ಬೆಂಗಳೂರು; ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಎಲ್ಲಾ ಘಟಕಗಳು ಮತ್ತು ಇಮಡಿಯಾ ರಿಜರ್ವ್ ಬೆಟಾಲಿಯನ್ ಘಠಕಗಳಲ್ಲಿ ಆರ್ಡರ್ಲಿ ರದ್ದಾಗಿದ್ದರೂ ಸಹ ಜೀವಂತವಾಗಿರಿಸಲಾಗಿದೆ. ಅಲ್ಲದೇ ಸಿಬ್ಬಂದಿಗಳಿಂದ ನಗದು ಹಣ ವಸೂಲು ಮಾಡಲಾಗುತ್ತಿದೆ ಎಂಬ ಸಂಗತಿಯು ರಾಜ್ಯಪಾಲರ ಮೆಟ್ಟಿಲೇರಿರುವುದು ಇದೀಗ ಬಹಿರಂಗವಾಗಿದೆ.
ವಿಶೇಷವೆಂದರೇ ಬೆಂಗಳೂರಿನ ಹನುಮಂತ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎಂದು ಹೇಳಲಾದ ತೇಜಸ್ ಕುಮಾರ್ ಗೌಡ ಮತ್ತಿತರರು ರಾಜ್ಯಪಾಲರಿಗೆ 2026ರ ಜನವರಿ 3ರಂದೇ ಲಿಖಿತ ದೂರು ನೀಡಿದ್ದಾರೆ. ಈ ದೂರನ್ನು ರಾಜ್ಯಪಾಲರ ಕಚೇರಿಯೂ ಸ್ವೀಕರಿಸಿದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದಿಂದ ನಡೆದುಬಂದಿದ್ದ ‘ಆರ್ಡರ್ಲಿ’ ಪದ್ಧತಿ ರದ್ದುಗೊಳಿಸಿರುವ ಬೆನ್ನಲ್ಲೇ 3 ತಿಂಗಳ ಹಿಂದೆಯೇ ರಾಜ್ಯಪಾಲರಿಗೆ ಸಲ್ಲಿಸಿದ್ದ ದೂರಿನ ಪ್ರತಿಯು ಮತ್ತು ದೂರಿನಲ್ಲಿರುವ ಅಂಶಗಳು ಮುನ್ನೆಲೆಗೆ ಬಂದಿವೆ.
ಇದಕ್ಕೂ ಮುನ್ನ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಊ 2023ರ ಜುಲೈ 17ರಲ್ಲೇ ದೂರು ಸಲ್ಲಿಕೆಯಾಗಿತ್ತು. ಈ ದೂರು ಸಲ್ಲಿಕೆಯಾದ 3 ವರ್ಷಗಳ ನಂತರ ಅಂದರೇ 2026ರ ಜನವರಿ 3ರಂದು ರಾಜ್ಯಪಾಲರಿಗೂ ದೂರು ಸಲ್ಲಿಕೆಯಾಗಿದೆ. ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದಲ್ಲಿ ಕಾರ್ಯಾಚರಣೆಯಲ್ಲಿರುವ ಒಟ್ಟು 12 ಕೆಎಸ್‌ಆರ್‍ಪಿ ಪಡೆಗಳು ಮತ್ತು 2 ತರಬೇತಿ ಶಾಲೆಗಳು, 2 ಇಂಡಿಯಾ ರಿಜರ್ವ್ ಬೆಟಾಲಿಯನ್ ಮತ್ತು ಘಟಕಗಳ ಕಮಾಂಡೆಂಟ್‌ಗಳು ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ. ಅಲ್ಲದೇ ಕಮಾಂಡೆಂಟ್‌ಗಳ ಬೆಂಬಲದೊಂದಿಗೆ ಅಧೀನ ಅಧಿಕಾರಿಗಳು ಶ್ರೇಣಿಗೆ ತಕ್ಕಂತೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಆರ್ಡ್‌ರ್ಲಿ ಪಡೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.
