Wednesday | July 15, 2026 |

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು ಆತಂಕದ ಪ್ರವೃತ್ತಿಯನ್ನು ತೋರಿಸುತ್ತದೆ. 3,506 ಕಾಲೇಜುಗಳಲ್ಲಿ ಕೇವಲ 888 ಕಾಲೇಜುಗಳು ಮಾತ್ರ ಮಾನ್ಯತೆ ಪಡೆದಿವೆ. ಕೇವಲ ಶೇ. 23ರಷ್ಟು ಎ ಬ್ಯಾಂಡ್‌ ರೇಟಿಂಗ್‌ ಸಾಧಿಸಿದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಬಯಲು ಮಾಡಿದೆ.

ವಿಸ್ತರಣೆ, ಸಮತೆ, ಗುಣಮಟ್ಟ, ಆಡಳಿತ, ಹಣಕಾಸು ಪರಿಕಲ್ಪನೆ ಅಡಿಯಲ್ಲಿ ಸುಖ್‌ ದೇವ್ ಥೋರಟ್‌ ಅವರ ನೇತೃತ್ವದ ರಾಜ್ಯ ಶಿಕ್ಷಣ ನೀತಿ  ಆಯೋಗವು ನೀಡಿರುವ ವರದಿಯು, ರಾಜ್ಯದ ಉನ್ನತ ಶಿಕ್ಷಣದಲ್ಲಿನ ಗುಣಮಟ್ಟದ ಕುರಿತು ವಿವಿಧ ಆಯಾಮಗಳಿಂದ ಚರ್ಚಿಸಿದೆ.

ಈ ವರದಿಯ ಪ್ರತಿ ದಿ ಫೈಲ್‌ ಗೆ ಲಭ್ಯವಾಗಿದೆ.

 

 

ಥೋರಟ್ ಅವರು ಈ ವರದಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿ (2025) ಯಲ್ಲಿ ಸಲ್ಲಿಸಿದ್ದರು. ಈ ವರದಿ ಮೇಲೆ ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಲು ಸಚಿವರಿಗೆ ಕಳಿಸಲಾಗಿತ್ತು. ಆದರೆ ಯಾವೊಬ್ಬ ಸಚಿವರೂ ಸಹ ಈ ವರದಿ ಮೇಲೆ ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಿರಲಿಲ್ಲ. ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ 1 ತಿಂಗಳ ಕಳೆದಿದ್ದರೂ ಸಹ ಥೋರಟ್ ಅವರು ನೀಡಿರುವ ವರದಿಯತ್ತ ಕ್ರಮವಹಿಸಿಲ್ಲ.

ಕರ್ನಾಟಕದಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸಂಖ್ಯೆಯ ಸಮರ್ಪಕತೆ ಸಮಸ್ಯೆಯನ್ನು  ಆಯೋಗವು ಪರಿಶೀಲಿಸಿದೆ. ಕರ್ನಾಟಕವು ತನ್ನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ. ರಾಜ್ಯದಲ್ಲಿ ಒಟ್ಟು 7 ಕೃಷಿ ವಿಶ್ವವಿದ್ಯಾಲಯಗಳಿವೆ. ಇದು ಇತರೆಡೆಗಳಿಗಿಂತ ಹೆಚ್ಚಿದೆ. 2013-14ರಲ್ಲಿ 45 ರಷ್ಟಿದ್ದ ವಿಶ್ವವಿದ್ಯಾಲಯಗಳ ಸಂಖ್ಯೆ 93ಕ್ಕೇರಿದೆ. ಅದೇ ರೀತಿ, 2013-14ರಲ್ಲಿ 2,857 ಇದ್ದ ಕಾಲೇಜುಗಳ ಸಂಖ್ಯೆಯು 2023-24ರಲ್ಲಿ 4,735ಕ್ಕೇರಿದೆ.

 

ಆದರೆ 2013-14ರಲ್ಲಿ 1,098 ಇದ್ದ ಸ್ವತಂತ್ರ ಸಂಸ್ಥೆಗಳ ಸಂಖ್ಯೆಯು 2023-24ರಲ್ಲಿ 993ಕ್ಕೆ ಇಳಿದಿದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ.

