು ಕಂಡು ಬಂದಿದೆ ಎಂದು ಟ್ರಸ್ಟ್, ತನ್ನ ಪತ್ರದಲ್ಲಿ ವಿವರಿಸಿತ್ತು.

ಅದೇ ರೀತಿಯಿಂದ ಜಿಲ್ಲಾ ಆಸ್ಪತ್ರೆಯಿಂದ ರೋಗಿಯನ್ನು ಬಹಮನಿ ಆಸ್ಪತ್ರೆಗೆ ನಿರ್ದೇಶಿಸಿದ್ದ ರೋಗಿಗೆ ಅವರೇ ಶಸ್ತ್ರ ಚಿಕಿತ್ಸೆ ನಡೆಸಿರುವುದು ಕಂಡುಬಂದಿದೆ. ರೆಫರಲ್ ವರದಿಗಳನ್ನು ಪರಿಶೀಲಿಸಿದಾಗ ರೆಫರಲ್ ನೀಡಿರುವ ಕಾರಣ ಮತ್ತು ಕೇಸ್ ಶೀಟ್ ಪರಿಶೀಲನೆಯಲ್ಲಿ ಕಾಡಿರ್ಯಾಕ್ ಇಲ್‌ನೆಸ್ ಎಂದು ತೋರಿಸಿತ್ತು. ಆದರೆ ಕೇಸ್ ಶೀಟ್‌ನಲ್ಲಿ ಅದನ್ನು ನಮೂದಿಸಿರಲಿಲ್ಲ. ಹೀಗಾಗಿ ಇದು ಸಂಶಯಾಸ್ಪದವಾಗಿದೆ. ಆದರೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಚಿಕಿತ್ಸೆಯ ದಾಖಲೆಗಳಲ್ಲಿ ಕಾರ್ಡಿಯಾಕ್ ಇಲ್‌ನೆಸ್ ಇತರೆ ಕಾರಣಗಳನ್ನು ನಮೂದಿಸದೇ ಇರುವುದನ್ನು ಟ್ರಸ್ಟ್ ಗಮನಿಸಿತ್ತು. ಹೀಗಾಗಿ ಸಕಾರಣಗಳಿಲ್ಲದೆಯೇ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ನಿರ್ದೇಶಿಸುತ್ತಿರುವುದು ಕಂಡು ಬಂದಿದೆ ಎಂದು ಟ್ರಸ್ಟ್ ವಿವರಿಸಿತ್ತು.