ಬೆಂಗಳೂರು ಘಟಕದ ಕಮಾಂಡೆಂಟ್ ಐಪಿಎಸ್ ಅಮರನಾಥ್ ರೆಡ್ಡಿ , ಬೆಳಗಾಔಇ ಘಟಕದ ರಮೇಶ್ ಬೋರಾವಿ, ಕೆ ಎಸ್ ರಘುನಾತ್, ಆರ್ ಜನಾರ್ದನ್, ಮೈಸೂರು ಘಟಕದ ಕಮಾಂಡೆಂಟ್ ದೊರೆಮನಿ ಭೀಮಯ್ಯ, ಕಲ್ಬುರ್ಗಿ ಘಟಕದ ಕಮಾಂಡೆಂಟ್ ಎನ್ ಎಸ್ ಪ್ರಕಾಶ, ಮಂಗಳೂರು ಘಟಕದ ಕಮಾಂಡೆಂಟ್ ಹೇಮಂತಕುಮಾರ ಹೆಗಡೆ, ಶಿವಮೊಗ್ಗ ಘಟಕದ ಕಮಾಂಡೆಂಟ್ ಎನ್ ಯುವಕುಮಾರ್, ಬೆಂಗಳೂರು ಘಟಕದ 9ನೇ ಪಡೆಯ ಕಮಾಡೆಂಟ್ ರಾಮಕೃಷ್ಣ ಮುದ್ದೇಪಾ, ಶಿಗ್ಗಾಂವಿ ಘಟಕದ ಕಮಾಡೆಂಟ್ ಎನ್ ಜಿ ಮೆಳ್ಳಗಟ್ಟಿ, ಹಾಸನ ಘಟಕದ ಕಮಾಡೆಂಟ್ ಪ್ರವೀಣ್ ಆಳ್ವ, 12ನೇ ಪಡೆಯ ಘಟಕದ ಕಮಾಂಡೆಂಟ್ ಹಂಜಾ ಹುಸೇನ್, ವಿಜಯಪುರ ಇಂಡಿಯಾ ರಿಜರ್ವ್ ಬೆಟಾಲಿಯನ್ ಕಮಾಂಡೆಂಟ್ ಪ್ರಸನ್ನಕುಮಾರ, ಮುನಿರಾಬಾದ್ ಇಂಡಿಯಾ ರಿಜರ್ವ್ ಬೆಟಾಲಿಯನ್ ಕಮಾಡೆಂಟ್ ಬಿ ಎಂ ಪ್ರಸಾದ ಅವರು ಆರ್ಡರ್ಲಿ ಪದ್ಧತಿಯನ್ನು ಮುಂದುವರೆಸಿದ್ದಾರೆ ಎಂದು ಜನವರಿಯಲ್ಲಿ ನೀಡಿದ್ದ ದೂರಿನಲ್ಲಿ ಇವರ ಹೆಸರನ್ನೂ ಉಲ್ಲೇಖಿಸಿರುವುದು ಗೊತ್ತಾಗಿದೆ.