 

 

11.5 ಲಕ್ಷ ಪ್ರವೇಶಾತಿ ಸಾಮರ್ಥ್ಯ-ದಾಖಲಾತಿ ಸಂಖ್ಯೆ ಕೇವಲ 4,29,303ರಷ್ಟು

ಕರ್ನಾಟಕವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 11.5 ಲಕ್ಷ ಪ್ರವೇಶಾತಿ ಸಾಮರ್ಥ್ಯ ಹೊಂದಿದೆ. ಆದರೂ ಸಹ 2023-24ರಲ್ಲಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿನ ಸ್ನಾತಕ ಪದವಿ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೇವಲ 4,29,303ರಷ್ಟಿತ್ತು. ಕರ್ನಾಟಕದಲ್ಲಿ ಸಮಸ್ಯೆಯು ಪೂರೈಕೆಯಲ್ಲಿಲ್ಲ, ಬೇಡಿಕೆಯಲ್ಲಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಸಂಸ್ಥೆಗಳ ಒಟ್ಟು ಸಾಮರ್ಥ್ಯವು ಬಳಕೆಯಾಗುತ್ತಿಲ್ಲ, ದಾಖಲಾತಿ ಬೆಳವಣಿಗೆಯು ನಿಧಾನ ಗತಿಯಲ್ಲಿದೆ ಮತ್ತು ಒಟ್ಟು ದಾಖಲಾತಿ ಅನುಪಾತವು ಮೂರನೇ ಒಂದು ಭಾಗದ ಹತ್ತಿರದಲ್ಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಈ ಕಡಿಮೆ ದಾಖಲಾತಿಯು ಗಂಭೀರ ಕಾಳಜಿಯ ಸಂಗತಿಯಾಗಿದೆ ಎಂದು ಆಯೋಗವು ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಕಾಲೇಜು – ವಿಶ್ವವಿದ್ಯಾಲಯಗಳಿಂದ ತುಂಬಿ ತುಳುಕುತ್ತಿದೆ ಕರ್ನಾಟಕ

ಈ ಹಿನ್ನೆಲೆಯಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕಾಲೇಜುಗಳ ಸಂಖ್ಯೆಯನ್ನು ಪರಿಗಣಿಸಿದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಕಾಲೇಜು ಮತ್ತು ವಿಶ್ವವಿದ್ಯಾಲಗಳಿಂದ ತುಂಬಿ ತುಳುಕುತ್ತಿದೆ. ಅನೇಕ ಕಾಲೇಜುಗಳು ಒಟ್ಟು 100 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಪ್ರತಿ ಕಾಲೇಜಿಗೆ ಸರಾಸರಿ ಸುಮಾರು 45 + ಇದೆ. ಈ ಸನ್ನಿವೇಶವನ್ನು ಗಮನಿಸಿದರೆ ರಾಜ್ಯದಲ್ಲಿ ಹೊಸ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವುದನ್ನು  ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ಸಮರ್ಥ ಪ್ರಾಧಿಕಾರದ ಮೂಲಕ ಕಾರ್ಯಸಾಧ್ಯತೆಯ ಕುರಿತು ಅಧ್ಯಯನಕ್ಕೆ ಒಳಪಡಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ.