‘ಈ ಎಲ್ಲಾ ಘಟಕಗಳಲ್ಲಿ ತುಂಬಾ ಸಿಬ್ಬಂದಿಗಳ ಕೊರತೆ ಇದೆ. ಇಂದಿನ ಸ್ಥಿತಿಯಲ್ಲಿ ಪ್ರತೀ ಸಿಬ್ಬಂದಿಯೂ ಕೂಡ ಅತೀವ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಸುಮಾರು ಸಿಬ್ಬಂದಿಗಳು ಕೆಲಸದ ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿ ಆಗಿರುತ್ತದೆ. ಆದರೆ ಕೆಎಸ್‌ಆರ್‍ಪಿ ಮತ್ತು ಐಆರ್‍ಬಿ ಘಟಕಗಳಲ್ಲಿ ಕರ್ನಾಟಕ ಸರ್ಕಾರವು ನಿಷೇಧಿಸಿರುವ ಆರ್ಡರ್ಲಿ ಪದ್ಧತಿಯನ್ನು ಮೇಲ್ಕಾಣಿಸಿದ ಎಲ್ಲಾ ಘಟಕಾಧಿಕಾರಿಗಳು ರಾಜ್ಯ ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಮಾಡುತ್ತಿದ್ದಾರೆ. ಕೆಎಸ್‌ಆರ್‍ಪಿ ಮತ್ತು ಐಆರ್‍ಬಿ ಘಟಕಗಳಲ್ಲಿ ಕಮಾಡೆಂಟ್‌ಗಳ ಬೆಂಬಲದೊಂದಿಗೆ ಅಧೀನ ಅಧಿಕಾರಿಗಳು ಶ್ರೇಣಿಗಳಿಗೆ ತಕ್ಕಂತೆ ಅಧಿಕಾರಿಗಳು ಸಿಬ್ಬಂದಿಗಳಗಿಎ ಆರ್ಡರ್ಲಿ ಪಡೆಯುತ್ತಿದ್ದಾರೆ,’ ಎಂದು ಗುರುತರವಾದ ಆಪಾದನೆ ಹೊರಿಸಿರುವುದು ದೂರಿನಿಂದ ಗೊತ್ತಾಗಿದೆ.

ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್ ಪಿಸಿ ಅಥವಾ ಹೆಚ್‌ಸಿ , ಸಹಾಯಕ ಕಮಾಂಡೆಂಟ್‌ಗಳಿಗೆ ಪಿಸಿ ಅಥವಾ ಹೆಚ್ ಸಿ (ನಾಲ್ಕು ಮಂದಿ), ಡೆಪ್ಯೂಟಿ ಕಮಾಂಡೆಂಟ್‌ಗೆ 5 ಮಂದಿ, ಕಮಾಂಡೆಂಟ್ 10 ಮಂದಿ ಆರ್ಡರ್ಲಿ ಇದ್ದಾರೆ ಎಂದು ಅಂಕಿ ಅಂಶಗಳನ್ನು ಒದಗಿಸಿರುವುದು ದೂರಿನಿಂದ ತಿಳಿದು ಬಂದಿದೆ.
‘ಆರ್ಡರ್ಲಿ ಎಂದು ಬಿಟ್ಟು ಪ್ರತಿಯೊಬ್ಬರಿಂದ 28,000 ರು ನಗದು ಹಣ ಪಡೆದು ಅವರವರ ಸ್ವಂತ ಊರುಗಳಲ್ಲಿ ಸ್ವಂತ ಉದ್ಯೋಗ, ವ್ಯಾಪಾರ ಮಾಡಲು ಬಿಟ್ಟಿದ್ದಾರೆ. ಮತ್ತು ಅವರುಗಳ ಹಾಜರಿಗಳನ್ನು ಕರ್ತವ್ಯ ಪುಸ್ತಕದಲ್ಲಿ ಸಹಾಯಕ, ಅಪ್ತ ಸಹಾಯಕ, ದಳವಾಯಿ, ದೂತ ಇತ್ಯಾದಿ ಶಬ್ದಗಳಿಂದ ಬರೆದು ಕರ್ತವ್ಯದ ಮೇಲೆ ಇರುವಂತೆ ನಮೂದಿಸುತ್ತಾರೆ. ಅಲ್ಲದೇ ಯಾಔಉದೋ ಅಧಿಕಾರಿ ಬೇರೆ ಯಾವುದೋ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಕೂಡ ಆ ಅಧಿಕಾರಿಗೆ ಬೇಕಾದ ಯಾವುದಾದರೂ ಘಟಕದಿಂದ ಸಿಬ್ಬಂದಿಯನ್ನು ಆರ್ಡರ್ಲಿ ಪಡೆಯುತ್ತಾರೆ,’ ಎಂದು ಆರೋಪಿಸಿರುವುದು ದೂರಿನಿಂದ ಗೊತ್ತಾಗಿದೆ.
ಈ ಆರ್ಡರ್ಲಿ ಎಂದು ಹೋಗಿರುವ ಸಿಬ್ಬಂದಿಗಳ ಕರ್ತವ್ಯದ ಹೊರೆಯು ಸಾಮಾನ್ಯ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಮೇಲೆ ಅತೀವವಾದ ಪರಿಣಾಮ ಬೀರುತ್ತದೆ. ಕೆಎಸ್‌ಆರ್‍ಪಿ ಮತ್ತು ಐಆರ್‍ಬಿ ಘಟಕಗಳಲ್ಲಿ ದುಡ್ಡಕೊಟ್ಟರೇ ಸುಖವಾಗಿ ತಮ್ಮ ತಮ್ಮ ಊರುಗಳಲ್ಲಿ ಸ್ವಂತ ಉದ್ಯೋಗ, ವ್ಯತಾಪಾರ ಮಾಡಬಹುದು ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಪ್ರತಿ ಘಟಕದಿಂದ ಕನಿಷ್ಠ 46ರಿಂದ 50 ಸಿಬ್ಬಂದಿಗಳು ಆರ್ಡರ್ಲಿಗಳು ಇರುತ್ತಾರೆ. ಹಾಗೂ ಬೆಂಗಳೂರು ನಗರದ ಘಟಕಗಳಲ್ಲಿ 80ರಿಂದ 100 ಜನ ಸಿಬ್ಬಂದಿಗಳು ಆರ್ಡರ್ಲಿಗಳು ಇರುತ್ತಾರೆ. ಇದರ ಹೆಚ್ಚಿನ ತನಿಖೆಗಾಗಿ ಆರ್ಡರ್ಲಿ ಸಿಬ್ಬಂದಿಗಳ ಮೊಬೈಲ್ ಲೊಕೇಷನ್ ಪರಿಶೀಲಿಸಬೇಕು. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನಧಿಕೃತವಾಗಿ ಆರ್ಡರ್ಲಿ ಪದ್ಧತಿ ಜೀವಂತವಾಗಿಟ್ಟಿರುವ ಕೆಎಸ್‌ಆರ್‍ಪಿ ಮತ್ತು ಐಆರ್‍ಬಿ ಘಟಕಗಳ ಎಲ್ಲಾ ಶ್ರೇಣಿಯ ಅಧಿಕಾರಿಗಳು ಭ್ರಷ್ಟಾಚಾರವನ್ನು ವೃತ್ತಿಯನ್ನಾಗಿ ಮೈಗೂಡಿಸಿಕೊಂಡಿದ್ದಾರೆ ಎಂದು ಆಪಾದಿಸಿರುವುದು ಗೊತ್ತಾಗಿದೆ.
‘ ಅಧಿಕಾರಿಗಳಿಗೆ ಸಂಬಳದಲ್ಲಿ ಸರ್ಕಾರವು ಆರ್ಡರ್ಲಿಯ ಬದಲಾಗಿ ವಿಶೇಷ ಭತ್ಯೆ ನೀಡುತ್ತಿದೆ. ಆದರೂ ಸರ್ಕಾರದ ಭತ್ಯೆ ಪಡೆದು ಸರ್ಕಾರದ ಆದೇಶವನ್ನೂ ಗಾಳಿಗೆ ತೂರಿ ತಮ್ಮ ಭ್ರಷ್ಟಾಚಾರದಲ್ಲಿ ಎಲ್ಲರೂ ಕಾರ್ಯನಿರತರಾಗಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ದೂರುದಾರರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರವಾದ ತನಿಖೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಆರ್ಡರ್ಲಿ ಪದ್ಧತಿಯಲ್ಲಿರುವ ಎಲ್ಲಾ ಸಿಬ್ಬಂದಿಗಳನ್ನು ಆಯಾ ಘಟಕಗಳಲ್ಲಿ ಸಾಮಾನ್ಯ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ದೂರುದಾರರು ರಾಜ್ಯಪಾಲರನ್ನು ಕೋರಿರುವುದು ತಿಳಿದು ಬಂದಿದೆ.