ಉದ್ಯಮದ ಬೇಡಿಕೆಗಳೊಂದಿಗೆ ನೇರವಾಗಿ ಹೊಂದಿಕೆಯಾಗುವ ಅನ್ವಯಿಕ ವಿಜ್ಞಾನಗಳ ಪ್ರಾಬಲ್ಯ ಹೆಚ್ಚುತ್ತಿದೆ. ಮೂಲಭೂತ ವಿಜ್ಞಾನದಲ್ಲಿ ಶಿಕ್ಷಣ ನೀಡುವ ಬಿಎಸ್‌ಸಿ ಕೋರ್ಸ್‌ಗಳ ಆಕರ್ಷಣೆ ಕಡಿಮೆಯಾಗಿದೆ. ಅನ್ವಯಿಕ ವಿಜ್ಞಾನ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಸಮಯದಲ್ಲಿ ತತ್‌ ಕ್ಷಣದಲ್ಲಿ ಉದ್ಯೋಗಕ್ಕೆ ಅರ್ಹರರನ್ನಾಗಿಸುವ ಮತ್ತು ಉದ್ಯೋಗದಾತರಿಗೆ ವೆಚ್ಚ ಕಡಿಮೆ ಮಾಡುವ ಪ್ರಾಯೋಗಿಕ, ಉದ್ಯಮ-ಸಂಬಂಧಿತ ತರಬೇತಿಗಳಿಗೆ ಸೇರ್ಪಡೆಯಾಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಮೂಲ ವಿಜ್ಞಾನ ಪದವೀಧರರು, ಹೆಚ್ಚು ಹೊಂದಿಕೊಳ್ಳುವ ಮತ್ತು ಕ್ಷೇತ್ರಗಳಾದ್ಯಂತ ಪರಿವರ್ತನೆಗೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಉದ್ಯೋಗಕ್ಕೆ ಸಜ್ಜುಗೊಳ್ಳಲು ಹೆಚ್ಚುವರಿ ತರಬೇತಿಯ ಅಗತ್ಯವಿದೆ. ಇದರಿಂದಾಗಿ ವಿಶೇಷತೆ ಮತ್ತು ತತ್‌ ಕ್ಷಣದ ನಿಯೋಜನೆ ಬಯಸುವ ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೆ ಹೆಚ್ಚಿನ ಬೇಡಿಕೆ ಇರುವುದಿಲ್ಲ.

 

 

ಅಂಚಿಗೆ ತಳ್ಳಲ್ಪಟ್ಟ  ಮೂಲಭೂತ ವಿಜ್ಞಾನ 

ಈ ಕೊರತೆಯಿಂದಾಗಿಯೇ ಮೂಲಭೂತ ವಿಜ್ಞಾನ ಕಾರ್ಯಕ್ರಮಗಳು ಅಂಚಿಗೆ ತಳ್ಳಲ್ಪಟ್ಟಿವೆ. ಉದ್ಯಮದಲ್ಲಿ ಸೀಮಿತ ತೊಡಗಿಸಿಕೊಳ್ಳುವಿಕೆ ಮತ್ತು ನೇರ ವೃತ್ತಿಪರ ಮಾರ್ಗಗಳ ಕಡಿಮೆ ಲಭ್ಯತೆಯಿಂದಾಗಿ ಮತ್ತಷ್ಟು ಒತ್ತಡಕ್ಕೆ ಒಳಗಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧದ ತಜ್ಞರು ಮೂಲಭೂತ ವಿಜ್ಞಾನಗಳನ್ನು ನಿರ್ಲಕ್ಷ್ಯಿಸುವುದು ದೀರ್ಘಕಾಲಿನ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯನ್ನು ದುರ್ಬಲಗೊಳಿಸುತ್ತದೆ.

ಕರ್ನಾಟಕದಲ್ಲಿ ನ್ಯಾಕ್‌ ನಿಗದಿಪಡಿಸಿದ ಗುಣಮಟ್ಟದ ಏಳು ನಿಯತಾಂಕಗಳಲ್ಲಿ ಎಲ್ಲಾ ಕಾಲೇಜುಗಳ ಗುಣಮಟ್ಟ ಕಡಿಮೆಯಾಗಿದೆ. ಗುಣಮಟ್ಟದಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ. ಸರ್ಕಾರಿ, ಖಾಸಗಿ ಅನುದಾನಿತ ಕಾಲೇಜುಗಳು ಮತ್ತು ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಗುಣಮಟ್ಟ ಮುಂದುವರೆದಿದೆ. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ವ್ಯತ್ಯಾಸವು ತುಲನಾತ್ಮಕವಾಗಿ  ಹೆಚ್ಚಾಗಿದೆ. ಶಿಕ್ಷಕರು, ಸಂಶೋಧನೆ, ಮೂಲಸೌಕರ್ಯ, ಆಡಳಿತ ಮತ್ತು ಪಠ್ಯಕ್ರಮ ಮತ್ತಿತರ ಎಲ್ಲಾ ಸೂಚಕಗಳಲ್ಲಿ ಗುಣಮಟ್ಟದ ವ್ಯತ್ಯಾಸ ಕಂಡು ಬರುತ್ತದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

ಕೇವಲ ಶೇ. 23ರಷ್ಟು ಎ ಬ್ಯಾಂಡ್‌ ರೇಟಿಂಗ್‌

ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು ಆತಂಕದ ಪ್ರವೃತ್ತಿಯನ್ನು ತೋರಿಸುತ್ತದೆ. 3,506 ಕಾಲೇಜುಗಳಲ್ಲಿ ಕೇವಲ 888 ಕಾಲೇಜುಗಳು ಮಾತ್ರ ಮಾನ್ಯತೆ ಪಡೆದಿವೆ. ಕೇವಲ ಶೇ. 23ರಷ್ಟು ಎ ಬ್ಯಾಂಡ್‌ ರೇಟಿಂಗ್‌ ಸಾಧಿಸಿದೆ. ಇವುಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕೇವಲ ಶೇ. 8ರಷ್ಟಿವೆ. ಅದೇ ರಿತಿ 86 ವಿಶ್ವವಿದ್ಯಾಲಯಗ ಮಟ್ಟದ ಸಂಸ್ಥೆಗಳಲ್ಲಿ ಕೇವಲ 32 ಸಂಸ್ಥೆಗಳು ಮಾತ್ರ ಮಾನ್ಯತೆ ಪಡೆದಿದೆ. ಕೇವಲ 19 ಸಂಸ್ಥೆಗಳು ಎ ದರ್ಜೆಯನ್ನು ತಲುಪಿವೆ. ಎನ್‌ಐಆರ್‍‌ಎಫ್‌ ಶ್ರೇಯಾಂಕದಲ್ಲಿ ಕೇವಲ 4 ಕರ್ನಾಟಕದ ಖಾಸಗಿ ಕಾಲೇಜುಗಳು ಅಗ್ರ 100ರಲ್ಲಿ ಸ್ಥಾನಪಡೆದಿವೆ. ಸರ್ಕಾರಿ ಕಾಲೇಜುಗಳ ಸಂಖ್ಯೆಯು ಗಣನೀಯವಾಗಿ ಕಡಿಮೆ ಇದೆ. ಅಗ್ರ 100 ವಿಶ್ವವಿದ್ಯಾಲಯಗಳಲ್ಲಿ ಕರ್ನಾಟದ ಕೇವಲ 11 ವಿಶ್ವವಿದ್ಯಾಲಯಗಳಿವೆ. ಇದರಲ್ಲಿ ಕೇವಲ 4 ರಾಜ್ಯ ವಿಶ್ವವಿದ್ಯಾಲಯಗಳು (ಎರಡು ಕೃಷಿ, ತಂತ್ರಜ್ಞಾನ ಎರಡು ಸಾಮಾನ್ಯ) ಸೇರಿವೆ. ಈ ಪಟ್ಟಿಯಲ್ಲಿ 6 ಖಾಸಗಿ ವಿಶ್ವವಿದ್ಯಾಲಯಗಳಿವೆ. ಇದು ವಿಶೇಷವಾಗಿ ಸಾರ್ವಜನಿಕ ಸಂಸ್ಥೆಗಳಲ್ಲಿ ಗುಣಮಟ್ಟ ಮತ್ತು ಮಾನ್ಯತೆಯಲ್ಲಿನ ಗಮನಾರ್ಹ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದು ಆಯೋಗವು ವಿವರಿಸಿದೆ.

 

 

ಉತ್ತೀರ್ಣತೆ ದರ-ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಗಮನಾರ್ಹವಾಗಿ ಕಡಿಮೆ