ಕಾಲೋನಿಯಲ್ ಯುಗದ ಆರ್ಡರ್ಲಿ ಪದ್ಧತಿಯನ್ನು ಈಚೆಗಷ್ಟೇ ರದ್ದುಪಡಿಸಲಾಗಿತ್ತು. ಇದನ್ನು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿತ್ತು.
ಏನಿದು ‘ಆರ್ಡರ್ಲಿ’ ಪದ್ಧತಿ ?
ಆರ್ಡರ್ಲಿ ಪದ್ಧತಿ ಬ್ರಿಟಿಷ್ ಕಾಲದಲ್ಲಿ ಆರಂಭವಾದ ವ್ಯವಸ್ಥೆ. ಈ ವ್ಯವಸ್ಥೆಯಡಿ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗಳಿಗೆ ನಿಯೋಜಿಸಿ, ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಸುವ ಪದ್ಧತಿ ನಡೆದುಬಂದಿತ್ತು. ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಸೇರಿದಂತೆ ಹಲವಾರು ಮನೆ ಕೆಲಸಗಳಿಗೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿತ್ತು.
ಸ್ವಾತಂತ್ರ್ಯದ ನಂತರವೂ ಈ ಪದ್ಧತಿ ಕೆಲವು ರಾಜ್ಯಗಳಲ್ಲಿ ಮುಂದುವರಿದಿದ್ದು, ಕಾಲಕ್ರಮೇಣ ಇದರ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಪೊಲೀಸ್ ಸಿಬ್ಬಂದಿಯನ್ನು ಸಾರ್ವಜನಿಕ ಸೇವೆಗಾಗಿ ನೇಮಕ ಮಾಡಲಾಗಿದ್ದರೂ ಸಹ ಅವರನ್ನು ಹಿರಿಯ ಅಧಿಕಾರಿಗಳ ಮನೆ ಕೆಲಸಗಳಿಗೆ ಬಳಸುವುದು ನ್ಯಾಯಸಮ್ಮತವಲ್ಲ ಎಂಬ ಅಭಿಪ್ರಾಯ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು.
ಸುಧಾರಣೆಯ ಅಗತ್ಯ ಏಕೆ?
ಕರ್ನಾಟಕದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿ ಕೊರತೆ ಇದೆ ಎಂಬುದು ಹಲವು ವರದಿಗಳಲ್ಲಿ ಉಲ್ಲೇಖವಾಗುತ್ತಲೇ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಕಾನ್ಸ್‌ಟೇಬಲ್‌ಗಳು ಮೂಲ ಪೊಲೀಸ್ ಕರ್ತವ್ಯಗಳ ಬದಲಾಗಿ ಅಧಿಕಾರಿಗಳ ಮನೆ ಕೆಲಸಗಳಿಗೆ ನಿಯೋಜಿಸಿರುವುಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿದ್ದವು.
ಇದರಿಂದಾಗಿ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಗೂ ಪರಿಣಾಮ ಬೀರುತ್ತಿತ್ತು. ಸಾರ್ವಜನಿಕ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಮುಖ್ಯ ಕರ್ತವ್ಯವಾಗಿದ್ದರೂ, ಸಿಬ್ಬಂದಿಯ ಒಂದು ಭಾಗ ಹಿರಿಯ ಅಧಿಕಾರಿಗಳ ವೈಯಕ್ತಿಕ ಕೆಲಸಗಳಲ್ಲಿ ನಿರತರಾಗಿರುವುದು ಸಮಸ್ಯೆಯಾಗಿತ್ತು.
ಆರ್ಡರ್ಲಿ ರದ್ದುಗೊಳಿಸಿರುವುದರಿಂದ ಸುಮಾರು 3,320 ಪೊಲೀಸ್ ಸಿಬ್ಬಂದಿಯನ್ನು ಹಿಂತೆಗೆದು ಮತ್ತೆ ಪೊಲೀಸ್ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ. ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಹೆಚ್ಚಿನ ಸಿಬ್ಬಂದಿ ಲಭ್ಯವಾಗಲಿದ್ದಾರೆ. ಇದಕ್ಕೆ ಪರ್ಯಾಯವಾಗಿ 373 ಆರ್ಡರ್ಲಿ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಆದರೆ ಇವರು ಪೊಲೀಸ್ ಸಿಬ್ಬಂದಿ ಅಲ್ಲದ ಪ್ರತ್ಯೇಕ ಸಿಬ್ಬಂದಿಯಾಗಿರಲಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಜೊತೆಗೆ ಅಧಿಕಾರಿಗಳಿಗೆ ಹುದ್ದೆ ಆಧಾರಿತವಾಗಿ ಮಾಸಿಕ ಭತ್ಯೆ ನೀಡುವ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ಉದಾಹರಣೆಗೆ ಡಿಜಿ ಹುದ್ದೆಯವರಿಗೆ ತಿಂಗಳಿಗೆ ರೂ.8,000, ಎಡಿಜಿಪಿಗಳಿಗೆ ರೂ.6,000, ಐಜಿಪಿಗಳಿಗೆ ರೂ.5,000, ಡಿಐಜಿ ಮತ್ತು ಎಸ್‌ಪಿ ಹುದ್ದೆಯವರಿಗೆ ರೂ.3,000 ಹಾಗೂ ಇತರ ಅಧಿಕಾರಿಗಳಿಗೆ ರೂ.2,000 ಭತ್ಯೆ ನೀಡುವ ಪ್ರಸ್ತಾವವೂ ಸರ್ಕಾರದ ಮುಂದಿದೆ.
ಆರ್ಡರ್ಲಿ ರದ್ದಾಗಿರುವ ಕಾರಣ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಮನೆ ಕೆಲಸಗಳಲ್ಲಿ ತೊಡಗಿದ್ದ ಸಿಬ್ಬಂದಿ ಈಗ ಸಾರ್ವಜನಿಕ ಸೇವೆಗೆ ಮರಳಲಿದ್ದಾರೆ. ಇದರಿಂದಾಗಿ ಠಾಣೆಗಳಲ್ಲಿ ಹಾಗೂ ಸಾರ್ವಜನಿಕ ಭದ್ರತಾ ಕಾರ್ಯಗಳಲ್ಲಿ ಹೆಚ್ಚಿನ ಮಾನವ ಸಂಪನ್ಮೂಲ ಲಭ್ಯವಾಗಲಿದೆ.
ಇದೇ ವೇಳೆ ಪೊಲೀಸ್ ಸಿಬ್ಬಂದಿಯ ಗೌರವ ಮತ್ತು ವೃತ್ತಿಪರತೆಯೂ ಹೆಚ್ಚುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪೊಲೀಸ್ ಹುದ್ದೆ ಹೊಂದಿರುವ ವ್ಯಕ್ತಿಗಳನ್ನು ಮನೆ ಕೆಲಸಗಳಿಗೆ ಬಳಸುವ ಪದ್ಧತಿಗೆ ತೆರೆ ಬೀಳುವುದರಿಂದ ವ್ಯವಸ್ಥೆಯ ಮೇಲಿನ ವಿಶ್ವಾಸವೂ ಹೆಚ್ಚಾಗಲಿದೆ.
ಆರ್ಡರ್ಲಿ ಹಿಂಪಡೆದಿದ್ದರೂ ಮುಂದುವರೆಸಲು ಮೂವರು ನಿವೃತ್ತ ಐಪಿಎಸ್ ಅಧಿಕಾರಿಗಳ ಕೋರಿಕೆ
ಆರ್ಡರ್ಲಿ ಹಿಂಪಡೆದಿದ್ದರೂ ಸಹ ಮುಂದುವರೆಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸರ್ಕಾರವನ್ನು ಕೋರಿದ್ದರು. ಈ ಬಗ್ಗೆ ದಿ ಫೈಲ್ 2023ರಲ್ಲೇ ವರದಿ ಪ್ರಕಟಿಸಿತ್ತು.