2021-22ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಪದವಿಯಲ್ಲಿ ಶೇ. 85.2ರಷ್ಟು ಉತ್ತೀರ್ಣತೆ ದರವನ್ನು ಕಂಡವು. ಹೀಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಈ ದರವು ಗಮನರ್ಹಾವಾಗಿ ಕಡಿಮೆ ಇದೆ. ಸ್ನಾತಕೋತ್ತರ ಮಟ್ಟದಲ್ಲಿ ಇದೇ ರೀತಿಯ ಪ್ರವೃತ್ತಿ ಕಾಣುತ್ತದೆ. ಅಲ್ಲಿ ಒಟ್ಟಾರೆ ಉತ್ತೀರ್ಣತೆ ದರವು ಶೇ.90ರಷ್ಟಿದೆ. ಆದರೆ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಮತ್ತು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಸ್ವಲ್ಪ ಕಡಿಮೆ ಇದೆ. ನಿರಂತರವಾಗಿ ಕಾಣುವ ಈ ಪ್ರವೃತ್ತಿಯು ವಿದ್ಯಾರ್ಥಿಗಳ ಯಶಸ್ಸನ್ನು ಖಾತ್ರಿಪಡಿಸುವಲ್ಲಿ ಸಾರ್ವಜನಿಕ ಮತ್ತು ಮುಕ್ತ ವಿಶ್ವವಿದ್ಯಾಲಯಗಳ ಮುಂದಿರುವ ನಿರ್ದಿಷ್ಟ ಸವಾಲನ್ನು ಸೂಚಿಸುತ್ತದೆ.

ಪ್ರತ್ಯೇಕ ಗುಣಮಟ್ಟ ನಿಧಿ

ಪ್ರಸ್ತುತ ಕರ್ನಾಟಕದ ಉನ್ನತ ಶಿಕ್ಷಣ ಬಜೆಟ್‌ ವೇತನ ಮತ್ತು ಅಭಿವೃದ್ಧಿಗೆ 90;10 ಅನುಪಾತದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗುಣಮಟ್ಟ ವರ್ಧನೆಗೆ ಬೇಕಾಗುವ ಪ್ರಮಾಣಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಎಲ್ಲವೂ ಅಲ್ಲದಿದ್ದರೂ ಶಿಕ್ಷಣ ಮೂಲಸೌಕರ್ಯದ ಸ್ಥಿತಿಗತಿಯನ್ನು ನೋಡಿದರೆ ಅನೇಕ ಹೆಚ್ಚಿನ ಸೂಚಕಗಳ್ಲಲಿ ಇದು ಕೆಳಮಟ್ಟದಲ್ಲಿರುವುದು ಕಂಡು ಬರುತ್ತದೆ. ಆದ್ದರಿಂದ ಆಯೋಗವು 75;25 ಪ್ರಮಾಣದಲ್ಲಿ ವೇತನ-ಅಭಿವೃದ್ಧಿ ವೆಚ್ಚ ಮಾನದಂಡವನ್ನು ಸ್ಥಾಪಿಸಬೇಕು. ಇದಕ್ಕಾಗಿ ಪ್ರತ್ಯೇಕ ಗುಣಮಟ್ಟ ನಿಧಿಯನ್ನು ರಚಿಸಬೇಕು ಎಂದು ಆಯೋಗವು ಪ್ರಸ್ತಾವಿಸಿದೆ.

 

 

ಕೇವಲ ಹಣಕಾಸು ನೆರವಿನ ಆಚೆಗೂ ಕರ್ನಾಟಕದ ಸುಮಾರು 90 ವಿಶ್ವವಿದ್ಯಾಲಯಗಳು ಮತ್ತು 4,200 ಕಾಲೇಜುಗಳು ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಗುಣಮಟ್ಟ ಸೂಚಕಗಳಿಗೆ ಸಂಬಂಧಿಸಿ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಯೋಜಿತ ನೆರವಿನ ಅಗತ್ಯವಿದೆ. ಈ ದೊಡ್ಡ ಕೆಲಸವು ನಿರಂತರ ಆಂತರಿಕ ಮೌಲ್ಯಮಾಪನ ಮತ್ತು ತಜ್ಞರ ಮಾರ್ಗದರ್ಶನವನ್ನು ಬಯಸುತ್ತದೆ. ಈ ಸಂಸ್ಥೆಗಳಿಗೆ ಅಗತ್ಯವಾದ ಪರಿಣಿತಿ ಮತ್ತು ಬೆಂಬಲವನ್ನು ಒದಗಿಸಲು ಕರ್ನಾಟಕ ರಾಜ್ಯ ಗುಣಮಟ್ಟ ಮೌಲ್ಯಮಾಪನ ಮಂಡಳಿ ಸ್ಥಾಪಿಸಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

Hot this week

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...
Please Scan to make Your Contribution

Topics

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

Related Articles

Popular Categories

error: Content is protected !!